ನ್ಯಾಯಮೂರ್ತಿಶಿವರಾಜ ವಿ. ಪಾಟೀಲ ಅವರ ಆತ್ಮಕಥನ ‘ಕಳೆದ ಕಾಲ ನಡೆದ ದೂರ’ ಇದೇ 21ರಂದು (ಭಾನುವಾರ) ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಲೋಕಾರ್ಪಣೆಯಾಗಲಿದೆ. ಪಾಟೀಲರ ಜೀವನಪಥ ಸಾಗಿಬಂದ ಬಗೆ, ಸಾಧನೆಗಳು, ಸವಾಲುಗಳು ಸೇರಿದಂತೆ ಹಲವು ಲೇಖನಗಳು ಈ ಕೃತಿಯಲ್ಲಿವೆ. ಆ ಪೈಕಿ ಆಯ್ದ ಭಾಗ ಇಲ್ಲಿದೆ.
ಬುದ್ಧಿಜೀವಿಗಳೊಂದಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಜನರೊಂದಿಗೆ ಸಂವಹನ ನಡೆಸಲು ಹಾಗೂ ಸಂಪರ್ಕ ಸಾಧಿಸಲು ಸಾಧ್ಯವಾಗುವ ವಿವಿಧ ಸಮಾರಂಭ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಅವುಗಳಲ್ಲಿ ಕೆಲವನ್ನು ನಾನು ಹಂಚಿಕೊಳ್ಳಲು ಬಯಸುತ್ತೇನೆ. ಅವು ನನ್ನ ಹೆಮ್ಮೆಯ ಮತ್ತು ಗೌರವದ ಕ್ಷಣಗಳು.
ಶಿವಾಜಿರಾವ್ ಪಾಟೀಲ್, ವಕೀಲರು ಮೂಲತಃ ಬಸವಕಲ್ಯಾಣದವರು. ಸುಮಾರು ಮೂರು ದಶಕಗಳಿಗಿಂತ ಹೆಚ್ಚುಕಾಲ ಅವರು ಪುಣೆಯಲ್ಲಿ ವಾಸವಾಗಿದ್ದು, ವಕೀಲವೃತ್ತಿಯನ್ನು ನಡೆಸುತ್ತಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನನಗೆ ‘ಬಸವಶ್ರೀ’ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಅವರು ದಿಲ್ಲಿಯಲ್ಲಿದ್ದ ನನ್ನೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದರು. ಆಗ ಅವರು ನನಗೆ, ‘ನಾನು ಅಂತಹ ದೊಡ್ಡ ಸಮಾರಂಭವನ್ನು ಜೀವನದಲ್ಲಿ ನೋಡಿರಲಿಲ್ಲ. ನನ್ನ ಆಯುಷ್ಯದ ಸ್ವಲ್ಪ ಭಾಗವನ್ನು ದೇವರು ನಿಮಗೆ ನೀಡಲಿ. ನನ್ನ ಭಾವನೆ ಏನೆಂದರೆ, ನೀವು ಹೆಚ್ಚು ದಿವಸ ಬದುಕಬೇಕು. ನಾನು ಸಮಾರಂಭ ಮುಗಿದ ಮೇಲೆ ಮೈಸೂರಿನ ಶ್ರೀಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದೆ. ನನಗೆ ಆ ದೇವಿಯ ಜೊತೆ ಮಾತನಾಡಲು ಆಗಲಿಲ್ಲ. ಆದರೆ ಜೀವಂತವಾಗಿರುವ ದೇವರಾದ ನಿಮ್ಮೊಡನೆ ಮಾತನಾಡಿದೆ’ ಎಂದರು. ಆಗ ನಾನು ಅತ್ಯಂತ ವಿನಯದಿಂದ ಅವರಿಗೆ, ‘ನಾನೂ ನಿಮ್ಮಂತೆ ಒಬ್ಬ ಸಾಮಾನ್ಯ ಮನುಷ್ಯ. ಮಾತೆ ಚಾಮುಂಡೇಶ್ವರಿ ಇಬ್ಬರನ್ನೂ ಆಶೀರ್ವದಿಸಲಿ’ ಎಂದು ಹೇಳಿದೆ. ಇಂತಹ ಅನೇಕ ಸಜ್ಜನರು ನನ್ನ ಬಗ್ಗೆ ಇಂತಹ ಮಾತುಗಳನ್ನಾಡಿದಾಗ ನನಗೆ ಬಹಳ ಮುಜುಗರವಾಗುತ್ತದೆ. ಆಗ ನನ್ನ ಭಾವನೆ ಏನೆಂದರೆ, ಆ ರೀತಿಯಾಗಿ ಹೇಳುವವರು ಅಥವಾ ನಡೆದುಕೊಳ್ಳುವವರು ನಮಗಿಂತ ಉತ್ತಮರು ಎಂದೇ ನಾನು ತಿಳಿಯುತ್ತೇನೆ. ಅವರು ತೋರಿಸುವ ಗೌರವ ನನಗಲ್ಲ, ನನ್ನೊಳಗಿರುವ ಆ ದೇವರಿಗೆ ಸಲ್ಲುತ್ತದೆ ಎಂದು ಭಾವಿಸುತ್ತೇನೆ. ಅವರು 2007ರಲ್ಲಿ ಪುಣೆಯ ವಕೀಲರ ಸಂಘದ ಅಧ್ಯಕ್ಷರಾಗಿದ್ದರು. ಪುಣೆಯ ಜಿಲ್ಲಾ ನ್ಯಾಯಾಲಯದ ವಕೀಲರ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಲು ಅವರು ನನ್ನನ್ನು ಆಹ್ವಾನಿಸಿದ್ದರು. ನಾನು ಭಾರತದ ಸಂವಿಧಾನ, ಕಾನೂನಿನ ಆಡಳಿತ ಮತ್ತು ಬಾರ್ ಮತ್ತು ಬೆಂಚ್ ನಡುವಿನ ಸಂಬಂಧ ಬಗ್ಗೆ ಮಾತನಾಡಿದ್ದೆನು.
ನಾನು ಮದ್ರಾಸ್ ಹೈಕೋರ್ಟ್​ನಲ್ಲಿ ನ್ಯಾಯಾಧೀಶನಾಗಿದ್ದಾಗ, ಡಾ.ಎನ್. ದೇವನಾಥನ್ ಎಂಬುವವರ ಪರಿಚಯವಾಯಿತು. ಅವರು ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿಗಳಾದ ಎನ್.ಟಿ.ರಾಮಾರಾವ್ ಅವರಿಗೆ ಸಲಹೆಗಾರರಾಗಿದ್ದರು ಮತ್ತು ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಕೂಡ ಆಗಿದ್ದರು, ಅವರು ದೈವೀಭಕ್ತರು, ಸಜ್ಜನರು ಮತ್ತು ಲೇಖಕರು. ಅವರು ಕಾನೂನು ಪದವೀಧರರೂ ಆಗಿದ್ದರು. ಭಾರತದ ಸಂವಿಧಾನದ ಬಗ್ಗೆ ಕೂಡ ಒಂದು ಪುಸ್ತಕವನ್ನು ಬರೆದಿದ್ದಾರೆ. ಈಗ ಅವರು ಜೀವಂತವಾಗಿಲ್ಲ. 2002 ಆಗಸ್ಟ್ 11ರಂದು ಅವರ ಹೆಸರಿನಲ್ಲಿ ಮದ್ರಾಸ್​ನಲ್ಲಿ ಒಂದು ದತ್ತಿ ಉಪನ್ಯಾಸ ಏರ್ಪಡಿಸಲಾಯಿತು. ನನ್ನನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದ್ದರು. ಜೊತೆಗೆ ಒಂದು ಪುಸ್ತಕವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮವಿತ್ತು.
ಉತ್ತಮ ನ್ಯಾಯಾಧೀಶನಾಗುವುದು ಹೇಗೆ?: ಕೆಲವು ವರ್ಷಗಳ ಹಿಂದೆ ನಾನು ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ಆಹ್ವಾನದ ಮೇರೆಗೆ, ಅಕಾಡೆಮಿಗೆ ಹೊಸದಾಗಿ ಆಯ್ಕೆಯಾದ ಸುಮಾರು 120 ನ್ಯಾಯಾಧೀೕಶರು (ಸಿವಿಲ್ ಜಡ್ಜ್- ಜೂನಿಯರ್ ಡಿವಿಜನ್), ಉದ್ದೇಶಿಸಿ ಮಾತನಾಡಲು ಹೋಗಿದ್ದೆ. ‘ಹೇಗೆ ಒಬ್ಬ ಉತ್ತಮ ನ್ಯಾಯಾಧೀಶನಾಗಬಹುದು?’ ಎಂಬ ವಿಷಯದ ಮೇಲೆ ಮಾತನಾಡಿದೆ.
ಉತ್ತಮ ನ್ಯಾಯಾಧೀಶನಾಗಲು ಪಾಲಿಸಬೇಕಾದ ಹತ್ತು ನಿಯಮಗಳು: ್ಞ ಉತ್ತಮ ನ್ಯಾಯಾಧೀಶರಾಗಲು ಉತ್ತಮ ಮಾನವರಾಗಿರುವುದು ಅವಶ್ಯ.
* ನೀವು ದೈವೀಪುರುಷರಲ್ಲ, ಆದರೆ, ನಿಮಗೆ ವಹಿಸಿರುವ ಕರ್ತವ್ಯಗಳು ದಿವ್ಯವಾದವು (ಈ ದಿವ್ಯ ಕರ್ತವ್ಯಗಳು ಒಬ್ಬ ವ್ಯಕ್ತಿಗೆ ಅಮೂಲ್ಯವಾದ ಜೀವ ಅಥವಾ ಆಸ್ತಿಗೆ ಅಥವಾ ಎರಡಕ್ಕೂ ಸಂಬಂಧಪಟ್ಟಿರುವುದರಿಂದ) ವಿಶೇಷ ಕಾಳಜಿ ಮತ್ತು ಸೂಕ್ಷ್ಮತೆಯ ದೃಷ್ಟಿಕೋನ ಇರಬೇಕಾಗುತ್ತದೆ.
* ನೀವು ತೆಗೆದುಕೊಂಡ ಪ್ರಮಾಣವಚನಕ್ಕೆ ನಿಮ್ಮ ಧರ್ಮ ಮತ್ತು ನಿಮ್ಮ ಆತ್ಮಸಾಕ್ಷಿಯೇ ಕಾವಲುಗಾರ.
* ನಿಮ್ಮೆದುರಿಗೆ ಬರುವ ಎಲ್ಲರ ವಿಷಯದಲ್ಲಿಯೂ ಸೌಜನ್ಯದಿಂದಲೇ ನಡೆದುಕೊಳ್ಳಿ. ಅವರೊಡನೆ ನಿಮ್ಮ ನಡತೆ ಮೃದುವಾಗಿರಲಿ. ಆದರೆ ತೀರ್ಪಿನಲ್ಲಿ ದೃಢವಾಗಿರಿ.
* ನ್ಯಾಯದ ವಿಷಯದಲ್ಲಿರಬೇಕಾದ ಕಾಳಜಿಯ ವಿಚಾರಕ್ಕೆ ನ್ಯಾಯವಾದಿಗಳು ಹೇಳುವುದನ್ನು ಸಾಕಷ್ಟು ತಾಳ್ಮೆಯಿಂದ, ಗಮನವಿಟ್ಟು ಆಲಿಸಿ. ಇದು ಉತ್ತಮವಾದ ತೀರ್ಪಗಳನ್ನು ನೀಡಲು ಸಹಾಯಕವಾಗುತ್ತದೆ.
* ದಾಖಲೆಗಳ ಮತ್ತು ಮೌಖಿಕ ರೂಪದಲ್ಲಿರುವ ಸಾಕ್ಷ್ಯವನ್ನು ಮತ್ತು ವಾದದ ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ.
* ನಿರಂತರವಾಗಿ ಕಲಿಯುತ್ತಿರಿ. ತಂತ್ರಜ್ಞಾನದ ನೆರವನ್ನು ಪಡೆಯಿರಿ. ಆದರೆ, ಅದರ ಗುಲಾಮರಾಗಬೇಡಿ. ನಿಮ್ಮ ಸೃಜನಶೀಲತೆ, ಸ್ವಂತ ಆಲೋಚನೆಯನ್ನು ಕಳೆದುಕೊಳ್ಳಬೇಡಿ.
* ಪ್ರಕರಣಗಳನ್ನು ಆದಷ್ಟು ಶೀಘ್ರವಾಗಿ ತೀರ್ವನಿಸಲು ಮತ್ತು ಗೊತ್ತುಪಡಿಸಿದ ದಿನದಂದು ತೀರ್ಪನ್ನು ಪ್ರಕಟಿಸಲು ಸರ್ವಪ್ರಯತ್ನವನ್ನೂ ಮಾಡಿ. ಕಕ್ಷಿದದಾರರು ತೀರ್ಪಿಗಾಗಿ ಬಹುಕಾಲದಿಂದ ಸಾಲುಗಟ್ಟಿ ಕಾದಿರುತ್ತಾರೆಂಬುದನ್ನು ಮರೆಯದಿರಿ.
* ಪ್ರಕರಣವೊಂದರಲ್ಲಿ ಇಬ್ಬರಲ್ಲಿ ಯಾರು ಸರಿ ಎಂಬುದಕ್ಕಿಂತ ಯಾವುದು ಸರಿ ಮತ್ತು ಯಾವುದು ನ್ಯಾಯಯುತ ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸಿ.
* ನ್ಯಾಯಪರತೆ ಮತ್ತು ಮಾನವೀಯ ಮೌಲ್ಯಗಳನ್ನು ಗೌರವಿಸುತ್ತ ನ್ಯಾಯಾಲಯದ ಒಳಗೂ ಹೊರಗೂ ಉತ್ತಮ ನ್ಯಾಯಾಧೀಶರಾಗಿ. ನ್ಯಾಯಾಂಗದ ನಿಜವಾದ ಬಲವಿರುವುದು ನ್ಯಾಯಾಂಗ ನಿಂದನೆಯ ಅಧಿಕಾರದಲ್ಲಲ್ಲ. ಜನರು ನ್ಯಾಯಾಂಗದಲ್ಲಿ ಇಟ್ಟಿರುವ ವಿಶ್ವಾಸದಲ್ಲಿ ಮತ್ತು ನ್ಯಾಯಾಧೀಶರಲ್ಲಿಟ್ಟಿರುವ ನಂಬಿಕೆಯಲ್ಲಿ ಎಂಬುದನ್ನು ಸದಾ ನೆನಪಿನಲ್ಲಿಡಿ. ನ್ಯಾಯಾಂಗದ ವ್ಯವಸ್ಥೆಯ ಹಾಗೂ ವೈಯಕ್ತಿಕ ಗೌರವ, ಘನತೆ ಮತ್ತು ಹೆಸರನ್ನು ಕಾಪಾಡಿಕೊಳ್ಳುವ ದ್ವಿಮುಖ ಜವಾಬ್ದಾರಿ ನ್ಯಾಯಾಧೀಶರ ಮೇಲಿದೆ.
ಕೊನೆಯ ದಿನಗಳಲ್ಲಿ ಬಾಧಿಸುವ ಮುಟ್ಟಿನ ನೋವುಗಳಿಗೆ ಇಲ್ಲಿದೆ ಉಪಯುಕ್ತ ಸಲಹೆಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 1 =
Remember me
