ನವದೆಹಲಿ/ಅಹಮದಾಬಾದ್:ಕರೊನಾ ವೈರಸ್​ನ ಒಮಿಕ್ರಾನ್ ಪ್ರಭೇದದ ಎಕ್ಸ್​ಬಿಬಿ.1.5 ಉಪತಳಿಯ ಮೊದಲ ಪ್ರಕರಣ ಗುಜರಾತ್​ನಲ್ಲಿ ಪತ್ತೆಯಾಗಿದ್ದು ಇದು ಭಾರತದ ಮೊದಲ ಕೇಸ್ ಆಗಿದೆ. ಎಕ್ಸ್​ಬಿಬಿ.1.5 ಅಮೆರಿಕದ ನ್ಯೂಯಾರ್ಕ್​ನಲ್ಲಿ ಹೆಚ್ಚಿನ ಜನರು ಆಸ್ಪತ್ರೆಗೆ ಸೇರಲು ಕಾರಣವಾಗಿರುವ ಅಪಾಯಕಾರಿ ಉಪತಳಿಯೆಂಬುದಾಗಿ ಅಂತಾರಾಷ್ಟ್ರೀಯ ಸಂಶೋಧಕರು ದೃಢಪಡಿಸಿದ್ದಾರೆೆ. ಒಮಿಕ್ರಾನ್​ನ ಮೂಲ ಬಿಎ.2 ಸಂಯೋಜನೆಗೊಂಡು ಎಕ್ಸ್ ಬಿಬಿ ಸೃಷ್ಟಿಯಾಗಿದೆ. ಆದರೆ, ಅದರ ಉಪಪ್ರಭೇದವಾದ ಎಕ್ಸ್​ಬಿಬಿ.1.5 ಎಸಿಇ2 ರಿಸೆಪ್ಟರ್​ಗೆ ಬಲವಾದ ಬಂಧ ಹೊಂದಿದೆಯೆಂದು ನಂಬಲಾಗಿದೆ ಎಂದು ಅಮೆರಿಕದ ವಿಜ್ಞಾನಿ ಎರಿಕ್ ಟೊಪೋಲ್ ಹೇಳಿದ್ದಾರೆ. ಇದರಿಂದಾಗಿ ಅದು ಹರಡುವ ಪ್ರಮಾಣ ಹೆಚ್ಚಾಗಿದೆ ಎಂದು ಅಭಿಪ್ರಾಯಪಡಲಾಗಿದೆ.
ಮಹಾರಾಷ್ಟ್ರದಲ್ಲಿ ಕಟ್ಟೆಚ್ಚರ:ಗುಜರಾತ್​ಗೆ ಸಮೀಪವಿರು ವುದರಿಂದ ಹೊಸ ರೂಪಾಂತರಿ ಹರಡುವುದನ್ನು ತಡೆಯಲು ಮಹಾರಾಷ್ಟ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಆರಂಭಿಸಿದ್ದಾರೆ. ವೈರಸ್​ನ ಜೈವಿಕ ಕುರುಹುಗಳ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ಇಲಾಖೆಯ ಅಧಿಕಾರಿ ಪ್ರದೀಪ್ ಆವಟೆ ತಿಳಿಸಿದ್ದಾರೆ. ಶೇಕಡ 100ರಷ್ಟು ಜನೆಟಿಕ್ ಸೀಕ್ವೆನ್ಸಿಂಗ್ ಹಾಗೂ ರಾಜ್ಯಕ್ಕೆ ವಿದೇಶಗಳಿಂದ ಆಗಮಿಸಿದವರಲ್ಲಿ ಶೇಕಡ ಎರಡು ಜನರ ರ್ಯಾಂಡಂ ಸ್ಯಾಂಪಲ್ ಪರೀಕ್ಷೆ ನಡೆಸಲಾಗುತ್ತಿದೆ. ವಿದೇಶಿ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್​ಗೂ ಒಳಪಡಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಎಕ್ಸ್​ಬಿಬಿಯ 275ಕ್ಕೂ ಅಧಿಕ ಪ್ರಕರಣಗಳಿವೆ. ಆದರೆ ಎಕ್ಸ್​ಬಿಬಿ.1.5 ಇನ್ನೊಂದು ಉಪತಳಿ ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಆವಟೆ ತಿಳಿಸಿದ್ದಾರೆ.
ಶೇ. 41 ಎಕ್ಸ್​ಬಿಬಿ.1.5 ಕೇಸ್​ಗಳು:ಅಮೆರಿಕದಲ್ಲಿ ಹೊಸದಾಗಿ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಎಕ್ಸ್​ಬಿಬಿ.1.5ನಿಂದ ಹರಡಿದ ಕೇಸ್​ಗಳ ಪಾಲು ಶೇಕಡ 41ರಷ್ಟಿದೆ. ವಿಜ್ಞಾನಿಗಳು ಉಲ್ಬಣದ ಕುರಿತು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ವ್ಯಾಧಿ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಶುಕ್ರವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ ಕಳೆದ ವಾರ ಎಕ್ಸ್​ಬಿಬಿ1.5 ಸೋಂಕು ದುಪ್ಪಟ್ಟಾಗಿದೆ.
ಮಾಹಿತಿ ವಿನಿಮಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಆಗ್ರಹ
ದೇಶದಲ್ಲಿ ಉಲ್ಬಣಗೊಳ್ಳುತ್ತಿರುವ ಕೋವಿಡ್ ಸಾಂಕ್ರಾಮಿಕತೆ ಬಗ್ಗೆ ರಿಯಲ್ ಟೈಂ ಡೇಟಾವನ್ನು ಹಂಚಿ ಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಶುಕ್ರವಾರ ಚೀನಾ ಸರ್ಕಾರವನ್ನು ಆಗ್ರಹಿಸಿದೆ. ಡಬ್ಲ್ಯುಎಚ್​ಒ ತನ್ನ ಪರಿಣತಿಯನ್ನು ಹಾಗೂ ಇತರ ಬೆಂಬಲ ನೀಡಲು ಇದರಿಂದ ಸಹಾಯವಾಗುತ್ತದೆ ಎಂದು ಶುಕ್ರವಾರ ಚೀನಾದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಡಬ್ಲ್ಯುಎಚ್​ಒ ಪ್ರತಿನಿಧಿಗಳು ಹೇಳಿದ್ದಾರೆ. ಇದಕ್ಕೂ ಮುನ್ನ, ಡಬ್ಲ್ಯುಎಚ್​ಒ ಮಹಾ ಕಾರ್ಯದರ್ಶಿ ಟೆಡ್ರೋಸ್ ಅಧಾನಂ ಗೇಬ್ರಿಯೆಲ್ ಕೂಡ ಚೀನಾಕ್ಕೆ ಇದೇ ರೀತಿಯ ಸಲಹೆ ನೀಡಿದ್ದರು.
ಭಾರತದಲ್ಲಿ 226 ಹೊಸ ಪ್ರಕರಣ
ಭಾರತದಲ್ಲಿ ಶನಿವಾರ ಬೆಳಗ್ಗೆ ವರೆಗಿನ ಒಂದು ದಿನದ ಅವಧಿಯಲ್ಲಿ ಕೋವಿಡ್​ನ 226 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಇದರಿಂದಾಗಿ ಸಕ್ರಿಯ ಕೇಸ್ ಸಂಖ್ಯೆ 3,653ಕ್ಕೇರಿದೆ. ದೇಶದಲ್ಲಿ ಇದುವರೆಗೆ ಒಟ್ಟು 4,41,44,029 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಇದುವರೆಗೆ ಒಟ್ಟು 5,30,702 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಲಸಿಕೆ ಅಭಿಯಾನದ ಪರಿಣಾಮವಾಗಿ ಈವರೆಗೆ 220.10 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ.
ಆನ್​ಲೈನ್ ಕಂಟೆಂಟ್​ಗೆ ಚೀನಾ ತಡೆ
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸೋಂಕಿನ ಉಲ್ಬಣದ ಪರಿಸ್ಥಿತಿ ಹೊರಜಗತ್ತಿಗೆ ತಿಳಿಯಬಹುದೆಂಬ ಭೀತಿಯಿಂದ ಕೋವಿಡ್ ಸಂಬಂಧಿತ ಕಂಟೆಂಟ್​ಗಳನ್ನು ಆನ್​ಲೈನ್​ನಲ್ಲಿ ಪ್ರಸಾರ ಮಾಡುವುದನ್ನು ಚೀನಾ ನಿರ್ಬಂಧಿಸಿದೆ. ಸೋಂಕಿನ ಹೊಸ ಅಲೆಯಿಂದಾಗಿ ಹೊಸ ವರ್ಷಾಚರಣೆಯ ಸಂಭ್ರಮ ಮಂಕಾಗಿದೆ ಎಂದು ಅನೇಕ ವೀಬೋ ಬಳಕೆದಾರರು ದೂರಿದ್ದಾರೆ. ಝೀರೋ-ಕೋವಿಡ್ ನೀತಿಯ ಬಗ್ಗೆ ಕೆಲವರು ಟೀಕೆ ಮಾಡಿರುವುದರ ಸಹಿತ ಚೀನಾದಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಆನ್​ಲೈನ್​ನಲ್ಲಿ ವ್ಯಾಪಕ ಆಕ್ರೋಶ ಸ್ಪೋಟಗೊಳ್ಳುತ್ತಿದೆ. ವೈರಸ್​ನೊಂದಿಗೆ ಬದುಕು ಸಾಗಿಸಬೇಕೆಂಬ ಧೋರಣೆ ಯೊಂದಿಗೆ ಝೀರೋ-ಕೋವಿಡ್ ನೀತಿಯನ್ನು ಹಠಾತ್ತನೆ ಕೈಬಿಟ್ಟಿದ್ದರಿಂದ ದೇಶದಾದ್ಯಂತ ಸೋಂಕು ಉಲ್ಬಣ ಗೊಂಡಿದೆ. ಆರ್ಥಿಕ ಚಟುವಟಿಕೆಯೂ ಮಂಕಾಗಿದೆ. ಬ್ರಿಟನ್ ಮತ್ತು ಫ್ರಾನ್ಸ್ ಸಹಿತ ಅನೇಕ ದೇಶಗಳು ಚೀನಾ ದಿಂದ ಬರುವ ಪ್ರಯಾಣಿಕರ ಮೇಲೆ ನಿರ್ಬಂಧ ಹೇರಿವೆ.
ಕರೊನಾ ವಿರುದ್ಧ ಹೋರಾಟ ದೊಡ್ಡ ಸವಾಲೆಂದ ಜಿನ್​ಪಿಂಗ್
ಹೊಸ ವರ್ಷದಲ್ಲಿ ಕರೊನಾ ವಿರುದ್ಧದ ಹೋರಾಟ ದೇಶಕ್ಕೆ ಅತಿ ದೊಡ್ಡ ಸವಾಲಾಗಿದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಹೇಳಿದ್ದಾರೆ. ಹೊಸ ವರ್ಷದ ಹಿಂದಿನ ದಿನವಾದ ಶನಿವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಕೋವಿಡ್ ಪರಿಸ್ಥಿತಿ ಹೊಸ ಹಂತಕ್ಕೆ ತಲುಪಿದೆ. ಇದನ್ನು ನಿವಾರಿಸಿಕೊಂಡು ಮುನ್ನಡೆಯುವುದು ಸುಲಭ ಸಾಧ್ಯವಲ್ಲ. ವಿಶೇಷ ಶ್ರಮದ ಅಗತ್ಯವಿದೆ ಎಂದರು. ಆದರೆ, ದೇಶದಲ್ಲಿನ ಕೋವಿಡ್ ಕುರಿತ ಯಾವುದೇ ಅಂಕಿಸಂಖ್ಯೆಯನ್ನು ಅವರು ನೀಡಲಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 5 =
Remember me
