ನವದೆಹಲಿ:ಹಿಂದಿನ ಸರ್ಕಾರಗಳಿಗೆ ದೇಶದ ಪರಂಪರೆ ಉಳಿಸುವ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ ಮತ್ತು ಪರಂಪರೆ ಪಾಲಿಸದ ದೇಶ ತನ್ನ ಭವಿಷ್ಯ ಕಳೆದುಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ರೂಪಾಯಿ 1200 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಗುಜರಾತ್​ನ ಅಹಮದಾಬಾದ್​ನಲ್ಲಿರುವ ಸಬರಮತಿ ಆಶ್ರಮ ಸ್ಮಾರಕದ ಮಾಸ್ಟರ್​ಪ್ಲಾನ್ ಯೋಜನೆಗೆ ಪ್ರಧಾನಿ ಚಾಲನೆ ನೀಡಿದ್ದಾರೆ. ಮಹಾತ್ಮ ಗಾಂಧಿ ಕೈಗೊಂಡಿದ್ದ ದಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಪುನರಾಭಿವೃದ್ಧಿ ಹೊಂದಿದ ಕೊಚ್ರಾಬ್ ಆಶ್ರಮವನ್ನೂ ಅವರು ಇದೇ ವೇಳೆ ಉದ್ಘಾಟಿಸಿದರು. ಬಾಪು ಅವರ ಸಬರಮತಿ ಆಶ್ರಮ ದೇಶಕ್ಕೆ ಮಾತ್ರವಲ್ಲ, ಇಡೀ ಮನುಕುಲಕ್ಕೆ ಪರಂಪರೆಯಾಗಿದೆ ಎಂದು ಹೇಳಿದರು.
ಭಾರತವನ್ನು ವಿದೇಶಿ ದೃಷ್ಟಿಕೋನದಿಂದ ನೋಡುವ ಮತ್ತು ಎಲ್ಲರನ್ನೂ ಓಲೈಸುವ ಮನಸ್ಥಿತಿಯಿಂದಾಗಿ ಭಾರತದ ಶ್ರೇಷ್ಠ ಪರಂಪರೆ ನಾಶವಾಗುತ್ತಲೇ ಇತ್ತು. ಅತಿಕ್ರಮಣ, ಅಶುಚಿತ್ವ, ಅವ್ಯವಸ್ಥೆ ಎಲ್ಲವೂ ನಮ್ಮ ಪರಂಪರೆಯನ್ನು ಹೈಜಾಕ್ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಒಂದು ಕಾಲದಲ್ಲಿ 120 ಎಕರೆ ಪ್ರದೇಶದಲ್ಲಿ ಹರಡಿಕೊಂಡ ಆಶ್ರಮ, 5 ಎಕರೆಗಳಿಗೆ ಇಳಿದು, 63 ಕಟ್ಟಡಗಳಿಂದ 36ಕ್ಕೆ ತಗ್ಗಿದೆ. ಈ 36 ಕಟ್ಟಡಗಳಲ್ಲಿ ಪ್ರವಾಸಿಗರು ಮೂರಕ್ಕೆ ಮಾತ್ರ ಭೇಟಿ ನೀಡಬಹುದು ಎಂದರು. ನಮ್ಮ ಸರ್ಕಾರ ರಾಷ್ಟ್ರ ಕಟ್ಟುವ ಧ್ಯೇಯದ ಭಾಗವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ ಹೊರತು ಚುನಾವಣೆಗಳನ್ನು ಗೆಲ್ಲಲು ಅಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಅಹಮದಾಬಾದ್​ಗೆ ಸಮೀಪದ ಡೆಡಿಕೇಟೆಡ್ ಫ್ರೖೆಟ್ ಕಾರಿಡಾರ್ (ಡಿಎಫ್​ಸಿ) ಆಪರೇಷನ್ ಕಂಟ್ರೋಲ್ ಸೆಂಟರ್​ಗೆ ಭೇಟಿ ನೀಡಿದ ನಂತರ ಸಬರಮತಿ ಪ್ರದೇಶದಲ್ಲಿ 1,06,000 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಇವುಗಳಲ್ಲಿ 85,000 ಕೋಟಿ ರೂ. ರೈಲ್ವೆ ಯೋಜನೆ ಗಳಿದ್ದು, 10 ಹೊಸ ವಂದೇ ಭಾರತ್ ರೈಲುಗಳ ಆರಂಭ ಮತ್ತು ಗುಜರಾತ್​ನ ಭರೂಚ್ ಜಿಲ್ಲೆಯ ದಹೇಜ್​ನಲ್ಲಿ 20,600 ಕೋಟಿ ರೂ. ಹೂಡಿಕೆಯ ಪೆಟ್ರೋಕೆಮಿಕಲ್ಸ್ ಸಂಕೀರ್ಣವೂ ಒಳಗೊಂಡಿದೆ. ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರ ರೈಲ್ವೆ ಅಭಿವೃದ್ಧಿಗೆ ಆರು ಪಟ್ಟು ಹೆಚ್ಚು ಹಣ ಖರ್ಚು ಮಾಡಿದೆ. 2024ರ ಕೇವಲ 2 ತಿಂಗಳಲ್ಲಿ, ಸರ್ಕಾರ 11 ಲಕ್ಷ ಕೋಟಿ ರೂ. ವೆಚ್ಚದ ಯೋಜನೆಗಳನ್ನು ಉದ್ಘಾಟಿಸಿ ಅಡಿಪಾಯ ಹಾಕಿದೆ ಎಂದು ವಿವರಿಸಿದರು.
ಅಹಮದಾಬಾದ್-ಜಾಮ್ಗರ ವಂದೇ ಭಾರತ್ ರೈಲನ್ನು ದ್ವಾರಕಾವರೆಗೆ, ಅಜ್ಮೀರ್- ದೆಹಲಿ ವಂದೇ ಭಾರತನ್ನು ಚಂಡೀಗಢದವರೆಗೆ, ಗೋರಖ್​ಪುರ-ಲಖನೌ ವಂದೇ ಭಾರತನ್ನು ಪ್ರಯಾಗರಾಜ್​ವರೆಗೆ ಮತ್ತು ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಮಂಗಳೂರಿನವರೆಗೆ ವಿಸ್ತರಿಸಲಾಗುತ್ತಿದೆ. ಇದೇ ವೇಳೆ ಅಸನ್ಸೋಲ್-ಹಟಿಯಾ ಮತ್ತು ತಿರುಪತಿ-ಕೊಲ್ಲಂ ನಿಲ್ದಾಣಗಳ ನಡುವೆ 2 ಹೊಸ ಪ್ಯಾಸೆಂಜರ್ ರೈಲುಗಳಿಗೆ ಚಾಲನೆ ನೀಡಿದರು. ಬಹುಮಾದರಿಯ 51 ಗತಿ ಶಕ್ತಿ ಕಾಗೋ ಟರ್ವಿುನಲ್​ಗಳನ್ನೂ ಅವರು ದೇಶಕ್ಕೆ ಸಮರ್ಪಿಸಿದರು. ಈ ಟರ್ವಿುನಲ್​ಗಳು ವಿವಿಧ ಸಾರಿಗೆ ವಿಧಾನಗಳ ನಡುವೆ ಸರಕುಗಳ ತಡೆರಹಿತ ಚಲನೆಗೆ ಸಹಕಾರಿಯಾಗಲಿದೆ. 2,646 ನಿಲ್ದಾಣಗಳಲ್ಲಿ ರೈಲ್ವೆ ನಿಲ್ದಾಣಗಳ ಡಿಜಿಟಲ್ ನಿಯಂತ್ರಣ, 35 ರೈಲು ಕೋಚ್ ರೆಸ್ಟೋರೆಂಟ್​ಗಳು, 1,500 ‘ಒಂದು ನಿಲ್ದಾಣ ಒಂದು ಉತ್ಪನ್ನ’ ಮಳಿಗೆ ಸೇರಿ ವಿವಿಧ ಯೋಜನೆಗಳಿಗೂ ಚಾಲನೆ ನೀಡಿದರು. ಛತ್ತೀಸ್​ಗಢದ ಬಿಲಾಸ್​ಪುರದ ವಂದೇ ಭಾರತ್ ರೈಲು ನಿರ್ವಹಣಾ ಡಿಪೋ ಮತ್ತು ಭಿಲಾಯಿಯಲ್ಲಿ ಮೆಮು ಕಾರ್ ಶೆಡ್ ವಿಸ್ತರಣೆ ಸೇರಿ ರಾಜ್ಯದಲ್ಲಿ 249 ಕೋಟಿ ರೂ. ವೆಚ್ಚದ 43 ರೈಲ್ವೆ ಯೋಜನೆಗಳಿಗೆ ಪ್ರಧಾನಿ ಅಡಿಪಾಯ ಹಾಕಿದ್ದಾರೆ.
ಪೋಖ್ರಾನ್​ನಲ್ಲಿ ಮೋದಿ:ಪ್ರಧಾನಿ ಮೋದಿ ರಾಜಸ್ಥಾನದ ಪೋಖ್ರಾನ್​ನಲ್ಲಿ ಮೂರು ಸೇನೆಗಳಿಗೆ ಸಂಬಂಧಿಸಿದ ಭಾರತ್ ಶಕ್ತಿ ಲೈವ್ ಫೈರ್ ಮತ್ತು ಕುಶಲ ತಾಲೀಮನ್ನು ವೀಕ್ಷಿಸಿದರು. ಇದರಲ್ಲಿ ಆತ್ಮನಿರ್ಭರ್ ಭಾರತದ ಅಡಿಯಲ್ಲಿ ತಯಾರಿಸಲಾದ ಸಾಧನಗಳ ಸಾಮರ್ಥ್ಯ ಪ್ರದರ್ಶಿಸಲಾಯಿತು. ಈ ಬಗ್ಗೆ ಮಾತನಾಡಿದ ಅವರು, ಭಾರತ ಪ್ರತಿವಲಯದಲ್ಲಿ ಆತ್ಮನಿರ್ಭರದತ್ತ ಸಾಗುತ್ತಿದೆ. ಅಡುಗೆ ಎಣ್ಣೆಯಿಂದ ಹಿಡಿದು ಆಧುನಿಕ ವಿಮಾನಗಳವರೆಗೆ ದೇಶ ತನ್ನದೇ ಸಾಮರ್ಥ್ಯದ ಮೇಲೆ ಎದ್ದು ನಿಂತಿದ್ದು, 10 ವರ್ಷಗಳಲ್ಲಿ ದೇಶದ ರಕ್ಷಣಾ ಉತ್ಪಾದನೆಯೂ ಅಧಿಕಗೊಂಡಿದೆ. ಯುವಕರಿಗೆ ಆದ್ಯತೆ ನೀಡಿದ್ದೇವೆ. 150ಕ್ಕೂ ಹೆಚ್ಚು ಡಿಫೆನ್ಸ್ ಸ್ಟಾರ್ಟ್ ಅಪ್​ಗಳು ಪ್ರಾರಂಭಗೊಂಡಿವೆ. ರಕ್ಷಣಾ ವಲಯದಲ್ಲಿ ಆತ್ಮನಿರ್ಭರ್ ಈಗ ಆತ್ಮವಿಶ್ವಾಸದ ಭರವಸೆಗೆ ನಾಂದಿ ಹಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಟೋಮೊಬೈಲ್ ಇನ್-ಪ್ಲಾಂಟ್ ರೈಲ್ವೆ ಸೈಡಿಂಗ್ ಯೋಜನೆ:ಮಾರುತಿ ಸುಜುಕಿ ಸಂಸ್ಥೆಯ ಭಾರತದ ಮೊದಲ ಆಟೋಮೊಬೈಲ್ ಇನ್-ಪ್ಲಾಂಟ್ ರೈಲ್ವೆ ಸೈಡಿಂಗ್ ಯೋಜನೆಯನ್ನು ಗುಜರಾತ್​ನ ಮೆಹ್ಸಾನಾ ಜಿಲ್ಲೆಯ ಹಂಸಲ್​ಪುರದಲ್ಲಿರುವ ಘಟಕದಲ್ಲಿ ಪ್ರಧಾನಿ ಮೋದಿ ಆನ್​ಲೈನ್ ಮೂಲಕ ಉದ್ಘಾಟಿಸಿದ್ದಾರೆ. ಕೇಂದ್ರದ ಪ್ರಧಾನ ಮಂತ್ರಿ ಗತಿ ಶಕ್ತಿ ಮಿಷನ್ ಅಡಿಯಲ್ಲಿ ಗುಜರಾತ್ ಸರ್ಕಾರ, ಭಾರತೀಯ ರೈಲ್ವೇ ಮತ್ತು ಎಂಎಸ್​ಐಎಲ್​ಸಹಭಾಗಿತ್ವದಲ್ಲಿ 976 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅಭಿವೃದ್ಧಿಪಡಿಸಲಾಗಿದೆ ಎಂದು ಎಂಎಸ್​ಐಎಲ್​ನ ಕಾರ್ಪೆರೇಟ್ ವ್ಯವಹಾರಗಳ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಭಾರ್ತಿ ತಿಳಿಸಿದ್ದಾರೆ. ಯೋಜನೆಯು 50,000 ಟ್ರಕ್ ಪ್ರಯಾಣ ಉಳಿಸಲಿದೆ. ಟ್ರಕ್​ಗಳಲ್ಲಿ ವಾರ್ಷಿಕವಾಗಿ 35 ದಶಲಕ್ಷ ಲೀಟರ್ ಇಂಧನ ಬಳಕೆ ತಗ್ಗಲಿದ್ದು, ವಾರ್ಷಿಕವಾಗಿ 1,650 ಟನ್​ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನೂ ಕಡಿಮೆ ಮಾಡಲಿದೆ ಎಂದು ಭಾರ್ತಿ ಮಾಹಿತಿ ಹಂಚಿಕೊಂಡಿದ್ದಾರೆ.
ನಮಗೆ ಅಭಿವೃದ್ಧಿ ಕಾರ್ಯಗಳು ದೇಶ ಕಟ್ಟುವ ಧ್ಯೇಯವೇ ಹೊರತು ಚುನಾವಣೆ ಗೆಲ್ಲುವ ಉದ್ದೇಶವಲ್ಲ.
| ನರೇಂದ್ರ ಮೋದಿ ಪ್ರಧಾನಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + fourteen =
Remember me
