ಕೆಲವು ದಿನಗಳ ಹಿಂದೆ, ನಾವು ಮದನ್​ದಾಸ್ ದೇವಿ ಜಿ ಅವರನ್ನು ಕಳೆದುಕೊಂಡಾಗ, ನಾನೂ ಸೇರಿದಂತೆ ಲಕ್ಷಾಂತರ ಕಾರ್ಯಕರ್ತರು ಹೇಳಲಾಗದಷ್ಟು ದುಃಖಿತರಾಗಿದ್ದೆವು. ಮದನ್ ದಾಸ್ ಜಿ ಅವರಂತಹ ಪ್ರಭಾವಿ ವ್ಯಕ್ತಿತ್ವ ಈಗ ನಮ್ಮ ನಡುವೆ ಇಲ್ಲ ಎಂಬ ವಾಸ್ತವ ಸವಾಲಿನದಾಗಿದೆ. ಆದರೂ, ಅವರ ಪ್ರಭಾವವು ಸದಾ ಜೀವಂತವಾಗಿರುತ್ತದೆ ಎಂಬ ಅರಿವಿನಿಂದ ನಾವು ಸಮಾಧಾನಗೊಂಡಿದ್ದೇವೆ. ಅವರ ಬೋಧನೆಗಳು ಮತ್ತು ತತ್ವಗಳು ಮುಂದಿನ ಪ್ರಯಾಣದಲ್ಲಿ ಸ್ಪೂರ್ತಿ ಮತ್ತು ಮಾರ್ಗದರ್ಶನದ ದಾರಿದೀಪವಾಗಿರುತ್ತವೆ. ಹಲವು ವರ್ಷಗಳ ಕಾಲ ಮದನ್ ದಾಸ್ ಜಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಅವರ ಸರಳತೆ ಮತ್ತು ಮೃದು ಸ್ವಭಾವವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೆ. ಅವರು ಅತ್ಯುನ್ನತ ಸಂಘಟಕರಾಗಿದ್ದರು. ನಾನು ಕೂಡ ಅವರ ಸಂಘಟನೆಯಲ್ಲಿ ಅಪಾರ ಸಮಯ ಕಳೆದಿದ್ದೇನೆ. ಆದ್ದರಿಂದ, ಸಂಘಟನೆ, ಅಭಿವೃದ್ಧಿ ಮತ್ತು ಕಾರ್ಯಕರ್ತರ ಬೆಳವಣಿಗೆಗೆ ಸಂಬಂಧಿಸಿದ ಅಂಶಗಳು ನಮ್ಮ ಮಾತುಕತೆಗಳಲ್ಲಿ ಪ್ರಸ್ತಾಪ ಸಹಜವಾಗಿತ್ತು. ಅಂತಹ ಒಂದು ಸಂಭಾಷಣೆಯ ಸಮಯದಲ್ಲಿ, ನೀವು ಮೂಲತಃ ಎಲ್ಲಿಯವರು ಎಂದು ನಾನು ಅವರನ್ನು ಕೇಳಿದ್ದೆ. ನಾನು ಮಹಾರಾಷ್ಟ್ರದ ಸೊಲ್ಲಾಪುರದ ಸಮೀಪದ ಹಳ್ಳಿಯವನು, ನಮ್ಮ ಪೂರ್ವಜರು ಗುಜರಾತ್​ನವರು ಎಂದು ಅವರು ಹೇಳಿದ್ದರು. ಆದರೆ, ಅವರಿಗೆ ಗುಜರಾತ್​ನಲ್ಲಿ ಯಾವ ಊರು ಎಂಬುದು ನಿಖರವಾಗಿ ತಿಳಿದಿರಲಿಲ್ಲ. ನನಗೆ ದೇವಿ ಎಂಬ ಉಪನಾಮದ ಶಿಕ್ಷಕಿ ಇದ್ದರು ಮತ್ತು ಅವರು ವಿಸ್ನಾಗರಕ್ಕೆ ಸೇರಿದವರು ಎಂದು ನಾನು ಅವರಿಗೆ ಹೇಳಿದ್ದೆ. ನಂತರ ಅವರು ವಿಸ್ನಾಗರ ಮತ್ತು ವಡ್ನಾಗರಕ್ಕೆ ಭೇಟಿ ನೀಡಿದ್ದರು. ನಮ್ಮ ಮಾತುಕತೆಗಳು ಸಹ ಗುಜರಾತಿ ಭಾಷೆಯಲ್ಲೇ ನಡೆಯುತ್ತಿದ್ದವು.
ಮದನ್ ದಾಸ್ ಜಿ ಅವರ ಅನೇಕ ವಿಶೇಷತೆಗಳಲ್ಲಿ, ಮಾತುಗಳ ಹಿಂದಿನ ಭಾವನೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಒಂದಾಗಿತ್ತು. ಮೃದು ಮಾತು ಮತ್ತು ಸದಾ ಹಸನ್ಮುಖಿಯಾಗಿರುತ್ತಿದ್ದ ಅವರು ಗಂಟೆಗಳ ಕಾಲದ ಚರ್ಚೆಗಳನ್ನು ಕೆಲವೇ ವಾಕ್ಯಗಳಲ್ಲಿ ಸಂಕ್ಷಿಪ್ತಗೊಳಿಸಿ ಹೇಳಬಲ್ಲವರಾಗಿದ್ದರು. ಅವರ ಜೀವನ ಪಯಣವು ಸ್ವಾರ್ಥವನ್ನು ಬದಿಗೊತ್ತಿ ಸಾಮೂಹಿಕತೆಗೆ ಪ್ರಾಮುಖ್ಯತೆಯನ್ನು ನೀಡಿದಾಗ ಸಾಧಿಸಬಹುದಾದ ಅದ್ಭುತಗಳನ್ನು ವಿವರಿಸುತ್ತದೆ. ಚಾರ್ಟರ್ಡ್ ಅಕೌಂಟೆಂಟ್ ತರಬೇತಿ ಪಡೆದಿದ್ದ ಅವರು ಸುಖಮಯ ಜೀವನ ನಡೆಸಬಹುದಿತ್ತು, ಆದರೆ, ಅವರ ಗುರಿ ಬೇರೆಯದೇ ಆಗಿತ್ತು. ಅದು ಮನಸ್ಸುಗಳನ್ನು ರೂಪಿಸುವುದಾಗಿತ್ತು ಮತ್ತು ಭಾರತದ ಅಭಿವೃದ್ಧಿಗೆ ಕೆಲಸ ಮಾಡುವುದಾಗಿತ್ತು.
ಮದನ್ ದಾಸ್ ಜಿ ಅವರು ಭಾರತದ ಯುವಜನರಲ್ಲಿ ಅಚಲವಾದ ನಂಬಿಕೆ ಹೊಂದಿದ್ದರು. ಅವರು ಭಾರತದ ಉದ್ದಗಲಕ್ಕೂ ಇರುವ ಯುವಕರೊಂದಿಗೆ ಸಂಪರ್ಕ ಸಾಧಿಸಬಲ್ಲವರಾಗಿದ್ದು, ಎಬಿವಿಪಿ ಸಂಘಟನೆ ಬಲಪಡಿಸುವುದರಲ್ಲಿ ಮಗ್ನರಾಗಿದ್ದರು. ಈ ಪ್ರಯಾಣದಲ್ಲಿ ಅವರನ್ನು ಪ್ರಭಾವಿಸಿದ ಪ್ರಮುಖರಲ್ಲಿ ಯಶವಂತರಾವ್ ಕೇಳ್ಕರ್​ಜಿ ಒಬ್ಬರು. ಅವರಿಂದ ಅಪಾರ ಸ್ಪೂರ್ತಿ ಪಡೆದಿದ್ದರು ಮತ್ತು ಆಗಾಗ್ಗೆ ಅವರ ಬಗ್ಗೆ ಮಾತನಾಡುತ್ತಿದ್ದರು. ಮದನ್ ದಾಸ್ ಜಿ ಅವರು ಯಾವಾಗಲೂ ಹೆಚ್ಚಾಗಿ ಎಬಿವಿಪಿಯ ಕೆಲಸದಲ್ಲಿ ತೊಡಗಿಸಿಕೊಳ್ಳಲು ಮತ್ತು ಸಾಮಾಜಿಕ ಕಲ್ಯಾಣಕ್ಕೆ ಕೊಡುಗೆ ನೀಡಲು ವೇದಿಕೆ ಒದಗಿಸುವ ಮೂಲಕ ವಿದ್ಯಾರ್ಥಿನಿಯರ ಸಬಲೀಕರಣಗೊಳಿಸಲು ಒತ್ತು ನೀಡುತ್ತಿದ್ದರು. ವಿದ್ಯಾರ್ಥಿನಿಯರು ಯಾವುದೇ ಸಾಮೂಹಿಕ ಪ್ರಯತ್ನದಲ್ಲಿ ತೊಡಗಿಸಿಕೊಂಡರೆ, ಆ ಪ್ರಯತ್ನವು ಯಾವಾಗಲೂ ಹೆಚ್ಚು ಸಂವೇದನಾಶೀಲವಾಗಿರುತ್ತದೆ ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು. ಮದನ್ ದಾಸ್ ಜಿ ಅವರಿಗೆ ವಿದ್ಯಾರ್ಥಿಗಳ ಮೇಲಿನ ಪ್ರೀತಿ
ಎಲ್ಲಕ್ಕಿಂತ ಮಿಗಿಲಾಗಿತ್ತು. ಅವರು ಎಲ್ಲ ಸಮಯದಲ್ಲೂ ವಿದ್ಯಾರ್ಥಿಗಳ ನಡುವೆ ಇರುತ್ತಿದ್ದರು, ಆದರೆ, ನೀರಿನಲ್ಲಿರುವ ಕಮಲದಂತೆ, ಅವರು ಎಂದಿಗೂ ವಿಶ್ವವಿದ್ಯಾಲಯದ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿಲ್ಲ. ತಮ್ಮ ತಾರುಣ್ಯದ ದಿನಗಳಲ್ಲಿ ಮದನ್ ದಾಸ್ ಜಿ ಅವರಿಂದ ಪಡೆದ ಮಾರ್ಗದರ್ಶನದಿಂದ ಸಾರ್ವಜನಿಕ ಜೀವನದಲ್ಲಿ ಉನ್ನತಿ ಹೊಂದಿದ ಹಲವಾರು ನಾಯಕರ ಬಗ್ಗೆ ನಾನು ಬಲ್ಲೆ. ಆದರೆ, ಅದರ ಬಗ್ಗೆ ಹೇಳಿಕೊಳ್ಳುವುದು ಅವರ ಸ್ವಭಾವದಲ್ಲಿರಲಿಲ್ಲ.
ಇತ್ತೀಚಿನ ದಿನಗಳಲ್ಲಿ, ಜನರ ನಿರ್ವಹಣೆ, ಪ್ರತಿಭಾ ನಿರ್ವಹಣೆ ಮತ್ತು ಕೌಶಲ್ಯ ನಿರ್ವಹಣೆಯ ಪರಿಕಲ್ಪನೆಗಳು ಅತ್ಯಂತ ಜನಪ್ರಿಯವಾಗಿವೆ. ಮದನ್ ದಾಸ್ ಜಿ ಅವರು ಜನರನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಅವರ ಪ್ರತಿಭೆಯನ್ನು ಸಂಘಟನೆಯ ಗುರಿಗಳ ಮೇಲೆ ಕೇಂದ್ರೀಕರಿಸುವಲ್ಲಿ ಪರಿಣತರಾಗಿದ್ದರು. ಅವರು ಜನರ ಸಾಮರ್ಥ್ಯಗಳನ್ನು ಅರಿತುಕೊಂಡಿದ್ದರು ಮತ್ತು ಅದರ ಆಧಾರದ ಮೇಲೆ ಕೆಲಸವನ್ನು ನಿಯೋಜಿಸುತ್ತಿದ್ದರಿಂದ ಅವರು ವಿಶೇಷರಾಗಿದ್ದರು. ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಜನರನ್ನು ರೂಪಿಸಬೇಕು ಎಂಬ ಸಿದ್ಧಾಂತವನ್ನು ಅವರು ಎಂದಿಗೂ ಒಪ್ಪಲಿಲ್ಲ. ಅದಕ್ಕಾಗಿಯೇ ಹೊಸ ಆಲೋಚನೆಯ ಯಾವುದೇ ಯುವ ಕಾರ್ಯಕರ್ತರಿಗೆ ಮದನ್ ದಾಸ್ ಜಿ ಅವರು ಸ್ಪಷ್ಟವಾದ ಧ್ವನಿಯಾಗಿದ್ದರು. ಅದರಿಂದಾಗಿಯೇ ಅವರೊಂದಿಗೆ ಕೆಲಸ ಮಾಡಿದ ಬಹಳಷ್ಟು ಜನರು ತಮ್ಮದೇ ಆದ ಸಾಮರ್ಥ್ಯದ ಮೇಲೆ ಗುರುತಿಸಿಕೊಳ್ಳುತ್ತಿದ್ದರು. ಆದ್ದರಿಂದ, ಅವರ ನಾಯಕತ್ವದಲ್ಲಿ ಸಂಘಟನೆಗಳು ಬೃಹತ್ ಪ್ರಮಾಣದಲ್ಲಿ ಬೆಳೆದವು ಮತ್ತು ಅವು ಪ್ರಮಾಣ ಮತ್ತು ವ್ಯಾಪ್ತಿಗಳಲ್ಲಿ ದೊಡ್ಡದಾಗಿದ್ದರೂ ಸುಸಂಘಟಿತವಾಗಿವೆ ಮತ್ತು ಪರಿಣಾಮಕಾರಿಯಾಗಿವೆ.
ಮದನ್ ದಾಸ್​ಜಿ ಬಿಡುವಿಲ್ಲದ ಪ್ರಯಾಣ ಮಾಡುತ್ತಿದ್ದರು. ತಮ್ಮ ಕರ್ತವ್ಯಗಳಿಂದಾಚೆಗೆ, ಜನರನ್ನು ಭೇಟಿ ಮಾಡುವ ವಿಷಯದಲ್ಲಿ ಅವರು ತುಂಬಾ ಆಯ್ಕೆಯವರಾಗಿದ್ದರು ಮತ್ತು ಯಾವಾಗಲೂ ಸಭೆಗೆ ಸಿದ್ಧರಾಗಿರುತ್ತಿದ್ದರು. ಅವರ ಕಾರ್ಯಕ್ರಮಗಳು ಸರಳವಾಗಿರುತ್ತಿದ್ದವು. ಯಾವುದೇ ಕಾರ್ಯಕರ್ತರಿಗೆ ಹೊರೆಯಾಗುತ್ತಿರಲಿಲ್ಲ.ಅವರಲ್ಲಿ ಈ ಗುಣವು ಕೊನೆಯವರೆಗೂ ಇತ್ತು. ಅವರು ದೀರ್ಘಕಾಲದ ಕಾಯಿಲೆಗಳನ್ನು ಎದುರಿಸಿದರು, ಆದರೆ ನಾನು
ಅದರ ಬಗ್ಗೆ ಕೇಳಿದಾಗ, ಹಲವಾರು ಬಾರಿ ವಿಚಾರಿಸಿದ ನಂತರ ಮಾತ್ರ ಮಾತನಾಡುತ್ತಿದ್ದರು. ದೈಹಿಕ ನೋವಿನ ಹೊರತಾಗಿಯೂ ಅವರು ಸಂತೋಷವಾಗಿದ್ದರು. ಅನಾರೋಗ್ಯದ ಸಂದರ್ಭದಲ್ಲಿಯೂ ಅವರು ದೇಶ ಮತ್ತು ಸಮಾಜಕ್ಕಾಗಿ ಏನು ಮಾಡಬಹುದು ಎಂದು ನಿರಂತರವಾಗಿ ಯೋಚಿಸುತ್ತಿದ್ದರು.
ಮದನ್ ದಾಸ್​ಜಿ ಅವರು ಅದ್ಭುತವಾದ ಶೈಕ್ಷಣಿಕ ದಾಖಲೆ ಹೊಂದಿದ್ದರು. ಇದು ಅವರ ನಿಖರವಾದ ಕೆಲಸದ ವಿಧಾನವನ್ನು ರೂಪಿಸಿತು. ಅವರೊಬ್ಬ ಅಗಾಧ ಓದುಗ, ಅವರು ಏನಾದರೂ ಒಳ್ಳೆಯದನ್ನು ಓದಿದಾಗ, ಅದನ್ನು ಆ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಬಂಧಿತ ವ್ಯಕ್ತಿಗೆ ಕಳುಹಿಸುತ್ತಿದ್ದರು. ಅಂತಹ ವಿಷಯಗಳನ್ನು ಆಗಾಗ್ಗೆ ಸ್ವೀಕರಿಸಿದ ಅದೃಷ್ಟಶಾಲಿ ನಾನಾಗಿದ್ದೇನೆ. ಅವರು ಅರ್ಥಶಾಸ್ತ್ರ ಮತ್ತು ನೀತಿನಿರೂಪಣೆ ವಿಷಯಗಳಲ್ಲಿ ಉತ್ತಮ ತಿಳಿವಳಿಕೆ ಹೊಂದಿದ್ದರು. ಯಾವುದೇ ವ್ಯಕ್ತಿ ಇತರರ ಮೇಲೆ ಅವಲಂಬಿತವಾಗಿಲ್ಲದ ಮತ್ತು ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವಂತಹ ಸ್ವಯಂ-ಸುಧಾರಣೆ ಮತ್ತು ಬೆಳವಣಿಗೆಯ ಅವಕಾಶಗಳಿಂದ ಸಶಕ್ತವಾದ ಭಾರತವನ್ನು ಅವರು ಕಲ್ಪಿಸಿದರು. ಪರಸ್ಪರ ಗೌರವ, ಸಬಲೀಕರಣ ಮತ್ತು ಹಂಚಿಕೆಯ ಸಮೃದ್ಧಿಯ ತತ್ವಗಳಲ್ಲಿ ಬೇರೂರಿರುವ ಸಮಾಜದೊಂದಿಗೆ ಸ್ವಾವಲಂಬನೆ ಕೇವಲ ಒಂದು ಗುರಿಯಾಗಿರದೆ ಪ್ರತಿಯೊಬ್ಬ ನಾಗರಿಕನ ವಾಸ್ತವವಾಗಿರುವ ಭಾರತವನ್ನು ಮದನ್ ದಾಸ್ ಜಿ ಅವರು ಕಲ್ಪಿಸಿಕೊಂಡರು. ಈಗ, ಭಾರತವು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಸ್ವಾವಲಂಬಿಯಾಗುತ್ತಿರುವುದನ್ನು ಕಂಡು ಅವರಷ್ಟು ಸಂತೋಷಪಟ್ಟವರು ಬೇರಾರೂ ಇಲ್ಲ.
ಇಂದು, ನಮ್ಮ ಪ್ರಜಾಪ್ರಭುತ್ವವು ರೋಮಾಂಚಕವಾಗಿರುವಾಗ, ಯುವಜನರು ಆತ್ಮವಿಶ್ವಾಸದಿಂದಿರುವಾಗ, ಸಮಾಜವು ಮುಂದುವರಿಯುತ್ತಿರುವಾಗ ಮತ್ತು ರಾಷ್ಟ್ರವು ಭರವಸೆ ಮತ್ತು ಆಶಾವಾದದಿಂದ ತುಂಬಿರುವಾಗ, ತಮ್ಮ ಇಡೀ ಜೀವನವನ್ನು ಸೇವೆ ಮತ್ತು ರಾಷ್ಟ್ರವನ್ನು ಅಂತಹ ಮೇಲ್ಮುಖ ಪಥದಲ್ಲಿ ನಡೆಸುವ ಕಡೆಗೆ ಮುಡಿಪಾಗಿಟ್ಟ ಮದನ್ ದೇವಿದಾಸ್ ಜಿ ಅವರಂತಹವರನ್ನು ನೆನಪಿಸಿಕೊಳ್ಳುವುದು ಬಹಳ ಮುಖ್ಯ.
ಆ ಒಂದು ತಿಂಗಳ ಸಮಯದಲ್ಲಿ ಈ ಊರಲ್ಲಿ ಕಾಗೆಗಳೇ ಕಾಣಿಸುವುದಿಲ್ಲ!; ಕಾರಣವಾದರೂ ಏನು?

ಪೋಸ್ಟ್/ಲೈಕ್​ ಮಾಡಿದ್ದಕ್ಕೆ ಸಮಸ್ಯೆಯಾದರೆ ನಿಮ್ಮ ನೆರವಿಗೆ ನಾನಿದ್ದೇನೆ ಎಂದ ಎಲಾನ್​ ಮಸ್ಕ್​: ಯಾರಿಗೆ, ಯಾಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
