ನವದೆಹಲಿ:ಸಾರ್ವಜನಿಕವಾಗಿ ಅಷ್ಟೇನೂ ಹೆಸರು ಮಾಡದ, ಗುರುತಿಸಿಕೊಳ್ಳದ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್​ ಪಕ್ಷದೊಳಗೆ ಭಾರಿ ಪ್ರಭಾವಿ ಎನಿಸಿಕೊಂಡಿದ್ದರು. ಪಕ್ಷದೊಳಗೆ ಯಾವುದೇ ಅಧಿಕಾರ ಇಲ್ಲದೇ ಇದ್ದರೂ, ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳಿಗಿಂತಲೂ ಹೆಚ್ಚು ಪ್ರಭಾವಿಯಾಗಿದ್ದರು ಎಂಬ ಅಂಶವನ್ನು ಇದೀಗ ಕಾಂಗ್ರೆಸ್ ನಾಯಕರು ಅನೇಕರು ಅನಾಮಧೇಯರಾಗಿ ಬಹಿರಂಗಪಡಿಸುತ್ತಿದ್ದಾರೆ.
ಕೈ ಕಮಾಂಡ್​ನ ಆಧಾರ ಸ್ತಂಭ !
ನಾಲ್ವರು ಪ್ರಧಾನಮಂತ್ರಿಗಳು ಸಚಿವ ಸ್ಥಾನದ ಆಫರ್ ನೀಡಿದ್ದರೂ, ಅದನ್ನು ನಯವಾಗಿ ತಿರಸ್ಕರಿಸಿ ಪಕ್ಷ ಕಾರ್ಯದಲ್ಲಿ ತೊಡಗಿಸಿಕೊಂಡುಬಿಟ್ಟವರು ಅಹ್ಮದ್ ಪಟೇಲ್​. ಆಪ್ತವಲಯದಲ್ಲಿ ಬಾಬು, ಬಾಬು ಭಾಯ್​ ಎಂದು ಕರೆಯಿಸಿಕೊಳ್ಳುತ್ತಿದ್ದ ಅವರ ಪಕ್ಷ ನಿಷ್ಠೆ ಹೇಗಿತ್ತೆಂದರೆ ಒಮ್ಮೆ ಹೈಕಮಾಂಡ್ ಒಂದು ನಿರ್ಧಾರ ತೆಗೆದುಕೊಂಡರೆ ಅದರ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ತುಟಿಪಿಟುಕ್ಕೆನ್ನದೇ ಶಿರಸಾವಹಿಸಿಬಿಡುತ್ತಿದ್ದರು. ಹೀಗೆ ಅಹ್ಮದ್ ಪಟೇಲ್ ಕಾಂಗ್ರೆಸ್ ಹೈಕಮಾಂಡ್​ನ ಆಧಾರ ಸ್ತಂಭವಾಗಿದ್ದರು. ಅವರೆಂದೂ ಸಚಿವರಾಗಲಿಲ್ಲ. ಬದಲಾಗಿ ಹೈಕಮಾಂಡ್ ಏನು ಬಯಸುತ್ತದೆಯೋ ಅದನ್ನು ನೆರವೇರಿಸಿಕೊಡುವ ಶಕ್ತಿಯಾಗಿ ಬೆಳೆದು ಪಕ್ಷದ ಹೈಕಮಾಂಡ್​ಗೇ ಆಧಾರ ಸ್ತಂಭವಾಗಿಬಿಟ್ಟಿದ್ದರು. ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಅವರ ಟ್ವೀಟ್​​ಗಳಲ್ಲಿ ಅದು ವ್ಯಕ್ತವಾಗಿದೆ.
ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಬಂದ ಬಳಿಕ ಬಿಜೆಪಿಯನ್ನು ಅಧಿಕಾರದಿಂದ ದೂರು ಇರಿಸುವುದಕ್ಕೆ ಸೈದ್ಧಾಂತಿಕ ವಿರೋಧಿ ಶಿವಸೇನೆಯೊಂದಿಗೆ ಸೇರಿ ಸರ್ಕಾರ ರಚಿಸುವಲ್ಲಿ ಶರದ್ ಪವಾರ್ ಪಾತ್ರಕ್ಕಿಂತಲೂ ಪಟೇಲ್ ಪಾತ್ರ ಮುಖ್ಯವಾದುದು. ಪಕ್ಷದ ಹಿರಿಯ ನಾಯಕರೊಬ್ಬರು ಇದನ್ನು ಅನಾಮಧೇಯರಾಗಿ ಬಹಿರಂಗಪಡಿಸಿದ್ದು, ಶರದ್ ಪವಾರ್ ಹೋಗಿ ಸೋನಿಯಾ ಗಾಂಧಿಯವರ ಜತೆಗೆ ಮಾತುಕತೆ ನಡೆಸಿದ್ದರೂ ಪರಿಣಾಮ ಬೀರಿದ್ದು ಮಾತ್ರ ಪಟೇಲ್. ಸೋನಿಯಾರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟು ಪಕ್ಷ ಮೃದು ಹಿಂದುತ್ವದ ಕಡೆಗೆ ವಾಲುತ್ತಿದೆ ಎಂಬುದನ್ನು ತೋರಿಸಲು ಇದು ಸದವಕಾಶ. ಅದೇ ರೀತಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವುದಕ್ಕೂ ಸಕಾಲ ಎಂದು ಹೇಳಿ ಮನವೊಲಿಸಿದ್ದರು. ನಂತರಷ್ಟೆ ಮಹಾ ಸರ್ಕಾರ ರಚನೆಯಾಗಿರುವುದು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಒಟ್ಟಾಗಿ ಬಿಜೆಪಿ ಮಣಿಸುತ್ತೇವೆ ಎಂದ ಕಾಂಗ್ರೆಸ್​ ಹಿರಿಯ ನಾಯಕ ಅಹ್ಮದ್​ ಪಟೇಲ್​
ಎಂಟನೇ ಬಾರಿ ಸಂಸತ್ ಸದಸ್ಯರಾಗಿದ್ದ ಅವರು ಟ್ರಬಲ್ ಶೂಟರ್ ಆಗಿ ಗುರುತಿಸಿಕೊಂಡಿದ್ದರು. ಗುಜರಾತ್ ಮೂಲದ ಪಟೇಲ್​, ಕಾಂಗ್ರೆಸ್ ಪಕ್ಷ ಖಜಾಂಜಿಯಾಗಿದ್ದರು. ರಾಜೀವ್ ಗಾಂಧಿ ಅವರಿಗೆ ಸಂಸದೀಯ ಕಾರ್ಯದರ್ಶಿ, ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದರು. 2004ರ ಯುಪಿಎ ಸರ್ಕಾರ ರಚನೆ, 2009ರ ಗೆಲುವಿನ ತಂತ್ರಗಾರಿಕೆ ರೂಪಿಸುವಲ್ಲೂ ಮಹತ್ವದ ಪಾತ್ರವಹಿಸಿದ್ದರು. ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗುವಲ್ಲಿ, ಹಲವಾರು ಮಸೂದೆಗಳ ರಚನೆಯಲ್ಲಿ, ಅದೇ ರೀತಿ ತೆಲಂಗಾಣ ರಾಜ್ಯ ರಚನೆಯಲ್ಲೂ ಪಟೇಲ್ ಪಾತ್ರ ಮಹತ್ವದ್ದು. ಇತ್ತೀಚೆಗೆ ರಾಜಸ್ಥಾನದಲ್ಲಿ ಸರ್ಕಾರ ಪತನವಾಗಲಿದೆ ಎಂಬ ಸನ್ನಿವೇಶ ನಿರ್ಮಾಣವಾದಗಲೂ ರಾಜಕೀಯ ತಂತ್ರಗಳ ಮೂಲಕ ಅದನ್ನು ಬಗೆಹರಿಸಿ ಗಮನಸೆಳೆದಿದ್ದರು.
ಇದನ್ನೂ ಓದಿ:ಕಾಂಗ್ರೆಸ್​ ನಾಯಕ ಅಹ್ಮದ್​ ಪಟೇಲ್​ ನಿವಾಸದ ಮೇಲೆ ಇ.ಡಿ.ರೇಡ್​​; ಅಧಿಕಾರಿಗಳಿಂದ ವಿಚಾರಣೆ
ಅಹ್ಮದ್ ಪಟೇಲ್ ಅವರು 1949 ಆಗಸ್ಟ್ 21ರಂದು ಅಂದಿನ ಬಾಂಬೆ ಪ್ರಾಂತ್ಯದ ಬರೂಚ್​ (ಇಂದಿನ ಗುಜರಾತ್​)ನಲ್ಲಿ ಜನಿಸಿದರು. ತಾಲೂಕು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ರಂಗ ಪ್ರವೇಶಿಸಿದ ಅವರು, 1977ರಲ್ಲಿ ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿದ್ದರು. ಅಂದು ಅವರ ವಯಸ್ಸು ಕೇವಲ 26. ಹಂತ ಹಂತವಾಗಿ ಪಕ್ಷದೊಳಗೆ ಪ್ರಭಾವಿಯಾಗಿ ಬೆಳೆದ ಅವರು ಇಂದಿನ ಹೈಕಮಾಂಡ್​ನ ಮಿದುಳಿನಂತೆ ಕೆಲಸ ಮಾಡತೊಡಗಿದರಲ್ಲದೆ, ಪಕ್ಷದ ಮುಖ್ಯ ಆಧಾರಸ್ತಂಭವೆಂಬಂತೆ ಬೆಳೆದುಬಿಟ್ಟಿದ್ದರು.  (ಏಜೆನ್ಸೀಸ್)
ಪ್ರಭಾವಿ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಇನ್ನಿಲ್ಲ: ಗಣ್ಯರ ಸಂತಾಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − one =
Remember me
