ನವದೆಹಲಿ:ದೇಶದಲ್ಲಿ ಕರೊನಾ ರೋಗಿಗಳ ಗುಣಮುಖ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ತುಸು ನಿರಾಳತೆ ಮೂಡಿಸಿದೆ. ಚೇತರಿಕೆ ಪ್ರಮಾಣ ಬುಧವಾರ ಶೇ. 73.64ಕ್ಕೆ ತಲುಪಿದೆ. ಮರಣ ಪ್ರಮಾಣದಲ್ಲೂ ಇಳಿಕೆ ಕಂಡುಬಂದಿದೆ.
ಭಾರತದಲ್ಲಿ ಕರೊನಾದಿಂದ ಮೃತರಾಗುತ್ತಿರುವವರ ಪ್ರಮಾಣ ಶೇ. 1.91ಕ್ಕೆ ಇಳಿದಿದೆ. ಇದು ಅಮೆರಿಕದಲ್ಲಿ ಶೇ. 3.1, ಬ್ರೆಜಿಲ್​ನಲ್ಲಿ ಶೇ. 3.2 ವರದಿಯಾಗಿದೆ. ಜಾಗತಿಕವಾಗಿ ಈ ಪ್ರಮಾಣ ಶೇ. 3.5ರಷ್ಟಿದೆ. ದೇಶದಲ್ಲಿ ಪತ್ತೆಯಾಗಿರುವ ಒಟ್ಟಾರೆ ಪ್ರಕರಣಗಳಲ್ಲಿ ನಾಲ್ಕನೇ ಮೂರು ಭಾಗದಷ್ಟು ಜನರು ಗುಣಮುಖರಾಗಿದ್ದು, ಶೇ. 24.45 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕಿನ ಪಾಸಿಟಿವಿಟಿ ಪ್ರಮಾಣದಲ್ಲೂ ಇಳಿಕೆ ಕಂಡುಬಂದಿದೆ. ಆಗಸ್ಟ್ 9ರಂದು ಶೇ. 9.01 ಇದ್ದ ಪ್ರಮಾಣ ಈಗ ಶೇ. 8.72ಕ್ಕೆ ಇಳಿದಿದೆ. ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 28 ಲಕ್ಷದ ಗಡಿ ದಾಟಿದೆ. 20.67 ಲಕ್ಷ ಸೋಂಕಿತರು ಗುಣಮುಖರಾಗಿದ್ದು, 6.8 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. 53,500 ಜನರು ಸೋಂಕಿನಿಂದಾಗಿ ಮೃತರಾಗಿದ್ದಾರೆ.
ದೆಹಲಿ ಅನ್​ಲಾಕ್
ದೆಹಲಿಯಲ್ಲಿ ಹೋಟೆಲ್​ಗಳನ್ನು ಪುನರಾರಂಭ ಮಾಡುವುದಕ್ಕೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಅನುಮತಿ ನೀಡಿದೆ. ಸದ್ಯದ ಮಟ್ಟಿಗೆ ಜಿಮ್ಳನ್ನು ತೆರೆಯುವಂತಿಲ್ಲ ಎಂದು ತಿಳಿಸಲಾಗಿದೆ.
ಹೈದರಾಬಾದ್​ನಲ್ಲಿ ಆರು ಲಕ್ಷ ಜನರಿಗೆ ಸೋಂಕು?
ತೆಲಂಗಾಣದ ಹೈದರಾಬಾದ್ ನಗರವೊಂದರಲ್ಲೇ ಕನಿಷ್ಠ ಆರು ಲಕ್ಷ ಸೋಂಕಿತರು ಇದ್ದಾರೆ ಎಂದು ವರದಿಯೊಂದು ಹೇಳಿದೆ. ಸಿಎಸ್​ಐಆರ್ ನಡೆಸಿರುವ ಅಧ್ಯಯನದ ಪ್ರಕಾರ, ಗಂಟಲು ದ್ರವದಿಂದ ಮಾತ್ರವಲ್ಲದೇ ಮಲದಿಂದಲೂ ಸೋಂಕು ಹರಡುತ್ತಿದೆ. ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ಪರೀಕ್ಷೆ ಮಾಡಿದಾಗ ನೀರಿನಲ್ಲಿ ಸೋಂಕಿರುವುದು ದೃಢವಾಗಿದೆ. ಇದರಿಂದಲೇ ಕನಿಷ್ಠ 2 ಲಕ್ಷ ಜನರಿಗೆ ಸೋಂಕು ಹರಡಿದೆ. ನಗರದಲ್ಲಿ ಶೇ. 40 ಚರಂಡಿ ನೀರು ಮಾತ್ರ ಸಂಸ್ಕರಣಾ ಘಟಕ ಸೇರುತ್ತದೆ. ಹಾಗಾಗಿ ಒಟ್ಟಾರೆ ಚರಂಡಿ ನೀರನ್ನು ಪರಿಗಣಿಸಿದರೆ, ಅದರಿಂದ ಕನಿಷ್ಠ ಆರು ಲಕ್ಷ ಜನರಿಗೆ ಸೋಂಕು ಹರಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಬಹುಪಾಲು ಸೋಂಕಿತರಿಗೆ ಲಕ್ಷಣಗಳು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರು ವೈದ್ಯಕೀಯ ನೆರವು ಪಡೆದಿಲ್ಲ ಎಂದು ತಿಳಿಸಲಾಗಿದೆ. ಈವರೆಗೆ ತೆಲಂಗಾಣದಲ್ಲಿ 95,700 ಪ್ರಕರಣಗಳು ವರದಿಯಾಗಿವೆ.
ಒಂದೇ ದಿನ ಸಾವಿರಕ್ಕೂ ಅಧಿಕ ಸಾವು
ದೇಶದಲ್ಲಿ ಮಂಗಳವಾರ 1,100ಕ್ಕೂ ಅಧಿಕ ಜನರು ಕರೊನಾ ಸೋಂಕಿನಿಂದಾಗಿ ಮೃತರಾಗಿದ್ದಾರೆ. ಕಳೆದ 10 ದಿನಗಳಲ್ಲಿ ಮೂರು ದಿನ ಸಾವಿರಕ್ಕೂ ಅಧಿಕ ಸಾವು ವರದಿಯಾಗಿದೆ. ಆಗಸ್ಟ್ 9ರಂದು 1,018, ಆಗಸ್ಟ್ 12ರಂದು 1,010 ಮತ್ತು 18ರಂದು 1,103 ಜನರು ಮೃತರಾಗಿದ್ದಾರೆ.
ಅಮೆರಿಕದಿಂದ 100 ವೆಂಟಿಲೇಟರ್ ಕೊಡುಗೆ
ಭಾರತದಲ್ಲಿ ಕರೊನಾ ಸೋಂಕಿತರ ಚಿಕಿತ್ಸೆಗೆಂದು ಅಮೆರಿಕ 100 ವೆಂಟಿಲೇಟರ್ ಕೊಡುಗೆ ನೀಡಿದೆ. ಜೂನ್ 14ರಂದು ಮೊದಲನೇ ಹಂತದಲ್ಲಿ 100 ವೆಂಟಿಲೇಟರ್ ಕೊಡುಗೆ ನೀಡಲಾಗಿದ್ದು, ಇದೀಗ ಎರಡನೇ/ಅಂತಿಮ ಹಂತದ ಕೊಡುಗೆ ನೀಡಲಾಗಿದೆ. ವೆಂಟಿಲೇಟರ್​ಗಳ ವಾರಂಟಿ, ಕಾರ್ಯಾಚರಣೆಗೆ ಅಗತ್ಯವಿರುವ ಟ್ಯೂಬ್, ಫಿಲ್ಟರ್​ಗಳನ್ನು ನೀಡಿರುವುದಾಗಿ ಭಾರತದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ತಿಳಿಸಿದೆ. ಯುಎಸ್ ಏಜೆನ್ಸಿ ಫಾರ್ ಇಂಟರ್​ನ್ಯಾಷನಲ್ ಡೆವಲಪ್​ವೆುಂಟ್ (ಯುಎಸ್​ಎಐಡಿ)ವತಿಯಿಂದ ಈ ವೆಂಟಿಲೇಟರ್ ಕೊಡುಗೆ ನೀಡಲಾಗಿದೆ. ಈ ವೆಂಟಿಲೇಟರ್​ಗಳು ಚಿಕ್ಕ ಗಾತ್ರದ್ದಾಗಿದ್ದು, ಸುಲಭವಾಗಿ ನಿರ್ವಹಣೆ ಮಾಡಬಹುದು. ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧವನ್ನು ಬಲಪಡಿಸಿಕೊಳ್ಳುವ ಸಲುವಾಗಿ, ಭಾರತದಲ್ಲಿ ಕರೊನಾ ನಿಯಂತ್ರಣಕ್ಕೆ ಸಹಾಯ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.
ದೇಶದಲ್ಲಿ ಎರಡನೇ ದಿನವೂ ದಾಖಲೆಯ ಪರೀಕ್ಷೆ
ದೇಶದಲ್ಲಿ ಎರಡನೇ ದಿನವೂ ದಾಖಲೆಯ ಪ್ರಮಾಣದಲ್ಲಿ ಕರೊನಾ ಪರೀಕ್ಷೆ ಮಾಡಲಾಗಿದೆ. ಮಂಗಳವಾರ 9 ಲಕ್ಷ ಜನರ ಪರೀಕ್ಷೆ ಮಾಡಲಾಗಿದ್ದು, ಬುಧವಾರ 8 ಲಕ್ಷ ಜನರ ಪರೀಕ್ಷೆ ಮಾಡಲಾಗಿದೆ. ಪ್ರತಿದಿನದ ಕರೊನಾ ಪರೀಕ್ಷೆಯನ್ನು 10 ಲಕ್ಷಕ್ಕೆ ಏರಿಸುವ ಗುರಿ ಹೊಂದಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದುವರೆಗೆ ಒಟ್ಟಾರೆಯಾಗಿ 3,17,42,782 ಜನರ ಕರೊನಾ ಪರೀಕ್ಷೆ ಮಾಡಲಾಗಿದೆ. ಪ್ರತಿ ಒಂದು ಕೋಟಿ ಜನರಲ್ಲಿ 23,002 ಜನರು ಪರೀಕ್ಷೆಗೆ ಒಳಗಾಗಿದ್ದಾರೆ. 511 ಖಾಸಗಿ ಪರೀಕ್ಷಾಲಯಗಳು ಮತ್ತು 975 ಸರ್ಕಾರಿ ಪರೀಕ್ಷಾಲಯಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + eighteen =
Remember me
