ನವದೆಹಲಿ:‘ನೂರನಲ್ವತ್ತು ಕೋಟಿ ಭಾರತೀಯರ ವಿಶ್ವಾಸದ ಗುರಾಣಿ ಇರುವವರೆಗೂ ಸುಳ್ಳು, ಆರೋಪ, ನಿಂದನೆಗಳ ಕೂರಂಬುಗಳು ನನಗೇನೂ ಮಾಡುವುದಿಲ್ಲ. ಜನರು ನನ್ನ ಮೇಲಿಟ್ಟಿರುವ ವಿಶ್ವಾಸ ಎಂತಹದ್ದು ಎಂಬುದು ಅವರಿಗೆ (ವಿರೋಧ ಪಕ್ಷದವರು) ಅರ್ಥವಾಗುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಸತ್​ನಲ್ಲಿ ಹೇಳಿದರು. ಈ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳು ಅದಾನಿ ಸಮೂಹದ ವಿರುದ್ಧದ ಹಿಂಡನ್​ಬರ್ಗ್ ರೀಸರ್ಚ್ ವರದಿಯನ್ನು ಆಧರಿಸಿ ತಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು. ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆ ವೇಳೆ ಲೋಕಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ಬದುಕಿನ ಪ್ರತಿಯೊಂದು ಕ್ಷಣವನ್ನು ದೇಶದ ಒಳಿತಿಗಾಗಿ ವಿನಿಯೋಗಿಸಿರುವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ಕಳೆದುಕೊಂಡ ದಶಕವನ್ನು ದೇಶದ ದಶಕವನ್ನಾಗಿಸಲು ಶ್ರಮಿಸುತ್ತಿರುವೆ ಎಂದರು.
ಕೆಲವರು ಅವರ ಕುಟುಂಬಕ್ಕಾಗಿ ಬದುಕುತ್ತಿದ್ದಾರೆ. ನಾನು ಭಾರತೀಯ ಕುಟುಂಬಗಳಿಗಾಗಿ ಜೀವಿಸುತ್ತಿರುವೆ ಎಂದರು. ಸರ್ಕಾರ ರಾಷ್ಟ್ರೀಯ ಹಿತಾಸಕ್ತಿಯ ನೀತಿ-ನಿರ್ಧಾರಗಳನ್ನು ಕೈಗೊಳ್ಳುತ್ತಿದೆಯೇ ಹೊರತು, ಯಾವುದೇ ಬಲವಂತ ಅಥವಾ ಒತ್ತಡಕ್ಕೆ ಒಳಗಾಗಿ ಅಲ್ಲ. ಆದರೆ, ಕೆಲವರಿಗೆ ದೇಶದ ಈ ಪ್ರಗತಿ ಅಸಹನೆ ಉಂಟು ಮಾಡಿದೆ. ಈ ವ್ಯಥೆಯಿಂದಾಗಿ ಅವರಿಗೆ ಭಾರತದ 140 ಕೋಟಿ ಜನರ ಸಾಧನೆಯನ್ನು ಕಾಣಲು ಆಗುತ್ತಿಲ್ಲ ಎಂದು ಮೋದಿ ಚಾಟಿ ಬೀಸಿದರು.
ಅಧಿಕಾರದಲ್ಲಿದ್ದಾಗ ವಿಫಲರಾದವರು ಈಗ ವಿರೋಧ ಪಕ್ಷವಾಗಿಯೂ ಸಫಲತೆ ಕಾಣುತ್ತಿಲ್ಲ. ವಿರೋಧ ಪಕ್ಷಗಳು ಒಗ್ಗೂಡುತ್ತಿರುವುದು ಚುನಾವಣೆಯಲ್ಲಿನ ಸತತ ಸೋಲಿನಿಂದಾಗಿ ಅಲ್ಲ. ಅವುಗಳು ಮಾಡಿರುವ ಅಕ್ರಮಗಳನ್ನು ಜಾರಿ ನಿರ್ದೇಶನಾಲಯ ಬೆನ್ನತ್ತಿರುವುದರಿಂದ. ಹೀಗಾಗಿ ಒಗ್ಗೂಡುವಿಕೆಗೆ ಕಾರಣವಾದ ಜಾರಿ ನಿರ್ದೇಶನಾಲಯಕ್ಕೆ ವಿರೋಧ ಪಕ್ಷಗಳು ಕೃತಜ್ಞರಾಗಿರಬೇಕು ಎಂದು ಹಂಗಿಸಿದರು.
ಚುನಾವಣೆಗಳನ್ನು ಸೋತಾಗ ವಿದ್ಯುನ್ಮಾನ ಮತಯಂತ್ರ ಸರಿಯಿಲ್ಲ ಎಂದು ಟೀಕಿಸಲಾಗುತ್ತದೆ. ಸುಪ್ರೀಂಕೋರ್ಟ್​ನಿಂದ ಅವರಿಗೆ ಅನುಕೂಲವಾಗದ ತೀರ್ಪು ಹೊರಬಂದಾಗ ಆಕ್ರೋಶ ವ್ಯಕ್ತವಾಗುತ್ತದೆ. ಭ್ರಷ್ಟಾಚಾರದ ಬಗ್ಗೆ ವಿಚಾರಣೆ ನಡೆಸುವ ತನಿಖಾ ಸಂಸ್ಥೆಗಳ ವಿರುದ್ಧ ಕಿಡಿಕಾರುತ್ತಾರೆ. ಶೌರ್ಯ ತೋರುವ, ಜನರಲ್ಲಿ ವಿಶ್ವಾಸ ತುಂಬುವ ಸೇನೆಯನ್ನು ಕಂಡರೆ ಅಸಹನೆ. ಆರ್ಥಿಕ ವಿಷಯ ಬಂದಾಗ ಆರ್​ಬಿಐ ಅವರ ಕೆಂಗಣ್ಣಿಗೆ ಗುರಿಯಾಗುತ್ತದೆ ಎಂದು ವಿರೋಧ ಪಕ್ಷಗಳ ಪ್ರತಿ ಟೀಕೆಗೂ ಮೋದಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಜಾಗತಿಕ ಮಟ್ಟದಲ್ಲಿ ಭಾರತ ದುರ್ಬಲವಾಗಿದ್ದು, ಧ್ವನಿ ಕಳೆದುಕೊಂಡಿದೆ. ನಿರ್ಧಾರ ಕೈಗೊಳ್ಳಲು ಇತರ ದೇಶಗಳ ಪ್ರಭಾವಕ್ಕೆ ಒಳಗಾಗುತ್ತಿದೆ ಎಂಬ ಆರೋಪವು ವಿರೋಧಾಭಾಸದಿಂದ ಕೂಡಿದೆ. ಸ್ಥಿರ ಮತ್ತು ನಿರ್ಣಯ ಕೈಗೊಳ್ಳುವಂತಹ ಸರ್ಕಾರ ಇರುವುದರಿಂದ ಜಾಗತಿಕ ಸಂಸ್ಥೆಗಳು ಭಾರತವನ್ನು ವಿಶ್ವಾಸದಿಂದ ಕಾಣುತ್ತಿವೆ. ಕರೊನಾ ಸಾಂಕ್ರಾಮಿಕ ಮತ್ತು ವಿವಿಧ ಕಾರಣಗಳಿಂದ ಉಂಟಾಗುತ್ತಿರುವ ಘರ್ಷಣೆಯಿಂದ ಜಾಗತಿಕವಾಗಿ ಅಸ್ಥಿರತೆ ಇರುವ ಈ ಹೊತ್ತಿನಲ್ಲಿ ಭಾರತ ಆಶಾಕಿರಣವಾಗಿ ಕಾಣುತ್ತಿದೆ. ತಯಾರಿಕಾ ವಲಯದಲ್ಲಿ ಭಾರತ ಜಾಗತಿಕ ಹಬ್ ಆಗಿದೆ ಎಂದು ಮೋದಿ ಹೇಳಿದರು.
ಸರ್ಕಾರದ ಜನ ಕಲ್ಯಾಣ ಯೋಜನೆಗಳ ಲಾಭ ಪಡೆದವರ ಬದುಕು ಹಸನಾಗಿರುವುದು, ಸ್ಟಾರ್ಟಪ್​ಗಳಿಗೆ ನೀಡುತ್ತಿರುವ ಉತ್ತೇಜನ, ಉಗ್ರವಾದಿಗಳ ವಿರುದ್ಧ ಕೈಗೊಂಡಿರುವ ಕಠಿಣ ಕ್ರಮಗಳನ್ನು ಭಾಷಣದಲ್ಲಿ ಉಲ್ಲೇಖಿಸಿದ ಪ್ರಧಾನಿ, ಯುಪಿಎ ಆಡಳಿತದಲ್ಲಿ ನಡೆದ ಭಯೋತ್ಪಾದನಾ ದಾಳಿಗಳು, 2ಜಿ ಸ್ಪೆಕ್ಟ್ರಂ ಹಂಚಿಕೆ, ಕಲ್ಲಿದ್ದಲು ನಿಕ್ಷೇಪ ಹರಾಜು ಮತ್ತು 2010ರ ಕಾಮನ್​ವೆಲ್ತ್ ಗೇಮ್ಸ್​ನ ಹಗರಣಗಳನ್ನು ಉಲ್ಲೇಖಿಸಿ ‘2004ರಿಂದ 2014 ಹಗರಣಗಳ ದಶಕ’ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದರು.
ಪ್ರಜಾತಂತ್ರದ ಶುದ್ಧೀಕರಣಕ್ಕೆ ಮೌಲ್ಯಾಧಾರಿತ ಟೀಕೆಗಳು ಬೇಕು. ಆದರೆ, ಟೀಕಿಸಲೇಬೇಕೆಂದು ಹಠಕ್ಕೆ ಬಿದ್ದವರಿಂದಾಗಿ ಕಳೆದ 9 ವರ್ಷದಿಂದ ರಚನಾತ್ಮಕ ಟೀಕೆಗಳು ಮರೆಯಾಗುತ್ತಿವೆ. ಕೆಲವರು 22 ವರ್ಷಗಳಿಂದ ಇಂಥ ತಪು್ಪ ಕಲ್ಪನೆಯನ್ನೇ ಪೋಷಿಸಿಕೊಂಡು ಬರುತ್ತಿದ್ದಾರೆೆ. ನನ್ನನ್ನು ಬೈಯುವ ಮೂಲಕ ಎತ್ತರಕ್ಕೆ ಏರಬಹುದು ಎಂದುಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆ.
|ನರೇಂದ್ರ ಮೋದಿಪ್ರಧಾನಿ
* ಪ್ರಧಾನಿ ಮೋದಿಯಿಂದ 85 ನಿಮಿಷ ಭಾಷಣ
* ಭಾಷಣದ ವೇಳೆ ಆಡಳಿತ ಪಕ್ಷದ ಸದಸ್ಯರಿಂದ ‘ಮೋದಿ ಮೋದಿ’, ವಿರೋಧ ಪಕ್ಷಗಳ ಸದಸ್ಯರಿಂದ ‘ಅದಾನಿ ಅದಾನಿ’ ಘೋಷಣೆ.
* ಮೋದಿ ಭಾಷಣ ಕೊನೆಯ ಹಂತಕ್ಕೆ ಬಂದಾಗ ಸದನಕ್ಕೆ ರಾಹುಲ್ ಗಾಂಧಿ ಆಗಮನ.
* ನಿನ್ನೆ ದಿನ ವಿರೋಧ ಪಕ್ಷದ ನಾಯಕರು ಮಾತನಾಡುತ್ತಿದ್ದಾಗ ಸದನದಲ್ಲಿ ಎದುರಿನ ಟೇಬಲ್​ನವರು ಖುಷಿಯಲ್ಲಿದ್ದರು. ಆದರೆ, ಇಂದು ಹಲವರು ಮಲಗಿದ್ದಾರೆ. ಬಹುಶಃ ಅವರಿನ್ನೂ ಜಾಗೃತರಾಗಿಲ್ಲ ಎಂದು ಮೋದಿ ಟಾಂಗ್
ಜೋಡೋಗೆ ತಿರುಗೇಟು:’90ರ ದಶಕದಲ್ಲಿ ಶ್ರೀನಗರದ ಲಾಲ್ ಚೌಕ್​ನಲ್ಲಿ ತಿರಂಗಾ ಹಾರಿಸಬೇಕು ಎಂದು ಬಿಜೆಪಿ ಆಂದೋಲನ ನಡೆಸಿದಾಗ ಅದರ ಸಂಘಟಕನಾಗಿದ್ದೆ. ಆಗ ಕಾಶ್ಮೀರದಲ್ಲಿ ಕಾಲಿಡಲು ಆಗದಷ್ಟು ಉಗ್ರ ಚಟುವಟಿಕೆ ಇತ್ತು. ಆದರೀಗ ನಿರಾಂತಕವಾಗಿ ಕಾಶ್ಮೀರಕ್ಕೆ ಹೋಗಬಹುದು, ಲಾಲ್ ಚೌಕ್​ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಬಹುದು. ಇದು ಇತ್ತೀಚೆಗೆ ಅಲ್ಲಿಗೆ ಹೋಗಿಬಂದವರ ಅನುಭವಕ್ಕೂ ಬಂದಿರಬಹುದು’ ಎಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಕುರಿತು ಮೋದಿ ತಿರುಗೇಟು ನೀಡಿದರು.
ಕಬಡ್ಡಿ ಆಡುತ್ತಿದ್ದ ವಿದ್ಯಾರ್ಥಿನಿಗೆ ಹೃದಯಾಘಾತ; ಕುಸಿದು ಬಿದ್ದು ಸಾವು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
