ಶ್ರೀರಾಮನ ಜನ್ಮಸ್ಥಳ ರಾಮಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ಕಟ್ಟುವ ನಮ್ಮ ಕನಸು ನನಸಾಗುವ ಅಂಚಿನಲ್ಲಿದ್ದೇವೆ. ಜ. 22ರಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯ ಸುಂದರ ದೇವಾಲಯದಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪಿಸಲಿದ್ದಾರೆ. ನನ್ನ ಜೀವಿತಾವಧಿಯಲ್ಲಿ ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವುದಕ್ಕೆ ಧನ್ಯನಾಗಿದ್ದೇನೆ.
ನಂಬಿಕೆಯು ವ್ಯಕ್ತಿಯ ಜೀವನದಲ್ಲಿ ಶಕ್ತಿ ಮತ್ತು ಆತ್ಮವಿಶ್ವಾಸ ತುಂಬುತ್ತದೆ. ನನ್ನಂತೆಯೇ ಕೋಟ್ಯಂತರ ಭಾರತೀಯರಿಗೆ, ಶ್ರೀರಾಮನ ಮೇಲೆ ಅಪಾರ ನಂಬಿಕೆಯಿದೆ. ಶ್ರೀರಾಮ ಭಾರತದ ಆತ್ಮವನ್ನು ಸಾಕಾರಗೊಳಿಸುತ್ತಾನೆ. ಭಾರತ ಮತ್ತು ಭಾರತೀಯತೆಯ ನಿಜವಾದ ಚೈತನ್ಯವೆಂದರೆ ಶಿಸ್ತು, ಸತ್ಯ, ಪ್ರಾಮಾಣಿಕತೆ, ನೈತಿಕತೆ, ನೈತಿಕ ಮೌಲ್ಯಗಳು, ವೈವಿಧ್ಯತೆಯ ಸ್ವೀಕಾರ, ಹಿರಿಯರಿಗೆ ಗೌರವ, ಬಲವಾಗಿರುವ ಕುಟುಂಬ ಬಂಧಗಳು ಮತ್ತು ಅಂತಹ ಎಲ್ಲಾ ಉತ್ತಮ ಮಾನವ ಮೌಲ್ಯಗಳೇ ಆಗಿವೆ. ಶ್ರೀರಾಮ ಇವೆಲ್ಲದರ ಮೂರ್ತ ರೂಪ. ಹಾಗಾಗಿ, ಮರ್ಯಾದಾ ಪುರುಷೋತ್ತಮ ಎಂಬ ಬಿರುದನ್ನು ನೀಡಿದ್ದೇವೆ.
ಕಳೆದ ಸುಮಾರು 500 ವರ್ಷಗಳಿಂದ, ಅಯೋಧ್ಯೆಯಲ್ಲಿ ರಾಮಮಂದಿರ ಪುನರ್ನಿರ್ವಣ ಆಗಬೇಕು ಎನ್ನುವುದು ಅಸಂಖ್ಯಾತ ಭಾರತೀಯರ ಆಳ ಬಯಕೆಯಾಗಿತ್ತು. ರಾಮಜನ್ಮಭೂಮಿ ಚಳುವಳಿಯು 1947ರ ನಂತರದ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯಾಗಿದೆ. ನನ್ನ ರಾಜಕೀಯ ಪಯಣದಲ್ಲಿ, ಅಯೋಧ್ಯಾ ಚಳವಳಿಯು ಅತ್ಯಂತ ನಿರ್ಣಾಯಕ ಪರಿವರ್ತನೆಯ ಘಟನೆ ಎಂದು ನಾನು ಯಾವಾಗಲೂ ಹೇಳಿದ್ದೇನೆ. ಇದು ಭಾರತವನ್ನು ಹೊಸದಾಗಿ ಅನ್ವೇಷಿಸಲು ಮತ್ತು ಆ ಪ್ರಕ್ರಿಯೆಯಲ್ಲಿ ನನ್ನನ್ನು ಮರುಶೋಧಿಸಲು ಅವಕಾಶ ಮಾಡಿಕೊಟ್ಟಿತು.
1990ರಲ್ಲಿ ಸೋಮನಾಥದಿಂದ ಅಯೋಧ್ಯೆಯವರೆಗಿನ ಶ್ರೀರಾಮ ರಥಯಾತ್ರೆಯ ರೂಪದಲ್ಲಿ ವಿಧಿಯು ನನ್ನನ್ನು ಪ್ರಮುಖ ಕರ್ತವ್ಯ ನಿರ್ವಹಿಸುವಂತೆ ಮಾಡಿದೆ. ಯಾವುದೇ ಘಟನೆಯು ವಾಸ್ತವದಲ್ಲಿ ಸಂಭವಿಸುವ ಮೊದಲು, ಅದು ವ್ಯಕ್ತಿಯ ಮನಸ್ಸಿನಲ್ಲಿ ಆಕಾರ ಮತ್ತು ರೂಪವನ್ನು ಪಡೆಯುತ್ತದೆ ಎಂದು ನಾನು ನಂಬುತ್ತೇನೆ. ಒಂದು ದಿನ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಾಣ ಖಚಿತ ಎಂದು ನಾನು ಭಾವಿಸಿದ್ದೆ. ಇಲ್ಲಿ ಶ್ರೀರಾಮನ ಭವ್ಯ ಮಂದಿರ ಭಾರತೀಯ ಜನತಾ ಪಾರ್ಟಿಯ ಆಸೆ ಮತ್ತು ಉದ್ದೇಶವೂ ಆಗಿತ್ತು.
1980ರ ದಶಕದ ಮಧ್ಯಭಾಗದಲ್ಲಿ ಅಯೋಧ್ಯೆ ವಿವಾದವು ರಾಷ್ಟ್ರೀಯ ರಾಜಕೀಯದ ಕೇಂದ್ರ ಹಂತಕ್ಕೆ ಏರಿದಾಗ, ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ರಾಜೇಂದ್ರ ಪ್ರಸಾದ್ ಮತ್ತು ಕೆ ಎಂ ಮುನ್ಷಿಯಂತಹ ರಾಜಕೀಯ ದಿಗ್ಗಜರು, ಎಲ್ಲಾ ವಿರೋಧಾಭಾಸಗಳ ನಡುವೆಯೂ ಗುಜರಾತ್​ನ ಸೋಮನಾಥದಲ್ಲಿ ಮಂದಿರವನ್ನು ಹೇಗೆ ಪುನರ್ನಿರ್ವಣ ಮಾಡಿದರು ಎಂಬುದು ನನಗೆ ನೆನಪಾಗಿತ್ತು. ಸೋಮನಾಥ ದೇಗುಲ ಮಧ್ಯಕಾಲೀನ ಅವಧಿಯಲ್ಲಿ ಅನೇಕ ವಿದೇಶಿ ಆಕ್ರಮಣಗಳಿಗೆ ಸಾಕ್ಷಿ ಮತ್ತು ಗುರಿಯಾಗಿತ್ತು.
ದುಃಖಕರವೆಂದರೆ, ಸೋಮನಾಥದ ಪ್ರಕರಣದಂತೆ, ಅಯೋಧ್ಯೆಯ ಶ್ರೀರಾಮನ ಜನ್ಮಸ್ಥಳದಲ್ಲಿರುವ ದೇವಾಲಯವು ಮೊಘಲ್ ಆಕ್ರಮಣಕಾರ ಬಾಬರ್​ನ ದಾಳಿಗೆ ಗುರಿಯಾಯತು. 1528ರಲ್ಲಿ, ಬಾಬರ್ ತನ್ನ ಕಮಾಂಡರ್ ಮೀರ್ ಬಾಕಿಗೆ ಅಯೋಧ್ಯೆಯಲ್ಲಿ ಮಸೀದಿ ನಿರ್ವಿುಸಲು ಆದೇಶಿಸಿದ್ದ. ಆ ಸ್ಥಳವನ್ನು ‘ದೇವತೆಗಳ ವಂಶಸ್ಥರ ಸ್ಥಳ’ ಎಂದು ಗುರುತಿಸಿ, ಬಾಬರಿ ಮಸೀದಿ ಎಂದು ಹೆಸರಿಸಲಾಯಿತು.
ಬಲವಾದ ಪುರಾತತ್ತ್ವ ಶಾಸ್ತ್ರದ ಪುರಾವೆಗಳ ಮೂಲಕ ಅಯೋಧ್ಯೆಯಲ್ಲಿ ಮಸೀದಿ ಸ್ಥಾಪಿಸುವುದಕ್ಕಾಗಿ ಮಂದಿರ ಕೆಡವಲಾಯಿತು ಎಂದು ದೃಢಪಡಿಸಲಾಗಿದೆ. 1990ರಲ್ಲಿ ಬಿಜೆಪಿ ಅಧ್ಯಕ್ಷನಾಗಿ ಅಯೋಧ್ಯೆ ಚಳವಳಿಗೆ ಜನರ ಬೆಂಬಲ ಕ್ರೋಢೀಕರಿಸಲು ಶ್ರೀರಾಮ ರಥಯಾತ್ರೆಯನ್ನು ಮುನ್ನಡೆಸಬೇಕೆಂದು ನಿರ್ಧರಿಸಿದಾಗ, ಈ ಐತಿಹಾಸಿಕ ಪ್ರಯಾಣದ ಆರಂಭಿಕ ಸ್ಥಳವಾಗಿ ಸೋಮನಾಥವನ್ನು ಆಯ್ಕೆ ಮಾಡಿದೆ. ಸೆಪ್ಟೆಂಬರ್ 12, 1990ರಂದು, ದೆಹಲಿಯ 11 ಅಶೋಕ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದೆ ಮತ್ತು 10,000 ಕಿಮೀ ಉದ್ದದ ರಥಯಾತ್ರೆ ಸೆಪ್ಟೆಂಬರ್ 25ರಂದು ಸೋಮನಾಥದಿಂದ ಪ್ರಾರಂಭಿಸಿ ಅಕ್ಟೋಬರ್ 30ಕ್ಕೆ ಅಯೋಧ್ಯೆಗೆ ತಲುಪುವ ನಿರ್ಧಾರ ಪ್ರಕಟಿಸಿದೆ. ಸೆಪ್ಟೆಂಬರ್ 25 ದೀನದಯಾಳ್ ಉಪಾಧ್ಯಾಯರ ಜನ್ಮದಿನವಾದ್ದರಿಂದ ನನಗೆ ವಿಶೇಷವಾಗಿತ್ತು.
ಸೆಪ್ಟೆಂಬರ್ 25, 1990 ರಂದು ಬೆಳಿಗ್ಗೆ ನಾನು ಸೋಮನಾಥ ದೇವಾಲಯದ ಜ್ಯೋತಿರ್ಲಿಂಗದಲ್ಲಿ ಪ್ರಾರ್ಥನೆ ಸಲ್ಲಿಸಿದೆ. ನನ್ನ ಜೊತೆಯಲ್ಲಿ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿ, ಪ್ರಮೋದ್ ಮಹಾಜನ್, ಗುಜರಾತ್​ನಲ್ಲಿ ಪಕ್ಷದ ಇತರ ಹಿರಿಯ ಪದಾಧಿಕಾರಿಗಳು ಮತ್ತು ಸದಸ್ಯರು ನನ್ನ ಕುಟುಂಬದ ಸದಸ್ಯರು ಇದ್ದರು. ಪಕ್ಷದ ಉಪಾಧ್ಯಕ್ಷರಾಗಿದ್ದ ರಾಜಮಾತೆ ವಿಜಯರಾಜೇ ಸಿಂಧಿಯಾ ಮತ್ತು ಸಿಕಂದರ್ ಬಖ್ತ್ ರಥದ ಧ್ವಜಾರೋಹಣಕ್ಕೆ ಬಂದಿದ್ದರು. ರಥೋತ್ಸವಕ್ಕೆ ಚಾಲನೆ ನೀಡುವ ಮೊದಲು, ದೇವಸ್ಥಾನದ ಹೊರಭಾಗದಲ್ಲಿರುವ ಸರ್ದಾರ್ ಪಟೇಲರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದೆವು.
ಗುಜರಾತ್​ನಲ್ಲಿ ನಮ್ಮ ಪ್ರಯಾಣದ ಮೊದಲ ಕೆಲ ದಿನಗಳಲ್ಲಿ ಯಾತ್ರೆಗೆ ಬಂದ ಪ್ರತಿಕ್ರಿಯೆ ನೋಡಿ ದಂಗಾಗಿದ್ದೆ. ರಥವನ್ನು ಎಲ್ಲೆಡೆ ಸಡಗರದಿಂದ ಸ್ವೀಕರಿಸಲಾಯಿತು. ಜನರು ವಿಶೇಷವಾಗಿ ಮಹಿಳೆಯರು ಮುಂದೆ ಬಂದು ಆರತಿ ಮಾಡಿ ನಾಣ್ಯಗಳನ್ನು ಎಸೆದ ರೀತಿ ನನಗೆ ಅತ್ಯಂತ ಆಶ್ಚರ್ಯಕರ ದೃಶ್ಯವಾಗಿತ್ತು. ನಾನು ರಥಯಾತ್ರೆಯ ಸಾರಥಿಯಷ್ಟೇ ಎಂಬುದು ನನ್ನ ಅರಿವಿಗೆ ಬಂದಿತ್ತು. ಪ್ರಮುಖ ಸಂದೇಶವಾಹಕ ಆ ರಥವೇ ಆಗಿತ್ತು. ಶ್ರೀರಾಮ ಮಂದಿರ ನಿರ್ವಣದ ಪವಿತ್ರ ಉದ್ದೇಶಕ್ಕಾಗಿ ಅಯೋಧ್ಯೆಗೆ ಹೊರಟಿದ್ದರಿಂದ ಅದು ಪೂಜೆಗೆ ಯೋಗ್ಯವಾಗಿತ್ತು.
ನಾನು ಪ್ರಯಾಣಿಸಿದ ರಥ ಮಿನಿ ಟ್ರಕ್ ಆಗಿದ್ದು, ರಥದ ಆಕಾರ ಪಡೆಯಲು ಮರುವಿನ್ಯಾಸಗೊಳಿಸಲಾಗಿತ್ತು. ವಾಹನದ ಹಿಂಭಾಗದಲ್ಲಿ ಸಣ್ಣ ಕೊಠಡಿ ಮತ್ತು ಶೌಚಗೃಹ ಹೊಂದಿತ್ತು. ರಾತ್ರಿಯ ನಿಲುಗಡೆಗೆ ನಾವು ತಲುಪಬೇಕಾದ ನಗರದಲ್ಲಿನ ಕೆಲವು ಪಕ್ಷದ ಕಾರ್ಯಕರ್ತರ ಮನೆಯಿಂದ ಭೋಜನ ಬರುವಂತೆ ವ್ಯವಸ್ಥೆ ಮಾಡಲಾಗಿದ್ದರೂ, ಕೊನೆಯ ಸಾರ್ವಜನಿಕ ಸಭೆ ಮಧ್ಯರಾತ್ರಿ ವೇಳೆ ಕೊನೆಗೊಳ್ಳುತ್ತಿತ್ತು. ಹಾಗಾಗಿ ನಾನು ಟೋಸ್ಟ್ ಜತೆಗೆ ಒಂದು ಲೋಟ ಹಾಲು ಕುಡಿಯುತ್ತಿದ್ದೆ. ಹಳ್ಳಿಗಳಲ್ಲಿ ಮತ್ತು ದೂರದ ಕುಗ್ರಾಮಗಳಲ್ಲಿ ನಡೆಸಿದ ಯಾತ್ರೆ ಅತ್ಯಂತ ಸ್ಪರ್ಶದ ಕ್ಷಣಗಳಾಗಿದ್ದವು. ಜನರ ಮುಖದಲ್ಲಿನ ಧರ್ಮನಿಷ್ಠೆಯು ನಗರಗಳಲ್ಲಿ ನೋಡುವುದಕ್ಕಿಂತ ಶುದ್ಧ ಮತ್ತು ಆಳವಾದ ರೀತಿಯದ್ದಾಗಿತ್ತು. ಅವರಲ್ಲಿ ಅನೇಕರು ಅನಕ್ಷರಸ್ಥರು ಅಥವಾ ಸ್ವಲ್ಪಮಟ್ಟಿಗೆ ವಿದ್ಯಾವಂತರಾಗಿದ್ದರು. ಶ್ರೀರಾಮನ ಬಗ್ಗೆ ಓದಿ ತಿಳಿದುಕೊಂಡಿರಲಿಲ್ಲ. ಜನಪದ ಕಥೆಗಳು ಅಥವಾ ಬಾಯಿಮಾತಿನ ಮೂಲಕ ಜ್ಞಾನ ಅವರಲ್ಲಿ ಹರಿದಿತ್ತು. ಭಾರತೀಯ ಜನರ ಜೀವನದಲ್ಲಿ ಧಾರ್ವಿುಕತೆಯು ಎಷ್ಟು ಆಳವಾಗಿ ಬೇರೂರಿದೆ ಎಂಬುದರ ಕುರಿತು ನನಗೆ ಮೊದಲ ಒಳನೋಟವನ್ನು ಅದು ನೀಡಿತ್ತು. ಹೆಚ್ಚಿನ ಪಟ್ಟಣ ಮತ್ತು ನಗರಗಳಲ್ಲಿ, ಹತ್ತು ಸಾವಿರ ಜನರು ಸೇರಿದ್ದ ಸಾರ್ವಜನಿಕ ಸಭೆಗಳಲ್ಲಿ ರಥದಿಂದ ಇಳಿದು ಮಾತನಾಡಬೇಕಾಗಿತ್ತು. ರಥಯಾತ್ರೆಗೆ ಜನರ ಪ್ರತಿಕ್ರಿಯೆಯು ಮುಖ್ಯವಾಗಿ.ಧಾರ್ವಿುಕವಾಗಿದ್ದರೂ, ನನ್ನ ಭಾಷಣಗಳ ಗಮನ ರಾಷ್ಟ್ರೀಯತೆಯ ಮೇಲೆ ಕೇಂದ್ರೀಕೃತವಾಗಿತ್ತು. ಏಕೆಂದರೆ ಶ್ರೀರಾಮ ಮಂದಿರದ ವಿಷಯವು ನಮ್ಮ ಭಾರತೀಯತೆಯ ಪ್ರಜ್ಞೆಯೊಂದಿಗೆ ಅಂತರ್ಗತವಾಗಿ ಸಂಪರ್ಕ ಹೊಂದಿದೆ.
ಧಾರ್ವಿುಕ ನಂಬಿಕೆಗೆ ಸಕಾರಾತ್ಮಕ ವಿಧಾನದ ಶಕ್ತಿಯು ಸಾಮಾಜಿಕ ಪರಿವರ್ತನೆ ಮತ್ತು ರಾಷ್ಟ್ರ-ನಿರ್ವಣಕ್ಕೆ ಮಹತ್ತರ ಕೊಡುಗೆ ನೀಡುತ್ತದೆ. ಭಾರತವು ಧರ್ವತೀತವಲ್ಲದ ಮತ್ತು ಜಾತ್ಯತೀತವಾಗಿ ಉಳಿಯಲು ಆಯ್ಕೆ ಮಾಡಿಕೊಂಡಿದ್ದರಿಂದ ಸ್ವತಂತ್ರ ಭಾರತದಲ್ಲಿ ನಮ್ಮ ಮುಸ್ಲಿಂ ಸಹೋದರರು ಅನುಭವಿಸುತ್ತಿರುವ ಸಮಾನ ಸ್ಥಾನಮಾನವನ್ನು ಭಾಷಣದಲ್ಲಿ ನಾನು ಒತ್ತಿಹೇಳಿದೆ. ಅಯೋಧ್ಯೆ ಕುರಿತ ಹಿಂದೂ ಭಾವನೆಗಳನ್ನು ಗೌರವಿಸುವಂತೆ ಮುಸ್ಲಿಂ ಸಮುದಾಯದ ನಾಯಕರಲ್ಲಿಯೂ ಮನವಿ ಮಾಡಿದ್ದೆ. ಯಾತ್ರೆಯು 24 ಅಕ್ಟೋಬರ್ 1990ರಂದು ಉತ್ತರ ಪ್ರದೇಶದ ದೇವರಿಯಾ ಪ್ರವೇಶಿಸಲು ನಿರ್ಧರಿಸಲಾಗಿತ್ತು. ಆದರೆ, ಬಿಹಾರದ ಸಮಸ್ತಿಪುರದಲ್ಲಿ ಅಕ್ಟೋಬರ್ 23ರಂದು ನಿಲ್ಲಿಸಲಾಯಿತು. ಲಾಲೂ ಪ್ರಸಾದ್ ಯಾದವ್ ನೇತೃತ್ವದ ಜನತಾ ದಳ ಸರ್ಕಾರ ನನ್ನನ್ನು ಬಂಧಿಸಿತು. ಬಿಹಾರ-ಬಂಗಾಳ ಗಡಿಯಲ್ಲಿರುವ ಡುಮ್ಕಾ ಬಳಿಯ ಮಸ್ಸಂಜೋರ್ ಎಂಬ ಸ್ಥಳದಲ್ಲಿರುವ ನೀರಾವರಿ ಇಲಾಖೆಯ ತಪಾಸಣೆ ಬಂಗಲೆಗೆ ನನ್ನನ್ನು ಕರೆದೊಯ್ಯಲಾಯಿತು. ಮೊಬೈಲ್ ಫೋನ್ ಗಳೇ ಇಲ್ಲದ ಕಾಲವದು. ನನ್ನ ಬಂಧನದ ಸುದ್ದಿ ಕೋಲ್ಕತ್ತಾದಲ್ಲಿದ್ದ ಮಗಳು ಪ್ರತಿಭಾಗೆ ತಲುಪಿತು. ಅವಳು ತನ್ನ ಮನೆಗೆ ಹಿಂದಿರುಗುವ ದಾರಿಯಲ್ಲಿ ಬಾಡಿಗೆ ಕ್ಯಾಬ್​ಗಾಗಿ ಕಾಯುತ್ತಿದ್ದಳು. ಡ್ರೖೆವರ್ ಬೇಗ ಬನ್ನಿ ಎಂದಾಗ ಅವಳಿಗೆ ಆಶ್ಚರ್ಯವಾಗಿತ್ತು.
ಟ್ಯಾಕ್ಸಿ ಡ್ರೖೆವರ್ ಅಡ್ವಾಣಿ ಬಾಬಾ ಅವರನ್ನು ಬಂಧಿಸಲಾಗಿದೆ ಮತ್ತು ನಗರದಲ್ಲಿ ಗಲಭೆ ಸಾಧ್ಯತೆ ಇದೆ ಎಂದು ಆತ ಹೇಳಿದ. ಎರಡು ದಿನಗಳ ನಂತರ, ಪ್ರತಿಭಾ, ಲಾಲೂ ಪ್ರಸಾದ್ ಯಾದವ್ ಜೀ ಜತೆಗೆ ಮಾತನಾಡಿದಳು. ನನ್ನನ್ನು ಭೇಟಿಯಾಗಲು ಲಾಲೂ ಅವರು ಅನುಕೂಲ ಮಾಡಿದರು. ನಾನು ಐದು ವಾರಗಳ ಬಂಧನದಲ್ಲಿದ್ದೆ. ಹೀಗೆ ನನ್ನ ಶ್ರೀರಾಮ ರಥಯಾತ್ರೆ ಕೊನೆಗೊಂಡಿತು. ಇದು ನಿಜಕ್ಕೂ ನನ್ನ ರಾಜಕೀಯ ಜೀವನದಲ್ಲಿ ಒಂದು ರೋಮಾಂಚನಕಾರಿ ಪ್ರಸಂಗವಾಗಿತ್ತು.
ಜನ್ಮಭೂಮಿ ಆಂದೋಲನದ ಸಂದರ್ಭದಲ್ಲಿ ಶುರುವಾದ ಮಹತ್ವದ ಚರ್ಚೆಯೆಂದರೆ ನಿಜವಾದ ಜಾತ್ಯತೀತತೆ ಮತ್ತು ಹುಸಿ-ಸೆಕ್ಯುಲರಿಸಂ ನಡುವಿನ ವ್ಯತ್ಯಾಸ. ಒಂದೆಡೆ ಆಂದೋಲನಕ್ಕೆ ಜನಬೆಂಬಲವಿತ್ತು. ಮತ್ತೊಂದೆಡೆ, ಹೆಚ್ಚಿನ ರಾಜಕೀಯ ಪಕ್ಷಗಳು ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಚಳವಳಿಯಿಂದ ದೂರ ಸರಿದಿದ್ದವು. ಮತಬ್ಯಾಂಕ್ ರಾಜಕಾರಣದ ಆಮಿಷಕ್ಕೆ ಬಲಿಯಾಗಿ, ಜಾತ್ಯತೀತತೆಯ ಹೆಸರಿನಲ್ಲಿ ತಮ್ಮ ನಿಲುವನ್ನು ಅವರು ಸಮರ್ಥಿಸಿಕೊಂಡರು.
ನಂತರದಲ್ಲಿ ನಾನು, ವಿಎಚ್​ಪಿ, ಆರ್​ಎಸ್​ಎಸ್ ಮತ್ತು ಬಿಜೆಪಿಯ ನನ್ನ ಅನೇಕ ಸಹೋದ್ಯೋಗಿಗಳನ್ನು ಒಳಗೊಂಡ ಕಾನೂನು ಹೋರಾಟ ಸೇರಿದಂತೆ ಬಹಳಷ್ಟು ಘಟನೆಗಳು ನಡೆದಿವೆ. ಆದಾಗ್ಯೂ, ಸುಮಾರು ಮೂರು ದಶಕಗಳ ನಂತರ, ಸೆಪ್ಟೆಂಬರ್ 30, 2020ರಂದು, ಸಿಬಿಐ ವಿಶೇಷ ನ್ಯಾಯಾಲಯವು ನನ್ನನ್ನು ಮತ್ತು ಇತರರನ್ನು ದೋಷಮುಕ್ತಗೊಳಿಸಿತು ಮತ್ತು ಎಲ್ಲಾ ಆರೋಪಗಳಿಂದ ಬಿಡುಗಡೆ ಮಾಡಿತು.
2019ರ ನವೆಂಬರ್​ನಲ್ಲಿ ಸುಪ್ರೀಂಕೋರ್ಟ್​ನ ನಿರ್ಣಾಯಕ ತೀರ್ಪಿನಿಂದಾಗಿ ಶ್ರೀರಾಮ ಮಂದಿರದ ಪುನರ್ನಿರ್ವಣವು ಶಾಂತ ವಾತಾವರಣದಲ್ಲಿ ನಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ, ಎಲ್ಲಾ ಸಂಘಟನೆಗಳಿಗೆ, ವಿಶೇಷವಾಗಿ ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನಾನು ಆಳವಾದ ಕೃತಜ್ಞತೆ ಸಲ್ಲಿಸುತ್ತೇನೆ. ಅಂದು ನನ್ನ ಯಾತ್ರೆಗೆ ಬಂದ ಅಸಂಖ್ಯಾತ ಜನರು, ಸಂತರು, ನಾಯಕರು, ಕರ ಸೇವಕರು ಮತ್ತು ದಶಕಗಳಿಂದ ಅಯೋಧ್ಯೆ ಚಳವಳಿಗೆ ಅಮೂಲ್ಯ ಕೊಡುಗೆ ನೀಡಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಆದರೂ, ಈ ಸಂದರ್ಭದಲ್ಲಿ ನಾನು ಇಬ್ಬರು ವ್ಯಕ್ತಿಗಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಮೊದಲನೆಯವರು ದಿವಂಗತ ಅಟಲ್ ಬಿಹಾರಿ ವಾಜಪೇಯಿ. ಎರಡನೆಯವರು ನನ್ನ ದಿವಂಗತ ಪತ್ನಿ ಕಮಲಾ. ಅವರು ಶ್ರೀರಾಮ ರಥಯಾತ್ರೆಯ ಸಮಯದಲ್ಲಿ ಮಾತ್ರವಲ್ಲದೆ, ಸಾರ್ವಜನಿಕ ಜೀವನದ ಸುದೀರ್ಘ ಅವಧಿಯುದ್ದಕ್ಕೂ ಸ್ಥಿರತೆಯ ಆಧಾರಸ್ತಂಭ ಮತ್ತು ಅಪ್ರತಿಮ ಶಕ್ತಿಯ ಮೂಲವಾಗಿದ್ದರು. ಜ. 22 ವಿಶೇಷ ಸಂದರ್ಭದ ಪೂರ್ವದಲ್ಲಿ, ಇಡೀ ದೇಶ ರಾಮ-ಮಯವಾಗಿ ಮಾರ್ಪಟ್ಟಿದೆ. ನನ್ನೆಲ್ಲಾ ದೇಶವಾಸಿಗಳಿಗೆ ಶುಭಾಶಯಗಳು! ಪ್ರಧಾನಿ ಮೋದಿಯವರು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾವನ್ನು ನೆರವೇರಿಸಿದಾಗ ಅವರು ಭಾರತದ ಪ್ರತಿಯೊಬ್ಬ ನಾಗರಿಕರನ್ನು ಪ್ರತಿನಿಧಿಸುತ್ತಾರೆ.
ನಾನು ಶ್ರೀರಾಮನ ಪಾದಕಮಲಗಳಿಗೆ ನಮಸ್ಕರಿಸುತ್ತೇನೆ. ಅವನು ಎಲ್ಲರನ್ನೂ ಆಶೀರ್ವದಿಸಲಿ. ಜೈ ಶ್ರೀ ರಾಮ್
(ಲೇಖಕರು ಬಿಜೆಪಿಯ ಹಿರಿಯ ನಾಯಕರು, ಮಾಜಿ ಉಪಪ್ರಧಾನಿ, ಮಾಜಿ ಗೃಹ ಸಚಿವ)
ಬುದ್ಧಿವಂತರಿಗೆ ಮಾತ್ರ: ಫೋಟೋದಲ್ಲಿರುವ ನಾಲ್ವರು ಮಹಿಳೆಯರಲ್ಲಿ ಕಳ್ಳಿ ಯಾರು? ಪತ್ತೆಹಚ್ಚುವವರೇ ಜೀನಿಯಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
