ನವದೆಹಲಿ:ಆದಾಯ ತೆರಿಗೆ ಮಿತಿಯಲ್ಲಿ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಿರಾಸೆ ಮೂಡಿಸಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಸ್ಪಷ್ಟವಾಗಿ ಘೊಷಣೆ ಮಾಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆದಾಯ ತೆರಿಗೆದಾರರ, ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದವರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಆದಾಯ ತೆರಿಗೆ ಸ್ಲಾ್ಯಬ್ ಮಿತಿ ಹೆಚ್ಚಿಸುವ ಘೊಷಣೆ ಹೊರಬೀಳಬಹುದು ಎಂಬ ನಿರೀಕ್ಷೆ ಈ ಮೂಲಕ ಹುಸಿಯಾಗಿದೆ.
ಹೊಸ ತೆರಿಗೆ ಪಾವತಿ ಪದ್ಧತಿಯಲ್ಲಿ ತೆರಿಗೆ ಮಿತಿಯ ಹೆಚ್ಚಳವನ್ನು ಜನರು ನಿರೀಕ್ಷಿಸಿದ್ದರು. ಇದರ ಜತೆಗೆ ಹಳೆಯ ಪದ್ಧತಿಯನ್ನೇ ಮುಂದುವರಿಸಿರುವ ತೆರಿಗೆದಾರರು, ಕನಿಷ್ಠ ಪಕ್ಷ ಸ್ಟಾ್ಯಂಡರ್ಡ್ ಡಿಡಕ್ಷನ್ ಸ್ಲಾ್ಯಬ್​ನಲ್ಲಿ ಕೊಂಚ ಏರಿಕೆ ಮಾಡಬಹುದು ಎಂದು ಅಪೇಕ್ಷೆ ಹೊಂದಿದ್ದರು. ಆದರೆ, ಚುನಾವಣೆ ಹೊಸ್ತಿಲಲ್ಲಿ ಕೂಡ ಕೇಂದ್ರ ಸರ್ಕಾರವು ಮಧ್ಯಮ ವರ್ಗದವರಿಗೆ ನೆಮ್ಮದಿ ನೀಡುವ ಇಂತಹ ಕ್ರಮವನ್ನು ಕೈಗೊಂಡಿಲ್ಲ. ಹಿಂದಿನ ತೆರಿಗೆ ನೀತಿಯನ್ನೇ ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಆಮದು ಸುಂಕ ಸೇರಿದಂತೆ ನೇರ ಮತ್ತು ಪರೋಕ್ಷ ತೆರಿಗೆಗಳ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಚಿವೆ ಹೇಳಿದರು. ಸರ್ಕಾರವು ತೆರಿಗೆ ದರಗಳನ್ನು ಕಡಿಮೆ ಮಾಡಿದೆ ಮತ್ತು ತರ್ಕಬದ್ಧಗೊಳಿಸಿದೆ. ಹೊಸ ತೆರಿಗೆ ಯೋಜನೆಯಡಿ 2.2 ಲಕ್ಷ ರೂ.ದಿಂದ 7 ಲಕ್ಷ ರೂ.ವರೆಗೆ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಬಾಧ್ಯತೆ ಇರುವುದಿಲ್ಲ. ಚಿಲ್ಲರೆ ವ್ಯಾಪಾರಕ್ಕೆ ಅಂದಾಜು ತೆರಿಗೆ (ಟ್ಟಛಿಠ್ಠಞಟಠಿಜಿಡಛಿ ಠಿಚ್ಡಚಠಿಜಿಟ್ಞ) ಮಿತಿಯನ್ನು 2 ಕೋಟಿಯಿಂದ 3 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಇದೇ ರೀತಿ ಅಂದಾಜು ತೆರಿಗೆಗೆ ಅರ್ಹರಾದ ವೃತ್ತಿಪರರಿಗೆ ತೆರಿಗೆ ಮಿತಿಯನ್ನು 50 ಲಕ್ಷದಿಂದ 75 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಅಲ್ಲದೆ, ಕಾರ್ಪೆರೇಟ್ ತೆರಿಗೆ ದರವನ್ನು ಅಸ್ತಿತ್ವದಲ್ಲಿರುವ ದೇಶೀಯ ಕಂಪನಿಗಳಿಗೆ 30% ರಿಂದ 22% ಕ್ಕೆ ಇಳಿಸಲಾಗಿದೆ. ಅಲ್ಲದೆ, ಹೊಸ ಉತ್ಪಾದನಾ ಕಂಪನಿಗಳಿಗೆ ಇದನ್ನು 15 ಪ್ರತಿಶತಕ್ಕೆ ಕಡಿತ ಮಾಡಲಾಗಿದೆ ಎಂದು ಅವರು ಹೇಳಿದರು.
25 ಸಾವಿರ ರೂ. ವರೆಗೆ ವಸೂಲಿ ಇಲ್ಲ:ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳನ್ನು ಘೊಷಿಸಿಲ್ಲ. ಹೀಗಿದ್ದರೂ ಅಂದಾಜು ಒಂದು ಕೋಟಿ ತೆರಿಗೆದಾರರು ಪ್ರಸ್ತುತ ಬಜೆಟ್ ಮೂಲಕ ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ಏಕೆಂದರೆ, 2009-10ನೇ ಹಣಕಾಸು ವರ್ಷದವರೆಗೆ 25,000 ರೂ.ವರೆಗಿನ ಹಳೆಯ ಮತ್ತು ವಿವಾದಿತ ನೇರ ತೆರಿಗೆಗಳ ವಸೂಲಾತಿಯನ್ನು ಸರ್ಕಾರ ಮುಂದುವರಿಸುವುದಿಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ. ಇದಲ್ಲದೆ, 2010-11 ರಿಂದ 2014-15 ರ ಹಣಕಾಸು ವರ್ಷಗಳವರೆಗೆ 10,000 ರೂ.ವರೆಗಿನ ನೇರ ತೆರಿಗೆ ಬೇಡಿಕೆಗಳನ್ನು ಹಿಂಪಡೆಯಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಸಣ್ಣಪುಟ್ಟ, ಪರಿಶೀಲಿಸದ, ರಾಜಿ ಮಾಡಿಕೊಳ್ಳದ ಅಥವಾ ವಿವಾದಿತ ನೇರ ತೆರಿಗೆ ಬೇಡಿಕೆಗಳಿವೆ. ಇವುಗಳಲ್ಲಿ ಹಲವು 1962ರಿಂದಲೂ ಪುಸ್ತಕದಲ್ಲಿ ಉಳಿದಿವೆ. ಇವು ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಆತಂಕ ಉಂಟು ಮಾಡುತ್ತಿದ್ದು, ನಂತರದ ವರ್ಷಗಳಲ್ಲಿ ಮರುಪಾವತಿಗೆ ಅಡ್ಡಿ ಮಾಡುತ್ತಿವೆ ಎಂದು ನಿರ್ಮಲಾ ಹೇಳಿದರು. 2009-10ರ ಹಣಕಾಸು ವರ್ಷದವರೆಗಿನ ಅವಧಿಗೆ ಸಂಬಂಧಿಸಿದಂತೆ ಇಪ್ಪತೆôದು ಸಾವಿರ ರೂಪಾಯಿಗಳವರೆಗೆ ಮತ್ತು 2010-11ರಿಂದ 2014-15ರ ಹಣಕಾಸು ವರ್ಷಗಳವರೆಗೆ ಹತ್ತು ಸಾವಿರ ರೂಪಾಯಿಗಳವರೆಗೆ ಬಾಕಿ ಉಳಿದಿರುವ ನೇರ ತೆರಿಗೆ ಬೇಡಿಕೆಗಳನ್ನು ಹಿಂಪಡೆಯಲು ನಾನು ಪ್ರಸ್ತಾಪಿಸುತ್ತೇನೆ. ಇದು ಅಂದಾಜು ಒಂದು ಕೋಟಿ ತೆರಿಗೆದಾರರಿಗೆ ಪ್ರಯೋಜನ ನೀಡುತ್ತದೆ ಎಂದು ಅವರು ಹೇಳಿದರು.
ತೆರಿಗೆ ಪಾವತಿದಾರರ ಸಂಖ್ಯೆ ಏರಿಕೆ:ತೆರಿಗೆ ಪಾವತಿಸುವವರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ. ಅಲ್ಲದೆ, 2014 ರಿಂದ ನೇರ ತೆರಿಗೆ ಸಂಗ್ರಹವು ಮೂರು ಪಟ್ಟು ಹೆಚ್ಚಾಗಿದೆ. ತೆರಿಗೆ ರಿಟರ್ನ್ಗಳ ಪ್ರಕ್ರಿಯೆಯ ಸಮಯವನ್ನು 2014ನೇ ಹಣಕಾಸು ವರ್ಷದಲ್ಲಿ 93 ದಿನಗಳಿಂದ 10 ದಿನಗಳಿಗೆ ಕಡಿತ ಮಾಡಲಾಗಿದೆ. ಮರುಪಾವತಿ ಪ್ರಕ್ರಿಯೆಯನ್ನೂ ತ್ವರಿತಗೊಳಿಸಲಾಗಿದೆ ಎಂದು ಅವರು ತಿಳಿಸಿದರು. 2025-26ರಲ್ಲಿ ವಿತ್ತೀಯ ಕೊರತೆಯನ್ನು ಶೇಕಡಾ 4.5ಕ್ಕೆ ತಗ್ಗಿಸಲು ಸರ್ಕಾರವು ವಿತ್ತೀಯ ಬಲವರ್ಧನೆಯ ಹಾದಿಯಲ್ಲಿದೆ. 2014ರಿಂದ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ತೆರಿಗೆ ಮೂಲವು ಎರಡು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.
ಸ್ಟಾರ್ಟಪ್​ಗಳಿಗೆ ತೆರಿಗೆ ಪ್ರಯೋಜನ:ಸರ್ಕಾರಿ ಸಂಪತ್ತು ಅಥವಾ ಪಿಂಚಣಿ ನಿಧಿಗಳಿಂದ ಆರಂಭಿಸಿದ ಸ್ಟಾರ್ಟಪ್​ಗಳು ಮತ್ತು ಹೂಡಿಕೆಗಳಿಗೆ ತೆರಿಗೆ ಪ್ರೋತ್ಸಾಹವನ್ನು ಮಾರ್ಚ್ 2025ರವರೆಗೆ ಇನ್ನೂ ಒಂದು ವರ್ಷ ವಿಸ್ತರಿಸಲು ಘೊಷಿಸಲಾಗಿದೆ. ಸರ್ಕಾರಿ ಸಂಪತ್ತು ಅಥವಾ ಪಿಂಚಣಿ ನಿಧಿಗಳಿಂದ ಮಾಡಿದ ಸ್ಟಾರ್ಟಪ್​ಗಳು ಮತ್ತು ಹೂಡಿಕೆಗಳಿಗೆ ಕೆಲವು ತೆರಿಗೆ ಪ್ರಯೋಜನಗಳು ಮತ್ತು ಕೆಲವು ಐಎಫ್​ಎಸ್​ಸಿ (ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ) ಘಟಕಗಳ ಕೆಲವು ಆದಾಯದ ಮೇಲಿನ ತೆರಿಗೆ ವಿನಾಯಿತಿಯು ಮಾರ್ಚ್ 31, 2024 ರಂದು ಮುಕ್ತಾಯಗೊಳ್ಳಲಿದೆ. ತೆರಿಗೆಯಲ್ಲಿ ನಿರಂತರತೆಯನ್ನು ಒದಗಿಸಲು. ಈ ದಿನಾಂಕವನ್ನು ಮಾರ್ಚ್ 31, 2025 ಕ್ಕೆ ವಿಸ್ತರಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದೇಶದಲ್ಲಿ ಸ್ಟಾರ್ಟಪ್​ಗಳನ್ನು ಉತ್ತೇಜಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದುವರೆಗೆ 1.17 ಲಕ್ಷ ಸ್ಟಾರ್ಟಪ್​ಗಳು ಸರ್ಕಾರದಿಂದ ಗುರುತಿಸಲ್ಪಟ್ಟಿವೆ. ಈ ಅರ್ಹ ಸ್ಟಾರ್ಟಪ್​ಗಳು ಸ್ಟಾರ್ಟಪ್ ಇಂಡಿಯಾ ಕ್ರಿಯಾ ಯೋಜನೆಯ ಅಡಿಯಲ್ಲಿ ಆದಾಯ ತೆರಿಗೆ ಪ್ರಯೋಜನಗಳಂತಹ ತೆರಿಗೆ ಪೋ›ತ್ಸಾಹವನ್ನು ಪಡೆಯಬಹುದು.
ಆಹಾರ, ರಸಗೊಬ್ಬರ ಸಬ್ಸಿಡಿ ಇಳಿಕೆ:ಮುಂದಿನ ಹಣಕಾಸು ವರ್ಷಕ್ಕೆ ಆಹಾರ ಮತ್ತು ರಸಗೊಬ್ಬರಗಳ ಮೇಲಿನ ಸಬ್ಸಿಡಿಗಳನ್ನು 3.69 ಲಕ್ಷ ಕೋಟಿ ರೂಪಾಯಿಗೆ ನಿಗದಿಪಡಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು ಶೇ. 8ರಷ್ಟು ಕಡಿಮೆಯಾಗಿದೆ. 2024-25ನೇ ಹಣಕಾಸು ವರ್ಷಕ್ಕೆ ಆಹಾರ ಸಬ್ಸಿಡಿಗೆ 2,05,250 ಕೋಟಿ ರೂಪಾಯಿಯನ್ನು ಬಜೆಟ್​ನಲ್ಲಿ ಮೀಸಲಿಡಲಾಗಿದ್ದು, ಮಾರ್ಚ್ 31, 2024ಕ್ಕೆ ಮುಕ್ತಾಯಗೊಳ್ಳುವ ವಿತ್ತೀಯ ವರ್ಷದ 2,12,322 ಕೋಟಿ ರೂ.ಗಳ ಪರಿಷ್ಕೃತ ಅಂದಾಜುಗಳಿಗಿಂತ ಇದು ಕಡಿಮೆಯಾಗಿದೆ. 2022-23ನೇ ಸಾಲಿನಲ್ಲಿ ಆಹಾರ ಸಬ್ಸಿಡಿಯ ಮೊತ್ತ 2.72 ಲಕ್ಷ ಕೋಟಿ ರೂ. ಇತ್ತು. 2024-25ನೇ ವಿತ್ತೀಯ ವರ್ಷಕ್ಕೆ ರಸಗೊಬ್ಬರ ಮೇಲಿನ ಸಬ್ಸಿಡಿಗೆ 1.64 ಲಕ್ಷ ಕೋಟಿ ರೂ.ನಿಗಿದಿಪಡಿಸಲಾಗಿತ್ತು. ಪ್ರಮುಖವಾಗಿ ಅಡುಗೆ ಅನಿಲ ಸೇರಿದಂತೆ ಪೆಟ್ರೋಲಿಂ ಉತ್ಪನ್ನಗಳಿಗೂ ಸರ್ಕಾರ ಸಬ್ಸಿಡಿಯನ್ನು ನೀಡಿದೆ. ಮುಂದಿನ ಹಣಕಾಸು ವರ್ಷಕ್ಕೆ ಪೆಟ್ರೋಲಿಯಂಗೆ 11,925 ಕೋಟಿ ರೂ. ಮೀಸಲಿಟ್ಟಿದೆ. ಪ್ರಸಕ್ತ ವರ್ಷದ ಅಂದಾಜು 12,240 ಕೋಟಿ ರೂ.ಗಿಂತ ಕಡಿಮೆ ಇದೆ.
ಬಯೋಗ್ಯಾಸ್​ಗೆ ಪೋ›ತ್ಸಾಹಧನ:ಶೂನ್ಯ ಕಾರ್ಬನ್ ಹೊರಸೂಸುವಿಕೆ ಗುರಿಯನ್ನು ಪೂರೈಸಲು ಮತ್ತು ಇಂಧನ ಮಿಶ್ರಣದಲ್ಲಿ ನವೀಕರಿಸಬಹುದಾದ ಶಕ್ತಿಯ ಪಾಲನ್ನು ಹೆಚ್ಚಿಸಲು ಮಧ್ಯಂತರ ಬಜೆಟ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸಿನ ನೆರವು ಘೊಷಣೆ ಮಾಡಿದರು. ಬಯೋಮಾಸ್ ಅನ್ನು ಕಂಪ್ರೆಸ್ಡ್ ಬಯೋ ಗ್ಯಾಸ್ (ಇಆಎ) ಆಗಿ ಪರಿವರ್ತಿಸಲು ಪೋ›ತ್ಸಾಹಧನ ನೀಡುವುದಾಗಿ ಘೊಷಣೆ ಮಾಡಿದರು. ಸಾಗಣೆಯ ಉದ್ದೇಶಕ್ಕಾಗಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(ಇಘಎ) ಮತ್ತು ಗೃಹಬಳಕೆಯ ಉದ್ದೇಶಗಳಿಗಾಗಿ ಪೈಪ್ಡ ನ್ಯಾಚುರಲ್ ಗ್ಯಾಸ್ (ಕಘಎ) ಅನ್ನು ಹಂತಹಂತವಾಗಿ ಸಿಬಿಜಿಯಲ್ಲಿ ಮಿಶ್ರಣ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಪರಿಸರ ಸ್ನೇಹಿ ಇಂಧನ:ಪರಿಸರ ಸ್ನೇಹಿ ಇಂಧನ ಬೆಳವಣಿಗೆಯನ್ನು ಉತ್ತೇಜಿಸಲು ಬಯೋ ಮ್ಯಾನುಫಾಕ್ಚರಿಂಗ್ ಮತ್ತು ಬಯೋ ಫೌಂಡ್ರಿಯ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. ಈ ಯೋಜನೆಯು ಜೈವಿಕ ವಿಘಟನೀಯ ಪಾಲಿಮರ್​ಗಳು, ಜೈವಿಕ ಪ್ಲಾಸ್ಟಿಕ್​ಗಳು, ಜೈವಿಕ ಔಷಧಗಳು ಮತ್ತು ಜೈವಿಕ ಕೃಷಿ ಪರಿಕರಿಗಳಿಗೆಪರಿಸರ ಸ್ನೇಹಿ ಪರ್ಯಾಯಗಳನ್ನು ಒದಗಿಸುತ್ತದೆ. ಇಂಧನ ಭದ್ರತೆಯತ್ತ ಬದಲಾವಣೆಯನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಬಜೆಟ್ ಮಂಡನೆ ಸಂದರ್ಭದಲ್ಲಿ ಬಯೋಮಾಸ್ ಯೋಜನೆಗಳ ಸಂಗ್ರಹಣೆಗಾಗಿ ಯಂತ್ರೋಪಕರಣಗಳಿಗೆ ಹಣಕಾಸಿನ ನೆರವು ನೀಡುವುದಾಗಿ ವಿತ್ತ ಸಚಿವೆ ಘೊಷಣೆ ಮಾಡಿದರು.
ಒಂದು ಲಕ್ಷ ಕೋಟಿ ರೂ. ನಿಧಿ ಸ್ಥಾಪನೆ:ಖಾಸಗಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಹೆಚ್ಚಿನ ಉತ್ತೇಜನ ನೀಡಲು ಕಂಪನಿಗಳ ನೋಂದಣಿಪೂರ್ವ ಪ್ರಕ್ರಿಯೆಗಾಗಿ (ಸನ್​ರೈಸ್ ಡೊಮೇಯ್್ನ ಒಂದು ಲಕ್ಷ ಕೋಟಿ ರೂಪಾಯಿಯ ನಿಧಿಯನ್ನು ಸ್ಥಾಪಿಸಲಾಗುವುದೆಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. ಈ ಯೋಜನೆಯಡಿ 50-ವರ್ಷದ ಬಡ್ಡಿ-ರಹಿತ ಸಾಲವನ್ನು ನೀಡಲಾಗುತ್ತದೆ. ಇದು ಭಾರತದ ತಂತ್ರಜ್ಞಾನ-ಪ್ರಿಯ ಯುವನಜತೆಯ ಸುವರ್ಣ ಯುಗವಾಗಿದೆ ಎಂದು ಸಚಿವೆ ನಿರ್ಮಲಾ ವರ್ಣಿಸಿದರು. ಈ ನಿಧಿ ದೀರ್ಘಾವಧಿಯ ಹಣಕಾಸು ಅಥವಾ ಮರುಹಣಕಾಸು ನೆರವು ಒದಗಿಸಲಿದೆ. ಸಾಲಕ್ಕೆ ಕಡಿಮೆ ಅಥವಾ ಶೂನ್ಯ ಬಡ್ಡಿಯನ್ನು ವಿಧಿಸಲಾಗುತ್ತದೆ ಎಂದು ಹೇಳಿದರು.
ಕಾಗದರಹಿತ ಬಜೆಟ್:ಈ ಹಿಂದಿನ ಮೂರು ವರ್ಷಗಳ ರೀತಿಯಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟನ್ನು ಕಾಗದರಹಿತವಾಗಿ ಪ್ರಸ್ತುತ ಪಡಿಸಿದರು. ಸಾಂಪ್ರದಾಯಿಕ ಬಹಿ ಖಾತಾ ಶೈಲಿಯ ಬಂಗಾರ ಬಣ್ಣದ ರಾಷ್ಟ್ರೀಯ ಲಾಂಛನವಿರುವ ಕೆಂಪು ಬಣ್ಣದ ಚೀಲದಲ್ಲಿ ಡಿಜಿಟಲ್ ಟ್ಯಾಬ್ ಇಟ್ಟು, ನೇರವಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿ, ದ್ರೌಪದಿ ಮುಮುರನ್ನು ಭೇಟಿಯಾದ ಬಳಿಕ ಸಂಸತ್ತಿಗೆ ತೆರಳಿ ಬಜೆಟ್ ಮಂಡಿಸಿದರು. 2021ರ ಕರೊನಾ ಸಾಂಕ್ರ್ರಾಮಿಕ ಸಂದರ್ಭದಲ್ಲಿ ಬಜೆಟ್ ಪ್ರತಿಗಳಿಗೆ ತಿಲಾಂಜಲಿ ಹಾಡಿ, ಡಿಜಿಟಲ್ ಸ್ಪರ್ಶ ಕೊಡಲಾಗಿತ್ತು. ಇದಕ್ಕೂ ಮೊದಲು ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಮತ್ತು ಪಿಯೂಶ್ ಗೋಯೆಲ್ ಸೂಟ್​ಕೇಸ್ ಬಳಕೆ ಮಾಡಿದ್ದರು.
ಹಣದುಬ್ಬರಕ್ಕೆ ಲಗಾಮು:ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರ ಕ್ರಿಯಾಶೀಲ ಕ್ರಮಗಳನ್ನು ಕೈಗೊಂಡಿದ್ದರಿಂದ ಪ್ರಸ್ತುತ ಹಣದುಬ್ಬರವು ನಿಭಾಯಿಸಲು ಸಾಧ್ಯವಾದ ಪ್ರಮಾಣದಲ್ಲಿದೆ ಎಂದು ಮಧ್ಯಂತರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದರು. ಸದ್ಯಕ್ಕೆ ಹಣದುಬ್ಬರವು ಮಧ್ಯಮ ಪ್ರಮಾಣದಲ್ಲಿದೆ. ಚಿಲ್ಲರೆ ಹಣದುಬ್ಬರವು ಶೇಕಡ 4ರಷ್ಟು ಇರುವಂತೆ ಖಾತರಿಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್​ಗೆ (ಆರ್​ಬಿಐ) ಕೇಂದ್ರ ಸರ್ಕಾರ ತಾಕೀತು ಮಾಡಿದ್ದು, ಇದು ಶೇ. 2ರಷ್ಟು ಹೆಚ್ಚು-ಕಡಿಮೆ ಆಗಬಹುದು ಎಂದಿತ್ತು. ಚಿಲ್ಲರೆ ಹಣದುಬ್ಬರ 2023ರ ಡಿಸೆಂಬರ್​ನಲ್ಲಿ ನಾಲ್ಕು ತಿಂಗಳಲ್ಲೇ ಅತಿ ವೇಗವಾಗಿ ಶೇ. 5.69ಕ್ಕೆ ಏರಿತ್ತು. ತರಕಾರಿ, ಬೇಳೆಗಳು ಮತ್ತು ಸಾಂಬಾರ ಪದಾರ್ಥಗಳು ತುಟ್ಟಿಯಾಗಿದ್ದೇ ಇದಕ್ಕೆ ಕಾರಣವಾಗಿತ್ತು. 2023ರ ಆಗಸ್ಟ್​ನಲ್ಲಿ ಹಣದುಬ್ಬರ ಅತಿಯಾದ ಶೇ. 6.83ಕ್ಕೆ ಏರಿತ್ತು.
ಪವನ ಇಂಧನ ಸಾಮರ್ಥ್ಯ ಹೆಚ್ಚಳ ಗುರಿ:ಶೂನ್ಯ ಇಂಗಾಲ ಸೂಸುವಿಕೆ ಗುರಿಯನ್ನು ಸಾಧಿಸುವ ಯತ್ನದ ಅಂಗವಾಗಿ ಕಡಲತೀರದ ಪವನ ಇಂಧನ ಸಾಮರ್ಥ್ಯವನ್ನು ಅಧಿಕವಾಗಿ ಬಳಸಿಕೊಳ್ಳುವ ಯೋಜನೆಗಳಿಗೆ ಸರ್ಕಾರ ಗಣನೀಯ ಪ್ರಮಾಣದಲ್ಲಿ ಹಣವನ್ನು ಒದಗಿಸಲಿದೆ. ಆರಂಭದಲ್ಲಿ ಒಂದು ಗಿಗಾವ್ಯಾಟ್ ಸಾಮರ್ಥ್ಯದ ಇಂಧನ ಉತ್ಪಾದನೆಗೆ ನೆರವು ಕೊಡಲಾಗುವುದೆಂದು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಪ್ರಕಟಿಸಿದರು. 2070ರೊಳಗೆ ಶೂನ್ಯ ಇಂಗಾಲಾಮ್ಲ ಸೂಸುವಿಕೆ (ಕಾರ್ಬನ್ ಎಮಿಶನ್) ಗುರಿ ಸಾಧನೆಗೆ ಭಾರತ ಬದ್ಧವಾಗಿದೆ ಎಂದರು.
ಆರ್ಥಿಕತೆಯಲ್ಲಿ ಬೆಳವಣಿಗೆ:ಕಳೆದ 10 ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯು ಆಳವಾದ ಧನಾತ್ಮಕ ಪರಿವರ್ತನೆ ಕಂಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು. ಭಾರತದ ಜನರು ಭವಿಷ್ಯವನ್ನು ಭರವಸೆ ಮತ್ತು ಆಯ್ಕೆಗಳೊಂದಿಗೆ ಎದುರು ನೋಡುತ್ತಿದ್ದಾರೆ. ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಒಳಗೊಳ್ಳುವಿಕೆಯ ಎಲ್ಲ ಅಂಶಗಳನ್ನು ಪರಿಗಣಿಸಿದೆ. ರಚನಾತ್ಮಕ ಸುಧಾರಣೆ, ಜನಪರ ಕಾರ್ಯಕ್ರಮ ಮತ್ತು ಉದ್ಯೋಗಾವಕಾಶಗಳು, ಆರ್ಥಿಕತೆಯು ಹೊಸ ಚೈತನ್ಯ ಪಡೆಯಲು ಸಹಾಯ ಮಾಡಿದೆ ಎಂದರು.
ಜಿಡಿಪಿ ಶೇ. 6.5 ಅಂದಾಜು:ಕಳೆದ ಡಿಸೆಂಬರ್​ನಲ್ಲಿ ಆರ್​ಬಿಐ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಅಂದಾಜನ್ನು 6.5 ಪ್ರತಿಶತದಿಂದ 7 ಪ್ರತಿಶತಕ್ಕೆ ಏರಿಕೆ ಮಾಡಿದೆ. ದೇಶೀಯ ಬೇಡಿಕೆ ಮತ್ತು ಉತ್ಪಾದನಾ ವಲಯದಲ್ಲಿ ಹೆಚ್ಚಿನ ಸಾಮರ್ಥ್ಯದ ಬಳಕೆ ಅಂದಾಜಿಸಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಭಾರತದಲ್ಲಿ ಆರ್ಥಿಕ ಬೆಳವಣಿಗೆಯು 2023-24 ಮತ್ತು 2024-25ರಲ್ಲಿ 6.5 ಪ್ರತಿಶತದಷ್ಟು ಬಲವಾಗಿ ಉಳಿಯಲಿದೆ ಎಂದು ಅಂದಾಜಿಸಿದೆ. ವಿಶ್ವ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ದರ ಶೇ.6.4 ಇರಲಿದೆ ಎಂದು ಅಂದಾಜಿಸಿದೆ. 2024-25 ಕ್ಕೆ ಜಿಡಿಪಿಯಲ್ಲಿ ಶೇ.6.5ರೊಂದಿಗೆ ಹೆಚ್ಚಿನ ವಿಸ್ತರಣೆ ನಿರೀಕ್ಷಿಸಿದೆ ಎಂದರು.
ವಿಶ್ವದ 3ನೇ ಆರ್ಥಿಕತೆ ಗುರಿ:2020-21ರಲ್ಲಿ ದೇಶದ ಆರ್ಥಿಕತೆಯು ಶೇ.5.8 ಸಂಕುಚಿತಗೊಂಡ ನಂತರ, 2021-22ರಲ್ಲಿ ಶೇ.9.1 ಬೆಳವಣಿಗೆ ಕಂಡಿದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತೀಯ ಆರ್ಥಿಕತೆಯು ಪ್ರಸ್ತುತ 3.7 ಟ್ರಿಲಿಯನ್​ನಿಂದ 5 ಟ್ರಿಲಿಯನ್ ಜಿಡಿಪಿಯೊಂದಿಗೆ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ ಆಗಲಿದೆ. 6-7 ವರ್ಷಗಳಲ್ಲಿ (2030ರ ವೇಳೆಗೆ) ಭಾರತ ಆರ್ಥಿಕತೆ 7 ಟ್ರಿಲಿಯನ್​ಗೆ ಉತ್ತೇಜಿಸಲು ಗುರಿ ಹೊಂದಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಸೀತಾರಾಮನ್ 6ನೇ ಬಜೆಟ್:ಲೋಕಸಭೆ ಚುನಾವಣೆಗೆ ಮುನ್ನ ವಿತ್ತ ಸಚಿವೆ ಸೀತಾರಾಮನ್ ಅವರು ತಮ್ಮ 6ನೇ ಆಯವ್ಯಯ ಮಂಡನೆ ಮಾಡಿದ್ದಾರೆ. ಎನ್​ಡಿಎ ಸರ್ಕಾರದಲ್ಲಿ 2019ರಿಂದ ಇಲ್ಲಿಯವರೆಗೆ ಒಟ್ಟು 6 ಬಜೆಟ್ ಮಂಡನೆ ಮಾಡಿದ ಅವರು ಮಾಜಿ ಪ್ರಧಾನಿ ದಿ. ಮುರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇದು ಉತ್ಸಾಹವರ್ಧಕ ಬಜೆಟ್ ಆಗಿದ್ದು, ಆರ್ಥಿಕ ಸುಧಾರಣೆಯ ಸಮಗ್ರ ನೋಟ ಒಳಗೊಂಡಿದೆ. ಎಲ್ಲರ ರಂಗಗಳಿಗೂ ಆದ್ಯತೆ ನೀಡಲಾಗಿದೆ. ಭವಿಷ್ಯದ ಹಿತದ ಬಗ್ಗೆಯೂ ಗಮನ ಹರಿಸಲಾಗಿದೆ.
| ರಾಜನಾಥ್ ಸಿಂಗ್ ಕೇಂದ್ರ ರಕ್ಷಣಾ ಸಚಿವ
ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ಬಡವರು, ಮಹಿಳೆಯರು, ಯುವಕರು ಮತ್ತು ಅನ್ನದಾತರು ಎಂಬ ಪದವನ್ನು ಬಳಸಿದ್ದಾರೆ. ಚುನಾವಣೆಯ ಉದ್ದೇಶದಿಂದ ಹಲವು ಯೋಜನೆಗಳನ್ನು ಘೊಷಿಸಿದ್ದು, ಇವುಗಳು 20 ಲಕ್ಷ ಕೋಟಿ ಕರೋನಾ ಪ್ಯಾಕೇಜ್ ರೀತಿಯ ಸುಳ್ಳುಗಳ ಸರಮಾಲೆಯೇ ಆಗಿದೆ.
| ಡಾ.ಎಚ್.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ
ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿಲ್ಲ. ಇದು ದೇಶದ ಹಾಗೂ ಬಡವರ ಹಿತದೃಷ್ಟಿಯ ಪರವಾದ ಬಜೆಟ್. ಹಣಕಾಸಿನ ಭದ್ರತೆ ಜತೆಗೆ ಅಭಿವೃದ್ಧಿಪರ. ವಸತಿ, ಆರೋಗ್ಯ, ರಸ್ತೆ, ಸಾರಿಗೆ, ಮೂಲಸೌಕರ್ಯ, ಕೃಷಿ, ಮೀನುಗಾರಿಕೆ, ಆರೋಗ್ಯಕ್ಕೆ ಒತ್ತು ಸಿಕ್ಕಿದೆ.
| ಪ್ರಲ್ಹಾದ ಜೋಶಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ
ಇದು ಮಧ್ಯಂತರ ಬಜೆಟ್ ಆಗಿದ್ದರೂ ಮೂಲಸೌಕರ್ಯ, ಸಾಮಾಜಿಕ ಕ್ಷೇತ್ರ, ಕೃಷಿ ಮತ್ತು ಕಡಲ ಆರ್ಥಿಕತೆ ಸೇರಿ ಪ್ರತಿಯೊಂದು ವಲಯಕ್ಕೂ ಗಮನ ಹರಿಸಿದೆ. 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮುನ್ನಡೆಸುವಲ್ಲಿ ಈ ಬಜೆಟ್ ನಿರ್ಣಾಯಕ ಪಾತ್ರ ವಹಿಸುತ್ತದೆ.
| ಕಿರಣ್ ರಿಜಿಜು ಕೇಂದ್ರ ಭೂ ವಿಜ್ಞಾನ ಸಚಿವ
ಬಜೆಟ್ ನಿರಾಶಾದಾಯಕವಾಗಿದೆ. ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಮತದಾರರನ್ನು ಮರುಳು ಮಾಡುವಂತಹ ಚಮತ್ಕಾರಿ ಮಾತುಗಾರಿಕೆಯಷ್ಟೇ ಇದರಲ್ಲಿ ತುಂಬಿದೆ. ನಿರ್ಮಲಾ ಸೀತಾರಾಮನ್ ಪ್ರತಿಯೊಂದರಲ್ಲೂ ದೇಶವು 2014ರಿಂದ ಈಚೆಗೆ ಮಾತ್ರ ಭಾರೀ ಸಾಧನೆ ಮಾಡಿದೆ ಎಂದು ಹೇಳುವ ಕೆಲಸವನ್ನಷ್ಟೆ ಮಾಡಿದ್ದಾರೆ. ತೆರಿಗೆಯಲ್ಲಿ ಜನರು ಹೆಚ್ಚಿನ ರಿಯಾಯಿತಿ ಬಯಸಿದ್ದರು. ಈಗ ನೋಡಿದರೆ ಮೋದಿ ಏನನ್ನೂ ಕೊಟ್ಟಿಲ್ಲ. ಸುಮ್ಮನೆ ಅಭಿವೃದ್ಧಿಯ ಮಂತ್ರ ಹೇಳುತ್ತ, ಜನರ ಭಾರವನ್ನು ಹಾಗೆಯೇ ಉಳಿಸಿದ್ದಾರೆ.
| ಎಂ.ಬಿ. ಪಾಟೀಲ ಕೈಗಾರಿಕಾ ಸಚಿವ
ಬಜೆಟ್ ಮಂಡನೆ ಎನ್ನುವುದು ಹೊಸ ಯೋಜನೆ ಘೋಷಿಸುವ ಸಂದರ್ಭವಲ್ಲ. ವರ್ಷದ ಆರ್ಥಿಕ ಖರ್ಚುವೆಚ್ಚಗಳನ್ನು ಯೋಜಿಸುವ ಸಂದರ್ಭ. ಆ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಚಿಕ್ಕದಾಗಿದ್ದರೂ ಅರ್ಥಪೂರ್ಣವಾಗಿತ್ತು. ಯಾವುದೇ ಹೆಚ್ಚಿನ ತೆರಿಗೆಯನ್ನು ಘೋಷಣೆ ಮಾಡಿಲ್ಲ. ಖುಷಿಯ ವಿಷಯವೆಂದರೆ ಜಿಡಿಪಿ ಮತ್ತು ಹೆಚ್ಚಿನ ತೆರಿಗೆ ಅನುಪಾತ ಆರ್ಥಿಕ ಖರ್ಚುವೆಚ್ಚಕ್ಕೆ ಒಂದೊಳ್ಳೆ ಅಡಿಪಾಯ ಆಗಲಿದೆ.
| ಆನಂದ್ ಮಹೀಂದ್ರ ಖ್ಯಾತ ಉದ್ಯಮಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
