ಮಾಸ್ಕೋ:‘ಮುಗ್ಧ ಮಕ್ಕಳ ಕೊಲೆಯಾದರೆ, ಮುಗ್ಧ ಮಕ್ಕಳು ಮೃತಪಟ್ಟರೆ ಅದರಿಂದ ಕರುಳು ಕಿವುಚಿದಂತಾಗುತ್ತದೆ’ ಎಂದು ಯೂಕ್ರೇನ್ ರಾಜಧಾನಿ ಕಿಯೆವ್​ನ ಮಕ್ಕಳ ಆಸ್ಪತ್ರೆಯೊಂದರ ಮೇಲೆ ರಷ್ಯಾ ಸೋಮವಾರ ನಡೆಸಿದ ದಾಳಿಯನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಬಾಂಬ್, ಬಂದೂಕು ಮತ್ತು ಬುಲೆಟ್​ಗಳ ನಡುವೆ ಶಾಂತಿ ಮಾತುಕತೆ ಫಲಪ್ರದವಾಗದು ಎಂದೂ ಮಂಗಳವಾರ ಪುತಿನ್ ಜತೆಗಿನ ದ್ವಿಪಕ್ಷೀಯ ಮಾತುಕತೆಗಳ ವೇಳೆ ಮೋದಿಯವರು ಅಭಿಪ್ರಾಯ ಪಟ್ಟರು. ಇದು ಕಳೆದ ಎರಡು ವರ್ಷಗಳಲ್ಲಿ ಹಾಗೂ 2022ರಲ್ಲಿ ಯೂಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣ ಆರಂಭಿಸಿದ ನಂತರ ಮೋದಿ-ಪುತಿನ್ ನಡುವಿನ ಮೊದಲ ದ್ವಿಪಕ್ಷೀಯ ಮಾತುಕತೆಯಾಗಿದೆ. ಎರಡು ದಿನಗಳ ಭೇಟಿಗಾಗಿ ಮೋದಿಯವರು ಸೋಮವಾರ ಮಾಸ್ಕೋಗೆ ಆಗಮಿಸಿದ್ದಾರೆ. ಯೂಕ್ರೇನ್-ರಷ್ಯಾ ಯುದ್ಧವನ್ನು ಪ್ರಸ್ತಾಪಿಸಿದ ಅವರು, ಸಂಘರ್ಷದಲ್ಲಿ ಸಾಮಾನ್ಯ ಭಾರತೀಯರಿಗೆ ಹಾನಿ ಆಗದಿರುವುದನ್ನು ಖಾತರಿಪಡಿಸುವಲ್ಲಿ ರಷ್ಯಾದ ಕೊಡುಗೆಯನ್ನು ಶ್ಲಾಘಿಸಿದರು. ರಷ್ಯಾ-ಯೂಕ್ರೇನ್ ಸಂಘರ್ಷವನ್ನು ಕೊನೆಗೊಳಿಸಿ ಶಾಂತಿ ಮರುಸ್ಥಾಪಿಸಲು ಸಹಕರಿಸಲು ಭಾರತ ಸಿದ್ಧವಿದೆ ಎಂದು ಮೋದಿ ಭರವಸೆ ನೀಡಿದರು.
ಇಂಧನ ಕ್ಷೇತ್ರದ ಸಹಕಾರ:ಪ್ರಧಾನಿಯಾಗಿ ತಮ್ಮ ಮೂರನೇ ಅವಧಿಯಲ್ಲಿ ರಷ್ಯಾಕ್ಕೆ ನೀಡಿದ ಮೊದಲ ಭೇಟಿಯಲ್ಲಿ ಮೋದಿ, ಉಭಯ ದೇಶಗಳ ನಡುವಿನ ಇಂಧನ ಕ್ಷೇೕತ್ರದ ಸಹಕಾರದಿಂದ ಇಡೀ ಜಗತ್ತಿಗೆ ಒಳಿತಾಗಿದೆ ಎಂದರು. ನಿಮ್ಮ ಸಹಕಾರದಿಂದ ಇಂಧನ ಲಭ್ಯವಾಗಿದ್ದರಿಂದಲೇ ಭಾರತದ ಸಾಮಾನ್ಯ ಜನರು ಕಷ್ಟದಿಂದ ಪಾರಾಗಲು ಸಾಧ್ಯವಾಯಿತು ಎಂದು ಪುತಿನ್​ರಿಗೆ ಮೋದಿ ಹೇಳಿದರು.
ಭಯೋತ್ಪಾದನೆ ವಿರುದ್ಧ ಹೋರಾಟ:ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳ ಉಪಟಳ ಹೆಚ್ಚಿರುವುದರ ನಡುವೆ ವಿಷಯವನ್ನು ಪ್ರಸ್ತಾಪಿಸಿದ ಮೋದಿಯವರು, ಭಯೋತ್ಪಾದನೆ ವಿರುದ್ಧ ಜಾಗತಿಕ ಹೋರಾಟ ಅಗತ್ಯ ಎಂದೂ ಈ ಸಂದರ್ಭದಲ್ಲಿ ಪ್ರತಿಪಾದಿಸಿದರು. ಭಾರತ 40 ವರ್ಷಗಳಿಂದ ಭಯೋತ್ಪಾದನೆಯ ಸವಾಲನ್ನು ಎದುರಿಸುತ್ತಿದೆ ಎಂದ ಅವರು, ತಾವು ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸುವುದಾಗಿ ಘೋಷಿಸಿದರು.
ಶಾಂತಿಯ ಹೂವು ಅರಳದು:‘ಭಾರತ ಶಾಂತಿಯ ಪರವಾಗಿದೆ ಎಂದು ನಾನು ವಿಶ್ವ ಸಮುದಾಯಕ್ಕೆ ಭರವಸೆ ನೀಡುತ್ತೇನೆ. ಸೋಮವಾರ ನಿಮ್ಮ ಜತೆ ನಡೆಸಿದ ಮಾತುಕತೆಯಿಂದ ನನ್ನಲ್ಲಿ ಆಶಾವಾದ ಮೊಳೆತಿದೆ. ಹೊಸ ತಲೆಮಾರಿನವರಿಗೆ ಉಜ್ವಲ ಭವಿಷ್ಯಕ್ಕಾಗಿ ಶಾಂತಿ ಅತ್ಯಗತ್ಯ. ಬಾಂಬ್, ಗನ್ ಮತ್ತು ಬುಲೆಟ್​ಗಳ ನಡುವೆ ಶಾಂತಿ ಮಾತುಕತೆ ಯಶಸ್ವಿಯಾಗುವುದಿಲ್ಲ’ ಎಂದು ಮೋದಿ ಪ್ರತಿಪಾದಿಸಿದರು. ರಣಾಂಗಣದಲ್ಲಿ ಯಾವುದೇ ಸಮಸ್ಯೆ ಪರಿಹಾರವಾಗದು ಎಂದೂ ಹೇಳಿದರು. ‘ಜೀವಗಳ ನಷ್ಟವಾದರೆ ಮಾನವತೆಯಲ್ಲಿ ನಂಬಿಕೆ ಇರುವ ಯಾರಿಗೇ ಆದರೂ ನೋವಾಗುತ್ತದೆ. ಅದರಲ್ಲೂ ವಿಶೇಷವಾಗಿ, ಮುಗ್ಧ ಮಕ್ಕಳ ಕೊಲೆಯಾದರೆ, ಅವರು ಮೃತಪಟ್ಟರೆ ಅದು ಕರುಳನ್ನು ಹಿಂಡುತ್ತದೆ’ ಎಂದು ಮಕ್ಕಳ ಆಸ್ಪತ್ರೆ ಮೇಲಿನ ದಾಳಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಮೋದಿಯವರು ಮಾತೃ ಹೃದಯವವನ್ನು ಮೆರೆದರು.
ಮಾಸ್ಕೋ:‘ರಷ್ಯಾ ದೇಶ ಭಾರತದ ಸರ್ವಋತು ಮಿತ್ರ ಆಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವರ್ಣಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಕಳೆದೆರಡು ದಶಕಗಳಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವಲ್ಲಿ ನೀಡಿದ ಕೊಡುಗೆಯನ್ನು ಮೋದಿಯವರು ಮನದುಂಬಿ ಶ್ಲಾಘಿಸಿದ್ದಾರೆ.
ಭಾರತ-ರಷ್ಯಾ 22ನೇ ವಾರ್ಷಿಕ ಶೃಂಗಸಭೆಗಾಗಿ ಮೋದಿಯವರು ರಷ್ಯಾಗೆ ಆಗಮಿಸಿದ್ದಾರೆ. ಭಾರತ ಮತ್ತು ರಷ್ಯಾ ಸಂಬಂಧ ಪರಸ್ಪರ ನಂಬಿಕೆ ಮತ್ತು ಗೌರವದ ಬಲವಾದ ಸ್ತಂಭಗಳ ಮೇಲೆ ನಿರ್ವಣಗೊಂಡಿದೆ ಎಂದು ಮಂಗಳವಾರ ಇಲ್ಲಿ ಭಾರತೀಯ ಸಮುದಾಯದೊಂದಿಗಿನ ಸಭೆಯೊಂದರಲ್ಲಿ ಮಾತನಾಡಿದ ಅವರು ಹೇಳಿದರು. ಕಾಲದ ಪರೀಕ್ಷೆಯಲ್ಲಿ ಉಭಯ ದೇಶಗಳ ಬಾಂಧವ್ಯ ಗೆದ್ದಿದ್ದು ಪ್ರತಿ ಸಲವೂ ಅದು ಬಲಗೊಳ್ಳುತ್ತಲೇ ಇದೆ ಎಂದರು. ಯೂಕ್ರೇನ್ ಮೇಲಿನ ಯುದ್ಧದ ವಿಚಾರದಲ್ಲಿ ರಷ್ಯಾ ನಾಯಕನನ್ನು ಪ್ರತ್ಯೇಕಗೊಳಿಸಲು ಪಾಶ್ಚಿಮಾತ್ಯ ಜಗತ್ತು ಪ್ರಯತ್ನಿಸುತ್ತಿರುವ ಹೊತ್ತಿನಲ್ಲಿ ಮೋದಿ ಅಧ್ಯಕ್ಷ ಪುತಿನ್ ಅವರನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದು ವಿಶೇಷವಾಗಿದೆ. ಹಲವು ದಶಕಗಳಿಂದ ‘ಪ್ರಭಾವವೇ ಮುಖ್ಯವಾದ ಜಾಗತಿಕ ವ್ಯವಸ್ಥೆ’ ಚಾಲ್ತಿಯಲ್ಲಿರುವುದನ್ನು ಮೋದಿ ಪರೋಕ್ಷವಾಗಿ ಟೀಕಿಸಿದರು. ಈಗ ಜಗತ್ತಿಗೆ ಬೇಕಿರುವುದು ವಿವಿಧ ವಿಚಾರಗಳ ಸಂಗಮವೇ ಹೊರತು ಕೆಲವೇ ದೇಶಗಳ ಪ್ರಭಾವವಲ್ಲ. ವೈವಿಧ್ಯತೆಯನ್ನು ಆರಾಧಿಸುವ ಭಾರತವಲ್ಲದೆ ಇನ್ನಾರಿಗೂ ಈ ಸಂದೇಶವನ್ನು ರವಾನಿಸಲು ಸಾಧ್ಯವಿಲ್ಲ ಎಂದು ಮೋದಿ ಪ್ರತಿಪಾದಿಸಿದರು.
ಮುನ್ನೆಲೆಗೆ ಬರುತ್ತಿರುವ ಬಹುಧ್ರುವೀಯ ವಿಶ್ವ ವ್ಯವಸ್ಥೆಯಲ್ಲಿ ಭಾರತವನ್ನು ಒಂದು ಬಲಿಷ್ಠವಾದ ಆಧಾರಸ್ತಂಭ ಎಂದು ಪರಿಗಣಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಶಾಂತಿ, ಮಾತುಕತೆ ಮತ್ತು ರಾಜತಾಂತ್ರಿಕತೆ ಬಗ್ಗೆ ಭಾರತ ಮಾತನಾಡುವಾಗ ಇಡೀ ಜಗತ್ತು ಅದನ್ನು ಆಲಿಸುತ್ತದೆ ಎಂದು ನೂತನ ಜಾಗತಿಕ ವ್ಯವಸ್ಥೆಯಲ್ಲಿ ಭಾರತದ ಮಹತ್ವವನ್ನು ಅವರು ಸಾದರಪಡಿಸಿದರು. ರಷ್ಯಾ ಮತ್ತು ಯೂಕ್ರೇನ್ ನಡುವಿನ ಸಮರ ಕೊನೆಗಾಣಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ ಮುಖ್ಯ ಎಂದು ಮೋದಿಯವರು ಪದೇಪದೆ ಪ್ರತಿಪಾದಿಸುತ್ತ ಬಂದಿದ್ದಾರೆ.
ರೊಸಾಟಮ್ ಪೆವಿಲಿಯನ್​ಗೆ ಮೋದಿ ಭೇಟಿ:ಅಧ್ಯಕ್ಷ ಪುತಿನ್ ಜತೆ ಮಾಸ್ಕೋದಲ್ಲಿರುವ ರೊಸಾಟಂ ಪೆವಿಲಿಯನ್​ಗೆ ಭೇಟಿ ನೀಡಿದ ಮೋದಿಯವರು, ಭಾರತ-ರಷ್ಯಾ ನಾಗರಿಕ ಪರಮಾಣು ಇಂಧನ ಕ್ಷೇತ್ರದಲ್ಲಿನ ಸಹಕಾರ ಕುರಿತ ಫೋಟೋ ಪ್ರದರ್ಶನವನ್ನು ವೀಕ್ಷಿಸಿದರು. ಇದು ವೈಜ್ಞಾನಿಕ ಮತ್ತು ತಂತ್ರಜ್ಞಾನ ಬೆಳವಣಿಗೆಗಳ ಇತಿಹಾಸದ ಅತಿ ದೊಡ್ಡ ಪ್ರದರ್ಶನಗಳಲ್ಲಿ ಒಂದಾಗಿದೆ. ಸಪಾಶ್ಚಿಮಾತ್ಯರ ಟೀಕೆಯ ನಡುವೆಯೂ ರಷ್ಯಾದಿಂದ ತೈಲ ಖರೀದಿಸಿದ ದೊಡ್ಡ ದೇಶಗಳಲ್ಲಿ ಭಾರತ ಒಂದಾಗಿದೆ. ಇದರಿಂದ ಎರಡೂ ದೇಶಗಳಿಗೆ ಲಾಭವಾಗಿದೆ ಎಂದರು.
ಯೂಕ್ರೇನ್ ಅಧ್ಯಕ್ಷರಿಗೆ ಭಾರಿ ನಿರಾಶೆ:ಪ್ರಧಾನಿ ಮೋದಿಯವರ ರಷ್ಯಾ ಭೇಟಿಗೆ ಯೂಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್​ಸ್ಕಿ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ಸೋಮವಾರ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 37 ಜನರು ಮೃತಪಟ್ಟಿದ್ದನ್ನು ಝೆಲೆನ್​ಸ್ಕಿ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಒಂದು ಕ್ಷಿಪಣಿ ಮಕ್ಕಳ ಆಸ್ಪತ್ರೆಯೊಂದಕ್ಕೆ ಬಡಿದು ಮೂರು ಮಕ್ಕಳೂ ಸಾವಿಗೀಡಾಗಿದ್ದರು. ರಷ್ಯಾ ದಾಳಿಯಿಂದ ಶಾಲೆಗಳು ಮತ್ತು ಹೆರಿಗೆ ಆಸ್ಪತ್ರೆಗಳ ಸಹಿತ ನೂರಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಂಡಿದ್ದು ಝೆಲೆನ್​ಸ್ಕಿ ತಮ್ಮ ಪೋಸ್ಟ್​ನಲ್ಲಿ ಅವುಗಳ ಭಾವಚಿತ್ರಗಳನ್ನೂ ಜೋಡಿಸಿದ್ದಾರೆ. ರಷ್ಯಾ ಅಧ್ಯಕ್ಷ ಪುತಿನ್ ಮತ್ತು ಭಾರತದ ಪ್ರಧಾನಿ ಮೋದಿ ಪರಸ್ಪರ ಭೇಟಿಯಾಗಿ ಪರಸ್ಪರ ಆಲಿಂಗನ ಮಾಡಿಕೊಂಡ ನಂತರ ಝೆಲೆನ್​ಸ್ಕಿ ಈ ಅಸಮಾಧಾನ ಹೊರಹಾಕಿದ್ದಾರೆ.

ಭಾರತೀಯರ ಬಿಡುಗಡೆ ಸಮ್ಮತಿ:ಯೂಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆ ಪರವಾಗಿ ಹೋರಾಡುತ್ತಿರುವ ಭಾರತೀಯ ರಾಷ್ಟ್ರೀಯರನ್ನು ಬಿಡುಗಡೆ ಮಾಡಲು ರಷ್ಯಾ ಒಪ್ಪಿಕೊಂಡಿದೆ. ಮೋದಿ ಮತ್ತು ಪುತಿನ್ ಮಾತುಕತೆ ವೇಳೆ ಈ ಒಪ್ಪಂದಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ರಾತ್ರಿ ಪುತಿನ್ ಏರ್ಪಡಿಸಿದ್ದ ಖಾಸಗಿ ಭೋಜನಕೂಟದ ವೇಳೆ ಪ್ರಧಾನಿ ಮೋದಿ ಈ ವಿಷಯ ಪ್ರಸ್ತಾಪಿಸಿದ್ದರು ಎಂದು ಮೂಲಗಳು ತಿಳಿಸಿವೆ.
. ಕಾನ್ಸುಲೇಟ್:ರಷ್ಯಾದ ಕಝಾನ್ ಮತ್ತು ಯೆಕಾಟೆರಿನ್​ಬರ್ಗ್​ನಲ್ಲಿ ಭಾರತದ ಕಾನ್ಸುಲೇಟ್​ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮೋದಿ ಪ್ರಕಟಿಸಿದ್ದಾರೆ.ಗೌರವ ಸಲ್ಲಿಕೆ:ಮಾಸ್ಕೋದಲ್ಲಿರುವ ‘ಅನಾಮಿಕ ಯೋಧರ ಸ್ಮಾರಕ’ಕ್ಕೆ ಮೋದಿ ಮಂಗಳವಾರ ಗೌರವ ಸಲ್ಲಿಸಿದರು.ಪ್ರಶಸ್ತಿ ಸ್ವೀಕಾರ:ರಷ್ಯಾದ ಪ್ರತಿಷ್ಠಿತ ‘ಆರ್ಡರ್ ಆಫ್ ಸೈಂಟ್ ಆಂಡ್ರ್ಯೂ ದ ಅಪೋಸ್ಟಲ್’ ಪ್ರಶಸ್ತಿಯನ್ನು ಮಂಗಳವಾರ ಮೋದಿಯವರಿಗೆ ಪುತಿನ್ ಅಧಿಕೃತವಾಗಿ ಪ್ರದಾನ ಮಾಡಿದರು.
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್​ ಗಂಭೀರ್ ಆಯ್ಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 10 =
Remember me
