ನವದೆಹಲಿ:ಆಗ್ನೇಯ ಏಷ್ಯಾ ಮತ್ತು ಯುರೋಪ್​ನ ಕೆಲ ಭಾಗಗಳಲ್ಲಿ ಕೋವಿಡ್ ಸೋಂಕು ಮತ್ತೆ ಅಬ್ಬರಿಸುತ್ತಿದ್ದು ಕಳವಳ ಸೃಷ್ಟಿಸಿರುವುದರ ನಡುವೆ ಭಾರತದಲ್ಲಿ ಹೊಸ ಅಲೆ ಅಪ್ಪಳಿಸಿದರೂ ಗಂಭೀರ ಪರಿಣಾಮ ಬೀರದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕಡ್ಡಾಯ ಮಾಸ್ಕ್ ಧಾರಣೆ ನಿಯಮವನ್ನು ಸಡಿಲಿಸಲೂ ಕೆಲವರು ಸಲಹೆ ಮಾಡಿದ್ದಾರೆ. ನೈಸರ್ಗಿಕ ಸೋಂಕಿನ ಕಾರಣದಿಂದ ರೋಗನಿರೋಧಕತೆ (ಇಮ್ಯುನಿಟಿ) ಹೆಚ್ಚಳ ಮತ್ತು ಅಧಿಕ ಲಸಿಕೆ ನೀಡಿಕೆಯಿಂದಾಗಿ ದೇಶದಲ್ಲಿ ಮುಂದೆ ಕರೊನಾ ಅಲೆ ಅಪ್ಪಳಿಸಿದರೂ ಅದು ದೊಡ್ಡ ರೀತಿಯಲ್ಲಿ ಪರಿಣಾಮ ಬೀರದು ಎನ್ನುವುದು ತಜ್ಞರ ಅಭಿಮತವಾಗಿದೆ.
ಸೋಂಕಿನ ಹೊಸ ಪ್ರಕರಣಗಳು ಹಾಗೂ ಸಾವಿನ ಪ್ರಮಾಣ ಕ್ಷೀಣಿಸಿರುವುದರಿಂದ ಕಡ್ಡಾಯ ಮಾಸ್ಕ್ ನಿಯಮವನ್ನು ಸಡಿಲಿಸುವುದನ್ನೂ ಸರ್ಕಾರ ಪರಿಶೀಲಿಸಬಹುದು ಎನ್ನುವುದು ಅವರ ಸಲಹೆಯಾಗಿದೆ. ಸಾರ್ಸ್-ಸಿಒವಿ-2 ಆರ್​ಎನ್​ಎ ವೈರಸ್ ಆಗಿದ್ದು ರೂಪಾಂತರಗೊಳ್ಳುತ್ತಲೇ ಇರುತ್ತದೆ. ಈಗಾಗಲೇ 1,000ಕ್ಕೂ ಅಧಿಕ ರೂಪಾಂತರವಾಗಿದ್ದು ಅದರಲ್ಲಿ ಐದು ಪ್ರಭೇದಗಳು ಮಾತ್ರವೇ ಕಳವಳಕಾರಿಯಾದುದು ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್್ಸ) ಹಿರಿಯ ಸಾಂಕ್ರಾಮಿಕ ರೋಗ ತಜ್ಞ ಸಂಜಯ್ ರಾಯ್ ಹೇಳಿದ್ದಾರೆ. ಹೊಸ ತಳಿ ಹುಟ್ಟಿಕೊಂಡರೂ ಭಾರತದಲ್ಲಿ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡುವ ಸಾಧ್ಯತೆಯಿಲ್ಲ ಎಂದು ಸಾರ್ವಜನಿಕ ಆರೋಗ್ಯ ತಜ್ಞ ಚಂದ್ರಕಾಂತ ಲಹಾರಿಯಾ ಅಭಿಪ್ರಾಯ ಪಟ್ಟಿದ್ದಾರೆ.
2 ಸಾವಿರಕ್ಕಿಂತ ಕಡಿಮೆ ಕೇಸ್:ಭಾರತದಲ್ಲಿ ಕರೊನಾ ಸೋಂಕು ಕ್ಷೀಣಿಸುತ್ತಿದ್ದು ಭಾನುವಾರ 1,761 ಹೊಸ ಕೇಸ್​ಗಳು ವರದಿಯಾಗಿವೆ. ಇದು ಸುಮಾರು ಎರಡು ವರ್ಷ, ಅಂದರೆ 688 ದಿನಗಳಲ್ಲಿ ಅತ್ಯಂತ ಕಡಿಮೆ ದೈನಿಕ ಪ್ರಕರಣವಾಗಿದೆ. ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 4,30,07,841ಕ್ಕೆ ಏರಿದೆ. 127 ಜನರು ಬಲಿಯಾಗಿದ್ದು ಮೃತರ ಸಂಖ್ಯೆ 5,16,479ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ತಪ್ಪು ಮಾಹಿತಿಗೆ ಡಬ್ಲ್ಯುಎಚ್​ಒ ಕಳವಳ:ಕೋವಿಡ್ ಸಾಂಕ್ರಾಮಿಕತೆ ಬಗ್ಗೆ ಜಗತ್ತಿನಾದ್ಯಂತ ತಪ್ಪು ದಾರಿಗೆಳೆಯುವ ಮಾಹಿತಿ ಹರಿದಾಡುತ್ತಿರುವುದು ಕಳವಳದ ವಿಚಾರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಹೇಳಿದೆ. ಸಾಂಕ್ರಾಮಿಕತೆ ಅಂತ್ಯಗೊಂಡಿದೆ. ಒಮಿಕ್ರಾನ ಪ್ರಭೇದ ತುಂಬಾ ಮೃದು ಪರಿಣಾಮದ್ದು ಹಾಗೂ ಅದುವೇ ಕೊನೆಯ ರೂಪಾಂತರಿ ಎಂಬಂಥ ತಪು್ಪ ಅಭಿಪ್ರಾಯಗಳು ಹೆಚ್ಚಾಗಿ ಹರಿದಾಡುತ್ತಿವೆ. ಅದರಿಂದ ಸೋಂಕಿನ ಹೆಚ್ಚಳವಾದಾಗ ಆತಂಕ ಮೂಡುತ್ತದೆ ಎಂದು ಕರೊನಾ ಕುರಿತ ಡಬ್ಲ್ಯುಎಚ್​ಒ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥೆ ಮಾರಿಯಾ ವಾನ್ ಕೆರ್​ಖೋವ್ ಹೇಳಿದ್ದಾರೆ. ಈ ಎಲ್ಲ ತಪು್ಪ ಮಾಹಿತಿಗಳು ಗೊಂದಲ ಹುಟ್ಟಿಸಿ ಸೋಂಕು ಹೆಚ್ಚಾಗಲು ಕಾರಣವಾಗಿವೆ ಎಂದವರು ತಿಳಿಸಿದ್ದಾರೆ. ಕೋವಿಡ್ ಸೋಂಕನ್ನು ಎದುರಿಸಲು ಲಸಿಕೆ ಹಾಕಿಸಿಕೊಳ್ಳುವುದು ತುಂಬಾ ಅಗತ್ಯ ಎಂದವರು ಪ್ರತಿಪಾದಿಸಿದ್ದಾರೆ.
2ನೇ ಡೋಸ್ ಅಂತರ ಇಳಿಕೆ:ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನೀಡಿದ 8ರಿಂದ 16 ವಾರದ ನಡುವೆ ಎರಡನೇ ಡೋಸ್ ಹಾಕಬಹುದು ಎಂದು ದೇಶದ ಲಸಿಕೆ ನೀತಿ ಕುರಿತ ಅತ್ಯುನ್ನತ ಸಮಿತಿಯಾದ ಎನ್​ಟಿಎಜಿಐ ಅಭಿಪ್ರಾಯಪಟ್ಟಿದೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ. ಇದುವರೆಗೆ ಕೋವಿಶೀಲ್ಡ್ 2ನೇ ಡೋಸ್ ಅಂತರ 12ರಿಂದ 16 ವಾರ ಆಗಿತ್ತು. ಲಸಿಕೆ ಅಭಿಯಾನದಲ್ಲಿ ಬಳಕೆಯಾಗುತ್ತಿರುವ ಇನ್ನೊಂದು ವ್ಯಾಕ್ಸಿನ್ ಕೊವ್ಯಾಕ್ಸಿನ್​ನ 2ನೇ ಡೋಸ್ ಅವಧಿಯನ್ನು ಎನ್​ಟಿಎಜಿಐ ಇನ್ನೂ ಪರಿಷ್ಕರಿಸಿಲ್ಲ. ಮೊದಲ ಡೋಸ್​ನ 28 ದಿನಗಳ ನಂತರ ಕೊವ್ಯಾಕ್ಸಿನ್​ನ 2ನೇ ಡೋಸ್ ನೀಡಲಾಗುತ್ತಿದೆ.
ಗರ್ಭಿಣಿಯರಿಗೆ ಕೋವಿಡ್ ಲಸಿಕೆ ಅಗತ್ಯ:ಗರ್ಭಿಣಿಯರು ಕೋವಿಡ್ ಲಸಿಕೆ ಪಡೆಯುವುದು ಅಗತ್ಯ ಎಂದು ಬಾಣಂತಿಯರ ಆರೈಕೆ ತಜ್ಞೆ ಸ್ಟಾ್ಯಸಿ ಪಾಟ್ ಅಭಿಪ್ರಾಯ ಪಟ್ಟಿದ್ದಾರೆ. ಅವರು ಅಮೆರಿಕದ ಯುಮಾಸ್ ಚಾನ್ ಮೆಡಿಕಲ್ ಸ್ಕೂಲ್​ನ ಕೌಟುಂಬಿಕ ಔಷಧಿ ಹಾಗೂ ಸಾಮೂಹಿಕ ಆರೋಗ್ಯದ ಪ್ರೊಫೆಸರ್ ಆಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
