ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ನವೆಂಬರ್ ಮೊದಲಾರ್ಧದಲ್ಲಿ ಬಹುತೇಕವಾಗಿ ಬಿತ್ತನೆ ಮಾಡಲಾದ ಗೋಧಿ ಈಗ ತೆನೆಗಟ್ಟುವ ಹಂತದಲ್ಲಿದ್ದು, ಕಾಳುಗಳು ರೂಪುಗೊಳ್ಳಲಾರಂಭವಾಗಿದೆ. ಇನ್ನು ಉತ್ತರಪ್ರದೇಶದ ಬಹುತೇಕ ಭಾಗಗಳಲ್ಲಿ ತಡವಾಗಿ, ಅಂದರೆ ನವೆಂಬರ್ ಅಂತ್ಯದಿಂದ ಡಿಸೆಂಬರ್​ವರೆಗೆ ಬಿತ್ತಿದ ಗೋಧಿ ತೆನೆ ಕಾಣಿಸಿಕೊಳ್ಳುವ ಹಂತದಲ್ಲಿದೆ. ಗೋಧಿ ಬೆಳೆಯ ಧಾನ್ಯ ಬೆಳೆಯಲು ಮತ್ತು ಮೈದುಂಬಿಕೊಳ್ಳಲು ನಿಗದಿತ ದಿನಗಳು ಬೇಕಾಗುತ್ತವೆ. ಈ ಹಂತ 40-45 ದಿನಗಳವರೆಗೆ ಇರುತ್ತದೆ. ಈ ವೇಳೆಯಲ್ಲಿ ಹೊಲದಲ್ಲಿ ಬೆಳೆ ಹೆಚ್ಚು ಎತ್ತರವಾದಷ್ಟು ಧಾನ್ಯಗಳು ಹೆಚ್ಚು ಪಿಷ್ಟ ಮತ್ತು ಪೋ›ಟೀನ್​ಗಳಿಂದ ಸಂಪದ್ಭರಿತವಾಗುತ್ತವೆ. ಅಲ್ಲದೆ, ಹೆಚ್ಚಿನ ಇಳುವರಿ ನೀಡುತ್ತವೆ. ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಒಳಗೆ ಉಳಿಯುವವರೆಗೆ ಧಾನ್ಯದಷ್ಟಪುಷ್ಟವಾಗುವುದು ಮುಂದುವರಿಯುತ್ತದೆ. ಮಾರ್ಚ್ ಅಂತ್ಯದ ಮೊದಲು ತಾಪಮಾನವು ಗರಿಷ್ಠ 37 ಡಿಗ್ರಿ ದಾಟಬಾರದು. ಇದಕ್ಕಿಂತ ಹೆಚ್ಚಾದಲ್ಲಿ ಇಳುವರಿ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕಳೆದ ವರ್ಷ ಗರಿಷ್ಠ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ಮಿತಿಯನ್ನು ಮಾರ್ಚ್ ಮಧ್ಯದ ವೇಳೆಗೆ ಉತ್ತರದ ಬಯಲು ಪ್ರದೇಶದಲ್ಲಿ ದಾಟಿತ್ತು. ಅಲ್ಲದೆ, ಮಾರ್ಚ್ ತಿಂಗಳ ಅಂತ್ಯದಲ್ಲಿ 40 ಡಿಗ್ರಿ ಸೆಲ್ಸಿಯಸ್ ಮೀರಿತ್ತು. ಹಾಲು ತುಂಬಿ ತೆನೆಯಾಗುವ ಬೆಳವಣಿಗೆಯ ಹಂತದಲ್ಲಿ ತಾಪಮಾನ ಏರಿಕೆ ಇಳುವರಿ ಮೇಲೆ ಪರಿಣಾಮ ಬೀರುತ್ತದೆ.
ದೇಶದ ಗೋಧಿ ಉತ್ಪಾದನೆ ಕಳೆದ ಆರ್ಥಿಕ ವರ್ಷದಲ್ಲಿ ಅಲ್ಪ ಕುಸಿತ ದಾಖಲಿಸಿತು. 2020-21ರಲ್ಲಿ 10.959 ಕೋಟಿ ಟನ್​ಗಳಿಂದ 2021-22 ರಲ್ಲಿ 10.774 ಕೋಟಿ ಟನ್​ಗಳಿಗೆ ಇಳಿಮುಖವಾಗಿದೆ. ಮಾರುಕಟ್ಟೆಯ ಅಂದಾಜಿನ ಪ್ರಕಾರ 2021-22ರಲ್ಲಿ ಗೋಧಿ ಉತ್ಪಾದನೆ ಕೇವಲ 9.5-10 ಕೋಟಿ ಟನ್ ಆಗಿದೆ. ಇನ್ನು ಸರ್ಕಾರದ ಸ್ವಂತ ಗೋಧಿ ಸಂಗ್ರಹಣೆಯು ಹಿಂದಿನ ವರ್ಷದ 4.334 ಕೋಟಿ ಟನ್​ಗಳಿಂದ ಈಗ 1.879 ಕೋಟಿ ಟನ್​ಗಳಿಗೆ ಕುಸಿದಿದೆ. ಅಲ್ಲದೆ, ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದ ನಂತರವೂ ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಗಗನಮುಖಿಯಾಗಿದೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿದ್ದರೆ, ಈ ವರ್ಷ ಫೆಬ್ರವರಿಯಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು. ಹೀಗಾಗಿ, ಈ ಬಾರಿಯೂ ಗೋಧಿ ಬೆಳೆ ಬಗ್ಗೆ ಸ್ವಲ್ಪ ಮಟ್ಟಿನ ಆತಂಕ ಉಂಟಾಗಿದೆ. ಆದರೂ, ಮಾರ್ಚ್​ನಲ್ಲಿ ಇಲ್ಲಿಯವರೆಗೆ ಗರಿಷ್ಠ ತಾಪಮಾನ 30-33 ನಡುವೆ ಇದ್ದು, ಬೆಳೆ ಚೆನ್ನಾಗಿ ಬರಬಹುದು ಎಂದು ತಜ್ಞರು ಹೇಳುತ್ತಾರೆ.
ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಆಹಾರ ಬೆಲೆ ಸೂಚ್ಯಂಕವು 2022ರ ಮಾರ್ಚ್​ನಲ್ಲಿ 159.7 ಅಂಕಗಳೊಂದಿಗೆ ಐತಿಹಾಸಿಕ ಗರಿಷ್ಠ ಮಟ್ಟ ಮುಟ್ಟಿತ್ತು. ಇದು ರಷ್ಯಾ- ಯೂಕ್ರೇನ್ ಯುದ್ಧಾರಂಭ ನಂತರದ ತಿಂಗಳಾಗಿತ್ತು. ಅಲ್ಲಿಂದೀಚೆಗೆ ಪ್ರತಿ ತಿಂಗಳು ಈ ಸೂಚ್ಯಂಕ ಕುಸಿಯುತ್ತ ಬಂದಿದ್ದು, 2023ರ ಫೆಬ್ರವರಿಯಲ್ಲಿ 129.8 ಅಂಕಗಳನ್ನು ಮುಟ್ಟಿದೆ. ಜಾಗತಿಕ ಆಹಾರ ಧಾನ್ಯಗಳ ಬೆಲೆಗಳು ಗಗನಮುಖಿಯಾದ ಸಮಯದಲ್ಲಿಯೇ 2021-22ರಲ್ಲಿ ಭಾರತದಲ್ಲಿ ಗೋಧಿ ಬೆಳೆ ವೈಫಲ್ಯ ಕಂಡಿತ್ತು. ಮಾರ್ಚ್​ನಲ್ಲಿ ಶಾಖದ ಅಲೆಗಳು, ಫೆಬ್ರುವರಿ ತಿಂಗಳಲ್ಲಿ ಅಧಿಕ ಮಳೆ ಮತ್ತು ಯುದ್ಧದ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಪೂರೈಕೆ ಅಡಚಣೆಯು ಬೆಲೆ ಏರಿಕೆಗೆ ಕಾರಣವಾದವು.
ಷಿಕಾಗೋ ಬೋರ್ಡ್ ಆಫ್ ಟ್ರೇಡ್ ಫ್ಯೂಚರ್ಸ್ ಎಕ್ಸ್​ಚೇಂಜ್​ನಲ್ಲಿ ಗೋಧಿ ಬೆಲೆ ಕಳೆದ ವರ್ಷದ ಮಾರ್ಚ್​ನಲ್ಲಿ ಪ್ರತಿ ಬುಶೆಲ್​ಗೆ (ಒಂದು ಬುಶೆಲ್ ಎಂದರೆ 27.216 ಕೆಜಿ) ದಾಖಲೆ ಮಟ್ಟವಾದ 13.64 ಡಾಲರ್​ಗೆ ಏರಿತ್ತು. ಈಗ ದರ ಅರ್ಧದಷ್ಟು ತಗ್ಗಿದ್ದು, ಪ್ರತಿ ಬುಶೆಲ್​ಗೆ 6.79 ಡಾಲರ್ ಆಗಿದೆ. ಭಾರತೀಯ ರೂಪಾಯಿಗಳಲ್ಲಿ ಒಂದು ಕ್ವಿಂಟಲ್​ಗೆ ಅಂದಾಜು 2125 ರೂಪಾಯಿ. ಹೊಸ ಗೋಧಿ ಬೆಳೆಗೆ ಭಾರತ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ 2,125 ರೂಪಾಯಿಗಿಂತಲೂ ಇದು ಕಡಿಮೆ.
ಗೋಧಿಯಂತೆಯೇ, ಮಲೇಷ್ಯಾದಲ್ಲಿ ತಾಳೆ ಎಣ್ಣೆಯ ಬೆಲೆಗಳು 2022ರ ಮಾರ್ಚ್​ನಲ್ಲಿ ದಾಖಲೆಯ ದರವಾದ ಪ್ರತಿ ಟನ್​ಗೆ 7,268 ರಿಂಗ್​ಗಿಟ್ (1,34,076 ರೂಪಾಯಿ) ತಲುಪಿದ್ದವು. ಈಗ ದರವು ಕೇವಲ 4,000 ರಿಂಗ್​ಗಿಟ್​ಗೆ (73789 ರೂಪಾಯಿ) ಕುಸಿದಿದೆ. ಮುಂದಿನ ದಿನಗಳಲ್ಲಿ ಇಂಡೋನೇಷ್ಯಾದಿಂದ ತಾಳೆ ಎಣ್ಣೆ, ಬ್ರೆಜಿಲ್​ನಿಂದ ಸೋಯಾಬೀನ್, ರಷ್ಯಾದಿಂದ ಸೂರ್ಯಕಾಂತಿಯ ದಾಖಲೆ ಉತ್ಪಾದನೆ ಮತ್ತು ರಫ್ತುಗಳನ್ನು ನಿರೀಕ್ಷಿಸಲಾಗಿದೆ. ಇದಲ್ಲದೆ, ಕೆನಡಾ ಮತ್ತು ಐರೋಪ್ಯ ಒಕ್ಕೂಟದಿಂದ ಹೆಚ್ಚಿನ ಪ್ರಮಾಣದ ಸಾಸಿವೆ ಪೂರೈಕೆಯನ್ನು ಅಂದಾಜಿಸಲಾಗಿದೆ. ಇದು ಅರ್ಜೆಂಟೀನಾ ಮತ್ತು ಅಮೆರಿಕದಿಂದ ಸೋಯಾಬೀನ್ ಹಾಗೂ ಯೂಕ್ರೇನ್​ನಿಂದ ಸೂರ್ಯಕಾಂತಿ ಉತ್ಪಾದನೆ ಕೊರತೆಯನ್ನು ಸರಿದೂಗಿಸಲಿವೆ.
ಜಾಗತಿಕವಾಗಿ ಆಹಾರ ಪೂರೈಕೆಯಲ್ಲಿ ಪ್ರಗತಿಯಾಗಿರುವುದು ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ. ಸಾಸಿವೆಯ ಉದಾಹರಣೆಯನ್ನೇ ಗಮನಿಸೋಣ. ಇದರ ಬೆಲೆ ಹೆಚ್ಚಿನ ಮಂಡಿಗಳಲ್ಲಿ ಕ್ವಿಂಟಾಲ್​ಗೆ 4,800 ರಿಂದ 5,000 ರೂಪಾಯಿ ಇದೆ. ಸರ್ಕಾರ ನಿಗದಿಪಡಿಸಿದ ಬೆಂಬಲಬೆಲೆ 5,450 ರೂಪಾಯಿ ಇದೆ. ಎಣ್ಣೆ ಬೀಜವಾದ ಸಾಸಿವೆಯು ಕಳೆದ ವರ್ಷದಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟವಾಗಿದೆ. ಆದರೀಗ, ಸಾಸಿವೆ ಮತ್ತು ಗೋಧಿಯ ದೇಶೀಯ ಉತ್ಪಾದನೆಗೆ ಹೊಡೆತ ಬಿದ್ದರೂ ಆಹಾರ ಹಣದುಬ್ಬರದ ಪರಿಣಾಮಗಳು ಕಳೆದ ವರ್ಷದಷ್ಟು ಕೆಟ್ಟದ್ದಾಗಿರುವುದಿಲ್ಲ. ಏಕೆಂದರೆ, ಪ್ರಪಂಚವು ಮೊದಲಿಗಿಂತ ಹೆಚ್ಚು ಧಾನ್ಯ ಮತ್ತು ಎಣ್ಣೆಯನ್ನು ಹೊಂದಿದೆ. ಹೀಗಾಗಿ, ಬೆಲೆಗಳು ನಿಯಂತ್ರಣದಲ್ಲಿರಲಿವೆ.
ಅಮೆರಿಕದ ಕೃಷಿ ಇಲಾಖೆಯು 2023ರ ಜೂನ್​ಗೆ ಕೊನೆಗೊಳ್ಳುವ ಮಾರುಕಟ್ಟೆ ವರ್ಷದಲ್ಲಿ ರಷ್ಯಾ (43.5 ದಶಲಕ್ಷ ಟನ್), ಆಸ್ಟ್ರೇಲಿಯಾ (30 ದಶಲಕ್ಷ ಟನ್) ಮತ್ತು ಕಝಾಕಿಸ್ತಾನ್ (10.5 ದಶಲಕ್ಷ ಟನ್) ರಾಷ್ಟ್ರಗಳಿಂದ ಗೋಧಿ ರಫ್ತು ಸಾರ್ವಕಾಲಿಕವಾಗಿ ಅಧಿಕವಾಗಿರಲಿದೆ ಎಂದು ಅಂದಾಜಿಸಿದೆ. ಯುದ್ಧದಿಂದ ಹಾನಿಗೊಳಗಾದ ಯೂಕ್ರೇನ್ (18.8 ದಶಲಕ್ಷದಿಂದ 13.5 ದಶಲಕ್ಷ ಟನ್​ಗೆ) ಮತ್ತು ಬರಪೀಡಿತ ಅರ್ಜೆಂಟೀನಾದಿಂದ (17.7 ದಶಲಕ್ಷದಿಂದ 6.5 ದಶಲಕ್ಷ ಟನ್​ಗೆ) ಗೋಧಿ ಪೂರೈಕೆ ಕಡಿಮೆಯಾಗಲಿದೆ. ಆದರೆ, ಕೆನಡಾದಿಂದ (15 ದಶಲಕ್ಷದಿಂದ 25 ದಶಲಕ್ಷ ಟನ್) ಗೋಧಿ ರಫ್ತು ಹೆಚ್ಚಳವಾಗಲಿದ್ದು ಈ ಕೊರತೆಯನ್ನು ಸರಿದೂಗಿಸಲಿದೆ. ಆಹಾರಕ್ಕೆ ಸಂಬಂಧಿಸಿದಂತೆ ಯೂಕ್ರೇನ್ ಯುದ್ಧದ ಪರಿಣಾಮಗಳನ್ನು ಜಗತ್ತು ದಾಟಿದೆ ಎನ್ನಬಹುದು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 7 =
Remember me
