ಭೋಪಾಲ್​:ಆತ ಶಾಲೆಯ ಓದನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದ. ಧನಿಕರ ಮನೆಯನ್ನು ಲೂಟಿ ಹೊಡೆಯುವುದನ್ನೇ ಕಾಯಕ ಮಾಡಿಕೊಂಡಿದ್ದ. ಲೂಟಿ ಹೊಡೆದ ಚಿನ್ನಾಭರಣವನ್ನು ಮಾರಿ ಹಣ ಪಡೆದುಕೊಳ್ಳುತ್ತಿದ್ದ. ಆದರೆ, ಆ ಹಣವನ್ನು ಎಂದೂ ಐಷಾರಾಮಿಯಾಗಿ ಖರ್ಚು ಮಾಡುತ್ತಿರಲಿಲ್ಲ. ಬದಲಿಗೆ ತನ್ನ ವೈಯಕ್ತಿಕ ಖರ್ಚುವೆಚ್ಚಗಳು, ಕುಟುಂಬದ ಸದಸ್ಯರ ಅಗತ್ಯಗಳಿಗೆ ಮತ್ತು ಮನೆ, ವಾಹನ ಮತ್ತಿತರ ಆಸ್ತಿಗಳ ಖರೀದಿಗೆ ಬಳಸುತ್ತಿದ್ದ.
ಗುತ್ತಿಗೆದಾರನ ಸೋಗಿನಲ್ಲಿ ನಿಯಮಿತವಾಗಿ ಆದಾಯ ತೆರಿಗೆಯನ್ನೂ ಪಾವತಿಸುತ್ತಾ, ಯಾರಿಗೂ ಅನುಮಾನ ಬಾರದಂತೆ ಬದುಕುತ್ತಿದ್ದ. ಸ್ವಂತ ಮನೆಗಳನ್ನು ಮಾಡಿಕೊಂಡಿದ್ದರೂ ಆತ ಬಾಡಿಗೆ ಮನೆಯಲ್ಲಿ ಇರುತ್ತಿದ್ದ. ಯಾವುದೇ ಮನೆಯಲ್ಲಿ ಕೂಡ ನಾಲ್ಕೈದು ತಿಂಗಳಿಗಿಂತ ಹೆಚ್ಚು ಇರುತ್ತಿರಲಿಲ್ಲ. ಹೀಗೆ ಆತ 10 ವರ್ಷ ಪೊಲೀಸರ ಕಣ್ಣಿಗೆ ಮಣ್ಣೆರಚಿ ಕಳ್ಳತನ ಕಾಯಕ ಮಾಡುತ್ತಲೇ ಇದ್ದ.
ಆದರೆ ಜೂನ್​ 5ರಂದು ಆತನ ಅದೃಷ್ಟ ಕೈಕೊಟ್ಟಿತ್ತು. ಮೊದಲ ಬಾರಿಗೆ ಕಳುವಿನ ಮಾಲಿನ ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದು, ಇದೀಗ ಜೈಲುಪಾಲಾಗಿದ್ದಾನೆ.
ಇದು ಮಧ್ಯಪ್ರದೇಶದ ಸಾಗರ ಜಿಲ್ಲೆಯ ನಿವಾಸಿ ಸೋನು ವಿಶ್ವಕರ್ಮ ಅಲಿಯಾಸ್​ ಗೋಲುವಿನ (26) ಕತೆ. ಈತ ಇಂದೋರ್​ನಲ್ಲಿ ಲಸೌಡಿಯಾ ಬಡಾವಣೆಯಲ್ಲಿ ಫ್ಲ್ಯಾಟ್​ ಅನ್ನು ಹೊಂದಿದ್ದಾನೆ. ಇಲ್ಲಿ ತನ್ನ ಕುಟುಂಬದವರನ್ನು ಇರಿಸಿದ್ದಾನೆ. ಭೋಪಾಲ್​ನಲ್ಲಿ ಹೊಸದಾಗಿ ಐಷಾರಾಮಿ ಮನೆ ನಿರ್ಮಿಸಲು ಸಿದ್ಧತೆ ನಡೆಸಿದ್ದ.
ಇದನ್ನೂ ಓದಿ:ಭಾರತೀಯರೇ, ನನ್ನ ಪೇಜ್​ ಬಿಟ್ಟು ತೊಲಗಿ, ಇಲ್ಲವೇ ಕಾನೂನು ಕ್ರಮ ಎದುರಿಸಿ…!
ಒಂದು ಕಾರು, ಹಲವು ಬೈಕ್​ಗಳು, ಎರಡು ವಿಶಾಲ ಪರದೆಯ ಟಿವಿಗಳು, ವ್ಯಾಯಾಮದ ಉಪಕರಣಗಳು, ಅಪಾರ ಪ್ರಮಾಣದ ಚಿನ್ನಾಭರಣ ಇತ್ಯಾದಿಗಳು ಈತನ ಬಳಿ ಇವೆ. ಈತನ ಒಟ್ಟು ಮೌಲ್ಯ 40 ಲಕ್ಷ ರೂ.ಗೂ ಅಧಿಕವಾಗಿದೆ. ಈತ ಪಾನ್​ಕಾರ್ಡ್​ ಹೊಂದಿದ್ದು, ಹಲವು ಜೀವವಿಮಾ ಯೋಜನೆಗಳಲ್ಲಿ ಹಣ ತೊಡಗಿಸಿದ್ದಾನೆ. ವಿವಿಧ ಬ್ಯಾಂಕ್​ಗಳಲ್ಲಿ ಉಳಿತಾಯ ಖಾತೆಗಳನ್ನೂ ಹೊಂದಿದ್ದಾನೆ. ಸ್ಥಿರಠೇವಣಿಗಳಲ್ಲಿ ಹಣ ತೊಡಗಿಸಿದ್ದಾನೆ. 2020ರ ಜನವರಿಯಲ್ಲಿ ಈತನ ಒಂದು ಬ್ಯಾಂಕ್​ ಖಾತೆಯಲ್ಲಿ 5 ಲಕ್ಷ ರೂ. ಜಮೆ ಇತ್ತು ಎಂದು ಭೋಪಾಲ್​ನ ಎಸ್​ಪಿ ಸಾಯಿ ಕೃಷ್ಣ ತೋಟಾ ತಿಳಿಸಿದ್ದಾರೆ.
ಈತ ಇದುವರೆಗೂ ಸಾಗರದಲ್ಲಿ 7, ಇಂದೋರ್​ನಲ್ಲಿ ನಾಲ್ಕು ಮತ್ತು ಭೋಪಾಲ್​ನಲ್ಲಿ ಆರು ಕಳ್ಳತನ ಸೇರಿ ಒಟ್ಟು 18 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಹೇಳುತ್ತಿದ್ದಾನೆ. ಆದರೆ, ಈತ ಇನ್ನೂ ಹಲವು ಕಳ್ಳತನಗಳನ್ನು ಮಾಡಿರುವ ಶಂಕೆ ಇದ್ದು, ಈ ಬಗ್ಗೆ ವಿಚಾರಣೆ ಮುಂದುವರಿದಿದೆ ಎಂದು ಹೇಳಿದ್ದಾರೆ.
ಈತ ಕದ್ದ ಹಣವನ್ನು ಎಂದೂ ಐಷಾರಾಮಿ ಜೀವನಕ್ಕೆ ವೆಚ್ಚ ಮಾಡಲಿಲ್ಲ. ಕದ್ದ ಆಭರಣಗಳನ್ನು ಮಾರಿ ಬಂದ ಹಣ ಹಾಗೂ ಲೂಟಿ ಹೊಡೆದ ನಗದನ್ನು ತನ್ನ ವೈಯಕ್ತಿಕ ಮತ್ತು ಕುಟುಂಬದ ಖರ್ಚುವೆಚ್ಚಗಳಿಗಾಗಿ ತುಂಬಾ ಹಿಡಿತದಿಂದ ಖರ್ಚು ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
ತುಂಬಾ ಸ್ಮಾರ್ಟ್​:ನಾನು ಹಲವು ಕಳ್ಳರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದ್ದೇನೆ. ಆದರೆ, ಈತನಷ್ಟು ಚಾಣಾಕ್ಷ, ಸೂಕ್ಷ್ಮಮತಿಯಾದ ಕಳ್ಳನನ್ನು ಎಲ್ಲಿಯೂ ನೋಡಿಲ್ಲ. 10 ವರ್ಷಗಳಲ್ಲಿ ಈತ ಹಲವು ಬಾರಿ ಸಿಕ್ಕಿಬಿದ್ದಿದ್ದ. ಆದರೆ, ವಿಚಾರಣೆ ವೇಳೆ ಸುಳ್ಳು ಕಥೆಗಳನ್ನು ಕಟ್ಟಿ, ತಾನು ಕಳ್ಳತನ ಮಾಡಿಲ್ಲ. ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡು ತಪ್ಪಿಸಿಕೊಳ್ಳುತ್ತಿದ್ದ. ಆದರೆ, ಈ ಬಾರಿ ಆತ ಕಳವಿನ ಮಾಲಿನ ಸಮೇತ ಸಿಕ್ಕಿಬಿದ್ದಿದ್ದಾನೆ ಎಂದು ಆತನನ್ನು ವಿಚಾರಣೆಗೆ ಒಳಪಡಿಸಿದ್ದ ಪೊಲೀಸ್​ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ:ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಭೋಪಾಲ್​ನ ಗೋವಿಂದಪುರ ಬಡಾವಣೆಯ ಬಿಜಲಿ ನಗರ ಕಾಲನಿಯಲ್ಲಿರುವ ಕೈಗಾರಿಕೋದ್ಯಮಿಯೊಬ್ಬರ ಮನೆಗೆ ಗೋಲು ಜೂ.5ರಂದು ಕನ್ನ ಹಾಕಿದ್ದ. ನಗದು ಮತ್ತು ಚಿನ್ನಾಭರಣ ಸೇರಿ 10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಅಶೋಕ ಗಾರ್ಡನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರು ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿದ್ದ ದೃಶ್ಯಗಳನ್ನು ಪರಿಶೀಲಿಸಿ, ಗೋಲುವಿನ ಬೆನ್ನು ಬಿದ್ದಿದ್ದರು. ಈತ ಶಾಂತಿ ಹೋಮ್ಸ್​ ಕಾಲನಿಯಲ್ಲಿ ಬಾಡಿಗೆ ಫ್ಲ್ಯಾಟ್​ನಲ್ಲಿ ವಾಸವಾಗಿದ್ದನ್ನು ಪತ್ತೆ ಹಚ್ಚಿದ್ದರು. ಈತ ಕಳ್ಳತನ ಮಾಡಿದ್ದ ಕೈಗಾರಿಕೋದ್ಯಮಿ ಮನೆಯಿಂದ ಆತನ ಫ್ಲ್ಯಾಟ್​ 10 ಕಿ.ಮೀ. ದೂರದಲ್ಲಿತ್ತು.
ಆ ಮನೆ ಮೇಲೆ ದಾಳಿ ಮಾಡಿದಾಗ ಏರ್​ಕೂಲರ್​ನಲ್ಲಿ ಬಚ್ಚಿಟ್ಟಿದ್ದ 4.30 ಲಕ್ಷ ರೂ. ನಗದು ಮತ್ತು ಚಿನ್ನಾಭರಣಗಳು ಸಿಕ್ಕವು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಕಳುವಾಗಿದೆ ಎಂದು ದೂರು: 2019ರ ಮೇನಲ್ಲಿ ಅಪಾರ ಪ್ರಮಾಣದ ಮದ್ಯದ ಬಾಟಲಿಗಳನ್ನು ಈತ ತನ್ನ ಕಾರಿನಲ್ಲಿ ಸಾಗಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಈ ಪ್ರಕರಣದಲ್ಲಿ ಆತನನ್ನು ವಶಕ್ಕೆ ಪಡೆದುಕೊಳ್ಳುವ ಸಂದರ್ಭದಲ್ಲಿ ಪೇದೆಯೊಬ್ಬರ ಕೈಗೆ ಕಚ್ಚಿ ಪರಾರಿಯಾಗಿದ್ದ.ಮರುದಿನ ಬೇರೊಂದು ಪೊಲೀಸ್​ ಠಾಣೆಗೆ ತೆರಳಿದ ಆತ ತನ್ನ ಕಾರು ಕಳುವಾಗಿರುವುದಾಗಿ ದೂರು ಕೊಟ್ಟು, ವಿಮೆ ಹಣವನ್ನು ಪಡೆದುಕೊಳ್ಳಲು ಯತ್ನಿಸಿದ್ದ ಎಂದು ಭೋಪಾಲ್​ ಎಸ್​ಪಿ ತಿಳಿಸಿದ್ದಾರೆ.
ಈ ಕಾರನ್ನು ಆತ ಸಮಾನ ಮಾಸಿಕ ಕಂತಿನ (ಇಎಂಐ) ಮೇಲೆ ಖರೀದಿಸಿದ್ದ. ಈ ರೀತಿ ಆತ ಕಳ್ಳತನದ ಹಣದಿಂದ ಕಾರನ್ನು ಖರೀದಿಸಿದ್ದಾನೆ ಎಂಬ ಅನುಮಾನ ಯಾರಿಗೂ ಬರದಂತೆ ಎಚ್ಚರಿಕೆ ವಹಿಸಿದ್ದ ಎಂದು ಹೇಳಿದ್ದಾರೆ.
ಚೀನಿಯರದ್ದು ಯೋಜಿತ ದಾಳಿ; ಕರ್ನಲ್ ಸಂತೋಷ್​​ ಬಾಬು ಅವರ ಮರಣೋತ್ತರ ಪರೀಕ್ಷೆಯಲ್ಲಿ ದೃಢ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
