|ಬೆಂಕಿ ಬಸಣ್ಣನ್ಯೂಯಾರ್ಕ್
ಅಮೆರಿಕದಲ್ಲಿ ಕರೊನಾ ಮಹಾಮಾರಿಯ ನಾಲ್ಕನೇ ಅಲೆ ಹೊಸ ರೂಪಾಂತರಿ ಡೆಲ್ಟಾ ವೈರಸ್ಸಿನ ರೂಪದಲ್ಲಿ ದಾಳಿಯಿಟ್ಟಿದೆ. ಪ್ರತಿದಿನ ಸರಾಸರಿ 1.50 ಲಕ್ಷ ಹೊಸ ಪ್ರಕರಣಗಳು ಮತ್ತು 600ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಮಿಸಿಸಿಪ್ಪಿಯಂತಹ ಕೆಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗದೇ ರ್ಪಾಂಗ್ ಲಾಟ್​ಗಳಲ್ಲಿ ಕೋವಿಡ್ ಆರೈಕೆಯ ತಾತ್ಕಾಲಿಕ ಕ್ಯಾಂಪುಗಳನ್ನು ಪ್ರಾರಂಭಿಸಲಾಗಿದೆ. ಕರೊನಾ ಮಹಾಮಾರಿಯ ಮೂರು ಅಲೆಗಳಿಂದ ಪ್ರಪಂಚದಲ್ಲಿಯೇ ಹೆಚ್ಚು ಸಾವುನೋವು ಅನುಭವಿಸಿದ ದೇಶ ಅಮೆರಿಕವಾಗಿದ್ದು, ಈವರೆಗೆ 3.75 ಕೋಟಿ ಜನರು ಸೋಂಕಿಗೊಳಗಾಗಿ, 6.37 ಲಕ್ಷ ಜನರು ಮೃತಪಟ್ಟಿದ್ದಾರೆ.
ಡೆಲ್ಟಾ ವೈರಸ್ ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಕ್ಯಾಲಿಫೋರ್ನಿಯಾ ರಾಜ್ಯದ ಗವರ್ನರ್, ಶಾಲೆಯ ಶಿಕ್ಷಕರು ಸೇರಿ ಎಲ್ಲ ಸಿಬ್ಬಂದಿಗೆ ಲಸಿಕೆಯನ್ನು ಕಡ್ಡಾಯ ಮಾಡಿದ್ದಾರೆ. ಇಲ್ಲವಾದರೆ ಪ್ರತಿ ವಾರ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಆದೇಶ ಹೊರಡಿಸಿದ್ದಾರೆ. ಬೇಸಿಗೆ ರಜೆ ಮುಗಿಯುತ್ತ ಬಂದಿದ್ದು, ಶಾಲೆಗಳು ಸದ್ಯದಲ್ಲೇ ಆರಂಭವಾಗಲಿವೆ. ಶಾಲಾ ಮಕ್ಕಳಿಗೆ ಮಾಸ್ಕನ್ನು ಕಡ್ಡಾಯ ಮಾಡಬೇಕೋ ಬೇಡವೋ ಎಂಬ ವಿಷಯವಾಗಿ ಗೊಂದಲ ಶುರುವಾಗಿದೆ. ಕೆಲವು ರಾಜ್ಯಗಳಲ್ಲಿ ಈ ನಿರ್ಧಾರವನ್ನು ಆಯಾ ಶಾಲೆಯ ಆಡಳಿತ ಮಂಡಳಿಗೆ ಬಿಟ್ಟಿದ್ದಾರೆ. ಇತ್ತೀಚೆಗೆ ರಿಪಬ್ಲಿಕನ್ ಆಡಳಿತವಿರುವ ಏಳು ರಾಜ್ಯಗಳ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಆದೇಶವನ್ನು ವಾಪಸ್ ಪಡೆದಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಬೂಸ್ಟರ್ ಲಸಿಕೆ:ಅಮೆರಿಕದಲ್ಲಿ ಈವರೆಗೆ ಶೇಕಡ 50 ಜನರು ಮಾತ್ರ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಗರ್ಭಿಣಿಯರಿಗೆ ಲಸಿಕೆ ಪಡೆಯಲು ಅನುಮತಿ ಕೊಡಲಾಗಿದೆ. ಸದ್ಯದಲ್ಲಿಯೇ ಫೈಜರ್ ಮತ್ತು ಮಾಡರ್ನಾ ಕಂಪನಿಗಳ ಮೂರನೇ ಡೋಜ್ ಬೂಸ್ಟರ್ ಲಸಿಕೆಗೆ ಅನುಮತಿ ಸಿಗುವ ಲಕ್ಷಣ ಕಾಣುತ್ತಿವೆ. ಈಗಾಗಲೇ ಇಸ್ರೇಲ್, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಬೂಸ್ಟರ್ ಲಸಿಕೆಗೆ ಅನುಮತಿ ಕೊಟ್ಟಿವೆ.
|ಸುಬ್ರಹ್ಮಣ್ಯ ಹೆಬ್ಬಾಗಿಲುಕತಾರ್
ಪ್ರಾರಂಭದಿಂದಲೂ ಕರೊನಾ ಸ್ಥಿತಿಯನ್ನು ಕ್ರಮಬದ್ಧವಾಗಿ ನಿಭಾಯಿಸುತ್ತಿರುವ ಅರಬ್ ದೇಶ ಕತಾರ್​ನಲ್ಲಿ ಶೇಕಡ 90 ನಾಗರಿಕರು ಲಸಿಕೆ ಪಡೆದಿದ್ದು, ಸರ್ಕಾರ ಕರೊನಾ ನಿಯಮಾವಳಿಗಳನ್ನು ಸಡಿಲಿಸಿದೆ. ಪ್ರತಿದಿನ 20-21 ಸಾವಿರ ಕರೊನಾ ಟೆಸ್ಟ್ ನಡೆಸಲಾಗುತ್ತಿದೆ. 150-200 ಸೋಂಕಿತರು ಪ್ರತಿದಿನ ಪತ್ತೆಯಾಗುತ್ತಿದ್ದು, 100-150 ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಇಲ್ಲಿವರೆಗೆ 601 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈಗ ಪ್ರತಿದಿನದ ಸಾವಿನ ಸಂಖ್ಯೆ ಬಹುತೇಕ ಶೂನ್ಯಕ್ಕೆ ಬಂದು ನಿಂತಿದೆ. ಹೊರದೇಶದಿಂದ ಆಗಮಿಸುವವರಿಗೆ 72 ಗಂಟೆಯೊಳಗಿನ ಕೋವಿಡ್ ಪರೀಕ್ಷಾ ಪ್ರಮಾಣಪತ್ರ ಕಡ್ಡಾಯ ಮಾಡಲಾಗಿದೆ. ಆಗಮಿಸಿದ ನಂತರ ಮತ್ತೆ ಪರೀಕ್ಷೆ ಮಾಡಲಾಗುತ್ತಿದೆ. ಕತಾರ್​ನಿಂದ ಬೇರೆ ದೇಶಗಳಿಗೆ ತೆರಳುವವರೂ 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ.
ಭಾರತದ ‘ಆರೋಗ್ಯ ಮಿತ್ರ’ ಆಪ್ ರೀತಿಯಲ್ಲಿ ‘ಎಹತರಾಜ್’ ಆಪ್ ರೂಪಿಸಲಾಗಿದ್ದು, ಮೊಬೈಲ್​ನಲ್ಲಿ ಇನ್​ಸ್ಟಾಲ್ ಮಾಡಿಕೊಳ್ಳುವುದು ಕಡ್ಡಾಯ. ಮಾಸ್ಕ್ ಧರಿಸದ 357, ವೈಯಕ್ತಿಕ ಅಂತರ ಪಾಲಿಸದ 11 ಹಾಗೂ ಎಹತರಾಜ್ ಆಪ್ ಡೌನ್​ಲೋಡ್ ಮಾಡಿಕೊಳ್ಳದ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಸೀದಿಗಳು ಎಲ್ಲ ವಯೋಮಾನದವರಿಗೂ ಮುಕ್ತವಾಗಿದ್ದು, ಮಕ್ಕಳಿಗಿದ್ದ ನಿರ್ಬಂಧ ತೆರವು ಮಾಡಲಾಗಿದೆ. ಒಟ್ಟಾರೆ ಕತಾರ್​ನಲ್ಲಿ ಕೋವಿಡ್ ಬಹುತೇಕ ನಿಯಂತ್ರಣದಲ್ಲಿದ್ದು, ಜನಜೀವನ ವೇಗವಾಗಿ ಸಹಜತೆಯತ್ತ ಸಾಗುತ್ತಿದೆ. ಪಾರ್ಕ್, ಬೀಚ್ ಮುಂತಾದೆಡೆ ಜನಸಂದಣಿಯ ಅವಕಾಶವನ್ನು 15ರಿಂದ 20ಕ್ಕೆ ಹೆಚ್ಚಿಸಲಾಗಿದೆ, ಬೋಟ್​ಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯನ್ನು 20ರಿಂದ 25ಕ್ಕೆ ಹೆಚ್ಚಿಸಲಾಗಿದೆ ಹಾಗೂ ಲಸಿಕೆ ಪಡೆದವರಿಗೆ ಸಂಘಟಿತ ಕ್ರೀಡಾ ತರಬೇತಿ ಪಡೆಯುವವರ ಸಂಖ್ಯೆಯನ್ನು 30ರಿಂದ 35ಕ್ಕೆ ಹೆಚ್ಚಿಸಲಾಗಿದೆ.
ಜಪಾನ್​ನಲ್ಲಿ ಹೆಚ್ಚಳ:ಜಪಾನ್​ನಲ್ಲಿ ಕಳೆದ 15 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಶೇಕಡ 20ರಷ್ಟು ಹೆಚ್ಚಿದೆ. ಕಳೆದ ಒಂದು ವಾರದಿಂದ ದಿನವೂ ಸರಾಸರಿ 10 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಜರ್ಮನಿಯಲ್ಲಿ ನಾಲ್ಕನೇ ಅಲೆ ವ್ಯಾಪಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಇಲ್ಲಿ ದೈನಂದಿನ ಪ್ರಕರಣಗಳ ಸರಾಸರಿ ಸಂಖ್ಯೆ 5 ಸಾವಿರ ಮೀರುತ್ತಿದೆ.
|ಜಿ.ಆರ್. ಸಂತೋಷ್ತಾಂಜಾನಿಯಾ, ಪೂರ್ವ ಆಫ್ರಿಕಾ
ಆಫ್ರಿಕಾ ಎಂದ ಕೂಡಲೇ ಜಗತ್ತಿಗೆ ಸೌತ್ ಆಫ್ರಿಕಾ ಥಟ್ಟನೇ ಕಣ್ಮುಂದೆ ಬರುತ್ತದೆ. ಆದರೆ ಸರಿಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳಿರುವ ಈ ಖಂಡದಲ್ಲಿ ಒಂದೊಂದು ದೇಶದಲ್ಲೂ ಕೋವಿಡ್ ಪರಿಸ್ಥಿತಿ ವಿಭಿನ್ನವಾಗಿದೆ. ಜುಲೈವರೆಗೆ ಕೋವಿಡ್ ನಿಯಂತ್ರಣದಲ್ಲಿದ್ದರೂ, ಆಗಸ್ಟ್ ಮೊದಲ ವಾರದ ನಂತರ ಕರೊನಾ ಸೋಂಕಿತರ ಸಂಖ್ಯೆ ಶೇಕಡ 19ರಷ್ಟು ಹೆಚ್ಚಾಗಿದೆ. ಇದನ್ನು ಮೂರನೇ ಅಲೆಯ ಆರಂಭ ಎಂದು ಭಾವಿಸಲಾಗುತ್ತಿದೆ. ಒಂದೇ ವಾರದಲ್ಲಿ 2.28 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಆವರಿಸಿದೆ. 6 ಸಾವಿರಕ್ಕೂ ಹೆಚ್ಚು ಜನ ಈ ವಾರದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಒಟ್ಟು 70 ಲಕ್ಷ ಜನ ಇಡೀ ಆಫ್ರಿಕಾದಲ್ಲಿ ಸೋಂಕಿಗೆ ಒಳಗಾಗಿದ್ದಾರೆ. ಕೆಲವು ದೇಶಗಳಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಕರೊನಾ ಹತೋಟಿಯಲ್ಲಿದೆ. ನಾನಿರುವ ಪೂರ್ವ ಆಫ್ರಿಕಾದ ತಾಂಜಾನಿಯಾದಲ್ಲಿ 6 ಕೋಟಿ ಜನಸಂಖ್ಯೆ ಇದ್ದರೂ ಸೋಂಕಿತರ ಸಂಖ್ಯೆ 1500ನ್ನೂ ದಾಟಿಲ್ಲ. ಲಾಕ್​ಡೌನ್ ಅಂತೂ ಇಲ್ಲಿಯವರೆಗೂ ಕೇಳೇ ಇಲ್ಲ. ಈ ಭಾಗದಲ್ಲಿರುವ ಇತರ ದೇಶಗಳ ಜನರೂ ಯಾವುದೇ ರೀತಿಯ ಭೀತಿಗೆ ಒಳಗಾಗದೇ ಸಾಮಾನ್ಯ ರೀತಿಯ ಜೀವನ ಮುಂದುವರಿಸಿದ್ದಾರೆ. ಈ ದೇಶಗಳಲ್ಲಿರುವ ಯುರೋಪಿಯನ್ ಸಮುದಾಯ ಮತ್ತು ಕೆಲ ಮಟ್ಟಿಗೆ ಏಷ್ಯನ್ ಸಮುದಾಯದ ಜನರು ಮಾತ್ರ ಮಾಸ್ಕ್ ಧರಿಸುವುದು ಸೇರಿ ಇತ್ಯಾದಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆಫ್ರಿಕಾದ ಯಾವುದೇ ದೇಶದಲ್ಲೂ ಲಸಿಕೆ ಆಂದೋಲನ ವೇಗವಾಗಿ ಸಾಗುತ್ತಿಲ್ಲ. ಈಜಿಪ್ಟ್, ನೈಜೀರಿಯಾ, ದಕ್ಷಿಣ ಆಫ್ರಿಕಾದಂಥ ಕೆಲವು ದೇಶಗಳನ್ನು ಬಿಟ್ಟರೆ ಬಹಳಷ್ಟು ದೇಶಗಳಿಗೆ ವಾಕ್ಸಿನ್ ಖರೀದಿ ದುಬಾರಿ ಎನಿಸಿದೆ. ಸಿರಿವಂತ ದೇಶಗಳು ಅಥವಾ ವಿಶ್ವ ಆರೋಗ್ಯ ಸಂಸ್ಥೆ ಉಚಿತವಾಗಿ ನೀಡಿದರೆ ನಮ್ಮ ಜನರಿಗೆ ಲಸಿಕೆ ಹಾಕುತ್ತೇವೆ ಎಂಬುದು ಕೆಲ ಸರ್ಕಾರಗಳ ಅಘೊಷಿತ ನೀತಿಯಾಗಿದೆ. ಕೆಲವರು ಲಸಿಕೆ ಹಾಕಿಸಿಕೊಳ್ಳಲೆಂದೇ ದುಬೈಗೆ ಹೋದವರಿದ್ದಾರೆ.
ಭಾರತೀಯ ಮೂಲದವರು ತವರು ರಾಜ್ಯಕ್ಕೆ ಬಂದು ತಿಂಗಳಿದ್ದು, ಎರಡು ಲಸಿಕೆ ತೆಗೆದುಕೊಂಡದ್ದೂ ಇದೆ. ಉತ್ತರದ ತುದಿಯಲ್ಲಿರುವ ಪುಟ್ಟ ದೇಶಗಳಾದ ಮೊರೊಕ್ಕೊ ಮತ್ತು ಟ್ಯೂನಿಷಿಯಾ ಸೋಂಕಿತರ ಬೆಳವಣಿಗೆ ದೃಷ್ಟಿಯಿಂದ ಅಪಾಯದ ಅಂಚಿನಲ್ಲಿವೆ. ನಂತರದ ಸ್ಥಾನದಲ್ಲಿ ಲಿಬಿಯಾ ಮತ್ತು ಇಥಿಯೋಪಿಯಾಗಳಿವೆ. ಪೂರ್ವ ಮತ್ತು ಮಧ್ಯ ಆಫ್ರಿಕಾದ ಬಹುತೇಕ ದೇಶಗಳು ಆತಂಕದಿಂದ ದೂರ ಇವೆ. ಇಲ್ಲಿಯವರೆಗೆ ಲಸಿಕೆಯ 9 ಕೋಟಿ ಡೋಸ್​ಗಳು ಆಫ್ರಿಕಾ ತಲುಪಿವೆ. ಆದರೆ ಆಫ್ರಿಕಾದ ಒಟ್ಟು ಜನಸಂಖ್ಯೆ 130 ಕೋಟಿ ಎಂಬುದನ್ನು ಗಮನಿಸಿದರೆ ಇದು ತೀರಾ ಕಡಿಮೆ ಎನಿಸುತ್ತದೆ. ಆರ್ಥಿಕತೆ ದುರ್ಬಲವಾಗಿರುವ ಕಾರಣ ತೀವ್ರ ಪ್ರಮಾಣದ ಲಾಕ್​ಡೌನ್ ಇತ್ಯಾದಿ ಕಠಿಣ ಕ್ರಮಗಳನ್ನು ಅನುಸರಿಸುವುದನ್ನು ಇಲ್ಲಿನ ಸರ್ಕಾರಗಳೂ ಬಯಸುವುದಿಲ್ಲ. ರೂಪಾಂತರಿ ವೈರಾಣು ಹರಡಿದಾಗ ಸ್ಥಿತಿ ಹೀಗೆಯೇ ಇರುತ್ತದೆ ಎಂದು ಹೇಳುವಂತಿಲ್ಲ. ಏಕೆಂದರೆ ಅಲ್ಜೀರಿಯಾ, ನಮೀಬಿಯಾ, ಕೀನ್ಯಾ ಸೇರಿದಂತೆ ಆರೇಳು ರಾಷ್ಟ್ರಗಳಲ್ಲಿ ಕರೊನಾ ತೀವ್ರಗತಿಯಲ್ಲಿ ಹರಡುತ್ತಿರುವ ವರದಿಗಳಿವೆ.
ಕರೊನಾ ಪರಿಸ್ಥಿತಿಯ ಪರಿಶೀಲನೆಗಾಗಿ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ನೇತೃತ್ವದ ತಂಡ ಸೋಮವಾರ ಕೇರಳಕ್ಕೆ ಭೇಟಿ ನೀಡಿದೆ. ದೇಶದ ಹೊಸ ಕರೊನಾ ಕೇಸ್​ಗಳಲ್ಲಿ ಸುಮಾರು ಅರ್ಧದಷ್ಟು ಪ್ರಕರಣ ದಾಖಲಾಗುತ್ತಿರುವ ಕೇರಳದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ಸ್ವಯಂ ಪರಿಶೀಲನೆಗಾಗಿ ಮಾಂಡವೀಯ ಭೇಟಿ ಕೊಟ್ಟಿರುವುದು ಗಮನಾರ್ಹವಾಗಿದೆ. ಸೋಮವಾರ ಬೆಳಗ್ಗೆವರೆಗೆ ದೃಢಪಟ್ಟ ರಾಷ್ಟ್ರೀಯ ಪ್ರಕರಣಗಳಲ್ಲಿ ಕೇರಳದ್ದೇ 18,582 ಕೇಸ್​ಗಳಿವೆ. ಮಾಂಡವೀಯ ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಆರೋಗ್ಯ ಸಚಿವೆ ವೀಣಾ ಜಾರ್ಜ್ ರೊಂದಿಗೆ ಕರೊನಾ ನಿಯಂತ್ರಣ ಕ್ರಮಗಳ ಬಗ್ಗೆ ರ್ಚಚಿಸಿದ್ದಾರೆ.
ಸೋಮವಾರ ಬೆಳಗ್ಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ ಭಾರತದಲ್ಲಿ ಕೋವಿಡ್ ಸೋಂಕಿನ 32,937 ಹೊಸ ಕೇಸ್​ಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 3,22,25,513ಕ್ಕೆ ಏರಿದೆ. 417 ಜನರು ಬಲಿಯಾಗಿದ್ದು ಸಾವಿನ ಸಂಖ್ಯೆ 4,31,642ಕ್ಕೆ ಏರಿದೆ. ದೇಶದಲ್ಲಿ ಒಟ್ಟು 3,81,947 ಸಕ್ರಿಯ ಪ್ರಕರಣಗಳಿದ್ದು ಅದು ಒಟ್ಟು ಸೋಂಕಿನ ಶೇಕಡ 1.18 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಚೇತರಿಕೆ ದರ ಕಳೆದ ವರ್ಷದ ಮಾರ್ಚ್ ನಂತರ ಅತಿ ಹೆಚ್ಚು, ಅಂದರೆ ಶೇ. 97.48 ಆಗಿದೆ. ದೈನಿಕ ಪಾಸಿಟಿವಿಟಿ ದರ ಶೇ.2.79 ಆಗಿದ್ದು ಕಳೆದ 21 ದಿನಗಳಿಂದ ಶೇಕಡ 3ಕ್ಕಿಂತ ಕೆಳಗಿದೆ. ದೇಶದಲ್ಲಿ ಇದುವರೆಗೆ 49,48,05,652 ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ಅಮೆರಿಕದ ಅಲ್ಬನಿಯಲ್ಲೂ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಭರ್ಜರಿ ಆಚರಣೆ

ಒಂದು ವರ್ಷದ ಆ ಮಗುವನ್ನು ಒಂದು ದಿನ ಭೇಟಿ ಮಾಡುವೆ ಅಂದ್ರು ನಟಿ ರಶ್ಮಿಕಾ; ಅದಕ್ಕೆ ಕಾರಣ ಕೂಡ ‘ರಶ್ಮಿಕಾ’ನೇ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
