|ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಇತ್ತೀಚೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ (ಬಿಬಿಎಂಪಿ) ಮತದಾರರ ಮಾಹಿತಿ ಕಳವಾಗಿದೆ ಎಂಬ ವರದಿ ಬಂದಿತ್ತು. ಅದು ಹಲವಾರು ತೊಡಕುಗಳಿಗೆ, ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. ಒಂದು ಖಾಸಗಿ ಸಂಸ್ಥೆ ಆ ಮಾಹಿತಿಯನ್ನು ಮಾರಾಟ ಮಾಡಿರುವುದಾಗಿ ಆರೋಪಗಳೂ ಕೇಳಿ ಬಂದಿದ್ದವು. ಇದು ಪ್ರಜಾಪ್ರಭುತ್ವದ ಕತ್ತು ಹಿಸುಕಲು ಪ್ರಯತ್ನಿಸುತ್ತಿರುವ ಒಂದು ದೊಡ್ಡ ಹಗರಣವೇ ಆಗಿದ್ದು, ಈ ಪ್ರಕರಣವನ್ನು ಎನ್ಐಎ ಅಥವಾ ಇನ್ನಾವುದಾದರೂ ಪ್ರಮುಖ ಸಂಸ್ಥೆಯ ಮೂಲಕ ವಿಚಾರಣೆ ನಡೆಸಬೇಕಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಳಗಿನ ಒಂದು ಸಂಸ್ಥೆ ಮತದಾರರ ಗುರುತಿನ ಚೀಟಿ ನವೀಕರಣಕ್ಕೆಂದು ಪ್ರತಿಯೊಬ್ಬ ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಿತ್ತು. 2022 ಸೆಪ್ಟೆಂಬರ್ ತಿಂಗಳಲ್ಲಿ ಈ ಅಕ್ರಮವಾಗಿ ಮತದಾರರ ಮಾಹಿತಿ ಕಲೆ ಹಾಕುವ ಚಟುವಟಿಕೆಯ ಕುರಿತು ಬಿಬಿಎಂಪಿಗೆ ಎಚ್ಚರಿಕೆ ನೀಡಲಾದರೂ, ಬಿಬಿಎಂಪಿ ಯಾವುದೇ ತುರ್ತು ಕ್ರಮ ಕೈಗೊಳ್ಳಲಿಲ್ಲ, ಹಾಗೂ ಮಲ್ಲೇಶ್ವರ ಮೂಲದ ಎನ್‌ಜಿಒ ಜೊತೆಗಿನ ಚುನಾವಣಾ ಸಂಬಂಧಿ ಕಾರ್ಯಾಚರಣೆಗಳಿಗೆ ಮಾಡಿಕೊಂಡ ಒಪ್ಪಂದವನ್ನೂ ರದ್ದು ಮಾಡಲಿಲ್ಲ.
ಆರಂಭದಲ್ಲಿ ನೀಡಿದ್ದ ದೂರುಗಳು ಅಧಿಕಾರಿಗಳಿಗೆ ಚಿಲುಮೆ ಸಂಸ್ಥೆ ಮಾಡಿಕೊಂಡಿರುವ ಚುನಾವಣಾ ಸ್ಥಳಗಳ ನಕ್ಷೆ, ಬಿಬಿಎಂಪಿ ಬ್ಯಾಡ್ಜ್‌ಗಳು ಹಾಗೂ ಸಮೀಕ್ಷಾ ವರದಿಗಳು ನಿಯಮಗಳನ್ನು ಉಲ್ಲಂಘಿಸಿವೆ ಎಂದು ಮಾಹಿತಿ ನೀಡಿದ್ದವು. ಸಮನ್ವಯ ಟ್ರಸ್ಟ್ ಎಂಬ ಸಂಸ್ಥೆ ಈ ಕುರಿತು ಸೆಪ್ಟೆಂಬರ್ 20ರಂದು ಈ ಕುರಿತು ಪ್ರಥಮ ದೂರು ದಾಖಲಿಸಿತು. ಬಿಬಿಎಂಪಿಯ ನೋಡಲ್ ಅಧಿಕಾರಿ ಈ ಕುರಿತು ಸೂಕ್ತ ವಿವರಣೆ ನೀಡುವಂತೆ ಕೋರಿ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ಗೆ (ಸಿಇಸಿಆರ್‌ಡಿ / ಚಿಲುಮೆ ಟ್ರಸ್ಟ್) ಸೆಪ್ಟೆಂಬರ್ 22ರಂದು ಪತ್ರದ ಪ್ರತಿಯನ್ನು ಕಳುಹಿಸಿದರು.
ನವೆಂಬರ್ 3ರಂದು ಈ ಎನ್‌ಜಿಒ ಬಿಬಿಎಂಪಿಯ ಪತ್ರಕ್ಕೆ ಮರು ಉತ್ತರ ನೀಡಿತು. ಅದೇ ದಿನದಂದು ಸಮನ್ವಯ ಟ್ರಸ್ಟ್ ತನಗೆ ಚಿಲುಮೆ ಎನ್‌ಜಿಒ ಜೊತೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ, ತಾನು ನೀಡಿದ್ದ ದೂರನ್ನು ಹಿಂದಕ್ಕೆ ಪಡೆಯಿತು.
ನವೆಂಬರ್ 2ರಂದು ಬಿಬಿಎಂಪಿ ಚಿಲುಮೆ ಎನ್‌ಜಿಒ ಜೊತೆಗಿನ ತನ್ನ ಸಂಬಂಧವನ್ನು ಅಂತ್ಯಗೊಳಿಸಿತು. ಆದರೆ ಆ ವೇಳೆಗಾಗಲೇ ಆರ್.ಆರ್. ನಗರ, ಮಹದೇವಪುರ, ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿರುವ ಮನೆಗಳಲ್ಲಿ ಸರ್ವೇ ನಡೆಸಲಾಗಿತ್ತು. ಅದಾಗಿ ಎರಡು ವಾರಗಳ ಬಳಿಕ, ಅಂದರೆ ನವೆಂಬರ್ 15ರಂದು ಬಿಬಿಎಂಪಿ ಪೊಲೀಸ್ ದೂರು ದಾಖಲಿಸಿ, ಮತದಾರರ ಮಾಹಿತಿಗಳು ಕಳವಾಗಿದೆ ಎಂದಿತು.
ಬಳಿಕ ನವೆಂಬರ್ 16ರಂದು ಬಿಬಿಎಂಪಿ ಒಂದು ಪತ್ರಿಕಾ ಹೇಳಿಕೆ ನೀಡಿ, ತಾನು ಚಿಲುಮೆ ಟ್ರಸ್ಟ್‌ಗೆ ಮನೆ ಮನೆಗೆ ತೆರಳಿ ಸರ್ವೆ ನಡೆಸಿ, ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಶನ್ ಆ್ಯಂಡ್ ಇಲೆಕ್ಟೋರಲ್ ಪಾರ್ಟಿಸಿಪೇಶನ್ (ಸ್ವೀಪ್) ಕುರಿತು ಜಾಗೃತಿ ಮೂಡಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆದಿರುವುದಾಗಿ ಹೇಳಿತು.
ಅದಾದ ಬಳಿಕ ರಾಜ್ಯದಲ್ಲಿ ರಾಜಕೀಯ ಗದ್ದಲ ಏರ್ಪಟ್ಟಿತು. ವಿರೋಧ ಪಕ್ಷವಾದ ಕಾಂಗ್ರೆಸ್ ಚಿಲುಮೆ ಟ್ರಸ್ಟ್ ಬಿಬಿಎಂಪಿ ಉದ್ಯೋಗಿಗಳಂತೆ ಮಾರುವೇಶದಲ್ಲಿ ಮತದಾರರ ಮಾಹಿತಿಗಳನ್ನು ಕಳವು ಮಾಡುತ್ತಿದ್ದಾರೆ ಹಾಗೂ ಆಡಳಿತಾರೂಢ ಬಿಜೆಪಿ ಇಂತಹ ಸಂಸ್ಥೆಗಳೊಡ‌ನೆ ಕೈಜೋಡಿಸಿದೆ ಎಂದು ಗಂಭೀರವಾಗಿ ಆರೋಪಿಸಿತು.
ಇದರ ಪರಿಣಾಮವಾಗಿ, ಪೊಲೀಸರು ಆರು ಜನರನ್ನು ವಶಕ್ಕೆ ತೆಗೆದುಕೊಂಡರು. ಅವರಲ್ಲಿ ಕೃಷ್ಣಪ್ಪ ರವಿಕುಮಾರ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. ಅವರು ಚಿಲುಮೆ ಟ್ರಸ್ಟಿನ ಸಹ ಸಂಸ್ಥಾಪಕರೂ ಆಗಿದ್ದರು. ಬಳಿಕ ಮೂರು ಜನ ಕಂದಾಯ ಇಲಾಖೆ ಅಧಿಕಾರಿಗಳನ್ನು ವಜಾಗೊಳಿಸಿ, 45 ಜನರನ್ನು ವಿಚಾರಣೆ ನಡೆಸಲಾಯಿತು. ಬಳಿಕ ದೊರಕಿದ ಮಾಹಿತಿಯ ಪ್ರಕಾರ, ಚಿಲುಮೆ ಟ್ರಸ್ಟ್ ಈ ಮನೆ ಮನೆ ಸಮೀಕ್ಷೆ ನಡೆಸುವ ಉದ್ದೇಶಕ್ಕಾಗಿ 5,000 ಜನರನ್ನು ಉದ್ಯೋಗಕ್ಕೆ ಸೇರಿಸಿಕೊಂಡಿತ್ತು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಬಿಬಿಎಂಪಿ ಮಾರ್ಚ್ 2018ರಲ್ಲಿ ಚಿಲುಮೆ ಟ್ರಸ್ಟ್‌ಗೆ ಮನೆ ಮನೆಗೆ ತೆರಳಿ, ಸಾರ್ವಜನಿಕರಲ್ಲಿ ವೋಟರ್ಸ್ ಹಾಟ್ ಲೈನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್ ಲೈನ್ ಅಪ್ಲಿಕೇಶನ್ ಸಲ್ಲಿಸುವ ಕುರಿತು ಜಾಗೃತಿ ಮೂಡಿಸಲು ಅನುಮತಿ ನೀಡಿತ್ತು.
ಅಧಿಕಾರಿಗಳ ವಜಾ ಆದೇಶದಲ್ಲಿ, ಅವರು ಸ್ವೀಪ್ ಕಾರ್ಯ ನಡೆಸುತ್ತಿದ್ದ ಚಿಲುಮೆ ಟ್ರಸ್ಟ್ ಸ್ವಯಂಸೇವಕರಿಗೆ ಬ್ಲಾಕ್ ಲೆವೆಲ್ ಕೋ ಆರ್ಡಿನೇಟರ್ಸ್ (ಬಿಎಲ್‌ಸಿ) ಎಂದು ಗುರುತಿನ ಚೀಟಿಗಳನ್ನೂ ವಿತರಿಸಿ, ಆ ಮೂಲಕ ಕಾನೂನನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿತ್ತು. ಬೆಂಗಳೂರು ನಗರ ಪೊಲೀಸರು ಚಿಲುಮೆ ಟ್ರಸ್ಟ್ ಕಾರ್ಯಕರ್ತರಿಂದ ಸಾಕಷ್ಟು ಇಂತಹ ಬಿಎಲ್ಓ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಮೂಲ ಯಾವುದು ಎಂದು ಪತ್ತೆಹಚ್ಚಲು ವಿಚಾರಣೆ ನಡೆಸುತ್ತಿದ್ದಾರೆ. ಅದರೊಡನೆ, ಅವರು 45 ಕಂದಾಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಈ ಮಾಹಿತಿಗಳನ್ನು ಮರಳಿ‌ ಪಡೆಯಲು ಸಾಧ್ಯವೇ ಇಲ್ಲವೇ ಎನ್ನುವುದು ಒಂದು ಪ್ರಮುಖ ಪ್ರಶ್ನೆಯಾಗಿದೆ. ಒಂದು ವೇಳೆ ಬಿಬಿಎಂಪಿ ತಪ್ಪಾಗಿ ಹಂಚಿಕೆಯಾಗಿರುವ ಈ ಮಾಹಿತಿಗಳನ್ನು ಮರಳಿ ಪಡೆಯಲು ಏನಾದರೂ ಕ್ರಮ ಕೈಗೊಂಡಿದೆಯೇ ಎಂಬುದನ್ನು ಇನ್ನೂ ತಿಳಿಯಬೇಕಿದೆ.
ಕಾಂಗ್ರೆಸ್ ಪಕ್ಷದ ಪ್ರಕಾರ, ಎನ್‌ಜಿಓದ ಸದಸ್ಯರು ಈ ಮಹತ್ವದ ಮತದಾರರ ಮಾಹಿತಿಗಳನ್ನು ಡಿಜಿಟಲ್ ಸಮೀಕ್ಷಾ ಆ್ಯಪ್‌ಗೆ ದಾಖಲು ಮಾಡಿದ್ದಾರೆ. ಈ ಆ್ಯಪ್ ಅನ್ನು ಚಿಲುಮೆ ಎನ್‌ಜಿಒದ ಸೋದರ ಸಂಸ್ಥೆಯಾದ ಚಿಲುಮೆ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ನಿಯಂತ್ರಿಸುತ್ತದೆ. ಈ ಮಾಹಿತಿಗಳನ್ನು ಅಧಿಕೃತ ಮತದಾರರ ದಾಖಲಾತಿ ಸಹಾಯವಾಣಿ ಗರುಡಕ್ಕಾಗಲಿ, ಚುನಾವಣಾ ಆಯೋಗದ ಮತದಾರರ ಸಹಾಯವಾಣಿಗಾಗಲಿ ದಾಖಲಿಸಲಾಗಿಲ್ಲ.
ವಿಧಾನಸಭಾ ಚುನಾವಣೆಗಳು ಬರುವ ಮೊದಲಿನ ಅವಧಿಯಲ್ಲಿ ಈ ರೀತಿ ಗಳಿಸಲಾಗಿರುವ ಮಾಹಿತಿಗೆ ಅಪಾರವಾದ ಮಹತ್ವವಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಅತ್ಯಂತ ವೃತ್ತಿಪರವಾಗಿ ನಡೆಯುತ್ತಿವೆ. ಇದಕ್ಕಾಗಿ ಸಲಹಾ ಸಂಸ್ಥೆಗಳು ಹಾಗೂ ಅವುಗಳ ಬಳಿ ಇರುವ ಮಾಹಿತಿಗಳು ಬಹುದೊಡ್ಡ ಪಾತ್ರ ನಿರ್ವಹಿಸುತ್ತವೆ. ಇಂತಹ ಮಾಹಿತಿಗಳ ಸಂಗ್ರಹಣೆ ಕೇವಲ ಸಾರ್ವಜನಿಕರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವುದು ಮಾತ್ರವಲ್ಲದೆ, ರಾಜಕಾರಣಿಗಳಿಗೆ ಮತದಾರರನ್ನು ತಡೆಗಟ್ಟುವ ನ್ಯಾಯಪರವಲ್ಲದ ಒಂದು ಮಾರ್ಗವನ್ನೂ ಒದಗಿಸುತ್ತದೆ.
ಇಲ್ಲಿಯವರೆಗೆ ಲಭಿಸಿರುವ ಮಾಹಿತಿಗಳ ಪ್ರಕಾರ, ಆರೋಪ ಎದುರಿಸುತ್ತಿರುವ ಚಿಲುಮೆ ಸಂಸ್ಥೆಯೂ ಸಹ ಒಂದು ರಾಜಕೀಯ ಸಲಹಾ ಸಂಸ್ಥೆಯನ್ನು ನಿಯಂತ್ರಿಸುತ್ತದೆ. ವಿರೋಧ ಪಕ್ಷಗಳು ಆ ರಾಜಕೀಯ ಸಲಹಾ ಸಂಸ್ಥೆಗೂ, ಆಡಳಿತ ಪಕ್ಷದ ಓರ್ವ ಸದಸ್ಯರಿಗೂ ನಿಕಟ ಸಂಪರ್ಕವಿದೆ ಎಂದು ಆರೋಪಿಸಿವೆ. ವಿಪಕ್ಷಗಳ ಈ ಆರೋಪವು ಇಂತಹ ಒಂದು ಅಪಾಯಕಾರಿ ಸಾಧ್ಯತೆ ಇರುವುದನ್ನೂ ಸೂಚಿಸುತ್ತದೆ. ಒಂದು ವೇಳೆ ಈ ರೀತಿಯ ಜಾಲಬಂಧ ಏನಾದರೂ ಏರ್ಪಟ್ಟಿರುವುದೇ ಆದರೆ, ಮತದಾರರ ಮಾಹಿತಿಯನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿ, ಅವರನ್ನು ನಿಯಂತ್ರಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಪ್ರಸ್ತುತ ಇಂತಹ ಘಟನೆಗಳು ಅಮೆರಿಕಾದಲ್ಲೂ ನಡೆದಿದೆ ಎನ್ನಲಾಗಿದ್ದು, ಇದು ಒಂದು ಕಳವಳಕಾರಿ ವಿಚಾರವಾಗಿದೆ. ಆದರೆ ಈ ಕ್ಷಣದಲ್ಲಿ ಇಂತಹ ಘಟನೆ ನಮ್ಮಲ್ಲೂ ನಡೆದಿದೆಯೇ ಎನ್ನಲು ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಆದರೆ ಇಂತಹ ಸಾಧ್ಯತೆಗಳು ಇವೆ ಎನ್ನುವ ಕಾರಣಕ್ಕಾಗಿ ಇದರ ಕುರಿತು ಕೂಲಂಕಷ ವಿಚಾರಣೆ ನಡೆಯುವ ಅವಶ್ಯಕತೆ ಇದೆ.
ಈ ವಿಚಾರದಲ್ಲಿ ವಿಚಾರಣೆ ನಡೆಸಿದರೆ ಆಗ ಇಂತಹ ಮಾಹಿತಿ ಕಳವನ್ನು ತಡೆಗಟ್ಟಬಹುದೇನೋ. ಆದರೆ ಸಂಸ್ಥೆ ಕಲೆಹಾಕಿದ್ದ ಮಾಹಿತಿಯನ್ನು ಮರಳಿ ಪಡೆಯಬಹುದೇ ಎಂಬ ಕುರಿತು ಯಾವ ಭರವಸೆಯೂ ನೀಡಲಾಗದು. ಅದೂ ಅಲ್ಲದೆ ಇಂತಹ ಮಾಹಿತಿಗಳು ಕ್ಲೌಡ್‌ನಲ್ಲಿ ಎಷ್ಟು ಪ್ರತಿಗಳಾಗಿ ಬೇಕಾದರೂ ಲಭ್ಯವಿರಬಹುದು. ಕ್ಲೌಡ್‌ನಲ್ಲಿ ಸಂಗ್ರಹಿಸಲ್ಪಟ್ಟ ಮಾಹಿತಿಯನ್ನು ಜಗತ್ತಿನ ಯಾವ ಭಾಗದಿಂದಲಾದರೂ ಪಡೆದುಕೊಳ್ಳಬಹುದು. ಆದ್ದರಿಂದ ದುಡ್ಡು ಕೊಡಲು ಸಿದ್ಧರಿರುವ ಜನರಿರುವಾಗ ಈ ಮಾಹಿತಿಗಳು ಹರಿದಾಡದಂತೆ ತಡೆಯುವುದು ಅತ್ಯಂತ ಕಷ್ಟಕರವಾಗಿದೆ. ಈ ವಿಚಾರ ಬೆಳಕಿಗೆ ಬರುವ ಮೊದಲೇ, ಮತದಾರರ ಪಟ್ಟಿಗಳ ಮಾಹಿತಿ ಹಂಚುವಂತಹ ಸಾಕಷ್ಟು ಅನುಚಿತ ಅಭ್ಯಾಸಗಳು ನಡೆದು ಬಂದಿದ್ದವು. ಮತದಾರರ ಮಾಹಿತಿಗಳು ಹಲವು ಕಾರಣಗಳಿಗೆ, ಹಲವು ರೀತಿಯಿಂದ ಬಳಕೆಯಾಗುತ್ತದೆ.
ಮೊದಲಿನಿಂದಲೂ ಭಾರತದ ಸರ್ಕಾರಗಳು ಸಹ ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತೀಯರಿಗೆ ಸಂಬಂಧಿಸಿದ ಮಾಹಿತಿಗಳನ್ನು ಭಾರತದಲ್ಲಿಯೇ ಇಡುವಂತೆ ಒತ್ತಾಯಿಸುತ್ತಾ ಬಂದಿದ್ದವು. ಈ ವಿಷಯದಲ್ಲಿ ಭಾರತ ಹಲವು ಬೆದರಿಕೆಗಳನ್ನು ಎದುರಿಸುತ್ತಿದೆ. ಮೊದಲನೆಯದಾಗಿ, ಮಾಹಿತಿಗಳನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕಾನೂನಿನ ಪ್ರಕಾರ, ಸಂಗ್ರಹಿಸಲಾಗಿರುವ ಬಹುತೇಕ ಮಾಹಿತಿಗಳು ಅನಾಮಧೇಯ ಆಗಿರಬೇಕು. ಆದರೆ ಈಗ ಜನರ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ವಿಶಿಷ್ಟವಾದ ಇಲೆಕ್ಟ್ರಾನಿಕ್ ಉಪಕರಣಗಳಿವೆ. ಅವುಗಳಲ್ಲಿ ಅತ್ಯಂತ ಹೆಚ್ಚು ಮಾಹಿತಿಗಳು ಸಂಗ್ರಹಿಸಲ್ಪಟ್ಟಿರುತ್ತವೆ. ಈ ಉಪಕರಣಗಳು ಮತ್ತು ಮಾಹಿತಿಗಳು ಜೊತೆಯಾಗಿ ಇದ್ದಾಗ ಅನಾಮಧೇಯ ಮಾಹಿತಿಗಳು ವೈಯಕ್ತಿಕ ಮಾಹಿತಿಗಳಾಗಿ ಬದಲಾಗುತ್ತವೆ. ಅದೇ ರೀತಿ ಮತದಾರರ ಮಾಹಿತಿಗಳನ್ನೂ ಸಹ ಇತರ ಮಾಹಿತಿಗಳೊಡನೆ ಬೆರೆಸಿದಾಗ ಮತದಾರರ ಕುರಿತಾದ ಸಮಗ್ರ ಚಿತ್ರಣ ಲಭ್ಯವಾಗುತ್ತದೆ.
ಖಾಸಗಿ ಸಂಸ್ಥೆಗಳು ಈ ರೀತಿಯಾಗಿ ನಮ್ಮೆಲ್ಲರ ಕುರಿತಾದ ವ್ಯಕ್ತಿಚಿತ್ರಗಳನ್ನು ನಿರ್ಮಿಸಲು ಸಾಧ್ಯವಾದಾಗ ಅವುಗಳು ಈ ಮಾಹಿತಿಗಳನ್ನು ತಮಗೆ ಅತಿಹೆಚ್ಚು ಹಣ ನೀಡುವವರಿಗೆ ಮಾರಾಟ ಮಾಡುವುದೂ ಸಾಧ್ಯ. ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಇದು ನಮ್ಮ ಸಮಗ್ರ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಕೆಲವು ವರ್ಷಗಳ ಹಿಂದೆ ಸ್ಟಾರ್ವಾ ಎಂಬ ಹೆಸರಿನ ಓಟಕ್ಕೆ ಸಂಬಂಧಿಸಿದ ಆ್ಯಪ್ ಬಳಕೆಯಲ್ಲಿತ್ತು. ಅದನ್ನು ಪ್ರಪಂಚದಾದ್ಯಂತ ದೂರದ ನಿರ್ಜನ ಪ್ರದೇಶಗಳಲ್ಲಿ ಮತ್ತು ಅಜ್ಞಾತ ಮಿಲಿಟರಿ ತಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮೆರಿಕನ್ ಸೈನಿಕರು ಬಳಸುತ್ತಿದ್ದರು. ಆ ಆ್ಯಪ್ ಸೈನಿಕರು ಓಡಿರುವ ಮಾಹಿತಿಯನ್ನು ಪ್ರದೇಶದ ಮಾಹಿತಿಯೊಡನೆ ಹೀಟ್ ಮ್ಯಾಪ್ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಯಲು ಮಾಡುತ್ತಿತ್ತು. ಇದರ ಪರಿಣಾಮವಾಗಿ ವಿದೇಶೀ ಗುಪ್ತಚರ ಸಂಸ್ಥೆಗಳು ಅಮೆರಿಕಾದ ಸೈನಿಕರು ಅಜ್ಞಾತ ಪ್ರದೇಶಗಳಲ್ಲಿ ನಡೆಸಿದ ಓಟದ ಮಾಹಿತಿಗಳನ್ನು ಸಂಗ್ರಹಿಸಿ, ಅದರಿಂದಾಗಿ ಹನ್ನೆರಡಕ್ಕೂ ಹೆಚ್ಚು ಸೇನಾ ನೆಲೆಗಳನ್ನು ಪತ್ತೆ ಹಚ್ಚಿದ್ದರು.
ಸ್ವೀಪ್ ಪ್ರಕರಣದ ವಿಚಾರಕ್ಕೆ ಬಂದಾಗ, ಆಧಾರ್ ಕಾರ್ಡ್ ಅನ್ನು ಮತದಾರರ ಗುರುತಿನ ಚೀಟಿಯೊಡನೆ ಲಿಂಕ್ ಮಾಡಬೇಕಾಗಿತ್ತು. ನವೆಂಬರ್ 21ರಂದು ಪೊಲೀಸರು ಮತದಾರರ ಪಟ್ಟಿ ಮಾರ್ಪಾಡು ಮತ್ತು ಆಧಾರ್ ಕಾರ್ಡ್ ಕನೆಕ್ಷನ್ ವಿಚಾರಕ್ಕೆ ಜಬಾಬ್ದಾರರಾಗಿರುವ ಇಪ್ಪತ್ತು ಜನ ಕಂದಾಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಭಾರತಕ್ಕೆ ಈ ಅಪಾಯದ ಕುರಿತಾದ ಸ್ಪಷ್ಟ ಅರಿವಿದೆ. ಆದ್ದರಿಂದ ಭಾರತ ಎರಡು ಕಾಯಿದೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಅವೆಂದರೆ ವೈಯಕ್ತಿಕ ಮಾಹಿತಿ ಕಾಯಿದೆ ಹಾಗೂ ವೈಯಕ್ತಿಕವಲ್ಲದ ಮಾಹಿತಿ ಕಾಯಿದೆ (ಎನ್‌ಪಿಡಿಬಿ). ಎನ್‌ಪಿಡಿಬಿ ಅಡಿಯಲ್ಲಿ ಕಂಪನಿಗಳು ಒಂದು ವ್ಯವಸ್ಥೆಯಡಿ ಬೇರೆ ಕಂಪನಿಗಳಿಗೆ ಕಾನೂನುಬದ್ಧವಾಗಿ ಮಾಹಿತಿಗಳನ್ನು ಮಾರಾಟ ಮಾಡಬಹುದು. ಒಂದು ವೇಳೆ ವೈಯಕ್ತಿಕವಲ್ಲದ ಮಾಹಿತಿಗಳು ಇತರ ಮಾಹಿತಿಗಳ ಜೊತೆ ಸೇರಿದಾಗ ಅವುಗಳ ಅನಾಮಧೇಯತೆ ಇಲ್ಲವಾದರೆ ಆಗ ಅವು ಇನ್ನಷ್ಟು ಕಟ್ಟುನಿಟ್ಟಾದ ವೈಯಕ್ತಿಕ ಮಾಹಿತಿ ಕಾಯಿದೆಯಡಿ ಬರುತ್ತವೆ.
ಅದರಲ್ಲೂ ಮತದಾರರ ಮಾಹಿತಿಗಳು ಏನಾದರೂ ಶತ್ರು ದೇಶಗಳಿಗೆ ಲಭ್ಯವಾದರೆ ಅವುಗಳು ಆ ಮಾಹಿತಿಗಳನ್ನು ಬಳಸಿ, ಭಾರತದ ಚುನಾವಣೆಗಳು ಹಾದಿ ತಪ್ಪುವಂತೆ ಮಾಡುವ ಅಪಾಯವಿದೆ. ಆದ್ದರಿಂದ ಯಾವುದೇ ರಾಜಕೀಯ ಪ್ರೇರಣೆಗೂ ಒಳಗಾಗದೆ, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮೂಲಕ ವಿಚಾರಣೆ ನಡೆಸಬೇಕಿದೆ.
ರಾಜ್ಯದಲ್ಲಿ ಒಂದೇ ದಿನ 108 ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ನಿಮ್ಮೂರಿಗೆ ಯಾರು ಇನ್​ಸ್ಪೆಕ್ಟರ್? ಇಲ್ಲಿದೆ ಪೂರ್ತಿ ಪಟ್ಟಿ..

ಮಗಳ ಮದುವೆಗೆ ಕೆಲವು ಗಂಟೆಗಳು ಬಾಕಿ ಇರುವಾಗ ನೇಣು ಹಾಕಿಕೊಂಡ ತಂದೆ; ಮದ್ಯಪಾನ ಮಾಡಿದ್ದಕ್ಕೆ ಬೈದಿದ್ದೇ ಕಾರಣ?

ನೀರಿಗೆ ಬಿತ್ತು ಪ್ರಪೋಸ್ ಮಾಡಲೆಂದು ತಂದ ಉಂಗುರ; ಸಮುದ್ರಕ್ಕೇ ಧುಮುಕಿದ ಪ್ರಿಯಕರ: ಆಮೇಲೇನಾಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fifteen =
Remember me
