| ಪ್ರಕಾಶ ಶೃಂಗೇರಿ
1999ರ ಮೇ ತಿಂಗಳಿನಲ್ಲಿ ಶುರುವಾದ ಕಾರ್ಗಿಲ್ ಕದನದ ಹೊತ್ತಿನಲ್ಲಿ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿ.ಪಿ. ಮಲ್ಲಿಕ್ ಅವರ They have chosen to fire first bullet. It will be us who are going to fire the last bullet – ಈ ಒಂದು ಮಾತು ಭಾರತೀಯ ಸೈನಿಕರಿಗೆ ಎಲ್ಲಿಲ್ಲದ ಉತ್ಸಾಹ ತುಂಬಿತ್ತು. ಅದೆಷ್ಟೋ ಜನ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ಈ ದೇಹ ಯುದ್ಧದಲ್ಲಿ ಮಡಿದು ಹೋಗಲಿ ಎಂಬ ಆಸೆಯೊಂದಿಗೆ ಶತ್ರು ದೇಶದೊಡನೆ ಹೋರಾಡುತ್ತ ವೀರಮರಣ ಹೊಂದಿದ್ದ ನಮಗೆಲ್ಲರಿಗೂ ಇಂದಿಗೂ ಪ್ರೇರಣೆ. ಸುಮಾರು 50 ದಿನಗಳ ಕಾಲ 4 ಸೆಕ್ಟರ್​ಗಳಲ್ಲಿ ನಡೆದ ಕಾರ್ಗಿಲ್ ಯುದ್ಧ ನಾವು ಬರೆದಷ್ಟೂ, ಮಾತನಾಡಿದಷ್ಟು ಸುಲಭದ್ದಾಗಿರಲಿಲ್ಲ. ಸುಮಾರು ನಾಲ್ಕೈದು ಸಾವಿರ ಅಡಿಗಳಷ್ಟು ಎತ್ತರದ ಯುದ್ಧಪ್ರದೇಶಗಳಲ್ಲಿ ಹೋರಾಡುತ್ತ ಗಾಯಗೊಂಡು ಮರಳಿ ಬೇಸ್ ಪಾಯಿಂಟ್​ಗಳಿಗೆ ಹೋಗುವಾಗ ಈ ದೇಶದ ಸೈನಿಕ ತನ್ನ ಅಧಿಕಾರಿಗೆ ಸಾಹೇಬ್ ಕ್ಷಮಿಸಿ, ಕೊನೆ ತನಕ ಹೋರಾಡಲು ಆಗಲಿಲ್ಲ ಎಂದು ಹೇಳುವಾಗ ಆತನಲ್ಲಿರುವ ದೇಶಾಭಿಮಾನಕ್ಕೆ ಏನೆಂದು ಹೇಳಲು ಅಕ್ಷರಗಳು ಸಾಲವು. ಯುದ್ಧಕ್ಕೆ ಹೋಗುವಾಗ ಮನೆಯವರಿಗೆ ಒಂದು ಪತ್ರ ಬರೆಯಲು ಸೈನಿಕರಿಗೆ ಅವಕಾಶ ಕೊಡುತ್ತಾರೆ, ಯುದ್ಧಭೂಮಿಯಿಂದ ಜೀವಂತ ಬಂದರೆ ಸೈನಿಕ ಮನೆಯವರನ್ನು ನೋಡಬಹುದು, ಇಲ್ಲದಿದ್ದರೆ ಅವನ ಪತ್ರ ಅವರ ಮನೆ ಕೈ ಸೇರುತ್ತದೆ. ಯುದ್ಧಕ್ಕೂ ಮುಂಚೆ ಮನೆಯವರಿಗೆ ಪತ್ರ ಬರೆಯುವ ಸೈನಿಕ ಎಂದಿಗೂ ತನ್ನ ಮನೆಯವರ ಬಗ್ಗೆ ಚಿಂತಿಸುವುದಿಲ್ಲ, ನಾನು ಯುದ್ಧದಲ್ಲಿ ಸತ್ತರೆ ಕಣ್ಣೀರು ಹಾಕಬೇಡಿ. ನಾನು ಕಾರ್ಗಿಲ್ ಯುದ್ಧಭೂಮಿಯಿಂದ ಮರಳಿ ಬರದೆ ಹೋದರೆ ನನ್ನ ಮಗನನ್ನು ಸೈನ್ಯಕ್ಕೆ ಸೇರಿಸುವ ತಯಾರಿ ಮಾಡಿ ಇಂತಹ ಸಾವಿರಾರು ಉದಾಹರಣೆಗಳು ಕಣ್ಮುಂದೆ ಬರುತ್ತವೆ. ಈ ದೇಶದ ಸೈನಿಕರ ದೇಶಾಭಿಮಾನಕ್ಕೆ ಸರಿಸಾಟಿಯಾಗಿರುವುದು ಯಾವುದೇ ಉದಾಹರಣೆ ಇಲ್ಲ.
ಜಮ್ಮು ಕಾಶ್ಮೀರ ರೈಫಲ್ಸ್ 13 ಬೆಟಾಲಿಯನ್ ಭಾರತೀಯ ಸೈನ್ಯದ ಒಂದು ತುಕಡಿ, ಕಾರ್ಗಿಲ್ ಯುದ್ಧದಲ್ಲಿ ಪಾಯಿಂಟ್ 5140 ಬೆಟ್ಟವನ್ನು ವಶಪಡಿಸಿಕೊಳ್ಳುವ ಜವಾಬ್ದಾರಿ ಹೊತ್ತಿತ್ತು. ಕಮಾಂಡಿಂಗ್ ಆಫೀಸರ್ ವೈ.ಕೆ. ಜೋಶಿ ಅವರು ಎರಡು ಅಧಿಕಾರಿಗಳ ತಂಡವನ್ನು ಮಾಡಿದ್ದರು. ಮೊದಲನೇ ತಂಡವನ್ನು ಕ್ಯಾಪ್ಟನ್ ಸಂಜೀವ ಸಿಂಗ್ ನಡೆಸಿದರು ಇನ್ನೊಂದು ತಂಡವನ್ನು ಮುನ್ನಡೆಸಿದವರು ಕ್ಯಾಪ್ಟನ್ ವಿಕ್ರಮ್ ಭಾತ್ರಾ. ಇಬ್ಬರೂ ವೀರಯೋಧರು 19 ಜೂನ್ 1999 ರಂದು ತಮ್ಮ ತಂಡಗಳನ್ನು ತೆಗೆದುಕೊಂಡು ಬೆಟ್ಟದ ಮೇಲೆ ತೆವಳುತ್ತ ಹೊರಟು 24 ಗಂಟೆಗಳ ಒಳಗಾಗಿ ಪಾಕಿಸ್ತಾನದ ಶತ್ರುಗಳನ್ನು ಬಗ್ಗು ಬಡೆದು ಪಾಯಿಂಟ್ 5140 ಅನ್ನು ಮರಳಿ ವಶಪಡಿಸಿಕೊಂಡಿತ್ತು. ಈ ಕಾರ್ಯಾಚರಣೆಯಲ್ಲಿ ಭಾರತೀಯ ಯಾವುದೇ ಸೈನಿಕರು ಸಾಯಲಿಲ್ಲ. ಅಷ್ಟು ಕರಾರುವಕ್ಕಾಗಿ ಕ್ಯಾಪ್ಟನ್ ಸಂಜೀವ ಜೋಶಿ ಮತ್ತು ಕ್ಯಾಪ್ಟನ್ ಬಾತ್ರಾ ತಂಡಗಳು ಯುದ್ಧತಂತ್ರ ಹೆಣೆದಿದ್ದರು. ಇದೇ ಬೆಟ್ಟವನ್ನು ಮರಳಿ ಪಡೆದ ಸಂದರ್ಭದಲ್ಲಿ ಕ್ಯಾಪ್ಟನ್ ವಿಕ್ರಮ ಭಾತ್ರಾ ಯೇ ದೀಲ್ ಮಾಂಗೆ ಮೋರ್ ಎಂಬುದನ್ನು ಹೇಳಿದ್ದು, ಅರ್ಥಾತ್ ಈ ಒಂದು ಬೆಟ್ಟ ಅಷ್ಟೇ ಸಾಕಾಗಿಲ್ಲ ಇನ್ನೂ ಬೇಕು ಎಂದು ನಮ್ಮ ದೇಶದ ಸೈನಿಕರ ಯುದ್ಧ ಉತ್ಸಾಹ ಅಂತದ್ದು. ಇನ್ನು ಎರಡನೇ ಕಾರ್ಯಾಚರಣೆಗೆ ಒಓ ರೈಫಲ್ಸ್ 13 ಬೆಟಾಲಿಯನ್ ಜುಲೈ 4 ರಂದು ಸಿದ್ದಗೊಂಡಿತ್ತು. ಎರಡನೇ ಕಾರ್ಯಾಚರಣೆ ಪಾಯಿಂಟ್ 4875ನ್ನು ವಶಪಡಿಸಿಕೊಳ್ಳಬೇಕಾಗಿತ್ತು. ತಂಡಗಳು ಸಿದ್ದವಾದವು. ಈ ಬಾರಿ ಕ್ಯಾಪ್ಟನ್ ನವೀನ ನಾಗಪ್ಪ ಅವರಿಗೆ ಕಾರ್ಯಾಚರಣೆ ಮೊದಲ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಕೊಟ್ಟಿದ್ದರು ವೈ.ಕೆ. ಜೋಶಿಯವರು. ಈ ಸಂದರ್ಭದಲ್ಲಿ ನವೀನ ನಾಗಪ್ಪನವರ ಸ್ನೇಹಿತ ಸೈನಿಕನಿಗೆ ಜ್ವರ ಬಂದ ಕಾರಣ ಅವನನ್ನು ಯುದ್ಧಕ್ಕೆ ಅಣಿಮಾಡದಂತೆ ಕ್ಯಾಪ್ಟನ್ ನವೀನ ನಾಗಪ್ಪ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತಾರೆ. ಈ ವಿಷಯ ತಿಳಿದ ಅವರ ಬಡ್ಡಿ ಸೈನಿಕ ಶ್ಯಾಮ್ ಸಿಂಗ್, ನವೀನ ನಾಗಪ್ಪ ಅವರ ಹತ್ತಿರ ಬಂದು ಸಾಬ್ ಒಳ್ಳೆಯ ದಿನಗಳಲ್ಲಿ ನಿಮ್ಮ ಜೊತೆ ಇದ್ದೆ, ಈ ಕೆಟ್ಟ ಸಮಯ ಬಂದಿದೆ. ನಿಮ್ಮೊಬ್ಬರನ್ನೇ ಯುದ್ಧಕ್ಕೆ ಹೇಗೆ ಕಳುಹಿಸಲಿ, ಆಕಸ್ಮಾತ್ ನಿಮಗೆ ಏನಾದರೂ ಆದರೆ ಮನೆಯಲ್ಲಿ ಮತ್ತು ಬೆಟಾಲಿಯನಲ್ಲಿ ನನ್ನ ಮುಖ ಹೇಗೆ ತೋರಿಸಲಿ ಎಂಬುದಾಗಿ ಕೇಳುತ್ತಾನೆ. ಅನಾರೋಗ್ಯ ಇದ್ದರೂ ಯುದ್ಧಕ್ಕೆ ಸಜ್ಜಾಗುವ ನಮ್ಮ ದೇಶದ ಯೋಧರ ಕೆಚ್ಚೆದೆಯ ಕಿಚ್ಚು ನಮಗೆ ಎಂದೆಂದಿಗೂ ಪ್ರೇರಣೆ.
ಕ್ಯಾಪ್ಟನ್ ನವೀನ ನಾಗಪ್ಪ ಅವರ 120 ಜನರ ತಂಡ ದುರ್ಗಾ ಮಾತೆ ಕೀ ಜೈ ಎನ್ನುತ್ತಾ ಪಾಯಿಂಟ್ 4875 ಬೆಟ್ಟವನ್ನು ಜುಲೈ 4 ರ ಸಂಜೆಯಿಂದ ಹತ್ತಲು ಶುರು ಮಾಡಿದರು, ಕಡಿದಾದ ಬೆಟ್ಟಗಳು, ಆಳವಾದ ಪ್ರಪಾತ. ಬೆಟ್ಟದ ಮೇಲೆ ನಮ್ಮದೆ ಬಂಕರಗಳಲ್ಲಿ ಬೀಡು ಬಿಟ್ಟಿರುವ ಪಾಕಿ ಸೈನಿಕರು. ಕಾರ್ಯಾಚರಣೆ ಅಷ್ಟು ಸುಲಭವಾಗಿರಲಿಲ್ಲ. ನಿಧಾನವಾಗಿ ತೆವಳುತ್ತ ರಾತ್ರಿಯಿಡೀ ಬೆಟ್ಟ ಹತ್ತಿತ್ತು ನವೀನ ನಾಗಪ್ಪ ಅವರ ತಂಡ. ಜುಲೈ 5 ರ ಮುಂಜಾವಿನಲ್ಲಿ ನಿಧಾನವಾಗಿ ಬೆಟ್ಟದ ತುದಿಗಿಂತ ಕೆಳಗೆ ಇರುವ ಮೂರು ಬಂಕರಗಳಿಗೆ ಗ್ರನೇಡ್ ಎಸೆದು ಬಂಕರ್​ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಸಮಯದಲ್ಲಿ ಶ್ಯಾಮ್ ಸಿಂಗ್ ಹುತ್ಮಾತರಾಗಿದ್ದರು. ಪಾಯಿಂಟ್ 4875 ಬೆಟ್ಟ ವಶಪಡಿಸಿಕೊಳ್ಳುವ ಕಾರ್ಯಾಚರಣೆ 72 ತಾಸುಗಳಾಗಿದ್ದವು ಯಾವುದೇ ಊಟ, ಆಹಾರವಿಲ್ಲದೆ ಸೈನಿಕರು ಯುದ್ಧದಲ್ಲಿ ನಿರತರಾಗಿದ್ದರು. ಮೂರು ದಿನಗಳ ನಂತರ ವೈ.ಕೆ.ಜೋಶಿಯವರು ಕ್ಯಾಪ್ಟನ್ ನವೀನ ನಾಗಪ್ಪ ಅವರಿಗೆ ಊಟ ಕಳಸಲೇ ಎಂದು ಕೇಳಿದಾಗ, ಊಟ ಇಲ್ಲದೆ ಇರಬಲ್ಲೆವು ಮದ್ದು ಗುಂಡುಗಳನ್ನು ಕಳಿಸಿ ಎಂಬ ಉತ್ತರ ನೀಡುತ್ತಾರೆ. ಅಬ್ಬಾ ದೇಹಕ್ಕೆ ಊಟವಿರದಿದ್ದರೂ ಪರವಾಗಿಲ್ಲ, ನನ್ನ ಬಂದೂಕಿಗೆ ಗುಂಡು ಕೊಡಿ. ಆ ಗುಂಡಿನಿಂದ ಶತ್ರುದೇಶದ ಪಡೆಯನ್ನು ನಿರ್ನಾಮ ಮಾಡಿ ನನ್ನ ಭೂಮಿಯನ್ನು ಮರಳಿ ಪಡೆಯುತ್ತೇನೆ ಎಂಬ ಮನಸ್ಥಿತಿಯ ನಮ್ಮ ದೇಶದ ಸೈನಿಕರಿಗೆ ಸಲಾಂ. ಬೆಟ್ಟದ ಮೇಲಿನ ಕೊನೆಯ ಬಂಕರ್ ವಶಪಡಿಸಿಕೊಳ್ಳುವ ಸಮಯ ಈ ಸಮಯದಲ್ಲಿ ಕ್ಯಾಪ್ಟನ್ ವಿಕ್ರಮ ಭಾತ್ರ ನೇತೃತ್ವದ ತಂಡ ಮದ್ದು ಗುಂಡುಗಳನ್ನು ತೆಗೆದುಕೊಂಡು ಗುಡ್ಡದ ಮೇಲಿನ ನಮ್ಮ ಸೈನಿಕರ ರಕ್ಷಣೆಗೆ ಬಂದಿತ್ತು. ಕೊನೆಯ ದಿನದ ಹೋರಾಟ ಇನ್ನೇನು ಪಾಯಿಂಟ್ 4875 ನಮ್ಮ ವಶವಾಗುವ ಹೊತ್ತು. ಶತ್ರದೇಶದ ಗ್ರೇನೆಡ್ ಭಾರತದ ಸೈನಿಕರ ಬಂಕರ್ ಬಳಿ ಬಂದು ಬೀಳುತ್ತೆ. ಈ ದಾಳಿಯಲ್ಲಿ ಕ್ಯಾಪ್ಟನ್ ನವೀನ ನಾಗಪ್ಪ ಅವರು ಗಾಯಗೊಳ್ಳುತ್ತಾರೆ. ಅವರನ್ನು ಸೇನಾನೆಲೆಗೆ ಕಳಿಸಿ ಕ್ಯಾಪ್ಟನ್ ವಿಕ್ರಮ ಭಾತ್ರಾ ಅವರು ತಂಡವನ್ನು ಮುನ್ನಡೆಸುತ್ತಾ ಪಾಯಿಂಟ್ 4875 ನ್ನು ಮರಳಿ ವಶಪಡಿಸಿಕೊಂಡು ಬೆಟ್ಟದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಒಓ ರೈಫಲ್ಸ್ 13 ನೇ ಬೆಟಾಲಿಯನ್ ಸೈನಿಕರು ಹಾರಿಸುತ್ತಾರೆ. ಬೆಟ್ಟ ಭಾರತದ ಪಾಲಾಯಿತು. ದುರಾದೃಷ್ಟವಶಾತ್ ಕ್ಯಾಪ್ಟನ್ ವಿಕ್ರಮ ಭಾತ್ರಾ ಹುತ್ಮಾತರಾದರು, ಕ್ಯಾಪ್ಟನ್ ನವೀನ ನಾಗಪ್ಪ ಅಂಗವಿಕಲರಾದರು. ಇಬ್ಬರಿಗೂ ಈ ಕಾರ್ಗಿಲ್ ವಿಜಯ ದಿನದಂದು ಸ್ಮರಿಸಿಕೊಳ್ಳಲೇಬೇಕು.
ಕಾರ್ಗಿಲ್ ಕಣಿವೆ, ಟೈಗರ ಹಿಲ್, ಸಿಯಾಚಿನ ಅಂತಹ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ವಿಪರೀತ ಚಳಿ ಇರುತ್ತದೆ. ಸಾಮಾನ್ಯ ಜನ ವಾಸಿಸಲು ಯೋಗ್ಯವಾದ ಸ್ಥಳ ಮತ್ತು ಸಮಯವಲ್ಲ ಅದು. ಸೈನಿಕರು ಶತ್ರುಗಳೊಡನೆ ಯುದ್ಧ ಮಾಡದೆ ಕೇವಲ ಏರುಪೇರಾಗುವ ವಾತಾವರಣದಿಂದಾಗಿ ಪ್ರಾಣ ಕಳೆದುಕೊಂಡವರು ಹೆಚ್ಚಿನ ಜನ ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಚಳಿಗಾಲದಲ್ಲಿ ಎರಡು ಕಡೆಯ ಸೈನಿಕರು ಗಡಿಭಾಗಗಳನ್ನು ಬಿಟ್ಟು ಹೋಗಿ ಚಳಿ ಕಡಿಮೆ ಆದ ಮೇಲೆ ಮರಳಿ ಗಡಿಗೆ ಬರುವಂತಹ ಒಪ್ಪಂದ ಮಾಡಿಕೊಂಡಿತ್ತು. ಇದರೊಡನೆ ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಯುದ್ಧ ಬಿಟ್ಟು ಎರಡು ದೇಶಗಳು ಶಾಂತಿ ಮತ್ತು ಅಭಿವೃದ್ಧಿ ಕಡೆಗೆ ಗಮನ ಕೊಡಬೇಕಂಬ ಆಶಯದೊಂದಿಗೆ ಭಾರತದಿಂದ ಲಾಹೋರ ತನಕ ಬಸ್ ಸಂಚಾರ ಆರಂಭಿಸಿ ಸ್ವತಃ ತಾವೇ ಪಾಕಿಸ್ತಾನದವರೆಗೆ ಹೋಗಿ ಬಂದಿದ್ದರು. ಪಾಕ್ ಪ್ರಧಾನಿ ನವಾಜ್ ಷರೀಫ್​ರೊಡನೆ ಶಾಂತಿ ಮಂತ್ರದೊಡನೆ ಹಸ್ತ ಲಾಘವ ಕೂಡಾ ಮಾಡಿದ್ದರು. ಇತ್ತ ಅಟಲ್ ಬಿಹಾರಿ ವಾಜಪೇಯಿ ಅವರು ಶಾಂತಿ ನೆಲೆಸಲು ಪ್ರಯತ್ನ ಪಟ್ಟರೆ ಅತ್ತ ಪಾಕಿಸ್ತಾನದ ಸೇನಾ ಮುಖ್ಯಸ್ಥ ಪರ್ವೆಜ್ ಮುಶ್ರಫ್ ಪಾಕಿಸ್ತಾನದ ಸ್ಪೆಷಲ್ ಸರ್ವಿಸ್ ಟ್ರೂಪ್ ಮತ್ತು ನಾರ್ಧನ್ ಲೈಟ್ ಇನಫ್ಯಾಂಟ್ರಿ ಸೈನಿಕರನ್ನು ಒಪ್ಪಂದವನ್ನು ಗಾಳಿಗೆ ತೂರಿ ಗಡಿಗೆ ಕಳಿಸಿದ್ದ. ಅವಧಿಯ ಮುಂಚೆಯೇ ಗಡಿಗೆ ಬಂದ ಪಾಕಿಸ್ತಾನದ ಸೈನಿಕರು, ಭಾರತದ ಸುಮಾರು 130 ಬಂಕರಗಳಲ್ಲಿ ನೆಲೆ ನಿಂತಿತ್ತು. ಪಾಕಿಸ್ತಾನದ ಈ ಹೇಯ ಕುತಂತ್ರದ ಅರಿವು ಭಾರತದ ಗಮನಕ್ಕೆ ಬರಲೇ ಇಲ್ಲ. ಕಾರ್ಗಿಲ್ ಯುದ್ಧಕ್ಕೆ ಇದೇ ಮೂಲಕಾರಣ, ಪಾಪಿ ಪಾಕಿಸ್ತಾನದ ಕುತಂತ್ರದಿಂದ ಕಾರ್ಗಿಲ್ ಅಲ್ಲಿ ಯುದ್ಧ ನಡೆಸಬೇಕಾಯಿತು. ಈ ಯುದ್ಧದಲ್ಲಿ ಭಾರತದ 527 ವೀರಯೋಧರು ಭಾರತಕ್ಕಾಗಿ ವೀರಮರಣ ಹೊಂದಬೇಕಾಯಿತು.
ಕಾರ್ಗಿಲ್ ಭಾಗದಲ್ಲಿ ಒಪ್ಪಂದವನ್ನು ಮುರಿದು ಯುದ್ಧನಿಯಮದ ಸಮಯಕ್ಕಿಂತ ಬೇಗನೆ ಗಡಿಯೊಳಗೆ ಬಂದು ಕೂತ ಪಾಕಿಸ್ತಾನದ ಈ ಹೀನ ಕುತಂತ್ರದ ಹಿಂದೆ ಸೇಡಿನ ಪ್ರತಿಕಾರ ಇತ್ತು ಎಂಬುದನ್ನು ಇಡೀ ಜಗತ್ತೇ ಹೇಳುತ್ತದೆ. ಕಾಶ್ಮೀರವನ್ನು ಕಬಳಿಸಬೇಕೆಂಬ ಅನೇಕ ದಶಕಗಳ ಕನಸು ಪಾಕಿಸ್ತಾನಕ್ಕೆ ನನಸಾಗಿಲ, ಆಗುವುದೂ ಇಲ್ಲ, ಅದು ಬೇರೆ ಮಾತು. ಭಾರತದ ವಿರುದ್ಧ ಪಾಕಿಸ್ತಾನ ಮಾಡಿದ ಯಾವುದೇ ಯುದ್ಧದಲ್ಲಿಯೂ ಕೂಡಾ ಪಾಕಿಸ್ತಾನ ವಿಜಯ ಸಾಧಿಸಲಿಲ್ಲ. 1971 ರಲ್ಲಿ ನಡೆದ ಬಾಂಗ್ಲಾ ವಿಮೋಚನೆಯ ಯುದ್ಧದಲ್ಲಿ ಭಾರತ ವಿಜಯಶಾಲಿ ಆಗಿ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿತ್ತು. ಇದಷ್ಟೇ ಅಲ್ಲದೆ 1971 ಯುದ್ಧದಲ್ಲಿ ಪಾಕಿಸ್ತಾನದ ಸುಮಾರು 90,000 ಸೈನಿಕರು ಭಾರತ ಸೇನೆ ಪರಾಕ್ರಮದ ಮುಂದೆ ಮುಂಡಿಯೂರಿತ್ತು. ಭಾರತದ ಶಕ್ತಿಯ ಮುಂದೆ ಆಗ ಪಾಕಿಸ್ತಾನದ ಬಲವೇ ಉಡುಗಿಹೋಗಿತ್ತು. ಮತ್ತೆ 1983 ರಲ್ಲಿ ಸಿಯಾಚಿನ ಗ್ಲೇಜಿಯರ್ ಕದನದಲ್ಲಿ ಪಾಕಿಸ್ತಾನ ಹೂಡಿದ ಸಂಚನ್ನು ಭಾರತೀಯ ಸೇನೆ ಆಪರೇಷನ್ ಮೇಘಧೂತ ಮೂಲಕ ವಿಫಲಗೊಳಿಸಿತ್ತು. ಈ ಸಮಯದಲ್ಲಿ ಪಾಕಿಸ್ತಾನದ ಬ್ರೀಗೆಡಿಯರ್ ಆಗಿದ್ದವನೇ ಪರ್ವೆಜ್ ಮುಶ್ರಫ್. ಪಾಕಿಸ್ತಾನದ ಸೇನಾ ದಂಡನಾಯಕನಾದ ಮೇಲೆ ಪರ್ವೆಜ್ ಮುಶ್ರಫ್ ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಹಾಗಾಗಿ 1999 ರಲ್ಲಿ ಒಪ್ಪಂದವನ್ನು ಮುರಿದು ಪಾಕಿ ಸೈನಿಕರನ್ನು ಗಡಿಗೆ ಕಳಿಸಿದ. ಕಾರ್ಗಿಲ್ ಯುದ್ಧ ಅಷ್ಟು ಸುಲಭವಾಗಿರಲಿಲ್ಲ. ಅದಾಗಲೇ ಪಾಕಿಸ್ತಾನದ ಸೈನಿಕರು ಕಾರ್ಗಿಲ್ ಪ್ರದೇಶದ ಎತ್ತರದ ಬೆಟ್ಟದ ಪ್ರದೇಶದಲ್ಲಿ ಭಾರತೀಯ ಬಂಕರುಗಳಲ್ಲಿ ನೆಲೆ ನಿಂತಿದ್ದರು. ಇತ್ತ ಭಾರತೀಯ ಸೇನೆ ಪಾಕಿಸ್ತಾನದ ಸೈನಿಕರನ್ನು ಓಡಿಸಿಬೇಕೆಂದರೆ ಭಾರತೀಯ ಸೇನೆ ಕೂಡಾ ಬೆಟ್ಟದ ಮೇಲೆ ಹೋಗಲೇಬೇಕು. ಬೆಟ್ಟ ಹತ್ತುಬೇಕಾದಾಗ ಭಾರತೀಯ ಸೈನಿಕರು ಪಾಕಿಸ್ತಾನದ ಗುಂಡುಗಳಿಗೆ ಸುಲಭವಾಗಿ ತುತ್ತಾಗುವ ಸನ್ನಿವೇಶ. ಭಾರತೀಯ ವಾಯುದಳದ ಮೂಲಕ ವೈಮಾನಿಕ ದಾಳಿ ಮಾಡಲು ಪೂರಕ ಹವಾಮಾನ ವಾತಾವರಣವಿರಲಿಲ್ಲ. ಮೇ ತಿಂಗಳು ಮುಗಿಯುವರೆಗೆ ಪಾಕಿಸ್ತಾನ ಸೇನೆ ಯುದ್ಧದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಜೂನ್ ಮೊದಲ ವಾರದಲ್ಲಿ ಭಾರತೀಯ ಸೇನೆಯ ಬೋಫೋರ್ಸ್ ಫಿರಂಗಿಗಳು ಕಾರ್ಗಿಲ್ ಪ್ರದೇಶದ ಬೆಟ್ಟದ ಕೆಳಗೆ ಬೀಡುಬಿಟ್ಟವು ಅಲ್ಲಿಂದ ಯುದ್ಧದ ಸನ್ನಿವೇಶವೇ ಬದಲಾಯಿತು. ಬೆಟ್ಟದ ಕೆಳಗಡೆಯಿಂದ ಬೋಫೋರ್ಸ್ ಫಿರಂಗಿಗಳು ಬಾಂಬ್ ದಾಳಿ ಶುರುಮಾಡಿದವು. ಅತ್ತ ಪಾಕಿಸ್ತಾನದ ಸೈನಿಕರ ಎದೆಯಲ್ಲಿ ನಡುಕ ಶುರುವಾಯಿತು. ಕೆಳಗಡೆಯಿಂದ ಫಿರಂಗಿಗಳು ದಾಳಿ ಮಾಡುವಾಗ ಮತ್ತೊಂದು ಕಡೆಯಿಂದ ಭಾರತೀಯ ಯೋಧರು ಬೆಟ್ಟಗಳನ್ನು ತೆವಳುತ್ತ ಹತ್ತಲು ಶುರುಮಾಡಿದ್ದರು. ಭಾರತದ ರಕ್ಷಣೆಯ ಹೊಣೆ ಹೊತ್ತು ನೌಕಾದಳ, ವಾಯುದಳ, ಭೂಸೇನೆ ಮೂರು ದಳಗಳು ಕಾರ್ಗಿಲ್ ಮರಳಿ ಪಡೆಯುವ ಸಾಹಸಕ್ಕೆ ಕಟಿಬದ್ಧವಾಗಿದ್ದವು.
ಕಾರ್ಗಿಲ್ ಪ್ರದೇಶದ ಒಂದೊಂದೆ ಪರ್ವತ ಶ್ರೇಣಿಗಳು ಭಾರತದ ವಶವಾಗತೊಡಗಿದವು. ಭಾರತೀಯ ಸೈನಿಕರ ಶಕ್ತಿ, ಯುಕ್ತಿ, ಪರಾಕ್ರಮಕ್ಕೆ ಪಾಕ್ ಸೈನಿಕರು ತತ್ತರಿಸಿ ಹೋಗಿದ್ದರು. ಅನೇಕ ತಂತ್ರಗಳನ್ನು ಹೆಣೆದು ಭಾರತ ಕಾರ್ಗಿಲ್ ಪ್ರದೇಶದ ಟೈಗರ್ ಹಿಲ್, ದ್ರಾಸ್ ಸೆಕ್ಟರ್, ಟೊಲೋಲಿಂಗ್ ಪರ್ವತ, ಪಾಯಿಂಟ್ 5845, ಪಾಯಿಂಟ್ 4875 ಹೀಗೆ ಪಾಕಿಸ್ತಾನ ವಶಪಡಿಸಿಕೊಂಡ ಎಲ್ಲ ಜಾಗಗಳನ್ನು ಮರಳಿ ಪಡೆದು ಕಾರ್ಗಿಲ್ ಪ್ರದೇಶದ ಮೇಲೆ ಭಾರತದ ಬಾವುಟವನ್ನು ಹೆಮ್ಮೆಯಿಂದ ಭಾರತೀಯ ವೀರಪುತ್ರರು ಹಾರಿಸಿದರು. ಆಪರೇಷನ್ ವಿಜಯ ಯಶ್ವಸಿಯಾಗಿತ್ತು. ಭಾರತ ಕಾರ್ಗಿಲ್ ಯುದ್ದವನ್ನು ಗೆದ್ದಿತ್ತು. ಒಟ್ಟಾರೆ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ಕೆಚ್ಚದೆಯಿಂದ ಹೋರಾಡಿದರು. ಪ್ರತಿವರ್ಷ ಜುಲೈ 26 ರಂದು ಭಾರತ ಭೂಮಿಗೆ ಮಡಿದ ವೀರರನ್ನು ಸ್ಮರಿಸಿಕೊಂಡು ಮುಂದಿನ ಪೀಳಿಗೆಗೆ ನಮ್ಮ ಸೇನೆಯ ಪರಾಕ್ರಮ ಮತ್ತು ಶಕ್ತಿಯನ್ನು ತಿಳಿಸುವ ಪ್ರಯತ್ನ ನಿರಂತರವಾಗಿರಲಿ.
ಭಾರತ ಭೂಮಿಯು ಕ್ಷಾತ್ರತೇಜ ಪರಂಪರೆಯ ಭೂಮಿ ಭಾರತೀಯ ಯೋಧರು ಶತ್ರುಗಳಿಗೆ ಬೆನ್ನು ತೋರಿಸುವವರಲ್ಲ, ಎದೆಯೊಡ್ಡಿ ವೀರಾವೇಷದಿಂದ ಹೋರಾಡುವ ಛಾತಿಯುಳ್ಳವರು. ಇತಿಹಾಸದ ಪುಟಗಳಿಂದ, ಕಾರ್ಗಿಲ್ ಯುದ್ಧ ಇವೆಲ್ಲವೂ ಉದಾಹರಣೆಗಳು. ಈ ಎಲ್ಲ ಸಂಗತಿಗಳು ನಮಗೆ ದಿನನಿತ್ಯ ಪ್ರೇರಣೆಯಾಗಲಿ ಮನೆಯ ಮಕ್ಕಳಿಗೆ, ಶಾಲೆಯಲ್ಲಿ ನಮ್ಮ ಮನಸ್ಸುಗಳಲ್ಲಿ ಕಾರ್ಗಿಲ್ ಯುದ್ಧ ನೆನಪುಗಳು ಹಸಿರಾಗಲಿ. ಭಾರತ ಮಾತೆಗಾಗಿ ಜೀವ ತೆತ್ತವರ ಸ್ಮರಣೆಯಾಗಲಿ.
(ಲೇಖಕರು ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷರು)
ಪಾಕ್​ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
