ಬೆಂಗಳೂರು/ಭರೂಚ್/ಖಾಂಡ್ವಾ/ತಿರುವನಂತಪುರ:ತಮಿಳುನಾಡಿನ ಊಟಿ ಬಲಿ ಹೆಲಿಕಾಪ್ಟರ್ ಪತನದಿಂದ ಬುಧವಾರ ಸಾವನ್ನಪ್ಪಿದ ಮೂರೂ ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ರಾವತ್ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಪ್ರಸಾರ ಮಾಡಿದ ಆರೋಪದ ಸಂಬಂಧ ಗುಜರಾತ್, ಮಧ್ಯಪ್ರದೇಶದಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ. ಕರ್ನಾಟಕದ ಮಂಗಳೂರಿನಲ್ಲಿ ಮೂವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ಮಧ್ಯೆ, ಮಲಯಾಳಂ ಸಿನಿಮಾ ನಿರ್ದೇಶಕ ಅಲಿ ಅಕ್ಬರ್ ಈ ಅವಹೇಳನ್ನು ಖಂಡಿಸಿ ಹಿಂದು ಧರ್ಮಕ್ಕೆ ಪತ್ನಿ ಸಹಿತ ಮತಾಂತರ ಆಗುವುದಾಗಿ ಹೇಳಿದ್ದಾರೆ.
ಆರೋಪಿಗಳು ಬೆಂಗಳೂರು, ಕಾರ್ಕಳದವರು:ಜನರಲ್ ಬಿಪಿನ್ ರಾವತ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಮೂವರ ವಿರುದ್ಧ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿ.ಕೆ. ವಸಂತ ಕುಮಾರ್, ಸುಬ್ಬರಾವ್ ರವಿಕುಮಾರ್ ಫೇಸ್​ಬುಕ್ ಖಾತೆಯಿಂದ ರಾವತ್ ಹಾಗೂ ಶ್ರೀನಿವಾಸ್ ಕಾರ್ಕಳ ಹೆಸರಿನ ಫೇಸ್​ಬುಕ್ ಖಾತೆಯಿಂದ ರಾವತ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿದೆ. ಇದು ಜನಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ಹಾಗೂ ಭೀತಿ ಹುಟ್ಟಿಸುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ. ಈ ಫೇಸ್​ಬುಕ್ ಖಾತೆಗಳು ಅಸಲಿಯೇ ಅಥವಾ ನಕಲಿಯೆ? ಎಲ್ಲಿಂದ ಈ ಖಾತೆಗಳನ್ನು ತೆರೆಯಲಾಗಿದೆ? ಎಂಬಿತ್ಯಾದಿ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪಿಗಳ ಪೈಕಿ ಒಬ್ಬರು ಬೆಂಗಳೂರು, ಇನ್ನೊಬ್ಬರು ಕಾರ್ಕಳದವರು ಎಂಬುದು ಗೊತ್ತಾಗಿದೆ ಎಂದವರು ತಿಳಿಸಿದ್ದಾರೆ. ಮಂಗಳೂರಿನ ಸುಶಾಂತ್ ದೂರು ನೀಡಿದ್ದಾರೆ.
ಗುಜರಾತ್, ಮಧ್ಯಪ್ರದೇಶದಲ್ಲಿ ಇಬ್ಬರು ಆರೋಪಿಗಳ ಸೆರೆ:ಬಿಪಿನ್ ರಾವತ್ ವಿರುದ್ಧ ಅವಹೇಳನಕಾರಿ ಸಂದೇಶ ಪ್ರಸಾರ ಮಾಡಿದ ಆರೋಪದ ಮೇಲೆ ಗುಜರಾತ್​ನ ಭರೂಚ್ ಜಿಲ್ಲೆಯಲ್ಲಿ ಫಿರೋಜ್ ದಿವಾನ್ ಎಂಬುವನನ್ನು ಶುಕ್ರವಾರ ಬಂಧಿಸಲಾಗಿದೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ದುರ್ಗೆಶ್ ವಾಸ್ಕೆಲೆಯನ್ನು ದಸ್ತಗಿರಿ ಮಾಡಲಾಗಿದೆ.
ಕಟ್ಟಿನಿಟ್ಟಿನ ಕ್ರಮಕ್ಕೆ ಸೂಚನೆ:ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥ, ಹೆಮ್ಮೆಯ ಸೇನಾನಿ ಜನರಲ್ ಬಿಪಿನ್ ರಾವತ್ ಅಕಾಲಿಕ ಸಾವನ್ನು ಸಂಭ್ರಮಿಸಿರುವುದು ದೇಶದ್ರೋಹಿ ಕೃತ್ಯ. ದಿವಂಗತರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಕೃತ ಸಂದೇಶ ಹಂಚುವುದನ್ನು ಸಹಿಸಲಾಗದು. ಇಂಥ ವಿಕೃತ ಮನಸ್ಸಿನವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ. ದೇಶ ವಿರೋಧಿಗಳು, ದುಷ್ಕರ್ವಿುಗಳ ವಿಳಾಸಗಳನ್ನು ಪತ್ತೆ ಹಚ್ಚಿ, ವಿಕೃತ ಮನಸುಗಳಿಗೆ ತಕ್ಕ ಶಿಕ್ಷೆಯಾಗುವ ರೀತಿಯಲ್ಲಿ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕು ಎಂದುಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್​ಗೆ ನಿರ್ದೇಶನ ನೀಡಿದ್ದಾರೆ.
ರಾವತ್ ಚಿತಾಭಸ್ಮ ಹರಿದ್ವಾರದಲ್ಲಿ ವಿಸರ್ಜನೆ:ದಿವಂಗತ ಜನರಲ್ ರಾವತ್ ದಂಪತಿಯ ಚಿತಾಭಸ್ಮವನ್ನು ಅವರ ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ಶನಿವಾರ ಹರಿದ್ವಾರದಲ್ಲಿ ಗಂಗೆಯ ಮಡಿಲಲ್ಲಿ ವಿಸರ್ಜಿಸಿದರು. ದೆಹಲಿ ಕಂಟೋನ್ಮೆಂಟ್ ಪ್ರದೇಶದ ಬ್ರಾರ್ ಸ್ಕೆ್ವೕರ್ ಚಿತಾಗಾರಕ್ಕೆ ಬೆಳಗ್ಗೆ ತೆರಳಿದ ಕೃತಿಕಾ ಮತ್ತು ತಾರಿಣಿ, ಅಲ್ಲಿಂದ ಚಿತಾಭಸ್ಮವನ್ನು ಸ್ವೀಕರಿಸಿ ಹರಿದ್ವಾರಕ್ಕೆ ತೆರಳಿದ್ದರು.
ಅಲಿ ಅಕ್ಬರ್ ಹಿಂದು ಧರ್ಮಕ್ಕೆ:ಬಿಪಿನ್ ರಾವತ್ ನಿಧನಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟವಾದ ಅವಹೇಳನಕಾರಿ ಬರಹ ಖಂಡಿಸಿ ಹಿಂದು ಧರ್ಮಕ್ಕೆ ಮತಾಂತರ ಆಗಲು ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ನಿರ್ಧರಿಸಿದ್ದಾರೆ.‘ನಾನು ನನ್ನ ಪತ್ನಿ ಹಿಂದು ಧರ್ಮಕ್ಕೆ ಮತಾಂತರ ಆಗುತ್ತೇವೆ. ಬಿಪಿನ್ ರಾವತ್ ಘಟನೆಯಿಂದ ನಮಗೆ ನೋವಾಗಿದೆ. ಇನ್ನು ಮುಂದೆ ಮುಸ್ಲಿಂ ಧರ್ಮದಲ್ಲಿನ ನಂಬಿಕೆಗಳನ್ನು ಕೈಬಿಡುತ್ತೇವೆ’ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅವರ ಅಕೌಂಟ್​ನಲ್ಲಿ ಕಣ್ಮರೆಯಾಗಿದೆ. ರಾವತ್ ಸಾವನ್ನು ಸಂಭ್ರಮಿಸುವವರನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡಬೇಕೆಂದು ಅಕ್ಬರ್ ಆಗ್ರಹಿಸಿದ್ದಾರೆ.
ಆರು ರಕ್ಷಣಾ ಸಿಬ್ಬಂದಿ ಗುರುತು ಪತ್ತೆ:ಕಾಪ್ಟರ್ ದುರಂತದಲ್ಲಿ ಮಡಿದವರ ಪೈಕಿ ಆರು ರಕ್ಷಣಾ ಸಿಬ್ಬಂದಿಯ ಗುರುತು ಡಿಎನ್​ಎ ಪರೀಕ್ಷೆ ಮೂಲಕ ಶನಿವಾರ ಪತ್ತೆಯಾಗಿದೆ. ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಜ್ಯೂನಿಯರ್ ವಾರಂಟ್ ಆಫೀಸರ್ ಪ್ರದೀಪ್, ವಿಂಗ್ ಕಮಾಂಡರ್ ಪಿ.ಎಸ್.ಚೌಹಾಣ್, ಜ್ಯೂನಿಯರ್ ವಾರಂಟ್ ಆಫೀಸರ್ ರಾಣಾ ಪ್ರತಾಪ ದಾಸ್, ಲ್ಯಾನ್ಸ್ ನಾಯಕ್ ಬಿ.ಸಾಯಿತೇಜಾ ಮತ್ತು ಸ್ಕಾ್ವಡ್ರನ್ ಲೀಡರ್ ಕುಲದೀಪ್ ಸಿಂಗ್ ಪಾರ್ಥಿವ ಶರೀರಗಳನ್ನು ಅವರ ಊರುಗಳಿಗೆ ರವಾನಿಸಲಾಗಿದೆ.
ಗುರುತು ಪತ್ತೆಯಾಗಿಲ್ಲ:ಲೆ.ಕರ್ನಲ್ ಹರ್​ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್ ಮತ್ತು ಹವಿಲ್ದಾರ್ ಸತ್ಪಾಲ್ ಅವರ ಪಾರ್ಥಿವ ಶರೀರಗಳ ಗುರುತು ಪತ್ತೆಯಾಗಬೇಕಷ್ಟೆ. ಒಟ್ಟು 13 ಜನ ಮೃತಪಟ್ಟಿದ್ದರು.
ಜನರಲ್ ಬಿಪಿನ್ ರಾವತ್ ನಿಧನದಿಂದ ತೆರವಾಗಿರುವ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಸ್ಥಾನಕ್ಕೆ ಉತ್ತರಾಧಿಕಾರಿ ಯಾರು? ಅವರ ನೇಮಕ ಪ್ರಕ್ರಿಯೆ ಯಾವ ರೀತಿ ಇರಲಿದೆ ಎಂಬಿತ್ಯಾದಿ ವಿಚಾರಗಳು ಈಗ ಮುನ್ನೆಲೆಗೆ ಬಂದಿವೆ. ಹೊಸ ಸಿಡಿಎಸ್ ನೇಮಕಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ಸಿಗಲಿದೆ. ಈ ಹೊಣೆಗಾರಿಕೆ ನಿಭಾಯಿಸಲು ನಿವೃತ್ತರನ್ನೂ ಪರಿಗಣಿಸುವ ಸಾಧ್ಯತೆ ಇದೆ. ಅದೇ ರೀತಿ ಈಗ ಸೇನೆಯಲ್ಲಿ ಪ್ರಮುಖ ಹೊಣೆಗಾರಿಕೆ ಇರುವವರನ್ನೂ ಪರಿಗಣಿಸಬಹುದು ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೇನೆಯಲ್ಲಿ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸಿದ ಸೇವಾ ಹಿರಿತನ ಆಧರಿಸಿ ಮುಂಬಡ್ತಿ ನೀಡಬಹುದು. ಆದರೆ, ಸರ್ಕಾರದ ತೀರ್ಮಾನ ಇಲ್ಲಿ ಪ್ರಮುಖ ಪಾತ್ರವಹಿಸಲಿದೆ. ಈ ಹೊಸ ಹುದ್ದೆಯನ್ನು ಸಂಸತ್ತಿನಲ್ಲಿ ಕಾನೂನು ರೂಪಿಸಿ ಸೃಜಿಸಲಾಗಿದೆ. ಇದಕ್ಕಾಗಿ ಸರ್ಕಾರ ಎಕ್ಸಿಕ್ಯೂಟಿವ್ ಆದೇಶವನ್ನು ಪ್ರಕಟಿಸಿತ್ತು. ಅದು ಈ ಹೊಣೆಗಾರಿಕೆ ನಿರ್ವಹಿಸಲು ನಿವೃತ್ತರನ್ನು ಕರೆಯಿಸಿಕೊಂಡರೂ ಅಚ್ಚರಿ ಇಲ್ಲ. ಸರ್ಕಾರದ ತೀರ್ವನವನ್ನು ಯಾರೂ ಪ್ರಶ್ನಿಸಲಾಗದು ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.
ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು ಈಗಿರುವ ಗುಂಪಿನಲ್ಲಿ ಸೇವಾ ಹಿರಿತನ ಹೊಂದಿದವರು. ಅವರ ಅಧಿಕಾರಾವಾಧಿ 2022ರ ಏಪ್ರಿಲ್​ಗೆ ಕೊನೆಯಾಗಲಿದೆ. ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಅವರ ಅಧಿಕಾರಾವಧಿ 2023ರಲ್ಲಿ ಕೊನೆಗೊಳ್ಳಲಿದೆ. ತಮಿಳುನಾಡಿನಲ್ಲಿ ಕಾಪ್ಟರ್ ದುರಂತ ಆಗದೇ ಇರುತ್ತಿದ್ದರೆ 2023ರ ಡಿಸೆಂಬರ್ ತನಕ ಜನರಲ್ ರಾವತ್ ಅವರೇ ಮುಂದುವರಿದಿರುತ್ತಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
