ನವದೆಹಲಿ:ವಿಪಕ್ಷಗಳ ಅವಿಶ್ವಾಸ ನಿರ್ಣಯದ ವಿರುದ್ಧ ಗೆಲುವು ಸಾಧಿಸಿದ ಮಾರನೇ ದಿನವೇ ಕೇಂದ್ರ ಸರ್ಕಾರ ಕ್ರಿಮಿನಲ್ ಕಾನೂನುಗಳಿಗೆ ಸಂಬಂಧಿಸಿದ ಮೂರು ವಿಧೇಯಕಗಳನ್ನು ಸಂಸತ್ತಿನಲ್ಲಿ ಮಂಡಿಸುವ ಮೂಲಕ ಹೊಸ ಬದಲಾವಣೆಗೆ ನಾಂದಿ ಹಾಡಿದೆ.
1860ರ ಭಾರತೀಯ ದಂಡ ಸಂಹಿತೆ (ಐಕಇ) ಬದಲು ಭಾರತೀಯ ನ್ಯಾಯ ಸಂಹಿತೆ, ಕ್ರಿಮಿನಲ್ ಪೊ›ಸೀಜರ್ ಕೋಡ್ (ಇಕಇ) ಬದಲಿಗೆ ಭಾರತೀಯ ನಾಗರಿಕ ಸುರಕ್ಷತೆ ಸಂಹಿತೆ ಮತ್ತು ಮತ್ತು ಭಾರತೀಯ ಸಾಕ್ಷ್ಯಾಧಾರ ಕಾಯ್ದೆ (ಎವಿಡೆನ್ಸ್ ಆಕ್ಟ್) ಬದಲಿಗೆ ಭಾರತೀಯ ಸಾಕ್ಷ್ಯ ಕಾಯ್ದೆ ಎಂಬ ಹೊಸ ಕಾನೂನುಗಳನ್ನು ಪರಿಚಯಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಈ ಮೂರು ಮಸೂದೆಗಳನ್ನು ಮಂಡಿಸಿದ್ದಾರೆ. ಈ ಬದಲಾವಣೆಗಳು ದೇಶದ ಅಪರಾಧ ಮತ್ತು ಶಿಕ್ಷೆ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸುವ ನಿರೀಕ್ಷೆಯಿದೆ. ಸದ್ಯ ವಿಧೇಯಕವನ್ನು ಸಂಸತ್ತಿನ ಸೆಲೆಕ್ಟ್ ಕಮಿಟಿಗೆ (ತಜ್ಞರ ಸ್ಥಾಯಿ ಸಮಿತಿ) ಶಿಫಾರಸು ಮಾಡಲಾಗಿದ್ದು, ತಿದ್ದುಪಡಿಗಳ ಅಗತ್ಯವಿದ್ದಲ್ಲಿ ಈ ಸಮಿತಿ ಕೇಂದ್ರಕ್ಕೆ ವರದಿ ನೀಡಲಿದೆ.
ಪ್ರತ್ಯೇಕತೆ, ಸಶಸ್ತ್ರ ದಂಗೆ, ವಿಧ್ವಂಸಕ ಚಟುವಟಿಕೆ, ಪ್ರತ್ಯೇಕತಾವಾದಿ ಚಟುವಟಿಕೆ ಅಥವಾ ಸಾರ್ವಭೌಮತ್ವ, ಭಾರತದ ಏಕತೆ, ಸಮಗ್ರತೆಗೆ ಅಪಾಯ ಉಂಟುಮಾಡುವ ಅಪರಾಧಗಳನ್ನು ಪರಿಷ್ಕೃತ ಕಾನೂನುಗಳಲ್ಲಿ ಸೇರಿಸಲಾಗಿದೆ. ದೇಶದ್ರೋಹ ಕಾನೂನನ್ನು (ಐಪಿಸಿ ಸೆಕ್ಷನ್ 124-ಎ) ರದ್ದುಗೊಳಿಸ ಲಾಗಿದೆ ಎಂದು ಎಂದು ಘೊಷಿಸಿರುವ ಗೃಹ ಸಚಿವರು, ಸೆಕ್ಷನ್ 150ನ್ನು ಪರಿಚಯಿಸುವ ಮೂಲಕ ದೇಶದ್ರೋಹ ಎಂದು ಪರಿಗಣಿಸಲಾಗುವ ಅಪರಾಧಗಳನ್ನು ಈ ಸೆಕ್ಷನ್ ವ್ಯಾಪ್ತಿಯಡಿಯಲ್ಲಿ ತರಲಾಗಿದೆ ಎಂದು ಹೇಳಿದ್ದಾರೆ.
ಐಪಿಸಿ ಬದಲಿಗೆ ಹೊಸದಾಗಿ ಬರಲಿರುವ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಲ್ಲಿ ಭಯೋತ್ಪಾದಕ ಕೃತ್ಯ ಮತ್ತು ಸಂಘಟಿತ ಅಪರಾಧಗಳನ್ನು ಸೇರಿಸಲಾಗಿದೆ. ಹಳೆಯ ಐಪಿಸಿ 511 ಸೆಕ್ಷನ್​ಗಳನ್ನು ಹೊಂದಿದ್ದು, ಹೊಸ ಕಾಯ್ದೆಯಲ್ಲಿ 356 ಸೆಕ್ಷನ್​ಗಳು ಇರಲಿವೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
ದೇಶದ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಅಂಶಗಳನ್ನು ಸೆಕ್ಷನ್ 145ರಿಂದ 156ವರೆಗಿನ ಸೆಕ್ಷನ್​ಗಳಲ್ಲಿ ಪರಿಚಯಿಸಲಾಗಿದೆ. ಭಾರತದ ವಿರುದ್ಧ ಯುದ್ಧ ಅಥವಾ ಯುದ್ಧಕ್ಕೆ ಯತ್ನ ಅಥವಾ ಯುದ್ಧಕ್ಕೆ ಪ್ರೇರೇಪಿಸುವುದು, ಶಿಕ್ಷಾರ್ಹ ಅಪರಾಧಗಳನ್ನು ಮಾಡಲು ಪಿತೂರಿ ಹೂಡುವುದು ಭಾರತದ ವಿರುದ್ಧ ಯುದ್ಧ ಮಾಡುವ ಉದ್ದೇಶದಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ಇತ್ಯಾದಿ ಅಪರಾಧಗಳ ಬಗ್ಗೆ ಈ ಸೆಕ್ಷನ್​ಗಳಲ್ಲಿ ರ್ಚಚಿಸಲಾಗಿದೆ. ಸಾರ್ವಜನಿಕ ಸೇವೆ ಸಲ್ಲಿಸುವ ವ್ಯಕ್ತಿ ಯುದ್ಧಕೈದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಆತ ಉಗ್ರ ಶಿಕ್ಷೆಗೆ ಗುರಿಯಾಗುತ್ತಾನೆ. ತಮ್ಮ ನಿರ್ಲಕ್ಷದಿಂದ ಕೈದಿ ತಪ್ಪಿಸಿಕೊಳ್ಳಲು ಅಥವಾ ತಪ್ಪಿಸಿಕೊಳ್ಳಲು ಸಹಾಯ ಮಾಡುವುದು, ರಕ್ಷಿಸುವುದು ಅಥವಾ ಆಶ್ರಯ ನೀಡುವ ಅಪರಾಧಗಳೂ ಹೊಸ ಮಸೂದೆಯಲ್ಲಿ ಒಳಗೊಂಡಿದೆ. ದೇಶದ ವಿರುದ್ಧದ ಅಪರಾಧಗಳಿಗೆ 3ರಿಂದ 10 ವರ್ಷಗಳವರೆಗೆ ಜೈಲುಶಿಕ್ಷೆ ಇರಲಿದೆ.
ಗುಂಪಿನಿಂದಾದ ಹತ್ಯೆ ಪ್ರಕರಣಗಳಲ್ಲಿ ಮರಣದಂಡನೆವರೆಗೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಅವರನ್ನು ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ವಿಚಾರಣೆ ನಡೆಸುವುದಾಗಿ ಅಮಿತ್ ಷಾ ಹೇಳಿದ್ದಾರೆ. ಗುಂಪು ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಕನಿಷ್ಠ 7 ವರ್ಷದಿಂದ ಮರಣದಂಡನೆವರೆಗೆ ಶಿಕ್ಷೆ ಇರಲಿದೆ. ಕೊಲೆ ಪ್ರಕರಣಗಳಲ್ಲಿ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಗುಂಪು ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಹುಟ್ಟಿದ ಸ್ಥಳ, ಭಾಷೆ, ವೈಯಕ್ತಿಕ ನಂಬಿಕೆ ಅಥವಾ ಯಾವುದೇ ಇತರ ಆಧಾರದ ಮೇಲೆ ಹತ್ಯೆ ನಡೆಸಿದ ಸಂದರ್ಭದಲ್ಲಿ ಅಂಥ ಗುಂಪಿನ ಪ್ರತಿ ಸದಸ್ಯನಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಮಸೂದೆಯಲ್ಲಿ ದಾಖಲಿಸಲಾಗಿದೆ.
ಸಾರ್ವಜನಿಕ ಸೇವೆಯಲ್ಲಿರುವಾತ ವ್ಯಕ್ತಿಯೊಬ್ಬನಿಗೆ ಹಾನಿ ಮಾಡುವ ಉದ್ದೇಶದಿಂದ ಸಾರ್ವಜನಿಕ ಸೇವಕ ಕಾನೂನನ್ನು ಉಲ್ಲಂಘಿಸುವುದು, ಕಾನೂನಿನ ಅಡಿಯಲ್ಲಿ ನಿರ್ದೇಶನವನ್ನು ಪಾಲಿಸದಿರುವುದು, ಸಂತ್ರಸ್ತನಿಗೆ ಸೂಕ್ತ ಚಿಕಿತ್ಸೆ ನೀಡದಿರುವುದು, ತಪ್ಪು ದಾಖಲೆ ಸೃಷ್ಟಿಸುವುದು, ಕಾನೂನುಬಾಹಿರವಾಗಿ ವ್ಯವಹಾರದಲ್ಲಿ ತೊಡಗುವುದು, ಅಕ್ರಮ ಆಸ್ತಿ ಖರೀದಿಯಂತಹ ಅಪರಾಧಗಳನ್ನು ಎಸಗಿದರೆ ಮೂರು ತಿಂಗಳಿಂದ ಮೂರು ವರ್ಷಗಳವರೆಗೆ ಶಿಕ್ಷೆ ಗುರಿಯಾಗುತ್ತಾನೆ ಎಂದು ಹೊಸ ಕಾನೂನು ಹೇಳುತ್ತದೆ.
ಬ್ರಿಟಿಷರ ಕಾಲದ ಕಾನೂನುಗಳನ್ನು ಪರಿಷ್ಕರಿಸಿ ಹೊಸ ಕಾನೂನುಗಳನ್ನು ಪರಿಚ ಯಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ
| ಅಮಿತ್ ಷಾ, ಕೇಂದ್ರ ಗೃಹ ಸಚಿವ
ಸೆಕ್ಷನ್ 69ರ ವಿಶೇಷತೆ:ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 69 ಮೋಸದ ವಿಧಾನ, ಮದುವೆಯಾಗುತ್ತೇನೆ ಎಂದು ಸುಳ್ಳು ಹೇಳಿ ಲೈಂಗಿಕ ಸಂಪರ್ಕ ಹೊಂದುವುದಕ್ಕೆ ಸಂಬಂಧಿಸಿದ್ದಾಗಿದೆ. ಇಂಥ ಲೈಂಗಿಕ ಸಂಪರ್ಕ ಅತ್ಯಾಚಾರದ ಅಪರಾಧಕ್ಕೆ ಸಮಾನ. ಅಂಥವರಿಗೆ ಜೈಲುಶಿಕ್ಷೆಯು ಹತ್ತು ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ದಂಡಕ್ಕೂ ಕಾರಣವಾಗಬಹುದು ಎಂದು ಸೆಕ್ಷನ್ 69ರಲ್ಲಿ ದಾಖಲಿಸಲಾಗಿದೆ. ಉದ್ಯೋಗ ಅಥವಾ ಬಡ್ತಿ, ಗುರುತು ಮರೆಮಾಚಿ ಮದುವೆಯಾಗುವ ವಂಚಕ ವಿಧಾನಗಳನ್ನು ಈ ಸೆಕ್ಷನ್​ನಲ್ಲಿ ಸಮಗ್ರವಾಗಿ ವಿವರಿಸಲಾಗಿದೆ. ಅಸ್ತಿತ್ವದಲ್ಲಿರುವ ಐಪಿಸಿ ನಿರ್ದಿಷ್ಟ ವಂಚಕ ವಿಧಾನದ ಬಗೆಗಳನ್ನು ಹೊಂದಿಲ್ಲ. ಹೀಗಾಗಿ, ಹೊಸ ಕಾನೂನು ವಿಶೇಷ ಎನಿಸಿಕೊಳ್ಳುತ್ತದೆ.
ಗ್ಯಾಂಗ್ ರೇಪ್, ಅಪ್ರಾಪ್ತರ ಮೇಲಿನ ದೌರ್ಜನ್ಯಕ್ಕೆ ಗರಿಷ್ಠ ಶಿಕ್ಷೆ:ಸಾಮೂಹಿಕ ಅತ್ಯಾಚಾರ ಮತ್ತು ಅಪ್ರಾಪ್ತರ ಮೇಲಿನ ಅತ್ಯಾ ಚಾರ ಅಪರಾಧಗಳಿಗೂ ಗರಿಷ್ಠ ಮರಣದಂಡನೆ, ಕನಿಷ್ಠ 20 ವರ್ಷ ಜೈಲು ಶಿಕ್ಷೆಯ ಶಿಫಾರಸನ್ನು ಮಸೂದೆ ಹೊಂದಿದೆ.
ಐಪಿಸಿ 377 ಸೆಕ್ಷನ್ ರದ್ದು:ಪ್ರಸ್ತಾವಿತ ಕಾನೂನಿನಲ್ಲಿ ಪುರುಷರ ವಿರುದ್ಧದ ಅಸ್ವಾಭಾವಿಕ ಲೈಂಗಿಕ ಅಪರಾಧಕ್ಕೆ (ಐಪಿಸಿ ಸೆಕ್ಷನ್ 377) ಯಾವುದೇ ಶಿಕ್ಷೆ ಘೊಷಿಸಲಾಗಿಲ್ಲ. ಪ್ರಸ್ತಾವಿತ ಕಾನೂನು ಅತ್ಯಾಚಾರದಂತಹ ಲೈಂಗಿಕ ಅಪರಾಧ ಗಳನ್ನು ಮಹಿಳೆ, ಮಗುವಿನ ವಿರುದ್ಧ ಪುರುಷನ ಕೃತ್ಯ ಎಂದು ವ್ಯಾಖ್ಯಾನಿಸುತ್ತದೆ.
ಸಮಗ್ರತೆ ಕಾಪಾಡುವ ಸೆಕ್ಷನ್ 150:ಉದ್ದೇಶಪೂರ್ವಕವಾಗಿ ಮಾತು, ಬರವಣಿಗೆ, ಚಿಹ್ನೆ, ಎಲೆಕ್ಟ್ರಾನಿಕ್ ಸಂವಹನ, ಹಣಕಾಸಿನ ವಿಧಾನಗಳು ಅಥವಾ ಇತರ ರೀತಿಯಲ್ಲಿ, ಪ್ರಚೋದಿಸುವ, ಪ್ರತ್ಯೇಕತೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆ ಉತ್ತೇಜಿಸುವುದು, ಸಾರ್ವಭೌಮತ್ವ ಅಥವಾ ಏಕತೆ, ಸಮಗ್ರತೆಗೆ ಹಾನಿ ಮಾಡುವ ಅಥವಾ ಅಂಥದ್ದೇ ಮಾದರಿ ಕೃತ್ಯದಲ್ಲಿ ತೊಡಗುವವರಿಗೆ ಜೀವಾವಧಿ ಶಿಕ್ಷೆ ಅಥವಾ 7 ವರ್ಷಗಳವರೆಗೆ ಜೈಲು, ದಂಡ ವಿಧಿಸಬಹುದು.
ಶಿಕ್ಷೆ ಪರಿವರ್ತನೆ, ಕ್ಷಮಾದಾನ:ಮರಣ ದಂಡನೆಯನ್ನು ಆಜೀವ ಶಿಕ್ಷೆಗೆ, ಆಜೀವ ಶಿಕ್ಷೆಯನ್ನು ಕ್ಷಮಾದಾನಕ್ಕೆ ಪರಿವರ್ತಿಸಲು ಅವಕಾಶವಿದೆ. ಆದರೆ, ಶಿಕ್ಷೆ ಘೋಷಣೆಯಾದ ಏಳು ವರ್ಷದೊಳಗೆ ಮಾತ್ರ ಇದನ್ನು ಜಾರಿಗೊಳಿಸಬಹುದು. ರಾಜಕೀಯ ಕಾರಣಗಳಿಗಾಗಿ ಶಿಕ್ಷೆಯಿಂದ ವಿನಾಯ್ತಿ ನೀಡುವ ಪ್ರಕರಣಗಳಿಗೆ ಇದು ಕಡಿವಾಣ ಹಾಕಲಿದೆ ಎಂದು ಆಶಯ ಹೊಂದಲಾಗಿದೆ.
ಗ್ಯಾಂಗ್​ವಾರ್​ಗೂ ಮರಣದಂಡನೆ:ಸಂಘಟಿತ ಅಪರಾಧ ಹಾಗೂ ಅಂತಾರಾಷ್ಟ್ರೀಯ ಗ್ಯಾಂಗ್​ಗಳು ಒಳಗೊಂಡ ಪ್ರಕರಣಗಳಲ್ಲಿ ವ್ಯಕ್ತಿಯ ಹತ್ಯೆ ಸಂಭವಿಸಿದ್ದರೆ ಮರಣ ದಂಡನೆ ನೀಡಬಹುದು.
ಭಯೋತ್ಪಾದನೆಗೆ ವ್ಯಾಖ್ಯಾನ:ಈ ಹಿಂದಿನ ಕಾಯ್ದೆಗಳಲ್ಲಿ ಭಯೋತ್ಪಾದನೆಗೆ ನಿರ್ದಿಷ್ಟ ವ್ಯಾಖ್ಯಾನವಿರಲಿಲ್ಲ. ಈಗ ಇದಕ್ಕೆ ಸ್ಪಷ್ಟತೆ ನೀಡಲಾಗಿದ್ದು, ಭಯೋತ್ಪಾದನೆಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ.
ಸಮುದಾಯ ಸೇವೆ:ಇದೇ ಮೊದಲ ಬಾರಿಗೆ ಸಮುದಾಯ ಸೇವೆಯನ್ನು ಶಿಕ್ಷೆ ಸ್ವರೂಪದಲ್ಲಿ ವಿಧಿಸಲು ಹೊಸ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ.
159 ಸಭೆಗಳು:ಒಟ್ಟಾರೆ ನಾಲ್ಕು ವರ್ಷಗಳ ಕಾಲಾವಧಿಯಲ್ಲಿ 159 ಸಭೆಗಳನ್ನು ನಡೆಸಲಾಗಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
