ನವದೆಹಲಿ:ಜಪಾನ್​ನ ಬಂದರಿನಲ್ಲಿ ವಾರಕ್ಕೂ ಹೆಚ್ಚು ಕಾಲದಿಂದ ನಿಂತಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ ಇನ್ನೂ ಒಬ್ಬ ಭಾರತೀಯನಿಗೆ ಕರೊನಾ ಸೋಂಕಿರುವುದು ದೃಢಪಟ್ಟಿದೆ. ಇದರೊಂದಿಗೆ ಈ ಹಡಗಿನಲ್ಲಿರುವ ಒಟ್ಟು ಮೂರು ಭಾರತೀಯರು ಸೋಂಕಿನಿಂದ ಬಳಲುತ್ತಿರುವುದು ವರದಿಯಾಗಿದೆ. ಹಡಗಿನಲ್ಲಿ ಸೋಂಕು ತಗುಲಿದ ಪ್ರಯಾಣಿಕರ ಒಟ್ಟು ಸಂಖ್ಯೆ 200ರ ಗಡಿ ದಾಟಿದಂತಾಗಿದೆ.
ಸೋಂಕಿತರನ್ನು ಸಮುದ್ರ ಕಿನಾರೆಯಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಸೋಂಕು ಇಲ್ಲ ಎನ್ನುವುದು ದೃಢಪಟ್ಟ 80 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರನ್ನು ನೌಕೆಯಿಂದ ಇಳಿಯಲು ಜಪಾನ್ ಸರ್ಕಾರ ಅವಕಾಶ ನೀಡಲಿದೆ. ಆದರೆ, ಈ ವಯಸ್ಸಿನ ಯಾವುದೇ ಭಾರತೀಯರು ಹಡಗಿನಲ್ಲಿಲ್ಲ. ಈ ನಡುವೆ, ಸೋಂಕು ತಪಾಸಣೆ ಹಾಗೂ ಇದು ಹರಡದಂತೆ ಕೈಗೊಂಡಿರುವ ತೀವ್ರ ನಿಗಾ ವ್ಯವಸ್ಥೆ (ಕ್ವಾರಂಟೈನ್) ಅವಧಿ ಫೆಬ್ರವರಿ 19ಕ್ಕೆ ಮುಗಿಯಲಿದ್ದು ಅದನ್ನು ವಿಸ್ತರಿಸುವ ಸಾಧ್ಯತೆಯಿದೆಯೆಂದು ಹಲವು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಯಾವಾಗ ಇಲ್ಲಿಂದ ಹೊರಡಬಹುದು ಎನ್ನುವ ಬಗ್ಗೆ ಖಾತರಿಯಿಲ್ಲ ಎಂದು ನೌಕೆಯ ಭದ್ರತಾ ಅಧಿಕಾರಿಗಳಲ್ಲೊಬ್ಬರಾದ ಬಿನಿತಾ ಹೇಳಿದ್ದಾರೆ. ಹಡಗಿನಲ್ಲಿರುವ 3711 ಜನರಲ್ಲಿ ಒಟ್ಟು 138 ಭಾರತೀಯರಿದ್ದಾರೆ. ಅವರಲ್ಲಿ 132 ಸಿಬ್ಬಂದಿ ಹಾಗೂ ಆರು ಪ್ರಯಾಣಿಕರಿದ್ದಾರೆ. ಎಲ್ಲ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆಸಲು ಜಪಾನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಯತ್ನಗಳನ್ನು ನಡೆಸುತ್ತಿದೆ. ಕಚೇರಿಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ. ಜಪಾನ್ ಅಧಿಕಾರಿಗಳು, ಹಡಗಿನ ಆಡಳಿತ ಮಂಡಳಿ ಮತ್ತು ಹಡಗಿನಲ್ಲಿರುವ ಎಲ್ಲ ಭಾರತೀಯರನ್ನು ಸಂರ್ಪಸಲು ಕ್ರಮಕೈಗೊಳ್ಳುತ್ತಿದ್ದಾರೆ. ರೋಗದ ಲಕ್ಷಣವಿರುವುದು ಸಾಬೀತಾದ ಮೂರೂ ಭಾರತೀಯರನ್ನು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸಂರ್ಪಸಿದ್ದಾರೆ. ಅವರಿಗೆ ಸೂಕ್ತ ಔಷಧ ಹಾಗೂ ಆಹಾರ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ.
1500 ದಾಟಿದ ಸಾವಿನ ಸಂಖ್ಯೆ
ಕರೊನಾ ವೈರಸ್​ಗೆ ಇನ್ನೂ 143 ಜನರು ಬಲಿಯಾಗಿದ್ದು ಚೀನಾದಲ್ಲಿ ಈ ಮಾರಕ ರೋಗದಿಂದ ಮೃತರ ಸಂಖ್ಯೆ 1,523ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 66,000ಕ್ಕೂ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್​ಎಚ್​ಸಿ) ಹೇಳಿದೆ. ರೋಗದ ಕೇಂದ್ರವಾದ ವುಹಾನ್ ಇರುವ ಹುಬೇ ಪ್ರಾಂತ್ಯದಲ್ಲೇ ಹೆಚ್ಚಿನ ಸಾವು ಸಂಭವಿಸಿದೆ. ಹುಬೇ ಪ್ರಾಂತ್ಯದಲ್ಲಿ 139, ಹೆನಾನ್​ನಲ್ಲಿ ಇಬ್ಬರು ಹಾಗೂ ಬೀಜಿಂಗ್ ಮತ್ತು ಚಾಂಗ್ಕಿಂಗ್​ನಲ್ಲಿ ತಲಾ ಒಬ್ಬರು ಶನಿವಾರ ಮೃತಪಟ್ಟಿದ್ದಾರೆ.
ನೋಟುಗಳಿಗೂ ಸೋಂಕು
ಬ್ಯಾಂಕ್ ನೋಟುಗಳ ಚಲಾವಣೆ ಮೂಲಕವೂ ಕರೊನಾ ವೈರಸ್ ಹರಡುವ ಸಾಧ್ಯತೆಯಿದೆ. ಅದನ್ನು ತಡೆಯುವ ಉದ್ದೇಶದಿಂದ ನೋಟುಗಳ ಸೋಂಕು ನಿರೋಧೀಕರಣಕ್ಕೆ ಚೀನಾ ಮುಂದಾಗಿದೆ. ನೋಟುಗಳನ್ನು ಭದ್ರವಾಗಿ ಇರಿಸಲಾಗುತ್ತಿದೆ. ನೋಟುಗಳನ್ನು ಸೋಂಕುಮುಕ್ತಗೊಳಿಸಲು ಅವುಗಳಿಗೆ ನೇರಳಾತೀತ ಬೆಳಕು ಮತ್ತು ಅತಿಯಾದ ಉಷ್ಣತೆಯನ್ನು ಹಾಯಿಸಿ 7ರಿಂದ 14 ದಿನಗಳ ಕಾಲ ಭದ್ರವಾಗಿ ಪೆಟ್ಟಿಗೆಯಲ್ಲಿ ಇಡಲಾಗುತ್ತದೆ. ಆಯಾ ಪ್ರದೇಶದಲ್ಲಿನ ಸೋಂಕಿನ ತೀವ್ರತೆಯನ್ನು ಆಧರಿಸಿ ದಿನಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ ಎಂದು ಕೇಂದ್ರ ಬ್ಯಾಂಕ್​ನ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ನಂತರ ಅವುಗಳನ್ನು ಮತ್ತೆ ಬಳಕೆಗೆ ಬಿಡಲಾಗುತ್ತದೆ. ನಗದು ಬಳಸುವ ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷತೆ ಕಾಪಾಡುವುದು ಈ ಕ್ರಮದ ಉದ್ದೇಶ ಎಂದು ಕೇಂದ್ರೀಯ ಬ್ಯಾಂಕ್​ನ ಉಪ ಗವರ್ನರ್ ಫಾನ್ ಯೀಫಿ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − five =
Remember me
