ನವದೆಹಲಿ:ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೊಷಿಸಿ, ಮೂರು ತಿಂಗಳೊಳಗೆ ಅಧಿಸೂಚನೆ ಹೊರಡಿಸುವಂತೆ ಬಾಂಬೆ ಹೈಕೋರ್ಟ್​ನ ಗೋವಾ ಪೀಠವು ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಇದು ರಾಜ್ಯದ ಮಹತ್ವಾಕಾಂಕ್ಷಿ ಕಳಸಾ-ಬಂಡೂರಿ ಯೋಜನೆ ಮೇಲೆ ಅಡ್ಡ-ಪರಿಣಾಮ ಬೀರುವ ಸಾಧ್ಯತೆ ಇದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್​ಟಿಸಿಎ) ವಿನಂತಿಸಿರುವಂತೆ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳ ಬಗ್ಗೆ ಅಧಿಸೂಚನೆ ಹೊರಡಿಸಲು ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಗೋವಾ ಫೌಂಡೇಷನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ಮಾಡಿದ ಗೋವಾ ಪೀಠ, ಮಹತ್ವದ ಆದೇಶ ಪ್ರಕಟಿಸಿದೆ. ಮೂರು ತಿಂಗಳೊಳಗೆ ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ನ್ಯಾಯಾಲಯವು ಆದೇಶ ನೀಡಿದೆ ಎಂದು ಗೋವಾ ಅಡ್ವೊಕೇಟ್ ಜನರಲ್ ದೇವಿದಾಸ್ ಪಂಗಮ್ ಮಾಹಿತಿ ಹಂಚಿಕೊಂಡಿದ್ದಾರೆ. ವನ್ಯಜೀವಿ ಅಭಯಾರಣ್ಯದಲ್ಲಿ ಅಕ್ರಮ ಬೇಟೆಗಳನ್ನು ತಡೆಯುವ ಕ್ಯಾಂಪ್​ಗಳನ್ನು ಸ್ಥಾಪಿಸಬೇಕು ಎಂದು ಸೂಚಿಸಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಷ್ಠಾನಗೊಳಿಸುವಂತೆಯೂ ರಾಜ್ಯಕ್ಕೆ ತಿಳಿಸಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸುವುದಾಗಿ ಗೋವಾ ಅರಣ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.
ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೊಷಿಸಲು ಈ ಹಿಂದೆ ಗೋವಾ ಸರ್ಕಾರವು ನಿರಾಕರಿಸಿತ್ತು. ಸರ್ಕಾರದ ಈ ನಡೆ ಬಗ್ಗೆ ತೀವ್ರ ಅತೃಪ್ತಿ ಹೊರಹಾಕಿದ್ದ ಗೋವಾದ ಪರಿಸರವಾದಿಗಳು, ‘ಹುಲಿ ಸಂರಕ್ಷಿತ ಪ್ರದೇಶ’ ಎಂದು ಘೊಷಿಸುವ ಮೂಲಕ ಕರ್ನಾಟಕವು ಮಹದಾಯಿ ನದಿಯಿಂದ ಮಲಪ್ರಭಾಕ್ಕೆ ನೀರನ್ನು ತಿರುಗಿಸುವುದಕ್ಕೂ ತಡೆಯೊಡ್ಡಬಹುದು ಎಂದು ವಾದಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋವಾದ ವಿಪಕ್ಷ ನಾಯಕ ಯೂರಿ ಅಲೆಮಾವೊ, ಹೈಕೋರ್ಟ್ ಆದೇಶ ಹಲವು ಪರಿಣಾಮಗಳನ್ನು ಹೊಂದಿದೆ. ರಾಜ್ಯ ಅಥವಾ ಕೇಂದ್ರ ಸರ್ಕಾರ ನಮ್ಮ ವನ್ಯಜೀವಿಗಳು ಮತ್ತು ಮಹದಾಯಿ ನದಿ ರಕ್ಷಿಸಿರುವುದಲ್ಲ, ಬದಲಿಗೆ ನ್ಯಾಯಾಲಯವೇ ರಕ್ಷಣೆ ಮಾಡಲು ಬಂದಿದೆ ಎಂದಿದ್ದಾರೆ. 208 ಚದರ ಕಿಲೋಮೀಟರ್​ಗಳಷ್ಟು ಮಹದಾಯಿ ವನ್ಯಜೀವಿ ಅಭಯಾರಣ್ಯ ಹರಡಿಕೊಂಡಿದ್ದು, ಗೋವಾದ ಈಶಾನ್ಯ ಭಾಗದಲ್ಲಿ ಕರ್ನಾಟಕವನ್ನು ಸಂರ್ಪಸಿದೆ.
ನಮ್ಮ ಅಂದಾಜಿನ ಪ್ರಕಾರ ಕರ್ನಾಟಕದ ಮಹದಾಯಿ ಯೋಜನೆ ಗೋವಾದ ಮಹದಾಯಿ ಹುಲಿ ಕಾರಿಡಾರ್ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹೀಗಿದ್ದರೂ, ಬಾಂಬೆ ಹೈಕೋರ್ಟ್ ಆದೇಶದ ಬಗ್ಗೆ ಅಧ್ಯಯನ ಮಾಡಿ, ಅಗತ್ಯವಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.| ಮೋಹನ್ ಕಾತರಕಿ, ರಾಜ್ಯದ ಪರ ಸುಪ್ರೀಂಕೋರ್ಟ್ ವಕೀಲರು
ಮಹದಾಯಿ ಮತ್ತು ಕಳಸಾ-ಬಂಡೂರಿ ನಾಲಾ ತಿರುವು ಬೇರೆ ಬೇರೆ ಯೋಜನೆಗಳು. ಮಹದಾಯಿ ಯೋಜನೆ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ್ದು. ರಾಜ್ಯದಲ್ಲೇ ಹುಟ್ಟಿ ಹರಿಯುವ ಕಳಸಾ, ಬಂಡೂರಿ ಸೇರಿ ಆರು ಹಳ್ಳಗಳ ಪ್ರದೇಶದಲ್ಲಿ ಒಂದು ಹುಲಿಯೂ ಇಲ್ಲ. ನ್ಯಾಯಾಧಿಕರಣ ಐತೀರ್ಪಿನಂತೆ ಈ ಹಳ್ಳಗಳ 7.56 ಟಿಎಂಸಿ ನೀರು ಬಳಕೆಗೆ ಯಾವುದೇ ಸಮಸ್ಯೆ ಇಲ್ಲ. ಸರ್ಕಾರ ಕೂಡಲೇ ಇರುವ ಅವಕಾಶ ಬಳಸಿಕೊಂಡು ರೈತರಿಗೆ ನೀರೊದಗಿಸಬೇಕು.| ವಿಜಯ ಕುಲಕರ್ಣಿ, ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ
ಎಲ್ಲಿದೆ ಈ ಅಭಯಾರಣ್ಯ?:ಉತ್ತರ ಗೋವಾದಲ್ಲಿರುವ ಮಹದಾಯಿ ವನ್ಯಜೀವಿ ಅಭಯಾರಣ್ಯವು ಪಶ್ಚಿಮ ಘಟ್ಟದ ಸಾಲಿನಲ್ಲಿದೆ. ರಾಜ್ಯದ ಉತ್ತರಕನ್ನಡದಲ್ಲಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಪೂರ್ವದಲ್ಲಿ ಭೀಮಗಢ ವನ್ಯಜೀವಿ ಅಭಯಾರಣ್ಯ ಹಾಗೂ ಭಗವಾನ್ ಮಹಾವೀರ ರಾಷ್ಟ್ರೀಯ ಉದ್ಯಾನದೊಂದಿಗೆ ಸಂಪರ್ಕ ಹೊಂದಿದೆ.
ಮತ್ತೆ ಕಾನೂನು ಸಮರ?:ಮಹದಾಯಿ ನದಿಯಿಂದ ಮಲಪ್ರಭಾಕ್ಕೆ ನೀರು ತಿರುಗಿಸುವ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಪರಿಸರ ಮತ್ತು ಅರಣ್ಯ ಸಮ್ಮತಿ ಇನ್ನೂ ಸಿಕ್ಕಿಲ್ಲ. ಹೀಗಾಗಿ, ನ್ಯಾಯಾಧಿಕರಣದ ಐತೀರ್ಪಿನ ಹೊರತಾಗಿಯೂ ಕರ್ನಾಟಕಕ್ಕೆ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗ ಬಾಂಬೆ ಹೈಕೋರ್ಟ್ ಆದೇಶ ಮತ್ತೊಂದು ಅಡ್ಡಗಾಲಾಗುವ ಸಾಧ್ಯತೆಯಿದ್ದು, ಕರ್ನಾಟಕ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಸಿದ್ಧಗೊಳ್ಳಬೇಕಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
