ನವದೆಹಲಿ:ದೇಶದ ಹಲವೆಡೆ ಪ್ರಾಥಮಿಕ ಶಾಲೆ ಬಳಿಕ ಅಂಗನವಾಡಿ, ಎಲ್​ಕೆಜಿ, ಯುಕೆಜಿ ತರಗತಿ ಆರಂಭವಾಗುತ್ತಿರುವಂತೆಯೇ ಮಕ್ಕಳ ಲಸಿಕೆ ಅಭಿಯಾನಕ್ಕೂ ವೇದಿಕೆ ಸಜ್ಜಾಗಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಒಂದು ಕೋಟಿ ಡೋಸ್ ಝೈಕೋವ್-ಡಿ’ ವ್ಯಾಕ್ಸಿನನ್ನು ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಕಂಪನಿಯಿಂದ ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆಯೆಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ತಿಂಗಳೇ ರಾಷ್ಟ್ರೀಯ ಲಸಿಕೆ ಅಭಿಯಾನದಲ್ಲಿ ಈ ಲಸಿಕೆ ಸೇರ್ಪಡೆಯಾಗಲಿದೆ.
ಬೆಲೆಯೆಷ್ಟು?:ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ ಉತ್ಪಾದಿಸುತ್ತಿರುವ ಝೈಕೋವ್-ಡಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡುವ ಲಸಿಕೆ ಆಗಿದ್ದು, ಕೇಂದ್ರ ಔಷಧ ನಿಯಂತ್ರಕರ ಅನುಮೋದನೆ ಪಡೆದ ಮಕ್ಕಳಿಗೆ ನೀಡುವಂತಹ ಮೊದಲ ಚುಚ್ಚುಮದ್ದು ಕೂಡ ಆಗಿದೆ. ಪ್ರತಿ ಡೋಸ್ ಝೈಕೋವ್-ಡಿ ಲಸಿಕೆಗೆ 358 ರೂ. ದರ ಇದೆ. ಸೂಜಿರಹಿತವಾದ, ಒಮ್ಮೆ ಬಳಸಿ ಬಿಸಾಡುವ ಜೆಟ್ ಅಪ್ಲಿಕೇಟರ್ (ಸಿರಿಂಜ್) ದರ ಕೂಡ ಇದರಲ್ಲಿ ಸೇರಿದೆ. ಆದರೆ, ಇದು ತೆರಿಗೆ ಪೂರ್ವ ದರ ಆಗಿದೆ. ಮೂರು ಡೋಸ್​ಗಳ ಈ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತದೆ. ಈ ಚುಚ್ಚುಮದ್ದನ್ನು ನೀಡುವ ಬಗ್ಗೆ ಆರೋಗ್ಯ ವಲಯದ ಮುಂಚೂಣಿ ಕಾರ್ಯಕರ್ತರಿಗೆ ಅಗತ್ಯ ತರಬೇತಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಝೈಡಸ್ ಕ್ಯಾಡಿಲಾ ಪ್ರತಿ ತಿಂಗಳು ಒಂದು ಕೋಟಿ ಡೋಸ್ ಲಸಿಕೆ ಪೂರೈಸುವಷ್ಟು ಸಾಮರ್ಥ್ಯ ಹೊಂದಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಸಿದ್ಧತೆಗೆ ಸೂಚನೆ:ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಡಿಎನ್​ಎ ಆಧಾರಿತ ಕೋವಿಡ್ ಲಸಿಕೆಯನ್ನು ಚಾಲ್ತಿಗೆ ತರಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆಯೂ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ ಎನ್ನಲಾಗಿದೆ. ಈ ವರ್ಷಾಂತ್ಯದೊಳಗೆ ಎಲ್ಲ ಅರ್ಹರಿಗೂ ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ನೀಡಿರಬೇಕು ಎಂಬ ಗುರಿ ಹಮ್ಮಿಕೊಂಡಿರುವ ಕಾರಣ ಈ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು:ಕೋವಿಡ್ ಲಾಕ್​ಡೌನ್ ಸಂಪೂರ್ಣ ತೆರವಿನೊಂದಿಗೆ ರಾಜ್ಯದಲ್ಲಿ ಒಂದೂವರೆ ವರ್ಷದ ನಂತರ ಸೋಮವಾರ ಅಂಗನವಾಡಿ ಹಾಗೂ ಪೂರ್ವ ಪ್ರಾಥಮಿಕ (ಎಲ್​ಕೆಜಿ ಮತ್ತು ಯುಕೆಜಿ) ತರಗತಿಗಳು ಆರಂಭವಾಗುತ್ತಿದೆ. ಮಕ್ಕಳನ್ನು ಬರಮಾಡಿಕೊಳ್ಳಲು ಶಿಕ್ಷಣ ಸಂಸ್ಥೆಗಳು ಹಾಗೂ ಅಂಗನವಾಡಿ ಕೇಂದ್ರಗಳು ಸಜ್ಜಾಗಿವೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶದಂತೆ ಈಗಾಗಲೇ ಅಂಗನವಾಡಿ ಕೇಂದ್ರಗಳು ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದು, ಗುಲಾಬಿ ಹೂ ನೀಡಿ, ಸಿಹಿ ವಿತರಿಸುವ ಮೂಲಕ ಮಕ್ಕಳಿಗೆ ಸ್ವಾಗತ ಕೋರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕೋವಿಡ್ ಮೂರನೇ ಅಲೆ ಸಾಧ್ಯತೆ ಎಂಬ ತಜ್ಞರ ಎಚ್ಚರಿಕೆ ಹಾಗೂ ಮಕ್ಕಳಿಗೆ ಇನ್ನೂ ಲಸಿಕೆ ವಿತರಣೆ ಆಗಿಲ್ಲದ ಕಾರಣ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಮಾಸ್ಕ್ , ಸ್ಯಾನಿಟೈಸರ್ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ರೀತಿಯಲ್ಲಿ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ.
ಕೋವಿಡ್ ಪರೀಕ್ಷೆ ಕಡ್ಡಾಯ:ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು 72 ಗಂಟೆ ಒಳಗಿನ ಆರ್​ಟಿಪಿಸಿಆರ್ ಪರೀಕ್ಷೆ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಎಲ್​ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕ/ಶಿಕ್ಷಕಿಯರು ಹಾಗೂ ಸಹಾಯಕ ಸಿಬ್ಬಂದಿ ಸಹ ಕೋವಿಡ್ ಪರೀಕ್ಷೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
19 ತಿಂಗಳ ನಂತರ ತರಗತಿ:ಕೋವಿಡ್ ಹಿನ್ನೆಲೆಯಲ್ಲಿ 2020ರ ಮಾರ್ಚ್ 23ರಂದು ವಿಧಿಸಿದ್ದ ಲಾಕ್​ಡೌನ್ ನೊಂದಿಗೆ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಮೊದಲ ಅಲೆ ಮುಗಿದು, ಎರಡನೇ ಅಲೆ ಆರಂಭವಾಗಿ ಅದರ ತೀವ್ರತೆ ತಗ್ಗಿದ ನಂತರ ಶಾಲೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭವಾಗುತ್ತಿವೆ. ಕಳೆದ ಆಗಸ್ಟ್ 23ರಂದು 9 ಮತ್ತು 10ನೇ ತರಗತಿಗಳು, ಸೆಪ್ಟೆಂಬರ್ 6ರಿಂದ 6 ರಿಂದ 8ನೇ ತರಗತಿಗಳು ಹಾಗೂ ಅಕ್ಟೋಬರ್ 25ರಿಂದ 1 ರಿಂದ 5ನೇ ತರಗತಿಗಳು ಆರಂಭವಾಗಿದ್ದವು. ಇದೀಗ 19 ತಿಂಗಳ ನಂತರ ನ. 8ರಿಂದ ಅಂಗನವಾಡಿ ಹಾಗೂ ಪೂರ್ವ ಪ್ರಾಥಮಿಕ (ಎಲ್​ಕೆಜಿ ಹಾಗೂ ಯುಕೆಜಿ) ತರಗತಿಗಳು ಆರಂಭವಾಗುತ್ತಿವೆ.
ತರಗತಿಗೆ ವೇಳಾಪಟ್ಟಿ:ಅಂಗನವಾಡಿ ಕೇಂದ್ರಗಳು ನಿತ್ಯ ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಅಂದರೆ ಎರಡು ಗಂಟೆ ಕಾರ್ಯನಿರ್ವಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶಿಸಿದೆ. ಸೋಮವಾರದಿಂದ ಶುಕ್ರವಾರದವರೆಗೆ ಅರ್ಧ ದಿನ ಮಾತ್ರ ಎಲ್​ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಭೌತಿಕ ತರಗತಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರತಿ ಮಗುವಿನ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಸಂದರ್ಶಕರು ಅಥವಾ ಯಾವುದೇ ಮೂರನೇ ವ್ಯಕ್ತಿಗೆ ಶಾಲಾ ಪ್ರವೇಶ ನಿರ್ಬಂಧಿಸುವಂತೆ ಸೂಚನೆ ನೀಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 8 =
Remember me
