| ಸುರೇಶ್ ಮರಕಾಲ ಸಾಯ್ಬರಕಟ್ಟೆ
10ನೇ ತರಗತಿಯ ವಿದ್ಯಾರ್ಥಿ ಸಂತೋಷ ಕುಲಾಲನ ಮನೆ ಬೆಪ್ಡೆ ಎಂಬ ಊರಿನಲ್ಲಿದೆ. ಮನೆಯ ಸುತ್ತಲೂ ಗದ್ದೆ, ಮರ, ಗಿಡಗಳು, ಕಾಡು ಹಾಗೂ ಪೂರ್ವದಲ್ಲಿ “ನಾನಿದ್ದೇನೆ ರಕ್ಷಣೆಗೆ” ಎಂಬಂತೆ ಕೋಟೆಯ ರೀತಿಯಲ್ಲಿ ಕೈಯ್ಯೆತ್ತಿ ನಿಂತಿರುವ ಪಶ್ಚಿಮ ಘಟ್ಟಗಳ ಸಾಲು. ಕಾಡು ಮೃಗಗಳು, ವೈವಿಧ್ಯಮಯ ಜೀವರಾಶಿಗಳೊಂದಿಗೆ ಅವಿನಾಭಾವ ಸಂಬಂಧಗಳು ತಿಳಿಯದೆಯೋ- ಅವನ ಹಾಗೂ ಅವನ ಮನೆಯ ಸುತ್ತಲಿನ ಬಹತೇಕ ಎಲ್ಲರಿಗೂ ಜೀವನದ ಒಂದು ಭಾಗವೇ ಆಗಿರುವುದರಿಂದ, ಸಹಜವಾಗಿಯೇ ನಮಗೆಲ್ಲ ಅನೇಕ ಬಾರಿ ಕುತೂಹಲ ಎನಿಸುವ, ತಿಳಿಯದೆ ಇರುವ ಜೀವ ವೈವಿಧ್ಯದ ವಿಚಾರಗಳು ಅವರಿಗೆ ಸಾಮಾನ್ಯವೆನಿಸುತ್ತದೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಾಸಿಸುವ ಈ ಮಕ್ಕಳ ಜೊತೆಗೆ ಅರ್ಧಗಂಟೆ ಮಾತಾಡಿದೆವು ಅಂತಾದರೆ, ಹೊಸ ಮೂರು ಪುಸ್ತಕಗಳನ್ನು ಓದಿದಷ್ಟು ಜ್ಞಾನ ಸಿಗುವುದು ಖಾತ್ರಿಯಾಗಿರುತ್ತದೆ! ಹೀಗಾಗಿಯೇ ಈ ಮಕ್ಕಳ ಮೆಸೇಜು, ಪ್ರಶ್ನೆ ಎಂದರೆ- ಎಲ್ಲವನ್ನೂ ವಿಸ್ಮಯದ ಕಣ್ಣುಗಳಿಂದ ಕಾಣುವ ನನಗೆ ಸಹಜವಾಗಿಯೇ ಕುತೂಹಲ, ಹೆಚ್ಚಿನ ಆಸ್ಥೆ! ಸಂತೋಷನ ಕಳಿಸಿದ ವಾಟ್ಸ್ ಆಪ್ ಮೆಸೇಜ್ ತೆರೆದು ನೋಡಿದೆ. “ನಮಸ್ತೆ ಸರ್. ಅನಾಕೊಂಡಾ ಹಾವು ಹಾವುಗಳಲ್ಲಿ ಅತ್ಯಂತ ದೊಡ್ಡದು ಎಂದು ಲೇಖನದಲ್ಲಿ ಬರೆದಿದ್ದೀರಲ್ಲ ಸರ್, ಅದರೆ ಅತ್ಯಂತ ದೊಡ್ಡ ಹಾವು ‘ಟೈಟಾನೋಬೋವಾ’ ಅಲ್ವಾ ಸರ್?” ಅವನ ಪ್ರಶ್ನೆ ನೋಡಿ, ದಂಗಾದೆ! ಅನಾಕೊಂಡಾದ ಲೇಖನದಲ್ಲಿ -ದೀರ್ಘವಾದೀತು- ಬೇಡ ಎಂದು ಬಿಟ್ಟಿದ್ದನ್ನು 10ನೇ ತರಗತಿಯ ಚಿಕ್ಕ ಹುಡುಗ ಹುಡುಕಿ ಪ್ರಶ್ನೆ ಮಾಡಿ ಕೇಳಿದ್ದಾನೆ! ನಿಜವಾಗಿಯೂ, ಲೇಖನವೊಂದು ಸಾರ್ಥಕ್ಯ ಪಡೆಯುವುದು ಇಂತಹ ಪ್ರಶ್ನೆಗಳಿಂದ. ಜೀವನದ ನಿಜವಾದ ಕಲಿಕೆ ಸಾಧ್ಯವಾಗುವುದು ಅಚ್ಚರಿಗೆ ತೆರೆದುಕೊಳ್ಳಲು ಕಾಯುತ್ತಿರುವ ಇಂತಹಾ ಮಕ್ಕಳ ವಿಸ್ಮಯದ ಕುತೂಹಲಗಳಿಂದ!

ಇರಲಿ, ಬನ್ನಿ ನೇರವಾಗಿ ಹಾವನ್ನೇ ಮುಟ್ಟೋಣ! ವಾಸ್ತವದಲ್ಲಿ ಇಂದಿನ ಹಾವನ್ನು ನಾವು-ನೀವು ಬಿಡಿ, ಜಗತ್ಪಸಿದ್ಧ ಉರಗ ತಜ್ಞರು ನೋಡಿದರೂ ಹೌಹಾರಿ ಹಿಡಿಯಲು ಹಿಂದೇಟು ಹಾಕುವುದು ಖಚಿತ! ಏಕೆಂದರೆ, ಕಳೆದ ಅನಾಕೊಂಡಾದ ಲೇಖನದಲ್ಲಿ ಬರೆದಿದ್ದು ನಿಮಗೆ ನೆನಪಿರಬಹುದು, ಮನೆಯೊಳಗೆ ಬರುವ ಕೇರೆ ಹಾವನ್ನು ಐದು ಹೆಚ್.ಪಿ. ಪಂಪಿನ ಪೈಪನ್ನು ತೋರಿಸಿ “ಇಷ್ಟು ದಪ್ಪವಿತ್ತು ಮರಾಯ್ರಾ…!” ಎನ್ನುವವರು ಅನಾಕೊಂಡಾವೇನಾದರೂ ನೋಡಿದರೆ ರೈಲ್ವೆ ಸುರಂಗವನ್ನು ತೋರಿಸಿಯಾರು ಎಂದಿದ್ದೆ. ಅದೇ ಮಂದಿ ಏನಾದರೂ ಅಪ್ಪಿತಪ್ಪಿ ಈ ಟೈಟನೋಬೋವಾ ಹಾವನ್ನು ನೋಡಿದರೆ- ನೋಡಲು ಸಾಧ್ಯವಿಲ್ಲ ಬಿಡಿ; ಏಕೆಂದು ನಂತರ ತಿಳಿದುಕೊಳ್ಳೋಣ!;- ವಾರಾಹಿ ಪವರ್ ಸ್ಟೇಶನ್‌ನ ದ್ವಾರವನ್ನು ತೋರಿಸಿಯಾರು! ಅಷ್ಟು ದೊಡ್ಡದನ್ನು ತೋರಿಸಿದರೂ ಈ ಹಾವಿನ ಉತ್ಪ್ರೇಕ್ಷೆಗೆ ವಾರಾಹಿ ಪವರ್ ಸ್ಟೇಷನ್‌ನ ಗುಹೆಯ ದ್ವಾರದ ಅಗಲವೂ ಕಡಿಮೆಯೇ ಎನಿಸೀತು! ಸಧ್ಯೋಭವಿಷ್ಯದಲ್ಲಿ, ಭೂಮಿ ಸೃಷ್ಠಿಯಾದ ಇಂದಿನವರೆಗೆ ಉರಗ ಲೋಕದಲ್ಲಿ ಹುಟ್ಟಿರುವ ಅತ್ಯಂತ ದೈತ್ಯ ದೇಹಿಯಾದ ಹಾವಿದು! ಒಂದೇ ವಾಕ್ಯದಲ್ಲಿ ಇದರ ರಾಕ್ಷಸ ಗಾತ್ರವನ್ನು ಬರೆಯುವುದಾದರೆ, ನಾನೂರು ಕಿಲೋ ತೂಗುವ ಮೂರು ಮೀಟರ್ ಉದ್ದದ ಭಯಂಕರ ಮೊಸಳೆಯನ್ನು ನಾವು ತೊಂಡೆಕಾಯೊಂದನ್ನು ಎತ್ತಿಕೊಂಡು ಬಾಯೊಳಗೆ ಎಷ್ಟು ನಿರಾಯಾಸವಾಗಿ ಹಾಕಿಕೊಂಡು ‘ಕರ‍್ರುಂ-ಕರ‍್ರುಂ’ ಎಂದು ಅಗಿಯಬಹುದೋ, ಅಷ್ಟೇ ಸುಲಭವಾಗಿ ತಿಲಮಾತ್ರವೂ ಕಷ್ಟವಿಲ್ಲದೆ, ಭೀಕರ ಮೊಸಳೆಯನ್ನೂ ಹೊಟ್ಟೆಯೊಳಗೆ ಸೇರಿಸಿಕೊಳ್ಳಬಹುದಾದಷ್ಟು ದೊಡ್ಡದು! ನೀವು ಟೈಟನೋಬೋವಾ ಹಾವಿನ ‘ಪ್ರತಿಕೃತಿ’ಯ ಫೋಟೋದಲ್ಲಿ ಅದನ್ನೇ ನೋಡುತ್ತಿರುವಿರಿ!

‘ಪ್ರತಿಕೃತಿ’ ಎಂದೆನೇ?!…. ಹೌದು! ನೀವು ಸರಿಯಾಗಿ ಓದಿದ್ದೀರಿ! ಅದು ಹಾವಿನ ಪ್ರತಿಕೃತಿಯ ಫೋಟೋ! ಏಕೆಂದರೆ ಅಕ್ಷರಶಃ ‘ದೈತ್ಯಾಕಾರ’ ಎನ್ನಬಹುದಾದ ಈ ಹಾವು ಇಂದು ಭೂಮಿಯ ಮೇಲೆ ಇಲ್ಲ! ಈ ಹಾವಿನ ಬಗ್ಗೆ ಉಳಿದುದನ್ನು ತಿಳಿಯುವ ಮೊದಲು, ಅದರ ಉಗಮ, ಆವಾಸಸ್ಥಾನದ ಬಗ್ಗೆ ಮೊದಲು ತಿಳಿಯುವುದು ಶ್ರೇಯಸ್ಕರ. ‘ಟೈಟನೋಬೋವಾ’ ಎಂಬ ರಾಕ್ಷಸಗಾತ್ರದ ಹಾವು ಈ ಭೂಮಿಯ ಮೇಲೆ ವಾಸವಿದ್ದದ್ದು ಈಗಿನಿಂದ ಸುಮಾರು ಐವತ್ತೆಂಟು-ಅರವತ್ತು ಮಿಲಿಯನ್ ವರ್ಷಗಳ ಹಿಂದೆ! ಹೆಚ್ಚೂ ಕಡಿಮೆ ಡೈನೋಸಾರ್‌ಗಳ ವಂಶ ನಾಶನವಾಗಿ ಐದು ಮಿಲಿಯನ್ ವರ್ಷಗಳ ನಂತರ ಈ ಉರಗಗಳು ಭೂಮಿ ಮೇಲೆ ಓಡಾಡಿಕೊಂಡಿದ್ದಿರಬಹುದು. ಈಗ ನೀವೊಂದು ಕೆಲಸ ಮಾಡಬೇಕು!, ಸುಲಭದ್ದು, ಮಿಲಿಯಾಂತರ ವರ್ಷಗಳ ಹಿಂದಿನ ಕಾಲದಿಂದ ಈಗ ನೀವು ನನ್ನೊಂದಿಗೆ ಪುನಃ- ಈ ಶತಮಾನದ ಆರಂಭಕ್ಕೆ- ಎಂದರೆ 2009ಕ್ಕೆ ಬರಬೇಕು! ನಾವೆಲ್ಲರೂ ದಕ್ಷಿಣ ಅಮೇರಿಕಾದ ಕೊಲಂಬಿಯಾದ ಲಾಗುವಾಜಿರಾ ಎಂಬಲ್ಲಿನ ಸುಮಾರು 690 ಚದುರ ಕಿಲೋಮೀಟರ್ ವಿಸ್ತಾರದ ಕಲ್ಲಿದ್ದಲು ಗಣಿಯ ಬಳಿ ಹೋಗೋಣ! ಏಕೆಂದರೆ, ಅಲ್ಲಿ ನಡೆದ ಒಂದು ಉತ್ಖನನವು ಇಡೀ ಭೂಮಿಯ ಜೀವಿಯ ಇತಿಹಾಸದಲ್ಲೇ “ಅಬ್ಬಬ್ಬಾ…!” ಎನಿಸುವಷ್ಟು ದೈತ್ಯಾಕೃತಿಯ ಪಳೆಯುಳಿಕೆಗಳ ಮೈದಾನವನ್ನೇ ನಮ್ಮೆದುರು ತೆರೆದಿಡಲಿದೆ! ನಿಜಕ್ಕೂ ಅಚ್ಚರಿ ಅಲ್ಲವೆ?! ನಿಜ!, 2009ರಲ್ಲಿ ನಡೆದ ಇಲ್ಲಿನ ಉತ್ಖನನದಲ್ಲಿ ಒಂದೆರಡಲ್ಲ, ಐವತ್ತೆಂಟು ಪಳೆಯುಳಿಕೆಗಳು ದೊರೆತವು! ಒಂದೊಂದು ಪಳೆಯುಳಿಕೆಯೂ ಕಲ್ಲಿನಂತೆ ಅಂಟಿಕೊಂಡು ಎಷ್ಟು ವಿಸ್ತಾರಕ್ಕೆ ಹರಡಿಕೊಂಡಿತ್ತೆಂದರೆ, ಮೈಲುಗಟ್ಟಲೆ ಪ್ರದೇಶದಲ್ಲಿ ವಿಜ್ಞಾನಿಗಳಿಗೆ ಘಳಿಗೆಗೊಂದು ಅಚ್ಚರಿ ನೀಡಿದ ಉತ್ಖನನ ಪ್ರದೇಶವಾಗಿ ಈ ಲಾಗುವಾಜಿರಾ ಜಗತ್ಪ್ರಸಿದ್ಧವಾಯ್ತು! ಈ ಲಾಗುವಾಜಿರಾವೇ ‘ಟೈಟನೋಬೋವಾ’ ಎಂದು ಇಂದು ಅಚ್ಚರಿಯ ಜೀವಿಯಾಗಿರುವ ಬೃಹತ್ ಉರಗ ವಂಶದ ಪಳೆಯುಳಿಕೆ ದೊರೆತ ಸ್ಥಳ!

ಆದರೆ ಆರಂಭದಲ್ಲಿ – ಇಂತದ್ದೊಂದು ಹಾವು ಈ ಭೂಮಿ ಮೇಲೆ ಇತ್ತು ಎಂದು ಕಲ್ಪನೆಯನ್ನೂ ಮಾಡಲಾಗದಂತಹಾ ಸಮಯದಲ್ಲಿ- ವಿಜ್ಞಾನಿಗಳು ದೊಡ್ಡ ಮನೆಯಷ್ಟಗಲಕ್ಕೆ ಹಾಸಿಕೊಂಡು ಮಲಗಿದ್ದ ಅಸ್ತಿಪಂಜರದ ಈ ಪಳೆಯುಳಿಕೆಗಳನ್ನು ಹಾವು ಎಂದು ಒಪ್ಪಿಕೊಳ್ಳಲು ಸುತಾರಾಂ ಸಿದ್ಧರಿರಲಿಲ್ಲ! ಏಕೆಂದರೆ, ವಿಜ್ಞಾನಿಗಳ ವಿಶಾಲವಾದ ಚಿಂತನೆಯ ಮಿದುಳಿಗೂ ಇದೊಂದು ‘ಹಾವಿನ’ ಪಳೆಯುಳಿಕೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇರಲಿಲ್ಲ; ಅವುಗಳು ಅಷ್ಟು ವಿಸ್ತಾರವಾಗಿ ರಾಕ್ಷಸಾಕಾರದಲ್ಲಿತ್ತು!! ಎಷ್ಟು ಎನ್ನುತ್ತೀರಾ?! ಮೊನ್ನೆ ಅನಾಕೊಂಡಾದ ಲೇಖನವನ್ನು ಓದಿದಾಗ ನಿಮಗನಿಸಿರಬಹುದು, ಗಾತ್ರದಲ್ಲಿ ಅನಾಕೊಂಡಾವನ್ನು ಮೀರಿಸುವ ಹಾವು ಭೂಮಿಯ ಮೇಲೆ ಮತ್ತೊಂದಿಲ್ಲ ಎಂದು. ಆದರೆ ಟೈಟನೋಬೋವಾದ ಗಾತ್ರ ಕೇಳಿದರೆ, ಎಂತಹಾ ನಿರ್ವಿಕಾರಿಗಳ ಒಳಗೂ ಒಮ್ಮೆ ತಣ್ಣಗೆ ಚಳಿ ಹೊಗ್ಗಲೇಬೇಕು! ಇಂದು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಹಾವಾದ ಅನಾಕೊಂಡಾಗಳ ತೂಕದ ಬರೋಬ್ಬರಿ ನಾಲ್ಕು ಪಟ್ಟು ದೊಡ್ಡದು ಈ ಟೈಟನೋಬೋವಾ ಎಂಬ ಹೆಬ್ಬಾವು! ದೊರೆತ ದೊಡ್ಡ ಪಳೆಯುಳಿಕೆಯ ಆಧಾರದಲ್ಲಿ, ಈ ಹಾವುಗಳ ಉದ್ದ ಸರಿಸುಮಾರು ನಲವತ್ತೆರಡು ಅಡಿಗಳು, ಎಂದರೆ ಡಬಲ್ ಆಕ್ಸಿಲ್ ವೋಲ್ವೋ ಬಸ್ಸಿನಷ್ಟು ಉದ್ದ! ಭಾರ ಸುಮಾರು ಒಂದು ಸಾವಿರದ ನೂರಾ ಮೂವತ್ತೈದು ಕೆ.ಜಿ.ಗಳು! ಇಂದು ಭೂಮಿಯ ಮೇಲೆ ವಾಸವಿರುವ ದೈತ್ಯಾಕಾರದ ಅನಾಕೊಂಡಾ ಹಾವಿನ ವಂಶದಲ್ಲಿ ಇದುವರೆಗೆ ದೊರೆತ ಅತ್ಯಂತ ದೊಡ್ಡ ಹಾವಿನ ದಾಖಲೆಯೇ ಮುನ್ನೂರು ಕಿಲೋ- ಎಂಬುದನ್ನು ನೆನಪಿಸಿಕೊಂಡರೆ, ಟೈಟನೋಬೋವಾ ಎಷ್ಟು ಭೀಕರಾಕೃತಿ ಪಡೆದಿತ್ತು ಎಂದು ಅರಿವಾಗುತ್ತದೆ! ಎಂದರೆ ಭೂಮಿಯ ಮೇಲೆ ಇದುವರೆಗೆ ಹುಟ್ಟಿರಬಹುದಾದ, ನಮಗೆ ಇದುವರೆಗೆ ತಿಳಿದರುವ ಅತ್ಯಂತ ಉದ್ದನೆಯ, ದೊಡ್ಡ ಹಾಗೂ ಭಾರವಾದ ಹಾವಿದು!

ಹಾಗಿದ್ದಲ್ಲಿಗೆ ನಮ್ಮ ಮನಸ್ಸಿನಲ್ಲೊಂದು ಒಂದು ಪ್ರಶ್ನೆ ಮೂಡುತ್ತದೆ, ಅಂದು- ಸುಮಾರು ಅರವತ್ತು ಮಿಲಿಯನ್ ವರ್ಷಗಳ ಹಿಂದೆ ಏಕೆ ಉರಗ ವಂಶವೊಂದು ಇಷ್ಟು ದೈತ್ಯಾಕಾರವಾಗಿ ಬೆಳೆಯಿತು? ಮುಂದೆ ಏಕೆ ಅಂತಹಾ ಮ್ಯಾಮೋತಿಕ್ ಗಾತ್ರದಲ್ಲಿ ಇದರ ವಂಶ ಬೆಳೆಯಲೇ ಇಲ್ಲ? ಎಂದು! ವಿಜ್ಞಾನಿಗಳು ಕಂಡುಕೊಂಡು ನೀಡಿದ ಉತ್ತರಗಳು ಅನೇಕ ಇವೆ. ಅದರಲ್ಲಿ ಒಂದೆರಡು ಎಲ್ಲರೂ ಒಪ್ಪಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದು ಎನಿಸುತ್ತದೆ. ಮೊದಲಿಗೆ, ಈಗ್ಗೆ 60 ಮಿಲಿಯನ್ ವರ್ಷಗಳ ಹಿಂದಿನ ಕಾಲ- ಎಂದರೆ ಸುಮಾರಾಗಿ ಪಾಲಿಯೋಜೀನ್ ಯುಗದ ಪೇಲಿಯೋಸೀನ್ ಕಾಲ. ಟೈಟನೋಬೋವಾಗಳು ಶೀತರಕ್ತ ಪ್ರಾಣಿಗಳಗಿದ್ದವು. ಅವು ಭೂಮಿಯ ಮೇಲೆ ಬದುಕಿದ್ದ ಕಾಲದಲ್ಲಿ ಭೂಮಿಯ ವಾತಾವರಣ- ಮುಖ್ಯವಾಗಿ ಅವುಗಳಿದ್ದ ಸೆರೆಜಾನ್ ರಚನೆ ಎಂದರೆ ಇಂದಿನ ಕೊಲಂಬಿಯಾ ಸುತ್ತಲೂ ಅತ್ಯಂತ ಉಷ್ಣತೆಯಿಂದಲೂ, ಜೊತೆಜೊತೆಗೆ ಅತ್ಯಂತ ತೇವದಿಂದಲೂ ಕೂಡಿತ್ತು! ಇದು ಟೈಟೋನೋಬೋವಾಗಳು ದೈತ್ಯಾಕಾರವಾಗಿ ಬೆಳೆಯಲು ವರದಾನವಾಯ್ತೆಂದೇ ಹೇಳಬೇಕು! ಇದಕ್ಕೆ ಪೂರಕವಾಗಿ ಇವುಗಳು ಭೂಮಿಯಲ್ಲಿ ಕಾಣಿಸಿಕೊಳ್ಳುವ ಸುಮಾರು ಐದು ಮಿಲಿಯನ್ ವರ್ಷಗಳ ಪೂರ್ವದಲ್ಲಿ ಡೈನೋಸಾರ್‌ಗಳ ವಂಶವು ನಿರ್ವಂಶವಾಗಿತ್ತು. ಇದರಿಂದ ಟೈಟನೋಬೋವಾಗಳಿಗೆ ಆದ ದೊಡ್ಡ ಲಾಭವೇನೆಂದರೆ, ಆಹಾರಕ್ಕೆ ಭೂಮಿಯ ಮೇಲೆ ಪ್ರತಿಸ್ಪರ್ಧಿಗಳು ಇಲ್ಲದೇ ಹೋದದ್ದು, ಜೊತೆಗೆ ತಮ್ಮನ್ನು ನೊಣೆದು ಮುಕ್ಕಬಲ್ಲ ಪ್ರಬಲ ಶತ್ರುಗಳೂ ಇಲ್ಲದಿದ್ದುದು! ಹೀಗಾಗಿ ಮುಂದಿನ ಹತ್ತು ಮಿಲಿಯನ್ ವರ್ಷಗಳ ಕಾಲ ಈ ದೈತ್ಯ ಹಾವುಗಳು ‘ಆಡಿದ್ದೇ ಆಟ’ವಾಯ್ತು! ಲಗುವಾಜಿರಾದ ಕಲ್ಲಿದ್ದಲ ಗಣಿಯಲ್ಲಿ ಟೈಟನೋಬೋವಾಗಳ ಜೊತೆಗೆ ದೊರೆತ ಮರಗಿಡಗಳು, ಎಲೆಗಳು, ಕೆಲವೊಂದು ರಕ್ಕಸ ಗಾತ್ರದ ಸರೀಸ್ರಪಗಳಾದ ಆಮೆಗಳು, ಮೊಸಳೆಗಳನ್ನೂ ವಿಜ್ಞಾನಿಗಳು ಪಟ್ಟಿ ಮಾಡಿದ್ದಾರೆ. ಇದು ಟೈಟನೋಬೋವಾಗಳು ವಾಸವಿದ್ದ ಕಾಲದಲ್ಲಿ ಅಲ್ಲಿನ ಪರಿಸರ ಸಂಪೂರ್ಣವಾಗಿ ಜಲಸಮೃದ್ಧಿಯಿಂದ, ಜೊತೆಗೆ ನಿತ್ಯ ಹರಿದ್ವರ್ಣ ಕಾಡಿನಂತಹಾ ಪರಿಸರ ಸನ್ನಿವೇಶ ಇದ್ದಿರಬಹುದೆಂಬುದನ್ನು ಖಚಿತಪಡಿಸುತ್ತದೆ. ಇದು ಸಹಜವಾಗಿಯೇ ಟೈಟನೋಬೋವಾಗಳ ದೈತ್ಯಾಕಾರಕ್ಕೆ ಕಾರಣವಾಗಿರಬಹುದೆಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಅದೇ ರೀತಿ ಮುಂದೆ ಭೂಮಿಯಲ್ಲಾದ ವಾತಾವರಣದ ಬದಲಾವಣೆ, ಹತ್ತು ಮಿಲಿಯನ್ ವರ್ಷಗಳ ನಂತರ ಟೈಟನೋಬೋವಾಗಳನ್ನು ನಿರ್ನಾಮ ಮಾಡಿತು ಎಂದು ಚಿಂತಿಸಲಾಗುತ್ತಿದೆ.

ನೋಡಲು ಎಲ್ಲಾ ರೀತಿಯಲ್ಲೂ ಅನಾಕೊಂಡಾಕ್ಕೆ ಹೋಲುವ ಟೈಟನೋಬೋವಾ, ವಾಸ್ತವದಲ್ಲಿ ಕೂಡಾ ಅನಾಕೊಂಡಾ ಹಾಗೂ ಹೆಬ್ಬಾವುಗಳ ವಂಶದ್ದೇ! ‘ಟೈಟನೋಬೋವಾ’ ಎಂಬ ಹೆಸರೇ ‘ಟೈಟಾನ್’ ಹಾಗೂ ‘ಬೋವಾ’ ಎಂಬೆರಡು ಪದಗಳಿಂದಾಗಿದ್ದು, ‘ದೈತ್ಯಾಕಾರದ ಹೆಬ್ಬಾವು’ ಎಂಬ ಅರ್ಥವನ್ನೇ ಬಿಂಬಿಸುತ್ತದೆ ಅಲ್ಲವೆ?! ಅಷ್ಟೇ ಅಲ್ಲ, ಅನಾಕೊಂಡಾ, ಹೆಬ್ಬಾವುಗಳಂತೆ ಟೈಟನೋಬೋವಾಗಳು ಕೂಡಾ ಮಾಂಸಹಾರಿಗಳಾಗಿದ್ದವು. ಅನಾಕೊಂಡಾದಂತೆ ಇವುಗಳಿಗೂ ‘ಸೋತು ಸುಣ್ಣಾಗಿಸುವ’ ನೆಲಕ್ಕಿಂತ ಈಸು ಬೀಳುವ ನೀರೇ ಹೆಚ್ಚು ಇಷ್ಟದ ತಾಣವಗಿರುತ್ತಿತ್ತು! ಅನಾಕೊಂಡಾದಂತೆಯೇ ಆಹಾರಕ್ಕಾಗಿ ಸಮಯಾಸಮಯವನ್ನು ಲೆಕ್ಕಿಸದೇ ದಿನ, ವಾರ, ತಿಂಗಳುಗಟ್ಟಲೆ ಜೌಗಿನ ನೀರೊಳಗೆ ಕಾಯಬಲ್ಲ ತಾಳ್ಮೆ ಇವುಗಳಿಗಿತ್ತು! ಒಮ್ಮೆ ನೀರಿನೊಳಗೆ ಮುಳುಗಿದರೆ, ಅಜಮಾಸು ಮುಕ್ಕಾಲು ಗಂಟೆ ಉಸಿರುಕಟ್ಟಿಕೊಂಡು ಇರಬಲ್ಲವಾಗಿದ್ದವು! ಇಷ್ಟೆಲ್ಲಾ ಇದ್ದು, ಹೊರ ನೋಟಕ್ಕೆ ಅನಾಕೊಂಡಾ ಅಥವಾ ಹೆಬ್ಬಾವಿನ ಹಾಗೆ ಕಾಣಿಸಿದರೂ ಕೂಡಾ ಟೈಟನೋಬೋವಾಗಳ ಕೆಲವೊಂದು ಜೀವನ ಕ್ರಮ, ಬೇಟೆ ಇತ್ಯಾದಿಗಳು ಅನಾಕೊಂಡಾಗಳಿಗಿಂತ ಭಿನ್ನವಾಗಿತ್ತೆಂದೇ ಹೇಳಬೇಕು. ಮೊದಲಿಗೆ, ಟೈಟನೋಬೋವಾಗಳು ಹೆಬ್ಬಾವು ಯಾ ಅನಾಕೊಂಡಾಗಳಂತೆ ಬೇಟೆಯನ್ನು ತಮ್ಮ ರಬ್ಬರಿನ ಪೈಪಿನಂತಹಾ ದೇಹದ ಸುರುಳಿಯೊಳಗೆ ಸುತ್ತಿಸಿಕೊಂಡು, ಬೇಟೆಯ ಉಸಿರುಗಟ್ಟಿಸಿ ಕೊಲ್ಲುತ್ತಿರಲಿಲ್ಲ! ಬದಲಿಗೆ, ಹೆಚ್ಚಾಗಿ ನೇರವಾಗಿ ಆಹಾರವಾಗುವ ಪ್ರಾಣಿಯ ಮೇಲೇ ಆಕ್ರಮಣ ಮಾಡಿ, ಒಂದೇ ಹಿಡಿತಕ್ಕೆ ಅದರ ಕುತ್ತಿಗೆಗೆ ಬಾಯಿಹಾಕಿ ಕೊಂದು ನಂತರ ತಿನ್ನುತ್ತಿತ್ತು! ಇದು ಹೆಬ್ಬಾವಿನ ಜಾತಿಯ ಹಾವುಗಳಲ್ಲಿ ಈಗ ಇಲ್ಲ ಎನ್ನುವಷ್ಟು ಕಡಿಮೆ! ಆದಾಗ್ಯೂ ಒಮ್ಮೊಮ್ಮೆ –ಎದುರಿಗಿನ ಬೇಟೆ ಒಂದೇ ಹೊಡೆತಕ್ಕೆ ಬಾಯಿಗೆ ಸಿಕ್ಕಿ ಸಾಯಿಸಲು ಸಾಧ್ಯವಿಲ್ಲ ಎನ್ನುವಂತಿದ್ದರೆ, ಹೆಬ್ಬಾವು, ಅನಾಕೊಂಡಾಗಳಂತೆಯೇ ‘ಚಾಪೆ ಸುತ್ತಿ’ ಹೊಗೆ ಹಾಕಿಸುವುದೂ ಇತ್ತು!- ಅದು ಟೈಟನೋಬೋವಾಗಳ ಕೊನೆಯ ಅಸ್ತ್ರ! ಅಂತಹಾ ಸಂದರ್ಭದಲ್ಲಿ ಈ ದೈತ್ಯನ ‘ಚಾಪೆ’ ಎಷ್ಟು ಬಿಗಿಯಾಗಿ ಸುತ್ತಿರುತ್ತಿತ್ತು ಎಂದರೆ, ಹೊಗೆ ಹಾಕಿಸಿಕೊಳ್ಳುವ ಬಡಪಾಯಿ ಬೇಟೆಯ ಸುತ್ತಲೂ ಪ್ರತೀ ಚದುರ ಇಂಚಿಗೆ ನಾನೂರು ಪೌಂಡ್ ಶಕ್ತಿಯನ್ನು ಪ್ರಯೋಗಿಸಿ, ಒಳಗೆ ಸಿಕ್ಕಿಕೊಂಡ ಬಲಿಯು ಹೊಸಕಿ ಜೇಡಿಮಣ್ಣಿನ ಮುದ್ದೆಯಂತೆ ಆಗಿರುತಿತ್ತು! ಆದರೊಂದು ಇಲ್ಲಿ ವಿಚಿತ್ರವಿದೆ! ಟೈಟನೋಬೋವಾಗಳ ದೇಹವು ದೈತ್ಯಾಕಾರವಾಗಿದ್ದರೂ, ಅವುಗಳು ಬಹಳ ಕಡಿಮೆ ಆಹಾರದಲ್ಲಿ ಬದುಕುತ್ತಿದ್ದವು! ಅವುಗಳ ಪ್ರಮುಖ ಆಹಾರವಾಗಿದ್ದು, ಅಂದು ಕೊಲಂಬಿಯಾದಲ್ಲಿ ಹೇರಳವಾಗಿದ್ದ ದೈತ್ಯಾಕಾರದ ಮೊಸಳೆಗಳು! ಒಮ್ಮೆ ಒಂದು ದೈತ್ಯಾಕಾರದ ಮೊಸಳೆಯನ್ನು ತಿಂದು ಬಿಟ್ಟರೆ, ಇಡೀ ವರ್ಷ ಬೇರೆ ಆಹಾರವೇ ಇಲ್ಲದೆ ಟೈಟನೋಬೋವಾಗಳು ಬದುಕಲ್ಲವಾಗಿದವು! ‘ಉದರ ವೈರಾಗ್ಯ’ ಎಂದರೆ- ದಾಸರು ಬೇರೆಯೇ ಅರ್ಥದಲ್ಲಿ ಹೇಳಿದ್ದರೂ- ಸಧ್ಯಕ್ಕೆ ಇದೇ ಅಂದುಕೊಳ್ಳೋಣ..!

ಲಕ್ಷಾಂತರ ವರ್ಷಗಳ ಹಿಂದೆ ವಾಸವಿದ್ದ, ಇಂದು ನಮ್ಮ ಭೂಮಿಯ ಮೇಲೆ ಜೀವಂತವಾಗಿ ಇಲ್ಲದ ಟೈಟನೋಬೋವಾಗಳನ್ನು ಯಾರು ಕಂಡವರಿಲ್ಲ! ಆದಾಗ್ಯೂ ರತ್ನಕ್ಕಿಂತಲೂ ಅಮೂಲ್ಯವಾಗಿ ದೊರೆತಿರುವ ಅವುಗಳ ಪಳೆಯುಳಿಕೆಗಳ ಡಿ.ಎನ್.ಎ, C-14 ಹಾಗೂ ಇತರ ನವೀನ ಡೇಟಿಂಗ್ ತಂತ್ರಜ್ಞಾನ, ತ್ರೀ-ಡಿ ಆನಿಮೇಶನ್ ತಂತ್ರಜ್ಞಾನ ಮೊದಲಾದ ಅತ್ಯಾಧುನಿಕ ಸಂಶೋಧನೆಗಳಿಂದಾಗಿ ಅಂದು ಭೂಮಿಯ ಮೇಲೆ ಓಡಾಡಿಕೊಂಡಿದ್ದ ಈ ‘ಟೈಟಾನ್’ಗಳನ್ನು ಇಂದು ನಾವು ಪುನಃ ಕ್ವಚಿತ್ತಾಗಿ ಚಿತ್ರಗಳಲ್ಲಿ ಊಹಿಸಬಹುದಾಗಿದೆ. “ಇಲ್ಲ, ನನಗೊಮ್ಮೆ ಟೈಟನೋಬೋವಾವನ್ನು ನೋಡಲೇಬೇಕು” ಎಂಬ ಆಸೆ ನಿಮಗೆ ತಡೆಯಲಾರದಷ್ಟಿದೆಯೇ? ವಾಷಿಂಗ್‌ಟನ್‌ನ ಸ್ಮಿತ್‌ಸೋನಿಯನ್ ನ್ಯಾಶನಲ್ ಹಿಸ್ಟರಿ ವಸ್ತುಸಂಗ್ರಹಾಲಯದಲ್ಲಿ ಜೀವಂತ ಆಕಾರದ ಟೈಟನೋಬೋವಾ ಹಾವಿನ ಪ್ರತಿಕೃತಿಯನ್ನು ನಿರ್ಮಿಸಿಟ್ಟಿದ್ದಾರೆ! ಅಲ್ಲಿಯವರು ಅವಕಾಶ ನೀಡಿದರೆ ಮೊಸಳೆಯನ್ನು ನುಂಗುತ್ತಿರುವ ಅದರ ಕೊಪ್ಪರಿಗೆಯಗಲದ ಬಾಯಿಯ ಹತ್ತಿರವೇ ನಿಂತು ಒಂದು ಸೆಲ್ಫಿಯನ್ನೂ ಕ್ಲಿಕಿಸಬಹುದು!

ಲೇಖನದ ಕೊನೆಗೊಂದು ಪ್ರಶ್ನೆ! ಬರೇ ಕೇರೆ ಹಾವುಗಳನ್ನಷ್ಟೇ ನೋಡಿಕೊಂಡು, ಅದೇ ದೊಡ್ಡದು ಎಂದುಕೊಂಡಿದ್ದವನಿಗೆ “ಕಾಳಿಂಗ ಸರ್ಪ ಎಂಬ ಹಾವು ಇದಕ್ಕಿಂತಲೂ ದೊಡ್ಡದಿದೆ” ಎಂದಾಗ ಹುಬ್ಬೇರಿಸುತ್ತಾನೆ! ಅದೇ ಅವನಿಗೆ ಕಾಳಿಂಗನನ್ನು ತೋರಿಸಿ, ಇಷ್ಟೇ ಅಲ್ಲ ಅದಕ್ಕಿಂತಲೂ ದೊಡ್ಡದಾದ ಅನಾಕೊಂಡಾದ ವಿವರಣೆ ನೀಡಿದರೆ, “ನಿನಗೆಲ್ಲೋ ಲೂಸು!” ಎನ್ನುತ್ತಾನೆ. ಅದೃಷ್ಟವಶಾತ್ ಅನಾಕೊಂಡಾವನ್ನೂ ಅವನಿಗೆ ತೋರಿಸಿದೆವು ಅಂದುಕೊಳ್ಳೋಣ, ಈಗ ‘ಟೈಟನೋಬೋವಾ’ ಎಂಬ ಒಂದೂಕಾಲು ಟನ್ ತೂಗುವ ಹಾವೊಂದು ಈ ಭೂಮಿಯ ಮೇಲೆ ಇತ್ತು ಎಂದರೆ, “ಅಣ್ಣಾ, ಸುಳ್ಳು ಹೇಳೋದಕ್ಕೂ ಒಂದು ಮಿತಿ ಬೇಡ್ವಾ..?!” ಅಂದೇ ಅಂತಾನೆ! ಸರಿ!, ಈ ಹಾವಿನ ಬಗ್ಗೆಯೂ ಅವನಿಗೆ ನಾವು ತಿಳಿಸಿದೆವು, ಟೈಟನೋಬೋವಾದ ಅಚ್ಚರಿಯಲ್ಲಿ ಅವನೂ ಮಿಂದು ತೇಲಾಡಿದ ಅಂದುಕೊಳ್ಳೋಣ…! ಈಗ ನಾವು ಅವನಿಗೆ ಪ್ರಶ್ನೆಯನ್ನು ಕೇಳುವುದು ಬೇಡ, ಅವನೇ ನಮಗೆ ಪ್ರಶ್ನೆ ಕೇಳಲು ಆರಂಭಿಸ್ತಾನೆ, “ಅಣ್ಣಾ, ಟೈಟನೋಬೋವಾ ಹಾವಿಗಿಂತ ದೊಡ್ಡ ಹಾವು ಈ ಭೂಮಿ ಮೇಲೆ ಇರಲಿಕಿಲ್ವ…?!”

ಹೌದು! ಈಗ ನಮಗೆ ನಾವೇ ಈ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾದ ಕಾಲ! ಟೈಟನೋಬೋವಾಕ್ಕಿಂತಲೂ ದೈತ್ಯಾಕಾರವಾದ ಹಾವು ಈ ಭೂಮಿಯಲ್ಲಿ ಓಡಾಡಿಕೊಂಡಿರಲಿಕ್ಕಿಲ್ಲವೆ? ಇದ್ದುದೇ ಹೌದಾದರೆ, ಅದು ನಮ್ಮ ಭೂಮಿಯ ಯಾವ ನೆಲದೊಳಗೆ, ಪರ್ವತದ ಯಾವ ನೆತ್ತಿಯೊಳಗೆ, ಸಾಗರದ ಯಾವ ತಳದೊಳಗೆ ಪಳೆಯುಳಿಕೆಯಾಗಿ ಅಡಗಿಕೊಂಡಿದೆ?! ಸಂತೋಷನಂತಹ ವಿದ್ಯಾರ್ಥಿಗಳು ಮುಂದೆ ವಿಜ್ಞಾನಿಯಾಗಿಯೋ, ಪುರಾತತ್ವಶಾಸ್ತçಜ್ಞರಾಗಿಯೋ, ರೈತನಾಗಿಯೋ, ಇಂಜಿನಿಯರಾಗಿಯೋ, ಸಾಹಿತಿಯಾಗಿಯೋ, ಚಿತ್ರಕಾರನಾಗಿಯೋ ಭೂಮಿಯ ಒಳಗಿನ ಇಂತಹಾ ಒಗಟನ್ನು ಭೂಮಿಗೆ ನೋವು ಕೊಡದೆ ಬಿಡಿಸಿ ಹೇಳುವಂತಾಗಬೇಕು! ಶಿಕ್ಷಣದ ಆಂತರ್ಯದ ಸಾರ್ಥಕತೆಯೂ ಸಂತೋಷನಂತಹ ಪುಟಾಣಿಗಳ ಕುತೂಹಲದ ಕಣ್ಣಿನೊಳಗೆ ಸಾಂಧ್ರಗೊಳ್ಳುವ ಕಲಿಕೆಯಲ್ಲೇ ಅಡಗಿದೆ, ಅಲ್ಲವೆ?!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:thirteen − eleven =
Remember me
