ಕೋಲ್ಕತ್ತಾ:ಸಂಸತ್ತಿನ ಆವರಣದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ ಅವರ ಮಿಮಿಕ್ರಿ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತೆ ಇಂಥದೇ ಕೃತ್ಯ ಎಸಗಿದ್ದು, ಬಿಜೆಪಿಯಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ತಮ್ಮ ಲೋಕಸಭಾ ಕ್ಷೇತ್ರ ಸೆರಾಂಪೋರ್​ನಲ್ಲಿ ರಾಜಕೀಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಅವರಿಗೆ (ಜಗದೀಪ್ ಧನಕರ್) ಯಾಕೆ ಅರ್ಥವಾಗುತ್ತಿಲ್ಲ? ಹಗಲು-ರಾತ್ರಿ ಅಳುತ್ತಾ ಇರುತ್ತಾರೆ. ಮಗುವಿನಂತೆ ಅಳುತ್ತಿರುತ್ತಾರೆ ಎಂದು ಹೇಳುತ್ತ ತಾಯಿಗೆ ದೂರು ನೀಡುತ್ತಿರುವ ಮಗುವಿನ ಮಿಮಿಕ್ರಿ ಮಾಡಿದರು. ಅವರು ಹೆಸರು ನೇರವಾಗಿ ಉಲ್ಲೇಖ ಮಾಡದಿದ್ದರೂ, ಉಪರಾಷ್ಟ್ರಪತಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಮಿಮಿಕ್ರಿ ಇದು ಒಂದು ಕಲೆ. ಯಾರಿಗಾದರೂ ಕಲೆ ಅರ್ಥವಾಗದಿದ್ದರೆ ನಾನೇನು ಮಾಡಲಿ? ಅವರು ಹಾಸ್ಯವನ್ನು ಅರ್ಥಮಾಡಿಕೊಂಡಿಲ್ಲ. ಮಿಮಿಕ್ರಿಯನ್ನು ಮೆಚ್ಚುವ ಸುಸಂಸ್ಕೃತ ಮನಸ್ಸು ಹೊಂದಿಲ್ಲ. ಲೋಕಸಭೆಯೊಳಗೆ ಮಿಮಿಕ್ರಿ ಮಾಡಿದ ಮೊದಲ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ. ಅವರು ಅಣಕ ಮಾಡಿದರೆ ಎಲ್ಲರೂ ನಗುತ್ತಾರೆ. ನಾವು ಆ ರೀತಿ ಮಾಡಿದರೆ ವಿನಾಯಿತಿ ಇಲ್ಲವೇ ಎಂದು ಪ್ರಶ್ನಿಸಿದರು. ತಾನು ರೈತನ ಮಗ ಎಂಬ ಉಪರಾಷ್ಟ್ರಪತಿ ಹೇಳಿಕೆಗೆ ತಿರುಗೇಟು ನೀಡಿದ ಬ್ಯಾನರ್ಜಿ, ಎಷ್ಟು ದಿನ ತಾವು ಹೊಲದಲ್ಲಿ ದುಡಿದಿದ್ದೀರಿ? ತಾವು -ಠಿ; 20 ಲಕ್ಷದ ಸೂಟ್ ಹಾಕುತ್ತೀರಿ. ಚಳಿಯಲ್ಲಿ ಭಾರತದ ಎಷ್ಟೋ ರೈತರಿಗೆ ಅಗತ್ಯಕ್ಕೆ ತಕ್ಕಷ್ಟು ಕಂಬಳಿ ಕೂಡ ಸಿಗುತ್ತಿಲ್ಲ. ಎಷ್ಟು ಲಕ್ಷ ಕಂಬಳಿಯನ್ನು ರೈತರಿಗೆ ಕಳಿಸಿದ್ದೀರಿ ಎಂದು ವ್ಯಂಗ್ಯ ಮಾಡಿದರು. ಉಪರಾಷ್ಟ್ರಪತಿ ಪ್ರಧಾನಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಪಕ್ಷದ ಧ್ವನಿಯನ್ನು ಅಡಗಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.
ಇದನ್ನು ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಅವರ ಮಿಮಿಕ್ರಿ ಉಪರಾಷ್ಟ್ರಪತಿಗೆ ಅಗೌರವ ತಂದಿದೆ. ಸಂಸದ ಬ್ಯಾನರ್ಜಿ ಕ್ಷಮೆ ಯಾಚನೆ ಮಾಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಆಡಳಿತ ಪಕ್ಷದಿಂದ ಅಮಾನತು ಅಸ್ತ್ರ ಬಳಕೆ ಎಂದ ಖರ್ಗೆ:ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು, ಸಂಸತ್ತಿನ ಆಚರಣೆಗಳನ್ನು ಹಾಳುಮಾಡಲು ಮತ್ತು ಸಂವಿಧಾನವನ್ನು ಹದಗೆಡಿಸಲು ಆಡಳಿತ ಪಕ್ಷವು ಸಂಸದರ ಅಮಾನತು ಅಸ್ತ್ರ ಬಳಸಿದೆ ಎಂದು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಅಧ್ಯಕ್ಷರೂ ಆದ ಉಪರಾಷ್ಟ್ರಪತಿ ಧನಕರ್ ಅವರಿಗೆ ಪತ್ರ ಬರೆದಿದ್ದಾರೆ. ಸಂಸತ್ತಿನ ಬಗ್ಗೆ ಸರ್ಕಾರದ ನಿರಂಕುಶ ಮತ್ತು ದುರಹಂಕಾರದ ಧೋರಣೆಯನ್ನು ರಾಜ್ಯಸಭಾ ಅಧ್ಯಕ್ಷರು ಸಮರ್ಥನೆ ಮಾಡುತ್ತಿರುವುದು ದುರದೃಷ್ಟಕರ. ಸಂಸದರನ್ನು ಅಮಾನತುಗೊಳಿಸುವ ಮೂಲಕ ಸರ್ಕಾರವು ಮತದಾರರ ಧ್ವನಿಯನ್ನು ಪರಿಣಾಮಕಾರಿಯಾಗಿ ಮೌನಗೊಳಿಸಿದೆ. ಸಂಸತ್ತಿನ ಎರಡೂ ಸದನಗಳಿಂದ ವಿರೋಧ ಪಕ್ಷದ ಸಂಸದರನ್ನು ಸಾಮೂಹಿಕವಾಗಿ ಅಮಾನತುಗೊಳಿಸುವುದು ಸರ್ಕಾರದ ಪೂರ್ವನಿರ್ಧರಿತ ಯೋಜನೆಯಾಗಿದೆ ಎಂದು ಆರೋಪ ಮಾಡಿದರು. ಸಂಸತ್ತಿಗೆ ಹಾಜರಾಗದ ಹಲವು ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗಿದೆ. ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡುವ ಪ್ರಯತ್ನಕ್ಕೆ ಸ್ಪಂದನೆ ಸಿಕ್ಕಿಲ್ಲ ಎಂದು ಧನಕರ್ ಪತ್ರದಲ್ಲಿ ಹೇಳಿದ್ದಾರೆ. ಆದರೆ ಸಂಸತ್ ಭದ್ರತಾ ಲೋಪದ ಬಗ್ಗೆ ಸಂಸತ್ತಿನ ಅಧಿವೇಶನದಲ್ಲಿ ಹೇಳಿಕೆ ನೀಡುವ ಬದಲು ಗೃಹ ಸಚಿವರು ಟಿವಿ ವಾಹಿನಿಯೊಂದರ ಮುಂದೆ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಇದು ಪ್ರಜಾಪ್ರಭುತ್ವದ ದೇಗುಲವನ್ನು ಅಪಹಾಸ್ಯ ಮಾಡಿದಂತೆ. ಚೀನಾದ ಗಡಿ ಅತಿಕ್ರಮಣ, ಮಣಿಪುರದ ಹಿಂಸಾಚಾರ, ಭದ್ರತಾ ಲೋಪದ ಆರೋಪಿಗಳಿಗೆ ಸಂಸತ್ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟ ಬಿಜೆಪಿ ಸಂಸದರ ಪಾತ್ರ ಇನ್ನಿತರ ನಿರ್ಣಾಯಕ ವಿಷಯಗಳಲ್ಲಿ ಸರ್ಕಾರವು ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದೆ ಎಂದು ಖರ್ಗೆ ಆರೋಪ ಮಾಡಿದರು.
ಏನಿದು ಪ್ರಕರಣ?:ವಿರೋಧ ಪಕ್ಷದ ಸಂಸದರನ್ನು ಕಲಾಪದಿಂದ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಸಂಸತ್ತಿನ ಆವರಣದಲ್ಲಿ ನಡೆದ ಪ್ರತಿಭಟನೆಯ ವೇಳೆ ಕಲ್ಯಾಣ್ ಬ್ಯಾನರ್ಜಿ, ಉಪರಾಷ್ಟ್ರಪತಿಗಳ ಮಿಮಿಕ್ರಿ ಮಾಡಿದ್ದರು. ಇದು ಭಾರಿ ವೈರಲ್ ಆಗಿತ್ತು. ಇದು ನಾಚಿಕೆಗೇಡಿನ ಕೃತ್ಯ. ಜಾಟ್ ಸಮುದಾಯದ ರೈತನ ಮಗನಿಗೆ ಅವಮಾನಿಸಲಾಗಿದೆ ಎಂದು ಉಪರಾಷ್ಟ್ರಪತಿ ಧನಕರ್ ಹೇಳಿದ್ದರು. ಬ್ಯಾನರ್ಜಿ ಅವರ ಮಿಮಿಕ್ರಿಯನ್ನು ಫೋನ್ ಮೂಲಕ ಚಿತ್ರೀಕರಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − five =
Remember me
