ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಸೇವಾ ನಿಯಮಗಳು ಅನ್ವಯಿಸುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಕೆಲ ದಿನಗಳ ಹಿಂದೆ ಘೊಷಿಸಿದ್ದರು. ಆದರೆ, ಇದರಿಂದ ಅಸಮಾಧಾನಗೊಂಡಿದ್ದ ಭಗವಂತ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಚಂಡೀಗಢ ಪಂಜಾಬ್​ಗೆ ಸೇರಬೇಕು ಎಂಬ ನಿರ್ಣಯ ಮಾಡುವುದರ ಮೂಲಕ ಮತ್ತೆ ಈ ಕೇಂದ್ರಾಡಳಿತ ಪ್ರದೇಶವು ಹರಿಯಾಣ, ಪಂಜಾಬ್ ಮತ್ತು ಕೇಂದ್ರ ಸರ್ಕಾರದ ನಡುವಿನ ಹಗ್ಗಜಗ್ಗಾಟಕ್ಕೆ ಸಾಕ್ಷಿಯಾಗುತ್ತಿದೆ.
ಚಂಡೀಗಢವನ್ನು ಪಂಜಾಬ್ ವ್ಯಾಪ್ತಿಗೆ ತರಬೇಕು ಎಂಬ ಆಪ್ ನಿರ್ಣಯಕ್ಕೆ ಸಿಟ್ಟಾಗಿರುವ ಹರಿಯಾಣದ ಮನೋಹರ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ, ಏಪ್ರಿಲ್ 5ರಂದು (ಇಂದು) ವಿಶೇಷ ಅಧಿವೇಶನವನ್ನು ಕರೆದಿದ್ದು, ಪಂಜಾಬ್ ಸರ್ಕಾರದ ನಿರ್ಣಯಕ್ಕೆ ಪ್ರತಿಯಾಗಿ ನಿರ್ಣಯ ಅಂಗೀಕರಿಸುವ ಜತೆಗೆ ಮಹತ್ವದ ಸಟ್ಲೆಜ್-ಯಮುನಾ ನದಿ ಕಾಲುವೆ ವಿಚಾರದ ಬಗ್ಗೆಯೂ ತೀರ್ಮಾನ ಹೊರಹಾಕುವ ನಿರೀಕ್ಷೆಯಿದೆ.
ಚಂಡೀಗಢಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರಗಳ ನಿರ್ಣಯ ಹೊರಬೀಳುತ್ತಿರುವುದು ಹೊಸದೇನಲ್ಲ. ಹಾಗೆ ನೋಡಿದರೆ ಪಂಜಾಬ್ ಸರ್ಕಾರದ ಇತ್ತೀಚಿನ ನಿರ್ಣಯ 1960ರ ದಶಕದ ನಂತರ ಹೊರಬಿದ್ದಿರುವ ಏಳನೇ ನಿರ್ಣಯವಾಗಿದೆ. ‘ಚಂಡೀಗಢ ನಗರವನ್ನು ಪಂಜಾಬ್​ನ ರಾಜಧಾನಿಯಾಗಿ ರಚಿಸಲಾಗಿದೆ. ರಾಜ್ಯಗಳನ್ನು ವಿಭಜಿಸಿರುವ ಹಿಂದಿನ ಎಲ್ಲಾ ಪೂರ್ವನಿದರ್ಶನಗಳಲ್ಲಿ ರಾಜಧಾನಿ ಮಾತೃರಾಜ್ಯದಲ್ಲಿ ಉಳಿದುಕೊಂಡಿರುವುದನ್ನು ನೋಡಬಹುದು’ ಎಂದು ಆಪ್ ಸರ್ಕಾರದ ನಿರ್ಣಯದಲ್ಲಿ ತಿಳಿಸಲಾಗಿದೆ.
ಹರಿಯಾಣ ಸರ್ಕಾರ ಷಾ ಆಯೋಗದ ವರದಿಯನ್ನು ಉಲ್ಲೇಖಿಸುತ್ತಿದ್ದು, ಕೆಲ ದಿನಗಳ ಹಿಂದೆ ವಿಪಕ್ಷ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರು ನೀರು, ಪ್ರದೇಶ ಮತ್ತು ರಾಜಧಾನಿಯನ್ನೊಳಗೊಂಡ ಮೂರು ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವಿದೆ ಎಂದಿದ್ದರು. ‘ಷಾ ಆಯೋಗದ ವರದಿ ಪ್ರಕಾರ ಚಂಡೀಗಢ ಹರಿಯಾಣಕ್ಕೆ ಸೇರಿದೆ. ಪಂಜಾಬ್ ನಮ್ಮ ಪಾಲಿನ ನೀರನ್ನೂ ಕೊಡುತ್ತಿಲ್ಲ. ಚಂಡೀಗಢ ವಿಮಾನ ನಿಲ್ದಾಣದಲ್ಲೂ ನಾವು ಶೇ.50ರಷ್ಟು ಪಾಲು ಹೊಂದಿದ್ದೇವೆ. ಪಂಜಾಬ್​ಗೆ ನಮ್ಮ ರಸ್ತೆಗಳನ್ನು ನಿರ್ಬಂಧಿಸಲು ಮತ್ತು ಅವರಿಗೆ ಪ್ರವೇಶವನ್ನು ನಿರಾಕರಿಸಲು ನಾವು ನಿರ್ಧರಿಸಿದರೆ ಏನಾಗಬಹುದು ಎಂದು ಊಹಿಸಿದ್ದಾರಾ?’ ಎಂದು ಹೂಡಾ ಪ್ರಶ್ನಿಸಿದ್ದರು.
ಷಾ ಘೊಷಣೆ ಮತ್ತು ರಾಜಕೀಯ:ಚಂಡೀಗಢದ ನೌಕರರು ಪ್ರಸ್ತುತ ಪಂಜಾಬ್ ಸೇವಾ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಪಂಜಾಬ್ ಬದಲಿಗೆ ಕೇಂದ್ರದ ನಿಯಮಗಳ ವ್ಯಾಪ್ತಿಗೆ ತಂದರೆ ನಿವೃತ್ತಿ ವಯಸ್ಸು 58ರಿಂದ 60ಕ್ಕೆ ಏರಿಕೆಯಾಗಲಿದೆ. ಮಹಿಳಾ ಉದ್ಯೋಗಿಗಳು ಪ್ರಸ್ತುತ 1 ವರ್ಷದ ಬದಲಿಗೆ 2 ವರ್ಷಗಳ ಶಿಶುಪಾಲನಾ ರಜೆಯನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದರು. ಚಂಡೀಗಢ ನೌಕರರಿಗೆ ಕೇಂದ್ರ ಸೇವಾ ನಿಯಮಗಳನ್ನು ಜಾರಿಗೊಳಿಸಬೇಕೆಂಬ ಬೇಡಿಕೆ 20-25 ವರ್ಷಗಳಿಂದ ಇದೆ ಎನ್ನುವುದು ಗಮನಾರ್ಹ. ಹಾಗಿದ್ದರೂ, ಕಳೆದ ಡಿಸೆಂಬರ್​ನಲ್ಲಿ ಚಂಡೀಗಢ ಮುನ್ಸಿಪಲ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಿಜೆಪಿಗಿಂತಲೂ ಉತ್ತಮ ನಿರ್ವಹಣೆ ತೋರಿದ್ದರಿಂದ ಕೇಂದ್ರ ಬಿಜೆಪಿ ಇಂಥದ್ದೊಂದು ತೀರ್ಮಾನ ಪ್ರಕಟಿಸಿದೆ ಎಂದು ಹೇಳಲಾಗುತ್ತಿದೆ. ಪಂಜಾಬ್ ವಿಧಾನಸಭೆ ಚುನಾವಣೆ ಗೆದ್ದಿರುವ ಆಪ್ ರಾಜಕೀಯವಾಗಿ ಬಲಗೊಳ್ಳುತ್ತಿದೆ. ಹೀಗಾಗಿ, 2024ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು, ಸರ್ಕಾರಿ ನೌಕರರನ್ನು ತನ್ನತ್ತ ಸೆಳೆಯಲು ಬಿಜೆಪಿ ಈ ತಂತ್ರ ಅನುಸರಿಸುತ್ತಿದೆ ಎಂಬ ವಾದವಿದೆ.
ಕಾನೂನು ಏನು ಹೇಳುತ್ತದೆ?:1966ರ ಪಂಜಾಬ್ ಪುನರ್​ಸಂಘಟನೆ ಕಾಯ್ದೆಯಲ್ಲಿ ಚಂಡೀಗಢವನ್ನು ತಾತ್ಕಾಲಿಕ ಕೇಂದ್ರಾಡಳಿತ ಪ್ರದೇಶವೆಂದು ಘೊಷಣೆ ಮಾಡಿ, ಪಂಜಾಬ್ ಮತ್ತು ಹರಿಯಾಣಕ್ಕೆ ತಾತ್ಕಾಲಿಕ ರಾಜಧಾನಿಯಾಗಿರಲಿದೆ ಎಂದು ತಿಳಿಸಲಾಗಿತ್ತು. 1966ರ ಜಸ್ಟಿಸ್ ಜೆ.ಸಿ. ಶಾ ಆಯೋಗದ ವರದಿಯಲ್ಲಿ ಚಂಡೀಗಢವನ್ನು ಹರಿಯಾಣಕ್ಕೆ ಸೇರಿಸಬೇಕು ಎಂದು ಶಿಫಾರಸು ಮಾಡಲಾಗಿತ್ತು. ನಂತರ ಜುಲೈ 1985ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಶಿರೋಮಣಿ ಅಕಾಲಿದಳ ನಾಯಕ ಹರಿಚಂದ್ ಸಿಂಗ್ ಲೋಂಗೊವಾಲ್ ನಡುವೆ ಒಪ್ಪಂದವೇರ್ಪಟ್ಟು, ಚಂಡೀಗಢವನ್ನು ಪಂಜಾಬ್​ಗೆ ಹಸ್ತಾಂತರಿಸಲು ಸಮ್ಮತಿಸಲಾಯಿತು. 1986ರಲ್ಲಿ ಹಸ್ತಾಂತರ ನಡೆಯಬೇಕಿದ್ದರೂ, ಕಾರಣಾಂತರಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಪ್ರಸ್ತುತ ಚಂಡೀಗಢ ಆಡಳಿತವು ಪಂಜಾಬ್ ಮರುಸಂಘಟನೆ ಕಾಯಿದೆಯಲ್ಲಿ ಸೂಚಿಸಲಾದ ಮಾರ್ಗಸೂಚಿ ಅಡಿಯಲ್ಲಿ ನಡೆಯುತ್ತಿದೆ. ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು 60:40 ಅನುಪಾತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕುತೂಹಲಕಾರಿ ಅಂಶವೆಂದರೆ, 2011ರ ಸೆಪ್ಟೆಂಬರ್ 27ರಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪೆಂದನ್ನು ಆಧರಿಸಿ ಚಂಡೀಗಢದಲ್ಲಿ ತನ್ನ ಪಾಲೂ ಇದೆ ಎಂದು ಹಿಮಾಚಲ ಪ್ರದೇಶವೂ ವಾದಿಸುತ್ತಾ ಬಂದಿದೆ. ಪಂಜಾಬ್ ಮರುಸಂಘಟನೆ ಕಾಯಿದೆ, 1966ರ ಆಧಾರದ ಮೇಲೆ ಚಂಡೀಗಢದ ಭೂಮಿಯಲ್ಲಿ 7.19%ರಷ್ಟು ಪಾಲು ಹಿಮಾಚಲಕ್ಕಿದೆ ಎಂದು ಕೋರ್ಟ್ ಹೇಳಿತ್ತು.
ನಗರದ ಹಿನ್ನೆಲೆ, ವಿಶೇಷ:ಚಂಡೀಗಢಕ್ಕಿಂತ ಮೊದಲು ಪಂಜಾಬ್​ನ ತಾತ್ಕಾಲಿಕ ರಾಜಧಾನಿ ಶಿಮ್ಲಾ (ಹಿಮಾಚಲ ಪ್ರದೇಶದ ಈಗಿನ ರಾಜಧಾನಿ) ಆಗಿತ್ತು. ಆದರೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಆಧುನಿಕ ನಗರವೊಂದನ್ನು ರಾಜಧಾನಿಯಾಗಿ ಹೊಂದಲು ಬಯಸಿದ್ದರು. ಹೀಗಾಗಿ, ಚಂಡೀಗಢದ ಕಲ್ಪನೆ ಅಸ್ತಿತ್ವಕ್ಕೆ ಬಂದಿತು. ಅಂದಿನ ಪಂಜಾಬ್ ಸರ್ಕಾರ ಮತ್ತು ಕೇಂದ್ರದ ನಡುವೆ ಸಮಾಲೋಚನೆ ನಡೆದು, ಶಿವಾಲಿಕ್​ಗಳ ಬೆಟ್ಟಗಳ ತಪ್ಪಲಿನಲ್ಲಿರುವ ಚಂಡೀಗಢವನ್ನು ರಾಜಧಾನಿಯನ್ನಾಗಿ ಮಾಡಲು ತೀರ್ವನಿಸ ಲಾಯಿತು. 1953ರಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಚಂಡೀಗಢವನ್ನು ಪಂಜಾಬ್​ನ ಅಧಿಕೃತ ರಾಜಧಾನಿ ಎಂದು ಘೊಷಿಸಿದರು. ಭಾರತ ವಿಭಜನೆ ನಂತರ ಲಾಹೋರ್ ಪಾಕಿಸ್ತಾನದ ಭಾಗವಾದ್ದರಿಂದ ಪಂಜಾಬ್​ನ ರಾಜಧಾನಿಯಾಗಿ ಚಂಡೀಗಢವನ್ನು ಬದಲಿಸಲಾಯಿತು. ಇದು 1953ರಿಂದ 1966ರವರೆಗೆ ಅವಿಭಜಿತ ಪಂಜಾಬ್​ನ ರಾಜಧಾನಿಯಾಗಿತ್ತು. ಹಲವು ದಶಕಗಳಿಂದ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಚಂಡೀಗಢ ವಿಶಿಷ್ಟ ಸಾಂಸ್ಕೃತಿಕ ಸ್ವರೂಪವನ್ನು ಬೆಳೆಸಿಕೊಂಡಿದೆ. ಅನೇಕ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕೇಂದ್ರಗಳು, ಸೇನೆ ಮತ್ತು ವಾಯುಪಡೆಯೂ ಇಲ್ಲಿ ಕ್ಯಾಂಪ್ ಹೂಡಿವೆ. ವಿಶೇಷ ಕಾಸ್ಮೋಪಾಲಿಟನ್ ನಗರಿಯಾಗಿ ಬದಲಾಗಿರುವ ಚಂಡೀಗಢ ವಾಯವ್ಯ ಭಾಗದ ಯುವಕರನ್ನು ಸೆಳೆದಿದೆ. ಈ ಕಾರಣಕ್ಕಾಗಿಯೇ ನಿವಾಸಿಗರು ನಗರದ ಯಥಾಸ್ಥಿತಿ ಮುಂದುವರಿಕೆಯನ್ನೇ ಬಯಸಿದ್ದಾರೆ.
ನೀರಿಗಾಗಿ ಕಾದಾಟ:ಚಂಡೀಗಢ ಎಂದಿಗೂ ಪಂಜಾಬ್​ಗೆ ಸೇರಿದ್ದಾಗಿದೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪ್ರತಿಪಾದಿಸಿದ್ದರೆ, ಮತ್ತೋರ್ವ ಕಾಂಗ್ರೆಸ್ ನಾಯಕ ಸುನೀಲ್ ಜಾಖರ್, ಈ ವಿವಾದದಿಂದ ಎರಡು ರಾಜ್ಯಗಳ ನಡುವೆ ಸಂಘರ್ಷ ಹೆಚ್ಚಾಗುತ್ತದೆಯೇ ವಿನಃ ಮತ್ತೇನೂ ಸಾಧಿಸಲಾಗದು ಎಂದಿದ್ದಾರೆ. ಹರಿಯಾಣದ ರಾಜಕೀಯ ನಾಯಕರು ಪಂಜಾಬ್​ನಿಂದ ರಾಜ್ಯದ ನದಿ ನೀರಿನ ಪಾಲನ್ನು ಪಡೆಯಲು ಸಟ್ಲೆಜ್-ಯಮುನಾ ಸಂಪರ್ಕ ಕಾಲುವೆ ಪೂರ್ಣಗೊಳಿಸಬೇಕೆಂದು ಒತ್ತಾಯಿಸು ತ್ತಿದ್ದಾರೆ. ಹಿಂದಿ ಮಾತನಾಡುವ 400 ಹಳ್ಳಿಗಳನ್ನು ಹರಿಯಾಣಕ್ಕೆ ಸೇರಿಸಬೇಕು ಎಂದೂ ಕೋರಿದ್ದಾರೆ. ‘ಹರಿಯಾಣಕ್ಕೆ ಚಂಡೀಗಢ ನೆಪ ಮಾತ್ರ. ಅವರ ಗುರಿ ಪಂಜಾಬ್​ನ ನದಿ ನೀರು. ಅವರ ಮುಂದಿನ ಯುದ್ಧವು ಪಂಜಾಬ್​ನ ನದಿ ನೀರಿಗಾಗಿ’ ಎಂದು ಸಿಧು ಭವಿಷ್ಯ ನುಡಿದಿದ್ದಾರೆ.
ಇನ್ನು ಮ್ಯಾಂಗೋ ವಾರ್!?: ಹಲಾಲ್​-ಜಟ್ಕಾ ಬಳಿಕ ಮಾವಿಗೂ ಬಂತು ಧರ್ಮಸಂಘರ್ಷ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + seven =
Remember me
