ಬೆಂಗಳೂರು:ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿರುವ ‘ಭಾರತ್ ಬಂದ್’ಗೆ ರಾಜ್ಯದಲ್ಲೂ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಮಂಗಳವಾರ ರಾಜ್ಯದಲ್ಲಿ ಜನಜೀವನ ವ್ಯತ್ಯಯವಾಗುವ ಸಾಧ್ಯತೆ ಇದೆ. ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಒಕ್ಕೂಟ ನೀಡಿದ್ದ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ರೈತ ಸಂಘಟನೆಗಳು ಕರೆ ನೀಡಿದ ಕಾರಣ ಹಲವಾರು ಸಂಘಟನೆಗಳು ಬಂದ್​ಗೆ ಕೈಜೋಡಿಸಿವೆ. ಹೀಗಾಗಿ ಹರಿಯಾಣ ಮತ್ತು ಪಂಜಾಬ್ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟ ರಾಜ್ಯದಲ್ಲೂ ಪ್ರತಿಧ್ವನಿಸಲಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಾರ್ಟಿ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಬಂದ್​ನಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ನಡುವೆಯೇ ಭಾರತ್ ಬಂದ್ ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿಮುಟ್ಟಿಸಲು ರೈತ ಸಂಘಟನೆಗಳು ಸಜ್ಜಾಗಿವೆ. ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್ ರಾಜ್ಯವ್ಯಾಪಿ ಬಂದ್ ನಡೆಸಲು ಕರೆ ನೀಡಿದ್ದಾರೆ.
ವಿಧಾನಸೌಧಕ್ಕೆ ಮುತ್ತಿಗೆ:ರಾಜ್ಯದ ವಿವಿಧ ಭಾಗಗಳಿಂದ ರಾಜಧಾನಿ ಪ್ರವೇಶಿಸುವ ರೈತರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಐಕ್ಯ ಹೋರಾಟ ಸಮಿತಿಯಿಂದ ಮೌರ್ಯ ಸರ್ಕಲ್​ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಲಿದೆ. ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತ ಹೋರಾಟಗಾರರು, ಎಪಿಎಂಸಿ ಕೂಲಿ ಕಾರ್ವಿುಕರು, ಬೀದಿಬದಿ ವ್ಯಾಪಾರಿಗಳು, ಲಾರಿ ಮಾಲೀಕರ ಸಂಘ, ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ಬೆಂಬಲ ನೀಡಿದ್ದಾರೆ. ಕರವೇ ಪ್ರವೀಣ್ ಶೆಟ್ಟಿ ಬಣ, ಓಲಾ, ಊಬರ್ ಟ್ಯಾಕ್ಸಿ, ಸಾರಿಗೆ ನೌಕರರ ಸಂಘ, ಹೋಟೆಲ್ ಮಾಲೀಕರ ಸಂಘ, ಕರ್ನಾಟಕ ರಾಜ್ಯ ಟ್ರಾವೆಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡಲಿವೆ.
ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಜಮಾಯಿಸುವ ಸಾಧ್ಯತೆ ಇರುವ ಕಾರಣ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದರು. 15 ಸಾವಿರಕ್ಕಿಂತ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಐವರು ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು, ಎಸಿಪಿಗಳು, 35 ಕೆಎಸ್​ಆರ್​ಪಿ, 32 ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಬೆಳಗ್ಗೆಯಿಂದಲೇ ಎಲ್ಲೆಡೆ ಅಧಿಕಾರಿಗಳು, ಹೊಯ್ಸಳ, ಚೀತಾ ಗಸ್ತು ತಿರುಗುವಂತೆ ಕಮಲ್ ಪಂತ್ ಸೂಚನೆ ಕೊಟ್ಟಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಫ್ರೀಡಂ ಪಾರ್ಕ್, ಮೈಸೂರು ಬ್ಯಾಂಕ್ ಸರ್ಕಲ್, ಪುರಭವನ, ಆನಂದರಾವ್ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಕಾರರು ಸೇರುವ ಸಾಧ್ಯತೆಗಳಿವೆ. ಇಲ್ಲಿನ ಸುತ್ತಮುತ್ತಲ ರಸ್ತೆಗಳನ್ನು ಬಳಸುವರು ಬದಲಿ ಮಾರ್ಗ ಅನುಸರಿಸಿದರೆ ಒಳಿತು. ರಾಜಧಾನಿ ಪ್ರವೇಶಿಸುವ ಹೊಸೂರು ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಕೋಲಾರ ರಸ್ತೆ, ಮಾಗಡಿ ರಸ್ತೆ, ಕನಕಪುರ ರಸ್ತೆ ಮಾರ್ಗಗಳಲ್ಲಿ ಬಂದ್ ಬಿಸಿ ತಟ್ಟಲಿದೆ.
ಭಾರತ್ ಬಂದ್​ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲ ನೀಡಿವೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೃಷಿ ಕಾಯ್ದೆಗಳು ಜನವಿರೋಧಿಯಾಗಿವೆ. 2.80 ಲಕ್ಷ ರೈತರು ಕಾಯ್ದೆ ವಿರೋಧಿಸಿ ನಮಗೆ ಪೋಸ್ಟ್ ಕಾರ್ಡ್ ಕಳುಹಿಸಿದ್ದಾರೆ. ಅವೆಲ್ಲವನ್ನೂ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದರು.
ಜೆಡಿಎಸ್ ಬೆಂಬಲ:ಭಾರತ್ ಬಂದ್​ಗೆ ಪಕ್ಷ ಬೆಂಬಲ ನೀಡಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು. ಕೇಂದ್ರ ಸರ್ಕಾರ ಜನವಿರೋಧಿ ಕಾನೂನು ತರುತ್ತಿದೆ. ಇದರ ವಿರುದ್ಧ ರೈತರು ಭಾರತ ಬಂದ್ ಕರೆ ನೀಡಿದ್ದು, ಇದಕ್ಕೆ ನಮ್ಮ ಬೆಂಬಲವಿದೆ ಎಂದರು. ಜೆಡಿಎಸ್ ಮುಖಂಡ ಶಿವಲಿಂಗೇಗೌಡ ಮಾತನಾಡಿ, ‘ಉತ್ತರ ಭಾರತದ ರೈತರು ಹೋರಾಟ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ರೈತರು ಹೋರಾಟ ಮಾಡಿ ಸಾಕಾಗಿದೆ. ಕೇಂದ್ರದ ರೈತ ವಿರೋಧಿ ನೀತಿ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ರೈತರ ಪರವಾಗಿ ನಾವಿರೋದಾದರೆ ಸದನ ಬಂದ್ ಮಾಡಬೇಕು. ಪ್ರತಿಪಕ್ಷದವರು ಮಂಗಳವಾರ ಬಂದ್ ಬೆಂಬಲಿಸಿ ಕಲಾಪ ಬಹಿಷ್ಕರಿಸಬೇಕು’ ಎಂದು ತಿಳಿಸಿದರು.
ಬಂದ್​ಗೆ ಖಾಸಗಿ ಶಾಲೆಗಳು ಬೆಂಬಲ ಸೂಚಿಸಿದ್ದು, ಮಂಗಳವಾರ ಆನ್​ಲೈನ್ ಕ್ಲಾಸ್ ನಡೆಯುವುದಿಲ್ಲ ಎಂದು ಬಹುತೇಕ ಶಾಲೆಗಳು ವಿದ್ಯಾರ್ಥಿಗಳಿಗೆ ಈಗಾಗಲೇ ಸೂಚನೆ ನೀಡಿವೆ. ‘ನಾವು ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಶಿಕ್ಷಣ ನೀಡುತ್ತಿದ್ದು, ಇದಕ್ಕೆ ಸರ್ಕಾರ ಸಾಕಷ್ಟು ಅಡೆತಡೆ ಉಂಟುಮಾಡುತ್ತಿದೆ. ಕೆಲವು ಖಾಸಗಿ ಕಂಪನಿಗಳು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಶಿಕ್ಷಣ ದಿಕ್ಕನ್ನೇ ಬದಲಾಯಿಸಿ ಶಾಲೆಗಳನ್ನು ನಡೆಸುತ್ತಿವೆ. ಇಂತಹ ಶಾಲೆಗಳಿಗೆ ಸರ್ಕಾರ ಬೆಂಬಲ ನೀಡುತ್ತದೆ. ರೈತರ ಮತ್ತು ಶಾಲಾ ಮಾಲೀಕರ ಕಷ್ಟಗಳು ಒಂದೇ ರೀತಿಯಾಗಿರುವುದರಿಂದ ನಾವು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತೇವೆ’ ಎಂದು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಕ್ಯಾಮ್ಸ್​ನ ಪ್ರಧಾನ ಕಾರ್ಯದರ್ಶಿ ಡಿ. ಶಶಿ ಕುಮಾರ್ ಹೇಳಿದ್ದಾರೆ.
ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಂಪೂರ್ಣ ಬಂದ್ ನಡೆಸಲಾಗುವುದು. ತುರ್ತು ಸೇವೆಗಳಿಗೆ ಅಡ್ಡಿ ಇರುವುದಿಲ್ಲ. ಬಂದ್​ನಲ್ಲಿ ಭಾಗಿಯಾಗುವಂತೆ ಯಾರ ಮೇಲೂ ಒತ್ತಡ ಹೇರುವುದಿಲ್ಲ. ಶಾಂತಿಯುತವಾಗಿ ಬಂದ್ ನಡೆಸಲಾಗುತ್ತದೆ. ಹೊಸ ಕೃಷಿ ಕಾಯ್ದೆಯನ್ನು ಹಿಂಪಡೆಯಬೇಕು ಎಂಬುದು ನಮ್ಮ ಬೇಡಿಕೆ ಎಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡ ಬಲ್​ಬೀರ್ ಸಿಂಗ್ ಹೇಳಿದ್ದಾರೆ.
ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ಪ್ರತಿಪಕ್ಷಗಳ ವಿರುದ್ಧ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಿಡಿಕಾರಿದ್ದಾರೆ. ಕಾಂಗ್ರೆಸ್ ಹಾಗೂ ಎನ್​ಸಿಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೃಷಿ ಕಾಯ್ದೆಗೆ ಇದೇ ರೀತಿಯ ತಿದ್ದುಪಡಿ ತರಲು ಮುಂದಾಗಿದ್ದವು. ಅದು ಸಾಧ್ಯವಾಗಿರಲಿಲ್ಲ. ಈಗ ನರೇಂದ್ರ ಮೋದಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಅಂದು ಕಾಯ್ದೆ ಜಾರಿಗೆ ಮುಂದಾಗಿದ್ದ ಪಕ್ಷಗಳೇ ಇಂದು ರಾಜಕೀಯ ಉದ್ದೇಶಕ್ಕೆ ವಿರೋಧಿಸುತ್ತಿವೆ. ರೈತರಲ್ಲಿ ತಪು್ಪ ಅಭಿಪ್ರಾಯ ಮೂಡಿಸಿ, ದಾರಿ ತಪ್ಪಿಸಲಾಗುತ್ತಿದೆ ಎಂದು ಅವರು ಹರಿಹಾಯ್ದಿದ್ದಾರೆ.

ಹೊಸ ಕೃಷಿ ಕಾಯ್ದೆಯನ್ನು ಪ್ರಧಾನಿ ನರೇಂದ್ರ ಮೋದಿ ಪುನಃ ಸಮರ್ಥನೆ ಮಾಡಿಕೊಂಡಿದ್ದಾರೆ. ‘ದೇಶದ ಅಭಿವೃದ್ಧಿ ದೃಷ್ಟಿಯಿಂದ ಕಾಯ್ದೆಗಳಲ್ಲಿ ಸುಧಾರಣೆ ತರುವುದು ಅಗತ್ಯ. ಹೊಸ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಲು ತಿದ್ದುಪಡಿ ಅಗತ್ಯ. ಹಿಂದಿನ ಶತಮಾನದ ಕಾಯ್ದೆಗಳನ್ನು ಇಟ್ಟುಕೊಂಡು, ಮುಂದಿನ ಶತಮಾನವನ್ನು ಕಟ್ಟಲು ಸಾಧ್ಯವಿಲ್ಲ. ಈ ಹಿಂದೆ ಉತ್ತಮವಾಗಿದ್ದ ಕೆಲ ಕಾಯ್ದೆಗಳು ಇಂದು ನಿರುಪಯುಕ್ತಗೊಂಡು, ಹೊರೆಯಾಗಿವೆ. ಸುಧಾರಣೆ ನಿರಂತರ ಪ್ರಕ್ರಿಯೆ. ವ್ಯವಸ್ಥೆಯ ಸಮಗ್ರ ಸುಧಾರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಉತ್ತರ ಪ್ರದೇಶ ಸಹಿತ ಕಳೆದ ಚುನಾವಣೆಗಳಲ್ಲಿ ಜನರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಅವರು ಹೇಳಿದ್ದಾರೆ.
ಹೋಟೆಲ್, ಬಿಎಂಟಿಸಿ, ಕೆಎಸ್​ಆರ್​ಟಿಸಿ, ನಗರ ಸಾರಿಗೆ, ಆಟೋ, ಆಪ್ ಆಧಾರಿತ ಕ್ಯಾಬ್ ಸೇವೆ, ಚಿತ್ರಮಂದಿರ, ವಾಣಿಜ್ಯ ಮಳಿಗೆ, ಮದ್ಯದ ಅಂಗಡಿ ವ್ಯಾಪಾರ ವಹಿವಾಟಿನಲ್ಲಿ ವ್ಯತ್ಯಯ ಆಗಲಿದೆ.
ದಿನಬಳಕೆ ವಸ್ತುಗಳು, ಆಸ್ಪತ್ರೆ, ಆಂಬುಲೆನ್ಸ್, ಔಷಧ ಅಂಗಡಿ, ತರಕಾರಿ, ಹಾಲು, ದಿನಪತ್ರಿಕೆಗಳ ಮಾರಾಟಕ್ಕೆ ಅಡ್ಡಿ ಇಲ್ಲ.

ಬಂದ್ ಮಾಡುವುದನ್ನು ಬಿಟ್ಟು, ಪ್ರಧಾನಿ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಕೇಂದ್ರ ಸರ್ಕಾರ ರೈತಪರವಾಗಿದೆ. ರೈತವಿರೋಧಿ ನಿರ್ಧಾರ ಕೈಗೊಳ್ಳುವುದಿಲ್ಲ. ಬಂದ್ ಮಾಡುವುದರಿಂದ ದೇಶದ ಜನರಿಗೆ ತೊಂದರೆಯಾಗುತ್ತದೆ.
|ಬಿ.ಎಸ್.ಯಡಿಯೂರಪ್ಪಮುಖ್ಯಮಂತ್ರಿ
ರಾಜ್ಯದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಲ್ಲೆಡೆ ಹೆಚ್ಚುವರಿ ಸಿಬ್ಬಂದಿ, ಆಯಾ ಜಿಲ್ಲಾ ಎಸ್​ಪಿ, ಕಮಿಷನರೇಟ್​ಗಳಲ್ಲಿ ಆಯುಕ್ತರು ಭದ್ರತೆ ಉಸ್ತುವಾರಿ ವಹಿಸಿದ್ದಾರೆ.
|ಪ್ರತಾಪ್ ರೆಡ್ಡಿರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗ ಎಡಿಜಿಪಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − seven =
Remember me
