ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸಿಕೊಡುವುದು. ಕಿಂಚಿತ್ತೂ ಭೇದ ಮಾಡದೆ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಸ್ವಾತಂತ್ರ್ಯ, ಧಾರ್ವಿುಕ ಸ್ವಾತಂತ್ರ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಸಂವಿಧಾನಾತ್ಮಕ ಪರಿಹಾರದ ಹಕ್ಕು, ಶೋಷಣೆಯ ವಿರುದ್ಧ ಹೋರಾಡುವ ಹಕ್ಕನ್ನು ನೀಡಲಾಗಿದೆ.
ಈ ಘಟನೆಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತ್ ಜೋಡೋ ಯಾತ್ರೆ ತುಮಕೂರಿನ ಚಿಕ್ಕನಾಯಕನಹಳ್ಳಿ ಬಳಿ ಹಾದು ಹೋಗುತ್ತಿದ್ದ ಸಂದರ್ಭ. ನೆತ್ತಿಯನ್ನು ಸುಡುವ ಬಿಸಿಲನ್ನು ಲೆಕ್ಕಿಸದೆ ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕುತ್ತಿದ್ದೆವು. ಸಾವಿರಾರು ಜನರ ಮಧ್ಯೆ ತಾಯಿಯೊಬ್ಬರು ಕೈಯಲ್ಲಿ ಸೌತೆಕಾಯಿ ಹಿಡಿದುಕೊಂಡು ರಾಹುಲ್ ಗಾಂಧಿ ಕಡೆಗೆ ಕೈ ಬೀಸುತ್ತಿದ್ದರು. ಹತ್ತಿರ ಬನ್ನಿ ಎಂದು ಕೈ ಸನ್ನೆ ಮಾಡಿದ್ದೇ ತಡ ನಮ್ಮ ಬಳಿಗೆ ಓಡಿ ಬಂದ ತಾಯಿ, ‘ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದ ಸೌತೆಕಾಯಿ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು.
‘ಉಳುವವನೆ ಭೂಮಿಯ ಒಡೆಯ’ ಕಾನೂನಿನ ಮೂಲಕ ಅಂದು ಬಿತ್ತಿದ ಬೀಜ ಮರವಾಗಿ ಫಲ ಕೊಟ್ಟಿತ್ತು. ಈ ಸನ್ನಿವೇಶ ಸಾಮಾಜಿಕ ನ್ಯಾಯಕ್ಕೆ ಪುಟ್ಟ ಉದಾಹರಣೆ ಮಾತ್ರ. ನಮಗೆ ಸೌತೆಕಾಯಿ ಕೊಟ್ಟ ಶಾರದಮ್ಮ ಅವರು ಇಂದು ನಮ್ಮ ನಡುವೆ ಇಲ್ಲ. ಆದರೆ ಇಡೀ ರಾಜ್ಯ, ದೇಶದಾದ್ಯಂತ ಶಾರದಮ್ಮ ಅವರಂತಹ ಲಕ್ಷಾಂತರ ಕುಟುಂಬಗಳು ಸಾಮಾಜಿಕ ನ್ಯಾಯ ಪರಿಕಲ್ಪನೆಯ ಪಾಲುದಾರರಾಗಿದ್ದಾರೆ. ಅನ್ನ ಬೆಳೆದು ಜನರ ಹಸಿವು ನೀಗಿಸುತ್ತಿದ್ದಾರೆ. ಫೆಬ್ರವರಿ 20 ‘ವಿಶ್ವ ಸಾಮಾಜಿಕ ನ್ಯಾಯ ದಿನ’ದ ನೆಪದಲ್ಲಿ ಈ ಘಟನೆಯನ್ನು ನೆನಪಿಸಿಕೊಳ್ಳಬೇಕಾಯಿತು.
ಸಂಪತ್ತು ಮತ್ತು ಅಧಿಕಾರವು ಸಮಾನ ಹಂಚಿಕೆಯಾದಾಗ ಮಾತ್ರ ಸಾಮಾಜಿಕ ನ್ಯಾಯದ ಪರಿಧಿ ಹೆಚ್ಚುತ್ತ ಹೋಗುತ್ತದೆ ಎಂಬುದು ನನ್ನ ವೈಯಕ್ತಿಕ ನಂಬಿಕೆ. ಸಮಾಜದಲ್ಲಿರುವ ಎಲ್ಲ ರೀತಿಯ ಅಸಮಾನತೆಯನ್ನು ಹೋಗಲಾಡಿಸಿ ಹಿಂದುಳಿದವರ, ಬಡವರ, ದುರ್ಬಲರ, ತುಳಿತಕ್ಕೆ ಮತ್ತು ಶೋಷಣೆಗೆ ಒಳಪಟ್ಟವರನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರನ್ನಾಗಿ ಮಾಡುವುದೇ ಸಾಮಾಜಿಕ ನ್ಯಾಯ.
ಕುಡಿಯುವ ನೀರಿಗೆ, ನಡೆಯುವ ದಾರಿಗೆ ಹೋರಾಟ ಮಾಡಬೇಕಾಗಿದ್ದ ಕಾಲ ಇಂದಿಗೂ ಜೀವಂತವಿದೆ ಎಂದರೆ ಯಾರೂ ನಂಬುವುದಿಲ್ಲ. ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಒಂದು ಇತಿಹಾಸವಿದೆ. ಈ ಇತಿಹಾಸವನ್ನು ಮರೆತರೇ ನಮ್ಮ ದೇಶ ಮತ್ತೆ ಇನ್ನೂರೂ ವರ್ಷಗಳಷ್ಟು ಹಿಂದಕ್ಕೆ ಹೋದರೂ ಆಶ್ಚರ್ಯಪಡಬೇಕಾಗಿಲ್ಲ. ಕಾಕತಾಳೀಯ ಎಂಬಂತೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಕಾಂಗ್ರೆಸ್ ಸರ್ಕಾರ ಘೊಷಣೆ ಮಾಡಿದೆ. ಸಾಮಾಜಿಕ ನ್ಯಾಯದ ಮೊದಲ ಹರಿಕಾರ ಬಸವಣ್ಣನವರು 900 ವರ್ಷದ ಹಿಂದೆಯೇ ಕನ್ನಡದ ನೆಲದಲ್ಲಿ ಸಾಮಾಜಿಕ ನ್ಯಾಯದ ಪರವಾದ ದೊಡ್ಡ ಕ್ರಾಂತಿಯ ಕಿಡಿ ಹೊತ್ತಿಸಿದ್ದರು.
ಇವನಾರವ, ಇವನಾರವ, ಇವನಾರವ ಎಂದೆನಿಸದಿರಯ್ಯ
ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ
ಕೂಡಲಸಂಗಮ ದೇವ ನಿಮ್ಮ ಮನೆಯ ಮಗನೆಂದೆನಿಸಯ್ಯಾ
ಈ ರೀತಿಯ ನೂರಾರು ವಚನಗಳ ಮೂಲಕ ಕಾಯಕ, ದಾಸೋಹ ಪರಿಕಲ್ಪನೆಯನ್ನು ಹುಟ್ಟುಹಾಕಿ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಮಹಾಮನೆ ನಿರ್ಮಾಣ ಮಾಡಿದವರು ಬಸವಣ್ಣ. ಇದರ ಜೊತೆಗೆ ಸಾರ್ವಜನಿಕ ಜೀವನದಲ್ಲಿ ಇರುವ ನಾವುಗಳು ಪ್ರತಿಕ್ಷಣವೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಈ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಲೇ ಬೇಕು, ‘ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ. ಅದೊಂದು ಹಕ್ಕು’ ಎಂದಿದ್ದರು. ಬುದ್ಧ, ಬಸವಣ್ಣನವರ ಪರಿಕಲ್ಪನೆಯನ್ನು ಸರ್ಕಾರದ ನೀತಿಯಾಗಿಸಿದವರು. ಬಾಬಾಸಾಹೇಬರು ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಅತ್ಯಂತ ಸರಳವಾಗಿ ಸಾಮಾಜಿಕ ನ್ಯಾಯದ ಬಗ್ಗೆ ವಿವರಿಸಿದ್ದಾರೆ. ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸಿಕೊಡುವುದು. ಕಿಂಚಿತ್ತೂ ಭೇದ ಮಾಡದೆ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಸ್ವಾತಂತ್ರ್ಯ, ಧಾರ್ವಿುಕ ಸ್ವಾತಂತ್ರ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಸಂವಿಧಾನಾತ್ಮಕ ಪರಿಹಾರದ ಹಕ್ಕು, ಶೋಷಣೆಯ ವಿರುದ್ಧ ಹೋರಾಡುವ ಹಕ್ಕನ್ನು ನೀಡಲಾಗಿದೆ. ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಕರ್ತವ್ಯಗಳನ್ನು ನೀಡಲಾಗಿದೆ.
ನನ್ನ ಬಾಲ್ಯ ಹಾಗೂ ವಿದ್ಯಾರ್ಥಿ ಜೀವನ ದಲ್ಲಿ ಕಾಂಗ್ರೆಸ್ ಪಕ್ಷದ ನೂರಾರು ಕೆಲಸ ಕಾರ್ಯಗಳನ್ನು ನೋಡಿ ಬೆಳೆದವನು. ನಾನು ರಾಜಕೀಯಕ್ಕೆ ಪದಾರ್ಪಣೆ ಮಾಡುವ ವೇಳೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಾಕಾರಗೊಳ್ಳುತ್ತಿದ್ದ ಉಚ್ಛಾ›ಯ ಸ್ಥಿತಿ ಎನ್ನಬಹುದು. ಇಂದಿರಾ ಗಾಂಧಿ ಅವರ ‘ಉಳುವವನೆ ಭೂಮಿಯ ಒಡೆಯ’ ಯೋಜನೆಯ ಫಲವಾಗಿ ಕೋಟ್ಯಂತರ ಕುಟುಂಬಗಳು ಭೂಮಿಯನ್ನು ಪಡೆದಿದ್ದವು. ದೇವರಾಜ ಅರಸು ಅವರು ಇಂದಿರಾ ಗಾಂಧಿ ಅವರ ಕನಸಿಗೆ ಬೆನ್ನೆಲುಬಾಗಿ ನಿಂತರು. ಅರಸು ಅವರ ಕಾಲದ ಜನತಾ ಮನೆ ಯೋಜನೆ ಬಗ್ಗೆ ಸಣ್ಣ ಉದಾಹರಣೆ ನೀಡುವುದಾದರೆ, 1972-73ರಲ್ಲಿ 85 ಲಕ್ಷ ರೂಪಾಯಿಗಳನ್ನು ಬಜೆಟ್​ನಲ್ಲಿ ಮೀಸಲಿಡುವ ಮೂಲಕ ಪ್ರಾರಂಭವಾದ ಸೂರು ನೀಡುವ ಯೋಜನೆ ಕ್ರಾಂತಿ ಸೃಷ್ಟಿಸಿತು. ಅಂಕಿ-ಅಂಶಗಳ ಪ್ರಕಾರ 1971-1981ರ ಅವಧಿಯಲ್ಲಿ ಕರ್ನಾಟಕದಲ್ಲಿ ಎದ್ದು ನಿಂತ ಮನೆಗಳ ಸಂಖ್ಯೆ 31,04,073.
ಅರಸು ಅವರು ಜಾರಿಗೆ ತಂದ ಉದ್ಯೋಗ ಭರವಸೆಯ ಯೋಜನೆ 2005ರಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದ ಮಹಾತ್ಮ ಗಾಂಧಿ ನರೇಗಾ ಯೋಜನೆಗೆ ಸ್ಪೂರ್ತಿ. ಜೀತವಿಮುಕ್ತಿ, ಮಲಹೊರುವ ಪದ್ಧತಿಯ ನಿಷೇಧ, ಗ್ರಾಮೀಣ ಬಡವರ ಸಾಲಮನ್ನಾ ಯೋಜನೆ, ನಗರ ಕೊಳಚೆ ಪ್ರದೇಶ ನಿಮೂಲನೆಗೆ ಕೊಳಚೆ ನಿಮೂಲನ ಮಂಡಳಿ ಸ್ಥಾಪನೆ, ಬಡವರಿಗೆ ಮತ್ತು ಬೇರೆಬೇರೆ ವೃತ್ತಿ ಸಮುದಾಯಗಳಿಗೆ ಅಗ್ಗದ ಬಡ್ಡಿ ದರದಲ್ಲಿ ಸಾಲಸೌಲಭ್ಯ, ರಸ್ತೆಬದಿಯಲ್ಲಿ ಚಮ್ಮಾರಿಕೆ ಮಾಡುವವರಿಗೆ ಲಿಡ್ಕರ್ ಸಂಸ್ಥೆ ಮೂಲಕ ನೆರವು, ಭಿಕ್ಷಾಟನೆ ನಿಮೂಲನಕ್ಕೆ ಕ್ರಮ, ಭಿಕ್ಷುಕರ ಪುನರ್ವಸತಿ ಕೇಂದ್ರ ಸ್ಥಾಪನೆ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಪೌಷ್ಟಿಕಾಂಶಯುಕ್ತ ಆಹಾರ ಪೂರೈಕೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳು ಜಾರಿಯಾದವು. ನನ್ನ ರಾಜಕೀಯ ಗುರುಗಳಾದ ಬಂಗಾರಪ್ಪ ಅವರು ಗ್ರಾಮೀಣ ಕೃಪಾಂಕ ಕಾರ್ಯಕ್ರಮದ ಮೂಲಕ ಲಕ್ಷಾಂತರ ಗ್ರಾಮೀಣ ಯುವಕರು ಸರ್ಕಾರಿ ಕೆಲಸ ಪಡೆಯಲು ಕಾರಣರಾದರು.
ವೀರಪ್ಪ ಮೊಯ್ಲಿ ಅವರು ಸಿಇಟಿ ಪ್ರಾರಂಭ ಮಾಡಿದ ಕಾರಣ ರಾಜ್ಯದ ಪ್ರತಿ ಕುಟುಂಬದಲ್ಲಿಯೂ ಒಬ್ಬ ಇಂಜಿನಿಯರ್, ಡಾಕ್ಟರ್​ಗಳು ಉದಯಿಸಿದರು. ಎಸ್.ಎಂ. ಕೃಷ್ಣ ಅವರ ಐಟಿ ಕ್ರಾಂತಿಯಿಂದ ಹಳ್ಳಿ ಹೈದರು ಸಾಫ್ಟ್​ವೇರ್ ಕ್ಷೇತ್ರದಲ್ಲಿ ಸಾಧನೆ ಮಾಡಿದರು. 2013- 18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ಗರ್ಭಿಣಿಯರಿಗೆ ‘ಮಾತೃಪೂರ್ಣ’ ಯೋಜನೆ ಸೇರಿದಂತೆ ಹಿಂದೆಂದೂ ಕಾಣದಂಥ ಅಭೂತಪೂರ್ವ ಯೋಜನೆಗಳನ್ನು ನೀಡಲಾಯಿತು. ವೈಜ್ಞಾನಿಕವಾಗಿ ಜಾತಿಗಣತಿ ನಡೆಸಲು ಮುನ್ನಡಿ ಇಟ್ಟಿದ್ದೇ ನಮ್ಮ ಸರ್ಕಾರ.
ಗೋಪಾಲಕೃಷ್ಣ ಅಡಿಗರ ಕವಿತೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಆಶಯವನ್ನೇ ಪ್ರತಿಧ್ವನಿಸುತ್ತದೆ.
ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನಲಹರಿಯ ಮೇಲೆ
ತೇಲಿ ಬರಲಿದೆ ನೋಡು, ನಮ್ಮ ನಾಡು!
ಪ್ರಸ್ತುತ ಇಡೀ ಭಾರತವೇ ಕರ್ನಾಟಕ ಮಾದರಿಯ ಕಡೆಗೆ ತಿರುಗಿ ನೋಡುತ್ತಿದೆ. ‘ಫ್ರೀಬೀಸ’ ಎಂದು ಆಡಿಕೊಂಡವರೇ ಅದರ ಫಲಾನುಭವಿಗಳಾಗಿದ್ದಾರೆ. ಆದರೆ ಇಂದು ಕೇವಲ 9 ತಿಂಗಳಲ್ಲಿ 1.5 ಕೋಟಿ ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬಂದಿವೆ. 2024-25ರಲ್ಲಿ 52,0009 ಕೋಟಿ ರೂಪಾಯಿ ಹಣವನ್ನು ಐದು ಗ್ಯಾರಂಟಿ ಯೋಜನೆಗಳಿಗೆ ನೀಡಿದ್ದೇವೆ. ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಗೌರವಸಲ್ಲಿಸುವುದು ಎಂದರೆ ಇದೇ ಅಲ್ಲವೇ?
ಬಾಬಾಸಾಹೇಬರ ನೇತೃತ್ವದಲ್ಲಿ ಸಂವಿಧಾನ ರಚನೆಗೆ ಜವಹರ್​ಲಾಲ್ ನೆಹರು ಅವರು ಬದ್ಧತೆ ತೋರಿದ ಕಾರಣಕ್ಕೆ ನೀರು, ಅನ್ನ, ಸೂರು ಎಲ್ಲರಿಗೂ ಸಿಗುವಂತಾಗಿದೆ. ಇಲ್ಲದಿದ್ದರೆ ಎಲ್ಲರಂತೆ ಓಡಾಡುವಂತಿರಲಿಲ್ಲ, ಅಕ್ಷರದ ಗಂಧಗಾಳಿಯೂ ತಾಕುತ್ತಿರಲಿಲ್ಲ. ಕಾಲಗರ್ಭದಲ್ಲಿ ಬಹುದೂರ ಸಾಗಿ ಬಂದಿದ್ದೇವೆ. ಈಗ ಹೊಸ ತಲೆಮಾರಿಗೆ ನಮ್ಮ ಇತಿಹಾಸವನ್ನು ನೆನಪಿಸುವ, ವರ್ಗಾಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ‘ಕಟ್ಟುವೆವು ನಾವು ಹೊಸ ನಾಡೊಂದನು, -ರಸದ ಬೀಡೊಂದನು’ ಎನ್ನುವ ಸಾಲುಗಳನ್ನು ಯುವಜನರು ಗುನುಗಬೇಕಿದೆ. ಕೊನೆಯದಾಗಿ ಹೇಳುವುದಾದರೆ ಯುಗದ ಕವಿ, ಜಗದ ಕವಿ ಕುವೆಂಪು ಅವರ ಈ ಸಾಲುಗಳು ಪ್ರತಿಯೊಬ್ಬರ ಎದೆಯಲ್ಲಿ ಪ್ರತಿಧ್ವನಿಸಬೇಕಿದೆ.
ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ!
ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದೂ ಅಲ್ಲ ವ್ಯರ್ಥ, ನೀರೆಲ್ಲವೂ ತೀರ್ಥ!
(ಲೇಖಕರು ರಾಜ್ಯದ ಉಪಮುಖ್ಯಮಂತ್ರಿ)
ನೀನು ಯಾವ… ನಟ ದರ್ಶನ್ ಆಡಿದ ಆ ಒಂದು ಮಾತಿಗೆ​ ಕೆರಳಿ ಕೆಂಡವಾದ ಅಹೋರಾತ್ರ, ಅಶ್ಲೀಲ ಪದ ಬಳಕೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:17 + one =
Remember me
