ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಗ್ಗೆ 11 ಗಂಟೆಗೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ. ಅಧ್ಯಕ್ಷ ಜೋ ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ, ಕ್ವಾಡ್ ರಾಷ್ಟ್ರಗಳ ಮುಖಂಡರ ಶೃಂಗಸಭೆ ಮತ್ತು ವಿಶ್ವಸಂಸ್ಥೆಯ 76ನೇ ಮಹಾ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಇದು ಕರೊನಾ ಸಾಂಕ್ರಾಮಿಕತೆ ಕಾಲದಲ್ಲಿ ಮೋದಿಯವರ ಪ್ರಮುಖ ಮೊದಲ ವಿದೇಶ ಪ್ರವಾಸವಾಗಲಿದೆ. ಕೋವಿಡ್ ಮಹಾಮಾರಿಯಿಂದಾಗಿ ಕಳೆದೆರಡು ವರ್ಷಗಳಿಂದ ವಿದೇಶ ಪ್ರವಾಸದಿಂದ ದೂರವಿದ್ದ ಮೋದಿ, ಬಾಂಗ್ಲಾ ದೇಶ ವಿಮೋಚನೆಯ ಸ್ವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಳೆದ ಮಾರ್ಚ್​ನಲ್ಲಿ ಢಾಕಾಕ್ಕೆ ಭೇಟಿ ನೀಡಿದ್ದು ಕರೊನಾ ಕಾಲದ ಮೊದಲ ವಿದೇಶ ಪ್ರವಾಸವಾಗಿತ್ತು. ಬೈಡೆನ್ ಅಮೆರಿಕದ ಚುಕ್ಕಾಣಿ ಹಿಡಿದ ನಂತರ ಉಭಯ ನಾಯಕರ ನಡುವಿನ ಮೊದಲ ಮುಖಾಮುಖಿ (ಶುಕ್ರವಾರ) ಇದಾಗಲಿದೆ. ವಾಣಿಜ್ಯ, ಬಂಡವಾಳ ಹೂಡಿಕೆ ಮತ್ತು ರಕ್ಷಣೆ ಹಾಗೂ ಭದ್ರತೆ ವಿಚಾರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಅವರು ಚರ್ಚೆ ನಡೆಸಲಿದ್ದಾರೆ. ರಾಜಕೀಯ ನಾಯಕರಲ್ಲದೆ ಅಮೆರಿಕದ ಅನೇಕ ಪ್ರಮುಖ ಕಂಪನಿಗಳ ಮುಖ್ಯಸ್ಥರೊಂದಿಗೂ ಮೋದಿ ಸಭೆ ನಡೆಸಲಿದ್ದಾರೆ. ಪ್ರಧಾನಿ ಅವರು ಭಾನುವಾರ ಭಾರತಕ್ಕೆ ಮರಳಲಿದ್ದಾರೆ. ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾರತಕ್ಕೆ ಮೈತ್ರಿ ವೃದ್ಧಿಯ ನಿರೀಕ್ಷೆ:ಉಪಾಧ್ಯಕ್ಷೆಯಾದ ಭಾರತದ ಮೂಲದ ಕಮಲಾ ಹ್ಯಾರಿಸ್ ಅವರನ್ನು ಗುರುವಾರ ಭೇಟಿ ಮಾಡುವ ಪ್ರಧಾನಿ ಮೋದಿ, ಮಹತ್ವದ ಚರ್ಚೆ ನಡೆಸಲಿದ್ದಾರೆ. ಇದು ಭಾರತ ಮತ್ತು ಅಮೆರಿಕ ಸಂಬಂಧವನ್ನು ಹೊಸ ಸ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆ ಇದೆ.
ನಾಲ್ಕು ರಾಷ್ಟ್ರಗಳ ಕ್ವಾಡ್ ಶೃಂಗ ಸಭೆ:ನಾಲ್ಕು ದೇಶಗಳ ಕ್ವಾಡ್ ಕೂಟದ ಮುಖ್ಯಸ್ಥರ ಶೃಂಗ ಸಭೆಯೂ ಶುಕ್ರವಾರ ಶ್ವೇತಭವನದಲ್ಲಿ ನಡೆಯಲಿದ್ದು, ಇದು ಈ ನಾಯಕರ ಮೊದಲ ಭೌತಿಕ ಶೃಂಗ ಸಭೆಯಾಗಲಿದೆ. ಮಾರ್ಚ್​ನಲ್ಲಿ ಕ್ವಾಡ್ ನೇತಾರರ ಪ್ರಪ್ರಥಮ ವರ್ಚುವಲ್ ಶೃಂಗಸಭೆ ನಡೆದಿತ್ತು. ಸಮಕಾಲೀನ ಜಾಗತಿಕ ಹಾಗೂ ಪ್ರಾದೇಶಿಕ ವಿಚಾರಗಳು, ಅಫ್ಘನ್ ಬಿಕ್ಕಟ್ಟು ಚರ್ಚೆಯಾಗಲಿವೆ. ಕರೊನಾ ಲಸಿಕೆಯಲ್ಲಿ ಸಹಕಾರದ ಬಗ್ಗೆಯೂ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಕ್ವಾಡ್ ಸದಸ್ಯ ರಾಷ್ಟ್ರಗಳು.
ಹಿಂದಿನ ಭೇಟಿ:2019ರ ಸೆಪ್ಟೆಂಬರ್​ನಲ್ಲಿ ಭೇಟಿ ಕೊಟ್ಟಿದ್ದೇ ಅಮೆರಿಕಕ್ಕೆ ಮೋದಿಯವರ ಕೊನೆಯ ಭೇಟಿಯಾಗಿತ್ತು. ಆಗ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್, ಹ್ಯೂಸ್ಟನ್​ನಲ್ಲಿ ಸಂಚಲನ ಮೂಡಿಸಿದ್ದ ಹೌಡಿ-ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.
ನಿಯೋಗದಲ್ಲಿ ಅಜಿತ್:ಪ್ರಧಾನಿ ನರೇಂದ್ರ ಮೋದಿ ಜತೆ ಅಮೆರಿಕಕ್ಕೆ ತೆರಳುವ ರಾಜತಾಂತ್ರಿಕ ನಿಯೋಗದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ಶ್ರಿಂಗ್ಲಾ ಮತ್ತಿತರರು ಇರಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ವಿಶ್ವಸಂಸ್ಥೆ:ಅಫ್ಘಾನಿಸ್ತಾನದ ಬಿಕ್ಕಟ್ಟು, ಕೋವಿಡ್ ಸೋಂಕು, ಹವಾಮಾನ ವೈಪರೀತ್ಯ ಮುಂತಾದವುಗಳು ನಮಗೆಲ್ಲ ಎಚ್ಚರಿಕೆಯ ಕರೆಗಂಟೆಯಾಗಿದೆ. ಇವುಗಳನ್ನೆಲ್ಲ ಜಗತ್ತು ಒಟ್ಟಾಗಿ ಎದುರಿಸಬೇಕೇ ಹೊರತು, ಬೆದರಿ ಬೇರೆ ಬೇರೆಯಾಗಿ ಹೋಗಬಾರದು ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರ್ರೆಸ್ ಮಂಗಳವಾರ ಹೇಳಿದರು. ಅವರು ವಿಶ್ವಸಂಸ್ಥೆಯ 76ನೇ ಮಹಾ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಎಲ್ಲರನ್ನೂ ಎಚ್ಚರಿಸಲು ನಾನಿಲ್ಲಿ ನಿಂತಿದ್ದೇನೆ. ನಾವು ಸಂಕಷ್ಟವನ್ನು ಎದುರಿಸುತ್ತಿದ್ದು, ತಪ್ಪಾದ ದಿಶೆಯಲ್ಲಿ ಸಾಗುತ್ತಿದ್ದೇವೆ. ಜಗತ್ತು ಸರಿಯಾದ ದಿಶೆಯಲ್ಲಿ ಸಾಗಬೇಕಾದರೆ ಎಲ್ಲ ರಾಷ್ಟ್ರಗಳು ಜತೆಯಾಗಿ ಹೆಜ್ಜೆ ಹಾಕಬೇಕು ಎಂದು ಗುಟೆರ್ರೆಸ್ ಹೇಳಿದರು.
ವಿಭಜನೆ ಬೇಕಿಲ್ಲ ಎಂದ ಬೈಡೆನ್:ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಜಗತ್ತು ಅತ್ಯಂತ ಬಿಕ್ಕಟ್ಟಿನ ಸನ್ನಿವೇಶ ಎದುರಿಸುತ್ತಿದೆ. ನಾವು ಈಗಷ್ಟೆ 20 ವರ್ಷಗಳ ಅಫ್ಘನ್ ಸಮರವನ್ನು ಕೊನೆಗಾಣಿಸಿ ಹಿಂದಿರುಗಿ ಬಂದಿದ್ದೇವೆ. ಹೀಗಿರುವಾಗ ಜಗತ್ತು ವಿಭಜನೆಯಾಗುವುದು ನಮಗೆ ಬೇಕಾಗಿಲ್ಲ. ಅದೇ ರೀತಿ ಇನ್ನೊಂದು ಶೀತಲ ಸಮರ ನಡೆಯಬೇಕು ಎಂಬುದನ್ನೂ ನಾವು ಪ್ರತಿಪಾದಿಸುತ್ತಿಲ್ಲ ಎಂದು ಹೇಳಿದರು.
25ರಂದು ವಿಶ್ವಸಂಸ್ಥೆ ಸಭೆಯಲ್ಲಿ ಭಾಷಣ:ನ್ಯೂಯಾರ್ಕ್​ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಪ್ರಧಾನಿ ಮೋದಿ ಶನಿವಾರ ಭಾಷಣ ಮಾಡಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
