ಬದುಕಿಗಾಗಿ ಹೋರಾಟ ಅಗತ್ಯ ಮತ್ತು ಅನಿವಾರ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಬದುಕು ಮುಗಿಸಿಕೊಳ್ಳಲು ‘ಹೋರಾಟ’ ಹೆಚ್ಚುತ್ತಿರುವುದು ಕಳವಳಕಾರಿ ವಿಷಯ. ಮಹತ್ವಾಕಾಂಕ್ಷೆ ಇರಬೇಕು, ಸಂದೇಹ ಇಲ್ಲ. ಆದರೆ ಅದರಲ್ಲಿ ಸ್ವಲ್ಪ ಹಿನ್ನಡೆಯಾದರೂ ಸಾಕು, ಬದುಕನ್ನೇ ಅಂತ್ಯಗೊಳಿಸುವ ಮನೋಭಾವ ಹೆಚ್ಚುತ್ತಿದೆ. ಇಂಥದ್ದೇ ಕಾಲೇಜಲ್ಲಿ ಪ್ರವೇಶ ಪಡೆಯಬೇಕು. ಇಂಥದ್ದೇ ವಿವಿಯಲ್ಲಿ ಓದಬೇಕು ಎಂಬ ಗುರಿ ಸಾಧನೆ ಸಾಧ್ಯವಾಗದಿದ್ದಾಗ ಆತ್ಮಹತ್ಯೆಯ ಹಾದಿ ಹಿಡಿಯುವುದು ಸಾಮಾನ್ಯವಾಗುತ್ತಿದೆ. ಹೌದು, ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಪಾಲಕರಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ರಾಜಸ್ಥಾನದ ಕೋಟಾದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಗಳಂತೂ ‘ಆತ್ಮಹತ್ಯೆಯ ಫ್ಯಾಕ್ಟರಿಗಳು’ ಎಂಬ ಕುಖ್ಯಾತಿಗೆ ಒಳಗಾಗಿವೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮಹತ್ಯೆ ತಡೆಗೆ ‘ಮನೋದರ್ಪಣ’ ಕಾರ್ಯಕ್ರಮ ಆರಂಭಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆಯ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ, ಅವರನ್ನು ಬೇರೆ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. ಅಲ್ಲದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮತ್ತು ತಾರತಮ್ಯವನ್ನು ತಡೆಗಟ್ಟಲು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತ್ಯೇಕ ಘಟಕಗಳನ್ನು ಆರಂಭಿಸಲಾಗಿದೆ.
ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ಸಮಾಜವು ಸಂವೇದನೆಯಿಂದ ಕಾಣಬೇಕಿದೆ ಎಂಬ ಅಭಿಪ್ರಾಯ ಮನೋವಿಜ್ಞಾನಿಗಳದ್ದು. ‘ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ’ ಎಂಬ ರ್ಚವಿತಚರ್ವಣ ಹೇಳಿಕೆಯಿಂದ ಸಮಸ್ಯೆ ಪರಿಹರಿಸಲು ಆಗದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಜೀವನದ ಬಗ್ಗೆ ಹೊಸ ಕನಸುಗಳನ್ನು ಕಾಣುವ, ಆ ಕನಸುಗಳಿಗೆ ತಮ್ಮದೇ ಬಣ್ಣ ತುಂಬುವ, ಕನಸುಗಳನ್ನು ನನಸು ಮಾಡಲು ಕಷ್ಟಪಡುವ ಯುವಕ-ಯುವತಿಯರು ಹೀಗೆ ಜೀವನವನ್ನೇ ಕೊನೆಗೊಳಿಸುವ ನಿರ್ಧಾರಗಳನ್ನು ತಳೆಯುತ್ತಿರುವುದೇಕೆ? ಭವಿಷ್ಯದ ಬಗ್ಗೆ ಇವರಲ್ಲಿ ಭೀತಿ ಮೂಡಿಸುತ್ತಿರುವವರು ಯಾರು? ಒಂದೆಡೆ, ಉನ್ನತ ಶಿಕ್ಷಣ ಪಡೆದ ಯುವಕ-ಯುವತಿಯರು ಬಹುರಾಷ್ಟ್ರೀಯ ಕಂಪನಿಗಳ ದೊಡ್ಡ ಪ್ಯಾಕೇಜುಗಳ ಸಂಬಳವನ್ನು ಧಿಕ್ಕರಿಸಿ, ತಮ್ಮದೇ ನವೋದ್ಯಮಗಳನ್ನು ಆರಂಭಿಸುತ್ತಿದ್ದಾರೆ. ಆ ಮೂಲಕ ಉದ್ಯೋಗ ಕೇಳುವ ಬದಲು ಉದ್ಯೋಗದಾತರಾಗುತ್ತಿದ್ದಾರೆ. ಅಷ್ಟೇ ಅಲ್ಲ, ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದವರು ಕೂಡ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ನವೋದ್ಯಮಗಳನ್ನು ಆರಂಭಿಸಿ ಮಿಂಚುತ್ತಿದ್ದಾರೆ. ಅಂದರೆ, ಬದುಕನ್ನು ಹೀಗೂ ಬದಲಿಸಬಹುದು ಎಂಬ ಸ್ಪಷ್ಟಸಂದೇಶ ರವಾನಿಸುತ್ತಿದ್ದಾರೆ.
ಹೀಗಿರುವಾಗ ಸೋಲಿನ ಭಯ ಅಥವಾ ಸಣ್ಣ ಪರಾಭವಕ್ಕಾಗಿ ಜೀವವನ್ನೇ ಬಲಿಕೊಡುವುದರಲ್ಲಿ ಏನು ಅರ್ಥವಿದೆ? ಇದನ್ನು ನಮ್ಮ ಯುವಮನಸುಗಳು ಅವಲೋಕಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಇಲ್ಲಿ ಇವರದ್ದೇ ಪೂರ್ಣ ತಪ್ಪು ಅಂತ ಹೇಳಲು ಸಾಧ್ಯವಿಲ್ಲ. ಸಮಾಜ ಅಂದರೆ ನಮ್ಮ ಸುತ್ತಮುತ್ತಲಿನವರೇ ಸೋತವರನ್ನು ಕಾಣುವ, ಹೀಯಾಳಿಸುವ ರೀತಿ ಇದೆಯಲ್ಲ; ಅದು ಎಂಥ ಗಟ್ಟಿಎದೆಯನ್ನೂ ಒಮ್ಮೆ ನಡುಗಿಸಿ ಬಿಡುತ್ತದೆ. ಯಶಸ್ಸು-ವೈಫಲ್ಯ, ಸೋಲು-ಗೆಲುವು- ಇದೆಲ್ಲವೂ ಒಂದೇ ನಾಣ್ಯದ ಎರಡು ಮುಖಗಳು ಎಂಬ ವಾಸ್ತವವನ್ನು ಯುವಕ/ಯುವತಿಯರಿಗೆ ಅರ್ಥಮಾಡಿಸಬೇಕಿದೆ.
ನಮ್ಮ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 2018ರಿಂದ 2023ರ ಮಾರ್ಚ್​ವರೆಗೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 103. ಈ ಪೈಕಿ ಐಐಟಿಗಳ 35, ಕೇಂದ್ರೀಯ ವಿಶ್ವವಿದ್ಯಾಲಯಗಳ 29, ನ್ಯಾಶನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎನ್​ಐಟಿ) 24, ಏಮ್ಸ್​ನ 11 ಹಾಗೂ ಐಐಎಂಗಳ ನಾಲ್ವರು ವಿದ್ಯಾರ್ಥಿಗಳು ಸೇರಿದ್ದಾರೆ. ಇದು ರಾಜ್ಯಸಭೆಯಲ್ಲಿ ಸರ್ಕಾರವೇ ಕೊಟ್ಟಿರುವ ಅಧಿಕೃತ ಅಂಕಿಸಂಖ್ಯೆ. ಶೈಕ್ಷಣಿಕ ಒತ್ತಡ, ಕೌಟುಂಬಿಕ ಸಮಸ್ಯೆಗಳು, ಹಣಕಾಸಿನ ಸಮಸ್ಯೆ, ಮಾನಸಿಕ ಅನಾರೋಗ್ಯ ಸೇರಿದಂತೆ ಹಲವು ಕಾರಣಗಳನ್ನು ಸರ್ಕಾರ ಪಟ್ಟಿ ಮಾಡಿದೆ. ಇನ್ನು, ಬಿಹಾರದಲ್ಲಿ ಕೆಲ ತಿಂಗಳುಗಳ ಹಿಂದೆ 11 ಮತ್ತು 12ನೇ ತರಗತಿಯ 10ಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯುವ ಮನಸುಗಳಿಗೆ ಬದುಕಿಗಿಂತ ಸಾವೇ ಹೆಚ್ಚು ಪ್ರಿಯ ಎನಿಸುತ್ತಿರುವುದಾದರೂ ಏಕೆ?
ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ‘ದರ್ವಾಜೆ ಪೇ ದಸ್ತಕ್’ (ಬಾಗಿಲು ತಟ್ಟಿ) ಎಂಬ ಅಭಿಯಾನ ಆರಂಭಿಸಲಾಗಿದೆ. ವಿದ್ಯಾರ್ಥಿಗಳಲ್ಲಿನ ಮಾನಸಿಕ ಖಿನ್ನತೆಯನ್ನು ಮೊದಲ ಹಂತದಲ್ಲೇ ಪತ್ತೆ ಮಾಡಿ, ಅವರಿಗೆ ಸೂಕ್ತ ಕೌನ್ಸೆಲಿಂಗ್ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಸಂಬಂಧ ಸಹಾಯವಾಣಿ ಕೂಡ ಆರಂಭಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಮಾನಸಿಕ ಖಿನ್ನತೆ ಕಂಡುಬಂದಲ್ಲಿ ಖುದ್ದು ಅವರು ಅಥವಾ ಅವರ ಸ್ನೇಹಿತರು ಸಹಾಯವಾಣಿಗೆ ಕರೆ ಮಾಡಿ ನೆರವು ಯಾಚಿಸಬಹುದು. ಅಲ್ಲದೆ, ಹಾಸ್ಟೆಲ್ ಕೊಠಡಿಗಳ ಸೀಲಿಂಗ್ ಫ್ಯಾನ್​ಗಳಿಗೆ ಆತ್ಮಹತ್ಯೆ ತಡೆ ಸಾಧನ (ಸ್ಟ್ರಿಂಗ್) ಅಳವಡಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ. ಈ ಆತ್ಮಹತ್ಯಾ ತಡೆ ಸ್ಟ್ರಿಂಗ್ 20 ಕಿಲೋಗಳಿಗಿಂತ ಹೆಚ್ಚು ತೂಕವಿರುವ ವಸ್ತುವನ್ನು ಫ್ಯಾನ್​ಗೆ ನೇತು ಹಾಕಿದರೆ ಅದು ವಿಸ್ತಾರವಾಗುತ್ತದೆ ಮತ್ತು ಸೈರನ್ ಹೊಡೆಯುತ್ತದೆ. ಈ ಮೂಲಕ ಸಂಭವನೀಯ ಅಪಾಯವನ್ನು ತಪ್ಪಿಸಲು ನೆರವಾಗುತ್ತದೆ. ಕೋಟಾಗೆ ಪ್ರತಿ ವರ್ಷ 2.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ತರಬೇತಿ ಪಡೆಯಲು ಬರುತ್ತಾರೆ. ಈ ವರ್ಷ 22 ವಿದ್ಯಾರ್ಥಿಗಳು ಇಲ್ಲಿಯವರೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ವರ್ಷ (2022) 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇಲ್ಲಿ ಕೆಲ ಮನೋವೈಜ್ಞಾನಿಕ ಕಾರಣಗಳನ್ನು ಕೂಡ ವಿಶ್ಲೇಷಿಸಬೇಕು. ಮುಖ್ಯವಾಗಿ, ಇಂದಿನ ತರುಣ ಪೀಳಿಗೆ ಭಾವನೆಗಳನ್ನು, ಅದರಲ್ಲೂ ವೈಯಕ್ತಿಕ ದುಃಖದುಮ್ಮಾನಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ. ಹೃದಯದಲ್ಲಿ ನೋವಿದ್ದರೂ ; ಮುಖದ ಮೇಲೆ ನಗುವಿನ ಮುಖವಾಡ ಧರಿಸಿರುತ್ತಾರೆ. ಪರಿಣಾಮ, ಶೇಖರಿಸಿಟ್ಟ ಭಾವನೆಗಳು ನೋವಾಗಿ, ನಂತರ ಖಿನ್ನತೆಯಾಗಿ ಬದಲಾಗುತ್ತವೆ. ತೀವ್ರ ಖಿನ್ನತೆಯು- ಮಾನಸಿಕ ವೇದನೆಗಿಂತ ಸಾವೇ ಸೂಕ್ತ ಎಂದು ಪ್ರಚೋದಿಸುತ್ತ ಇರುತ್ತದೆ. ಇಂಥ ಪ್ರಚೋದನೆಗೆ ಸಿಲುಕಿದ ಫಲಿತಾಂಶವೇ ಆತ್ಮಹತ್ಯೆ.
ಮತ್ತೊಂದು ಮುಖ್ಯ ಕಾರಣ ಸೂಕ್ತ ಸ್ಪಂದನೆ ಇಲ್ಲದಿರುವುದು. ಕೆಲವರು ಸಮಸ್ಯೆ ಹೇಳಿಕೊಂಡರೂ- ಅವರ ಮನೆಯವರು ಅಥವಾ ಆತ್ಮೀಯರೆನಿಸಿಕೊಂಡವರು ಸರಿಯಾಗಿ ಸ್ಪಂದಿಸುವುದಿಲ್ಲ. ‘ಇದೆಲ್ಲ ಮಾಮೂಲಿ ಸಮಸ್ಯೆ’ ಎಂದು ಸುಮ್ಮನಾಗಿ ಬಿಡುತ್ತಾರೆ. ಆದರೆ, ಇಂಥ ಹೊತ್ತಲ್ಲಿ ಭಾವನಾತ್ಮಕ ಬೆಂಬಲದ ಅಗತ್ಯ ಹೆಚ್ಚಾಗಿ ಇರುತ್ತದೆ. ‘ಏನೇ ಆಗಲಿ ನಿನ್ನ ಜತೆ ನಾವಿದ್ದೇವೆ. ನಮಗೆ ಎಲ್ಲಕ್ಕಿಂತಲೂ ನೀನು ಮತ್ತು ನಿನ್ನ ಸಂತೋಷ ಮುಖ್ಯ’ ಎಂಬ ಮಾತನ್ನು ಮನಸಿಂದ ಹೇಳಿದರೆ, ಆ ಸಾಂತ್ವನದ ಬಲ ಒಂದು ಜೀವವನ್ನೇ ಉಳಿಸಬಹುದು. ಕಾಲೇಜು ಮತ್ತು ಶೈಕ್ಷಣಿಕ ಸಂಸ್ಥೆಗಳು ಆಪ್ತಸಮಾಲೋಚಕರನ್ನು ನೇಮಿಸಿ, ವಿದ್ಯಾರ್ಥಿಗಳ ಜತೆ ಸಂವಹನ ನಡೆಸುವುದು ಕೂಡ ಅವಶ್ಯ.
ಒಟ್ಟಾರೆ, ಸೋಲನ್ನು ಸ್ವೀಕರಿಸುವ ಮನೋಭಾವ, ಈ ಸ್ಥಿತಿಯನ್ನು ಗೆದ್ದು ಬರುತ್ತೇನೆ ಎಂಬ ಸ್ಥೆ ೖರ್ಯ, ಮುಂದೆ ತನಗಾಗಿ ನೆಮ್ಮದಿಯ ನಿಲ್ದಾಣ ಕಾದಿದೆ ಎಂಬ ಆಶಾವಾದವನ್ನು ರೂಢಿಸಿಕೊಂಡರೆ ಬದುಕು ಅರಳಬಲ್ಲದು. ಆದರೆ, ಇಂಥ ಮನೋಬಲವನ್ನು ತುಂಬುವ ಜವಾಬ್ದಾರಿ ಶೈಕ್ಷಣಿಕ ಸಂಸ್ಥೆಗಳದ್ದೂ ಹೌದು, ಪಾಲಕರದ್ದೂ ಹೌದು. ಸಮಾಜ ಕೂಡ ಯಶಸ್ಸಿನ ಮಾನದಂಡಗಳನ್ನು ಅವಲೋಕಿಸಿಕೊಳ್ಳಲು ಇದು ಸೂಕ್ತ ಸಮಯ ಎನಿಸುತ್ತದೆ. ಅಷ್ಟಕ್ಕೂ, ಆ ವಿಧಿ ಎಂಬುದು ಎಲ್ಲರಿಗೂ ಬದುಕು ಕಟ್ಟಿಕೊಳ್ಳಲು ಒಂದಿಲ್ಲ ಒಂದು ಅವಕಾಶ ನೀಡುತ್ತದೆ ಎಂಬ ಸರಳಸತ್ಯವನ್ನು ಮನಗಂಡರೆ ಸಾಕು. ಸೋಲನ್ನೂ ಸಂಭ್ರಮಿಸಿ, ಹೊಸ ವಿಜಯಕ್ಕೆ ಸಿದ್ಧತೆ ನಡೆಸಿದರೆ ಸಮಸ್ಯೆಗಳೆಲ್ಲ ಸೋತು ಹೋಗುತ್ತವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
