ರಾಜ್ಯಸಭೆ ಸೀಟುಗಳಿಗೆ ಬರುವ ಶುಕ್ರವಾರ (ಜೂನ್ 10ರಂದು) ನಡೆಯಲಿರುವ ರಾಜ್ಯಸಭೆ ಚುನಾವಣೆ ಭಾರಿ ಕುತೂಹಲ ಕೆರಳಿಸಿದ್ದು, ಕುದುರೆ ವ್ಯಾಪಾರ ತಪ್ಪಿಸುವ ಸಲುವಾಗಿ ಮಹಾರಾಷ್ಟ್ರ, ರಾಜಸ್ತಾನ, ಹರಿಯಾಣ ರಾಜ್ಯಗಳಲ್ಲಿ ಶಾಸಕರನ್ನು ಪಂಚತಾರಾ ಹೊಟೇಲ್​ಗಳಿಗೆ ಕರೆದೊಯ್ಯುವ ಮೂಲಕ ಈ ಚುನಾವಣೆ ಹೈವೋಲ್ಟೇಜ್ ಕದನವಾಗಿ ಮಾರ್ಪಟ್ಟಿದೆ.
15 ರಾಜ್ಯಗಳ ಒಟ್ಟು 57 ಸದಸ್ಯರ ರಾಜ್ಯಸಭೆ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತಿದೆ. ಹೀಗಾಗಿ, ಈ ಚುನಾವಣೆ ನಡೆಯುತ್ತಿದೆ. ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಆನಂದ ಶರ್ಮ, ಅಂಬಿಕಾ ಸೋನಿ, ಕಪಿಲ್ ಸಿಬಲ್, ಬಿಎಸ್​ಪಿ ನಾಯಕ ಸತೀಶ್ ಚಂದ್ರ ಮಿಶ್ರಾ ಸೇರಿ ಅನೇಕರ ಅವಧಿ ಪೂರ್ಣಗೊಂಡಿದೆ. ಕೆಲವರು ಮರು ಆಯ್ಕೆ ಬಯಸಿದ್ದು, ಪಕ್ಷಗಳು ಅವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿವೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಕಪಿಲ್ ಸಿಬಲ್ ಅವರನ್ನು ಸಮಾಜವಾದಿ ಪಕ್ಷ ಬೆಂಬಲಿಸಿದ್ದು ರಾಜ್ಯಸಭೆ ಸದಸ್ಯರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದೆ. ಉತ್ತರ ಪ್ರದೇಶದಲ್ಲಿ 11 ರಾಜ್ಯಸಭೆ ಸ್ಥಾನಗಳು ಖಾಲಿಯಾಗಿದ್ದರೆ, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ತಲಾ ಆರು ಸದಸ್ಯರು, ಬಿಹಾರದಿಂದ ಐದು ಮತ್ತು ಆಂಧ್ರಪ್ರದೇಶ, ರಾಜಸ್ತಾನ, ಕರ್ನಾಟಕದಿಂದ ತಲಾ ನಾಲ್ವರು ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಮಧ್ಯಪ್ರದೇಶ ಮತ್ತು ಒಡಿಶಾದಿಂದ ತಲಾ ಮೂವರು, ತೆಲಂಗಾಣ, ಛತ್ತೀಸ್​ಗಢ, ಪಂಜಾಬ್ ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಇಬ್ಬರು ಮತ್ತು ಉತ್ತರಾಖಂಡದಿಂದ ಒಬ್ಬರ ಅವಧಿ ಪೂರ್ಣಗೊಂಡಿದೆ.
41 ಅವಿರೋಧ:ಮುಂಬರುವ ಮುಂಗಾರು ಅಧಿವೇಶನ ಆರಂಭಗೊಳ್ಳುವ ವೇಳೆ ರಾಜ್ಯಸಭೆಯು 57 ಹೊಸ ಸದಸ್ಯರಿಗೆ ಸಾಕ್ಷಿಯಾಗಲಿದೆ. 57ರಲ್ಲಿ 41 ಮಂದಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಉಳಿದ 16 ಮಂದಿಯ ಆಯ್ಕೆಗೆ ಪಕ್ಷಗಳ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿದೆ. ರಾಜಕೀಯ ಅನುಕೂಲಕ್ಕಾಗಿ ಇಲ್ಲಿ ಶತ್ರುಗಳು ಮಿತ್ರರಾಗುತ್ತಾರೆ, ಮಿತ್ರರು ಶತ್ರುಗಳಾಗುತ್ತಾರೆ. ಕಾಂಚಾಣದ ಕುರುಡು ಕುಣಿತಕ್ಕೆ ಎಲ್ಲಕ್ಕಿಂತ ಹೆಚ್ಚು ಪ್ರಾಶಸ್ಱ ಎನ್ನುವುದು ನಿಗೂಢವಾಗೇನೂ ಉಳಿದಿಲ್ಲ. ಇದೇ ಕಾರಣಕ್ಕೆ ಶಾಸಕರನ್ನು ರೆಸಾರ್ಟ್​ಗಳಿಗೆ ಕರೆದೊಯ್ದು ಬೇರೆ ಪಕ್ಷಗಳ ಆಮಿಷಕ್ಕೆ ತುತ್ತಾಗದಂತೆ ನೋಡಿಕೊಳ್ಳಲಾಗುತ್ತಿದೆ.
ನಾಲ್ಕನೇ ಸ್ಥಾನಕ್ಕೆ ನಾನಾ ಲೆಕ್ಕಾಚಾರ:ರಾಜ್ಯಸಭೆಗೆ ಕರ್ನಾಟಕದಿಂದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ವಿಧಾನಸಭೆಯಲ್ಲಿನ ಸಂಖ್ಯಾಬಲದ ಪ್ರಕಾರ ಬಿಜೆಪಿ ಎರಡು ಹಾಗೂ ಕಾಂಗ್ರೆಸ್ ಒಂದು ಸ್ಥಾನಗಳನ್ನು ಸುಲಭವಾಗಿ ಗೆಲ್ಲಲಿವೆ. ಆದರೆ, ನಾಲ್ಕನೇ ಸ್ಥಾನ ಗೆಲ್ಲುವುದಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ಗೆ ಸಂಖ್ಯಾಬಲದ ಕೊರತೆ ಇದೆ. ಆದ್ದರಿಂದಲೇ ಕರ್ನಾಟಕದಲ್ಲಿ ರಾಜ್ಯಸಭೆ ಚುನಾವಣೆ ಕುತೂಹಲ ಮೂಡಿಸಿದೆ. ನಾಲ್ಕು ಸ್ಥಾನಗಳಿಗೆ ಆರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ತನ್ನ ಹೆಚ್ಚುವರಿ 32 ಮತಗಳ ಜತೆಗೆ ಇಬ್ಬರು ಅಭ್ಯರ್ಥಿಗಳು ಗೆದ್ದು ಅವರ 40 ಎರಡನೇ ಪ್ರಾಶಸ್ಱ ಮತಗಳ ಆಧಾರದಲ್ಲಿ ಗೆಲ್ಲುತ್ತೇವೆ ಎಂದು ಲೆಕ್ಕಾಚಾರ ಹಾಕಿಕೊಂಡಿದೆ.
ಜೆಡಿಎಸ್ ಬುಟ್ಟಿಗೂ ಕೈ ಹಾಕಲು ಯತ್ನ ನಡೆಸಿದೆ. ಕಾಂಗ್ರೆಸ್ ಪಕ್ಷ ತನ್ನ 25 ಮೊದಲ ಪ್ರಾಶಸ್ಱ, 45 ಎರಡನೇ ಪ್ರಾಶಸ್ಱ ಮತಗಳ ಜತೆಗೆ ಬಿಜೆಪಿ ಮತ್ತು ಜೆಡಿಎಸ್​ನಿಂದ ಅಡ್ಡ ಮತದಾನ ಮಾಡಿಸಿಕೊಳ್ಳುವ ತಂತ್ರ ರೂಪಿಸುತ್ತಿದೆ. ಜೆಡಿಎಸ್​ನಲ್ಲಿ ಇರುವುದು 32 ಮತಗಳು ಮಾತ್ರ. ಎರಡನೇ ಪ್ರಾಶಸ್ಱ ಮತಗಳಿಲ್ಲ, ಕಾಂಗ್ರೆಸ್ ಬೆಂಬಲ ನೀಡಬಹುದೆಂಬ ನಿರೀಕ್ಷೆಯನ್ನು ಹೊಂದಿತ್ತು. ಆದರೆ, ಈಗ ತನ್ನ ಮತಗಳು ಚದುರದಂತೆ ನೋಡಿಕೊಳ್ಳುವ ಜವಾಬ್ದಾರಿ ಈಗ ಪಕ್ಷದ ಮೇಲಿದೆ. ಅದು ಕೇವಲ ಜೆಡಿಎಸ್​ಗೆ ಸೀಮಿತವಾಗಿಲ್ಲ, ಮೂರು ಪಕ್ಷಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಇದರಿಂದಾಗಿಯೇ ರಾಜ್ಯದಲ್ಲಿ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಚಿತ್ರನಟ ಜಗ್ಗೇಶ್, ಕಾಂಗ್ರೆಸ್​ನಿಂದ ಜೈರಾಂ ರಮೇಶ್, ಮನ್ಸೂರ್ ಅಲಿಖಾನ್, ಜೆಡಿಎಸ್​ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.
ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದರೂ, 2 ಕಾಂಗ್ರೆಸ್ ಮತ್ತು ಬಿಜೆಪಿ ಒಂದನ್ನು ಗೆಲ್ಲುವುದು ನಿಶ್ಚಿತ. ನಾಲ್ಕನೇ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೋರಾಟ ನಡೆಯುತ್ತಿದೆ. ಉತ್ತರ ಪ್ರದೇಶ ಮೂಲದ ಅಭ್ಯರ್ಥಿ ಪ್ರಮೋದ್ ತಿವಾರಿ ಮತ್ತು ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸುಭಾಷ್ ಚಂದ್ರ ಪಕ್ಷೇತರರ ಮನಗೆಲ್ಲಲು ಯತ್ನಿಸಿದ್ದಾರೆ. ರಾಜಸ್ತಾನದಲ್ಲಿ ಅಭ್ಯರ್ಥಿಯೊಬ್ಬನ ಗೆಲುವಿಗೆ 41 ಮತಗಳು ಬೇಕು. ಕಾಂಗ್ರೆಸ್ ಬಳಿ 108 ಶಾಸಕರಿದ್ದಾರೆ. ಕಾಂಗ್ರೆಸ್​ಗೆ ಮೂರು ಸೀಟು ಗೆಲ್ಲಲು 123 ಮತಗಳ ಅಗತ್ಯವಿದೆ. ಒಂದು ಸೀಟನ್ನು ಗೆಲ್ಲಲಿರುವ ಬಿಜೆಪಿ ಸುಭಾಷ್ ಚಂದ್ರರನ್ನು ಬೆಂಬಲಿಸುವ ಮೂಲಕ ಹೋರಾಟವನ್ನು ರೋಚಕಗೊಳಿಸಿದೆ. ಕಾಂಗ್ರೆಸ್ ತನ್ನ 108 ಶಾಸಕರನ್ನು ಒಗ್ಗಟ್ಟಾಗಿಟ್ಟುಕೊಳ್ಳುವ ಜತೆಗೆ ಸರ್ಕಾರ ಬೆಂಬಲಿಸುತ್ತಿರುವ 12 ಸ್ವತಂತ್ರ ಶಾಸಕರ ಮತಗಳು ಅಡ್ಡಹಾದಿ ಹಿಡಿಯದಂತೆ ನೋಡಿಕೊಳ್ಳಬೇಕಿದೆ. ಸುಭಾಷ್ ಚಂದ್ರ ಗೆಲುವಿಗೆ 11 ಹೆಚ್ಚುವರಿ ಮತಗಳು ಬೇಕಿದ್ದರೆ, ತಿವಾರಿ 15 ಹೆಚ್ಚುವರಿ ಮತ ಗಳಿಸಬೇಕಾಗಿದೆ. ಸುಭಾಷ್​ಚಂದ್ರ ಬಿಜೆಪಿಯ 30 ಹೆಚ್ಚುವರಿ ಮತ್ತು ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿಯ (ಆರ್​ಎಲ್​ಪಿ) ಮೂವರು ಶಾಸಕರ ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಪಕ್ಷೇತರರು ತಮಗೆ ಬೆಂಬಲ ನೀಡಲಿದ್ದಾರೆ ಎಂದು ಸುಭಾಷ್​ಚಂದ್ರ ಹೇಳಿರುವುದು ಚುನಾವಣೆ ಕುತೂಹಲವನ್ನು ಹೆಚ್ಚಿಸಿದೆ.
ಇಲ್ಲಿ 2 ಸೀಟುಗಳಿಗೆ ಚುನಾವಣೆ ನಡೆಯುತ್ತಿದ್ದು, ಒಂದು ಸ್ಥಾನ (ಕೃಷ್ಣ ಪನ್ವಾರ್) ಬಿಜೆಪಿಗೆ ಖಚಿತವಾಗಿದೆ. ಕಾಂಗ್ರೆಸ್ ನಾಯಕ ಅಜಯ್ ಮಾಕನ್​ಗೆ ಗೆಲ್ಲಲು 31 ಮತಗಳು ಬೇಕು. ಆದರೆ, ಮಾಜಿ ಕಾಂಗ್ರೆಸ್ ನಾಯಕ ವಿನೋದ್ ಶರ್ಮ ಪುತ್ರ, ಉದ್ಯಮಿ ಕಾರ್ತಿಕೇಯ ಶರ್ಮ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು, ಆಡಳಿತಾರೂಢ ಮೈತ್ರಿಕೂಟ ಅವರಿಗೆ ಬೆಂಬಲ ಸೂಚಿಸಿದೆ. ಜನನಾಯಕ ಜನತಾ ಪಾರ್ಟಿ 10, ಬಿಜೆಪಿ 9 ಮತ್ತು ಪ್ರಾದೇಶಿಕ ಪಕ್ಷದ 1 ಮತ ಖಚಿತವಾಗಿದೆ. ವಿನೋದ್ ಶರ್ಮ ತಮ್ಮ ಪ್ರಭಾವ ಬಳಸಿ ಕಾಂಗ್ರೆಸ್ ಶಾಸಕರ ಅಡ್ಡ ಮತದಾನಕ್ಕೆ ಅಥವಾ ಮತಗಳನ್ನು ಅನೂರ್ಜಿತಗೊಳಿಸಲು ಯತ್ನಿಸುವ ಸಾಧ್ಯತೆಗಳಿವೆ. ವಾಸ್ತವದಲ್ಲಿ ಅಜಯ್ ಮಾಕನ್ ಗೆಲುವು ಸುಲಭವಾಗಬೇಕಿದ್ದರೂ, ಕಾಂಗ್ರೆಸ್ ಆಂತರಿಕ ಗುಂಪುಗಾರಿಕೆಯೇ ಸಮಸ್ಯೆಯಾಗಿ ಕಾಡುತ್ತಿದೆ. ಇದೇ ಕಾರಣಕ್ಕಾಗಿ ಶಾಸಕರನ್ನು ರೆಸಾರ್ಟ್​ನಲ್ಲಿರಿಸಲಾಗಿದೆ.
ಮಹಾರಾಷ್ಟ್ರದಿಂದ 6 ಸದಸ್ಯರು ಆಯ್ಕೆಯಾಗಲಿದ್ದು, ಇಲ್ಲಿ ಗೆಲ್ಲುವ ಅಭ್ಯರ್ಥಿಗೆ 42 ಶಾಸಕರ ಬೆಂಬಲ ಅತ್ಯಗತ್ಯ. ರಾಜ್ಯದಲ್ಲಿ ಸದ್ಯ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಒಳಗೊಂಡ ಮೈತ್ರಿಕೂಟ ಸರ್ಕಾರ ಅಧಿಕಾರದಲ್ಲಿದೆ. 151 ಸೀಟುಗಳನ್ನು ಹೊಂದಿರುವ ಈ ಮೈತ್ರಿಕೂಟ ಮೂರು ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ 106 ಶಾಸಕರನ್ನು ಹೊಂದಿದ್ದು, ಎರಡು ಸ್ಥಾನಗಳನ್ನು ಗೆಲ್ಲುವುದು ಪಕ್ಕಾ. ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಮೈತ್ರಿಕೂಟ, ಆರನೇ ಅಭ್ಯರ್ಥಿಯನ್ನು ತನ್ನಡೆಗೆ ಸೆಳೆದುಕೊಳ್ಳಲು ಪಕ್ಷೇತರ ಶಾಸಕರ ಮೊರೆ ಹೋಗಿದ್ದು, ಅವರಿಗೆ ಇನ್ನಿಲ್ಲದ ಭರವಸೆಗಳನ್ನು ನೀಡಿದೆ. 3 ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ, ಪಕ್ಷೇತರ ಶಾಸಕರೊಂದಿಗೆ ಸಂಪರ್ಕ ಸಾಧಿಸಿ ಆಡಳಿತಾರೂಢ ಮೈತ್ರಿಕೂಟಕ್ಕೆ ಪ್ರಬಲ ಸವಾಲೊಡ್ಡುತ್ತಿದೆ. 6ನೇ ಸೀಟು ಗೆಲ್ಲಲು ಮೈತ್ರಿಕೂಟಕ್ಕೆ 15 ಮತಗಳ ಅಗತ್ಯವಿದೆ. ಹೀಗಾಗಿಯೇ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ 25 ಶಾಸಕರಿರುವ ಸಣ್ಣ ಪಕ್ಷಗಳು ಮತ್ತು ಪಕ್ಷೇತರರ ಮನವೊಲಿಸಲು ಯತ್ನಿಸುತ್ತಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
