|ಹರೀಶ ಬೇಲೂರುಬೆಂಗಳೂರು
ರಷ್ಯಾ ಹಾಗೂ ಯೂಕ್ರೇನ್ ಸಂಘರ್ಷದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರಿದ್ದು ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮತದಾನಕ್ಕೆ ಸೋಮವಾರ ತೆರೆ ಬೀಳುವುದರಿಂದ ಮಧ್ಯರಾತ್ರಿಯಿಂದಲೇ ಪೆಟ್ರೋಲ್, ಡೀಸೆಲ್ ಏರಿಕೆ ಹಾದಿ ಹಿಡಿಯುವುದು ನಿಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಕ್ಕೆ ತಕ್ಕ ಹಾಗೆ ತೈಲ ಬೆಲೆ ಏರಿಕೆ ಅನಿವಾರ್ಯವಾದರೂ ಒಂದೇ ಬಾರಿ ಹೊರೆಯಾಗುವಂತೆ ದರ ಏರಿಸುವ ಬದಲು ದಿನದಿನವೂ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಕರೊನಾ ಆರಂಭವಾದಾಗಿನಿಂದ ಈವರೆಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಸರಾಸರಿ 20 ರೂ. ಹೆಚ್ಚಳವಾಗಿತ್ತು. ಜನಸಾಮಾನ್ಯರ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೈಲ ದರವನ್ನು ಸ್ವಲ್ಪ ಮಟ್ಟಿಗೆ ಇಳಿಕೆ ಮಾಡಿದ್ದವು. ಅಂದಿನಿಂದ ಈವರೆಗೆ ತೈಲ ದರ ಏರಿಕೆಯಾಗಿರಲಿಲ್ಲ. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್​ಗೆ 100 ರೂಪಾಯಿ 58 ಪೈಸೆ ಹಾಗೂ ಡೀಸೆಲ್​ಗೆ 85.01ರೂ.ಇದೆ. ರಷ್ಯಾ ಹಾಗೂ ಯೂಕ್ರೇನ್ ಸಂಘರ್ಷದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರುಗತಿಯಲ್ಲೇ ಸಾಗಿದೆ. ಇದರ ಪರಿಣಾಮ ದೇಶದಲ್ಲಿ ಪ್ರತಿ ನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸರಾಸರಿ 40-45 ಪೈಸೆಯನ್ನು ಹೆಚ್ಚಿಸಬಹುದೆಂದು ಅಂದಾಜಿಸಲಾಗಿದೆ.
ನಿತ್ಯ ಪರಿಷ್ಕರಣೆ ನೀತಿ:ಸೌದಿ ಆರೇಬಿಯಾ, ಇರಾನ್, ಅಮೆರಿಕ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ತೈಲ ಉತ್ಪನ್ನಗಳು ಆಮದಾಗುತ್ತಿದೆ. ಅಲ್ಲದೆ, ರಷ್ಯಾ ಮತ್ತು ಯುರೋಪ್ ಖಂಡದ ರಾಷ್ಟ್ರಗಳಿಂದಲೂ ಶೇ.40 ಕಚ್ಚಾ ತೈಲ ಭಾರತಕ್ಕೆ ಆಮದಾಗುತ್ತಿತ್ತು. ಇದೀಗ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ದೇಶಗಳಿಂದ ಭಾರತಕ್ಕೆ ಆಮದಾಗುತ್ತಿದ್ದ ತೈಲ ಉತ್ಪನ್ನಗಳು ನಿಂತು ಹೋಗಿವೆ. ಆ ತೈಲವನ್ನು ಬೇರೆ ದೇಶಗಳಿಂದ ತರಿಸಿಕೊಳ್ಳುವ ಸಂಬಂಧ ಒಪ್ಪಂದ ಮಾಡಿಕೊಳ್ಳಲು ಹಾಗೂ ನಿಂತು ಹೋಗಿರುವ ತೈಲ ಉತ್ಪನ್ನಗಳ ನಷ್ಟವನ್ನು ಸರಿದೂಗಿಸಿಕೊಳ್ಳಲು ಇನ್ನೂ ಸಮಯ ಬೇಕಾಗುತ್ತದೆ. ಈ ಹಿಂದೆ ಕೇಂದ್ರ ಪರಿಚಯಿಸಿದ್ದ ‘ಡೈಲಿ ರೇಟ್ ಚೇಂಜ್’ ಪಾಲಿಸಿ ಮತ್ತೆ ಜಾರಿಗೆ ಬರಲಿದೆ. ಇದರ ಅಧಾರದ ಮೇಲೆ ತೈಲ ಕಂಪನಿಗಳು ದರ ಏರಿಕೆ ಮಾಡಲಿದೆ.
ದುನಿಯಾ ದುಬಾರಿ:ಕರೊನಾ ಆತಂಕ ತಗ್ಗಿ ಬದುಕು ಯಥಾಸ್ಥಿತಿಗೆ ಮರಳಿದ್ದರೂ ಜನರು ಬೆಲೆ ಏರಿಕೆ ಸಂಕಷ್ಟದಿಂದ ಪಾರಾಗಿಲ್ಲ. ಪೆಟ್ರೋಲ್, ಡೀಸೆಲ್ ಜತೆಗೆ ಎರಡು ವರ್ಷದಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ಅಂದಾಜು 215 ರೂ. ಹೆಚ್ಚಳವಾಗಿದೆ. ತೊಗರಿ ಬೇಳೆ, ಸಿಮೆಂಟ್, ಸ್ಟೀಲ್, ಅಡುಗೆ ಎಣ್ಣೆ ಸೇರಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದೀಗ ಮತ್ತೆ ತೈಲ ದರ ಏರಿಕೆಗೊಂಡರೆ ಸಾಗಣೆ ಸೇರಿ ಇನ್ನಿತರ ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ. ಇದರಿಂದ ನೇರವಾಗಿ ಜನಸಾಮಾನ್ಯರಿಗೆ ಹೊಡೆತ ಬೀಳಲಿದೆ.
ದರ ಏರಿಕೆ ಏಕೆ?:ಜಾಗತಿಕ ಕಚ್ಚಾ ತೈಲ ಉತ್ಪಾದನೆಯಲ್ಲಿ ರಷ್ಯಾ ಪಾಲು ಶೇ.10. ಯೂಕ್ರೇನ್ ಮೇಲೆ ಯುದ್ಧ ಆರಂಭಿಸಿದ ಬಳಿಕ ರಷ್ಯಾ ಮೇಲೆ ಐರೋಪ್ಯ ಒಕ್ಕೂಟದ ನಿರ್ಬಂಧ ಬಿದ್ದಿದೆ. ಹೀಗಾಗಿ ತೈಲ ಪೂರೈಕೆಗೆ ಅಡ್ಡಿಯಾಗುವ ಆತಂಕದಿಂದಲೇ ಬ್ಯಾರಲ್​ಗೆ 95 ಡಾಲರ್ ಇದ್ದ ಕಚ್ಚಾತೈಲ ಬೆಲೆ 120 ಡಾಲರ್ ಸನಿಹಕ್ಕೆ ಬಂದಿದೆ.
ಮಾರುಕಟ್ಟೆ ತಜ್ಞರು ಏನಂತಾರೆ?:ನಾಲ್ಕು ತಿಂಗಳಿಂದ ದೇಶಿ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಆಗಿಲ್ಲ. ತೈಲ ಕಂಪನಿಗಳ ಲಾಭಾಂಶ ಪರಿಗಣಿಸಿದರೆ ತೈಲೋತ್ಪನ್ನದ ಬೆಲೆ ಲೀಟರ್​ಗೆ 15.1 ರೂ. ಹೆಚ್ಚಿಸಬೇಕಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ವರದಿ ಬೊಟ್ಟು ಮಾಡಿದೆ.
ರಷ್ಯಾ-ಯೂಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ತೈಲ ದರ ತುಸು ಏರಿಕೆಯಾಗಲಿದೆ. ಯುದ್ಧ ಮುಗಿದ ಬಳಿಕ ಏರಿದ ದರ ಕಡಿಮೆಯೂ ಆಗಬಹುದು. ಕರೊನಾದಿಂದಾಗಿ ಬಂಕ್​ಗಳಲ್ಲಿ ಅಷ್ಟೇನೂ ವ್ಯಾಪಾರ ನಡೆಯುತ್ತಿಲ್ಲ. ತೈಲ ಅಭಾವದ ಕುರಿತು ಜನರು ಆತಂಕಗೊಳ್ಳುವ ಅಗತ್ಯವಿಲ್ಲ.
|ಎ. ತಾರಾನಾಥಉಪಾಧ್ಯಕ್ಷ. ಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ.
5% ಜಿಎಸ್​ಟಿ ಸರಕುಗಳು:ಖಾದ್ಯ ತೈಲ, ಸಾಂಬಾರ ಪದಾರ್ಥಗಳು, ಚಹಾ, ಕಾಫಿ, ಸಕ್ಕರೆ, ಕಲ್ಲಿದ್ದಲು, ಭಾರತೀಯ ಸಿಹಿತಿನಿಸು/ಮಿಠಾಯಿಗಳು, ಇನ್ಸುಲಿನ್​ನಂಥ ಜೀವರಕ್ಷಕ ಔಷಧಿಗಳು, ಹಳೆ ನಾಣ್ಯಗಳು, ಮಂಜುಗಡ್ಡೆ, ವಾಕಿಂಗ್ ಸ್ಟಿಕ್ಸ್, ಬ್ರೖೆಲ್ ಕಾಗದ, ಬ್ರೖೆಲ್ ಗಡಿಯಾರ, ಶ್ರವಣ ಸಾಧನ ಮುಂತಾದ ಅಂಗವಿಕಲರ ಅನುಕೂಲದ ಪರಿಕರ-ಸಾಮಗ್ರಿಗಳು, ಹಾರು ಬೂದಿ ಬ್ಲಾಕ್​ಗಳು, ಬಯೋಗ್ಯಾಸ್, ಅಗರಬತ್ತಿ ಹಾಗೂ ಗಾಳಿಪಟಗಳು, ನೈಸರ್ಗಿಕ ತೊಗಟೆಗಳು, ಗೋಡಂಬಿ ಬೀಜ, ತೆಂಗಿನ ನಾರಿನ ಮ್ಯಾಟ್​ಗಳು, ಗಾಳಿ ಆಧಾರಿತ ಅಟ್ಟಾ ಚಕ್ಕಿ ಮತ್ತು ಪವನ್ ಚಕ್ಕಿ, ರಸಗೊಬ್ಬರಗಳು, ರೆವಿನ್ಯೂ ಸ್ಟಾ್ಯಂಪ್ ಹಾಗೂ ಸ್ಟಾ್ಯಂಪ್ ಪೋಸ್ಟ್ ಮಾರ್ಕ್ ಇತ್ಯಾದಿ.
ನವದೆಹಲಿ:ಸರಕು ಮತ್ತು ಸೇವಾ ತೆರಿಗೆಯ (ಜಿಎಸ್​ಟಿ) ಕನಿಷ್ಠ ಸ್ಲ್ಯಾಬ್ ದರವನ್ನು ಶೇಕಡ 5ರಿಂದ ಎಂಟಕ್ಕೆ ಏರಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದ್ದು ಜಿಎಸ್​ಟಿ ಮಂಡಳಿಯ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ತೆರಿಗೆ ಸಂಗ್ರಹ ಹೆಚ್ಚಿಸುವ ಗುರಿಯಿಂದ; ಈಗ ವಿನಾಯಿತಿ ಇರುವ ಹಲವು ವಸ್ತುಗಳು ಹಾಗೂ ಸೇವೆಗಳನ್ನೂ ಜಿಎಸ್​ಟಿ ವ್ಯಾಪ್ತಿಗೆ ತರಲು ಕೂಡ ಸಭೆ ನಿರ್ಧಾರ ಕೈಗೊಳ್ಳುವ ಸಂಭವವಿದೆ. ಪರಿಹಾರಕ್ಕಾಗಿ ರಾಜ್ಯಗಳು ಕೇಂದ್ರವನ್ನು ಅವಲಂಬಿಸುವುದನ್ನು ತಪ್ಪಿಸುವುದು ಕೂಡ ಇದರ ಉದ್ದೇಶವಾಗಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
ವರದಿ ಸಲ್ಲಿಕೆ:ರಾಜ್ಯ ಹಣಕಾಸು ಸಚಿವರ ಸಮಿತಿಯೊಂದು ಆದಾಯ ಹೆಚ್ಚಳಕ್ಕೆ ವಿವಿಧ ಕ್ರಮಗಳನ್ನು ಸೂಚಿಸುವ ವರದಿಯನ್ನು ಈ ತಿಂಗಳ ಕೊನೆಯಲ್ಲಿ ನಡೆಯುವ ಸಭೆಯಲ್ಲಿ ಮಂಡಿಸುವ ಸಂಭವವಿದೆ. ಕನಿಷ್ಠ ಸ್ಲ್ಯಾಬ್ ದರ ಏರಿಕೆ ಹಾಗೂ ಸ್ಲ್ಯಾಬ್ ದರ ಪರಿಷ್ಕರಣೆ ಸಲಹೆಯೂ ಸಮಿತಿಯ ವರದಿಯಲ್ಲಿ ಸೇರಿದೆ ಎನ್ನಲಾಗಿದೆ. ಜಿಎಸ್​ಟಿ ಪ್ರಸ್ತುತ ನಾಲ್ಕು ಹಂತಗಳ ವ್ಯವಸ್ಥೆಯಾಗಿದೆ. ಅದರನ್ವಯ ಶೇಕಡ 5, 12, 18 ಮತ್ತು 28 ತೆರಿಗೆ ದರವನ್ನು ವಿಧಿಸಲಾಗುತ್ತದೆ. ಅಗತ್ಯ ಸಾಮಗ್ರಿಗಳಿಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗುತ್ತದೆ ಅಥವಾ ಅತ್ಯಂತ ಕಡಿಮೆ ದರ ವಿಧಿಸಲಾಗುತ್ತದೆ. ಐಷಾರಾಮಿ ಹಾಗೂ ತೀರಾ ಅಗತ್ಯವಲ್ಲದ ಸರಕುಗಳಿಗೆ ಗರಿಷ್ಠ ಸ್ಲ್ಯಾಬ್ ಅನ್ವಯವಾಗುತ್ತದೆ. ಐಷಾರಾಮಿ ಹಾಗೂ ಮದ್ಯ, ತಂಬಾಕು ಉತ್ಪನ್ನಗಳು, ಲಘು ಪೇಯಗಳು, ಫಾಸ್ಟ್​ಫುಡ್, ಕಾಫಿ, ಸಕ್ಕರೆ, ಗ್ಯಾಂಬ್ಲಿಂಗ್ ಮತ್ತು ಅಶ್ಲೀಲ ಸಾಹಿತ್ಯ ಮುಂತಾದ ಸಮಾಜಕ್ಕೆ ಮಾರಕವಾದ ಸರಕುಗಳಿಗೆ (ಸಿನ್ ಗೂಡ್ಸ್) ಗರಿಷ್ಠ ತೆರಿಗೆಯಲ್ಲದೆ ಸೆಸ್ ಕೂಡ ವಿಧಿಸಲಾಗುತ್ತದೆ. ಈ ಸೆಸ್​ನಿಂದ ಸಂಗ್ರಹವಾದ ಹಣವನ್ನು ಜಿಎಸ್​ಟಿಯಿಂದಾಗಿ ಆದಾಯ ನಷ್ಟ ಅನುಭವಿಸುವ ರಾಜ್ಯಗಳಿಗೆ ಪರಿಹಾರ ಒದಗಿಸಲು ಬಳಸಲಾಗುತ್ತದೆ.
ಬೆಂಗಳೂರು:ಪೆಟ್ರೋಲ್, ಡೀಸಲ್ ದರ ಏರಿಕೆ ಖಚಿತವಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರದ ವಿರುದ್ಧ ತೀವ್ರತರದ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗಿದೆ. ಹೈಕಮಾಂಡ್ ಈಗಾಗಲೇ ಸಂದೇಶ ಕಳುಹಿಸಿದೆ. ಈ ಹಿಂದೆ ಬೆಲೆ ಏರಿಕೆ ಆದಾಗಲೂ ನಿರಂತರ ಹೋರಾಟ ನಡೆಸಿದ್ದ ಕಾಂಗ್ರೆಸ್​ನ ವಿವಿಧ ಘಟಕಗಳು ಗಮನ ಸೆಳೆದಿದ್ದವು. ನಿಶ್ಚಿತ ಪ್ರತಿಭಟನಾ ಸ್ಥಳ ಹೊರತುಪಡಿಸಿ ಪೆಟ್ರೋಲ್ ಬಂಕ್ ಹಾಗೂ ಜನರ ಓಡಾಟ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿತ್ತು. ಬೆಲೆ ಇಳಿಕೆಯಾದಾಗ ಅದರ ಶ್ರೇಯ ಪಡೆದುಕೊಳ್ಳಲು ಪ್ರಯತ್ನಿಸಿತ್ತು. ಬುಧವಾರದ ಬಳಿಕ ದರ ಏರಿಕೆ ಸ್ವರೂಪ ಸ್ಪಷ್ಟವಾಗಲಿದ್ದು, ಇದನ್ನು ಗಮನಿಸಿ ದೆಹಲಿ ನಾಯಕರ ಸೂಚನೆಯಂತೆ ಹೋರಾಟ ಸ್ವರೂಪ ನಿರ್ಧಾರವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸೀಮಂತದಲ್ಲಿ ದುರಂತ, ಪಾಲ್ಗೊಂಡ 15 ಜನರಿಲ್ಲ ಈಗ ಜೀವಂತ!; ಆ 9 ಮಂದಿಯಲ್ಲಿ ಭಾರಿ ಆತಂಕ…

ಯೂಕ್ರೇನಲ್ಲಿ ಸಿಲುಕಿರುವ ಇವರಿಗೆ ಭಾರತಕ್ಕೆ ಮರಳಲು ಹೆಂಡತಿಯೇ ಸಮಸ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
