ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಮಿಕ್ರಾನ್ ಪ್ರಭೇದದ ವೈರಸ್​ನ ಎರಡನೇ ಪ್ರಕರಣ ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಈ ರೂಪಾಂತರಿಯ ಕೇಸ್ ಸಂಖ್ಯೆ 33ಕ್ಕೆ ಏರಿದೆ. ದೇಶದಲ್ಲಿ ಈ ವರೆಗೆ ಪತ್ತೆಯಾಗಿರುವ ಬಹುತೇಕ ಒಮಿಕ್ರಾನ್ ಕೇಸ್​ಗಳು ಸೌಮ್ಯ ಲಕ್ಷಣ ಹೊಂದಿದ್ದು ಗಂಭೀರವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ದೇಶದಲ್ಲಿ ಕರೊನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದರೂ 10 ರಾಜ್ಯಗಳ 27 ಜಿಲ್ಲೆಗಳಲ್ಲಿ ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಮೂರು ರಾಜ್ಯಗಳ ಎಂಟು ಜಿಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇಕಡ 10ಕ್ಕಿಂತ ಹೆಚ್ಚು ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಪರಿಸ್ಥಿತಿ ಮೇಲೆ ಹೆಚ್ಚು ನಿಗಾ ಇಡುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ (ಯುಟಿ) ನಿರ್ದೇಶಿಸಿದೆ. ಜಿಲ್ಲಾ ಮಟ್ಟದಲ್ಲಿ ಕಂಟೇನ್​ವೆುಂಟ್ ಕ್ರಮಗಳಿಗೆ ಗಮನ ಕೇಂದ್ರೀಕರಿಸಲು ಸೂಚಿಸಿದೆ. ಹೊಸ ಪ್ರಕರಣಗಳ ಕ್ಲಸ್ಟರ್​ಗಳ ತಡೆಗೆ ಕ್ರಮಕೈಗೊಳ್ಳುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟಿದೆ. ಮಿಜೋರಾಂ, ಕೇರಳ ಮತ್ತು ಸಿಕ್ಕಿಂನ ಎಂಟು ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಿಂದ ಕೋವಿಡ್ ಪಾಸಿಟಿವಿಟಿ ದರ ಶೇಕಡ 10ಕ್ಕಿಂತ ಅಧಿಕವಾಗಿದೆ.
ದೆಹಲಿಯಲ್ಲಿ ಮತ್ತೊಂದು ಕೇಸ್:ಒಮಿಕ್ರಾನ್ ರೂಪಾಂತರಿ ಮೊದಲು ಪತ್ತೆಯಾದ ದಕ್ಷಿಣ ಆಫ್ರಿಕಾದಿಂದ ಮರಳಿದ ದೆಹಲಿ ವ್ಯಕ್ತಿಯಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಮೊದಲ ಕೇಸ್​ನ ವ್ಯಕ್ತಿ ಕೂಡ ‘ರಿಸ್ಕ್’ ದೇಶದ ಪಟ್ಟಿಯಲ್ಲಿರುವ ದಕ್ಷಿಣ ಆಫ್ರಿಕಾದಿಂದ ಮರಳಿದವನಾಗಿದ್ದಾನೆ. ಮಹಾರಾಷ್ಟ್ರದಲ್ಲಿ ಶುಕ್ರವಾರ ರಾಜ್ಯ ಸರ್ಕಾರ ದೃಢಪಡಿಸಿರುವ ಏಳು ಒಮಿಕ್ರಾನ್ ಸೋಂಕಿತರಲ್ಲಿ ಮೂರು ವರ್ಷದ ಒಂದು ಮಗು ಕೂಡ ಇದೆ. ಒಮಿಕ್ರಾನ್ ಸೋಂಕಿನ ಭೀತಿಯಿಂದಾಗಿ ಮುಂಬೈಯಲ್ಲಿ ಎರಡು ದಿನ ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಒಮಿಕ್ರಾನ್ ಸೋಂಕಿತ ಒಂದೂವರೆ ವರ್ಷದ ಬಾಲಕಿ ಗುಣಮುಖಳಾಗಿದ್ದು ಪುಣೆಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಸೆರೊಪಾಸಿಟಿವಿಟಿ ದರ ಅಧಿಕ:‘ಸೆರೊಪಾಸಿಟಿವಿಟಿ’ ದರ ಅಧಿಕವಾಗಿರುವುದು ಭಾರತಕ್ಕೆ ಅನುಕೂಲಕರವಾಗಲಿದೆ ಎಂದು ತಜ್ಞರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಭಾರತದಲ್ಲಿ ಸೆರೊಪಾಸಿಟಿವಿಟಿ ದರ ಒಟ್ಟಾರೆಯಾಗಿ ಶೇಕಡ 70ರಿಂದ 80ರಷ್ಟಿದೆ. ದೊಡ್ಡ ನಗರಗಳಲ್ಲಿ ಈಗಾಲೇ ಶೇಕಡ 90ರಷ್ಟು ಜನರಲ್ಲಿ ಪ್ರತಿಕಾಯಗಳಿವೆ (ಆಂಟಿಬಾಡಿ) ಎಂದು ಸಿಎಸ್​ಐಆರ್-ಸಿಸಿಎಂಬಿಯ ಮಾಜಿ ನಿರ್ದೇಶಕ ರಾಕೇಶ್ ಮಿಶ್ರಾ ಹೇಳಿದ್ದಾರೆ. ಪ್ರಸ್ತುತ ಬೆಂಗಳೂರಿನ ಟಿಐಜಿಎಸ್ ನಿರ್ದೇಶಕರಾಗಿದ್ದಾರೆ.
ದೇಶದ ಆರ್ಥಿಕತೆ ಮೇಲೆ ಒಮಿಕ್ರಾನ್ ಪರಿಣಾಮ ನಗಣ್ಯ:ಒಮಿಕ್ರಾನ್ ದೇಶದ ಆರ್ಥಿಕತೆ ಮೇಲೆ ಹೆಚ್ಚು ಪರಿಣಾಮ ಉಂಟಾಗದು ಎಂದು ಕೇಂದ್ರ ಹಣಕಾಸು ಸಚಿವಾಲಯದ ವರದಿ ಹೇಳಿದೆ. 2020-21ರಲ್ಲಿ ಕೋವಿಡ್-19ನಿಂದ ಉಧ್ವಸ್ತಗೊಂಡಿರುವ ಆರ್ಥಿಕತೆ ಗಳಲ್ಲಿ ಹೆಚ್ಚು ಪ್ರಬಲವಾಗಿ ಚೇತರಿಸಿಕೊಳ್ಳುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದೆ. ತ್ವರಿತ ಲಸಿಕೆ ಅಭಿಯಾನವೇ ಚೇತರಿಕೆಗೆ ಕಾರಣವೆಂದು ಸಚಿವಾಲಯದ ಮಾಸಿಕ ಆರ್ಥಿಕ ಪರಿಶೀಲನೆ ವರದಿ ಹೇಳಿದೆ.
ಇಮ್ಯುನಿಟಿಯಿಂದ ತಪ್ಪಿಸಿಕೊಳ್ಳುವ ಪ್ರಭೇದ:ಒಮಿಕ್ರಾನ್ ರೂಪಾಂತರಿಯು ಆಕ್ರಮಣ ಮಾಡಿದವರಲ್ಲಿ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಪ್ರಮಾಣ ಬೇರೆ ಪ್ರಭೇದಗಳಿಗಿಂತ ಅಧಿಕವಾಗಿದೆ. ಮರು-ಸೋಂಕಿನ ಸಂಭಾವ್ಯತೆ ಬೀಟಾ ಮತ್ತು ಡೆಲ್ಟಾ ಪ್ರಭೇದಕ್ಕಿಂತ ಕನಿಷ್ಠ ಮೂರು ಪಟ್ಟು ಹೆಚ್ಚಾಗಿದೆ ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಹೇಳಿದ್ದಾರೆ.
ಕಾಸರಗೋಡು:ಕೇರಳದಲ್ಲಿ ಕೋವಿಡ್ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿ ರುವ ಹಿನ್ನೆಲೆಯಲ್ಲಿ ಶಬರಿಮಲೆ ವಿಧಿಸಿರುವ ನಿಯಂತ್ರಣಗಳನ್ನು ಸಡಿಲ ಮಾಡಲು ಸರ್ಕಾರ ಮುಂದಾಗಿದೆ. ಸನ್ನಿಧಾನದಲ್ಲಿ ರಾತ್ರಿ ವ್ರತಧಾರಿಗಳಿಗೆ ತಂಗಲು 500 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪಂಪಾನದಿಯ ಜಲಮಟ್ಟವನ್ನು ಗಮನದಲ್ಲಿರಿಸಿ ಸ್ನಾನ ಹಾಗೂ ಪಿತೃತರ್ಪಣಕ್ಕೆ ಅವಕಾಶ ಕಲ್ಪಿಸಲಾಗು ವುದು. ಪಂಪೆಯಿಂದ ನೀಲಿಮಲೆ, ಅಪ್ಪಾಚಿಮೇಡ್, ಮರಕ್ಕೂಟ್ಟ ಮುಂತಾದ ಪರಂಪರಾಗತ ಕಾಡುದಾರಿಯನ್ನು ಭಕ್ತರಿಗಾಗಿ ಬಿಟ್ಟುಕೊಡಲು, ಈ ಹಿಂದಿನಂತೆ ತಾತ್ಕಾಲಿಕ ಕುಟೀರ ನಿರ್ವಣಕ್ಕೆ ಅನುಮತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 1 =
Remember me
