ಒಂದೆಡೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ, ಇನ್ನೊಂದೆಡೆ ಅವರದ್ದೇ ಕುಮ್ಮಕ್ಕಿನಿಂದ ಮೊಳಗುತ್ತಿದ್ದ ‘ಛೀನ್ ಕೆ ಲೇಂಗೆ ಆಜಾದಿ’ ಘೊಷಣೆ, ಇವೆರಡೂ ತಾರಕಕ್ಕೇರಿದ್ದ ಕಾಲವದು. ಅಂಥ ಹೊತ್ತಲ್ಲಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂಥ ಮಹತ್ವದ ವಿದ್ಯಮಾನ ಘಟಿಸಿತು. 2019 ಆಗಸ್ಟ್ 5ರಂದು ಗೃಹ ಸಚಿವ ಅಮಿತ್ ಷಾ ಸಂಸತ್ತಿನಲ್ಲಿ ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ ಅನುಚ್ಛೇದ 370 ಮತ್ತು 35ಎ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನಗಳನ್ನು ಹಿಂಪಡೆಯುವ ರಾಷ್ಟ್ರಪತಿಗಳ ಆದೇಶವನ್ನು ಪ್ರಕಟಿಸಿದರು. ತದನಂತರದಲ್ಲಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ‘ಜಮ್ಮು ಮತ್ತು ಕಾಶ್ಮೀರ ಮರುರಚನಾ ಕಾಯ್ದೆ’ಯನ್ನೂ ಜಾರಿಗೊಳಿಸಲಾಯಿತು. ಅಲ್ಲಿಗೆ ಭಾರತದ ಇತರ ರಾಜ್ಯಗಳಷ್ಟೇ ಹಕ್ಕುಗಳು ಜಮ್ಮು-ಕಾಶ್ಮೀರದವರಿಗೂ ಇರುವಂಥ ವ್ಯವಸ್ಥೆ ಜಾರಿಗೆ ಬಂತು. ಇವೆಲ್ಲವೂ ಸಂಸತ್ತಿನಲ್ಲಿ ಮೂರನೇ ಎರಡು ಬಹುಮತದೊಂದಿಗೆ ಜಾರಿಗೆ ಬಂದಿವೆ. ನಿರೀಕ್ಷೆಯಂತೆ ರಾಜಕೀಯ ಪ್ರೇರಿತ ಪ್ರತಿಭಟನೆಗಳು, ಬಂದ್ ಇತ್ಯಾದಿ ನಡೆದವು. ಉಗ್ರರು ಇದರ ಪ್ರಯೋಜನಪಡೆಯಬಾರದು ಎಂದು ಸರ್ಕಾರ ಇಂಟರ್​ನೆಟ್ ಸಂಪರ್ಕ ತುಂಡರಿಸಿ ತಲ್ಲದೆ ಬಿಗಿ ಬಂದೋಬಸ್ತ್, ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿ ಮಾಡಿತು. ಕೆಲ ತಿಂಗಳ ನಂತರ ಜಮ್ಮು-ಕಾಶ್ಮೀರ ಸಹಜ ಸ್ಥಿತಿಗೆ ಬಂತು.
ಭಯೋತ್ಪಾದನೆಗೆ ಅಂಕುಶ
ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ನೀಡಿದ ಮಾಹಿತಿಯಂತೆ 2019ಕ್ಕೆ ಹೋಲಿಸಿದರೆ 2020ರಲ್ಲಿ ಶೇಕಡ 52 ಮತ್ತು ಈ ವರ್ಷ ಇದುವರೆಗೆ ಶೇ.32ರಷ್ಟು ಭಯೋತ್ಪಾದನಾ ಚಟುವಟಿಕೆ ಕಡಿಮೆಯಾಗಿದೆ. ವಾಣಿಜ್ಯ ವಹಿವಾಟು, ಸಾರ್ವಜನಿಕ ಸಾರಿಗೆ, ಸರ್ಕಾರಿ ಕಚೇರಿ, ಶಿಕ್ಷಣ, ಆರೋಗ್ಯ ಸಂಸ್ಥೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
ಹೊಸ ಅವಕಾಶಗಳು
ವಿಧಿ 35ಎ ರದ್ದಾದರೆ ಇತರ ರಾಜ್ಯಗಳಿಂದ ಜನರು ಬಂದು ತಮ್ಮೆಲ್ಲ ಭೂಮಿ ಖರೀದಿಸುತ್ತಾರೆ ಎಂಬ ಆತಂಕ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಜನರದ್ದಾಗಿತ್ತು. ಆದರೆ ಅಂಥ ದ್ದೇನೂ ಆಗಿಲ್ಲ. ಈ ಮೊದಲು ಭಾರತದ ಇತರ ಭಾಗಗಳಿಂದ ಯಾವುದೇ ವೃತ್ತಿಪರರು ಇಲ್ಲಿ ಹೆಚ್ಚು ಕಾಲ ಕೆಲಸ ಮಾಡಲು ಸಿದ್ಧರಿರಲಿಲ್ಲ. ಈಗ ಹೊಸ ಅವಕಾಶಗಳಿಗೆ ತೆರೆದುಕೊಳ್ಳುತ್ತಿದೆ. ಈ ನಡುವೆ ಗುಪ್ಕರ್ ಮೈತ್ರಿಕೂಟ ಮತ್ತೆ ವಿಶೇಷ ಸ್ಥಾನಮಾನ ಕಲ್ಪಿಸು ವಂತೆ ಆಗ್ರಹಿಸಿದೆಯಾದರೂ, ಕೇಂದ್ರ ಅದನ್ನು ತಳ್ಳಿಹಾಕಿದೆ.
ಈಗಿನ ಚಿತ್ರಣ
ಅನುಚ್ಛೇದ 35ಎ ರದ್ದತಿಯ ಪ್ರಮುಖ ಪರಿಣಾಮವೆಂದರೆ ಜನರು ಈಗ ಆಶಾವಾದಿಗಳಾಗಿದ್ದಾರೆ. ಪ್ರವಾಸೋದ್ಯಮ ಪುನಶ್ಚೇತನದ ಹೊಸ ಭರವಸೆಗಳೊಂದಿಗೆ ಕಾಶ್ಮೀರ ಮತ್ತೆ ಸ್ವರ್ಗವಾಗುವ ನಿರೀಕ್ಷೆ ಗರಿಗೆದರಿದೆ. ಹಲವು ದಶಕಗಳಿಂದ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹೆಸರಿನಲ್ಲಿ ಜನರ ನಡುವೆ ಭೇದವೆಣಿಸಿ ಅಸಮಾನತೆ ತೋರುತ್ತಿದ್ದ ನಿಯಮಗಳು ಈಗಿಲ್ಲ. ಇವುಗಳಿಂದ ಸೋತು ಸುಣ್ಣವಾಗಿದ್ದ ಕಾಶ್ಮೀರಿಗಳು ಈಗ ಕೇಂದ್ರ ಸರ್ಕಾರದ ಯೋಜನೆಗಳ ಫಲ ಪಡೆಯುತ್ತಿದ್ದಾರೆ. ಪ್ರಸ್ತುತ ಸರ್ಕಾರ ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿ, ಸಾಮರ್ಥ್ಯ ವರ್ಧನೆ ಮೂಲಕ ಕಾಶ್ಮೀರಿಗಳ ಅವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಗಮನ ಹರಿಸಿದೆ. ಪ್ರಧಾನಿಯವರ ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಸುಮಾರು 80 ಸಾವಿರ ಕೋಟಿ ರೂ. ಮೊತ್ತದಲ್ಲಿ ಐಐಟಿ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಐಐಎಂ ಸ್ಥಾಪಿಸುವ ಮೂಲಕ ಈ ಭಾಗದ ಯುವಜನತೆಯ ಭವಿಷ್ಯ ಉಜ್ವಲಗೊಳಿಸುವತ್ತ ಗಮನ ನೀಡಲಾಗಿದೆ. ಐದು ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ಸಿಕ್ಕಿದೆ. 40 ವರ್ಷಗಳಿಂದ ನನೆಗುದಿಯಲ್ಲಿದ್ದ ಶಹಪುರ ಕಂಡಿ ಅಣೆಕಟ್ಟೆಯಂತಹ ಯೋಜನೆಗೆ ವೇಗ ನೀಡಿ ವಿದ್ಯುತ್ ಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸಗಳಾಗುತ್ತಿದೆ.
ಭರವಸೆಯ ಹಾದಿ
ಹಲವು ದಶಕಗಳಲ್ಲೇ ಮೊದಲ ಬಾರಿಗೆ ಭಾರತದ ಸಂವಿಧಾನ ಹಾಗೂ ಕೇಂದ್ರದ ಎಲ್ಲ 890 ಕಾನೂನುಗಳು ಪೂರ್ಣವಾಗಿ ಜಮ್ಮು-ಕಾಶ್ಮೀರಕ್ಕೆ ಅನ್ವಯವಾಗಿವೆ. ಅಟಲ್ ಪಿಂಚಣಿ ಯೋಜನೆಯಂಥ ವಿಮಾ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಎಷ್ಟೋ ದಶಕಗಳ ಹಿಂದೆ ಜಮ್ಮು-ಕಾಶ್ಮೀರಕ್ಕೆ ಬಂದು ಇಲ್ಲಿಯ ಪ್ರಜೆಗಳಾಗಿದ್ದರೂ ಪೂರ್ಣ ಪೌರತ್ವ ಸಿಗದೆ ಮತದಾನದ ಹಕ್ಕು ಕಳೆದುಕೊಂಡಿದ್ದ ಜನರಿಗೆ ಸಾಂತ್ವನ ತಂದಿರುವುದು ವಾಸ್ತವ್ಯ ಪ್ರಮಾಣಪತ್ರ ಯೋಜನೆ. ಜಮ್ಮು-ಕಾಶ್ಮೀರದಲ್ಲಿ 15 ವರ್ಷಗಳಿಂದ ನೆಲೆಸಿರುವವರಿಗೆ ಅಥವಾ 7 ವರ್ಷದಿಂದ ವಿದ್ಯಾಭ್ಯಾಸ ಮಾಡುತ್ತಿರುವ ಅಥವಾ 10ನೇ ತರಗತಿ ಅಥವಾ ಪಿಯುಸಿ ಪರೀಕ್ಷೆ ಬರೆದಿರುವವರಿಗೆ ಇಲ್ಲಿನ ವಾಸ್ತವ್ಯ ಪ್ರಮಾಣ ಪತ್ರ(ಡೊಮಿಸೈಲ್) ಸಿಗಲಿದೆ. ಈಗ ಮಹಿಳೆಯರೂ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ. ಕಾಶ್ಮೀರದ ಹೊರಗಿನ ಪುರುಷನನ್ನು ಮದುವೆಯಾದರೂ ತಮ್ಮ ಭೂಮಿಯನ್ನು ಮಕ್ಕಳಿಗೆ ವರ್ಗಾಯಿಸಬಹುದು. ಮತ್ತೆ ಜಮ್ಮು-ಕಾಶ್ಮೀರವನ್ನು ರಾಜ್ಯವನ್ನಾಗಿ ಮಾಡಬೇಕು ಎನ್ನುವ ಬೇಡಿಕೆಯೇನೋ ಇದೆ. ಅದನ್ನು ಸೂಕ್ತ ಸಮಯದಲ್ಲಿ ಮಾನ್ಯ ಮಾಡುವು ದಾಗಿ ಕೇಂದ್ರ ಸರ್ಕಾರ ಹೇಳಿದೆ. ಸದ್ಯಕ್ಕೆ ಆ ಪ್ರದೇಶದಲ್ಲಿ ಶಾಂತಿ, ಅಭಿವೃದ್ಧಿ ನೆಲೆಸಬೇಕು. ಹಿಂದಿನ ರಾಜ್ಯ ಸರ್ಕಾರಗಳು ನಿರಂತರವಾಗಿ ಭಯೋತ್ಪಾದನೆ ಮಟ್ಟ ಹಾಕದೆ ಜನರನ್ನು ವಿಭಜಿಸುವ ಕೆಲಸ ಮಾಡುತ್ತ ಬಂದಿದ್ದು, ಅಲ್ಪಸಂಖ್ಯಾತರೆನಿಸಿರುವ ಹಿಂದೂ, ಸಿಖ್, ಬೌದ್ಧ ಧರ್ವಿು ಯರಿಗೆ ಆತಂಕ ಸೃಷ್ಟಿಸಿದ್ದರು. ಅದು ಹೋಗಿ ಸಹಜತೆ ಮರಳಿದರೆ ರಾಜ್ಯ ಸ್ಥಾನಮಾನ ಮತ್ತೆ ನೀಡಬಹುದು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 7 =
Remember me
