|ರಾಘವ ಶರ್ಮ ನಿಡ್ಲೆಲಖನೌ (ಉತ್ತರ ಪ್ರದೇಶ)
ಉತ್ತರ ಪ್ರದೇಶ ಚುನಾವಣೆಯನ್ನು ಗೆಲ್ಲಲೇಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿ ಇಡೀ ಬಿಜೆಪಿ ನಾಯಕತ್ವ, ಕಾರ್ಯಕರ್ತ ಪಡೆ ಹಗಲಿರುಳು ಶ್ರಮಿಸುತ್ತಿರುವ ನಡುವೆ ಯೋಗಿ ಅವರ ಕಾರ್ಯತಂತ್ರ ತಂಡದ ಪ್ರಮುಖ ಸದಸ್ಯೆಯಾಗಿ ಉಡುಪಿ ಮೂಲದ ಕನ್ನಡತಿ ರಶ್ಮಿ ಸಾಮಂತ್ ಕೂಡ ಕಾರ್ಯನಿರ್ವಹಿಸುತ್ತಿರುವುದು ಗಮನಸೆಳೆದಿದೆ.
ಚುನಾವಣೆಗೆ ಸಂಬಂಧಿಸಿ ಪಕ್ಷದ ರಣನೀತಿ ರೂಪಿಸುವುದು, ಯೋಗಿ ಆದಿತ್ಯನಾಥ ಪ್ರಚಾರ ಅಭಿಯಾನ, ಮಾಧ್ಯಮ ನಿರ್ವಹಣೆ, ಜನರ ಮುಂದೆ ಯಾವ ವಿಷಯ ಪ್ರಸ್ತಾಪಿಸಿ ಅವರನ್ನು ತಮ್ಮತ್ತ ಸೆಳೆದುಕೊಳ್ಳಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ನಿತ್ಯವೂ ವಿನೂತನ ಕಾರ್ಯಯೋಜನೆಗಳನ್ನು ಈ ತಂಡ ರೂಪಿಸುತ್ತಿದೆ. ದೇಶದ ವಿವಿಧ ಭಾಗಗಳ ಚುನಾವಣಾ ತಜ್ಞರನ್ನು ಸೇರಿಸಿಕೊಂಡಿರುವ ಯೋಗಿ ಆಪ್ತವಲಯ, ರಶ್ಮಿ ಸಾಮಂತ್​ರನ್ನೂ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಮೂರ್ನಾಲ್ಕು ವಾರಗಳಿಂದ ರಾಜಧಾನಿ ಲಖನೌದಲ್ಲಿ ವಾಸ್ತವ್ಯ ಹೂಡಿರುವ ರಶ್ಮಿ ಸಾಮಂತ್, ನಿತ್ಯವೂ ಪ್ರಚಾರ ಕಾರ್ಯಗಳ ಬಳಿಕ ಯೋಗಿ ಆದಿತ್ಯನಾಥರನ್ನು ಭೇಟಿ ಮಾಡಿ ಕಾರ್ಯತಂತ್ರಗಳ ಕುರಿತ ಮಾಹಿತಿ ವಿನಿಮಯ ಮಾಡುತ್ತಿದ್ದಾರೆ. 23ರ ಹರೆಯದ ಅತಿ ಕಿರಿಯ ಸದಸ್ಯೆಯಾಗಿದ್ದರೂ, ಸಾಮಂತ್ ಕ್ರಿಯಾಶೀಲತೆ, ರಾಜ್ಯದ ಕುರಿತಂತೆ ಸಂಗ್ರಹಿಸಿರುವ ಮಾಹಿತಿ, ಇತರ ಸದಸ್ಯರ ಗಮನಸೆಳೆದಿದೆ.
ಹಿಂದುತ್ವ ಸಿದ್ಧಾಂತದ ಪ್ರತಿಪಾದಕಿ ಎಂದು ಹೇಳಿಕೊಂಡಿರುವ ಸಾಮಂತ್, ಉಡುಪಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದರು. ನಂತರ ಬ್ರಿಟನ್​ನ ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಕೆಲ ತಿಂಗಳ ಹಿಂದೆಯಷ್ಟೇ ಪೂರ್ಣಗೊಳಿಸಿ ಭಾರತಕ್ಕೆ ವಾಪಸಾಗಿದ್ದಾರೆ. 21ರ ವಯಸ್ಸಲ್ಲಿ ಆಕ್ಸ್​ಫರ್ಡ್ ವಿವಿಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆಯಾಗಿ ಆಯ್ಕೆಯಾದ ಸಾಮಂತ್, ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಭಾರತೀಯ ಪ್ರಜೆ ಎಂಬ ಖ್ಯಾತಿಗೂ ಪಾತ್ರವಾಗಿದ್ದಾರೆ. ‘ಹಿಂದುತ್ವ ಸಿದ್ಧಾಂತದಿಂದ ಪ್ರೇರೇಪಣೆ ಕಾರಣಕ್ಕೆ ಅಧ್ಯಕ್ಷೆಯಾದ ಬಳಿಕ ನನ್ನ ವಿರುದ್ಧ ಅಭಿಯಾನಗಳನ್ನು ನಡೆಸಲಾಯಿತು. ನಂತರ ಹುದ್ದೆಗೆ ರಾಜೀನಾಮೆ ನೀಡಿದೆ’ ಎಂದು ಲಖನೌದಲ್ಲಿ ವಿಜಯವಾಣಿ ಜತೆ ಮಾಹಿತಿ ಹಂಚಿಕೊಂಡರು.
‘ಸಿಎಂ ಯೋಗಿಯವರ ತಂಡದಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ಪರಿಚಯದ ಸ್ವಾಮೀಜಿ ಮೂಲಕ ಯೋಗಿಯವರ ಪರಿಚಯವಾಯಿತು. ಕಿರಿ ವಯಸ್ಸಲ್ಲೇ ಯೋಗಿ ಅವರಂಥ ಕರ್ಮಯೋಗಿ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ’ ಎನ್ನುತ್ತಾರೆ ಸಾಮಂತ್. ‘ಯೋಗಿ ಚುನಾವಣೆ ಪ್ರಚಾರ ಮುಗಿಸಿ ಎಷ್ಟೇ ತಡವಾದರೂ ಬೆಳಗ್ಗೆ ನಾಲ್ಕು ಗಂಟೆಗೆ ಮುನ್ನ ಎದ್ದು ಯೋಗಾಭ್ಯಾಸ, ಪೂಜಾಕೈಂಕರ್ಯ ಪೂರ್ಣಗೊಳಿಸುತ್ತಾರೆ. ನಂತರ, ಆಪ್ತವರ್ಗದೊಂದಿಗೆ ದಿನದ ಜವಾಬ್ದಾರಿಗಳ ಬಗ್ಗೆ ರ್ಚಚಿಸಿ ಪ್ರಚಾರಕಾರ್ಯಕ್ಕಿಳಿಯುತ್ತಾರೆ. ಯೋಗಿ ಅವರಂಥ ಪ್ರಾಮಾಣಿಕ ವ್ಯಕ್ತಿ ಈ ರಾಜ್ಯಕ್ಕೆ ಅಗತ್ಯವಿದೆ’ ಎನ್ನುವುದು ಸಾಮಂತ್ ದೃಢನಿಲುವು.
‘2017ರ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಕೆಲ ಮಹಿಳೆಯರು ಬಿಜೆಪಿಗೆ ಮತಹಾಕಿದ್ದರು. ಈ ಬಾರಿ ಕೂಡ ಒಂದಿಷ್ಟು ಸೈಲೆಂಟ್ ಮಹಿಳಾ ಮತವರ್ಗ ಬಿಜೆಪಿಗೇ ಮತಹಾಕಲಿದೆ’ ಎನ್ನುವ ರಶ್ಮಿ, ‘ಸಮಾಜವಾದಿ ಪಕ್ಷದ ಗೂಂಡಾ ಸಂಸ್ಕೃತಿಗೆ ಕಡಿವಾಣ ಹಾಕಿ, ಕಾನೂನು ವ್ಯವಸ್ಥೆ ಬಿಗಿಗೊಳಿಸಿದ್ದೇ ಯೋಗಿ ಸರ್ಕಾರದ ಬಹು ದೊಡ್ಡ ಪ್ಲಸ್​ಪಾಯಿಂಟ್. ಇದನ್ನು ಹಳ್ಳಿ-ಹಳ್ಳಿಗಳಲ್ಲಿ ಮಹಿಳೆಯರು ಒಪ್ಪಿಕೊಳ್ಳುತ್ತಾರೆ. ಕಾನೂನು ಸುವ್ಯವಸ್ಥೆ ಬಗ್ಗೆ ಮುಸ್ಲಿಂ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿರುವ ವಿಡಿಯೋಗಳು ನಮ್ಮಲ್ಲಿವೆ’ ಎನ್ನುತ್ತಾರೆ.
ಈ ವಿಡಿಯೋಗಳನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ಶೇರ್ ಮಾಡುವ ಮೂಲಕ ಜನರಲ್ಲಿ ಬಿಜೆಪಿ ಬಗ್ಗೆ ಸದಭಿಪ್ರಾಯ ಮೂಡಿಸುವ ತಂತ್ರವನ್ನೂ ತಂಡ ಅನುಸರಿಸುತ್ತಿದೆ. ಯೋಗಿ ಸ್ಪರ್ಧಿಸುತ್ತಿರುವ ಗೋರಖ್​ಪುರ ನಗರ ಕ್ಷೇತ್ರದಲ್ಲಿ 6ನೇ ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಮೂರು ಹಂತದ ಚುನಾವಣೆ ಪಶ್ಚಿಮ ಮತ್ತು ಮಧ್ಯಭಾಗದ ಉತ್ತರ ಪ್ರದೇಶದಲ್ಲಿ ನಡೆದಿರುವುದರಿಂದ ಮುಂದಿನ ದಿನಗಳಲ್ಲಿ ಈ ತಂಡ ಗೋರಖ್​ಪುರ, ವಾರಾಣಸಿ ಹಾಗೂ ಪೂರ್ವ ಉತ್ತರ ಪ್ರದೇಶವನ್ನು ಕೇಂದ್ರೀಕರಿಸಿ ಕಾರ್ಯನಿರ್ವಹಿಸಲಿದೆ.
ಹಿಜಾಬ್ ವಿಚಾರ ಕೋರ್ಟ್​ಗೆ:ಉಡುಪಿಯ ಶಾಲೆಯಲ್ಲಿ ಓದುತ್ತಿದ್ದಾಗ ಶಾಲೆಯ ನಿಯಮಕ್ಕೆ ತಕ್ಕಂತೆ ಯೂನಿಫಾರ್ಮ್​ ಧರಿಸುತ್ತಿದ್ದೆವು. ಧರ್ಮ ಬಿಂಬಿಸುವ ಯಾವುದೇ ಡ್ರೆಸ್​ಗೆ ಅವಕಾಶ ಇರಲಿಲ್ಲ. ಸರ್ಕಾರಿ ಶಾಲೆಗಳಲ್ಲಿ ಹಿಜಾಬ್​ಗೆ ಅವಕಾಶ ಇರಲೇಬಾರದು. ಕಲರ್ ಡ್ರೆಸ್​ಗಳನ್ನು ಹಾಕಬೇಕೆಂಬ ಆಸೆಯಿತ್ತಾದರೂ ಶಾಲೆ ನಿಯಮವೇ ಅಂತಿಮ. ಈಗಿನ ಹೈಕೋರ್ಟ್ ವಿಚಾರಣೆಗಳನ್ನು ಗಮನಿಸಿಯೇ, ಯಾವುದೇ ಕಾರಣಕ್ಕೂ ಹಿಜಾಬ್​ಗೆ ಅನುಮತಿ ನೀಡಬಾರದು ಎಂದು ಮಧ್ಯಂತರ ಅರ್ಜಿ ಸಲ್ಲಿಸಿ ತಮ್ಮನ್ನೂ ಪ್ರತಿವಾದಿಗಳನ್ನಾಗಿ ಮಾಡಬೇಕು ಎಂದು ಸಾಮಂತ್ ಕೇಳಿಕೊಂಡಿದ್ದಾರೆ. ಹಿಜಾಬ್ ಹಾಕಬಹುದು ಎಂದು ಕೋರ್ಟ್ ಆದೇಶ ನೀಡಿದಲ್ಲಿ ಹೆತ್ತವರು ಮಕ್ಕಳ ಮೇಲೆ ಹಿಜಾಬ್​ನ್ನು ಒತ್ತಾಯಪೂರ್ವಕವಾಗಿ ಹೇರಲಿದ್ದಾರೆ. ಇದರಿಂದ ಶಾಲೆಗಳಲ್ಲಿ ಧರ್ಮಪ್ರಚಾರದ ವಿಷಯ ಪ್ರವೇಶವಾಗಿ ಮಕ್ಕಳ ನಡುವಿನ ಸಮಾನತೆ, ಒಗ್ಗಟ್ಟಿನ ಪರಿಸರಕ್ಕೆ ಧಕ್ಕೆಯಾಗಲಿದೆ. ಹಿಜಾಬ್ ಧರಿಸಲು ಇಷ್ಟವಿಲ್ಲದವರೂ ಬಾಹ್ಯಶಕ್ತಿಗಳ ಒತ್ತಡಕ್ಕೆ ಮಣಿದು ಅನಿವಾರ್ಯವಾಗಿ ಹಿಜಾಬ್ ಧರಿಸಬೇಕಾದ ಸ್ಥಿತಿ ನಿರ್ವಣವಾಗಲಿದೆ ಎನ್ನುತ್ತಾರೆ ಸಾಮಂತ್.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + six =
Remember me
