|ರಾಘವೇಂದ್ರ ಎಸ್. ಶ್ರೀವತ್ಸ
‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ (ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆೆ) ಎಂಬುದು ನಮ್ಮ ಸಂಸ್ಕೃತಿಯಾಗಿದ್ದರೂ ದುರ್ದೈವವೆಂದರೆ ಮಹಿಳೆಯರ ಹಾಗೂ ಮಕ್ಕಳ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಕೆಲವು ಧರ್ವನುಯಾಯಿಗಳಿಗೆ ಅವರದ್ದೇ ಧಾರ್ವಿುಕ ಕಾನೂನಿನ ಅನ್ವಯಕ್ಕೆ ಅವಕಾಶವಿರುವುದು ಇಂತಹ ಶೋಷಣೆಗೆ ಇಂಬು ಕೊಟ್ಟಂತಾಗಿದೆ. ಚುನಾವಣೆಗಳಲ್ಲಿ ಕಲ್ಪತರುವಾಗಿರುವ ಸೆಕ್ಯುಲರಿಸಂ ಎಂಬ ರಾಜಕೀಯ ಮೇಲಾಟದಲ್ಲಿ ಸಿಲುಕಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡದಿರುವ ಪರಿಣಾಮವಾಗಿ ಆಗುತ್ತಿರುವ ಅವಘಡಗಳ ಜೀವಂತ ನಿದರ್ಶನಗಳು ಹೃದಯವಿದ್ರಾವಕವಾಗಿವೆ. ಕಾನೂನು ವ್ಯವಸ್ಥೆಯಲ್ಲಿನ ಲೋಪಗಳ ದುರುಪಯೋಗದ ಕೆಲವು ಪ್ರಸಂಗಗಳ ಅವಲೋಕನ ಈ ನಿಟ್ಟಿನಲ್ಲಿ ಪ್ರಸ್ತುತ.
ಮುಸ್ಲಿಂ ಕಾನೂನಿನಲ್ಲಿ ಮಕ್ಕಳನ್ನು ದತ್ತು ಪಡೆಯುವುದಕ್ಕೆ ಅವಕಾಶವಿಲ್ಲ. ಅವರದ್ದೇ ಆದ ಈ ನಿಯಮವನ್ನು ಉಲ್ಲಂಘಿಸಲು ಶಾಹಿಸ್ತಾ ಮತ್ತು ಫಯಾಜ ದಂಪತಿ ಕುಚೇಷ್ಟೆ ಮಾಡಿದ್ದರು. ಹಿಂದೂ ದಂಪತಿಗಳಿಗೆ ಇನ್ನೂ ಹುಟ್ಟಬೇಕಾಗಿದ್ದ ಮಗುವೊಂದನ್ನು ತಾವು ಸಾಕುವುದಾಗಿ ಈ ಮುಸ್ಲಿಂ ದಂಪತಿಗಳು ಒಪ್ಪಂದ ಮಾಡಿಕೊಂಡಿದ್ದ ವಿಚಿತ್ರ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಕೂಸು ಹುಟ್ಟುವುದಕ್ಕೆ ಮುಂಚೆ ಕುಲಾವಿ ಹೊಲಿಸೋದು ಅಂದರೆ ಬಹುಶಃ ಇದೇ ಇರಬಹುದು. ನಾಟಕೀಯವಾಗಿ ನಡೆದ ಈ ಘಟನೆ ಕರ್ನಾಟಕ ಹೈಕೋರ್ಟಿನ ಮುಂದೆ ವಿಚಾರಣೆಗೆ ಬಂದಿತ್ತು. ಇನ್ನೂ ಗರ್ಭದಲ್ಲೇ ಇರುವ ಮಗುವಿನ ಪೋಷಣೆಯ ನೆಪದಲ್ಲಿ ಮಾಡಿಕೊಂಡಿದ್ದ ಒಪ್ಪಂದ ಕಾನೂನುಬಾಹಿರ ಹಾಗೂ ಮುಸ್ಲಿಂ ಕಾನೂನಿನಲ್ಲಿ ಮಗುವನ್ನು ದತ್ತು ಪಡೆಯಲು ಅವಕಾಶವಿಲ್ಲದಿರುವುದರಿಂದ ಆ ಮುಸ್ಲಿಂ ದಂಪತಿಗಳಿಗೆ ಮಗುವಿನ ಪಾಲನೆ ವಹಿಸಿಕೊಡಲಾಗುವುದಿಲ್ಲವೆಂದು ಮಾನ್ಯ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯ ಒತ್ತು ಕೊಟ್ಟಿರುವ ಮತ್ತೊಂದು ರೋಚಕ ಅಂಶವೇನೆಂದರೆ ಇನ್ನೂ ಗರ್ಭದಲ್ಲೇ ಇರುವ ಮಗುವಿಗೂ ಮಾನವ ಹಕ್ಕುಗಳು ದತ್ತವಾಗಿದೆಯೆಂಬುದು. ಈ ದಿಶೆಯಲ್ಲಿ ಹಿಂದೂ ಉತ್ತರಾಧಿಕಾರ ಕಾನೂನಿನ ಅಂಶವೊಂದು ಗಮನಾರ್ಹ. en ventre sa mere ಎಂಬ ಫ್ರೆಂಚ್ ಹೇಳಿಕೆಯಂತೆ ಹಿಂದೂ ಕಾನೂನಿನಲ್ಲಿ ಇನ್ನೂ ತಾಯಿಯ ಗರ್ಭದಲ್ಲಿರುವಾಗಲೇ ಮಗುವಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಬಂದಿರುತ್ತದೆ. ಎಷ್ಟಾದರೂ ಉತ್ತರೆಯ ಗರ್ಭದಲ್ಲಿದ್ದ ಪರೀಕ್ಷಿತನನ್ನು ಅಶ್ವತ್ಥಾಮರ ಬ್ರಹ್ಮಾಸ್ತ್ರದಿಂದ ಶ್ರೀಕೃಷ್ಣನು ರಕ್ಷಿಸಿದಂತಹ ಪ್ರತೀತಿ ನಮ್ಮದಲ್ಲವೇ?
ಈಗ ಸದ್ಯಕ್ಕೆ ಜಾರಿಯಲ್ಲಿರುವ ಧಾರ್ವಿುಕ ಕಾನೂನುಗಳ ದುರುಪಯೋಗಕ್ಕೆ ಮತ್ತೊಂದು ಆಯಾಮವಿದೆ. ಹೇಯ ಕೃತ್ಯಗಳನ್ನೆಸಗಿ ಅವನ್ನು ಧಾರ್ವಿುಕ ಕಾನೂನಿನ ಆಶ್ರಯದಲ್ಲಿ ಸಮರ್ಥನೆ ಮಾಡಿಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿದೆ. ‘ಕಾಮಾತುರಾಣಾಂ ನ ಭಯಂ ನ ಲಜ್ಜಾ’ ಎಂಬ ನಾಣ್ಣುಡಿಗೆ ಕನ್ನಡಿ ಹಿಡಿದಂತಿದೆ ಇತ್ತೀಚೆಗೆ ಬೆಳಕಿಗೆ ಬಂದಿರುವ ಕೆಲವು ದುಷ್ಕರ್ವಿುಗಳ ಮಸಲತ್ತು. ಲೈಂಗಿಕ ಅತ್ಯಾಚಾರಗಳಿಂದ ಮಕ್ಕಳನ್ನು ರಕ್ಷಿಸುವ ಸದುದ್ದೇಶದಿಂದ ರೂಪಿಸಲಾಗಿರುವ Protection of Children from Sexual Offences Act, 2012 (POCSO ಪೊಕ್ಸೊ) ಕಾನೂನನ್ನು ಸಕ್ಷಮವಾಗಿ ಜಾರಿಗೊಳಿಸುವ ಹಾದಿಯಲ್ಲಿ ಧರ್ಮ ಹಾಗೂ ಧಾರ್ವಿುಕ ಕಾನೂನಿನ ಅಡ್ಡಗೋಡೆ ಒಡ್ಡುತ್ತಿರುವ ಪ್ರಸಂಗಗಳು ನಿಜಕ್ಕೂ ಆಘಾತಕಾರಿ. ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗುವುದಷ್ಟೇ ಅಲ್ಲದೆ ಅವರನ್ನು ಗರ್ಭವತಿಯಾಗಿಸಿ ನಂತರ ಮುಸ್ಲಿಂ ಧಾರ್ವಿುಕ ಕಾನೂನಿನ ಪ್ರಕಾರ ಅಂತಹ ಅಪ್ರಾಪ್ತ ಹುಡುಗಿಯನ್ನು ವಿವಾಹವಾಗಿರುವುದರಿಂದ ಪೊಕ್ಸೊ ಕಾನೂನು ಅನ್ವಯವಾಗುವುದಿಲ್ಲ ಎಂಬ ವಿತಂಡವಾದ ಮಾಡುವ ಧೂರ್ತರಿದ್ದಾರೆಂದರೆ ಅಚ್ಚರಿಪಡಬೇಕಾದ್ದಿಲ್ಲ.
ಖಲೇದುರ್ ರಹಮಾನ್ ಎಂಬ ಕೇರಳದ ವಯಸ್ಕನೊಬ್ಬ 16 ವರ್ಷಕ್ಕೂ ಕಡಿಮೆ ವಯಸ್ಸಿನ ಪೋರಿಯೋರ್ವಳನ್ನು ಬಂಗಾಳದಿಂದ ಅಪಹರಿಸಿಕೊಂಡು ಬಂದು ಲೈಂಗಿಕ ದೌರ್ಜನ್ಯವೆಸಗಿದ್ದ. ಸಾಲದೇನೋ ಎಂಬಂತೆ ಆ ಬಾಲಕಿಯನ್ನು ಗರ್ಭವತಿಯಾಗಿಸಿದ್ದ. ಅಂತಹ ಗರ್ಭಿಣಿ ಬಾಲಕಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಾಗ ಅವಳ ಆಧಾರ್ ಕಾರ್ಡ್​ನಲ್ಲಿ ನಮೂದಿಸಿರುವ ಜನ್ಮದಿನಾಂಕವನ್ನು ಪರಿಶೀಲಿಸಲಾಗಿ ಹದಿನಾರೂ ತುಂಬಿರದ ಬಾಲಕಿಯವಳು ಎಂಬುದು ಗೋಚರವಾಯಿತು. ಆಸ್ಪತ್ರೆಯವರು ಪೊಲೀಸರಿಗೆ ತಿಳಿಸಿದ ನಂತರವೇ ಈ ದುಷ್ಕೃತ್ಯ ಬೆಳಕಿಗೆ ಬಂದಿದ್ದು. ಪೊಲೀಸರು ಆಪಾದಿತನನ್ನು ಬಂಧಿಸಿ ವಿಚಾರಣೆ ಕೈಗೊಂಡಾಗ ಆತ ಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದ. ಪೊಕ್ಸೊ ಕಾಯ್ದೆಯಡಿ ಮಕ್ಕಳ ಮೇಲಿನ ದೌರ್ಜನ್ಯ ಅತ್ಯಂತ ಅಮಾನವೀಯ ಕೃತ್ಯವಾಗಿರುವುದರಿಂದ ಸುಲಭವಾಗಿ ಜಾಮೀನು ಸಿಗುವುದಿಲ್ಲ. ಮೇಲೆ ಹೇಳಿದಂತೆ ಸದುದ್ದೇಶಪೂರಿತ ಪೊಕ್ಸೊ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಈ ಭೂಪ ಮಂಡಿಸಿದ ವಾದವೇನೆಂದರೆ, ‘ಮುಸ್ಲಿಂ ಕಾನೂನಿನಡಿ 15 ವರ್ಷಕ್ಕೇ ಒಬ್ಬ ವ್ಯಕ್ತಿ ವಿವಾಹಯೋಗ್ಯ ವಯಸ್ಕನಾಗಿರುತ್ತಾನೆ. ಹಾಗಾಗಿ ಈ ಹುಡುಗಿಯನ್ನು ನಾನು ಮುಸ್ಲಿಂ ಕಾನೂನಿನಡಿ ಮದುವೆಯಾಗಿದ್ದೇನೆ. ತನ್ನ ಸ್ವಂತ ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಯಾವುದೇ ರೀತಿಯಿಂದ ಅಪರಾಧವಾಗುವುದಿಲ್ಲ’ ಎಂದು. ಜಾಮೀನು ಅರ್ಜಿ ವಿಚಾರಣೆ ಕೇರಳ ಹೈಕೋರ್ಟಿನಲ್ಲಿ ನಡೆಯಿತು. ಅಪರಾಧಿಯ ಪೊಳ್ಳು ಸಮರ್ಥನೆಯನ್ನು ತಿರಸ್ಕರಿಸಿದ ನ್ಯಾಯಾಲಯ ಜಾಮೀನು ಕೊಟ್ಟು ಅಪರಾಧಿಯನ್ನು ಬಿಡುಗಡೆಗೊಳಿಸಲು ನಿರಾಕರಿಸಿತು. ಕೇರಳ ಹೈಕೋರ್ಟ್ ಈ ನಿಲುವನ್ನು ತೆಗೆದುಕೊಂಡಿದ್ದರೆ, ಕೆಲವು ಪ್ರಕರಣಗಳಲ್ಲಿ ಕರ್ನಾಟಕ ದೆಹಲಿ ಹಾಗೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ಗಳು ಇದಕ್ಕೆ ವ್ಯತಿರಿಕ್ತವಾದ ನಿಲುವು ತೆಗೆದುಕೊಂಡಿದ್ದವು. ಮುಸ್ಲಿಂ ಧಾರ್ವಿುಕ ಕಾನೂನಿನಂತೆ ಅಪ್ರಾಪ್ತ ಬಾಲಕಿಯೊಡನೆ ವಿವಾಹವಾಗಿದೆ ಎನ್ನುವ ಸಮರ್ಥನೆಯನ್ನು ಒಪ್ಪಿಕೊಂಡು ಪೊಕ್ಸೊ ಅಪರಾಧದಲ್ಲಿ ಜಾಮೀನು ಕೊಡಲಾಗಿತ್ತು ಹಾಗೂ ಒಂದು ಪ್ರಕರಣವನ್ನು ರದ್ದು ಕೂಡ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಇತ್ಯರ್ಥವಾದ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್ ಸಹ ಪೊಕ್ಸೊ ಕಾಯ್ದೆಯಿರುವಾಗ ಮುಸ್ಲಿಂ ಕಾನೂನು ನಿಷ್ಪರಿಣಾಮಕಾರಿ ಎಂಬುದನ್ನು ಪುನರುಚ್ಚರಿಸಿದೆ.
ಇಂತಹ ವಿಚಿತ್ರ ಪ್ರಸಂಗಗಳಿಗೆ ಮೂಲ ಕಾರಣವೇನೆಂದರೆ ನಮ್ಮ ದೇಶದಲ್ಲಿ ಬೇರೆ ಬೇರೆ ಧರ್ಮದ ಪ್ರಜೆಗಳಿಗೆ ಅವರದ್ದೇ ಧಾರ್ವಿುಕ ಕಾನೂನು ವಿವಾಹ ಉತ್ತರದಾಯಿತ್ವ ಮುಂತಾದ ಖಾಸಗಿ ವಿಚಾರಗಳಲ್ಲಿ ಅನ್ವಯಿಸಿರುವುದು. ವಿವಾಹದ ವಿಷಯದಲ್ಲಿನ ಕಾನೂನು ಚೌಕಟ್ಟನ್ನು ಅವಲೋಕಿಸಿದರೆ ನಮಗೆ ಗೋಚರವಾಗುವುದು ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದವರಿಗೆ ಬೇರೆ ಬೇರೆ ಕಾನೂನುಗಳು ಅನ್ವಯವಾಗುವುದು. ಹಿಂದೂಗಳಿಗೆ ಹಿಂದೂ ವಿವಾಹ ಕಾಯ್ದೆ 1955 ಹಾಗೂ ಕ್ರಿಶ್ಚಿಯನ್ನರಿಗೆ ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯ್ದೆ 1872 ಎಂಬ ಕಾನೂನುಗಳನ್ನು ಶಾಸಕಾಂಗದ ಮೂಲಕ ರೂಪಿಸಲಾಗಿದೆ. ಮುಸ್ಲಿಮರಿಗೆ ಶರೀಯತ್ ಧಾರ್ವಿುಕ ಕಾನೂನಿನ ಅನ್ವಯಕ್ಕೆ ಅನುವು ಮಾಡಿಕೊಡಲಾಗಿದೆ. ಹಿಂದೂ ಹಾಗೂ ಕ್ರಿಶ್ಚಿಯನ್ನರು ವಿವಾಹವಾಗಬೇಕಿದ್ದರೆ ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷ ವಯಸ್ಸಾಗಿರಬೇಕು. ಬಾಲ್ಯವಿವಾಹದ ಪಿಡುಗನ್ನು ತೊಲಗಿಸಲು ಮೊದಲ ಕಾನೂನು ರೂಪಿಸಿದ್ದು 1929ರಲ್ಲಿ. ಆ ಕಾನೂನಿನ ರೂವಾರಿಯಾದ ಹರಿಬಿಲಾಸ್ ಶಾರದಾ ಅವರ ಗೌರವಾರ್ಥವಾಗಿ ಶಾರದಾ ಕಾಯ್ದೆ ಎಂದೇ ಪ್ರಸಿದ್ಧವಾಗಿತ್ತು.1978 ಶಾರದಾ ಕಾಯ್ದೆಯ ಪರಿಷ್ಕರಣೆಯಾಗಿ ಈಗ ಜಾರಿಯಲ್ಲಿರುವ ವಿವಾಹ ಯೋಗ್ಯ ವಯಸ್ಸನ್ನು ಅಳವಡಿಸಿಕೊಳ್ಳಲಾಯಿತು. ಅದರಂತೆಯೇ ಹಿಂದೂ ಹಾಗೂ ಕ್ರಿಶ್ಚಿಯನ್ ವಿವಾಹ ಕಾಯ್ದೆಗಳಲ್ಲೂ ಪರಿಷ್ಕರಣೆ ಮಾಡಲಾಯಿತು. 2006ರಲ್ಲಿ ಬಾಲ್ಯವಿವಾಹವನ್ನು ಆಕ್ರಮವೆಂದು ಘೊಷಿಸಲು ಹೊಸ ಕಾಯ್ದೆಯೊಂದನ್ನು ಅಳವಡಿಸಿಕೊಂಡು ಶಾರದಾ ಕಾಯ್ದೆಯನ್ನು ರದ್ದುಗೊಳಿಸಲಾಯಿತು. ಇಂತಹ ಕಾಯ್ದೆಗಳೆಲ್ಲವೂ ಬಾಲ್ಯವಿವಾಹಗಳನ್ನು ಏರ್ಪಡಿಸುವುದನ್ನು ಹಾಗೂ ಉತ್ತೇಜಿಸುವುದನ್ನು ದಂಡಾರ್ಹ ಅಪರಾಧವನ್ನಾಗಿ ಘೊಷಿಸಿವೆ. ಆದರೆ, ಮುಸ್ಲಿಂ ಶರೀಯತ್ ಕಾನೂನಿನ ಪ್ರಕಾರ ವಿವಾಹಕ್ಕೆ ಯಾವುದೇ ನಿಗದಿತ ವಯಸ್ಸಿಲ್ಲ. ಪ್ರಾಪ್ತನಾದ (puberty) ವ್ಯಕ್ತಿ ವಿವಾಹಯೋಗ್ಯವೆಂಬುದು ಶರೀಯತ್ ಕಾನೂನಿನ ನಿಯಮ. ಗಂಡಾಗಲೀ ಹೆಣ್ಣಾಗಲೀ 15 ವರ್ಷಕ್ಕೆ ಪ್ರಾಪ್ತರಾಗಿ ವಿವಾಹಯೋಗ್ಯರಾಗಿರುತ್ತಾರೆಂದು ಮುಸ್ಲಿಂ ಧಾರ್ವಿುಕ ಕಾನೂನು ಭಾವಿಸುತ್ತದೆ. ಇಂತಹ ನಿಯಮದ ದುರುಪಯೋಗಕ್ಕೆ ಅವಕಾಶ ಹೇರಳವಾಗಿರುವುದು ನಮ್ಮ ಮುಂದಿರುವ ನಿದರ್ಶನಗಳಿಂದ ಜಾಹೀರಾಗಿದೆ. ಎಲ್ಲಾ ಧರ್ಮದ ಪ್ರಜೆಗಳಿಗೂ ಸಮಾನವಾಗಿ ಅನ್ವಯವಾಗುವ ವಿವಾಹದ ಕಾನೂನು ರೂಪಿಸಬೇಕೆಂಬ ದನಿ ಇತ್ತೀಚೆಗೆ ಬಲವಾಗಿದೆ. ರಾಷ್ಟೀಯ ಮಹಿಳಾ ಆಯೋಗವು ಮುಸ್ಲಿಂ ಕಾನೂನಿನ ಈ ಅಂಶ ಅಸಾಂವಿಧಾನಿಕವೆಂದು ಘೋಷಿಸಬೇಕೆಂದು ಕೋರಿ ಹಾಗೂ ಎಲ್ಲ ಪ್ರಜೆಗಳಿಗೂ ಸಮಾನವಾಗಿ ಒಂದೇ ವಿವಾಹಯೋಗ್ಯ ವಯಸ್ಸು ಜಾರಿಯಾಗಬೇಕೆಂಬ ಬೇಡಿಕೆಯೊಂದಿಗೆ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ. ಕ್ರಿಶ್ಚಿಯನ್ನರ ವಿಚ್ಛೇದನಾ ಕಾಯ್ದೆಯಡಿ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆಯಲು ವಿವಾಹವಾದ ನಂತರ ಒಂದು ವರ್ಷ ದಂಪತಿಗಳು ಬೇರ್ಪಟ್ಟಿರಬೇಕು. ಆ ನಿಯಮ ಅಸಾಂವಿಧಾನಿಕವೆಂದು ಘೊಷಿಸುವಾಗ ಕೇರಳ ಹೈಕೋರ್ಟ್, ವಿವಾಹದ ಬಗ್ಗೆ ಸಮಾನ ಸಂಹಿತೆಯ ತುರ್ತು ಅಗತ್ಯವಿದೆಯೆಂಬುದನ್ನು ಒತ್ತಿಹೇಳಿದೆ. ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವ ಬಗ್ಗೆ ಮಸೂದೆ ರಾಜ್ಯಸಭೆಯಲ್ಲಿ ಇತ್ತೀಚೆಗೆ ಮಂಡಿಸಲಾಗಿದೆ. ಉತ್ತರಾಖಂಡ ಹೈಕೋರ್ಟ್​ನಲ್ಲಿ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಪ್ರಕರಣವೊಂದು ಸಲ್ಲಿಸಲಾಗಿದೆ. ವಿಚ್ಛೇದನದ ವಿಷಯದಲ್ಲಿ ಶರೀಯತ್ ಕಾನೂನಿನ ಅಂಶವೊಂದು ಅಸಿಂಧುವೆಂದು ಸುಪ್ರೀಂ ಕೋರ್ಟ್ ಈಗಾಗಲೇ ಘೊಷಿಸಿದೆ. ತಲಾಕ್-ಏ-ಬಿದ್ದತ್ ಅಥವಾ ತ್ರಿವಳಿ ತಲಾಕ್ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಅಸಂವಿಧಾನಿಕ ಎಂದು ಶಾಯಿರಾ ಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ಘೊಷಿಸಿದೆ. ಮುಸ್ಲಿಂ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ನಿಖಾ ಹಲಾಲಾ ಎಂಬ ನಿಯಮ ಹಾಗೂ ಬಹುಪತ್ನಿತ್ವಕ್ಕೆ ಅವಕಾಶ ಕೊಡುವ ಶರೀಯತ್ ನಿಯಮಗಳು ಅಸಿಂಧುವೆಂಬ ಘೊಷಣೆ ಕೇಳಿ ಸುಪ್ರೀಂ ಕೋರ್ಟ್​ನಲ್ಲಿ ಈಗಾಗಲೇ ಪ್ರಕರಣಗಳು ದಾಖಲಾಗಿ ಅವುಗಳ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ಒಪ್ಪಿಸಲಾಗಿದೆ.
ಒಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆಯ ಅವಶ್ಯಕತೆ ಎದ್ದುಕಾಣುತ್ತಿದ್ದರೂ ಇನ್ನೂ ಜಾರಿಯಾಗದಿರುವುದು ದುರ್ದೈವವೇ ಸರಿ. ಸಂವಿಧಾನದ ಅನುಚ್ಛೇದ 44 ರಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕೆಂಬ ಕಟ್ಟಪ್ಪಣೆಯಿದ್ದಾಗ್ಯೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲೂ ಅದು ಜಾರಿಯಾಗಿಲ್ಲವೆಂಬುದು ವಿಷಾದನೀಯ. he life of the law has not been logic but experience (ಕಾನೂನಿನ ಜೀವನವು ತರ್ಕವಲ್ಲ; ಅನುಭವವಾಗಿದೆ) ಎಂಬುದು ಅಮೆರಿಕಾ ಸುಪ್ರೀಂ ಕೋರ್ಟಿನ ಆಲಿವರ್ ವೆಂಡೆಲ್ ಹೋಮ್ಸ್ ಅವರ ಪ್ರಸಿದ್ಧ ಹೇಳಿಕೆ. ಇದೇ ನಿಟ್ಟಿನಲ್ಲಿ ಜಗತ್ತಿಗೇ ಮಾರ್ಗದರ್ಶಕವಾದ ಬಸವಣ್ಣನವರ ಅನುಭವ ಮಂಟಪದ ತವರಾದ ಕನ್ನಡನಾಡಿನಿಂದಲೇ ನಮ್ಮ ಅನುಭವಾನುಸಾರ ಈ ಬಗ್ಗೆ ಜನಾಭಿಪ್ರಾಯ ಮೊದಲುಗೊಳ್ಳಲಿ.
(ಲೇಖಕರು ಸುಪ್ರಿಂ ಕೋರ್ಟ್ ವಕೀಲರು)
ಹಳೇ ಪಿಂಚಣಿ ಪದ್ಧತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ; ಚುನಾವಣಾ ಪ್ರಣಾಳಿಕೆಯಲ್ಲಿ ಒಪಿಎಸ್​​ ಭರವಸೆಗೆ ಒತ್ತಾಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
