ನವದೆಹಲಿ:ವಿಶ್ವದೆಲ್ಲ್ಲೆಡೆ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಮುದಾಯದೊಳಗೆ ಕಣ್ಗಾವಲು ಮತ್ತು ಬೂಸ್ಟರ್ ಡೋಸ್ ವ್ಯಾಪ್ತಿಯನ್ನು ಹೆಚ್ಚಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.
ಸಂಸತ್ತಿನ ಉಭಯ ಸದನಗಳಿಗೆ ಕರೊನಾ ನಿಗ್ರಹಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಹೇಳಿಕೆ ನೀಡಿರುವ ಮಾಂಡವೀಯ, ದೇಶದಲ್ಲಿ ಯಾವುದೇ ಹೊಸ ರೂಪಾಂತರದ ಪ್ರವೇಶ ಕಡಿಮೆ ಮಾಡಲು ವಿಮಾನ ನಿಲ್ದಾಣಗಳಿಗೆ ಆಗಮಿಸುವ ಶೇ. 2ರಷ್ಟು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ರ್ಯಾಂಡಮ್ ಟೆಸ್ಟ್​ಗೆ ಒಳಪಡಿಸಲು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ರಾಜ್ಯಗಳಿಗೆ ಸೂಚನೆ: ಮುಂಬರುವ ಹಬ್ಬಗಳು ಮತ್ತು ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು,ಕೈಗಳು ಮತ್ತು ಉಸಿರಾಟದ ನೈರ್ಮಲ್ಯ ಅಭ್ಯಾಸಗಳನ್ನು ಒಳಗೊಂಡಿರುವ ಕೋವಿಡ್ ನಿಯಂತ್ರಣ ಕ್ರಮ ಅನುಸರಿಸುತ್ತಿರುವುದನ್ನು ರಾಜ್ಯಗಳು ಖಾತ್ರಿಪಡಿಸಿಕೊಳ್ಳಬೇಕು. ಯಾವುದೇ ಹೊಸ ರೂಪಾಂತರಗಳನ್ನು ಸಕಾಲಿಕವಾಗಿ ಪತ್ತೆ ಹಚ್ಚಲು ಎಲ್ಲ ಪಾಸಿಟಿವ್ ಪ್ರಕರಣಗಳ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಹೆಚ್ಚಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಮಾಂಡವೀಯ ಹೇಳಿದರು.
ಕೋವಿಡ್ -19 ನಿರ್ವಹಣೆಗಾಗಿ ‘ಟೆಸ್ಟ್-ಟ್ರಾ್ಯಕ್-ಟ್ರೀಟ್-ವ್ಯಾಕ್ಸಿನೇಷನ್ ಮತ್ತು ಕೋವಿಡ್ ಸೂಕ್ತ ನಡವಳಿಕೆಯ ಅನುಸರಣೆ’ ಕಾರ್ಯತಂತ್ರದ ತತ್ವಗಳ ಮೇಲೆ ಗಮನ ಕೇಂದ್ರೀಕರಿಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.
ಭಾರತದಲ್ಲಿ ಕಡಿಮೆ ಕೇಸ್: ಪ್ರಪಂಚದಾದ್ಯಂತ ಕೋವಿಡ್ ಪ್ರಕರಣಗಳ ಹೆಚ್ಚುತ್ತಿರುವ ಪಥವನ್ನು ನಾವು ನೋಡಿದ್ದೇವೆ. ಮತ್ತೊಂದೆಡೆ ಭಾರತದಲ್ಲಿ ಕಳೆದ ಒಂದು ವರ್ಷದಿಂದ ಪ್ರಕರಣಗಳ ನಿರಂತರ ಇಳಿಕೆಯ ಪಥ ತೋರಿಸಿದೆ. ವಿಶ್ವದಾದ್ಯಂತ ಪ್ರತಿದಿನ 5.87 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿದ್ದರೆ, ಭಾರತದಲ್ಲಿ ಪ್ರತಿದಿನ ಸರಾಸರಿ 153 ಹೊಸ ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಿದರು.
ಏರ್ ಸುವಿಧಾ ಕಡ್ಡಾಯಕ್ಕೆ ಪರಿಶೀಲನೆ: ಚೀನಾ ಮತ್ತು ಇತರೆ ದೇಶಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪ್ರಯಾಣಕ್ಕೆ 72 ಗಂಟೆಗಳ ಮೊದಲು ನಡೆಸಿದ ಆರ್​ಟಿ-ಪಿಸಿಆರ್ ಪರೀಕ್ಷೆ ವಿವರಗಳು ಮತ್ತು ಸಂಪೂರ್ಣ ಲಸಿಕೆ ಪುರಾವೆಗಳನ್ನು ಒಳಗೊಂಡ ‘ಏರ್ ಸುವಿಧಾ ಫಾರಂ’ ಮರುಪರಿಚಯಿಸಲು ಪರಿಶೀಲನೆ ನಡೆಸುತ್ತಿದೆ. ಕೆಲವು ವಾರಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಈ ಬಗ್ಗೆ ಆರೋಗ್ಯ ಸಚಿವಾಲಯ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಚೀನಾದಿಂದ ಬರುವ ವಿಮಾನಗಳ ನಿಷೇಧ ಸದ್ಯಕ್ಕಿಲ್ಲ
ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿರುವ ದೇಶಗಳಿಂದ ಒಳಬರುವ ವಿಮಾನಗಳನ್ನು ತಡೆಯುವ ಕುರಿತು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಚೀನಾದಿಂದ ಬರುವ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳನ್ನು ತಕ್ಷಣವೇ ನಿಲ್ಲಿಸಬೇಕೆಂಬ ವಿರೋಧಪಕ್ಷಗಳ ಬೇಡಿಕೆ ಮಧ್ಯೆ ಕೇಂದ್ರ ಈ ಸ್ಪಷ್ಟನೆ ನೀಡಿದೆ. ‘ನಾವು ಚೀನಾದಿಂದ ಭಾರತಕ್ಕೆ ಅಥವಾ ಭಾರತದಿಂದ ಚೀನಾಕ್ಕೆ ಯಾವುದೇ ನೇರ ವಿಮಾನಗಳನ್ನು ಹೊಂದಿಲ್ಲ. ಆದರೆ ಚೀನಾದ ಮೂಲಕ ಭಾರತಕ್ಕೆ ಆಗಮಿಸುವ ಸಂಪರ್ಕ ವಿಮಾನಗಳನ್ನು ನಿಲ್ಲಿಸಲು ಯಾವುದೇ ಆದೇಶಗಳನ್ನು ನೀಡಲಾಗಿಲ್ಲ. ಇಂಥ ಯಾವುದೇ ನಿರ್ಧಾರವನ್ನು ಜಾರಿಗೊಳಿಸುವ ಅಧಿಕಾರ ನಾಗರಿಕ ವಿಮಾನಯಾನ ಸಚಿವಾಲಯಕ್ಕಿದೆ. ಆದಾಗ್ಯೂ ಅಂತಿಮ ನಿರ್ಧಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.
ವಿಶ್ವ ಆರೋಗ್ಯ ಸಂಸ್ಥೆ ಕಳವಳ
ಚೀನಾದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೂಸ್ ಅಧಾನಮ್ ಫೆಬ್ರೆಯೆಸಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಜನರಿಗೆ ತ್ವರಿತವಾಗಿ ಲಸಿಕೆ ನೀಡುವಂತೆ ಚೀನಾ ಆಡಳಿತಕ್ಕೆ ಸೂಚಿಸಿದ್ದಾರೆ. ರೋಗದ ತೀವ್ರತೆ, ಆಸ್ಪತ್ರೆಯ ದಾಖಲಾತಿಗಳು ಮತ್ತು ತೀವ್ರ ನಿಗಾ ಅಗತ್ಯತೆಗಳ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಚೀನಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ದೇಶಾದ್ಯಂತ ಹೆಚ್ಚಿನ ಅಪಾಯದಲ್ಲಿರುವ ಜನರಿಗೆ ಲಸಿಕೆ ಹಾಕುವ ಪ್ರಯತ್ನಗಳು ಜಾರಿಯಲ್ಲಿರಬೇಕು. ಚೀನಾಗೆ ಎಲ್ಲ ರೀತಿಯಿಂದಲೂ ಸಹಾಯ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಸಿದ್ಧವಾಗಿದೆ. ದೇಶದ ಆರೋಗ್ಯ ವ್ಯವಸ್ಥೆಯನ್ನು ರಕ್ಷಿಸಲು ನಮ್ಮ ಬೆಂಬಲವನ್ನು ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ
ಚೀನಾ, ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಕರೊನಾ ಪ್ರಕರಣಗಳು ಮತ್ತೆ ಉಲ್ಭಣಿಸಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ಸಾರ್ವಜನಿಕರಿಗೆ ಮನವಿ ಮಾಡಿದೆ. ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸಾಬೂನು, ನೀರು ಅಥವಾ ಸ್ಯಾನಿಟೈಸರ್​ನಿಂದ ನಿಯಮಿತವಾಗಿ ಕೈ ತೊಳೆಯುವುದು ಸೇರಿ ಹಲವಾರು ಅಗತ್ಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ವಿವಾಹ ಸಮಾರಂಭಗಳು, ರಾಜಕೀಯ ಅಥವಾ ಸಾಮಾಜಿಕ ಸಭೆಗಳಲ್ಲಿ ಭಾಗಿಯಾಗದಂತೆ, ವಿದೇಶಿ ಪ್ರವಾಸ ಕೈಗೊಳ್ಳದಂತೆ ಸಲಹೆ ನೀಡಿದೆ. ಜ್ವರ, ಗಂಟಲು ನೋವು, ಕೆಮ್ಮು, ನೆಗಡಿಯಂತಹ ಯಾವುದೇ ರೋಗ ಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂರ್ಪಸುವಂತೆ ಹಾಗೂ ಮುಂಜಾಗ್ರತಾ ಡೋಸ್ ಸೇರಿದಂತೆ ಕೋವಿಡ್ ಲಸಿಕೆಯನ್ನು ತ್ವರಿತವಾಗಿ ತೆಗೆದುಕೊಳ್ಳುವಂತೆ ಜನರಿಗೆ ಸೂಚಿಸಿದೆ.
ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ,ಫ್ರಾನ್ಸ್ ಮತ್ತು ಬ್ರೆಜಿಲ್​ನಂತಹ ಪ್ರಮುಖ ದೇಶಗಳಲ್ಲಿ 5.37 ಹೊಸ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ 145 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ನಾಲ್ಕು ಕೇಸ್​ಗಳು ಚೀನಾದ ಹೊಸ ರೂಪಾಂತರ ಬಿಎಫ್.7 ಆಗಿದೆ ಎಂದು ಐಎಂಎ ಹೇಳಿದೆ. ಸದ್ಯದ ಪರಿಸ್ಥಿತಿಯಲ್ಲಿ ಕರೊನಾ ಪರಿಸ್ಥಿತಿಯು ಆತಂಕಕಾರಿಯಾಗಿಲ್ಲ. ಹಾಗಾಗಿ ಭಯಪಡುವ ಅಗತ್ಯವಿಲ್ಲ ಎಂದು ಅದು ಹೇಳಿದೆ.
ಡೆಲ್ಟಾಕ್ಕಿಂತ ಅಪಾಯಕಾರಿಯಲ್ಲ
ಕೋವಿಡ್ ಒಮಿಕ್ರಾನ್ ಎಕ್ಸ್​ಬಿಬಿ ರೂಪಾಂತರಿಯು ಡೆಲ್ಟಾಕ್ಕಿಂತ ಐದು ಪಟ್ಟು ಅಪಾಯಕಾರಿಯೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ತಜ್ಞರು ತಳ್ಳಿ ಹಾಕಿದ್ದಾರೆ. ಭಾರತ ಸೇರಿದಂತೆ ವಿಶ್ವಾದ್ಯಂತ ಹೆಚ್ಚಿನ ವಿನಾಶ ಉಂಟು ಮಾಡಿದ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚಿನ ಮರಣ ಪ್ರಮಾಣವನ್ನು ಇದು ಹೊಂದಿದೆ. ಒಮಿಕ್ರಾನ್ ಎಕ್ಸ್​ಬಿಬಿ ಅನ್ನು ಆರ್​ಟಿ-ಪಿಸಿಆರ್ ಪರೀಕ್ಷೆ ಮೂಲಕ ಕಂಡು ಹಿಡಿಯಲು ಸಾಧ್ಯವಿಲ್ಲ.
ಅದಕ್ಕೆ ಯಾವುದೇ ವಿಶಿಷ್ಟ ಲಕ್ಷಣಗಳಿಲ್ಲ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರು ಇದಕ್ಕೆ ಸ್ಪಷ್ಟನೆ ನೀಡಿದ್ದು, ಒಮಿಕ್ರಾನ್ ಎಕ್ಸ್​ಬಿಬಿ ಸ್ವತಃ ಉಪತಳಿಯಾಗಿದ್ದು, ಡೆಲ್ಟಾಕ್ಕಿಂತ ಕಡಿಮೆ ಮಾರಕವಾಗಿದೆ. ಎಕ್ಸ್​ಬಿಬಿ, ಬಿಎ.2.10.1 ಮತ್ತು ಬಿಎ.2.27 ಉಪತಳಿಗಳ ಮರುಸಂಯೋಜಕವಾಗಿದೆ. ಇದೇನು ಹೊಸ ರೂಪಾಂತರವಲ್ಲ. ಈ ವರ್ಷ ಆಗಸ್ಟ್ 13ರಂದು ಮೊದಲ ಬಾರಿಗೆ ವರದಿಯಾಗಿತ್ತು ಎಂದು ಹೇಳಿದ್ದಾರೆ.
ಚೀನಾ ಎಡವಿದ್ದು ಎಲ್ಲಿ?
ಕರೊನಾ ಸಾಂಕ್ರಾಮಿಕತೆ ಶುರುವಾದಾಗಿನಿಂದ ಅದರ ನಿಯಂತ್ರಣಕ್ಕೆ ಚೀನಾ ಕೈಗೊಂಡ ಕ್ರಮಗಳು ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ. ಜತೆಗೆ ಜನರ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ. ಚೀನಾದ ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ. ಅಂತಹುದರಲ್ಲಿ ಚೀನಾವು ದೇಶೀಯವಾಗಿ ತಯಾರಿಸಿದ ಸಿನೊವಾಕ್ ಮತ್ತು ಸಿನೋಫಾಮ್ರ್ ಲಸಿಕೆಯನ್ನು ಜನರಿಗೆ ನೀಡಿದೆ. ಆದರೆ ಈ ಲಸಿಕೆಗಳು ಪರಿಣಾಮಕಾರಿಯಾಗಿಲ್ಲ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಅದರ ಜತೆಗೆ ವಯಸ್ಸಾದವರಲ್ಲಿ ಹೆಚ್ಚಿನ ಮಂದಿ ಲಸಿಕೆಯನ್ನೇ ಹಾಕಿಸಿಕೊಂಡಿಲ್ಲ. ಜಗತ್ತಿನ ಇತರ ದೇಶಗಳು ಸೋಂಕಿನ ವಿರುದ್ಧ ಹೋರಾಟ, ಲಸಿಕೆ, ಚಿಕಿತ್ಸೆಯಂತಹ ಅಗತ್ಯ ಕ್ರಮಗಳ ಅನುಷ್ಠಾನದಲ್ಲಿ ನಿರತರಾಗಿದ್ದರೆ, ಚೀನಾ ಸರ್ಕಾರವು ಕಡಿಮೆ ಲಸಿಕೆ, ಬೂಸ್ಟರ್ ಡೋಸ್ ನೀಡುವ ಪ್ರಮಾಣದಲ್ಲಿ ಕುಸಿತ , ಜೀರೊ ಕೋವಿಡ್ ನೀತಿಯನ್ನು ತೆಗೆದು ಹಾಕಿದ್ದೇ ಪ್ರಕರಣ ಹೆಚ್ಚಾಗಲು ಕಾರಣ ಎನ್ನಲಾಗಿದೆ.
ಶಾಂಘೈನಲ್ಲಿ ಕರೊನಾ
ಚೀನಾದ ಶ್ರೀಮಂತ ನಗರದಲ್ಲಿ ಒಂದಾದ ಶಾಂಘೈನಲ್ಲಿ ಕರೊನಾ ಹಾವಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಆಸ್ಪತ್ರೆಗಳಲ್ಲಿ ವೈದ್ಯರು ಸೋಂಕಿತರನ್ನು ನಿಭಾಯಿಸಲು ಹೆಣಗಾಡುತ್ತಿದ್ದರೆ, ಔಷಧಾಲಯಗಳು ಶೀತ ಮತ್ತು ಜ್ವರದ ಔಷಧವು ಖಾಲಿಯಾಗಿದೆ ಎಂದು ಗ್ರಾಹಕರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸುತ್ತಿವೆ. ಶಾಲೆಗಳು ಮುಚ್ಚಲ್ಪಟ್ಟಿವೆ. ಸಾರ್ವಜನಿಕ ಸಾರಿಗೆ ಬಳಕೆಯು ಕುಸಿಯುತ್ತಿದೆ. ಸರ್ಕಾರ ಕೋವಿಡ್ ನಿಯಮಗಳನ್ನು ಸಡಿಲಿಸಿದ ನಂತರ ಜನರು ಆಸ್ಪತ್ರೆಗೆ ಪ್ರವೇಶಿಸುವ ಮುನ್ನ ನೆಗೆಟಿವ್ ಪಿಸಿಆರ್ ಪರೀಕ್ಷೆಯ ಫಲಿತಾಂಶ ತೋರಿಸುವುದನ್ನು ನಿಲ್ಲಿಸಿದರು. ಇದು ಕೂಡ ಸೋಂಕು ಹೆಚ್ಚಳಕ್ಕೆ ಕಾರಣವಾಯಿತು ಎಂದು ಆರೋಗ್ಯ ಸಿಬ್ಬಂದಿ ಹೇಳಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರನ್ನು ಸೋಂಕಿತರ ಚಿಕಿತ್ಸೆಗೆ ನಿಯೋಜಿಸಲಾಗಿದೆ. ಆಸ್ಪತ್ರೆಗೆ ಸೋಂಕಿತರು ಪ್ರವಾಹೋಪಾದಿಯಲ್ಲಿ ಬರುತ್ತಿರುವುದರಿಂದ ಈಗಾಗಲೇ ಹೆಚ್ಚಿನ ಸಂಖ್ಯೆಯ ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 6 =
Remember me
