ನವದೆಹಲಿ:ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಬಿಜೆಪಿ ಗೆಲುವಿನ ಸಂಭ್ರಮದ ನಡುವೆ ಕೇಂದ ಸಚಿವರಾದ ಪ್ರಲ್ಹಾದ ಜೋಶಿ ಮತ್ತು ಶೋಭಾ ಕರಂದ್ಲಾಜೆ ಅವರಲ್ಲೂ ಈ ಗೆಲುವು ಹೊಸ ಹುರುಪು ತುಂಬಿದೆ. ಜೋಶಿ ಅವರಿಗೆ ಉತ್ತರಾಖಂಡ ಚುನಾವಣೆಯಲ್ಲಿ ಪಕ್ಷದ ಸಂಪೂರ್ಣ ಹೊಣೆ ನೀಡಲಾಗಿತ್ತು. ಶೋಭಾ ಕರಂದ್ಲಾಜೆ ಉತ್ತರ ಪ್ರದೇಶದ ಅವಧ್ ಪ್ರದೇಶದ 82 ಕ್ಷೇತ್ರಗಳ ಮೇಲುಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇಬ್ಬರೂ ನಾಲ್ಕೈದು ತಿಂಗಳಿಂದ ರಾಜ್ಯಗಳಿಗೆ ನಿರಂತರ ಪ್ರವಾಸ ಮಾಡುತ್ತಾ, ಸಭೆಗಳನ್ನು ನಡೆಸಿ ಕಾರ್ಯತಂತ್ರ ರೂಪಿಸುವುದರಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ.
ಪ್ರತಿ 5 ವರ್ಷಕ್ಕೊಮ್ಮೆ ಉತ್ತರಾಖಂಡದಲ್ಲಿ ಸರ್ಕಾರ ಬದಲಾದ ಇತಿಹಾಸವಿದೆ. ಹೀಗಾಗಿ, ಸಹಜವಾಗಿಯೇ ಜೋಶಿ ಅವರಿಗೆ ದೊಡ್ಡ ಸವಾಲುಗಳಿದ್ದವು. 5 ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳು ನೇಮಕಗೊಂಡಿದ್ದರಿಂದ ಜನರಲ್ಲೂ ಗೊಂದಲ ನಿರ್ವಣವಾಗಿತ್ತಲ್ಲದೆ, ಆಂತರಿಕ ಗುಂಪುಗಾರಿಕೆಯಿಂದ ಪಕ್ಷದಲ್ಲೂ ಬಿರುಕು ಮೂಡಿತ್ತು. ರಾಜ್ಯದ ಚುನಾವಣಾ ಉಸ್ತುವಾರಿಯಾದ ಕೂಡಲೇ ಜೋಶಿ ಎಲ್ಲ ನಾಯಕರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿ, ದಿಲ್ಲಿ ನಾಯಕರ ಸಂದೇಶಗಳನ್ನು ಸ್ಪಷ್ಟವಾಗಿ ರಾಜ್ಯ ನಾಯಕರಿಗೆ ತಿಳಿಸಿದರು ಮತ್ತು ಚುನಾವಣೆಯಲ್ಲಿ ಒಗ್ಗಟ್ಟು ಬೇರ್ಪಡದಂತೆಯೂ ಎಚ್ಚರಿಕೆ ವಹಿಸಿದರು. ಪಕ್ಷದ ಪದಾಧಿಕಾರಿ, ನಾಯಕರ ಅಳಲನ್ನು ತಾಳ್ಮೆಯಿಂದ ಕೇಳಿ ಪರಿಹಾರ ರೂಪಿಸಿದ್ದರಿಂದ ಕಾರ್ಯಕರ್ತರ ಮಟ್ಟದಲ್ಲಿ ಗೊಂದಲಗಳು ಕಡಿಮೆಯಾದವು ಎಂದು ಬಿಜೆಪಿ ಮೂಲಗಳು ಅಭಿಪ್ರಾಯಪಟ್ಟಿವೆ.
‘ಉತ್ತರಾಖಂಡ ಗೆಲುವಿಗೆ ಮೋದಿ ಜನಪ್ರಿಯತೆಯೇ ಪ್ರಮುಖ ಕಾರಣ’ ಎನ್ನುವ ಜೋಶಿ, ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯ, ರಾಜ್ಯವನ್ನು ಪ್ರವಾಸೋದ್ಯಮ ತಾಣವನ್ನಾಗಿ ಬದಲಿಸುತ್ತಿರುವುದು, ರಸ್ತೆಗಳ ಅಭಿವೃದ್ಧಿ, ಕರೊನಾ ಸಂಕಷ್ಟದಲ್ಲಿ ರೇಷನ್ ವಿತರಣೆ ಸೇರಿ ಹಲವು ಕೆಲಸಗಳನ್ನು ಮೆಚ್ಚಿ ಮತಹಾಕಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆ ಘೊಷಣೆಯಾಗುತ್ತಿದ್ದಂತೆಯೇ 1,10,000 ಸಣ್ಣ ಸಣ್ಣ ಸಭೆಗಳನ್ನು ನಡೆಸಲು ತೀರ್ವನಿಸಿದ ಜೋಶಿ ಮತ್ತು ತಂಡ, ಸಭೆಗಳಲ್ಲಿ ಏನು ಮಾತನಾಡಬೇಕು ಎಂಬ ಬಗ್ಗೆ 4-5 ಸಾವಿರ ಕಾರ್ಯಕರ್ತರಿಗೆ ತರಬೇತಿಗಳನ್ನೂ ನೀಡಿತು. ಅಂತಿಮವಾಗಿ, 80000 ಸಾವಿರ ಸಭೆಗಳನ್ನು ನಡೆಸಲಾಗಿತ್ತು. ಚುನಾವಣೆ ಪ್ರಚಾರದ ದಿನ ಡೆಹರಾಡೂನ್​ನಲ್ಲಿ ‘ವಿಜಯವಾಣಿ’ ಜತೆ ಅನೌಪಚಾರಿಕವಾಗಿ ಮಾತನಾಡಿದ್ದ ಜೋಶಿ, 38-42 ಸೀಟುಗಳನ್ನು ಬಿಜೆಪಿ ಗೆಲ್ಲಲಿದೆ ಎಂದಿದ್ದರು. ಆದರೆ, ನಿರೀಕ್ಷೆಗಿಂತಲೂ ಹೆಚ್ಚು ಸೀಟುಗಳನ್ನು ಬಾಚಿಕೊಂಡಿರುವುದರಿಂದ ಜೋಶಿ ಹಿರಿಹಿರಿ ಹಿಗ್ಗಿದ್ದಾರೆ!
ಅವಧ್ ಪ್ರದೇಶ ಉಸ್ತುವಾರಿಯಾದ ಬಳಿಕ ಲಖನೌದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಶೋಭಾ ಕರಂದ್ಲಾಜೆ ನಿರಂತರ ಪ್ರಚಾರ, ಸಭೆಗಳನ್ನು ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು. ಸಂಘಟನೆ ಹಿನ್ನೆಲೆಯ ಶೋಭಾಗೆ ಚುನಾವಣೆ ನಿರ್ವಹಣೆ ಹೊಸತಲ್ಲ. ಆದರೆ, ಉತ್ತರ ಭಾರತದ ಅದೂ ಉತ್ತರ ಪ್ರದೇಶದಲ್ಲಿ ಚುನಾವಣೆ ನಿರ್ವಹಿಸಿದ್ದು ವಿಶೇಷ ಅನುಭವ ನೀಡಿದೆ. ನೂರಾರು ಸಭೆಗಳನ್ನು ನಡೆಸಿ, ಎಲ್ಲ್ಲ 82 ಕ್ಷೇತ್ರಗಳಿಗೆ ಪ್ರವಾಸ ಮಾಡಿರುವ ಅವರು, ಅಭ್ಯರ್ಥಿಗಳೊಂದಿಗೆ ಪ್ರತ್ಯೇಕ ಸಮಾಲೋಚನೆ, ಸಭೆಗಳನ್ನು ನಡೆಸಿದ್ದರು. ಅಯೋಧ್ಯೆಯಲ್ಲಿ ‘ವಿಜಯವಾಣಿ’ ಜತೆ ಮಾತನಾಡಿದ್ದ ವೇಳೆ ‘ರೈತ ಹಿಂಸಾಚಾರ ನಡೆದ ಲಖೀಂಪುರ ಜಿಲ್ಲೆಯ ನಿಘಾಸನ್ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಬಿಜೆಪಿ ಅಭ್ಯರ್ಥಿಯನ್ನು ಜನರು ನೆಚ್ಚಿದ್ದಾರೆ. ರೈತ ಹಿಂಸಾಚಾರ ಘಟನೆ ವಿಷಾದಕರ. ಆದರೆ, ಅಭ್ಯರ್ಥಿ ಬಗ್ಗೆ ಸದಭಿಪ್ರಾಯವೇ ನಮ್ಮ ಪ್ಲಸ್ ಪಾಯಿಂಟ್’ ಎಂದು ಭವಿಷ್ಯ ನುಡಿದಿದ್ದರು. ಅವರ ಮಾತು ಫಲಿತಾಂಶದಲ್ಲಿ ನಿಜವಾಗಿದೆ. ‘ಉತ್ತರ ಪ್ರದೇಶದಲ್ಲಿ ಮೋದಿ-ಯೋಗಿ ಜನಪ್ರಿಯತೆ ಹಾಗೂ ಅಭಿವೃದ್ಧಿ ಕೆಲಸಗಳೇ ಬಿಜೆಪಿಯನ್ನು ಗೆಲ್ಲಿಸಿದೆ. ಯೋಗಿ ಆಡಳಿತ ಕ್ರಮ ಮಹಿಳೆಯರಲ್ಲಿ ಸುರಕ್ಷತಾ ಭಾವ ಮೂಡಿಸಿದೆ. ನಮ್ಮ ಗೆಲುವಲ್ಲಿ ಮಹಿಳೆಯರ ಪಾತ್ರವೂ ದೊಡ್ಡದು’ ಎಂದು ಶೋಭಾ ಅಭಿಪ್ರಾಯಪಟ್ಟಿದ್ದಾರೆ.
ಬುಲ್ಡೋಜರ್ ಎದುರು ನಡೆಯದ ಆಟ; ಅಬ್ಬರಿಸಲು ಹೋಗಿ ಮಕಾಡೆ ಮಲಗಿದ ಓವೈಸಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 12 =
Remember me
