ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (ನ್ಯಾಷನಲ್ ಪೇಮೆಂಟ್ಸ್ ಕಾರ್ಪೆರೇಷನ್ ಆಫ್ ಇಂಡಿಯಾ- ಎನ್​ಪಿಸಿಐ) ಕ್ಯುಆರ್ ಕೋಡ್ ಸ್ಕಾ್ಯನ್ ಮಾಡಿ ಮೊಬೈಲ್​ಫೋನ್ ಮೂಲಕ ಹಣ ಪಾವತಿಸುವ ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್​ಫೇಸ್- ಏಕೀಕೃತ ಪಾವತಿ ವ್ಯವಸ್ಥೆ) ಬಳಸಲು ವಿದೇಶದಲ್ಲಿರುವ ಭಾರತೀಯರಿಗೆ ಅನುಮತಿ ನೀಡಿದೆ. ದೇಶೀಯ ಬ್ಯಾಂಕ್ ಖಾತೆಗಳು ಹಾಗೂ ವಿದೇಶಿ ಮೊಬೈಲ್ ಸಂಖ್ಯೆಗಳ ನಡುವೆ ಲಿಂಕ್ ಇದ್ದರೆ ಮಾತ್ರ ಯುಪಿಐ ಮೂಲಕ ಪಾವತಿ ಮಾಡಲು ಅನಿವಾಸಿ ಭಾರತೀಯರಿಗೆ (ಎನ್​ಆರ್​ಐಗಳಿಗೆ) ಅವಕಾಶ ದೊರೆಯುತ್ತದೆ. ಇಲ್ಲಿಯವರೆಗೆ ಯುಪಿಐ ಮೂಲಕ ಪಾವತಿಸಲು ಭಾರತೀಯ ಫೋನ್ ಸಂಖ್ಯೆಗಳಿಗೆ ಮಾತ್ರ ಅನುಮತಿಯಿತ್ತು. ವಿದೇಶದಲ್ಲಿರುವ ಫೋನ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಅನಿವಾಸಿ ಭಾರತೀಯರ ಬ್ಯಾಂಕ್ ಖಾತೆಗಳನ್ನು ಈ ಪಾವತಿಯಿಂದ ಹೊರಗಿಡಲಾಗಿತ್ತು. ಎನ್​ಆರ್​ಐ ಬಳಕೆಗೂ ಈ ವ್ಯವಸ್ಥೆ ವಿಸ್ತರಿಸುವ ಕುರಿತು ಜನವರಿ 10ರಂದು ಎನ್​ಪಿಸಿಐ ಸುತ್ತೋಲೆ ಹೊರಡಿಸಿತು. ಸ್ವದೇಶಿ ಪಾವತಿ ವೇದಿಕೆಯಾದ ಯುಪಿಐ ಅನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಇದು ದಾರಿ ಮಾಡಿಕೊಟ್ಟಿತು. ಮೊದಲ ಹಂತದಲ್ಲಿ, ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಹಾಂಕಾಂಗ್, ಒಮನ್, ಕತಾರ್, ಅಮೆರಿಕ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬ್ರಿಟನ್-ಹತ್ತು ದೇಶಗಳ ಫೋನ್ ಸಂಖ್ಯೆಗಳನ್ನು ಯುಪಿಐನಲ್ಲಿ ಬಳಸಲು ಅನುಮತಿಸಲಾಗಿದೆ. ಇದನ್ನು ಇತರ ರಾಷ್ಟ್ರಗಳಿಗೂ ವಿಸ್ತರಿಸಲಾಗುವುದು ಎಂದು ಎನ್​ಪಿಸಿಐ ಹೇಳಿದೆ.
ಎನ್​ಆರ್​ಐಗಳಿಗೆ ಹೇಗೆ ಪ್ರಯೋಜನಕಾರಿ?:ಅನಿವಾಸಿ ಭಾರತೀಯರಿಗೆ ಯುಪಿಐ ಬಳಸುವ ವ್ಯವಸ್ಥೆ ಏಪ್ರಿಲ್ 30 ರೊಳಗೆ ಜಾರಿಗೆ ಬರಬಹುದಾಗಿದೆ. ಇದರಿಂದ ಎನ್​ಆರ್​ಐಗಳು ಭಾರತದಲ್ಲಿ ಅಥವಾ ವಿದೇಶದಲ್ಲಿದ್ದರೂ ಯುಪಿಐ ಬಳಸಿಕೊಂಡು ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಅವರು ಭಾರತದಲ್ಲಿ ಅನಿವಾಸಿ ಬಾಹ್ಯ ಖಾತೆ ಅಥವಾ ಅನಿವಾಸಿ ಸಾಮಾನ್ಯ ಖಾತೆಯನ್ನು ಹೊಂದಿರಬೇಕು. ಇಂತಹ ಖಾತೆದಾರರು ಭಾರತಕ್ಕೆ ಭೇಟಿ ನೀಡಿದಾಗ ಇದು ಹೆಚ್ಚು ಉಪಯುಕ್ತವಾಗಿರುತ್ತದೆ. ವಿದೇಶದಲ್ಲಿರುವಾಗ ಅವರು ಭಾರತದಲ್ಲಿನ ಕುಟುಂಬಗಳಿಗೆ ಹಣ ವರ್ಗಾಯಿಸಲು ಯುಪಿಐ ಬಳಸಬಹುದು. ಅಲ್ಲದೆ, ಇಂತಹ ಪಾವತಿಗಳನ್ನು ಅನುಮತಿಸುವ ಇ-ಕಾಮರ್ಸ್ ಪೋರ್ಟಲ್​ಗಳಲ್ಲಿನ ವಹಿವಾಟಿಗೂ ಉಪಯೋಗಿಸಬಹುದು.
ಡಿಜಿಟಲ್ ಜನಪ್ರಿಯತೆ ಹೆಚ್ಚಳ:ಕಳೆದ ಡಿಸೆಂಬರ್​ನಲ್ಲಿ 12.8 ಲಕ್ಷ ಕೋಟಿ ರೂ. ಮೊತ್ತದ ವಹಿವಾಟುಗಳನ್ನು ಯುಪಿಐ ಮಾಡಿದೆ. 2016ರಲ್ಲಿ ನಿಧಾನಗತಿಯ ಪ್ರಾರಂಭದ ನಂತರ ಯುಪಿಐ ಪಾವತಿಗಳು ತ್ವರಿತ ಗತಿಯಲ್ಲಿ ಬೆಳೆದಿವೆ. 1.35 ಕೋಟಿಗಿಂತಲೂ ಹೆಚ್ಚು ಎನ್​ಆರ್​ಐಗಳು ಇದ್ದಾರೆ. ಭಾರತೀಯ ನಿವಾಸಿಗಳು ಯುಪಿಐ ವಹಿವಾಟಿಗೆ ಶುಲ್ಕ ಪಾವತಿಸಬೇಕಾಗಿಲ್ಲ. ಇದೇ ರೀತಿ ಎನ್​ಆರ್​ಐಗಳಿಗೂ ಹೆಚ್ಚುವರಿ ವೆಚ್ಚವಿಲ್ಲದೆ ಈ ಸೌಲಭ್ಯ ಸಿಗಲಿದೆ.
ಜಾಗತಿಕವಾಗಿ ತೆರೆದುಕೊಳ್ಳಲು ಅನುಕೂಲ:ಯುಪಿಐ ಅನ್ನು ಜಾಗತಿಕವಾಗಿ ವಿಸ್ತರಿಸಲು ಎನ್​ಪಿಸಿಐ ಪ್ರಯತ್ನಿಸುತ್ತಿದೆ. ಅನಿವಾಸಿ ಭಾರತೀಯರಿಗೆ ಈ ಸೌಲಭ್ಯ ವಿಸ್ತರಣೆ ಈ ನಿಟ್ಟಿನಲ್ಲಿನ ಒಂದು ಪ್ರಮುಖ ಹೆಜ್ಜೆಯಾಗಿದೆ. ಸದ್ಯ 10 ದೇಶಗಳಲ್ಲಿ ಈ ಸೌಲಭ್ಯ ಪ್ರಾರಂಭವಾಗಲಿದ್ದು, ಭವಿಷ್ಯದಲ್ಲಿ ಇನ್ನಷ್ಟು ದೇಶಗಳನ್ನು ಸೇರಿಸಲಾಗುವುದು ಎಂದು ತಜ್ಞರು ಹೇಳಿದ್ದಾರೆ. 2020ರಲ್ಲಿ ಎನ್​ಪಿಸಿಐ ಸ್ಥಾಪಿಸಿದ ಅಂಗಸಂಸ್ಥೆಯಾದ ಇಂಟರ್​ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ಮೂಲಕ ಇತರ ದೇಶಗಳಲ್ಲಿ ಸ್ವದೇಶಿ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ನೇಪಾಳ, ಯುಎಇ, ಫಾನ್ಸ್, ಬ್ರಿಟನ್ ಮತ್ತು ಇತರ ದೇಶಗಳಲ್ಲಿ ಯುಪಿಐ ಬಳಕೆ ಅನುಮತಿಸಲು ಪಾವತಿ ಸಿಸ್ಟಮ್ ಆಪರೇಟರ್​ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಯುಪಿಐ ಅನ್ನು ಸಿಂಗಾಪುರದ ಪೇನೋ ಜೊತೆಗೆ ಲಿಂಕ್ ಮಾಡುವ ಯೋಜನೆಯೂ ಇದೆ.
ಮತ್ತೆ ‘ಸೈಲೆಂಟ್’ ಸದ್ದು: ದೇವಾಲಯದಲ್ಲಿ ಭಕ್ತರಿಗೆ ಕೊಡುವ ಲಡ್ಡು ಪೊಟ್ಟಣಗಳ ಮೇಲೂ ರೌಡಿ ಸುನೀಲನ ಚಿತ್ರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 5 =
Remember me
