ದೃಷ್ಟಿದೋಷ ಹೊಂದಿರುವ ಮೈಸೂರಿನ ಕೆ.ಟಿ.ಮೇಘನಾ 425ನೇ ರ‌್ಯಾಂಕ್ ಪಡೆದು ದೇಶದ ಗಮನ ಸೆಳೆದಿದ್ದಾರೆ. ಕಠಿಣವಾದ ಈ ಪರೀಕ್ಷೆಯಲ್ಲಿ ಒಂದು ಸಲ ಉತ್ತೀರ್ಣವಾಗುವುದೇ ಬಲು ಕಷ್ಟ. ಆದರೆ, ಕಣ್ಣು ಕಾಣದ ಇವರು ಎರಡೆರಡು ಬಾರಿ ರ್ಯಾಂಕ್ ಪಡೆದು ಅಚ್ಚರಿ ಮೂಡಿಸಿದ್ದಾರೆ. 2020ರಲ್ಲಿ ನಡೆದ ಯುಪಿಎಸ್​ಸಿ ಪರೀಕ್ಷೆಯಲ್ಲೂ ಆಯ್ಕೆಯಾಗಿದ್ದ ಇವರು, 465ನೇ ರ್ಯಾಂಕ್ ಪಡೆದಿದ್ದರು. ಕಡಿಮೆ ರ್ಯಾಂಕ್ ಬಂದ ಕಾರಣ ಮತ್ತೆ ಪರೀಕ್ಷೆ ಬರೆದಿದ್ದರು. ಇದೀಗ 465ರಿಂದ 425ನೇ ರ್ಯಾಂಕ್​ಗೆ ಬಡ್ತಿ ಪಡೆದುಕೊಂಡಿದ್ದಾರೆ. ಮಗಳ ಸಾಧನೆ ಬಗ್ಗೆ ಪಾಲಕರು, ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಮೂಲದವರಾದ ಇವರು ಪ್ರಸ್ತುತ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದಾರೆ. ತಾಂಡವಮೂರ್ತಿ ಹಾಗೂ ನವನೀತಾ ದಂಪತಿ ಪುತ್ರಿ ಮೇಘನಾ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ರೆಟಿನಾ ಸಮಸ್ಯೆ ಎದುರಾಗಿ, ಶೇ.70ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಶಾಲಾ-ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ ಮೇಘನಾ, 2015ನೇ ಬ್ಯಾಚ್​ನಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 11ನೇ ರ್ಯಾಂಕ್ ಗಳಿಸಿದ್ದರು. ಸದ್ಯ ಬೆಂಗಳೂರಿನಲ್ಲಿ ಖಜಾನೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೇಘನಾ ಅವರ ತಂದೆ ತಾಂಡವಮೂರ್ತಿ ಈ ಹಿಂದೆ ಬೆಂಗಳೂರಿನ ವಿಆರ್​ಎಲ್ ಟ್ರಾನ್ಸ್ ಪೋರ್ಟ್ ಎಕ್ಸಿಕ್ಯುಟಿವ್ ಆಗಿ ಕೆಲಸ ನಿರ್ವಹಿಸಿದ್ದರು. ಸದ್ಯ ರಾಜಧಾನಿಯಲ್ಲಿ ಸೆರಾಮಿಕ್ಸ್ ಉದ್ಯಮ ನಡೆಸುತ್ತಿದ್ದಾರೆ.
ಕರ್ನಾಟಕಕ್ಕೆ ಪ್ರಥಮ ರ‌್ಯಾಂಕ್ ಪಡೆದಿರುವ ದಾವಣಗೆರೆಯ ವಿ.ಅವಿನಾಶ್ ವಿದ್ಯಾರ್ಥಿವೇತನದ ಹಣದಿಂದಲೇ ಓದಿ ಚೊಚ್ಚಲ ಪ್ರಯತ್ನದಲ್ಲೇ ಅಚ್ಚರಿಯ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ದಾವಣಗೆರೆಯ ಹೋಟೆಲ್ ಉದ್ಯಮಿ ವಿಠ್ಠಲ್​ರಾವ್-ಸ್ಮಿತಾ ಅವರ ಪುತ್ರ. ಚಿಕ್ಕಂದಿನಲ್ಲೇ ಓದಿನಲ್ಲಿ ಮುಂಚೂಣಿಯಲ್ಲಿದ್ದ ಅವಿನಾಶ್, ದಾವಣಗೆರೆಯ ಬಾಪೂಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ತೋಳಹುಣಸೆಯ ಪಿಎಸ್​ಎಸ್​ಆರ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ದವನ್ ಪಪೂ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಪಿಯುನಲ್ಲೂ ರ್ಯಾಂಕ್ ಗಳಿಸಿದ್ದರು. 2015ರಲ್ಲಿ ರಾಷ್ಟ್ರೀಯ ಕಾನೂನು ಶಾಲೆಗಳ ಪ್ರವೇಶ ಪರೀಕ್ಷೆ (ಕ್ಲಾಟ್) ಯಲ್ಲಿ ರಾಷ್ಟ್ರಮಟ್ಟದಲ್ಲಿ 19ನೇ ರ್ಯಾಂಕ್ ಗಳಿಸಿ ರಾಜ್ಯಕ್ಕೇ ಟಾಪರ್ ಆಗಿದ್ದರು. ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಐದು ವರ್ಷದ ಕಾನೂನು ಪದವಿ ಪಡೆದಿರುವ ಅವರು ಚಿನ್ನದ ಪದಕ ಪಡೆದಿದ್ದಾರೆ. ಈ ಹಂತದಲ್ಲಿ ಕಾಪೋರೇಟ್ ಕಂಪನಿಯೊಂದರ ಉದ್ಯೋಗ ಆಫರ್ ಬಂದರೂ ನಿರಾಕರಿಸಿದ್ದರು. ‘ಅವಿನಾಶ್​ಗೆ ದೇಶದ ರಾಯಭಾರಿಯಾಗಿ ಒಳಿತು ಮಾಡಬೇಕೆಂಬ ಆಸೆ ಮೊದಲಿನಿಂದಲೂ ಇದೆ. ಈಗಲೂ ಅವನಿಗೆ ಅದೇ ಕನಸು. ಅವನ ಕನಸುಗಳಿಗೆ ಇಡೀ ಕುಟುಂಬ ಬೆನ್ನುಲುಬಾಗಿ ನಿಂತಿದೆ’ ಎಂದು ತಂದೆ ವಿಠ್ಠಲ್​ರಾವ್ ಪ್ರತಿಕ್ರಿಯಿಸಿದರು. ‘ದೂರದಲ್ಲಿದ್ದೇ ಓದುತ್ತಿದ್ದ ಮಗ, ನಮ್ಮಿಂದ ಎಲ್ಲಿ ದೂರವಾಗಿ ಬಿಡುತ್ತಾನೋ ಎಂಬ ಆತಂಕವಿತ್ತು. ಆದರೆ ಈಗ ಮಗನ ಸಾಧನೆ ನಮಗೆ ಖುಷಿ ತಂದಿದೆ‘ ಎಂದು ತಾಯಿ ಸ್ಮಿತಾ ಹೇಳಿದರು.
ಐಎಎಸ್ ಅಧಿಕಾರಿ ಆಗಬೇಕೆಂಬ ಅಪ್ಪನ ಆಸೆಯನ್ನು ಈಡೇರಿಸಿರುವ ಕೆ.ಆರ್.ಕಲ್ಪಶ್ರೀ ಶಿರಾ ತಾಲೂಕು ಗೌಡಗೆರೆ ಹೋಬಳಿ ಕಂದಾಯ ವೃತ್ತ ನಿರೀಕ್ಷಕ ವೈ.ಬಿ.ಕಾಂತಪ್ಪ, ಬಿ.ನಾಗರತ್ನಮ್ಮ ದಂಪತಿ ಪುತ್ರಿ. 2ನೇ ಪ್ರಯತ್ನದಲ್ಲಿ 291ನೇ ರ್ಯಾಂಕ್​ಗಳಿಸಿದ್ದಾರೆ. ಪಿಯುಸಿ ಬಳಿಕ ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ತಾಂತ್ರಿಕ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದರು. ತಂದೆ ಆಸೆಯಂತೆ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದರು.
ನನ್ನಂತೆ ಸಣ್ಣಪುಟ್ಟ ಸರ್ಕಾರಿ ನೌಕರಿ ಹಿಡಿದು ಕಷ್ಟಪಡಬೇಡ, ಐಎಎಸ್ ಅಧಿಕಾರಿ ಆಗು. ಅದಕ್ಕಾಗಿ ಕಷ್ಟಪಟ್ಟು ಓದಬೇಡ, ಇಷ್ಟಪಟ್ಟು ಓದು ಅಂತಾ ಹೇಳ್ತಿದೆ. ಎಂದೂ ಅವಳ ಮೇಲೆ ಒತ್ತಡ ಹೇರಿರಲಿಲ್ಲ. ಮಗಳ ಸಾಧನೆ ಹೆಮ್ಮೆ ಎನಿಸಿದೆ.
|ವೈ.ಬಿ.ಕಾಂತಪ್ಪಕಂದಾಯ ವೃತ್ತ ನಿರೀಕ್ಷಕ
ಗಜಾನನ ಬಾಳೆಗೆ 319ನೇ ರ್ಯಾಂಕ್:ಇಂಜಿನಿಯರಿಂಗ್ ಪದವಿ ಮುಗಿಸಿರುವ ಗಜಾನನ ಬಾಳೆ ಈ ಮೊದಲು 2019 ಯುಪಿಎಸ್​ಸಿ ಪರೀಕ್ಷೆಯಲ್ಲಿ 663ನೇ ರ್ಯಾಂಕ್ ಪಡೆದಿದ್ದರು. ಸದ್ಯ ಇಂಡಿಯಲ್ ಪೋಸ್ಟಲ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯುಪಿಎಸ್ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ವಿಷಯ ತೆಗೆದುಕೊಂಡು, 319 ನೇ ರ್ಯಾಂಕ್ ಪಡೆದಿದ್ದಾರೆ.
ನವದೆಹಲಿ:ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ನಾಗರಿಕ ಸೇವಾ ನೇಮಕಾತಿಗೆ 2021ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಯುವತಿಯರು ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಶ್ರುತಿ ಶರ್ವ, ಅಂಕಿತಾ ಅಗರ್​ವಾಲ್, ಗಾಮಿನಿ ಸಿಂಗ್ಲಾ ಮೊದಲ ಮೂರು ಸ್ಥಾನಗಳಿಸಿದ್ದಾರೆ, ಐಶ್ವರ್ಯಾ ವರ್ವ 4ನೇ ಸ್ಥಾನ, ಉತ್ಕರ್ಷ ದ್ವಿವೇದಿ 5ನೇ ಸ್ಥಾನಗಳಿಸಿದ್ದಾರೆ. ಯಕ್ಷ್ ಚೌಧರಿ, ಸಮ್ಯಕ್ ಎಸ್ ಜೈನ್, ಇಶಿತಾ ರಾಠಿ, ಪ್ರೀತಂ ಕುಮಾರ್, ಹರ್ಕೀರತ್ ಸಿಂಗ್ ರಾಂಧವಾ ಕ್ರಮವಾಗಿ ನಂತರದ ಸ್ಥಾನ ಪಡೆದುಕೊಂಡಿದ್ದಾರೆ. ಈ ಹಿಂದೆ 2015ರಲ್ಲಿ ಮೊದಲ ನಾಲ್ಕು ಸ್ಥಾನಗಳು ಮಹಿಳೆಯರ ಪಾಲಾಗಿತ್ತು. ಕಳೆದ ಜನವರಿಯಲ್ಲಿ ನಡೆದ ಮುಖ್ಯ ಪರೀಕ್ಷೆಯಲ್ಲಿ (ಮಾರ್ಚ್ 17) ತೇರ್ಗಡೆಯಾಗಿ ಏಪ್ರಿಲ್/ಮೇನಲ್ಲಿ ಸಂದರ್ಶನ ಎದುರಿಸಿದವರ ಪೈಕಿ 685 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. 80 ಜನರನ್ನು ತಾತ್ಕಾಲಿಕ ಪಟ್ಟಿಯಲ್ಲಿ ಇರಿಸಲಾಗಿದ್ದು, ಓರ್ವ ಅಭ್ಯರ್ಥಿಯ ಫಲಿತಾಂಶ ತಡೆಹಿಡಿಯಲಾಗಿದೆ.
92ನೇ ರ್ಯಾಂಕ್ ಪಡೆದಿರುವ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ಪಟ್ಟಣದ ಯುವ ವೈದ್ಯ ಡಾ.ಬೆನಕ ಪ್ರಸಾದ್ ನಾಗರಕಟ್ಟೆ ಗ್ರಾಮದ ದಿವಂಗತ ಎಚ್.ಜಯಪ್ಪ, ಪಂಕಜ ದಂಪತಿ ಮಗ. ಪ್ರಸ್ತುತ ಬೆಂಗಳೂರಿನ ಸಿಎಸ್​ಐ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವ ಹಿಸುತ್ತಿರುವ ಡಾ.ಬೆನಕ, ಪರೀಕ್ಷೆಯ ಮೂರನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ. ಹೊಸದುರ್ಗದ ಸಂತ ಅಂಥೋಣಿ ಶಾಲೆಯಲ್ಲಿ 1ರಿಂದ 7, ಮಂಗಳೂರು ಬಳಿಯ ಆಳಕೆಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲ್, ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯ ಸಾಯಿ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಮುಗಿಸಿ ದ್ದಾರೆ. ವೈದ್ಯವೃತ್ತಿ ಜತೆಯಲ್ಲಿಯೇ ಓದುವ ಮೂಲಕ ಯುಪಿಎಸ್​ಸಿ ಪರೀಕ್ಷೆಯಲ್ಲಿ ಈ ಸಾಧನೆ ಮಾಡಿದ್ದಾರೆ.
ಅಪ್ಪ ಕಂಡ ಕನಸು, ಅಮ್ಮನ ಭಾವನಾತ್ಮಕ ಬೆಂಬಲದಿಂದ ಈ ಸಾಧನೆ ಮಾಡಿದ್ದೇನೆ. ನನ್ನ ಗೆಲುವನ್ನು ದೈಹಿಕವಾಗಿ ನಮ್ಮೊಂದಿಗೆ ಇಲ್ಲದ ಅಪ್ಪನ ಪಾದಕ್ಕೆ ಅರ್ಪಿಸುತ್ತೇನೆ. ಅವರು ಇದಿದ್ದರೆ ನನಗಿಂತಲೂ ಹೆಚ್ಚು ಖುಷಿ ಪಡುತ್ತಿದ್ದರು.
|ಡಾ.ಬೆನಕ ಪ್ರಸಾದ್
ಕಾರವಾರ:ಯುಪಿಎಸ್​ಸಿ ಪರೀಕ್ಷೆಯಲ್ಲಿ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ಅಕ್ಕಸಾಲಿಗ ರಾಮಚಂದ್ರ ಶೇಟ್ ಅವರ ಪುತ್ರ ದೀಪಕ ಶೇಟ್ 311ನೇ ರ್ಯಾಂಕ್ ಪಡೆದಿದ್ದಾರೆ. ದೀಪಕ್ ಮಂಕಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಶಿರಸಿಯ ಮುರಾರ್ಜಿ ದೇಸಾಯಿ ಶಾಲೆಯಲ್ಲಿ 6ನೇ ತರಗತಿಯಿಂದ ಓದಿದ್ದರು. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಶಾಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದರು. ಮೂಡಬಿದರೆಯ ಆಳ್ವಾಸ್​ನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ, ಬೆಂಗಳೂರಿನ ಆರ್.ವಿ. ಕಾಲೇಜ್​ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ಯುಪಿಎಸ್​ಸಿ ಪರೀಕ್ಷೆಗೆ ತರಬೇತಿ ಪಡೆದಿದ್ದರು.
ವಿಟ್ಲ(ದ.ಕ.):ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಕಲಿತ ಮೂವರು ವಿದ್ಯಾರ್ಥಿಗಳು 2021ರ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಹೊಸದುರ್ಗ ತಾಲೂಕಿನ ನಾಗರಕಟ್ಟೆ ನಿವಾಸಿ ಜಯಣ್ಣ ಹಾಗೂ ಪಂಕಜಾ ದಂಪತಿ ಪುತ್ರ ಡಾ.ಬೆನಕ ಪ್ರಸಾದ್ 92ನೇ ಸ್ಥಾನ ಪಡೆದಿದ್ದು, 2007ರಿಂದ 2010ರವರೆಗೆ ಪ್ರೌಢ ಶಿಕ್ಷಣವನ್ನು ಅಳಿಕೆಯಲ್ಲಿ ಪೂರೈಸಿದ್ದರು. ದಾವಣಗೆರೆ ನಿವಾಸಿ ಬಸವರಾಜ್ ಪಾಟೀಲ್ ಹಾಗೂ ಅನ್ನಪೂರ್ಣ ದಂಪತಿ ಪುತ್ರ ನಿಖಿಲ್ ಬಿ.ಪಾಟೀಲ್ 139ನೇ ಸ್ಥಾನ ಪಡೆದಿದ್ದು, 2008ರಿಂದ 2013ವರೆಗೆ 8ನೇ ತರಗತಿಯಿಂದ ಪಿಯುಸಿವರೆಗೆ ಅಳಿಕೆ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದರು. ಬೀದರ್ ಮೂಲದ ಡಾ.ವಿನಯ ಕುಮಾರ್ ಗಡ್ಗೆ 151ನೇ ಸ್ಥಾನ ಗಳಿಸಿದ್ದು, 2008ರಿಂದ 2010ರವರೆಗೆ ಪಿಯುಸಿ ಶಿಕ್ಷಣವನ್ನು ಅಳಿಕೆಯಲ್ಲಿ ಪೂರೈಸಿದ್ದರು.
ಶಿರಸಿ ತಾಲೂಕಿನ ಜಾನ್ಮನೆ ಹಣಗಾರಿನ ನಿವೃತ್ತ ಪಶುವೈದ್ಯ ರಮಾಕಾಂತ ಹೆಗಡೆ ಮತ್ತು ಶಿಕ್ಷಕಿ ಗೀತಾ ದಂಪತಿಯ ಪುತ್ರ ಮನೋಜ ಹೆಗಡೆ ಯುಪಿಎಸ್​ಸಿ ಪರೀಕ್ಷೆಯಲ್ಲಿ 213ನೇ ರ್ಯಾಂಕ್ ಗಳಿಸಿ ಐಪಿಎಸ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಧಾರವಾಡದಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ಪದವಿ ಮುಗಿಸಿ, ಆನಂತರ ಐಎಎಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು. ನಾಲ್ಕು ಬಾರಿ ಪರೀಕ್ಷೆಯಲ್ಲಿ ಕೊನೇ ಹಂತದಲ್ಲಿ ಸ್ಥಾನ ಕೈತಪ್ಪಿದರೂ ಎದೆಗುಂದದೆ ಪರಿಶ್ರಮದಿಂದ 5ನೇ ಬಾರಿ ಗುರಿ ತಲುಪಿದ್ದಾರೆ.
ಇಂಡಿಯಾ ಫಾರ್ ಐಎಎಸ್ ತರಬೇತಿ:ಇಂಡಿಯಾ ಫಾರ್ ಐಎಎಸ್ ಬೆಂಗಳೂರು ಅಕಾಡೆಮಿಯಿಂದ ತರಬೇತಿ ಪಡೆದ 18 ಮಂದಿ ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯು 18 ರ್ಯಾಂಕ್​ಗಳನ್ನು ಗಳಿಸುವುದರ ಮೂಲಕ ಮುಂಚೂಣಿಯಲ್ಲಿದೆ. ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಇನ್​ಸೈಟ್ ಐಎಎಸ್ ಬೆಂಗಳೂರು ಅಕಾಡೆಮಿಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳೂ ಯುಪಿಎಸ್​ಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಗಂಗಾವತಿಯ ಅಪೂರ್ವ ಬಾಸೂರ ಯುಪಿಎಸ್​ಸಿಯಲ್ಲಿ 191ನೇ ರ್ಯಾಂಕ್ ಪಡೆದಿದ್ದಾರೆ. ಇವರು ಎಸ್ಸೆಸ್ಸೆಲ್ಸಿವರೆಗೆ ಗಂಗಾವತಿ ಸೆಂಟ್ ಪಾಲ್ಸ್ ಶಾಲೆಯಲ್ಲಿ ಓದಿದ್ದಾರೆ. ನಂತರ ಮಂಗಳೂರಿನ ಎಕ್ಸ್​ಪರ್ಟ್ ಪಿಯು ಕಾಲೇಜಿನಲ್ಲಿ ಪಿಯು ಪೂರ್ಣಗೊಳಿಸಿ, ಬೆಂಗಳೂರಿನ ಆರ್​ವಿ ಡೆಂಟಲ್ ಕಾಲೇಜಿನಲ್ಲಿ ಡೆಂಟಿಸ್ಟ್ ಪದವಿ (ಬಿಡಿಎಸ್) ಪಡೆದಿದ್ದಾರೆ. ಐಎಎಸ್ ಕನಸು ಹೊತ್ತಿದ್ದ ಇವರು 2018ರಲ್ಲಿ ದೆಹಲಿಗೆ ತೆರಳಿ ಎರಡು ವರ್ಷ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದಿದ್ದಾರೆ. ಈ ಸಮಯದಲ್ಲಿ ಮಗಳ ಪ್ರಯತ್ನಕ್ಕೆ ತಾಯಿ ಬೆನ್ನೆಲುಬಾಗಿದ್ದಾರೆ. 2020ರಲ್ಲಿ ಮೊದಲ ಬಾರಿ ಪರೀಕ್ಷೆ ಎದುರಿಸಿದರೂ ಪ್ರಿಲಿಮ್ಸ್​ನಲ್ಲಿ ಪಾಸಾಗಿರಲಿಲ್ಲ. ಧೃತಿಗೆಡದೆ ನಿರಂತರ ಅಧ್ಯಯನದಿಂದ ಎರಡನೇ ಪ್ರಯತ್ನದಲ್ಲಿ ದೇಶಕ್ಕೆ 191ನೇ ರ್ಯಾಂಕ್ ಪಡೆದಿದ್ದಾರೆ. ಸಾರ್ವಜನಿಕ ಆಡಳಿತ ವಿಷಯದಲ್ಲಿ ಅಪೂರ್ವ ಪರೀಕ್ಷೆ ಬರೆದಿದ್ದು, ಜನಸೇವೆ ಮಾಡ ಬೇಕೆಂಬ ಕನಸು ಹೊತ್ತಿದ್ದಾರೆ. ‘ಮಗಳ ಸಾಧನೆಯಿಂದ ತುಂಬ ಸಂತೋಷವಾಗಿದೆ’ ಎನ್ನುತ್ತಾರೆ ಅಪೂರ್ವ ತಂದೆ ಶ್ರೀಕಾಂತ ಬಾಸೂರ. ಸದ್ಯ ಇವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ನಿವಾಸಿ ನಿಖಿಲ್ ಪಾಟೀಲ ಯುಪಿಎಸ್​ಸಿಯಲ್ಲಿ 139ನೇ ರ್ಯಾಂಕ್ ಪಡೆದಿದ್ದಾರೆ. ತಂದೆ ಬಸವರಾಜ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ವಿುಕ ಅಧಿಕಾರಿಯಾಗಿದ್ದು, ತಾಯಿ ಅನ್ನಪೂರ್ಣ ಗೃಹಿಣಿ. ಗೋಕಾಕ್​ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಿಖಿಲ್, ಪ್ರೌಢ ಶಿಕ್ಷಣ ಮತ್ತು ಪಿಯುಸಿ ವ್ಯಾಸಂಗವನ್ನು ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯಲ್ಲಿರುವ ಸತ್ಯಾಸಾಯಿ ಲೋಕ ಸೇವಾ ಸಂಸ್ಥೆಯಲ್ಲಿ ಪೂರ್ಣಗೊಳಿಸಿ ದ್ದಾರೆ. ನಂತರ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ.
ಸತತ ಪರಿಶ್ರಮದಿಂದ ಎಲ್ಲವೂ ಸಾಧ್ಯ. ನಾನೂ ನಾಲ್ಕನೇ ಬಾರಿಗೆ ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಎದೆಗುಂದದೆ ಅಭ್ಯರ್ಥಿಗಳು ಪರೀಕ್ಷೆಯನ್ನೇ ಗುರಿಯನ್ನಾಗಿಟ್ಟುಕೊಂಡು ವ್ಯಾಸಂಗ ಮಾಡಿದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ.
|ನಿಖಿಲ್ ಪಾಟೀಲ
‘ಸಾಲದ ಹೊರೆ ಹೊರಲಾರದೆ ಅಪ್ಪ ನಮ್ಮನ್ನೆಲ್ಲ್ಲ ಬಿಟ್ಟುಹೋದರು. ಕಣ್ಮರೆಯಾದ ಅಪ್ಪನ ನಗುಮೊಗವನ್ನು ರೈತರ ಸೇವೆ ಮಾಡಿ ಅವರಲ್ಲಿ ಕಾಣುವ ನನ್ನ ಕನಸು ಈಗ ನನಸಾಗಿದೆ’ ಎನ್ನುವ ಎಂ.ಅರುಣಾ 6ನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ 308ನೇ ರ್ಯಾಂಕ್​ಗಳಿಸಿದ್ದಾರೆ. ಶಿರಾ ತಾಲೂಕು ತಡಕಲೂರಿನ ಮಹಾಲಿಂಗಪ್ಪ-ವಿಶಾಲಾಕ್ಷಮ್ಮ ದಂಪತಿಯ ಮೂರನೇ ಪುತ್ರಿ ಅರುಣಾ ರೈತ ಕುಟುಂಬ ಹಿನ್ನೆಲೆಯವರು. ಇನ್​ಸ್ಟ್ರು ಮೆಂಟೇಷನ್ ಟೆಕ್ನಾಲಜಿ ಕೋರ್ಸ್ ಮುಗಿಸಿ ಬಳಿಕ ಟೆಸ್ಕೋ ಸಾಫ್ಟ್​ವೇರ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. 5 ಬಾರಿ ಯುಪಿಎಸ್ಸಿ ಪ್ರಯತ್ನ ಮಾಡಿದರೂ ಫಲಕೊಡಲಿಲ್ಲ. ಹಾಗಾಗಿ, ಗ್ರಾಮೀಣ ಮಕ್ಕಳಿಗೆ ಮಾರ್ಗದರ್ಶನ ನೀಡಲು ಸ್ನೇಹಿತರೊಡಗೂಡಿ ಐಎಎಸ್ ಅಕಾಡೆಮಿ ಆರಂಭಿಸಿದರು. ಇದಕ್ಕೆ ಸಹೋದರ ದಿನೇಶ್ ಕುಮಾರ್ ಬೆಂಬಲವಾಗಿ ನಿಂತರು. ಇದರ ನಡುವೆ 6ನೇ, ಕೊನೆಯ ಪ್ರಯತ್ನ ಅವರ ಐಎಎಸ್ ಕನಸು ಕೈಗೂಡುವಂತೆ ಮಾಡಿದೆ.
ಬಿ.ಇ. ಓದುತ್ತಿರುವಾಗ ನನ್ನ ತಂದೆ ಆತ್ಮಹತ್ಯೆ ಮಾಡಿ ಕೊಂಡರು. ಇದು ನನ್ನ ಮನಸಿಗೆ ಆಘಾತ ತಂದಿದ್ದು ಇದರಿಂದ ಹೊರಬಂದ ಬಳಿಕ ರೈತರ ಆತ್ಮಹತ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ ಏನಾದರೂ ಮಾಡಲು ಮನದಲ್ಲೇ ಸಂಕಲ್ಪ ಮಾಡಿಯುಪಿಎಸ್ಸಿ ಕಡೆ ಗಮನಹರಿಸಿದೆ.
|ಎಂ.ಅರುಣಾ
ಹೊಸದುರ್ಗ ಪಟ್ಟಣದ ಯುವಕ ಡಿ.ಎಚ್.ವಿನಯ್, ಆರನೇ ಪ್ರಯತ್ನದಲ್ಲಿ 352ನೇ ರ್ಯಾಂಕ್ ಪಡೆದಿದ್ದಾರೆ. ಮೆಕಾನಿಕಲ್ ಇಂಜಿನಿಯರ್ ಪದವಿಧರರಾದ ವಿನಯ್, ಪಟ್ಟಣದ ನಿವಾಸಿಗಳಾದ ನಿವೃತ್ತ ಉಪನ್ಯಾಸಕ ಡಿ.ಎಚ್.ಹೊರಕೆರಿಯಪ್ಪ, ನಿವೃತ್ತ ಮುಖ್ಯಶಿಕ್ಷಕಿ ರೇಖಾ ದಂಪತಿ ಪುತ್ರ. ಹೊಸದುರ್ಗದ ಜ್ಞಾನವಾಹಿನಿ ಶಾಲೆಯಲ್ಲಿ 1ರಿಂದ 5, ಹಿರಿಯೂರು ತಾಲೂಕು ಉಡುವಳ್ಳಿ ಜವಾಹರ್ ನವೋದಯ ವಿದ್ಯಾಲಯದಲ್ಲಿ 6 ರಿಂದ 12ನೇ ತರಗತಿ ಓದಿದ್ದಾರೆ. ಸುರತ್ಕಲ್​ನ ಪ್ರತಿಷ್ಠಿತ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್​ಐಟಿಕೆ) ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ನಂತರ ಭಾರತ ಸರ್ಕಾರದ ಕೋಲ್ ಇಂಡಿಯಾ ಕಂಪನಿಯಲ್ಲಿ ದೊರೆತ ಉದ್ಯೋಗವನ್ನು ತ್ಯಜಿಸಿ ಯುಪಿಎಸ್​ಸಿ ಪರೀಕ್ಷೆಯ ಮೇಲೆ ಗಮನ ಕೇಂದ್ರೀಕರಿಸಿದ್ದರು.
ಗ್ರಾಮೀಣ ಪ್ರತಿಭೆ:ಕೊಡಗಿನ ಮುಂಡಂಡ ರಾಜೇಶ್ 222ನೇ ರ್ಯಾಂಕ್ ಪಡೆದಿದ್ದಾರೆ. ನಾಪೋಕ್ಲು ಸಮೀಪದ ನೆಲಜಿ ನಿವಾಸಿ ಯಾಗಿರುವ ಪೂವಯ್ಯ, ಸುಧಾ ಅವರ ಪುತ್ರ ರಾಜೇಶ್, ಮೆಕಾನಿಕಲ್ ಇಂಜಿನಿ ಯರ್​ನಲ್ಲೂ ರ್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಐಎಎಸ್ ಕೋಚಿಂಗ್ ನೀಡುತ್ತ, ಪರೀಕ್ಷೆ ಬರೆದು ರಾಜೇಶ್ ಉತ್ತೀರ್ಣರಾಗಿದ್ದಾರೆ.
ಐದನೇ ಪ್ರಯತ್ನದಲ್ಲಿ ಪಾಸು:ಇಂಜಿನಿಯರಿಂಗ್ ಪದವಿ ಮುಗಿಸಿರುವ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ 5ನೇ ಪ್ರಯತ್ನದಲ್ಲಿ ಪಾಸಾಗಿದ್ದಾರೆ. ಅದಕ್ಕೂ ಮೊದಲು ಯುಪಿಎಸ್​ಸಿ ಎರಡು ಮುಖ್ಯ ಪರೀಕ್ಷೆಗಳನ್ನು ಪಾಸಾಗಿದ್ದರು. ಆದರೆ, ಸಂದರ್ಶನದಲ್ಲಿ ವಿಫಲರಾಗಿದ್ದರು. ಈ ಬಾರಿ ಸಂದರ್ಶನದಲ್ಲಿಯೇ ಹೆಚ್ಚು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ವಿಜಯಪುರ ನಗರದ ಬಿಎಸ್​ಎನ್​ಎಲ್ ನಿವೃತ್ತ ಅಧಿಕಾರಿ ಸಿದ್ದಪ್ಪ ಗೋಟ್ಯಾಳರ ಹಿರಿಯ ಮಗಳು ಅಶ್ವಿನಿ 2015ರ ಯುಪಿಎಸ್​ಸಿ ಪರೀಕ್ಷೆಯಲ್ಲಿ 625ನೇ ರ್ಯಾಂಕ್ ಪಡೆದಿದ್ದರು. ಇದೀಗ ಎರಡನೇ ಮಗಳು ಸವಿತಾ ಗೋಟ್ಯಾಳ 479ನೇ ಸ್ಥಾನ ಪಡೆದಿದ್ದಾರೆ. ಸವಿತಾ ಪ್ರಸ್ತುತ ದೆಹಲಿಯಲ್ಲಿ ಟೆಲಿಕಾಂ ಅಕೌಂಟ್ಸ್ ಮತ್ತು ಫೈನಾನ್ಸ್ ಸರ್ವಿಸ್ ತರಬೇತಿಯಲ್ಲಿದ್ದಾರೆ. ಮೊದಲೆರಡು ಯತ್ನಗಳಲ್ಲಿ ಪ್ರಿಲಿಮ್್ಸ ಪಾಸ್ ಮಾಡಲಾಗಲಿಲ್ಲ. 2020ರಲ್ಲಿ ಮೂರನೇ ಬಾರಿ ಪ್ರಿಲಿಮ್್ಸ, ಮೇನ್ಸ್ ಮತ್ತು ಸಂದರ್ಶನ ಎಲ್ಲವೂ ಒಟ್ಟಿಗೇ ಪಾಸ್ ಮಾಡಿದ್ದರು. ಇದೀಗ ಮತ್ತೊಮ್ಮೆ ಆ ಸಾಧನೆ ಮಾಡಿದ್ದಾರೆ.

ಮತದಾನ ಕೇಂದ್ರದಲ್ಲಿ ಮದ್ಯಪಾನ ಪರೀಕ್ಷೆಗೆ ಮನವಿ; ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ…

ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆದ್ರು ಐದು ರೂಪಾಯಿ ಡಾಕ್ಟರ್​ ಶಂಕರೇಗೌಡ ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
