ಮಾಸ್ಕೊ/ಕಿಯೆವ್/ನವದೆಹಲಿ:ರಷ್ಯಾ-ಯೂಕ್ರೇನ್ ಸಮರ ಆರಂಭವಾಗಿ 19 ದಿನ ಕಳೆದಿದ್ದು, ನಾಗರಿಕ ವಸತಿ ಪ್ರದೇಶದ ಮೇಲೂ ದಾಳಿ ತೀವ್ರವಾಗಿದೆ. ಏತನ್ಮಧ್ಯೆ, ಯೂಕ್ರೇನ್ ವಿರುದ್ಧ ಸಮರಕ್ಕೆ ಆರ್ಥಿಕವಾಗಿ ಮತ್ತು ಸೇನಾ ಮಟ್ಟದಲ್ಲಿ ನೆರವು ನೀಡುವಂತೆ ಚೀನಾಕ್ಕೆ ರಷ್ಯಾ ಮೊರೆ ಹೋಗಿದೆ ಎಂದು ಅಮೆರಿಕ ಆರೋಪಿಸಿತ್ತು. ಇದು ಅಮೆರಿಕ ಮತ್ತು ಚೀನಾ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಅಮೆರಿಕದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಚೀನಾ, ಯೂಕ್ರೇನ್ ವಿಚಾರದಲ್ಲಿ ಅಮೆರಿಕವು ತಪು್ಪ ಮಾಹಿತಿ ಹರಡುತ್ತ ಚೀನಾವನ್ನು ಟಾರ್ಗೆಟ್ ಮಾಡುತ್ತಿದೆ. ಇದು ದುರುದ್ದೇಶದ ಆರೋಪ ಎಂಬುದು ವೇದ್ಯವಾಗುತ್ತಿದೆ ಎಂದು ತಿರುಗೇಟು ನೀಡಿದೆ. ಅಲ್ಲದೆ, ನ್ಯಾಟೊ ಪಡೆಯ ವಿಸ್ತರಣಾವಾದವೇ ಯೂಕ್ರೇನ್ – ರಷ್ಯಾ ಸಂಘರ್ಷಕ್ಕೆ ಕಾರಣ ಎಂದು ನೇರವಾಗಿ ಆರೋಪಿಸಿದೆ. ಇದೇ ವೇಳೆ, ರಷ್ಯಾ ಕೂಡ ಅಮೆರಿಕದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಯೂಕ್ರೇನ್ ಮೇಲಿನ ದಾಳಿಯ ಉದ್ದೇಶ ಈಡೇರಿಸುವ ಸೇನಾ ಸಾಮರ್ಥ್ಯ ಮತ್ತು ಆರ್ಥಿಕ ಬಲ ರಷ್ಯಾಕ್ಕೆ ಇದೆ. ಚೀನಾದಿಂದ ಯಾವುದೇ ನೆರವನ್ನು ರಷ್ಯಾ ಕೋರಿಲ್ಲ ಎಂದು ಕ್ರೆಮ್ಲಿನ್ (ರಷ್ಯಾ ಅಧ್ಯಕ್ಷರ ಭವನ) ಸೋಮವಾರ ಸ್ಪಷ್ಟಪಡಿಸಿದೆ.
ನಿರ್ಬಂಧ ಎದುರಿಸಬೇಕಾದೀತು ಜೋಕೆ:ಯೂಕ್ರೇನ್ ಮೇಲೆ ಸಮರ ಸಾರಿದ ರಷ್ಯಾಕ್ಕೆ ಯಾವುದೇ ರೀತಿಯ ನೆರವು ನೀಡಿದರೂ ಅದರ ಪರಿಣಾಮವನ್ನು ಚೀನಾ ಎದುರಿಸಬೇಕಾದೀತು ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ರೋಮ್ಲ್ಲಿ ಸೋಮವಾರ ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿ ಯಾಂಗ್ ಜೈಚಿ ಅವರನ್ನು ಭೇಟಿ ಮಾಡಿದ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲಿವಾನ್ ಮಾತುಕತೆ ವೇಳೆ ಈ ಎಚ್ಚರಿಕೆ ನೀಡಿದ್ದಾಗಿ ವರದಿಯಾಗಿದೆ.
ನಾಲ್ಕನೇ ಸುತ್ತಿನ ಮಾತುಕತೆ:ಮಾಸ್ಕೊ ಮತ್ತು ಕಿಯೆವ್ ನಡುವೆ ನಾಲ್ಕನೇ ಸುತ್ತಿನ ಮಾತುಕತೆ ಸೋಮವಾರ ನಡೆಯಿತು. ಯೂಕ್ರೇನ್ ಮೇಲಿನ ದಾಳಿಯಿಂದ ರಷ್ಯಾ ಕೂಡಲೇ ಹಿಂದೆ ಸರಿಯಬೇಕು. ನಾಗರಿಕರ ಹತ್ಯೆ ಆಗುತ್ತಿರುವ ಕಾರಣ ತತ್​ಕ್ಷಣವೇ ಕದನವಿರಾಮ ಘೋಷಿಸಬೇಕು ಎಂದು ಯೂಕ್ರೇನ್ ಅಧಿಕಾರಿಗಳು ಮಾತುಕತೆ ವೇಳೆ ಆಗ್ರಹಿಸಿದರು.
ಶಾಂತಿಗಾಗಿ ರಾಜತಾಂತ್ರಿಕ ಪ್ರಯತ್ನ:ರಷ್ಯಾ-ಯೂಕ್ರೇನ್ ಸಮರ ತೀವ್ರಗೊಂಡ ಬೆನ್ನಿಗೆ ಅದನ್ನು ಮುಕ್ತಾಯಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ಕೂಡ ಹೆಚ್ಚಾಗಿದೆ. ಕಳೆದ ವಾರಾಂತ್ಯದಿಂದ ಈ ಪ್ರಯತ್ನ ತೀವ್ರಗೊಂಡಿದ್ದು, ಯೂಕ್ರೇನ್ ಮತ್ತು ರಷ್ಯಾದ ಮಧ್ಯವರ್ತಿಗಳು ಮಾತುಕತೆ ಮುಂದುವರಿಸಿದ್ದಾರೆ. ಈ ಮಧ್ಯೆ, ಯೂಕ್ರೇನ್ ವಾಯುಗಡಿಯನ್ನು ನೋ ಫ್ಲೈ ಝೋನ್ ಎಂದು ಘೋಷಿಸುವಂತೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಮತ್ತೊಮ್ಮೆ ನ್ಯಾಟೋ ದೇಶಗಳನ್ನು ಒತ್ತಾಯಿಸಿದ್ದಾರೆ.
ನಾಗರಿಕರ ಸ್ಥಳಾಂತರಕ್ಕೆ 10 ಕಾರಿಡಾರ್:ಸದ್ಯದ ಮಟ್ಟಿಗೆ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿರುವ ನಾಗರಿಕರ ಸ್ಥಳಾಂತರಕ್ಕೆ ಸುರಕ್ಷಿತವಾದ 10 ಕಾರಿಡಾರ್​ಗಳ ರಚನೆ ಆಗಬೇಕು. ಇದು ತುರ್ತು ಅಗತ್ಯ. ಮರಿಯುಪೋಲ್ ಮತ್ತು ಬೆರ್ಡಿಯಾನ್​ಸ್ ನಗರಗಳಿಗೆ ಆಹಾರ ಮತ್ತು ಔಷಧ ತಲುಪಿಸುವುದಕ್ಕೆ ಕೂಡ ಇದು ಅಗತ್ಯ ಎಂದು ಯೂಕ್ರೇನ್​ನ ಡೆಪ್ಯೂಟಿ ಪ್ರಧಾನಮಂತ್ರಿ ಇರಿನಾ ವೆರೆಶ್ಚುಕ್ ಸೋಮವಾರ ಹೇಳಿದ್ದಾರೆ.
ಸಿಂಗಲ್ ಫೈಟ್​ಗೆ ಬನ್ನಿ!:ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಟ್ವೀಟ್ ಸೋಮವಾರ ವಿಶ್ವದ ಗಮನಸೆಳೆದಿದೆ. ಅದರಲ್ಲಿ ಅವರು ಹೇಳಿರುವುದಿಷ್ಟು – ‘ಈ ಮೂಲಕ ವ್ಲಾದಿಮಿರ್ ಪುತಿನ್ ಅವರಿಗೊಂದು ಸವಾಲು. ಒಂದೇ ಒಂದು ಫೈಟ್. ಇದರಲ್ಲಿ ಇನಾಮು ಯೂಕ್ರೇನ್’. ಪುತಿನ್ ಅವರಿಗೆ ಅಧಿಕೃತ ಟ್ವಿಟರ್ ಖಾತೆ ಇಲ್ಲದ ಕಾರಣ ಈ ಟ್ವೀಟನ್ನು ಮಸ್ಕ್ ಅವರು ಕ್ರೆಮಿಲಿನ್ ರಷ್ಯಾಗೆ ಟ್ಯಾಗ್ ಮಾಡಿದ್ದಾರೆ.
ರಷ್ಯಾದಿಂದ ತೈಲ ಖರೀದಿಗೆ ಭಾರತ ಚಿಂತನೆ:ಕಚ್ಚಾ ತೈಲ ಮತ್ತು ಇತರೆ ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪೂರೈಸುವ ರಷ್ಯಾದ ಆಫರ್ ಅನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರೂಪಾಯಿ ಮತ್ತು ರೂಬಲ್ ನೇರ ವಹಿವಾಟಿನ ಬಗ್ಗೆಯೂ ಮಾತುಕತೆ ನಡೆಯುತ್ತಿದ್ದು, ಇದು ಯಶಸ್ವಿಯಾದರೆ ರೂಪಾಯಿ ಅಂತಾರಾಷ್ಟ್ರೀಯ ವಿನಿಮಯ ವಹಿವಾಟಿಗೂ ಇದೇ ಮೊದಲ ಬಾರಿಗೆ ಬಳಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಟೋಚ್ಕಾ-ಯು ರಾಕೆಟ್ ಉಡೀಸ್:ರಷ್ಯಾದ ಟೋಚ್ಕಾ-ಯು ರಾಕೆಟ್ ಅನ್ನು ಯೂಕ್ರೇನ್ ಸೇನೆ ಸೋಮವಾರ ಉಡಾಯಿಸಿದ್ದು, ಡೊನೆಟ್​ಸ್ ವ್ಯಾಪ್ತಿಯಲ್ಲಿ ಪತನವಾಗಿದೆ. ಈ ದಾಳಿಯಲ್ಲಿ ಕನಿಷ್ಠ 20 ಜನ ಮೃತಪಟ್ಟಿದ್ದು, 9 ಜನ ಗಾಯಗೊಂಡಿದ್ದಾರೆ.
2,400ಕ್ಕೂ ಹೆಚ್ಚು ನಾಗರಿಕರ ಹತ್ಯೆ:ರಷ್ಯಾದ ದಾಳಿಯಿಂದಾಗಿ ದಕ್ಷಿಣ ಯೂಕ್ರೇನ್​ನ ಮರಿಯುಪೋಲ್​ನಲ್ಲಿ ಕಳೆದ 20 ದಿನಗಳಲ್ಲಿಲ 2,400ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿರುವುದಾಗಿ ಯುರೋಪ್ ಒಕ್ಕೂಟದ ವಿದೇಶ ನೀತಿ ಮುಖ್ಯಸ್ಥ ಜೋಸೆಫ್ ಬೋರೆಲ್ ಸೋಮವಾರ ತಿಳಿಸಿದರು.
ಯೂಕ್ರೇನ್​ನಲ್ಲಿ ಚೆಚೆನ್ ನಾಯಕ:ಚೆಚೆನ್​ನ ನಾಯಕ ರಮ್kಾನ್ ಕದಿರೋವ್ ರಷ್ಯಾ ಸೇನಾ ಪಡೆಯ ಜತೆಗೆ ಯೂಕ್ರೇನ್​ನಲ್ಲಿದ್ದಾನೆ. ಇದನ್ನು ಕದಿರೋವ್ ಸ್ವತಃ ವಿಡಿಯೋ ಸಂದೇಶದಲ್ಲಿ ಬಹಿರಂಗಪಡಿಸಿದ್ದಾರೆ. ಟೆಲಿಗ್ರಾಂ ಮೂಲಕ ಶೇರ್ ಆಗಿರುವ ವಿಡಿಯೋದಲ್ಲಿ ಕದಿರೋವ್ ಸೇನಾ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
