ನವದೆಹಲಿ:ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ತಯಾರಿಸಲಾಗುತ್ತಿರುವ ಲಸಿಕೆ ಶೇಕಡ 90ರವರೆಗೂ ಪರಿಣಾಮಕಾರಿಯಾಗಬಹುದು ಎಂದು ಆಸ್ಟ್ರಾಜೆನೆಕಾ ಹೇಳಿರುವ ಬೆನ್ನಲ್ಲೇ ಫಲಿತಾಂಶದ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ. ಈ ಕುರಿತು ಸತ್ಯ ಒಪ್ಪಿಕೊಂಡಿರುವ ಆಸ್ಟ್ರಾಜೆನೆಕಾ, ಲಸಿಕೆ ಉತ್ಪಾದನೆಯಲ್ಲಿ ದೋಷ ಕಂಡು ಬಂದಿದೆ ಎಂದಿದೆ. ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾದವರಲ್ಲಿ ಕೆಲವರು ಪೂರ್ಣ ಪ್ರಮಾಣದ ಡೋಸ್​ಗಳನ್ನು ಪಡೆದಿಲ್ಲ ಎಂಬ ಅಂಶ ಬೆಳಕಿಗೆ ಬಂದ ನಂತರ ಆಸ್ಟ್ರಾಜೆನೆಕಾ ಈ ತಪ್ಪೊಪ್ಪಿಗೆ ನೀಡಿದೆ.
ಎರಡು ಡೋಸ್​ಗಳನ್ನು ಪಡೆದ ಸ್ವಯಂಸೇವಕರಿಗಿಂತ ಒಂದು ಡೋಸ್ ಪಡೆದವರಲ್ಲಿನ ಫಲಿತಾಂಶ ಶೇಕಡ 90ರಷ್ಟು ತೋರಿಸಿದೆ. ಎರಡು ಡೋಸ್ ಪಡೆದವರ ಫಲಿತಾಂಶ ಶೇಕಡ 62ರಷ್ಟಿದೆ. ಅಧ್ಯಯನದಲ್ಲಿ ಲಸಿಕೆಯ ಸೂಕ್ತ ಪ್ರಮಾಣವನ್ನು ಬಳಸಲಾಗಿಲ್ಲ ಎಂದು ಹಲವು ತಜ್ಞರು ಹೇಳಿದ್ದಾರೆ. ಜತೆಗೆ ಕಡಿಮೆ ಪ್ರಮಾಣ ಪಡೆದವರಲ್ಲಿ ಯಾರೊಬ್ಬರೂ 55 ವರ್ಷಕ್ಕಿಂತ ಮೇಲ್ಪಟ್ಟವರಾಗಿರಲಿಲ್ಲ. ಕಡಿಮೆ ವಯಸ್ಸಿನವರಿನಲ್ಲಿ ಸಾಮಾನ್ಯವಾಗಿಯೇ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂದು ತಜ್ಞರು ವಾದಿಸಿದ್ದಾರೆ. ಇದನ್ನು ಒಪ್ಪಿಕೊಂಡಿರುವ ಆಸ್ಟ್ರಾಜೆನೆಕಾ, ಪ್ರಯೋಗದಲ್ಲಿ ಬಳಸಿದ ಕೆಲ ಬಾಟಲುಗಳಲ್ಲಿ ಸರಿಯಾದ ಪ್ರಮಾಣದ ಲಸಿಕೆ ಇರಲಿಲ್ಲ, ಆದ್ದರಿಂದ ಕೆಲವು ಸ್ವಯಂಸೇವಕರು ಅರ್ಧದಷ್ಟು ಪ್ರಮಾಣವನ್ನು ಮಾತ್ರ ಪಡೆದಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಡಿ.31ರವರೆಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರ ರದ್ದು: ಕರೊನಾ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿರುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣವನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. ಸರಕು ಸಾಗಣೆ ಹಾಗೂ ಡಿಜಿಸಿಎ ಇಂದ ಅನುಮೋದಿಸಲಾಗಿರುವ ನಿರ್ದಿಷ್ಟ ಅಂತಾರಾಷ್ಟ್ರೀಯ ವಿಮಾನಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ಕರೊನಾ ಕಾರಣ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣದ ಮೇಲೆ ವಿಧಿಸಲಾಗಿರುವ ನಿರ್ಬಂಧ ನವೆಂಬರ್ 30ರಂದು ಕೊನೆಗೊಳ್ಳಬೇಕಿತ್ತು. ಆದರೆ, ವಿವಿಧ ದೇಶಗಳಲ್ಲಿ ಪ್ರಕರಣಗಳು ಮತ್ತೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ನಿರ್ಬಂಧವನ್ನು ವಿಸ್ತರಿಸಲಾಗಿದೆ. ಆದಾಗ್ಯೂ ಮೇ ತಿಂಗಳಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಮಾನಗಳು ಕಾರ್ಯಾಚರಣೆ ಪ್ರಾರಂಭಿಸಿವೆ. ಹಲವು ದೇಶಗಳ ಜತೆಗಿನ ದ್ವಿಪಕ್ಷೀಯ ಏರ್ ಬಬಲ್ ವ್ಯವಸ್ಥೆಯಲ್ಲೂ ವಿಮಾನಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಲಸಿಕೆಯ ವೆಚ್ಚ ಕೇಂದ್ರ ಭರಿಸಲಿದೆ?:ಕರೊನಾ ಲಸಿಕೆಯ ವ್ಯಾಕ್ಸಿನೇಷನ್ ಯೋಜನೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬಹುದು ಎಂದು ಕೆಲ ಮೂಲಗಳು ವರದಿ ಮಾಡಿವೆ. ಈ ಕುರಿತು ಕೇಂದ್ರ ಸರ್ಕಾರ 2021-22ರ ಬಜೆಟ್​ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದ್ದು, ವ್ಯಾಕ್ಸಿನೇಷನ್ ಯೋಜನೆಯು ಮುಂದಿನ ವರ್ಷ ಫೆಬ್ರವರಿ ಅಂತ್ಯದಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.
ಜಾಗತಿಕವಾಗಿ 6 ಕೋಟಿ ಸೋಂಕು ಪ್ರಕರಣ:ಜಾಗತಿಕ ಕರೊನಾ ಪ್ರಕರಣಗಳ ಸಂಖ್ಯೆ 6 ಕೋಟಿಗೂ ಅಧಿಕವಾಗಿದೆ. ಮೃತಪಟ್ಟವರ ಸಂಖ್ಯೆ 14 ಲಕ್ಷಕ್ಕೇರಿದೆ. ಸದ್ಯ ಪ್ರತಿದಿನ ಸರಾಸರಿ 6 ಲಕ್ಷ ಹೊಸ ಪ್ರಕರಣಗಳು ಹಾಗೂ 10 ಸಾವಿರ ಸಾವುಗಳು ಸಂಭವಿಸುತ್ತಿವೆ. ಭಾರತದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 92.68 ಲಕ್ಷಕ್ಕೇರಿದ್ದು, ಈವರೆಗೆ 1.35 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 86.79 ಲಕ್ಷ ಸೋಂಕಿತರು ಗುಣಮುಖರಾಗಿದ್ದು, ಇನ್ನೂ 4.51 ಲಕ್ಷ ಸಕ್ರಿಯ ಪ್ರಕರಣಗಳಿವೆ.
6 ತಿಂಗಳು ಮುಷ್ಕರ ಇಲ್ಲ:ಕರೊನಾ ನಿರ್ವಹಣೆ ನಿಟ್ಟಿನಲ್ಲಿ ಉತ್ತರಪ್ರದೇಶ ಸರ್ಕಾರ ಕಠಿಣ ನಿಯಮ ಜಾರಿಗೊಳಿಸಿದೆ. ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ)ಯನ್ನು ಬುಧವಾರದಿಂದ ಜಾರಿಗೆ ತರಲಾಗಿದ್ದು, ಇದರ ಅನ್ವಯ ಇನ್ನು 6 ತಿಂಗಳು ರಾಜ್ಯ ಸರ್ಕಾರಿ ನೌಕರರು ಮತ್ತು ನಿಗಮ, ಮಂಡಳಿ ಗಳ ಉದ್ಯೋಗಿಗಳು ಯಾವುದೇ ಮುಷ್ಕರಗಳನ್ನು ನಡೆಸುವಂತಿಲ್ಲ. ಮುಷ್ಕರ, ಪ್ರತಿಭಟನೆಗಳನ್ನು ನಡೆಸಿದರೆ 1000 ರೂ. ದಂಡ, 1 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಲಖನೌ ಜಿಲ್ಲೆಯಲ್ಲಿ ಸಿಆರ್​ಪಿಸಿಯ ಸೆಕ್ಷನ್ 144ಅನ್ನು ಜಾರಿಗೊಳಿಸಲಾಗಿದೆ.
ಲಸಿಕೆ ವಿತರಣೆಗಾಗಿ ಸಂಪೂರ್ಣ ಯೋಜನೆ ತಯಾರಿಸಿ, ಬ್ಲಾಕ್ ಟಾಸ್ಕ್ ಫೋರ್ಸ್ ರಚಿಸಿ ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೂಚಿಸಿದೆ. ಈ ಕುರಿತು ರಾಜ್ಯಗಳಿಗೆ ಪತ್ರ ಬರೆದಿರುವ ರಾಷ್ಟ್ರೀಯ ಆರೋಗ್ಯ ಮಿಷನ್​ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ನಿರ್ದೇಶಕಿ ವಂದನಾ ಗುರ್ನಾ, ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಬಿಟಿಎಫ್ ರಚಿಸಬೇಕು ಹಾಗೂ ಸರ್ಕಾರಿ ಅಧಿಕಾರಿಗಳು, ಎನ್​ಜಿಒಗಳು ಮತ್ತು ಸ್ಥಳೀಯ ಪ್ರಭಾವಿಗಳ ಜತೆ ಸಭೆ ನಡೆಸಿ ಯೋಜನೆ ರೂಪಿಸಿ, ಲಸಿಕೆ ವಿತರಣೆ ಜತೆಗೆ ಸಂಭಾವ್ಯ ಅಡ್ಡಪರಿಣಾಮಗಳೇನಾದರು ಉಂಟಾದರೆ ಅದನ್ನು ಎದುರಿಸುವ ಕ್ರಮಗಳೇನು ಎಂಬ ಬಗ್ಗೆ ವರದಿ ನೀಡಿ ಎಂದೂ ರಾಜ್ಯಗಳಿಗೆ ಕೇಳಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಸಿದ್ಧವಾಗಿರಿಸಿಕೊಳ್ಳಿ ಎಂದು ಸೂಚಿಸಿದೆ. ಎರಡು ದಿನಗಳ ಹಿಂದೆ ಸಿಎಂಗಳ ಜತೆ ನಡೆದ ಸಭೆಯಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು.
ನಾಳೆ ಸೆರಂ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ:ಆಸ್ಟ್ರಾಜೆನೆಕಾ ಹಾಗೂ ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿರುವ ಪುಣೆಯ ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆ ಹಾಗೂ ಲಸಿಕೆ ಉತ್ಪಾದನೆಯ ಯೋಜನೆಯನ್ನು ಅವರು ಪರಿಶೀಲಿಸಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 2 =
Remember me
