1971ರ ‘ಭಾರತ-ಪಾಕಿಸ್ತಾನ ಯುದ್ಧ’ ಅಥವಾ ‘ಬಾಂಗ್ಲಾದೇಶ ಯುದ್ಧ’ದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ನಿರ್ಣಾಯಕ ವಿಜಯ ಸಾಧಿಸಿ ಇಂದಿಗೆ ಐವತ್ತು ವರ್ಷಗಳು ಪೂರ್ಣಗೊಳ್ಳುತ್ತಿವೆ. 65ರಲ್ಲಿ ಚೀನಾ ವಿರುದ್ಧ ಸೋಲು ಕಂಡಿದ್ದ ಭಾರತ, 71ರಲ್ಲಿ ಈ ಅದ್ಭುತ ಗೆಲುವು ಹೇಗೆ ಸಾಧಿಸಿತು? ಬಾಂಗ್ಲಾ ವಿಮೋಚನೆಯಲ್ಲಿ ಏಕೆ ಮತ್ತು ಹೇಗೆ ಪ್ರಮುಖ ಪಾತ್ರ ವಹಿಸಿತು ಎಂಬ ಸಂಗತಿಗಳು ಇಂದಿಗೂ ಕುತೂಹಲಕರ. ಈ ವಿಜಯದ ಕ್ಷಣಗಳು ಮತ್ತು ಆಗಿನ ಸನ್ನಿವೇಶಗಳನ್ನು ತಜ್ಞರು ವಿಜಯವಾಣಿ-ದಿಗ್ವಿಜಯ ಕ್ಲಬ್​ಹೌಸ್ ಸಂವಾದದಲ್ಲಿ ತೆರೆದಿಟ್ಟಿದ್ದಾರೆ.
ಗೆಲುವಿನ ಪರಿಣಾಮಗಳು:ಪಾಕಿಸ್ತಾನದ ಸಹಕಾರದಿಂದ ಚೀನಾ ನಮ್ಮ ಪೂರ್ವೇತ್ತರ ರಾಜ್ಯಗಳನ್ನು ದೇಶದ ಮುಖ್ಯ ಭೂಭಾಗದಿಂದ ಕತ್ತರಿಸಲು ಪ್ರಯತ್ನಿಸುವ ಸಾಧ್ಯತೆಯಿತ್ತು. ಬಾಂಗ್ಲಾದೇಶದ ವಿಮೋಚನೆಯಿಂದಾಗಿ ಈಶಾನ್ಯ ಭಾರತಕ್ಕಿದ್ದ ದೊಡ್ಡ ಗಂಡಾಂತರ ದೂರವಾಯಿತು.
ಐತಿಹಾಸಿಕ ಕ್ಷಣ:ಹದಿಮೂರು ದಿನಗಳ ಯುದ್ಧದ ನಂತರ 1971 ಡಿಸೆಂಬರ್ 16ರ ಸಂಜೆ 4.31ಕ್ಕೆ ಪಾಕ್ ಸೇನಾಧಿಕಾರಿ ಜನರಲ್ ಎ.ಎ.ಕೆ. ನಿಯಾಜಿ ‘ಶರಣಾಗತಿಯ ಪತ್ರ’ಕ್ಕೆ ಸಹಿಹಾಕಿದರು. ಪಾಕಿಸ್ತಾನದ ಸಂಪೂರ್ಣ ಸೋಲು ಮತ್ತದರ ವಿಭಜನೆ ಸ್ವತಂತ್ರ ಭಾರತದ ಮೊದಲ ಹಾಗೂ ಇದುವರೆಗಿನ ಏಕೈಕ ನಿರ್ಣಾಯಕ ಗೆಲುವು ಮತ್ತು ಶರಣಾಗತಿ ಪತ್ರ ಭಾರತ ತನ್ನ ಇದುವರೆಗಿನ ಇತಿಹಾಸದಲ್ಲಿ ಪಡೆದುಕೊಂಡ ಏಕೈಕ ಲಿಖಿತ ವಿಜಯ ದಾಖಲೆ!
ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನವಿರೋಧಿ ಆಂದೋಲನ ಆರಂಭವಾಗಿದ್ದು 1950-51ರ ವರ್ಷದಲ್ಲಿ. ಮೊದಲಿಗೆ ಭಾಷಾವಿಷಯದಲ್ಲಿ ಈ ಆಂದೋಲನ ಆರಂಭವಾದರೂ, ಭಾಷಾವೈಷಮ್ಯ ದಿನೇದಿನೇ ಉಗ್ರವಾಗುತ್ತ ಸಾಗಿ ಅದಕ್ಕೆ ಆರ್ಥಿಕ ವೈಷಮ್ಯವೂ ಸೇರಿಕೊಂಡು ಪರಿಸ್ಥಿತಿಯನ್ನು ಮತ್ತಷ್ಟು ಕ್ಲಿಷ್ಟಗೊಳಿಸಿತು. ಪೂರ್ವ ಪಾಕಿಸ್ತಾನವನ್ನು ಪಶ್ಚಿಮ ಪಾಕಿಸ್ತಾನ ತನ್ನ ವಸಾಹತುವಿನಂತೆ ಶೋಷಿಸತೊಡಗಿತು. ದಬ್ಬಾಳಿಕೆ ಪರಿಣಾಮ ಆಂದೋಲನ ತೀವ್ರಗೊಂಡಿತು.
1970ರ ಡಿಸೆಂಬರ್​ನಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಸಂಭವಿಸಿದ ಭೀಕರ ಚಂಡಮಾರುತದಿಂದ 5 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಆ ಸಮಯದಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯೂ ಘೋಷಣೆ ಆಗಿದ್ದವು. ಆದರೆ, ಚಂಡಮಾರುತದಿಂದ ತೀವ್ರ ಹಾನಿಯಾದಾಗ ಪಶ್ಚಿಮ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನಕ್ಕೆ ಪರಿಹಾರ ಸಾಮಗ್ರಿ ಕಳುಹಿಸುವ ಮೊದಲೇ ಭಾರತದ ನೆರವು ತಲುಪಿತ್ತು. ‘ಇಂಥ ಹೊತ್ತಲ್ಲಿ ನಾವು ಚುನಾವಣೆ ಎದುರಿಸುವುದು ಸಾಧ್ಯವಿಲ್ಲ, ಅದನ್ನು ಮುಂದೂಡಿ’ ಎಂದು ಪೂರ್ವ ಪಾಕಿಸ್ತಾನಿಯರು, ಮುಖ್ಯವಾಗಿ ಅವಾಮಿ ಲೀಗ್ ಕೇಳಿಕೊಂಡಾಗ ಆ ಬೇಡಿಕೆಯನ್ನು ಮಿಲಿಟರಿ ಸರ್ಕಾರ ತಳ್ಳಿಹಾಕಿತು. ಹಾಗಾಗಿ, ನಮಗೆ ಶತ್ರುಗಳು ಭಾರತೀಯರಲ್ಲ; ಪಶ್ಚಿಮ ಪಾಕಿಸ್ತಾನಿಯರೇ ಎಂಬುದು ಪೂರ್ವ ಪಾಕಿಸ್ತಾನಿಯರಿಗೆ ಮನದಟ್ಟಾಯಿತು. ಇಲ್ಲಿಂದ ಅವರು ಭಾರತದ ಮೇಲೆ ವಿಶ್ವಾಸ ತಳೆಯುವಂತಾಯಿತು. ಪೂರ್ವ ಪಾಕಿಸ್ತಾನ ಪ್ರತ್ಯೇಕವಾಗಿ, ಬಾಂಗ್ಲಾದೇಶ ಉದಯವಾದರೆ ಈಶಾನ್ಯ ಭಾರತದೊಂದಿಗೆ ಸಂಪರ್ಕ ಜಾಲ ವಿಸõತಗೊಳಿಸಲು ಅನುಕೂಲವಾಗುತ್ತದೆ. ಮುಖ್ಯವಾಗಿ, ಆಗಲೇ, 65ರ ಸೋಲಿನ ಕಹಿ ಅನುಭವಿಸಿದ್ದ ಭಾರತ ಚೀನಾವನ್ನು ನಿಯಂತ್ರಿಸಲು ಈ ಹೆಜ್ಜೆ ಪೂರಕವಾಗುತ್ತದೆ ಎಂದು ನಿರ್ಧರಿಸಿ ಪೂರ್ವ ಪಾಕಿಸ್ತಾನಿಯರ ಪರವಾಗಿ ಯುದ್ಧ ಮಾಡಲು ಮುಂದಾಯಿತು.
|ಎ.ರಘುನಾಥಬಾಂಗ್ಲಾ ಯುದ್ಧದಲ್ಲಿ ಪಾಲ್ಗೊಂಡಿದ್ದ ನಿವೃತ್ತ ವಿಂಗ್ ಕಮಾಂಡರ್, ವೀರಚಕ್ರ ಪುರಸ್ಕೃತ
ಯುದ್ಧವೆಂದರೆ ಬರೀ ಅದು ಸೇನಾಪಡೆಗಳಿಂದ ನಡೆಯುವಂಥದ್ದಲ್ಲ. ಸಂಬಂಧಪಟ್ಟ ಎಲ್ಲ ವ್ಯವಸ್ಥೆಗಳು ಇದಕ್ಕೆ ಬೆಂಬಲಿಸಬೇಕು, ಸನ್ನದ್ಧವಾಗಿ ಇರಬೇಕು. ಆಗಲೇ ಗೆಲುವು ಸಾಧ್ಯ. 1971ರ ಗೆಲುವಿಗೂ ಈ ಸಂಘಟಿತ ಹೋರಾಟವೇ ಕಾರಣ.
1971ರ ಮಾರ್ಚ್-ಏಪ್ರಿಲ್ ತಿಂಗಳಿಂದಲೇ ಪೂರ್ವ ಪಾಕಿಸ್ತಾನದಿಂದ ಭಾರತಕ್ಕೆ ದೊಡ್ಡ ಸಂಖ್ಯೆಯಲ್ಲಿ ನಿರಾಶ್ರಿತರು ಆಗಮಿಸಿದ್ದರು. ಇದೊಂದು ವಿಚಿತ್ರ ಸಮಸ್ಯೆಯಾಗಿ ಪರಿಣಮಿಸಿತ್ತು. ನಾನು ಬಾಂಬರ್ ಫೋರ್ಸ್​ನಿಂದ ಬಂದವನು. 1971ರ ಆಗಸ್ಟ್​ನಲ್ಲಿ ಹೈದರಾಬಾದಿನಲ್ಲಿ ನಿಯೋಜಿತನಾಗಿದ್ದೆ. ಅಕ್ಟೋಬರ್​ನಲ್ಲಿ ಹೈದರಾಬಾದಿನಿಂದ ಗೋರಖಪುರಕ್ಕೆ ಕಳುಹಿಸಿದರು. ಯುದ್ಧದ ಸಿದ್ಧತೆ ಆಗಲೇ ತೀವ್ರತೆ ಪಡೆದುಕೊಂಡಿತ್ತು. ಹೊಸ ಬಗೆಯ ಬಾಂಬ್​ಗಳ ತಯಾರಿಕೆಯ ಕಾರ್ಯವೂ ನಡೆಯುತ್ತಿತ್ತು. ಈ ಬಾಂಬ್​ಗಳನ್ನು ಬಳಸುವುದು ಹೇಗೆ ಎಂಬ ತರಬೇತಿಯನ್ನು ನಮಗೆ ನೀಡಲಾಯಿತು. ಬಳಿಕ, ಜಾಮನಗರ್, ಜೋಧಪುರ್​ಕ್ಕೆ ಕಳುಹಿಸಿದರು. ಪಶ್ಚಿಮ ಪಾಕಿಸ್ತಾನದ ವಾಯುನೆಲೆಗಳ ಮೇಲೆ, ಅದರಲ್ಲೂ ಎತ್ತರ ದಲ್ಲಿ ಹಾರಾಡದೆ, 100-200 ಅಡಿ ಅಂತರದಲ್ಲಿ ದಾಳಿ ನಡೆಸಬೇಕಿತ್ತು. ಇದು ಭಾರಿ ಚಾಕಚಕ್ಯತೆ ಬಯಸುವ ಕೆಲಸ.
ನವೆಂಬರ್ ತಿಂಗಳಲ್ಲೇ ನಾವು ಯುದ್ಧಕ್ಕೆ ತಯಾರಾಗಿದ್ದೆವು. ಡಿಸೆಂಬರ್ 3ರಂದು ಸಂಜೆ 5 ಗಂಟೆಗೆ ಸಂದೇಶ ಬಂತು. ಕಾರ್ಯಾಚರಣೆಗೆ ಸೂಚಿಸಿದ್ದ ಪ್ರದೇಶಕ್ಕೆ ತೆರಳಿದೆವು. ಇದಕ್ಕೂ ಮುನ್ನ, ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ ಅಂಡರ್​ಗ್ರೌಂಡ್ ಆಪರೇಷನ್​ನಲ್ಲಿ ತೊಡಗಿದ್ದೆವು. ಇದು ಕೂಡ ಸವಾಲಿನಿಂದ ಕೂಡಿತ್ತು.
ಮೊದಲು ಪೈಲಟ್ ಗೌತಮ್ೊಂದಿಗೆ ಅಂಬಾಲಾಕ್ಕೆ ಕಳುಹಿಸಿದರು. ರಾತ್ರಿಯ ಕತ್ತಲಿನಲ್ಲಿ ಪಾಕ್ ವಾಯುನೆಲೆ ಮೇಲೆ ದಾಳಿ ಮಾಡಬೇಕಿತ್ತು. ಸಾಯಂಕಾಲ 6 ಗಂಟೆಗೆ ಅಂಬಾಲಾ ತಲುಪಿದೆವು. ಏರ್ ಕ್ರಾಫ್ಟ್​ನಿಂದ ಇಳಿಯುವ ಹೊತ್ತಿಗೆ ಪಾಕ್​ನಿಂದ ಎಚ್ಚರಿಕೆ ಸಂದೇಶ ಬಂತು. ಪೊದೆಗಳ ನಡುವೆ ಎರಡು ಗಂಟೆ ಇದ್ದು, ತಡರಾತ್ರಿ ಸರ್ಗೋದಾ ಏರ್​ಬೇಸ್​ಗೆ ಬಾಂಬ್ ಹಾಕಿ ವಾಪಸ್ ಬಂದೆವು. ಡಿ.4ರಂದು ರಾತ್ರಿ ಮತ್ತೆ ಬಾಂಬ್ ದಾಳಿ ನಡೆಸಿದಾಗ, ಪಾಕಿಸ್ತಾನದಿಂದ ಪ್ರತಿದಾಳಿ ನಡೆಯಿತು. ಆದರೆ ಅದು ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ.

ಡಿ.7ರಂದು ಬೆಳಗ್ಗೆ ಹುಮ್ನಾ ಏರ್​ಬೇಸ್ ಮೇಲೆ ದಾಳಿ ಮಾಡಿದೆವು. ಆ ಬಳಿಕ ಸುಲೇಮಾನ್ ಡ್ಯಾಮ್ ಮೇಲೆ ಬಾಂಬ್ ಹಾಕುವ ಸರದಿ. ಡಿ.9ರಂದು ಈ ಕಾರ್ಯಾಚರಣೆ ನಡೆಯಿತು. ಅಂಬಾಲಾದಿಂದ ಸುಲೇಮಾನ್ ಡ್ಯಾಮ್​ಗೆ ತೆರಳಿ ಬಾಂಬ್ ಹಾಕುವಲ್ಲಿ ಯಶಸ್ವಿಯಾದೆವು. ಆದರೆ, ಇದು ಅಪಾಯಕಾರಿ ಕಾರ್ಯಾಚರಣೆಯಾಗಿತ್ತು. ಅಂಬಾಲಾಗೆ ವಾಪಸ್ ಬರುವವರೆಗೆ ಶತ್ರು ವಿಮಾನಗಳು ಹಿಂಬಾಲಿಸಿದವಾದರೂ, ನಾವು ಸುರಕ್ಷಿತವಾಗಿ ಇಳಿದೆವು. ಕಾರಣ, ಶತ್ರುವಿಮಾನಗಳನ್ನು ಎದುರಿಸಲು ಅದಾಗಲೇ ಬೇರೆ ವಿಮಾನಗಳನ್ನು ನಿಯೋಜಿಸಲಾಗಿತ್ತು.
ಡಿ.9ರಂದು ರಾತ್ರಿ ಮತ್ತೊಂದು ಮಹತ್ವದ ಕಾರ್ಯಾಚರಣೆ. ಪಾಕಿಸ್ತಾನ ಒಳಭಾಗಕ್ಕೆ ನುಗ್ಗಿ, ಅಲ್ಲಿನ ಶಕೇಸರ್ ರಡಾರ್ ಯೂನಿಟ್ ಬಳಿ ಸುಳಿದಾಡಿ, ವಾಪಸ್ ಬರಬೇಕು ಎಂಬ ಸೂಚನೆಯನ್ನು ನಮಗೆ ನೀಡಲಾಗುತ್ತು. ಏಕೆ, ಏನು ಅಂತ ಪ್ರಶ್ನೆ ಮಾಡುವ ಸನ್ನಿವೇಶ ಆಗಿರಲಿಲ್ಲ. ಪೈಲಟ್ ವೈ.ಶಂಕರ್ ರಾವ್ ಅವರೊಂದಿಗೆ ಗೋರಖಪುರದಿಂದ ಅಂಬಾಲಾಕ್ಕೆ ಹೋದೆವು. ಅಲ್ಲಿಂದ ಶಕೇಸರ್ ರಡಾರ್ ಯೂನಿಟ್ ಬಳಿ ಹಾರಾಟ. ಅಲ್ಲಿಂದ ಮಾಂಟ್ ಗೋಮರಿ ರೈಲ್ವೆ ಯಾರ್ಡ್ ಮೇಲೆ ನಾಲ್ಕು ಬಾಂಬ್ ಹಾಕಿದೆವು. ಲಾಹೋರಗೆ ಸಂಪರ್ಕ ಕಲ್ಪಿಸುವ ರೈಲ್ವೆ ಹಳಿ ಮೇಲೆ ಹಲವು ಬಾಂಬ್ ಹಾಕಿದ ಪರಿಣಾಮ, ಅಲ್ಲಿನ ಸೇನಾತುಕಡಿಗಳು ರೈಲ್ವೆಮಾರ್ಗದಿಂದ ತಲುಪುವ ಸಾಧ್ಯತೆಗೆ ಕಡಿವಾಣ ಬಿತ್ತು.
ಈ ನಡುವೆ ಡಿ.9ರಂದು ರಾತ್ರಿ ಜಮ್ಮು-ಪಠಾಣಕೋಟ್ ಬಳಿ ಪಾಕಿಸ್ತಾನಿ ಪಡೆಗಳು ನಮ್ಮ ಸೈನಿಕರನ್ನು ಸುತ್ತುವರಿದಿದ್ದವು. ಆ ಸನ್ನಿವೇಶದಲ್ಲಿ ಶತ್ರುಸೈನಿಕರನ್ನು ಚದುರಿಸಲು ಮತ್ತು ನಮ್ಮ ಸೈನಿಕರು ದಾಳಿಗೆ ಮುನ್ನುಗ್ಗಲು ಅನುವು ಮಾಡಿಕೊಡುವ ಉದ್ದೇಶದಿಂದ ಕಾರ್ಪೆಟ್ ಬಾಂಬಿಂಗ್ ಮಾಡಲಾಯಿತು. ಈ ಎಲ್ಲ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದಕ್ಕೆ ವೀರಚಕ್ರದಿಂದ ಗೌರವಿಸಲಾಯಿತು. ಅದೇನಿದ್ದರೂ, ಡಿಫೆನ್ಸ್ ರೀಸರ್ಚ್ ಲ್ಯಾಬೋರೋಟರಿಗಳು 6 ತಿಂಗಳಲ್ಲಿ ಹೊಸ ಬಾಂಬ್​ಗಳನ್ನು ತಯಾರಿಸಿದ್ದು, ರಡಾರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು ಮತ್ತು ನಾವು ಆ ಬಾಂಬ್​ಗಳ ಬಳಕೆ ಕಲಿತದ್ದೆಲ್ಲ ರೋಚಕ ಕ್ಷಣಗಳು. ಇಷ್ಟೆಲ್ಲ ಹೋರಾಟದ ಬಳಿಕ ಕಡೆಗೂ, ಡಿ.16ರಂದು ಢಾಕಾ ವಿಶ್ವವಿದ್ಯಾಲಯದ ಮೇಲೆ ನಡೆದ ದಾಳಿಯ ಬಳಿಕ ಪಾಕಿಸ್ತಾನ ಶರಣಾಯಿತು.
ಹೆಲಿಕಾಪ್ಟರ್‌ ದುರಂತ ನಡೆದ ಗ್ರಾಮ ದತ್ತುಪಡೆದ ಸೇನೆ: ಗ್ರಾಮಸ್ಥರನ್ನು ದೇವರು ಎಂದು ಬಣ್ಣಿಸಿ ಹೀಗೊಂದು ನಮನ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − one =
Remember me
