ಸಮಕಾಲೀನ ರಾಷ್ಟ್ರ ರಾಜಕಾರಣದ ಪ್ರಮುಖರಲ್ಲೊಬ್ಬರಾದ ಮುಲಾಯಂ ಸಿಂಗ್ ಯಾದವ್ ಸುದೀರ್ಘ ಕಾಲ ಶಾಸಕ, ಸಂಸದರಾಗಿದ್ದರು. ರಾಜಕಾರಣದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದ ಅವರು, ಕೇಂದ್ರದಲ್ಲೂ ವಿವಿಧ ಸಚಿವ ಸ್ಥಾನ ನಿಭಾಯಿಸಿದ್ದರು.
ಕಳೆದ ಕೆಲ ವರ್ಷಗಳಿಂದ ನಿತ್ಯದ ರಾಜಕಾರಣದಿಂದ ದೂರವಿದ್ದ ಮುಲಾಯಂ ಅವರು ಪುತ್ರ ಅಖಿಲೇಶ್ ಯಾದವ್​ಗೆ ಪಕ್ಷದ ಜವಾಬ್ದಾರಿ ವಹಿಸಿದ್ದರು. 2017ರಿಂದ ಮುಲಾಯಂ ಮಾರ್ಗದರ್ಶನದಲ್ಲಿ ಅಖಿಲೇಶ್ ಪಕ್ಷ ಮುನ್ನಡೆಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಕಾರ್ಯಕರ್ತರ ಮಧ್ಯೆ ‘ನೇತಾಜಿ’ ಎಂದೇ ಗುರುತಿಸಲ್ಪಟ್ಟಿದ್ದ ಮುಲಾಯಂ, ರಾಜ್ಯದಲ್ಲಿ ಯಾದವ ಸಮುದಾಯದ ದೊಡ್ಡ ನಾಯಕರಾಗಿ ಗಮನೆಸೆಳೆದವರು. 1991ರಲ್ಲಿ ಕರಸೇವಕರ ವಿರುದ್ಧ ಪೊಲೀಸ್ ಲಾಠಿಚಾರ್ಜ್​ಗೆ ಆದೇಶ ನೀಡಿದ್ದ ಹಿನ್ನೆಲೆ ಹಾಗೂ ಮುಸ್ಲಿಂ ತುಷ್ಟೀಕರಣದ ರಾಜಕಾರಣಕ್ಕಾಗಿ ವಿರೋಧಿಗಳು ಅವರನ್ನು ‘ಮೌಲಾನಾ ಮುಲಾಯಂ’ ಎಂದೇ ಟೀಕಿಸುತ್ತಿದ್ದರು.
2019ರಲ್ಲಿ ಸಂಸತ್ ಅಧಿವೇಶನ ವೇಳೆ ಮುಲಾಯಂ ಅವರು ಪ್ರಧಾನಿ ಮೋದಿ ಆಡಳಿತ ಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಲೋಕಸಭೆ ಚುನಾವಣೆ ಬಳಿಕ ಅವರು ಮತ್ತೆ ಪ್ರಧಾನಿಯಾಗಿ ಮರಳಬೇಕೆಂಬ ಆಶಯ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ಪ್ರತಿಪಕ್ಷಗಳನ್ನು ದಂಗುಬಡಿಸಿತ್ತು. ಇತರೆ ಪ್ರಾದೇಶಿಕ ಪಕ್ಷಗಳ ನಾಯಕರಂತೆ ಮುಲಾಯಂ ಕೂಡ ಅಧಿಕಾರಕ್ಕಾಗಿ ಹೊಂದಾಣಿಕೆ ರಾಜಕಾರಣ ಮಾಡಿದವರೇ. ಅನುಕೂಲಕರ ಸಂದರ್ಭಗಳಲ್ಲಿ ಬಿಜೆಪಿ, ಬಹುಜನ ಸಮಾಜವಾದಿ ಹಾಗೂ ಕಾಂಗ್ರೆಸ್ ಜತೆ ಕೈಜೋಡಿಸಿ ಅಧಿಕಾರ ಅನುಭವಿಸಿದ್ದಾರೆ. 1939ರ ನವೆಂಬರ್ 22ರಂದು ಜನಿಸಿದ ಮುಲಾಯಂ ಸಿಂಗ್ 1967ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಮೂಲತಃ ಕುಸ್ತಿಪಟುವಾಗಿದ್ದ ಮುಲಾಯಂ, ಎರಡನೇ ಅವಧಿಯ ಶಾಸಕರಾಗಿದ್ದಾಗ, ಆಗಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೊಷಿಸಿದ್ದರು.
ರಾಜಕೀಯದ ಆರಂಭಿಕ ದಿನಗಳಲ್ಲಿ ಸೋಷಿಯಲಿಸ್ಟ್ ಚಳವಳಿಯಲ್ಲಿ ಸಕ್ರಿಯವಾಗಿದ್ದ ಮುಲಾಯಂ, ಲೋಹಿಯಾ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ತುರ್ತು ಪರಿಸ್ಥಿತಿಯಲ್ಲಿ ಸಮಾಜವಾದಿ ಮನಸ್ಥಿತಿಯ ನಾಯಕರೊಂದಿಗೆ ಸೇರಿಕೊಂಡು ಆಂದೋಲನ ರೂಪಿಸಿದ್ದರು; ಜೈಲುವಾಸ ಅನುಭವಿಸಿದ್ದರು. ಒಟ್ಟು 10 ಬಾರಿ ಶಾಸಕರಾಗಿ ಮತ್ತು 7 ಬಾರಿ ಸಂಸದರಾದ ದಾಖಲೆ ಅವರದು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಲಾಯಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಮೊದಲ ಪತ್ನಿ ಮಾಲತಿ ದೇವಿ 2003ರಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಮುಲಾಯಂ ಸಿಂಗ್ ಅದೇ ವರ್ಷ ಸಾಧನಾ ಗುಪ್ತಾ ಎಂಬವರನ್ನು ವಿವಾಹವಾಗಿದ್ದರು. ಮುಲಾಯಂ ಮೊದಲ ಪತ್ನಿಯ ಪುತ್ರ ಅಖಿಲೇಶ್ ಯಾದವ್​ಗೆ ಸಮಾಜವಾದಿ ಪಕ್ಷದಲ್ಲಿ ಹೆಚ್ಚಿನ ಪ್ರಾಧಾನ್ಯ ನೀಡಿದಂತೆ ತಮ್ಮ ಮಗನಿಗೂ ನೀಡಬೇಕೆಂದು ಸಾಧನಾ ಗುಪ್ತಾ ಬಯಸಿದ್ದರು. ಆದರೆ, ಇದಕ್ಕೆ ಅಖಿಲೇಶ್ ಅವಕಾಶ ನೀಡಿರಲಿಲ್ಲ. ಈ ಕಾರಣದಿಂದಾಗಿ ಕೌಟುಂಬಿಕ ಆಂತರಿಕ ಕಲಹಗಳು ಜೋರಾಗಿ, ಅದು ಪಕ್ಷದ ಮೇಲೂ ಪರಿಣಾಮ ಬೀರಿತ್ತು. ಕಳೆದೆರಡು ಚುನಾವಣೆ ಫಲಿತಾಂಶದ ಮೇಲೂ ಈ ಕಲಹದ ಕರಿನೆರಳಿತ್ತು. ಮುಲಾಯಂ ಸೋದರ ಶಿವಪಾಲ್ ಯಾದವ್ ಮತ್ತು ಅಖಿಲೇಶ್ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಮುಲಾಯಂಗೆ ಸಾಧ್ಯವಾಗಿರಲಿಲ್ಲ. ಈಗ ಶಿವಪಾಲ್ ತಮ್ಮದೇ ಪಕ್ಷ ಕಟ್ಟಿಕೊಂಡಿದ್ದಾರೆ.
1989ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಮುಲಾಯಂ, ಮೊದಲಿಗೆ ಸೋಷಿಯಲಿಸ್ಟ್ ಪಾರ್ಟಿ ಹುಟ್ಟುಹಾಕಿದ್ದರು. 1992ರಲ್ಲಿ, ಸಮಾಜವಾದಿ ಪಕ್ಷ ಸ್ಥಾಪಿಸಿದರು. 1993ರಲ್ಲಿ, ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆಗಳಿಗಾಗಿ ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು. ಕಾಂಗ್ರೆಸ್ ಮತ್ತು ಜನತಾದಳದ ಬೆಂಬಲದೊಂದಿಗೆ ಎರಡನೇ ಬಾರಿ ಯಾದವ್ ಮುಖ್ಯಮಂತ್ರಿಯಾದರು. 2002ರಲ್ಲಿ ಬಿಜೆಪಿ-ಬಹುಜನ ಸಮಾಜವಾದಿ ಪಕ್ಷ ಮಾಯಾವತಿ ನೇತೃತ್ವದಲ್ಲಿ ಸರ್ಕಾರ ರಚಿಸಿತು. 25 ಆಗಸ್ಟ್ 2003ರಂದು ಬಿಜೆಪಿ ಈ ಸರ್ಕಾರದಿಂದ ಹೊರಬಂತು ಮತ್ತು ಬಹುಜನ ಸಮಾಜ ಪಕ್ಷದ ಹಲವು ಬಂಡಾಯ ಶಾಸಕರು ಮುಲಾಯಂಸಿಎಂ ಆಗಲು ಅವಕಾಶ ಮಾಡಿದರು. ಹೀಗಾಗಿ, 2003ರಲ್ಲಿ 3ನೇ ಬಾರಿಗೆ ಸಿಎಂ ಆದ್ದರು.
ಮುಲಾಯಂ ಭಾರತೀಯ ರಾಜ ಕಾರಣದ ಧೀಮಂತ ನಾಯಕ ಮತ್ತು ತಳಮಟ್ಟದ ನಾಯಕ, ದುರ್ಬಲ ವರ್ಗಗಳ ಅಭ್ಯುದಯಕ್ಕಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಮುಲಾಯಂಜೀ ಜತೆಗಿನ ಸುದೀರ್ಘ ಒಡನಾಟದಲ್ಲಿ ರಾಮಜನ್ಮಭೂಮಿ ಹೋರಾಟದ ಸಂದರ್ಭದಲ್ಲಿನ ಅನೇಕ ಸಂವಾದಗಳು ನೆನಪಾಗುತ್ತಿದೆ. ಸೈದ್ಧಾಂತಿಕವಾಗಿ ಭಿನ್ನವಾಗಿದ್ದರೂ, ಪರಸ್ಪರ ಗೌರವದಿಂದ ನಡೆದುಕೊಂಡಿದ್ದೆವು.
ಎಲ್.ಕೆ. ಆಡ್ವಾಣಿ, ಬಿಜೆಪಿ ಹಿರಿಯ ನಾಯಕ
ನನ್ನ ಬಹುಕಾಲದ ಸಹೋದ್ಯೋಗಿ ಮುಲಾಯಂ ನಿಧನದಿಂದ ತೀವ್ರ ದುಃಖವಾಗಿದೆ. ಜಾತ್ಯತೀತ ಮತ್ತು ಸಮಾಜವಾದಿ ಸಿದ್ಧಾಂತಗಳಿಗೆ ಬದ್ಧರಾಗಿದ್ದ ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ.
ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಮುಲಾಯಂ ಸಿಂಗ್ ಯಾದವ್ ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ರಾಷ್ಟ್ರವು ಮುತ್ಸದ್ದಿ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಮುಲಾಯಂಸಿಂಗ್ ಉತ್ತರ ಪ್ರದೇಶದಲ್ಲಿ ಕೋಮುವಾದದ ವಿರುದ್ಧ ಪ್ರಬಲ ಶಕ್ತಿಯಾಗಿದ್ದರು. ಅವರ ಕುಟುಂಬ ಹಾಗೂ ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿ.
ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ
ಮುಲಾಯಂ ನಿಧನದಿಂದ ರಾಷ್ಟ್ರ ರಾಜಕಾರಣಕ್ಕೆ ದೊಡ್ಡ ನಷ್ಟವಾಗಿದೆ.
ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − one =
Remember me
