ಪಟನಾ:ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರ ಕಣದಲ್ಲಿ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ಬಿರುಸುಗೊಂಡಿದೆ. ಎರಡನೇ ಹಂತದ ಮತದಾನ ನಡೆಯುವ ಜಿಲ್ಲೆಗಳಲ್ಲಿ ಎನ್​ಡಿಎ ಮೈತ್ರಿಕೂಟದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ರ‍್ಯಾಲಿ ನಡೆಸಿದ್ದಾರೆ. ಮಹಾಮೈತ್ರಿ ಪರ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಹಾಗೂ ರಾಹುಲ್ ಗಾಂಧಿ ಪ್ರಚಾರ ನಡೆಸಿದ್ದಾರೆ.
ಬಾಘಾ, ಛಾಪ್ರಾ ಹಾಗೂ ಸಮಷ್ಟಿಪುರದಲ್ಲಿ ಭಾನುವಾರ ನಾಲ್ಕು ರ‍್ಯಾಲಿ ನಡೆಸಿದ ಪ್ರಧಾನಿ ಮೋದಿ, ವಿಪಕ್ಷಗಳ ವಿರುದ್ಧ ಹರಿಹಾಯ್ದರು. ‘ಉತ್ತರಪ್ರದೇಶದಲ್ಲಿ ನಾಲ್ಕು ವರ್ಷಗಳ ಹಿಂದೆ ಎನ್​ಡಿಎ ಇಬ್ಬಿಬ್ಬರು ಯುವರಾಜರನ್ನು ಮಣಿಸಿತ್ತು. ಈಗ ಅದೇ ರೀತಿ ಬಿಹಾರದ ಇಬ್ಬರು ಯುವರಾಜರೂ ಸಹ ಸೋಲು ಅನುಭವಿಸಲಿದ್ದಾರೆ ಎಂದರು. ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್​ರ ಮೈತ್ರಿ ಸೋಲು ಕಂಡಿತ್ತು. ಈಗ ರಾಹುಲ್- ತೇಜಸ್ವಿ ಯಾದವ್ ಮೈತ್ರಿಯೂ ಸೋಲಲಿದೆ ಎಂದು ಪರೋಕ್ಷವಾಗಿ ಮೋದಿ ಹೇಳಿದರು. ಪ್ರಸ್ತುತ ಬಿಹಾರದಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ. ಆದರೆ ಮತ್ತೊಂದು ಬದಿಯಲ್ಲಿ ಇಬ್ಬರು ಯುವರಾಜರಿದ್ದಾರೆ. ಡಬಲ್ ಇಂಜಿನ್​ನ ಎನ್​ಡಿಎ ಸರ್ಕಾರ ಬಿಹಾರದ ಅಭಿವೃದ್ಧಿಗೆ ಬದ್ಧವಾಗಿದೆ. ಆದರೆ ಯುವರಾಜರು ತಮ್ಮ ಸಿಂಹಾಸನ ಉಳಿಸಿಕೊಳ್ಳಲು ಮಾತ್ರ ಹೋರಾಡುತ್ತಿದ್ದಾರೆ ಎಂದು ಮೋದಿ ಟೀಕಿಸಿದರು.
ಪುಲ್ವಾಮಾ ದಾಳಿ ಕುರಿತು ವಿಪಕ್ಷಗಳ ವಿರುದ್ಧ ಎರಡನೇ ದಿನವೂ ವಾಗ್ದಾಳಿ ಮುಂದುವರಿಸಿದ್ದ ಮೋದಿ, ಎರಡು ದಿನಗಳ ಹಿಂದೆ ನಮ್ಮ ನೆರೆಯ ದೇಶ ಪುಲ್ವಾಮಾದ ಸತ್ಯವನ್ನು ಒಪ್ಪಿಕೊಂಡಿತು. ಇದರಿಂದ ವದಂತಿಗಳನ್ನು ಹರಡುತ್ತಿದ್ದ ಜನರ ಮುಖವಾಡ ಬಯಲಾಗಿದೆ. ದೇಶದ ವೀರ ಪುತ್ರರು ಮತ್ತು ಹೆಣ್ಣುಮಕ್ಕಳ ಶೌರ್ಯವನ್ನು ಎಲ್ಲಿಯೂ ಅನುಮಾನಿಸಿಲ್ಲ. ಆದರೆ ಅಧಿಕಾರ ಮತ್ತು ಸ್ವಾರ್ಥದ ರಾಜಕಾರಣ ಮಾಡುವವರು ವದಂತಿಗಳನ್ನು ಹರಡಲು ಪ್ರಯತ್ನಿಸಿದರು. ದುಃಖ ವ್ಯಕ್ತಪಡಿಸದೇ ನಮ್ಮ ಸೈನಿಕರ ಸ್ಥೈರ್ಯವನ್ನು ಕುಗ್ಗಿಸಲು ಪ್ರಯತ್ನಿಸಿದರು ಎಂದು ಮೋದಿ ಕಿಡಿಕಾರಿದ್ದಾರೆ.
ಎನ್​ಡಿಎ ಮೈತ್ರಿಕೂಟದ ಪರ ಪ್ರಧಾನಿ ಮೋದಿ ಕಳೆದ ಎರಡು ದಿನಗಳಲ್ಲಿ ಒಟ್ಟು 7 ರ್ಯಾಲಿಗಳನ್ನು ನಡೆಸಿದ್ದಾರೆ. ರಕ್ಷಣಾ ಸಚಿವ ರಾಜನಾಥ ಸಿಂಗ್, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಗಿರಿರಾಜ್ ಸಿಂಗ್ ಮತ್ತು ಅನುರಾಗ್ ಠಾಕೂರ್ ಸೇರಿ ಹಲವು ನಾಯಕರು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಎರಡನೇ ಹಂತದ ಬಿಹಾರ ವಿಧಾನಸಭೆ ಚುನಾವಣಾ ಪ್ರಚಾರ ಭಾನುವಾರ ಸಂಜೆ ಅಂತ್ಯಗೊಂಡಿದೆ. 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಲಿದೆ. 1,463 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಭವಿಷ್ಯವನ್ನು ಸುಮಾರು 2.85 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. 1,316 ಪುರುಷರು ಹಾಗೂ 146 ಮಹಿಳೆಯರು ಹಾಗೂ ಓರ್ವ ತೃತಿಯ ಲಿಂಗಿ ಸ್ಪರ್ಧಿಸಿದ್ದಾರೆ. 18,823 ಮತಗಟ್ಟೆಗಳಲ್ಲಿ ಒಟ್ಟು 41,362 ಬೂತ್​ಗಳನ್ನು ಸ್ಥಾಪಿಸಲಾಗಿದೆ. ಮಹಾರಾಜಗಂಜ್ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 27 ಅಭ್ಯರ್ಥಿಗಳಿದ್ದಾರೆ. ದಾರೌಲಿ ಕ್ಷೇತ್ರದಲ್ಲಿ ನಾಲ್ವರು ಅಭ್ಯರ್ಥಿಗಳಿದ್ದು, ಕನಿಷ್ಠ ಅಭ್ಯರ್ಥಿಗಳನ್ನು ಹೊಂದಿರುವ ಕ್ಷೇತ್ರವಾಗಿದೆ.
ಪ್ರಧಾನಿ ಮೋದಿ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಮಹಿಳೆಯರ ಸುರಕ್ಷತೆಯ ವಿಷಯವನ್ನು ತಮ್ಮ ಅಭಿವೃದ್ಧಿಯ ವಿಷಯವನ್ನಾಗಿ ಮಾಡಿಕೊಂಡರು. ಆದರೆ ಮಹಿಳೆಯರಿಗೆ ಏನೂ ಸಹಾಯ ಮಾಡಲಿಲ್ಲ ಎಂದು ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸುಷ್ಮಿತಾ ದೇವ್ ಆರೋಪಿಸಿದ್ದಾರೆ. ಬಿಹಾರದಲ್ಲಿ 3.4 ಕೋಟಿ ಮಹಿಳಾ ಮತದಾರರಿದ್ದಾರೆ. ಆದರೆ ಆಡಳಿತಲ್ಲಿರುವವರು ಅವರಿಗಾಗಿ ಏನನ್ನೂ ಮಾಡಿಲ್ಲ. ಬಿಹಾರದಲ್ಲಿ ಆರೋಗ್ಯ, ಶಿಕ್ಷಣ, ಭದ್ರತೆ ಮತ್ತು ಅಪೌಷ್ಟಿಕತೆಯ ವಿಷಯದಲ್ಲಿ ಮಹಿಳೆಯರ ಸ್ಥಿತಿ ತುಂಬಾ ಕಳಪೆಯಾಗಿದೆ. ಶಾಲೆಗಳಲ್ಲಿ ಶೌಚಾಲಯವಿಲ್ಲ. ಈ ಕಾರಣದಿಂದಾಗಿ ಶಾಲೆಗಳಲ್ಲಿ ಬಾಲಕಿಯರ ಹಾಜರಾತಿ ಪ್ರಮಾಣ ಕುಂಠಿತವಾಗಿದೆ ಎಂದು ಸುಷ್ಮಿತಾ ದೇವ್ ಕಿಡಿಕಾರಿದ್ದಾರೆ.
ಮೋದಿಯವರ ಡಬಲ್ ಇಂಜಿನ್ ಸರ್ಕಾರದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ, 2015ರಲ್ಲಿ ನೀವು ನಿತೀಶ್ ಕುಮಾರ್ ಅವರಿಗೆ 18ನೇ ಶತಮಾನದ ಮನಸ್ಥಿತಿ ಇದೆ ಎಂದಿದ್ದೀರಿ. ಈಗ ನೀವು ಅವರ ಸರ್ಕಾರವನ್ನು ಡಬಲ್ ಇಂಜಿನ್ ಎನ್ನುತ್ತಿದ್ದೀರಿ. ಸತ್ಯವೆಂದರೆ, ಇದು ಡಬಲ್ ವಂಚನೆ ಸರ್ಕಾರ. ಒಬ್ಬರು ಸುಳ್ಳು ಭರವಸೆಗಳನ್ನು ನೀಡುವವರು, ಮತ್ತೊಬ್ಬರು ಮೋಸ ಮಾಡುವವರು. ಬಿಹಾರ ಮತದಾರರು ನಿಮ್ಮಿಬ್ಬರಿಗೂ ನ್ಯಾಯಯುತವಾದ ಫಲಿತಾಂಶ ನೀಡಲಿದ್ದಾರೆ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + sixteen =
Remember me
