‘ಭಾರತವು ಉತ್ತರಕ್ಕೆ ನಡೆಯಲು ಈಗಷ್ಟೇ ಪ್ರಾರಂಭಿಸಿದೆ. ಗಿಲ್ಗಿಟ್ ಮತ್ತು ಬಾಲ್ಟಿಸ್ತಾನವನ್ನು ತಲುಪಿದಾಗ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರಯಾಣವು ಕೊನೆಗೊಳ್ಳುತ್ತದೆ’ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಚೆಗೆ ಹೇಳಿದ್ದಾರೆ. 1994ರ ಫೆಬ್ರವರಿ 22ರಂದು ಭಾರತದ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯವನ್ನು ಜಾರಿಗೊಳಿಸುವುದಾಗಿಯೂ ಅವರು ಹೇಳಿದ್ದಾರೆ.
ಗಿಲ್ಗಿಟ್-ಬಾಲ್ಟಿಸ್ತಾನವು (ಜಿ-ಬಿ) ಪಾಕಿಸ್ತಾನದಿಂದ ನಿರ್ವಹಿಸಲ್ಪಡುವ ಉತ್ತರದ ಒಂದು ಭೂಭಾಗವಾಗಿದ್ದು, ಆಯಕಟ್ಟಿನ ಗಡಿ ಪ್ರದೇಶ. ಪಾಕಿಸ್ತಾನಕ್ಕೆ ಚೀನಾದೊಂದಿಗೆ ಭೂಮಾರ್ಗವನ್ನು ಒದಗಿಸುತ್ತದೆ, ಇದರ ಪಶ್ಚಿಮಕ್ಕೆ ಅಫ್ಘಾನಿಸ್ತಾನ, ದಕ್ಷಿಣಕ್ಕೆ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪೂರ್ವಕ್ಕೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಿದೆ.
ಭಾರತದ ದೃಷ್ಟಿಕೋನದಿಂದ ಹೇಳುವುದಾದರೆ, ಇದು ಭಾರತೀಯ ಭೂಪ್ರದೇಶವಾಗಿದೆ. ಸ್ವಾತಂತ್ರಾ್ಯನಂತರ ಭಾರತಕ್ಕೆ ಸಂಪೂರ್ಣವಾಗಿ ಸೇರ್ಪಡೆಗೊಂಡ ಜಮ್ಮು-ಕಾಶ್ಮೀರದ ಹಿಂದಿನ ರಾಜಪ್ರಭುತ್ವದ ಒಂದು ಭಾಗವಾಗಿದ್ದು, ಈಗ ಪಾಕಿಸ್ತಾನಿ ಆಕ್ರಮಣದಲ್ಲಿದೆ.
ಗಿಲ್ಗಿಟ್ ಪ್ರದೇಶ ಜಮ್ಮು-ಕಾಶ್ಮೀರದ ರಾಜಪ್ರಭುತ್ವದ ಭಾಗವಾಗಿತ್ತು, ಮುಸ್ಲಿಂ ಬಹುಸಂಖ್ಯಾತವಾಗಿದ್ದ ಈ ರಾಜ್ಯದ ಹಿಂದೂ ರಾಜ ಹರಿ ಸಿಂಗ್ ಅವರಿಂದ 1935ರಲ್ಲಿ ಈ ಪ್ರದೇಶವನ್ನು ಗುತ್ತಿಗೆಗೆ ತೆಗೆದುಕೊಂಡ ಬ್ರಿಟಿಷರು ನೇರವಾಗಿ ಆಳ್ವಿಕೆ ನಡೆಸಿದರು. 1947ರ ಅಕ್ಟೋಬರ್ 22ರಂದು ರಾಜಾ ಹರಿಸಿಂಗ್ ಜಮ್ಮು ಮತ್ತು ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ನಿರ್ಧಾರ ಕೈಗೊಂಡರು. ಆಗ, ಪಶ್ತೂನ್ ಬುಡಕಟ್ಟು ಸೈನಿಕರು ಪಾಕಿಸ್ತಾನಿ ಪಡೆಗಳೊಂದಿಗೆ ಸೇರಿಕೊಂಡು ‘ಆಪರೇಷನ್ ಗುಲ್ಮಾರ್ಗ್’ ಯೋಜನೆಯ ಪ್ರಕಾರ ಕಾಶ್ಮೀರ ಕಣಿವೆ ಮೇಲೆ ದಾಳಿ ನಡೆಸಿ, ಶ್ರೀನಗರದತ್ತ ಹೆಜ್ಜೆ ಹಾಕಿದರು. ಮಾರ್ಗ ಮಧ್ಯದಲ್ಲಿ ಬಾರಾಮುಲ್ಲಾದಲ್ಲಿ ಭಾರಿ ಲೂಟಿ ನಡೆಸಿದರು. ಇದನ್ನೆಲ್ಲ ಗಮನಿಸಿದ ರಾಜಾ ಹರಿಸಿಂಗ್ 1947ರ ಅಕ್ಟೋಬರ್ 26ರಂದು ಭಾರತದೊಂದಿಗೆ ವಿಲೀನದ ಒಪ್ಪಂದಕ್ಕೆ ಸಹಿ ಹಾಕಿದರು.
ನಂತರ ಸೇನೆಯು ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಲು ಕಾರ್ಯಾಚರಣೆ ಪ್ರಾರಂಭಿಸಿತು. ಈ ಮಧ್ಯೆ ನವೆಂಬರ್ 1 ರಂದು ಗಿಲ್ಗಿಟ್​ನಲ್ಲಿ ಹರಿಸಿಂಗ್ ವಿರುದ್ಧ ಬಂಡಾಯ ಎದ್ದಿತು. ರೆವಲ್ಯೂಷನರಿ ಕೌನ್ಸಿಲ್ ಆಫ್ ಗಿಲ್ಗಿಟ್- ಬಾಲ್ಟಿಸ್ತಾನ ಎಂಬ ಸ್ಥಳೀಯ ರಾಜಕೀಯ ಸಂಘಟನೆ ಗಿಲ್ಗಿಟ್-ಬಾಲ್ಟಿಸ್ತಾನವನ್ನು ಸ್ವತಂತ್ರ ರಾಜ್ಯ ಎಂದು ಘೊಷಿಸಿತು. ತದನಂತರ ನವೆಂಬರ್ 15ರಂದು ಈ ಗುಂಪು ಪಾಕಿಸ್ತಾನಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ಹೇಳಿತು. ಈ ಸೇರ್ಪಡೆ ಒಪ್ಪಿಕೊಂಡ ಪಾಕಿಸ್ತಾನವು ‘ಗಡಿನಾಡು ಅಪರಾಧಗಳ ನಿಯಂತ್ರಣ’ದ ಮೂಲಕ ಇಲ್ಲಿ ಆಡಳಿತ ನಡೆಸಲಾಗುವುದು ಎಂದು ಘೊಷಿಸಿತು. ಈ ಕಾನೂನನ್ನು ಬ್ರಿಟಿಷರು ವಾಯವ್ಯದ ಪ್ರಕ್ಷುಬ್ಧ ಬುಡಕಟ್ಟು ಪ್ರದೇಶಗಳ ಮೇಲೆ ನಿಯಂತ್ರಣ ಇರಿಸಿಕೊಳ್ಳಲು ಜಾರಿಗೊಳಿಸಿದ್ದರು. ಅಲ್ಲದೆ, ಬ್ರಿಟಿಷರು ಗಿಲ್ಗಿಟ್ ಸ್ಕೌಟ್ಸ್ ಎಂಬ ಸಣ್ಣ ಪಡೆಯನ್ನು ಈ ಪ್ರದೇಶದಲ್ಲಿ ಬೆಳೆಸಿದ್ದರು.
1947ರ ಆಗಸ್ಟ್​ನಲ್ಲಿ ಬ್ರಿಟಿಷರು ಗಿಲ್ಗಿಟ್ ಅನ್ನು ಹರಿಸಿಂಗ್​ಗೆ ಹಿಂದಿರುಗಿಸಿದ ನಂತರ ಮಹಾರಾಜರು ತಮ್ಮ ಪ್ರತಿನಿಧಿಯಾದ ಬ್ರಿಗೇಡಿಯರ್ ಘನ್ಸರ್ ಸಿಂಗ್ ಅವರನ್ನು ಗಿಲ್ಗಿಟ್​ನ ರಾಜ್ಯಪಾಲರಾಗಿ ನೇಮಕ ಮಾಡಿದರು. ಆದರೆ, ವಿಲಿಯಂ ಅಲೆಕ್ಸಾಂಡರ್ ಬ್ರೌನ್ ಎಂಬ ಬ್ರಿಟಿಷ್ ಮೇಜರ್ ನೇತೃತ್ವದ ಗಿಲ್ಗಿಟ್ ಸ್ಕೌಟ್ಸ್ ಬಂಡಾಯ ಎದ್ದಿತು. 1947ರ ನವೆಂಬರ್ 1ರಂದು ಮೇಜರ್ ಬ್ರೌನ್ ರಾಜ್ಯಪಾಲ ಘನ್ಸರ್ ಸಿಂಗ್ ಅವರನ್ನು ರಕ್ಷಣಾತ್ಮಕ ಕಸ್ಟಡಿಗೆ ತೆಗೆದುಕೊಂಡರಲ್ಲದೆ, ತಮ್ಮ ಪ್ರಧಾನ ಕಚೇರಿಯಲ್ಲಿ ಪಾಕಿಸ್ತಾನಿ ಧ್ವಜವನ್ನೂ ಹಾರಿಸಿದರು.
ನಂತರ ಗಿಲ್ಗಿಟ್ ಸ್ಕೌಟ್ಸ್ ಪಡೆಯು ಲಡಾಖ್​ನ ಭಾಗವಾಗಿದ್ದ ಬಾಲ್ಟಿಸ್ತಾನವನ್ನು ವಶಪಡಿಸಿಕೊಳ್ಳಲು ಮುಂದಾಯಿತು. ಅಲ್ಲದೆ, ಸ್ಕರ್ಡ, ಕಾರ್ಗಿಲ್ ಮತ್ತು ದ್ರಾಸ್ ಅನ್ನು ವಶಕ್ಕೆ ತೆಗೆದುಕೊಂಡಿತು. ಭಾರತೀಯ ಪಡೆಗಳು 1948ರ ಆಗಸ್ಟ್ನಲ್ಲಿ ಕಾರ್ಗಿಲ್ ಮತ್ತು ದ್ರಾಸ್ ಅನ್ನು ಮತ್ತೆ ವಶಕ್ಕೆ ತೆಗೆದುಕೊಂಡವು. 1949ರ ಜನವರಿ 1ರಂದು ಭಾರತ-ಪಾಕಿಸ್ತಾನ ಕದನ ವಿರಾಮದ ನಂತರ ಆ ವರ್ಷದ ಏಪ್ರಿಲ್​ನಲ್ಲಿ ಪಾಕಿಸ್ತಾನವು ‘ಆಜಾದ್ ಜಮ್ಮು ಮತ್ತು ಕಾಶ್ಮೀರ’ ಎಂದು ಕರೆಯಲ್ಪಡುವ ತಾತ್ಕಾಲಿಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತು. ನಂತರ ಈ ತಾತ್ಕಾಲಿಕ ಸರ್ಕಾರವು ಗಿಲ್ಗಿಟ್-ಬಾಲ್ಟಿಸ್ತಾನ ಆಡಳಿತವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು.
ಹಿಂದಿನ ರಾಜರ ಆಳ್ವಿಕೆಯಲ್ಲಿನ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವು ಭಾರತಕ್ಕೆ ಸೇರಿದೆ. ಜಿ-ಬಿಯನ್ನು ಪಾಕಿಸ್ತಾನದ ಪ್ರಾಂತ್ಯವನ್ನಾಗಿ ಮಾಡುವ ಯೋಜನೆಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆಯಲ್ಲದೆ, ಜಿ-ಬಿ ಮೇಲೆ ಹಿಡಿತ ಸಾಧಿಸುವುದಾಗಿ ಪ್ರತಿಪಾದಿಸಿದೆ. ‘1994ರ ಫೆಬ್ರವರಿ 22ರಂದು ಸಂಸತ್ತಿನ ಉಭಯ ಸದನಗಳು ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯದಲ್ಲಿ ತಿಳಿಸಿರುವಂತೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್​ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ ಎಂಬುದು ಭಾರತದ ಸ್ಥಿರವಾದ ಮತ್ತು ತಾತ್ವಿಕ ನಿಲುವಾಗಿದೆ’ ಎಂದು ಸರ್ಕಾರವು 2020ರ ಮಾರ್ಚ್ 11ರಂದು ಸಂಸತ್ತಿಗೆ ತಿಳಿಸಿದೆ.
ಜಿ-ಬಿಯಲ್ಲಿ ಕೊನೆಯ ಚುನಾವಣೆಗಳು 2015ರ ಜುಲೈನಲ್ಲಿ ನಡೆದವು. ವಿಧಾನಸಭೆಯ ಐದು ವರ್ಷಗಳ ಅವಧಿ 2020ರ ಜುಲೈನಲ್ಲಿ ಕೊನೆಗೊಂಡಿತು. ನಂತರ ಸಾಂಕ್ರಾಮಿಕ ರೋಗದ ನೆಪದಲ್ಲಿ ಹೊಸ ಚುನಾವಣೆಗಳನ್ನು ನಡೆಸಿಲ್ಲ. ತಮ್ಮ ಸರ್ಕಾರವು ಈ ಪ್ರದೇಶಕ್ಕೆ ತಾತ್ಕಾಲಿಕ ಪ್ರಾಂತೀಯ ಸ್ಥಾನಮಾನ ನೀಡುವುದಾಗಿ 2020ರ ನವೆಂಬರ್ 1ರಂದು ಅಂದಿನ ಪ್ರಧಾನಿ ಇಮ್ರಾನ್ ಖಾನ್ ಘೊಷಿಸಿದರು. ಈ ಘೋಷಣೆ ಜಾರಿಗೆ ಬಂದರೆ, ಜಿ-ಬಿಯು ಪಾಕಿಸ್ತಾನದ ಐದನೇ ಪ್ರಾಂತ್ಯವಾಗುತ್ತದೆ.
ಭಾರತದಂತೆಯೇ ಪಾಕಿಸ್ತಾನವೂ ಗಿಲ್ಗಿಟ್-ಬಾಲ್ಟಿಸ್ತಾನ ಭವಿಷ್ಯವನ್ನು ಕಾಶ್ಮೀರಕ್ಕೆ ಜೋಡಿಸುತ್ತದೆಯಾದರೂ, ಅದರ ಆಡಳಿತಾತ್ಮಕ ವ್ಯವಸ್ಥೆಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕಿಂತ (ಪಿಒಕೆ) ಭಿನ್ನವಾಗಿವೆ. ಪಿಒಕೆ ತನ್ನದೇ ಆದ ಸಂವಿಧಾನವನ್ನು ಹೊಂದಿದ್ದು, ಪಾಕಿಸ್ತಾನಕ್ಕೆ ಅಧಿಕಾರ ನಡೆಸುವುದಕ್ಕೆ ಮಿತಿ ಇದೆ. ಆದರೆ, ಜಿ-ಬಿಯಲ್ಲಿ ಕಾರ್ಯನಿರ್ವಾಹಕ ಸರ್ವಾಧಿಕಾರದ ವ್ಯವಸ್ಥೆ ಇದೆ. 2009ರವರೆಗೆ ಈ ಪ್ರದೇಶವನ್ನು ಉತ್ತರ ಪ್ರದೇಶಗಳು ಎಂದು ಮಾತ್ರ ಕರೆಯಲಾಗುತ್ತಿತ್ತು. 2009ರ ಸಬಲೀಕರಣ ಮತ್ತು ಸ್ವಯಂ-ಆಡಳಿತ ಆದೇಶದ ನಂತರವೇ ಈ ಪ್ರದೇಶಕ್ಕೆ ಗಿಲ್ಗಿಟ್-ಬಾಲ್ಟಿಸ್ತಾನ ಎಂಬ ಹೆಸರು ಬಂದಿದೆ. 2009ರ ಆದೇಶದ ಪ್ರಕಾರ ಉತ್ತರದ ಪ್ರದೇಶಗಳ ಶಾಸನ ಸಮಿತಿಯ ಬದಲಿಗೆ ವಿಧಾನಸಭೆ ರಚಿಸಲಾಯಿತು. ಶಾಸನ ಸಮಿತಿಯು ಚುನಾಯಿತ ಸಂಸ್ಥೆಯಾಗಿದ್ದರೂ ಇಸ್ಲಾಮಾಬಾದ್​ನಿಂದ ಆಡಳಿತ ನಡೆಸುವ ಕಾಶ್ಮೀರ ವ್ಯವಹಾರಗಳ ಮತ್ತು ಉತ್ತರದ ಪ್ರದೇಶಗಳ ಸಚಿವರಿಗೆ ಸಲಹೆ ನೀಡುವ ಅಧಿಕಾರವನ್ನು ಮಾತ್ರ ಇದು ಹೊಂದಿತ್ತು.
ವಿಧಾನಸಭೆ ರಚನೆಯಾದ ನಂತರ ಸ್ವಲ್ಪ ಹೆಚ್ಚಿನ ಅಧಿಕಾರ ಶಾಸಕರಿಗೆ ಲಭಿಸಿದೆ. ನೇರವಾಗಿ ಚುನಾಯಿತರಾದ 24 ಸದಸ್ಯರು ಮತ್ತು ಒಂಬತ್ತು ನಾಮನಿರ್ದೇಶಿತ ಸದಸ್ಯರನ್ನು ವಿಧಾನಸಭೆ ಒಳಗೊಂಡಿದೆ. ಆದರೆ, ಪಾಕಿಸ್ತಾನದಲ್ಲಿ 2018ರಲ್ಲಿ ಅಧಿಕಾರದಲ್ಲಿದ್ದ ಪಿಎಂಎಲ್ (ಎನ್) ಸರ್ಕಾರವು ಈ ಜಿ-ಬಿ ವಿಧಾನಸಭೆಗೆ ನೀಡಲಾದ ಸೀಮಿತ ಅಧಿಕಾರಗಳನ್ನು ಕೂಡ ಕೇಂದ್ರೀಕರಿಸುವ ನಿರ್ಣಯ ಅಂಗೀಕರಿಸಿತು. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆ ಜಾರಿಗೆ ಅನುಕೂಲವಾಗುವಂತೆ ಭೂಮಿ ಮತ್ತು ಇತರ ಸಂಪನ್ಮೂಲಗಳ ಮೇಲೆ ಹೆಚ್ಚಿನ ನಿಯಂತ್ರಣದ ಉದ್ದೇಶವನ್ನು ಈ ಆದೇಶ ಹೊಂದಿತ್ತು.
2019ರಲ್ಲಿ, ಪಾಕಿಸ್ತಾನದ ಸುಪ್ರೀಂ ಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿತು. ಅಲ್ಲದೆ, ಜಿ-ಬಿಯಲ್ಲಿ ಆಡಳಿತ ಸುಧಾರಣೆಗಳನ್ನು ಜಾರಿಗೊಳಿಸುವಂತೆ ಅಂದಿನ ಇಮ್ರಾನ್ ಖಾನ್ ಸರ್ಕಾರಕ್ಕೆ ಸೂಚಿಸಿತು. ಆದರೆ, ಸರ್ಕಾರ ಈ ಸೂಚನೆಯನ್ನು ಪಾಲಿಸಲಿಲ್ಲ. ಏತನ್ಮಧ್ಯೆ, ಪಾಕಿಸ್ತಾನದ ಸುಪ್ರೀಂ ಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯನ್ನು ಜಿ-ಬಿಗೆ ವಿಸ್ತರಿಸಿಕೊಂಡಿತಲ್ಲದೆ, ಮುಂದಿನ ವಿಧಾನಸಭೆ ಚುನಾವಣೆ ಆಗುವವರೆಗೆ ಉಸ್ತುವಾರಿ ಸರ್ಕಾರದ ವ್ಯವಸ್ಥೆ ಮಾಡಿತು.
ಜಿ-ಬಿಯನ್ನು ಪಾಕಿಸ್ತಾನದ ಭಾಗವಾಗಿಸಬೇಕೆಂದು ಅಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ, ಇದರಿಂದಾಗಿ ಪಾಕಿಸ್ತಾನಿಗಳಿಗೆ ಇರುವ ಸಾಂವಿಧಾನಿಕ ಹಕ್ಕುಗಳು ತಮಗೂ ಲಭಿಸುತ್ತವೆ ಎಂಬ ನಿರೀಕ್ಷೆ ಅವರದ್ದು. ಇಲ್ಲಿನ ಜನರು ಭೌತಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಭಾರತದಿಂದ ದೂರವಿದ್ದಾರೆ. ಈ ಹಿಂದೆ ಕೆಲವರು ಪಿಒಕೆ ಜತೆ ವಿಲೀನಕ್ಕೆ ಒತ್ತಾಯಿಸಿದ್ದರು. ಆದರೆ, ಜಿ-ಬಿ ಜನರಿಗೆ ಕಾಶ್ಮೀರದೊಂದಿಗೆ ಕೂಡ ಸಂಪರ್ಕವಿಲ್ಲ. ಅವರು ಹಲವಾರು ಕಾಶ್ಮೀರೇತರ ಜನಾಂಗಗಳಿಗೆ ಸೇರಿದವರಾಗಿದ್ದಾರೆ. ಅಲ್ಲದೆ, ಕಾಶ್ಮೀರಕ್ಕೆ ಸೇರಿರದ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ.
ಇಲ್ಲಿನ ಜನಸಂಖ್ಯೆ ಅಂದಾಜು 15 ಲಕ್ಷ ಇದ್ದು, ಬಹುತೇಕರು ಶಿಯಾ ಪಂಥಕ್ಕೆ ಸೇರಿದವರಾಗಿದ್ದಾರೆ. ಶಿಯಾಗಳನ್ನು ಗುರಿಯಾಗಿಸುವ ಉಗ್ರಗಾಮಿ ಗುಂಪುಗಳನ್ನು ನಿಯಂತ್ರಿಸದಿರುವುದಕ್ಕೆ ಹಾಗೂ ತಮ್ಮ ಪ್ರದೇಶದಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ನಿರ್ದೇಶಿಸುತ್ತಿರುವುದಕ್ಕೆ ಪಾಕಿಸ್ತಾನದ ವಿರುದ್ಧ ಇಲ್ಲಿನ ಜನರಿಗೆ ಕೋಪವಿದೆ, ಆದರೆ, ಪಾಕಿಸ್ತಾನ ಒಕ್ಕೂಟದ ಭಾಗವಾದ ನಂತರ ಇದೆಲ್ಲ ಸುಧಾರಿಸುತ್ತದೆ ಎಂಬ ಆಶಾಭಾವನೆ ಅವರದು. ಪ್ರತ್ಯೇಕ ರಾಷ್ಟ್ರವಾಗಲು ಸಣ್ಣ ಚಳವಳಿ ನಡೆದಿದ್ದರೂ ಅದಿನ್ನೂ ಶೈಶವಾವಸ್ಥೆಯಲ್ಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
