|ರಾಘವ ಶರ್ಮ ನಿಡ್ಲೆನವದೆಹಲಿ
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್​ಡಿಎಫ್) ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಪ್ರಬಲ ಎದುರಾಳಿಯಾಗಿದ್ದರೂ, ಕರೊನಾ ಕಾಲದಲ್ಲಿ ಸರ್ಕಾರದ ಜನಸ್ನೇಹಿ ಕಾರ್ಯಕ್ರಮಗಳು ಎಲ್​ಡಿಎಫ್​ಗೆ ಲಾಭವಾಗಿ ಪರಿಣಮಿಸಬಹುದು ಎಂಬ ಮಾತುಗಳಿವೆ. ಇವೆಲ್ಲದರ ಮಧ್ಯೆ, ರಾಜ್ಯದಲ್ಲಿ ತನ್ನ ಮತ ಹಂಚಿಕೆ ಪ್ರಮಾಣ ವಿಸ್ತರಣೆಗೆ ಗಂಭೀರ ಪ್ರಯತ್ನ ಮಾಡುತ್ತಿರುವ ಬಿಜೆಪಿ, ‘ಮೆಟ್ರೋ ಮ್ಯಾನ್’ ಇ. ಶ್ರೀಧರನ್ ನೇತೃತ್ವದಲ್ಲಿ ಮಧ್ಯಮ ವರ್ಗ ಹಾಗೂ ನಗರದ ಮತದಾರರನ್ನು ಸೆಳೆವ ತಂತ್ರಗಾರಿಕೆ ಅನುಸರಿಸಿದೆ.
ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸನ್ನು ಮುಂದಿಟ್ಟು ಈ ಬಾರಿಯೂ ಮತಯಾಚನೆಗೆ ಮುಂದಾಗಿರುವ ಬಿಜೆಪಿಯಲ್ಲಿ ಸಮರ್ಥ, ಜನಪ್ರಿಯ ಸ್ಥಳೀಯ ನಾಯಕತ್ವವಿಲ್ಲ. ಇದರಿಂದಾಗಿ, ಎಲ್​ಡಿಎಫ್ ವಿರುದ್ಧದ ಹೋರಾಟದ ರಾಜಕಾರಣದ ಬಳಿಕವೂ ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗಿಲ್ಲ. ಚುನಾವಣೆ ಎದುರಿಸಲು ಜನಪ್ರಿಯ ಮತ್ತು ವಿಶ್ವಾಸಾರ್ಹ ಮುಖ ಬೇಕು ಎಂಬ ಉದ್ದೇಶದಿಂದ 88 ವರ್ಷದ ಇ. ಶ್ರೀಧರನ್​ರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೊಷಿಸಲಾಗಿದೆ. ಹಾಗಂತ, ಭವಿಷ್ಯದ ದೃಷ್ಟಿಯಿಂದ ನೋಡಿದರೆ, ಈಗಿನಿಂದಲೇ ಪರ್ಯಾಯ ನಾಯಕತ್ವದ ಬಗ್ಗೆ ಪಕ್ಷ ಯೋಚಿಸಬೇಕಿದೆ. ನಾಯರ್ ಸಮುದಾಯದ ಇ. ಶ್ರೀಧರನ್ ತಮ್ಮ ಸಮುದಾಯದ ಒಂದಿಷ್ಟು ಮತಗಳನ್ನು ಸೆಳೆಯುವ ಜತೆಗೆ ತಕ್ಕಮಟ್ಟಿಗೆ ಕ್ರಿಶ್ಚಿಯನ್ ಮತಗಳನ್ನೂ ಆಕರ್ಷಿಸಬಲ್ಲರು ಎಂದು ಬಿಜೆಪಿ ಭಾವಿಸಿದೆ.
ಈ ಬಾರಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ಕಳುಹಿಸಿಕೊಡಲಾಗಿದ್ದು, ಸಂಘಟನಾತ್ಮಕ ದೃಷ್ಟಿಯಿಂದ ರಾಜ್ಯ ಬಿಜೆಪಿಯಲ್ಲಿ ಏನೇನು ಬದಲಾವಣೆಗಳಾಗಬೇಕೆಂಬ ಬಗೆಗಿನ ಪ್ರಾಥಮಿಕ ಮಾಹಿತಿಯನ್ನು ಅವರು ಹೈಕಮಾಂಡ್ ಜತೆಗೆ ಹಂಚಿಕೊಂಡಿದ್ದಾರೆ. ಸದ್ಯ ಚುನಾವಣೆ ಮೇಲೆಯೇ ಮುಖಂಡರ ದೃಷ್ಟಿ ನೆಟ್ಟಿರುವುದರಿಂದ ಸಂಸತ್ತಿನ ಅಧಿವೇಶನ ಆರಂಭಗೊಳ್ಳುವ ತನಕ ರಾಜ್ಯದಲ್ಲೇ ಬೀಡುಬಿಟ್ಟು ಪದಾಧಿಕಾರಿಗಳೊಂದಿಗೆ ತ್ರಿಶೂರ್, ತಿರುವನಂತಪುರಂ, ಕೊಡಂಗಲ್ಲೂರ್ ಸೇರಿ ಹಲವೆಡೆ ಅವರು ಸಭೆಗಳನ್ನು ನಡೆಸಿದ್ದಾರೆ. ಗುರುವಾರದಂದು ಮತ್ತೆ ಕೇರಳಕ್ಕೆ ತೆರಳಲಿದ್ದಾರೆ.
ಕೇರಳದ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು, ಎಲ್​ಡಿಎಫ್-ಯುಡಿಎಫ್​ಗೆ ಭಿನ್ನ ರೀತಿಯಲ್ಲಿ ಬಿಜೆಪಿ ಅನುಸರಿಸಲಿರುವ ಆಡಳಿತ ನೀತಿ, ಅಲ್ಪಸಂಖ್ಯಾತರಲ್ಲಿ ಕ್ರಿಶ್ಚಿಯನ್ನರ ಕಡೆಗಣನೆ, ಎಡಪಕ್ಷಗಳ ಪ್ರೇರಿತ ಹಿಂಸಾಚಾರ-ಹತ್ಯೆ ಪ್ರಕರಣಗಳು, ಲವ್ ಜಿಹಾದ್ ಸೇರಿ ಹಲವು ವಿಷಯಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಯತ್ನ ನಡೆದಿದೆ. ಆದರೆ, ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬಲ್ಲ ದಕ್ಷ-ದಿಟ್ಟ ನಾಯಕತ್ವವಿಲ್ಲ ಎನ್ನುವುದೇ ಅನೇಕ ಮುಖಂಡರ ಅಳಲು. ಕೇರಳಕ್ಕೆ ಸಂಬಂಧಿಸಿದ ಪಕ್ಷದ ಕೋರ್ ಕಮಿಟಿ ಸಭೆಯಲ್ಲೂ ನಾಯಕತ್ವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು. ಇಷ್ಟು ವರ್ಷಗಳಾದರೂ ಸಮರ್ಥ ನಾಯಕತ್ವ ಕಂಡುಕೊಳ್ಳಲು ನಮಗೇಕೆ ಸಾಧ್ಯವಾಗಿಲ್ಲ ಎನ್ನುವುದು ಅವರ ಪ್ರಶ್ನೆಯಾಗಿತ್ತು. ರಾಜ್ಯಸಭೆ ಸದಸ್ಯ, ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್ ಕಾರ್ಯಕರ್ತರ ಮಧ್ಯೆ ಜನಪ್ರಿಯತೆ ಗಳಿಸಿದ್ದರೂ, ಈವರೆಗೆ ಚುನಾವಣೆ ಗೆದ್ದಿಲ್ಲ. ಕೇರಳ ಬಿಜೆಪಿಯಲ್ಲಿ ಬಹುತೇಕರದ್ದು ಇದೇ ಸಮಸ್ಯೆ. ‘ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆ ಗಮನಿಸುತ್ತಿರುವ ಬಿಜೆಪಿ-ವಿರೋಧಿ ಸಾಂಪ್ರದಾಯಿಕ ಮತಗಳು ಈ ಬಾರಿ ಎಲ್​ಡಿಎಫ್ ಅನ್ನು ಬೆಂಬಲಿಸಬಹುದು. ಏಕೆಂದರೆ ಇಲ್ಲಿ ಬಿಜೆಪಿ ಕಟ್ಟಿಹಾಕುವಲ್ಲಿ ಕಾಂಗ್ರೆಸ್​ಗಿಂತ ಎಡಪಕ್ಷಗಳೇ ಒಂದು ಹೆಜ್ಜೆ ಮುಂದಿವೆ’ ಎಂದು ಕೇರಳದ ಹಿರಿಯ ಪತ್ರಕರ್ತರೊಬ್ಬರು ಹೇಳುತ್ತಾರೆ.
ಸದ್ಯದ ಸ್ಥಿತಿಯಲ್ಲಿ ಬಿಜೆಪಿಗೆ ಇಲ್ಲಿ ಅಧಿಕಾರ ಸ್ಥಾಪಿಸಲು ಸಾಧ್ಯವಿಲ್ಲ. ಆದರೆ, ಕಳೆದ ಚುನಾವಣೆಗಿಂತ ಹೆಚ್ಚು ಮತಗಳನ್ನು ಬಾಚಿ, ಸಂಘಟನೆ ವಿಸ್ತರಿಸಿ, ಬಲಗೊಳಿಸಬೇಕು ಎನ್ನುವುದು ದಿಲ್ಲಿ ನಾಯಕರ ಉದ್ದೇಶ. ಆ ಮೂಲಕ ಭವಿಷ್ಯದಲ್ಲಿ ಬಿಜೆಪಿ ದೃಢವಾಗಿ ನೆಲೆಗೊಳ್ಳಬೇಕು ಎಂದೇ ಇಷ್ಟೆಲ್ಲಾ ಹರಸಾಹಸ ಪಡಲಾಗುತ್ತಿದೆ. ‘ಕೇರಳದಲ್ಲಿ ಲವ್ ಜಿಹಾದ್​ಗೆ ಹಿಂದು ಮಾತ್ರವಲ್ಲ ಕ್ರಿಶ್ಚಿಯನ್ ಯುವತಿಯರೂ ಬಲಿಯಾಗುತ್ತಿದ್ದಾರೆ. ಹೀಗಾಗಿ, ನಮ್ಮ ರಕ್ಷಣೆಗೆ ನಿಲ್ಲದೆ, ಕೇವಲ ಮುಸ್ಲಿಂ ಮತಬ್ಯಾಂಕ್ ಓಲೈಕೆಯಲ್ಲೆ ತೊಡಗಿರುವ ಎಲ್​ಡಿಎಫ್ ಮತ್ತು ಯುಡಿಎಫ್​ಗೆ ಪರ್ಯಾಯವಾಗಿ ಬಿಜೆಪಿಯನ್ನೇಕೆ ಆಯ್ಕೆ ಮಾಡಬಾರದು ಎಂಬ ಚರ್ಚೆ ಕ್ರಿಶ್ಚಿಯನ್ನರ ಮಧ್ಯೆ ನಡೆದಿದೆ. ಇದು ಕೂಡ ನಮ್ಮ ಪ್ರಚಾರದ ಒಂದು ಭಾಗವಾಗಿದೆ’ ಎಂದು ಕೇರಳಕ್ಕೆ ಹೋಗಿ ಬಂದಿರುವ ಬಿಜೆಪಿಯ ಕೇಂದ್ರ ನಾಯಕರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಕಾಸರಗೋಡು, ಮಂಜೇಶ್ವರ ಟಿಕೆಟ್ ಯಾರಿಗೆ?:ಗಡಿಭಾಗದ 2 ಕ್ಷೇತ್ರಗಳಲ್ಲಿ ಕನ್ನಡಿಗರ ಮತಗಳೂ ಪ್ರಮುಖ ಪಾತ್ರವಹಿಸುತ್ತಿವೆ. 2016ರ ಕಾಸರಗೋಡು ವಿಧಾನಸಭೆ ಚುನಾವಣೆಗೆ ಗಡಿನಾಡು ಕನ್ನಡಿಗ ರವೀಶ್ ತಂತ್ರಿ ಸ್ಪರ್ಧಿಸಿ, 8 ಸಾವಿರ ಮತಗಳಿಂದ ಸೋತಿದ್ದರು. ಮಂಜೇಶ್ವರದಿಂದ ಸ್ಪರ್ಧಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಇಂಡಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿ ವಿರುದ್ಧ ಕೇವಲ 89 ಮತಗಳಿಂದ ಸೋತಿದ್ದರು. ರವೀಶ ತಂತ್ರಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಲಾರೆ ಎಂದಿರುವುದರಿಂದ ಕಾಸರಗೋಡು ಟಿಕೆಟನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್​ಗೆ ನೀಡುವ ಬಗ್ಗೆ ಚರ್ಚೆಗಳಿವೆ. ಮಂಜೇಶ್ವರದಿಂದ ಕೆ. ಸುರೇಂದ್ರನ್ ಸ್ಪರ್ಧಿಸಬಹುದು ಎಂದೂ ಹೇಳಲಾಗುತ್ತಿದೆ. 2-3 ದಿನಗಳಲ್ಲಿ ಅಂತಿಮ ಚಿತ್ರಣ ಸಿಗಲಿದೆ.
ಎರ್ನಾಕುಲಂ ಮೇಲೆ ಕಣ್ಣು:ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ಎರ್ನಾಕುಲಂ ಜಿಲ್ಲೆಯಲ್ಲಿ ಬಿಜೆಪಿ ತೋರಿದ ನಿರ್ವಹಣೆ ಗಮನಸೆಳೆದಿದೆ. ಎರ್ನಾಕುಲಂ ಸೇರಿ ಸೇರಿ ತ್ರಿಪುಣಿತ್ತರ, ಪರವೂರ್, ವೈಪಿನ್, ಅರುವಾ, ಕಲಮಸ್ಸೆರಿ, ಪೆರುಂಬವೂರ್ ಕ್ಷೇತ್ರಗಳಲ್ಲಿ ಪಕ್ಷದ ಮತ ಪ್ರಮಾಣ ಏರುವ ನಿರೀಕ್ಷೆಯಿದೆ. ಅಲ್ಲದೆ, ಸಿಎಂ ಅಭ್ಯರ್ಥಿ ಇ. ಶ್ರೀಧರನ್ ತ್ರಿಪುಣಿತ್ತರ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
