| ರಾಘವ ಶರ್ಮ ನಿಡ್ಲೆ, ನವದೆಹಲಿ
ಜಾತಿ, ಹಣಬಲ, ತೋಳ್ಬಲದ ರಾಜಕಾರಣಕ್ಕೆ ಕುಖ್ಯಾತಿಯಾಗಿರುವ ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್ 28ಕ್ಕೆ ಮೊದಲ ಹಂತದ (71 ಕ್ಷೇತ್ರ) ಚುನಾವಣೆ ನಡೆಯಲಿದ್ದು, ಒಟ್ಟು ಮೂರು ಹಂತಗಳಲ್ಲಿ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.
ನ.3ಕ್ಕೆ 2ನೇ ಹಂತ (94 ಕ್ಷೇತ್ರ) ಮತ್ತು ನ.7ಕ್ಕೆ ಮೂರನೇ ಹಂತದ (78 ಕ್ಷೇತ್ರ) ಮತದಾನ ನಡೆಯಲಿದ್ದು, ನ. 10ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಕರೊನಾ ಲಾಕ್​ಡೌನ್​ನಿಂದಾಗಿ 2,30,000 ವಲಸೆ ಕಾರ್ವಿುಕರು ರಾಜ್ಯಕ್ಕೆ ವಾಪಸಾಗಿರುವುದರಿಂದ ಅವರೆಲ್ಲರನ್ನೂ ಮತದಾನ ಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ ಮಾಹಿತಿ ಹಂಚಿಕೊಂಡಿದ್ದಾರೆ. 2015ರಲ್ಲಿ ರಾಜ್ಯದ ಹಿಂದುಳಿದ ವರ್ಗ (ಒಬಿಸಿ), ಆರ್ಥಿಕ ಹಿಂದುಳಿದ ವರ್ಗ (ಇಬಿಸಿ), ದಲಿತ ಮತ್ತು ಮುಸ್ಲಿಮರ ಕಾಂಬಿನೇಷನ್​ಗೆಬಿಹಾರ ಮತದಾರರು ಜಬರ್​ದಸ್ತ್ ಬೆಂಬಲ ನೀಡಿದ್ದರ ಪರಿಣಾಮ ನಿತೀಶ್-ಲಾಲೂ ಜೋಡಿ 178 ಸೀಟುಗಳನ್ನು ಬಾಚಿಕೊಂಡಿತ್ತು. ರಾಷ್ಟ್ರೀಯ ಜನತಾದಳ (ಆರ್​ಜೆಡಿ) ಹೆಚ್ಚು ಶಾಸಕರುಳ್ಳ (73) ಪಕ್ಷವಾಗಿದ್ದರೂ, ಆಡಳಿತದಲ್ಲಿ ಲಾಲೂ ಪ್ರಸಾದ್ ಯಾದವ್ ಮತ್ತು ಪುತ್ರ ತೇಜಸ್ವಿ ಯಾದವ್ ಹಸ್ತಕ್ಷೇಪದಿಂದ ಹೈರಾಣಾಗಿದ್ದ ಸಿಎಂ ನಿತೀಶ್ ಕುಮಾರ್, ಬಿಜೆಪಿ ಜತೆ ಮರು- ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರ ತಳೆದರು. ಹೀಗಾಗಿ, 2017ರಲ್ಲಿ ಎನ್​ಡಿಎ (ಜೆಡಿಯು-ಬಿಜೆಪಿ) ಮತ್ತೆ ಅಧಿಕಾರ ಸ್ಥಾಪಿಸಿತು. 2014ರ ಲೋಕಸಭೆ ಚುನಾವಣೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಣೆ ಮಾಡಿದ್ದಕ್ಕೆ ಅಸಮಾಧಾನ ಹೊರಹಾಕಿ, 20 ವರ್ಷಗಳ ಎನ್​ಡಿಎ ಮೈತ್ರಿಗೆ ಎಳ್ಳುನೀರು ಬಿಟ್ಟಿದ್ದ ನಿತೀಶ್​ಗೆ, ಆರ್​ಜೆಡಿ ಸಹವಾಸಕ್ಕಿಂತ ಬಿಜೆಪಿ ಸಂಗವೇ ವಾಸಿ ಎನ್ನುವುದು ಒಂದೂವರೆ ವರ್ಷದಲ್ಲೇ ಅರಿವಿಗೆ ಬಂದಿತ್ತು! 2019ರ ಲೋಕಸಭೆ ಚುನಾವಣೆಯಲ್ಲೂ ಜೆಡಿಯು ಎನ್​ಡಿಎ ಮೈತ್ರಿಕೂಟದ ಪಾಲುದಾರ ಪಕ್ಷವಾಗಿ ಚುನಾವಣೆ ಎದುರಿಸಿತು.
ಮೇವು ಹಗರಣದಲ್ಲಿ ಅಪರಾಧಿಯಾಗಿರುವ ಆರ್​ಜೆಡಿ ಹಿರಿಯ ನಾಯಕ ಲಾಲೂ ಪ್ರಸಾದ್ ಯಾದವ್ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ಚುನಾವಣೆ ಸ್ಪರ್ಧೆಗೆ ಅನರ್ಹಗೊಂಡಿರುವುದರಿಂದ ಲಾಲೂ ಹೆಸರು ಮತ್ತು ನಿತೀಶ್ ಆಡಳಿತ ವೈಫಲ್ಯಗಳನ್ನು ಮುಂದಿಟ್ಟು ಆರ್​ಜೆಡಿ ಮತ ಯಾಚಿಸಲಿದೆ.
ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಲಾಗಿದೆ. ಬಿಹಾರ ಮೂಲದ ಸುಶಾಂತ್ ಸಿಂಗ್ ರಜ್​ಪೂತ್ ಆತ್ಮಹತ್ಯೆ ಪ್ರಕರಣ ಹಾಗೂ ರಾಜ್ಯಸಭೆ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್ ಮೇಲೆ ವಿಪಕ್ಷ ಮುಖಂಡರು ದಾಳಿ ಮಾಡಲು ಯತ್ನಿಸಿದ್ದು ಚುನಾವಣಾ ಕಣದಲ್ಲಿ ಈಗಾಗಲೇ ಭಾರಿ ಸದ್ದು ಮಾಡುತ್ತಿದೆ.
ಸೀಟು ಹಂಚಿಕೆ ತಲೆನೋವು
ಚುನಾವಣೆ ಘೋಷಣೆಯಾಗಿದ್ದರೂ, ಎನ್​ಡಿಎಗೆ ಸೀಟು ಹಂಚಿಕೆಯೇ ಸವಾಲಾಗಿ ಕಾಡುತ್ತಿದೆ. ಸಿಎಂ ನಿತೀಶ್ ಕುಮಾರ್ ಮತ್ತು ಲೋಕ ಜನಶಕ್ತಿ ಪಾರ್ಟಿ (ಎಲ್​ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ನಡುವಿನ ಒಡಕು ಹೊಸತೇನಲ್ಲ. ಎನ್​ಡಿಎ ಸಿಎಂ ಅಭ್ಯರ್ಥಿಯಾಗಿ ನಿತೀಶ್ ಬೇಡ ಎಂದು ಎಲ್​ಜೆಪಿ ಹೇಳಿದ್ದರೂ, ಬಿಜೆಪಿ ಮಾತ್ರ ಇದಕ್ಕೆ ಸೊಪು್ಪ ಹಾಕಿಲ್ಲ. ನಿತೀಶ್ ನೇತೃತ್ವದಲ್ಲೇ ಚುನಾವಣೆ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ, ಪ್ರತ್ಯೇಕವಾಗಿ ಚುನಾವಣೆ ಎದುರಿಸಿ, ಚಿರಾಗ್​ರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸುತ್ತೇವೆ ಎಂದು ಎಲ್​ಜೆಪಿ ಬೆದರಿಕೆ ಹಾಕಿದೆ. 2015ರ ಚುನಾವಣೆಯಲ್ಲಿ 42 ಸೀಟುಗಳಲ್ಲಿ ಸ್ಪರ್ಧಿಸಿದ್ದ
ಎಲ್​ಜೆಪಿ ಗೆದ್ದಿದ್ದು 2 ಕ್ಷೇತ್ರಗಳಲ್ಲಿ ಮಾತ್ರ. ಈ ಬಾರಿ 25ಕ್ಕಿಂತ ಹೆಚ್ಚು ಸೀಟುಗಳನ್ನು ನೀಡಲು ಸಾಧ್ಯವಿಲ್ಲ ಎಂಬ ಬಿಜೆಪಿ ಅಭಿಪ್ರಾಯ ಚಿರಾಗ್ ಪಾಸ್ವಾನ್​ಗೆ ಪಥ್ಯವೆನಿಸಿಲ್ಲ. ಸೀಟು ಹಂಚಿಕೆಯಲ್ಲಿ ಎಲ್​ಜೆಪಿ ಪಾಲೆಷ್ಟು ನಿರ್ಧರಿಸಿ, ನಂತರ ನಾವಿಬ್ಬರು ಸೀಟು ಹಂಚಿಕೆ ಇತ್ಯರ್ಥಪಡಿಸೋಣ ಎಂದು ಬಿಜೆಪಿ ದೆಹಲಿ ನಾಯಕರು ನಿತೀಶ್​ಗೆ ತಿಳಿಸಿದ್ದಾರೆಂದು ಗೊತ್ತಾಗಿದೆ. 2015ರಲ್ಲಿ ಮಹಾಮೈತ್ರಿಯಲ್ಲಿದ್ದ ಜೀತನ್ ರಾಮ್ ಮಾಂಝಿ ನೇತೃತ್ವದ ಹಿಂದುಸ್ತಾನಿ ಅವಾಮಿ ಮೋರ್ಚಾ ಈ ಬಾರಿ ಎನ್​ಡಿಎ ಮೈತ್ರಿಕೂಟ ಸೇರಿಕೊಂಡಿದೆ. 2019ರ ಲೋಕಸಭೆ ಚುನಾವಣೆ ವೇಳೆ ಎನ್​ಡಿಎಯಿಂದ ಪ್ರತ್ಯೇಕಗೊಂಡಿದ್ದ ಉಪೇಂದ್ರ ಖುಶ್ವಾಹಾ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ (ಆರ್​ಎಸ್​ಎಲ್​ಪಿ) ಕೂಡ ವಿಧಾನಸಭೆ ಚುನಾವಣೆಯಲ್ಲಿ ಎನ್​ಡಿಎ ಸೇರ್ಪಡೆಯಾಗುವುದು ಬಹುತೇಕ ಖಚಿತ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಕೇಳಿದಷ್ಟು ಸೀಟುಗಳನ್ನು ನೀಡಲಿಲ್ಲ ಎಂದು ಮುನಿಸಿಕೊಂಡು ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಆರ್​ಎಸ್​ಎಲ್​ಪಿ, ಇದ್ದ 3 ಸೀಟುಗಳನ್ನೂ ಕಳೆದುಕೊಂಡು ಮೂಲೆ ಸೇರಿತ್ತು.
ಕರೊನಾ ಮುನ್ನೆಚ್ಚರಿಕೆ ಕ್ರಮಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − two =
Remember me
