ನವದೆಹಲಿ:2019ರ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆಗೈದು, ಅಧಿಕಾರಾವಧಿಯ ವರ್ಷ ಪೂರೈಸಿ ಕೇಂದ್ರ ಸಂಪುಟ ಪುನರ್​ ರಚನೆಗೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಹಲವು ಅಚ್ಚರಿಯ ರ್ನಿಣಯಗಳ ಮೂಲಕ ಪಕ್ಷ ಮತ್ತು ಸರ್ಕಾರಕ್ಕೆ ಗಂಭೀರ ಸಂದೇಶ ರವಾನಿಸಿದ್ದಾರೆ. ಸಕ್ರಿಯರಿಗೆ ಮನ್ನಣೆ, ನಿಷ್ಕ್ರಿಯರಿಗೆ ಗೇಟ್​ಪಾಸ್​ ಎಂಬುದು ಸಂಪುಟ ಪುನರ್​ ರಚನೆಯಿಂದ ಸಾಬೀತಾಗಿದೆ.
| ರಾಘವ ಶರ್ಮ ನಿಡ್ಲೆ
ರಾಜ್ಯವಾರು, ಜಾತಿವಾರು, ಸ್ಥಳಿಯ ಪ್ರಾತಿನಿಧ್ಯ, ಪ್ರತಿಭೆ, ಸಂಟನಾತ್ಮಕ ಮತ್ತು ರಾಜಕೀಯ ಲಾಭಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ದೊಡ್ಡ ಪ್ರಮಾಣದಲ್ಲೇ ಸಂಪುಟಕ್ಕೆ ಸರ್ಜರಿ ಮಾಡಿರುವ ಪಿಎಂ ಮೋದಿ ಮತ್ತು ಗೃಹ ಸಚಿವ ಅಮಿತ್​ ಷಾ ಹಲವು ಹೊಸಮುಖಗಳನ್ನು ಪರಿಚಯಿಸುವ ಜತೆಗೆ ತಳ ಮಟ್ಟದ ಸಮುದಾಯಗಳ ನಾಯಕರನ್ನೂ ಆದ್ಯತೆಗೆ ತೆಗೆದುಕೊಂಡಿದ್ದಾರೆ. ಆರೋಗ್ಯ ಸಚಿವ ಡಾ. ಹರ್ಷವರ್ಧನ್​, ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್​, ಪರಿಸರ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್​ ಜಾವಡೇಕರ್​, ರಾಸಾಯನಿಕ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡರು ಕ್ಯಾಬಿನೆಟ್​ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದು ಬಿಜೆಪಿ ಮತ್ತು ಸರ್ಕಾರದ ಮಟ್ಟಿಗೆ ಅಚ್ಚರಿಯ ಬೆಳವಣಿಗೆ. ಡಾ. ಹರ್ಷವರ್ಧನ್​ ಮತ್ತು ಸದಾನಂದ ಗೌಡರ ರಾಜೀನಾಮೆ ಬಗ್ಗೆ ಚರ್ಚೆಯಾಗಿತ್ತಾದರೂ, ಜಾವಡೇಕರ್​ ಮತ್ತು ರವಿಶಂಕರ ಪ್ರಸಾದ್​ ರಾಜೀನಾಮೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಈ ಮೂಲಕ ಸರ್ಕಾರ ಮತ್ತು ಆಡಳಿತದಲ್ಲಿ ರಚನಾತ್ಮಕ ಬದಲಾವಣೆಗೆ ಮೋದಿ ಕೈ ಹಾಕಿರುವುದು ಸ್ಪಷ್ಟ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಸಚಿವ ರಮೇಶ್​ ನಿಷಾಂಕ್​ ಪೋಖ್ರಿಯಾಲ್​ ರಾಜೀನಾಮೆ ನೀಡಿದ್ದಾರೆನ್ನಲಾಗಿದೆ.ಒಟ್ಟು 8 ಮಂದಿ ಸಚಿವ ಸ್ಥಾನಗಳಿಗೆ ರಾಜೀನಾಮೆ ಪಡೆಯುವ ಮೂಲಕ ಹೊಸ ಮಂತ್ರಿಗಳಿಗೂ ಪಿಎಂ ಮೋದಿ ಗಂಭೀರ ಸಂದೇಶ ರವಾನಿಸಿದ್ದಾರೆ. ಕೆಲಸ ಮಾಡುವವರಿಗಷ್ಟೇ ಇಲ್ಲಿ ಮನ್ನಣೆ ಎಂಬ ಎಚ್ಚರಿಕೆಯನ್ನು ಬಹಳ ಸೂಚ್ಯವಾಗಿ ಕಳುಹಿಸಿದ್ದಾರೆ. ಕರೊನಾ 1 ಮತ್ತು 2ನೇ ಅಲೆ ಸರ್ಕಾರಕ್ಕೆ ಸಾಕಷ್ಟು ಪಾಠ ಕಲಿಸಿದ್ದು, ಮುಖ್ಯವಾಗಿ 2ನೇ ಅಲೆಯಲ್ಲಿ ಪಕ್ಷ ಮತ್ತು ಸರ್ಕಾರದ ಇಮೇಜ್​ಗೆ ಆಗಿರುವ ಹಾನಿಯನ್ನು ಸರಿಪಡಿಸುವ ನಿಟ್ಟಿನಲ್ಲೂ ಈ ಬದಲಾವಣೆ ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದೆ. ಕರೊನಾ ಬಂದ ನಂತರ ಸರ್ಕಾರದಲ್ಲಿ ಹರ್ಷವರ್ಧನ್​ ಪಾತ್ರ ಮಹತ್ವ ಪಡೆದುಕೊಂಡಿತ್ತು. ಆದರೆ, ಪ್ರಧಾನಿಯವರು ನಿರೀಕ್ಷಿಸಿದ ವೇಗ ಸಚಿವರಲ್ಲಿ ಕಂಡುಬರಲಿಲ್ಲ ಎಂದೇ ಅವರಿಂದ ರಾಜೀನಾಮೆ ಪಡೆದುಕೊಳ್ಳಲಾಯಿತು ಎನ್ನಲಾಗುತ್ತಿದೆ. ವಿವಾದ ಅಥವಾ ಅಹಂನಿಂದ ಹೊರತಾಗಿ ಮೃದು ವ್ಯಕ್ತಿತ್ವವಿದ್ದರೂ, ಕೆಲಸದಲ್ಲಿ ಸಕ್ರಿಯತೆ ಇರಬೇಕು. ಕೇವಲ ಒಳ್ಳೇ ಗುಣಗಳು ಮಾತ್ರ ನಿಮ್ಮನ್ನು ಉತ್ತಮ ಆಡಳಿತಗಾರನ್ನಾಗಿ ಮಾಡದು ಎಂಬ ಸಂದೇಶವೂ ಸಂಪುಟ ಪುನರ್​ ರಚನೆಯಿಂದ ರವಾನೆಯಾಗಿದೆ.
ಸಾಮಾಜಿಕ ನ್ಯಾಯಬುಧವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಒಟ್ಟು 43 ಮಂದಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಿಂದಾಗಿ ಸಂಪುಟದಲ್ಲಿರುವ ಸಚಿವರ ಸಂಖ್ಯೆ 71ಕ್ಕೆ ಏರಿದಂತಾಗಿದೆ. ಅವರಲ್ಲಿ 12 ಪರಿಶಿಷ್ಟ ಜಾತಿ, 8 ಪರಿಶಿಷ್ಟ ವರ್ಗ ಮತ್ತು 27 ಇತರೆ ಹಿಂದುಳಿದ ವರ್ಗದ ಸಚಿವರಿಗೆ ಪ್ರಾತಿನಿಧ್ಯತೆ ನೀಡಲಾಗಿದ್ದು, ತಳ ಸಮುದಾಯದ ಜನಪ್ರತಿನಿಧಿಗಳಿಗೆ ಆಡಳಿತದಲ್ಲಿ ಪ್ರಾಧಾನ್ಯತೆ ಸಿಕ್ಕಿದಂತಾಗಿದೆ. ಹೊಸ ರಾಜ್ಯಪಾಲರ ನೇಮಕದಲ್ಲೂ ಎಸ್ಸಿ/ಎಸ್ಟಿ ಮತ್ತು ಒಬಿಸಿಗಳಿಗೆ ಆದ್ಯತೆ ನೀಡಿದ್ದು ಕೂಡ ಇಲ್ಲಿ ಉಲ್ಲೇಖಾರ್ಹ. ಕೇಂದ್ರ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಕಾಪಾಡಿಕೊಳ್ಳುವ ಜತೆಗೆ ಎಲ್ಲಾ ವರ್ಗದವರನ್ನೂ ಒಟ್ಟಾಗಿ ಕರೆದೊಯ್ಯುವ ಸರ್ಕಾರ ನಮ್ಮದು ಎಂಬ ಸಂದೇಶ ಸಾರುವ ಉದ್ದೇಶವೂ ಇದರ ಹಿಂದಿದೆ. ಪ್ರಧಾನಿ ಮೋದಿ ಅನೇಕ ವೇದಿಕೆಗಳಲ್ಲಿ “ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​’ ಎಂಬ ೂಷವಾಕ್ಯವೇ ನಮಗೆ ಪ್ರೇರೇಪಣೆ ಎಂದು ಹೇಳುವುದುಂಟು. ಈಗ ಸಂಪುಟ ಪುನರ್​ ರಚನೆ ಪ್ರಕ್ರಿಯೆಯಲ್ಲೂ ಅದನ್ನು ಅಳವಡಿಸಿಕೊಂಡು ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ಮಂತ್ರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಇಬ್ಬರು ಪರಿಶಿಷ್ಟ ಜಾತಿ, ಮೂವರು ಪರಿಶಿಷ್ಟ ಪಂಗಡದವರು ಮತ್ತು ಐವರು ಇತರೆ ಹಿಂದುಳಿದ ಜಾತಿಗಳ ಸಚಿವರು ಕ್ಯಾಬಿನೆಟ್​ ಮಂತ್ರಿಗಳಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೃತ್ತಿಪರರ ಸಂಖ್ಯೆಯೂ ಸಂಪುಟದಲ್ಲಿ ಹೆಚ್ಚಲಿದ್ದು, ಅವರಲ್ಲಿ ವಕೀಲರು, 6 ವೈದ್ಯರು, 5 ಎಂಜಿನಿಯರ್​ಗಳು ಮತ್ತು ನಾಗರಿಕ ಸೇವೆಯಲ್ಲಿದ್ದ ಅಧಿಕಾರಿಗಳು ಇರಲಿದ್ದಾರೆ. ಸಚಿವರ ಸರಾಸರಿ ವಯಸ್ಸನ್ನು ತಗ್ಗಿಸುವ ಬಗ್ಗೆ ವಿಶೇಷ ಗಮನ ಹರಿಸಲಾಗಿದ್ದು, 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 14 ಮಂತ್ರಿಗಳು ಸಂಪುಟ ಸೇರಿದಂತಗಾಲಿದ್ದು, ಅವರಲ್ಲಿ 6 ಮಂದಿ ಕ್ಯಾಬಿನೆಟ್​ ದರ್ಜೆಯ ಮಂತ್ರಿಗಳಾಗಲಿದ್ದಾರೆ.
ಉತ್ತರ ಪ್ರದೇಶಕ್ಕೆ ಒತ್ತುದೆಹಲಿಯನ್ನು ಗೆಲ್ಲಬೇಕೆಂದರೆ ಉತ್ತರ ಪ್ರದೇಶವನ್ನು ದಾಟಿ ಬರಬೇಕು ಎಂಬ ಮಾತು ದಿಲ್ಲಿ ರಾಜಕೀಯ ಕಾರಿಡಾರ್​ನಲ್ಲಿ ಸದಾ ಹರಿದಾಡುತ್ತಿರುತ್ತದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷಕ್ಕೆ ಉತ್ತರ ಪ್ರದೇಶ ಚಿನ್ನವಿದ್ದಂತೆ. ಸದ್ಯ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಅತಿ ಹೆಚ್ಚು ಸೀಟು ಗಳಿಸಿರುವ ಬಿಜೆಪಿ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡೇ ಈ ಸಲದ ಸಂಪುಟ ಪುನರ್​ ರಚನೆಯಲ್ಲಿ 7 ಸಂಸದರಿಗೆ ಸಚಿವ ಸ್ಥಾನದ ಬಡ್ತಿ ನೀಡುವ ಮೂಲಕ ರಾಜಕೀಯ ಜಿದ್ದಾಜಿದ್ದಿನ ಸವಾಲಿಗೆ ಸಿದ್ಧಗೊಂಡಿದೆ. ಅಪ್ನಾ ದಳ ಪಕ್ಷದ ನಾಯಕಿ, ಮಿರ್ಜಾಪುರ ಸಂಸದೆ ಅನುಪ್ರಿಯಾ ಪಟೇಲ್​, ಮೋಹನ್​ಲಾಲ್​ಗಂಜ್​ ಕ್ಷೇತ್ರದ ಸಂಸದ ಕೌಶಲ್​ ಕಿಶೋರ್​, ಆಗ್ರಾ ಸಂಸದ ಸತ್ಯಪಾಲ್​ ಸಿನ್ಹಾ, ಜಾಲೌನ್​ ಸಂಸದ ಭಾನು ಪ್ರತಾಪ್​ ಸಿಂಗ್​ ವರ್ಮ, ರಾಜ್ಯಸಭೆ ಸಂಸದ ಬಿ.ಎಲ್​. ವರ್ಮ, ಖೋರಿ ಸಂಸದ ಅಜಯ್​ ಮಿಶ್ರಾ, ಮಹಾರಾಜಗಂಜ್​ ಸಂಸದ ಪಂಕಜ್​ ಚೌಧುರಿ ಸಂಪುಟ ಪ್ರವೇಶಿಸಿದ್ದಾರೆ. 25 ಕೋಟಿ ಜನಸಂಖ್ಯೆಯ ಉತ್ತರ ಪ್ರದೇಶದ ವಿವಿಧ ಭಾಗಗಳಿಗೆ ಪ್ರಾತಿನಿಧ್ಯ ನೀಡುವ ಸಲುವಾಗಿಯೇ ಈ ರಾಜ್ಯಕ್ಕೆ ಸಂಪುಟದಲ್ಲಿ ದೊಡ್ಡ ಪ್ರಮಾಣದಲ್ಲಿ ಮನ್ನಣೆ ಸಿಕ್ಕಿದೆ.
ಪ್ರದೇಶವಾರು ಪ್ರಾತಿನಿಧ್ಯಒಟ್ಟು 25 ರಾಜ್ಯಗಳ ಸಂಸದರು ಮಂತ್ರಿ ಮಂಡಲ ಸೇರಿದ್ದು, ಅವರಲ್ಲಿ 5 ಸಚಿವರು ಈಶಾನ್ಯ ರಾಜ್ಯಕ್ಕೆ ಸೇರಿದ್ದಾರೆ. ಸಚಿವ ಸ್ಥಾನ ಹಂಚಿಕೆಯಲ್ಲಿ ಪ್ರದೇಶಾವಾರು ಹಂಚಿಕೆಗೂ ಆದ್ಯತೆ ನೀಡಿರುವುದು ವಿಶೇಷ. ಉತ್ತರ ಪ್ರದೇಶದಲ್ಲಿ ಪೂರ್ವಾಂಚಲ, ಅವಧ್​ ಪ್ರದೇಶ, ಬ್ರಜ್​, ಬುಂದೇಲ್​ಖಂಡ್​, ರೋಹಿಲ್​ಖಂಡ್​, ಪಶ್ಚಿಮ ಉತ್ತರ ಪ್ರದೇಶ, ಹರಿತ್​ ಪ್ರದೇಶಗಳನ್ನು ವಿಭಜಿಸಿ ಮಂತ್ರಿಸ್ಥಾನ ಹಂಚಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಕೊಂಕಣ, ದೇಶ್​, ಖಾಂದೇಶ್​, ಮರಾಠವಾಡ ಮತ್ತು ವಿದರ್ಭ ವಿಭಾಗಗಳಿಗೆ ಮನ್ನಣೆ ಸಿಕ್ಕಿದೆ. ಗುಜರಾತ್​ನಲ್ಲಿ ಸೌರಾಷ್ಟ್ರ, ಉತ್ತರ, ದಕ್ಷಿಣ ಗುಜರಾತ್​ ಮತ್ತು ಕೇಂದ್ರ ಗುಜರಾತ್​ನ್ನು ಪರಿಗಣಿಸಿದ್ದರೆ, ಪಶ್ಚಿಮ ಬಂಗಾಳ ಕೊಲ್ಕತ್ತಾ ಪ್ರೆಸಿಡೆನ್ಸಿ, ಮೇದಿನಿಪುರ ಹಾಗೂ ಜಲ್​ಪಾಯ್​ಗುರಿ ಭಾಗಗಳಿಗೆ ಮಹತ್ವ ನೀಡಲಾಗಿದೆ. ಮಧ್ಯಪ್ರದೇಶದ ಚಂಬಲ್​, ಸತ್ಪುರಾ ಮತ್ತು ಕೇಂದ್ರ ಭಾಗಕ್ಕೆ ಒತ್ತು ಕೊಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nine =
Remember me
