|ರಾಘವ ಶರ್ಮ ನಿಡ್ಲೆಮಥುರಾ (ಉತ್ತರ ಪ್ರದೇಶ)
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಮಥುರಾಗೆ ವಿಶೇಷ ಮಹತ್ವ. ಕಾಶಿ ವಿಶ್ವನಾಥ ಮಂದಿರ ಅಭಿವೃದ್ಧಿಪಡಿಸಿದಂತೆಯೇ ಮಥುರಾ ಶ್ರೀಕೃಷ್ಣ ಜನ್ಮಸ್ಥಾನವನ್ನೂ ಸುಧಾರಿಸಲಿದ್ದೇವೆ ಎಂದು ಬಿಜೆಪಿ ನಾಯಕರು ಭರವಸೆ ನೀಡಿರುವುದರಿಂದ ಪಕ್ಷದ ಬೆಂಬಲಿಗ ಹಿಂದು ಶ್ರದ್ಧಾಳುಗಳಲ್ಲಿ ಉಲ್ಲಾಸ ಕಂಡುಬರುತ್ತಿದೆ. ಶ್ರೀಕೃಷ್ಣ ಜನ್ಮಸ್ಥಾನ ಮಂದಿರಕ್ಕೇ ಜೋಡಿಸಿಕೊಂಡು ಶಾಹಿ ಈದ್ಗಾ ಮಸೀದಿಯಿರುವುದರಿಂದ ಒಳಗಿಂದೊಳಗೆಯೇ ಇದು ಹಿಂದು-ಮುಸ್ಲಿಂ ನಡುವಿನ ಭಾವನಾತ್ಮಕ ವಿಷಯವಾಗಿ ಬದಲಾಗಿದೆ.
‘ಕಾಶಿಯಲ್ಲಿ ಬದಲಾವಣೆ ಸಾಧ್ಯವೆಂದರೆ ಮಥುರಾದಲ್ಲಿ ಏಕಿಲ್ಲ? ಕೃಷ್ಣನ ಜನ್ಮಸ್ಥಳ ಅಭಿವೃದ್ಧಿಪಡಿಸುವುದು ನಮ್ಮ ಹಕ್ಕು’ ಎಂದು ಪ್ರತಿಪಾದಿಸುತ್ತಾರೆ ಬ್ರಾಹ್ಮಣ ಸಮಾಜದ ಮಹೇಂದ್ರ ಪಾಂಡೆ. ರಾಜ್ಯ ವಿದ್ಯುತ್ ಸಚಿವ, ಮಥುರಾ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಶರ್ಮ ಕೂಡ ಬ್ರಾಹ್ಮಣ ಸಮುದಾಯದವರು. ಜನ್ಮಸ್ಥಾನದ ಅಭಿವೃದ್ಧಿ ಬಿಜೆಪಿಯಿಂದ ಬಿಟ್ಟರೆ ಬೇರೆ ಯಾರಿಂದ ಸಾಧ್ಯ? ಸಮಾಜವಾದಿಗಳಿಗೆ ನಮ್ಮ ಕೆಲಸ ನೋಡಿ ಈಗ ದೇವರ ಬಗ್ಗೆ ಭಾರೀ ಭಕ್ತಿ ಬಂದಿದೆ ಎಂದು ವ್ಯಂಗ್ಯವಾಡುತ್ತಾರೆ ಸಚಿವ ಶರ್ಮ. ಪಶ್ಚಿಮ ಉತ್ತರ ಪ್ರದೇಶದ ಮಥುರಾ ಲೋಕಸಭೆ ವ್ಯಾಪ್ತಿಯಲ್ಲಿ 5 ವಿಧಾನಸಭೆ ಕ್ಷೇತ್ರಗಳಿದ್ದು, ಫೆ.10ರಂದು ಐದೂ ಕ್ಷೇತ್ರಗಳಿಗೆ ಮೊದಲ ಹಂತದಲ್ಲೇ ಮತದಾನ ನಡೆಯಲಿದೆ. 2017ರ ಚುನಾವಣೆಯಲ್ಲಿ ಗೋವರ್ಧನ, ಬಲದೇವ, ಛಾತಾ, ಮಥುರಾ ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, ಮಂತ್ ಕ್ಷೇತ್ರದಲ್ಲಿ ಬಿಎಸ್​ಪಿ ವಿರುದ್ಧ ಸೋಲುಂಡಿತ್ತು. 2017ರಲ್ಲಿ ಶ್ರೀಕಾಂತ್ ಶರ್ಮ ಗೆಲ್ಲುವ ಮುನ್ನ ಇದು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಪ್ರದೀಪ್ ಮಾಥುರ್ ನಾಲ್ಕು ಬಾರಿ ಇಲ್ಲಿಂದ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಸೋತಿದ್ದ ಅವರನ್ನೇ ಕಾಂಗ್ರೆಸ್ ಈ ಬಾರಿ ಕಣಕ್ಕಿಳಿಸಿದೆ. ಮಥುರಾ ನಗರಿಯ ಬಹುತೇಕ ಹಿಂದು ಶ್ರದ್ಧಾಳುಗಳು ‘ಮಥುರಾ ಕಾರಿಡಾರ್’ ಕನಸು ಕಾಣುತ್ತಿರುವುದರಿಂದ ಬಿಜೆಪಿಗೆ ಮತ್ತೊಂದು ಅವಕಾಶ ನೀಡಬೇಕೆಂದು ತೀರ್ವನಿಸಿದಂತೆ ಕಾಣುತ್ತದೆ. ಆದರೆ, ಗ್ರಾಮೀಣ ಭಾಗದ ಜನರಲ್ಲಿ ಈ ಬಗ್ಗೆ ಹೆಚ್ಚು ಆಸಕ್ತಿಯಿದ್ದಂತಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ ಕಾರಣದಿಂದಾಗಿ ಪ್ರತಿ ತಿಂಗಳಿಗೆ ದವಸ ಧಾನ್ಯ, ಅಕ್ಕಿ, ಅಡುಗೆ ಎಣ್ಣೆ, ಉಪ್ಪು ತಲುಪುತ್ತಿದೆ ಎಂದು ಹರ್ಷ ವ್ಯಕ್ತಪಡಿಸುವ ಕೆಲ ಮಹಿಳಾ ಮತದಾರರು, ಕೃಷ್ಣ ಜನ್ಮಸ್ಥಾನ ಅಭಿವೃದ್ಧಿ ಆಗುವುದು ಒಳ್ಳೆಯದೇ. ಆದರೆ, ಕುಟುಂಬದ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಇದಕ್ಕೂ ಪರಿಹಾರ ಬೇಕಲ್ಲ ಎನ್ನುತ್ತಾರೆ.
ಮಥುರಾದ ಭೀಮ್ ನಗರ ಕಾಲನಿಯಲ್ಲೂ ಇಂಥದ್ದೇ ಧ್ವನಿಗಳು ಕೇಳಿಬಂದವು. ವಿಜಯವಾಣಿ ಜತೆ ಮಾತನಾಡಿದ ಮಧ್ಯ ವಯಸ್ಸಿನ ಸುನೀತಾ ದೇವಿ, ‘ಸರ್ಕಾರದಿಂದ ನಮಗೆ ಸಿಲಿಂಡರ್ ಸಿಕ್ಕಿದೆ. ಕುಸಿದ ಮನೆಗಳನ್ನು ರಿಪೇರಿ ಮಾಡಿದ್ದಾರೆ. ಅಪರಾಧ ಪ್ರಕರಣಗಳು ಕಡಿಮೆಯಾಗಿ, ರಾತ್ರಿ ವೇಳೆಯೂ ನಿರಾತಂಕವಾಗಿ ಓಡಾಡುತ್ತೇವೆ’ ಎಂದರು. ಆದರೆ 22 ವರ್ಷದ ಮಗ ಮೋಹಿತ್ ಕುಮಾರ್​ಗೆ ನೌಕರಿ ಸಿಗುತ್ತಿಲ್ಲ. ಅದರಿಂದಾಗಿ ಅವನೂ ನಮ್ಮ ಜತೆ ಕಲ್ಲು ಕೆತ್ತುತ್ತಾ ಕೂರುತ್ತಾನೆ. ಖಾಸಗಿ ಕೆಲಸ ಸಿಕ್ಕರೂ, ತಿಂಗಳಿಗೆ 5-6 ಸಾವಿರ ಸಂಬಳ ನೀಡುತ್ತಾರೆ. ನಿರುದ್ಯೋಗದ ಜತೆಗೆ ಬೆಲೆ ಏರಿಕೆಯೂ ಬಾಧಿಸುತ್ತಿದೆ ಎಂದು ನೋವು ಹಂಚಿಕೊಂಡರು. ಈ ಮಾತಿಗೆ ದನಿಗೂಡಿಸಿದ ಸುಮನ್ ದೇವಿ, ‘ನಿಮ್ಮ ಕರ್ನಾಟಕದಲ್ಲಿ ಉತ್ತಮ ಸಂಬಳ ಕೊಡುತ್ತಾರಾ? ನಾವು ಅಲ್ಲಿಗೆ ಬರಬಹುದೇ?’ ಎಂದು ಪ್ರಶ್ನಿಸಿದರು. ಮೋದಿ-ಯೋಗಿ ಗುಣಗಾನದ ನಡುವೆಯೂ ಮಹಿಳೆಯರು ವ್ಯವಸ್ಥೆಯ ಬಗ್ಗೆ ಅಪಸ್ವರಗಳನ್ನು ಹೊರಹಾಕಿದರು.
‘ರಾಜ್ಯ ಅಭಿವೃದ್ಧಿ ದಿಶೆಯಲ್ಲಿ ಸಾಗುತ್ತಿದ್ದು, ಮೂಲಸೌಕರ್ಯ ವೃದ್ಧಿಯಾಗುತ್ತಿದೆ. ಯೋಗಿ ಸ್ವಾರ್ಥಿಯಲ್ಲ. ಅವರು ನಮ್ಮೆಲ್ಲರ ಮಹರಾಜ್’ ಎಂದು ಹೊಗಳಿದ ಮಥುರಾದ ಪೇಂಟಿಂಗ್ ಅಂಗಡಿ ಮಾಲೀಕ 70 ವರ್ಷದ ಬನ್ವರಲಾಲ್ ಅಗರ್ವಾಲ್, ‘ಶಾಸಕ ಶ್ರೀಕಾಂತ್ ಶರ್ಮ ಬಗ್ಗೆ ನನಗೆ ಸಮಾಧಾನವಿಲ್ಲ. ಆದರೂ, ಯೋಗಿ ಸಿಎಂ ಆಗಬೇಕೆಂದು ಬಿಜೆಪಿಗೆ ಮತಹಾಕುತ್ತೇನೆ’ ಎಂದರು. ಇಲ್ಲಿ ಕೆಲ ಮತದಾರರು ಸ್ಥಳೀಯ ಸಮಸ್ಯೆಗಳನ್ನು ಬದಿಗೆ ರಾಜ್ಯ-ರಾಷ್ಟ್ರ ನಾಯಕತ್ವ ಗುರುತಿಸಿ ಮತ ಹಾಕುವ ಮನಸ್ಸು ಮಾಡಿದಂತಿದೆ. ಬಿಜೆಪಿ ಆಡಳಿತ ಶುರುವಾದಲ್ಲಿಂದ ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಎನ್ನುತ್ತಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಎಸ್​ಪಿ ಅಧಿಕಾರಕ್ಕೆ ಬಂದರೆ ನಿರುದ್ಯೋಗಕ್ಕೆ ಕಡಿವಾಣ ಹಾಕಲಿದೆ ಎಂಬ ಭರವಸೆ ತುಂಬಿದ್ದಾರೆ. ಆದರೆ ಈ ರಾಜಕೀಯ ನಿರೂಪಣೆಯನ್ನು ಯುವಕರಾದ ಪ್ರಮೋದ್ ಕುಮಾರ್ ಮತ್ತು ಮಾನವೇಂದ್ರ ಸಿಂಗ್ ಒಪ್ಪಲಿಲ್ಲ. ಈ ಇಬ್ಬರೂ ಮಥುರಾ-ಆಗ್ರಾ ಹೆದ್ದಾರಿ ಮಹೂವನ್ ಟೋಲ್ ಪ್ಲಾಜಾ ಬಳಿ ನಿಂತು ಫಾಸ್ಟಾ್ಯಗ್ ಮಾರಾಟ ಮಾಡುತ್ತಾರೆ. ‘ಎಸ್​ಪಿ, ಬಿಎಸ್​ಪಿ ಸರ್ಕಾರಗಳಿದ್ದಾಗಲೂ ರಾಜ್ಯದಲ್ಲಿ ನಿರುದ್ಯೋಗವಿತ್ತು. ಈಗಲೂ ಮುಂದುವರಿದಿದೆ. ಕರೊನಾದಿಂದಾಗಿ ಸಮಸ್ಯೆ ಹೆಚ್ಚಿರುವುದು ಸುಳ್ಳಲ್ಲ. ನೋಡಿ, ಮನೆಯಲ್ಲಿ ಅಮ್ಮ ಮಾಡಿಕೊಟ್ಟ ತಿಂಡಿಯನ್ನು ತಟ್ಟೆಗೆ ಹಾಕಿ ತಿನ್ನಲೂ ಸೋಮಾರಿಗಳಂತೆ ವರ್ತಿಸುವವರಿಗೆ ಮಾತ್ರ ಉದ್ಯೋಗ ಸಿಗುತ್ತಿಲ್ಲ. ನಾವಿಬ್ಬರು ಈಗ ಬ್ಯಾಂಕಿನ ಫಾಸ್ಟಾ್ಯಗ್ ಮಾರಾಟ ಮಾಡುತ್ತಾ ತಿಂಗಳಿಗೆ 15 ಸಾವಿರ ರೂ. ಸಂಪಾದಿಸುತ್ತಿದ್ದೇವೆ’ ಎಂದು ಸಮರ್ಥಿಸಿಕೊಂಡರು.
ಮಥುರಾದ ಹೊರಭಾಗದಲ್ಲಿದ್ದ ಗ್ರಾಮವೊಂದರಲ್ಲಿ ಮಾತಿಗೆ ಸಿಕ್ಕ ಜಾಟ್ ಸಮಾಜದ ಕೃಷಿಕ ರಾಮ್ ನರೇಶ್ ಚೌಧರಿ, ‘ದಿಲ್ಲಿ ಗಡಿಯಲ್ಲಿ ನಾನೂ ಪ್ರತಿಭಟನೆಗೆ ಕೂತಿದ್ದೆ. ಕಾಯ್ದೆಗಳೇನೋ ವಾಪಸ್ ತೆಗೆದುಕೊಂಡಿದ್ದಾರೆ. ಆದರೆ, ಕೃಷಿಕರನ್ನು ದೇಶದ್ರೋಹಿಗಳು, ಉಗ್ರವಾದಿಗಳು ಎಂದೆಲ್ಲಾ ಬಯ್ದರು. ಪ್ರಧಾನಿ ಮೋದಿ ನಮ್ಮೊಂದಿಗೆ ನೇರವಾಗಿ ಮಾತನಾಡಲಿಲ್ಲ. ಕೇಂದ್ರ ಸರ್ಕಾರಕ್ಕೆ ನಾವು ಬುದ್ಧಿ ಕಲಿಸಬೇಡವೇ’ ಎಂದು ಪ್ರಶ್ನಿಸಿದರು.
ಜಾಟರ ಕೋಪ…
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಂಡರೂ, ಪಶ್ಚಿಮ ಉತ್ತರ ಪ್ರದೇಶದ ಜಾಟ್ ಸಮುದಾಯದ ಆಕ್ರೋಶ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಶೇ.20ರಷ್ಟು ಜಾಟ್ ಜನಸಂಖ್ಯೆಯಿದೆ. ಕೃಷಿ ಕಾಯ್ದೆ ವಿರೋಧಿಸಿ ಆರ್​ಎಲ್​ಡಿಯ ಜಯಂತ್ ಯಾದವ್ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಮಹಾಪಂಚಾಯತ್ ಏರ್ಪಡಿಸಿದ್ದರು. ಅಖಿಲೇಶ್ ಯಾದವ್ ಕೂಡ ಇಲ್ಲಿದ್ದರು. ಬಿಜೆಪಿಗೆ ಪ್ರಬಲ ಸವಾಲಾಗಿರುವುದು ಇವರಿಬ್ಬರ ಮೈತ್ರಿಕೂಟವೇ.
ಪಶ್ಚಿಮ ಉತ್ತರ ಪ್ರದೇಶದ ಮೀರಠ್ ಜಿಲ್ಲೆಯ ಯುವಕ ನೀರಜ್ ಚೌಧುರಿ ತಂದೆ ಜತೆಗೆ ದೌರಾಲ ಹಳ್ಳಿಯ 5 ಹೆಕ್ಟೇರ್ ಭೂಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದಾರೆ. ಜಮೀನಿನ ತುಂಬೆಲ್ಲಾ ಕಬ್ಬಿನ ಗದ್ದೆಯೇ ಎದ್ದುಕಾಣುತ್ತದೆ. 2017ರಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಕಬ್ಬು ಬೆಲೆ ಏರಿಸಬೇಕು ಎಂದು ಬೇಡಿಕೆ ಇಟ್ಟವರಲ್ಲಿ ನೀರಜ್ ಕೂಡ ಒಬ್ಬರು. ಆದರೆ, 2021ರ ಅಂತ್ಯದ ವೇಳೆಗೆ ಸರ್ಕಾರ ಕ್ವಿಂಟಾಲ್ ಕಬ್ಬಿಗೆ 325ರಿಂದ 350 ರೂ.ಗೆ ಏರಿಕೆ ಮಾಡಿತು. ಚುನಾವಣೆ ಬಂದಾಗ ಕಬ್ಬಿನ ಬೆಲೆ ಏರಿಸುತ್ತಿದ್ದಾರೆ. ಎಷ್ಟು ದಿನ ನಮ್ಮನ್ನು ಹೀಗೆ ವಂಚಿಸುತ್ತಾರೆ’ ಎಂದ ನೀರಜ್, ನಾನು 2014, 2017 ಮತ್ತು 2019ರಲ್ಲಿ ಬಿಜೆಪಿಗೆ ಮತಹಾಕಿದೆ. ಆದರೆ, ಈ ಬಾರಿ ಸಮಾಜವಾದಿ-ಆರ್​ಎಲ್​ಡಿ ಮೈತ್ರಿಕೂಟಕ್ಕೇ ನನ್ನ ಮತ. ಕೃಷಿ ಕಾಯ್ದೆಗಳ ಮೂಲಕ ನಮಗೆ ಹಿಂಸೆ ನೀಡಿದರು. ಚುನಾವಣೆ ಬಂದಾಗ ಕಾಯ್ದೆ ಹಿಂಪಡೆದುಕೊಂಡರು’ ಎಂದರು. ಹಿಂದುತ್ವ, ಕೋಮುದಂಗೆ ಚರ್ಚೆ ಯಾರಿಗೆ ಬೇಕು? ಎಂದ ನೀರಜ್, ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಉಚಿತ ದವಸ ಧಾನ್ಯ, ಅಕ್ಕಿ, ಅಡುಗೆ ಎಣ್ಣೆ ನೀಡುತ್ತಿರುವುದನ್ನೂ ವಿರೋಧಿಸಿದರು. ‘ಕರೊನಾ ಬಂದಾಗ ಕೊಟ್ಟದ್ದು ಸರಿ. ಈಗಲೂ ಏಕೆ ಉಚಿತ ನೀಡಬೇಕು? ಜನರಿಗೆ ಉದ್ಯೋಗ ಕೊಡಿ’ಎಂದರು.
ಪಶ್ಚಿಮ ಉ.ಪ್ರ.ದ ಬುಲಂದ್​ಶಹರದ ಬತೋಲಿ ಎಂಬ ಹಳ್ಳಿಯ ಕೃಷಿಕ, ಕಾಶ್ಯಪ ಸಮಾಜದ ಪ್ರೇಮ್ಾಲ್ ಸಿಂಗ್ ಅವರು ನೀರಜ್ ಚೌಧುರಿ ಮಾತನ್ನು ಒಪ್ಪುವುದಿಲ್ಲ. ‘ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ಕೂತವರಿಗೆ ರಾಜಕೀಯ ಉದ್ದೇಶಗಳಿವೆ. ರಾಕೇಶ್ ಟಿಕಾಯತ್ ವಿಪಕ್ಷಗಳೊಂದಿಗೆ ಕೈಜೋಡಿಸಿದ್ದಾರೆ. ನಿಜವಾದ ಕೃಷಿಕ ನನ್ನಂತೆ ಜಮೀನಿನಲ್ಲಿ ಮಣ್ಣು ಹೊರುತ್ತಿದ್ದ. ಬಡರೈತರ ಬಗ್ಗೆ ಕಾಳಜಿ ಇರುವುದಕ್ಕೇ ತಾನೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮಗೆ ನೆರವನ್ನು ನೀಡುತ್ತಿರುವುದು’ ಎಂದು ವಾದಿಸಿದರು. ರಾಜ್ಯದ ಆಡಳಿತ ಕ್ರಮ ಬದಲಾಗಿದೆ, ಅಭಿವೃದ್ಧಿ ಏನೆಂಬುದು ಈಗ ಗೊತ್ತಾಗುತ್ತಿದೆ. ಇದೇ ಸರ್ಕಾರ ಮತ್ತೆ ಅಧಿಕಾರಕ್ಕೆ ರಾತ್ರಿ ನೆಮ್ಮದಿಯ ನಿದ್ದೆ ಮಾಡಬಹುದು. ಇಲ್ಲದಿದ್ದರೆ, ಗೂಂಡಾಗಳು ಮತ್ತೆ ನೆಮ್ಮದಿ ಕಸಿಯಲಿದ್ದಾರೆ ಎಂದು ಆತಂಕ ಹೊರಹಾಕುತ್ತಾರೆ ಪ್ರೇಮ್ಾಲ್ ಸಿಂಗ್.
ಬುಲಂದ್​ಶಹರ ಜಿಲ್ಲೆಯ ಖುರ್ಜಾ ವಿಧಾನಸಭೆ ಕ್ಷೇತ್ರದ ವೃದ್ಧ ಮಹಿಳೆ, ಬ್ರಾಹ್ಮಣ ಸಮಾಜದ ಕೃಷ್ಣಾ ತಮಗೆ ವಿಧವಾ ಪಿಂಚಣಿ ಸಿಗುತ್ತಿಲ್ಲ ಎಂದು ಬೇಸರಗೊಂಡಿದ್ದಾರೆ. ‘2017ರಿಂದ ಹಳ್ಳಿಯ ಮಹಿಳೆಯರಲ್ಲಿ ಸುರಕ್ಷತೆಯ ಭಾವನೆ ಬಂದಿದೆ. ಹಿಂದುಗಳ ಬಗ್ಗೆ ಸರ್ಕಾರ ಯೋಚಿಸುತ್ತದೆ. ಬೇರೆ ಯಾರೂ ನಮ್ಮ ಬಗ್ಗೆ ಯೋಚಿಸುವುದಿಲ್ಲ. ಹೀಗಾಗಿ, ಮೋದಿ-ಯೋಗಿಯೇ ಬೇಕು’ ಎನ್ನುತ್ತಾರೆ ಕೃಷ್ಣಾ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಲಿಷ್ಠರೆಂದೇ ಪರಿಗಣಿತವಾದ ಜಾಟರಲ್ಲಿ ಬಿಜೆಪಿ ಮೇಲೆ ಆಕ್ರೋಶವಿದೆ. ಈ ಜಾಟ್-ಮುಸ್ಲಿಂ ಕಾಂಬಿನೇಷನ್ ಎಸ್ಪಿ-ಆರ್​ಎಲ್​ಡಿ ಮೈತ್ರಿಕೂಟಕ್ಕೆ ಹೊಸ ಹುರುಪು ತುಂಬಿದೆ. ಜಾಟೇತರ ಸಮುದಾಯಗಳ ಕೃಷಿಕರು ಮಾತ್ರ ಬಿಜೆಪಿ ಜತೆಗಿರುವಂತೆ ಕಾಣುತ್ತದೆ.
ಆ ಕಾಲೇಜಲ್ಲಿ ಹಿಜಾಬ್​ ತೊಡಲು ಈ ಹಿಂದೆ ಅವಕಾಶ ಇರಲಿಲ್ಲ; ಮಹತ್ವದ ದಾಖಲೆ ಬಹಿರಂಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
