ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದಿದ್ದು, ಮುಂದಿನ ದಿನಗಳಲ್ಲಿ ಇದರಿಂದಾಗುವ ಪರಿಣಾಮಗಳ ಬಗ್ಗೆ ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಗುಜರಾತಿನಲ್ಲಿ ದಾಖಲೆ ರೀತಿಯಲ್ಲಿ ಬಿಜೆಪಿ ಜಯಸಾಧಿಸಿದ್ದು, ಮತದಾನೋತ್ತರ ಸಮೀಕ್ಷೆಗಳ ಅಂದಾಜನ್ನು ಮೀರಿ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ದೆಹಲಿ ನಂತರ ಪಂಜಾಬ್ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾದ ಆಮ್ ಆದ್ಮಿ ಪಕ್ಷ, ವಿಸ್ತರಣೆಯ ಉದ್ದೇಶ ಹೊಂದಿದ್ದು, ಆ ಲೆಕ್ಕಾಚಾರದಲ್ಲಿಯೇ ಗುಜರಾತ್​ನಲ್ಲಿ ಕಣಕ್ಕಿಳಿದಿತ್ತು. ಆ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಹಲವು ರ್ಯಾಲಿಗಳನ್ನು ನಡೆಸಿ, ಆಕ್ರಮಣಕಾರಿಯಾಗಿ ಪ್ರಚಾರ ನಡೆಸಿದರಾದರೂ ಜನರ ಆಶೀರ್ವಾದ ಲಭಿಸಲಿಲ್ಲ. ಆದರೆ ಅಲ್ಪಸಂಖ್ಯಾತ ಮುಸ್ಲಿಮ್ ಮತಗಳನ್ನು ಕಾಂಗ್ರೆಸ್​ನಿಂದ ಕೆಲಮಟ್ಟಿಗೆ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದ್ದರಿಂದ ಬಿಜೆಪಿ ಸೀಟುಗಳ ಸಂಖ್ಯೆ ಜಾಸ್ತಿಯಾಗಲು ಒಂದು ಕಾರಣವಾಯಿತು ಎಂಬುದು ರಾಜಕೀಯ ವಿಶ್ಲೇಷಕರ ಅಂಬೋಣ.
ಆದರೂ, ಐದು ವರ್ಷ ಆಡಳಿತ ನಡೆಸುವುದರೊಳಗೇ ಆಡಳಿತವಿರೋಧಿ ಅಲೆ ಎದುರಿಸಬೇಕಾಗಿ ಬರುವ ವಾತಾವರಣದಲ್ಲಿ ಒಂದು ಪಕ್ಷ ಸತತವಾಗಿ ಏಳು ಚುನಾವಣೆಗಳನ್ನು ಗೆಲ್ಲುವುದು ಹುಡುಗಾಟಿಕೆ ಮಾತಲ್ಲ. ಮುಖ್ಯವಾಗಿ ನರೇಂದ್ರ ಮೋದಿ ವರ್ಚಸ್ಸು ಬಿಜೆಪಿಗೆ ಪ್ಲಸ್ ಪಾಯಿಂಟ್. ‘ಗುಜರಾತ್ ಮಾಡೆಲ್’ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತವಾದರೂ, ದೀರ್ಘಕಾಲ ಗುಜರಾತ್ ಸಿಎಂ ಆಗಿ ಮೋದಿ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ್ದನ್ನು ಅಲ್ಲಗಳೆಯಲಾಗದು. ಇನ್ನು, ಹಿಮಾಚಲ ಪ್ರದೇಶದಲ್ಲಿ ಪ್ರತಿ ಐದು ವರ್ಷಕ್ಕೆ ಆಡಳಿತ ಪಕ್ಷ ಬದಲಾಗುವ ಸಂಪ್ರದಾಯ ಸುಮಾರು ನಾಲ್ಕು ದಶಕದಿಂದ ಇದ್ದು, ಈ ಸಲವೂ ಮುಂದುವರಿದಿದೆ. ಹಿಂದಿನ ಬಾರಿ ಬಿಜೆಪಿ ಸರ್ಕಾರ ರಚಿಸಿದ್ದರೆ, ಈ ಬಾರಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದೆ.
ಅಭಿವೃದ್ಧಿ ಕಾರ್ಯಗಳು ಸಹ ಈಚಿನ ದಿನಗಳಲ್ಲಿ ಚುನಾವಣಾ ಪ್ರಚಾರದ ಮುಂಚೂಣಿಗೆ ಬರುತ್ತಿರುವುದು ಗಮನಾರ್ಹ ಬೆಳವಣಿಗೆ. ಮೊದಲೆಲ್ಲ ಚುನಾವಣಾ ಪ್ರಣಾಳಿಕೆ ಎಂದರೆ, ಈಡೇರಿಸಲು ಬಹುತೇಕ ಅಸಾಧ್ಯವಾದ, ಕೇವಲ ಜನರನ್ನು ಆಕರ್ಷಿಸಲೋಸುಗ ಮಾಡುವ ಕಸರತ್ತು ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳ ಪೈಕಿ ಎಷ್ಟನ್ನು ಪೂರೈಸಿದ್ದೇವೆ ಎಂದು ಪಕ್ಷಗಳು ಬಹಿರಂಗವಾಗಿ ಲೆಕ್ಕ ಒಪ್ಪಿಸುವ ರೂಢಿ ಬೆಳೆಯುತ್ತಿದೆ. ಇದು ಸಕಾರಾತ್ಮಕ ಬದಲಾವಣೆ. ಏಕೆಂದರೆ, ಕೇವಲ ಚುನಾವಣೆ ಜಯಿಸುವ ಉದ್ದೇಶದಿಂದ ಬೇಕಾಬಿಟ್ಟಿ ಭರವಸೆಗಳನ್ನು ನೀಡುವುದು ಮತದಾರರನ್ನು ಹಗುರವಾಗಿ ಪರಿಗಣಿಸಿದಂತೆ. ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವ ವಿಚಾರ ಈಗ ಸವೋಚ್ಚ ನ್ಯಾಯಾಲಯವನ್ನೂ ತಲುಪಿದ್ದು, ಅಂತಿಮವಾಗಿ ಯಾವ ನಿರ್ಣಯ ಹೊರಬೀಳುತ್ತದೆಂಬುದನ್ನು ಕಾದುನೋಡಬೇಕಿದೆ.
ಸಂಕೀರ್ಣ ಸಾಮಾಜಿಕ, ಆರ್ಥಿಕ, ಜನಾಂಗೀಯ ಸನ್ನಿವೇಶ ಇರುವ ಭಾರತದಂತಹ ದೇಶದಲ್ಲಿ ಚುನಾವಣೆಗಳನ್ನು ಗೆಲ್ಲಲು ರಾಜಕೀಯ ಪಕ್ಷಗಳು ನಾನಾ ತಂತ್ರಗಳನ್ನು ಹೆಣೆಯಬೇಕಾಗುತ್ತದೆಂಬುದನ್ನು ಒಂದು ಹಂತಕ್ಕೆ ಒಪ್ಪಬಹುದು. ಆದರೆ ಎಲ್ಲವೂ ಅದೇ ಆಗಬಾರದು. ಅದರಲ್ಲೂ ಕರೊನೊತ್ತರ ದಿನಗಳಲ್ಲಿ ಸರ್ಕಾರಗಳ ಹೊಣೆಗಾರಿಕೆ ಹಾಗೂ ಸವಾಲುಗಳು ಸಹ ಹೆಚ್ಚಿದ್ದು, ಜನರ ನಿರೀಕ್ಷೆಗಳು ಕೂಡ ಕಾಲಕಾಲಕ್ಕೆ ಭಿನ್ನವಾಗಿರುತ್ತವೆ. ಈ ವಾಸ್ತವ ಅರಿತು ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಕಾರ್ಯನಿರ್ವಹಿಸಬೇಕಾದುದು ಅಪೇಕ್ಷಣೀಯ. ಈ ದಿಕ್ಕಿನಲ್ಲಿ ಚುನಾವಣಾ ಫಲಿತಾಂಶಗಳು ನೀಡುವ ಸಂದೇಶಗಳನ್ನು ಗ್ರಹಿಸಿ ಮುನ್ನಡೆಯಬೇಕಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
