ರಾಘವ ಶರ್ಮ ನಿಡ್ಲೆನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯ ಅಲೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆ ಕಾರ್ಯಕ್ರಮಗಳು, 27 ವರ್ಷಗಳ ಸುದೀರ್ಘ ಅವಧಿ ನಂತರವೂ ತಗ್ಗದ ಬಿಜೆಪಿ ಕುರಿತ ಅಭಿಮಾನ, ಪ್ರೀತಿ, ಪರಿಣಾಮಕಾರಿ ಹಿಂದುತ್ವ ಅಜೆಂಡಾ, ಪ್ರಬಲ ವಿಪಕ್ಷವಾಗಿ ಕಾರ್ಯಾಚರಿಸುವ ಬದಲು ಶಸ್ತ್ರತ್ಯಾಗ ಮಾಡಿದ್ದ ಕಾಂಗ್ರೆಸ್, ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡ ಆಮ್ ಆದ್ಮಿ ಪಾರ್ಟಿ…
ಐತಿಹಾಸಿಕ ಗುಜರಾತ್ ಚುನಾವಣೆ ಫಲಿತಾಂಶವನ್ನು ಸರಳವಾಗಿ ಈ ರೀತಿ ವಿಶ್ಲೇಷಿಸಬಹುದು. ಚುನಾವಣೆಗೆ ಮುನ್ನ ಗುಜರಾತ್​ನಲ್ಲಿ ತ್ರಿಕೋನ ಕದನ ಎಂದು ವಿಮಶಿಸಲಾಗಿತ್ತು. ಆದರೆ, 182ರಲ್ಲಿ 156 ಸೀಟುಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಕೇಸರಿಪಡೆ ಇದೊಂದು ಏಕಪಕ್ಷೀಯ ಚುನಾವಣೆ ಎಂದು ಸಾಬೀತುಪಡಿಸಿದೆ. ಬಿಜೆಪಿ ಮತ್ತೊಮ್ಮೆ ಗದ್ದುಗೆ ಏರಲಿದೆ ಎಂಬ ಸಾಮಾನ್ಯ ಅನಿಸಿಕೆ ಬಹುಪಾಲು ಮತದಾರರಲ್ಲಿತ್ತಾದರೂ, 156 ಸೀಟುಗಳು ಬರಲಿವೆ ಎಂದು ಬಿಜೆಪಿ ನಾಯಕರೂ ಊಹಿಸಿರಲಿಲ್ಲ. ಬಿಜೆಪಿ ಪ್ರಚಾರದ ನೇತೃತ್ವ ವಹಿಸಿದ ಪ್ರಧಾನಿ ಮೋದಿ, ತವರು ರಾಜ್ಯದಲ್ಲಿ ಅಭೂತಪೂರ್ವ ಫಲಿತಾಂಶ ಸಂಪಾದಿಸುವ ಮೂಲಕ ಹೊಸ ರಾಜಕೀಯ ಇತಿಹಾಸ ಬರೆದಿದ್ದಾರೆ. 2024ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಗುಜರಾತ್ ಫಲಿತಾಂಶ ಬಿಜೆಪಿ ರಣೋತ್ಸಾಹವನ್ನು ಹಿಗ್ಗಿಸಿದ್ದು, ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಹೀನಗೊಳಿಸಿದೆ.
ಅರ್ಥವಾಗದ ರಾಹುಲ್ ನಡೆ: ಕಳೆದ ಬಾರಿ 77 ಸೀಟುಗಳನ್ನು ಗೆದ್ದುಕೊಂಡು ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದ ಕಾಂಗ್ರೆಸ್​ನಿಂದ ಈ ಬಾರಿ ಅದಕ್ಕಿಂತ ಉತ್ತಮ ನಿರ್ವಹಣೆ ನಿರೀಕ್ಷಿಸಲಾಗಿತ್ತು. ಆದರೆ, ಚುನಾವಣೆ ಆರಂಭದಿಂದಲೇ ಉದಾಸೀನ ವರ್ತನೆ ಪ್ರದರ್ಶಿಸಿದ್ದ ಕಾಂಗ್ರೆಸ್, ಹೀನಾಯ ನಿರ್ವಹಣೆಯ ಮೂಲಕ ಕಾರ್ಯಕರ್ತರ ಮನೋಸ್ಥೈರ್ಯವೂ ಪಾತಾಳಕ್ಕೆ ಕುಸಿಯುವಂತೆ ಮಾಡಿದೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಭಾರತ್ ಜೋಡೋ ಯಾತ್ರೆ ಮಾಡಿದ ರಾಹುಲ್ ಗಾಂಧಿ, ಯಾವ ಕಾರಣಕ್ಕಾಗಿ ಗುಜರಾತ್​ನಲ್ಲಿ ಯಾತ್ರೆ ಕೈಗೊಳ್ಳಲಿಲ್ಲ ಎನ್ನುವುದು ಈವರೆಗೆ ಕಾಂಗ್ರೆಸ್​ನ ಬಹುಪಾಲು ಮಂದಿಗೆ ಅರ್ಥವಾಗಿಲ್ಲ. ಪಕ್ಷದ ಅಘೊಷಿತ ಪ್ರಧಾನಿ ಅಭ್ಯರ್ಥಿಯಾಗಿದ್ದರೂ, ಹಾಲಿ ಪ್ರಧಾನಿಯ ತವರು ರಾಜ್ಯದಲ್ಲಿ ಯಾತ್ರೆ ನಡೆಸಿ, ಸುಧಾರಿತ ಫಲಿತಾಂಶ ಕಂಡುಕೊಳ್ಳಲು ಯತ್ನಿಸುವ ಬದಲು ಚುನಾವಣೆ ನಡೆಯದಿರುವ ರಾಜ್ಯಗಳಲ್ಲಿ ಪ್ರವಾಸ ಮಾಡುವ ಲೆಕ್ಕಾಚಾರ ರಾಜಕೀಯ ಪಂಡಿತರಿಗೂ ಅರ್ಥವಾಗದ ತಂತ್ರ.
ಬಿಜೆಪಿ ತಂತ್ರಗಾರಿಕೆ
ಬೇರೆ ರಾಜ್ಯಗಳಂತೆ ಬೆಲೆ ಏರಿಕೆ, ನೌಕರಿ ಸಮಸ್ಯೆಗಳ ಬಗ್ಗೆ ಕೆಳ ಮಧ್ಯಮ ವರ್ಗದಲ್ಲಿ ಗುಜರಾತ್​ನಲ್ಲೂ ಅಸಮಾಧಾನ ಕಂಡುಬಂದಿತ್ತು. ಆದರೆ, ಎದುರಾಳಿ ಕೈಯಲ್ಲಿರುವ ಅಸ್ತ್ರಗಳನ್ನು ನಿಶ್ಶಕ್ತಗೊಳಿಸುವ ಹಾಗೂ ವಿರೋಧಿ ಅಲೆಗೆ ಪ್ರತಿಯಾಗಿ ತನ್ನ ಪರ ಅಲೆ ರೂಪಿಸುವ ಕಲೆ ಬಿಜೆಪಿಗೆ ಸಿದ್ಧಿಸಿರುವುದರಿಂದ ಕಾಂಗ್ರೆಸ್ ಅಥವಾ ಆಪ್​ಗೆ ಸವಾಲೊಡ್ಡಲು ಸಾಧ್ಯವಾಗಲಿಲ್ಲ. ಮೇಲಾಗಿ, ಗುಜರಾತ್ ಮಟ್ಟಿಗೆ ಅಭಿವೃದ್ಧಿ-ಹಿಂದುತ್ವ ವಿಷಯದಲ್ಲಿ ಮತದಾರ ಬಿಜೆಪಿಯನ್ನೇ ಆಯ್ಕೆ ಮಾಡಿದ್ದಾನೆ. ಚುನಾವಣೆಗೆ ವರ್ಷಕ್ಕೆ ಮುನ್ನ ರಾಜ್ಯ ಸಚಿವ ಸಂಪುಟವನ್ನು ಸಂಪೂರ್ಣವಾಗಿ ಬದಲಿಸುವ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದ್ದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ, ಪಾಟಿದಾರ ಸಮುದಾಯವನ್ನು ತೃಪ್ತಿಪಡಿಸುವ ಸಲುವಾಗಿ ಭೂಪೇಂದ್ರ ಪಟೇಲರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದ್ದರು. ಜೈನ ಸಮುದಾಯದ ವಿಜಯ್ ರೂಪಾಣಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಮಾತ್ರವಲ್ಲ, ಈ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡದಿರಲೂ ವರಿಷ್ಠರು ತೀರ್ವನಿಸಿದರು. ಮಾಜಿ ಡಿಸಿಎಂ ನಿತಿನ್ ಪಟೇಲ್​ಗೂ ಟಿಕೆಟ್ ಕೊಡಲಿಲ್ಲ. ಮೋರ್ಬಿಯಲ್ಲಿ ತೂಗು ಸೇತುವೆ ಕುಸಿತ ಕಂಡು 160ಕ್ಕೂ ಹೆಚ್ಚು ಮೃತಪಟ್ಟಾಗ ಅಲ್ಲಿ ಹಾಲಿ ಶಾಸಕನಿಗೆ ಟಿಕೆಟ್ ನೀಡದೆ, ಜನರನ್ನು ರಕ್ಷಿಸಿದ ಮಾಜಿ ಶಾಸಕನಿಗೆ ಟಿಕೆಟ್ ಕೊಟ್ಟರು. ಹೀಗಾಗಿ, ಮೋರ್ಬಿಯ ಕರಾಳ ಘಟನೆಯ ನೆನಪು ಮಾಸುವ ಮುನ್ನ ಚುನಾವಣೆ ನಡೆದರೂ, ಆ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲು ಸಾಧ್ಯವಾಯ್ತು.
ಪಕ್ಷಗಳ ಶಕ್ತಿ, ದೌರ್ಬಲ್ಯ
ಗುಜರಾತ್​ನಲ್ಲಿ ಆಡಳಿತವಿರೋಧಿ ಅಲೆ ಇರಲಿಲ್ಲ ಎಂದೇನಲ್ಲ. ಹಲವು ಶಾಸಕರ ಮೇಲೆ ಜನಾಕ್ರೋಶವಿತ್ತು. ಇದನ್ನು ಅರಿತ ಹೈಕಮಾಂಡ್, 40ಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ನೀಡಿತು ಮತ್ತು ಬಹುಪಾಲು ಕ್ಷೇತ್ರಗಳಲ್ಲಿ ಮತದಾರರು ಹೊಸ ಅಭ್ಯರ್ಥಿಯನ್ನು ಬೆಂಬಲಿಸಿರುವುದು ಫಲಿತಾಂಶದಿಂದ ದೃಢವಾಗಿದೆ. ಕೇವಲ ಅಭಿವೃದ್ಧಿ ಯೋಜನೆ, ಜನಪ್ರಿಯತೆ ಅಥವಾ ಸಂಪನ್ಮೂಲ ಕ್ರೋಡೀಕರಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ತಂತ್ರಗಾರಿಕೆ, ರಣವ್ಯೂಹ, ಕಟ್ಟಕಡೆಯ ಮತದಾರನನ್ನು ತಲುಪುವುದು ಸೇರಿದಂತೆ ಹತ್ತು ಹಲವು ಅಂಶಗಳು ಪ್ರಮುಖವಾಗುತ್ತವೆ. ಅದನ್ನು ನಿಭಾಯಿಸುವಲ್ಲಿ ಬಿಜೆಪಿ ಒಂದು ತಂಡವಾಗಿ ಯಶಸ್ವಿಯಾಗಿದೆ. ಕಾಂಗ್ರೆಸ್​ನಲ್ಲಿ ಇದ್ಯಾವುದೂ ಕಾಣಲಿಲ್ಲ. ರಾಷ್ಟ್ರೀಯ ನಾಯಕತ್ವದ ಕೊರತೆ ಜತೆಗೆ ರಾಜ್ಯವ್ಯಾಪಿ ಜನಮನ ಸೆಳೆಯುವ ನಾಯಕನಿಲ್ಲದಿರುವುದು ಜನರನ್ನೂ ಕಾಂಗ್ರೆಸ್ ಪಕ್ಷವನ್ನು ಭರವಸೆಯಿಂದ ನೋಡುವಂತೆ ಪ್ರೇರೇಪಿಸಿಲ್ಲ.
ವಿಜಯವಾಣಿ ಪ್ರವಾಸಗೈದ ವೇಳೆ ಬರೋಡದಂತಹ ನಗರಕ್ಕೆ ಪ್ರಮುಖ ವರಿಷ್ಠ ರಾಷ್ಟ್ರೀಯ ನಾಯಕರೇ ಭೇಟಿ ನೀಡಿಲ್ಲ, ಪ್ರಚಾರ ಮಾಡಿಲ್ಲ ಎಂದು ಸ್ಥಳೀಯ ಜನರು ವ್ಯಂಗ್ಯವಾಡುತ್ತಿದ್ದ ದೃಶ್ಯಗಳು ಕಂಡುಬಂದಿದ್ದವು. ಕೆಲ ರಾಷ್ಟ್ರೀಯ ನಾಯಕರು ಮತ್ತು ತಂತ್ರಜ್ಞರನ್ನು ಕಟ್ಟಿಕೊಂಡು ರಾಜ್ಯ ಪ್ರವಾಸ ಕೈಗೊಂಡರೆ ಸಾಕಾಗುವುದಿಲ್ಲ. ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕಾಗುತ್ತದೆ ಮತ್ತು ಚುನಾವಣೆಗೆ 1 ವರ್ಷಕ್ಕೆ ಮುನ್ನ ಅಖಾಡವನ್ನು ಬಿಗಿಗೊಳಿಸಲು ಪ್ರಯತ್ನಿಸಬೇಕಾಗುತ್ತದೆ. ಆಮ್ ಆದ್ಮಿ ಪಕ್ಷ ಇದನ್ನು ಮಾಡಿತು. ಬಿಜೆಪಿ ಕೂಡ ತನ್ನ ಕೇಂದ್ರ ನಾಯಕರನ್ನು ರಾಜ್ಯಗಳಲ್ಲಿ ಬಳಸಿಕೊಂಡರೂ, ರಾಜ್ಯ ನಾಯಕರ ಮಾತುಗಳಿಗೆ ಹೆಚ್ಚು ಮನ್ನಣೆ ನೀಡಲಾಗುತ್ತದೆ. ಆದರೆ, ಕಾಂಗ್ರೆಸ್​ನಲ್ಲಿ ರಾಷ್ಟ್ರೀಯ ನಾಯಕರೇ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಬೇಸರದ ಮಾತುಗಳು ಗುಜರಾತಿನಲ್ಲೂ ಕೇಳಿಬಂದಿತ್ತು. ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಾರತ್ ಜೋಡೋ ಯಾತ್ರೆ, ಪ್ರಿಯಾಂಕಾ ಗಾಂಧಿ ಪ್ರಚಾರಾಭಿಯಾನ, ಸೋನಿಯಾ ಗಾಂಧಿ ಬಗ್ಗೆ ಅಭಿಮಾನ… ಹೀಗೆ ಹಲವು ಕಾರಣಗಳಿಂದ ಕಾಂಗ್ರೆಸ್ ಗೆದ್ದಿದೆ ಎಂದು ಪ್ರತಿಕ್ರಿಯಿಸಿದರು. ಹಾಗಿದ್ದರೆ, ಪ್ರಿಯಾಂಕಾ ಗುಜರಾತಿನಲ್ಲೂ ಪ್ರಚಾರಾಭಿಯಾನ ನಡೆಸಬಹುದಿತ್ತಲ್ಲಾ? ಗುಜರಾತಿನಲ್ಲೂ ಜೋಡೋ ಯಾತ್ರೆ ನಡೆಸ ಬಹುದಿತ್ತಲ್ಲಾ? ಹಾಗಾದರೆ ಗುಜರಾತ್ ಚುನಾವಣೆ ಸೋಲನ್ನು ಕಾಂಗ್ರೆಸ್ ಮೊದಲೇ ಊಹಿಸಿತ್ತೇ? ಇಂಥಾ ಪ್ರಶ್ನೆಗಳಿಗೆ ಬಹುಶಃ ಕಾಂಗ್ರೆಸ್ ನಾಯಕರಿಂದ ಉತ್ತರ ನಿರೀಕ್ಷಿಸುವುದೂ ಅಸಾಧ್ಯ.
ಗುಜರಾತ್​ನ ಅಭೂತಪೂರ್ವ ವಿಜಯದ ನಂತರ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಈ ನರೇಂದ್ರನ (2002ರ ಚುನಾವಣೆಯಲ್ಲಿ 127 ಸ್ಥಾನ) ದಾಖಲೆಯನ್ನು ಭೂಪೇಂದ್ರ (ಗುಜರಾತ್ ಸಿಎಂ ಭೂಪೇಂದ್ರ ಪಟೇಲ್) ಅಳಿಸಿಹಾಕಲಿದ್ದಾರೆ ಎಂದು ಪ್ರಚಾರದ ವೇಳೆ ಹೇಳಿದ್ದೆ. ಅದನ್ನು ಅವರು ನಿಜ ಮಾಡಿದ್ದಾರೆ. ಮಾತ್ರವಲ್ಲದೆ ಇದುವರೆಗೂ ಗುಜರಾತ್ ಚುನಾವಣಾ ಇತಿಹಾಸದಲ್ಲಿ ಮಾಡದ ಸಾಧನೆಯನ್ನು ಮಾಡಿದ್ದಾರೆ’ ಎಂದು ಶ್ಲಾಘಿಸಿದರು.
‘ರಾಜ್ಯದ ಜನರು ಬಿಜೆಪಿ ಬಗ್ಗೆ ಇರಿಸಿರುವ ಈ ವಿಶ್ವಾಸ, ಅಚಲ ನಂಬಿಕೆಯು ನನ್ನನ್ನು ವಿನೀತನನ್ನಾಗಿ ಮಾಡಿದೆ. ಜಾತಿ, ಮತ, ವರ್ಗವನ್ನು ಮೀರಿ ಜನರು ಬೆಂಬಲಿಸಿ ಈ ಐತಿಹಾಸಿಕ ಗೆಲುವಿಗೆ ಕಾರಣರಾಗಿದ್ದಾರೆ. ಪ್ರತಿ ಬಡವರಿಗೂ ಸೌಕರ್ಯ ದೊರೆಯಬೇಕೆಂಬ ಬಿಜೆಪಿ ಉದ್ದೇಶವನ್ನು ಸಾರ್ಥಕಗೊಳಿಸಲು ಈ ಜಯ ತಂದುಕೊಟ್ಟಿದ್ದಾರೆ’ ಎಂದರು. ‘ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಮತಗಳಿಗೆ ವ್ಯತ್ಯಾಸ ಶೇ. 1 ಮಾತ್ರ. ಅಲ್ಲಿನ ಜನರು ತೋರಿರುವ ಬೆಂಬಲಕ್ಕೆ ಧನ್ಯವಾದ. ಹೊಸ ಸರ್ಕಾರಕ್ಕೆ ಕೇಂದ್ರದಿಂದ ಎಲ್ಲ ಸಹಕಾರ ದೊರೆಯಲಿದೆ. ಎರಡೂ ರಾಜ್ಯಗಳ ಚುನಾವಣೆ ಯನ್ನು ಮುಕ್ತ ಮತ್ತು ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಿದ ಚುನಾವಣಾ ಆಯೋಗಕ್ಕೆ ಅಭಿನಂದನೆ ತಿಳಿಸುವೆ ಎಂದರು. ಗುಜರಾತ್​ನ ಭೂಪೇಂದ್ರ ಪಟೇಲ್ ಸಿಎಂ ಆಗಿ ಮುಂದುವರಿಯಲಿದ್ದು, ಮುಂದಿನ ಸೋಮವಾರ ಪ್ರಮಾಣ ವಚನ ಸ್ವೀಕರಿಸುವರು ಎಂದು ಕೇಂದ್ರ ಸಚಿವ ಅಮಿತ್ ಷಾ ಹೇಳಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರದ ಅನೇಕ ಸಚಿವರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಭಾಗಿಯಾಗಿದ್ದರು.
ಕಾಂಗ್ರೆಸ್ ಬಲಹೀನತೆಯೇ ಆಪ್ ಶಕ್ತಿ
2017ರ ಚುನಾವಣೆ ಗೆದ್ದು ಅಧಿಕಾರ ಗಳಿಸಿದರೂ, 99 ಸ್ಥಾನಕ್ಕಿಳಿದ ಬಿಜೆಪಿ ಮೊದಲ ದಿನದಿಂದಲೇ ಸಂಘಟನೆ ಬಲಗೊಳಿಸುವ ಕಾರ್ಯಾ ಚರಣೆಗೆ ಮುಂದಾಗಿತ್ತು. 2022ರ ಚುನಾವಣೆ ಆರಂಭಗೊಳ್ಳುವ ವೇಳೆಗೆ ಕಾಂಗ್ರೆಸ್​ನ 21 ಶಾಸಕರು ಬಿಜೆಪಿ ಸೇರಿದ್ದರು. ಬಿಜೆಪಿ ತನ್ನ ಸೀಟುಗಳನ್ನು 99ರಿಂದ 111ಕ್ಕೆ ಏರಿಸಿಕೊಂಡಿತ್ತು. ಏತನ್ಮಧ್ಯೆ, 2017ರಲ್ಲಿ ಕಾಂಗ್ರೆಸ್ ಪರ ಅಲೆ ರೂಪಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿದ್ದ ಪಾಟಿದಾರ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಮತ್ತು ಒಬಿಸಿ ಠಾಕೂರ್ ಸಮುದಾಯದ ಅಲ್ಪೇಶ್ ಠಾಕೂರ್ ಕೂಡ ಬಿಜೆಪಿ ಸೇರ್ಪಡೆಯಾದರು. ಅಲ್ಲಿಗೆ, ಈ ನಾಯಕರನ್ನು ಬೆಂಬಲಿಸುತ್ತಿದ್ದ ಪ್ರಬಲ ಪಾಟಿದಾರ ಸಮಾಜ ಮತ್ತು ಇತರೆ ಹಿಂದುಳಿದ ವರ್ಗಗಳ ಮತಗಳು ಬಿಜೆಪಿ ಕಡೆ ವರ್ಗಾವಣೆಯಾಗುವಂತೆ ನೋಡಿ ಕೊಳ್ಳಲಾಯಿತು. ಹೀಗಾಗಿ, 2017ರಲ್ಲಿ ದಲಿತಪರ ಚಳವಳಿ ಮೂಲಕ ಗಮನಸೆಳೆದಿದ್ದ ಜಿಗ್ನೇಶ್ ಮೆವಾನಿ ರಾಜಕೀಯ ಮೈದಾನದಲ್ಲಿ ಒಬ್ಬಂಟಿ ಆದರು. ವದ್ಗಾಮ್ಲ್ಲಿ ಗೆಲ್ಲಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ವಣವಾದ್ದರಿಂದ ಮೆವಾನಿ ತಮ್ಮ ಕ್ಷೇತ್ರಕ್ಕೇ ಸೀಮಿತಗೊಂಡಿದ್ದರು.
ಗುಜರಾತಲ್ಲಿ ವಿರೋಧ ಪಕ್ಷವೇ ಇಲ್ಲ!
ಗುಜರಾತ್​ನಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್​ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನ ಕೈ ತಪು್ಪವ ಸಾಧ್ಯತೆ ಇದೆ. ಕಾಂಗ್ರೆಸ್ 17 ಸ್ಥಾನಗಳನ್ನು ಗಳಿಸಿದ್ದು, ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಪಡೆಯಲು ಒಟ್ಟು ಸದಸ್ಯ ಬಲದಲ್ಲಿ ಶೇ. 10 ರಷ್ಟು ಸದಸ್ಯರು ಇರಬೇಕು. ಗುಜರಾತ್ ವಿಧಾನಸಭೆ 182 ಸದಸ್ಯರನ್ನು ಹೊಂದಿದ್ದು, 18ಕ್ಕಿಂತ ಹೆಚ್ಚು ಶಾಸಕರನ್ನು ಹೊಂದಿರುವ ಪಕ್ಷವನ್ನು ಅಧಿಕೃತ ವಿರೋಧ ಪಕ್ಷ ಎಂದು ಗುರುತಿಸಬಹುದು ಎಂದು ಕಾನೂನು ಹೇಳುತ್ತದೆ. ಆದರೆ, ಅಗತ್ಯ ಸ್ಥಾನಕ್ಕಿಂತ ಕಡಿಮೆ ಶಾಸಕರನ್ನು ಹೊಂದಿದ್ದರೂ ಸದನದಲ್ಲಿ ಎರಡನೇ ದೊಡ್ಡ ಪಕ್ಷದ ಸಭಾನಾಯಕನಿಗೆ ವಿರೋಧ ಪಕ್ಷದ ನಾಯಕನ ಸ್ಥಾನಮಾನವನ್ನು ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ. ಲೋಕಸಭೆಯಲ್ಲಿ 2014ರಿಂದ ಅಧಿಕೃತ ವಿರೋಧ ಪಕ್ಷ ಇಲ್ಲ. ಏಕೆಂದರೆ ಇದಕ್ಕೆ ಅಗತ್ಯವಾದಷ್ಟು (55) ಸಂಸದರನ್ನು ಯಾವುದೇ ಪಕ್ಷ ಹೊಂದಿಲ್ಲ. ಕಾಂಗ್ರೆಸ್ 2014ರಲ್ಲಿ 42 ಮತ್ತು 2019ರಲ್ಲಿ 52 ಸಂಸದರನ್ನು ಮಾತ್ರ ಹೊಂದಿದೆ.
ಈಡೇರಿದ ಆಪ್ ಉದ್ದೇಶ
2017ರ ವಿಧಾನಸಭೆ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಆಮ್ ಆದ್ಮಿ ಪಕ್ಷ ಗುಜರಾತ್​ನಲ್ಲಿ ಐದು ಸೀಟುಗಳನ್ನು ಗೆದ್ದುಕೊಂಡಿರುವುದಲ್ಲದೆ, ಒಟ್ಟಾರೆ ಮತಗಳಿಕೆ ಪ್ರಮಾಣವನ್ನು ಶೇ.13ಕ್ಕೆ ವಿಸ್ತರಿಸಿದೆ. ಇಡೀ ಚುನಾವಣೆಯಲ್ಲಿ ಬಹುಪಾಲು ಕಾಂಗ್ರೆಸ್ ಮತಗಳನ್ನೇ ತನ್ನದಾಗಿಸಿಕೊಂಡಿರುವ ಪಕ್ಷ, ದೇಶವ್ಯಾಪಿ ಕಾಂಗ್ರೆಸ್​ಗೆ ಪರ್ಯಾಯವಾಗಿ ರೂಪುಗೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಗೆ ಪೂರಕವಾದ ಫಲಿತಾಂಶವನ್ನು ಈ ರಾಜ್ಯದಲ್ಲಿ ಕಂಡುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯದಲ್ಲೇ 5 ಕ್ಷೇತ್ರಗಳಲ್ಲಿ ವಿಜಯಿಯಾಗಿರುವುದು ಆಪ್​ಗೆ ರಾಜಕೀಯ ಬಲ ತುಂಬಲಿದೆ. ಬಿಜೆಪಿಯ ರಾಜಕೀಯ ಇತಿಹಾಸ ನೋಡಿದರೂ, ಗುಜರಾತ್​ನಲ್ಲಿ ಕೇಸರಿಪಡೆ ಎರಡನೇ ಸ್ಥಾನಕ್ಕೆ ತಲುಪಲು ಮೂರು ಚುನಾವಣೆಗಳನ್ನು ತೆಗೆದುಕೊಂಡಿತ್ತು.
27 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ರಾಜ್ಯದ ನಾಲ್ಕನೇ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿತ್ತು. ಗುಜರಾತ್​ನ ಈ ಫಲಿತಾಂಶದಿಂದ ಆಪ್​ಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಕ್ಕಿದೆ. ರಾಷ್ಟ್ರೀಯ ಸ್ಥಾನಮಾನದ ಮೇಲೆ ಕಣ್ಣಿಟ್ಟಿದ್ದ ಆಪ್, ಕಳೆದ ವರ್ಷದ ಸೂರತ್ ನಗರ ಪಾಲಿಕೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿ, ಸೌರಾಷ್ಟ್ರದಲ್ಲಿ ತನಗಿದ್ದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಾಂಗ್ರೆಸ್ ವೋಟುಗಳನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಂದು ರಾಷ್ಟ್ರೀಯ ಪಕ್ಷವು ಕನಿಷ್ಠ ಮೂರು ರಾಜ್ಯಗಳಲ್ಲಿ ಶೇಕಡಾ 2ರಷ್ಟು ಲೋಕಸಭಾ ಸ್ಥಾನಗಳನ್ನು ಹೊಂದಿರಬೇಕು. ಅಂದರೆ ಒಟ್ಟು 11 ಸ್ಥಾನಗಳು. ಎಎಪಿ ಬಳಿ ಲೋಕಸಭೆ ಸೀಟುಗಳಿಲ್ಲ. ಆಪ್​ನ ರಾಘವ್ ಚಡ್ಡಾ ಮತ್ತು ಸಂಜಯ್ ಸಿಂಗ್ ರಾಜ್ಯಸಭೆ ಸದಸ್ಯರಾಗಿದ್ದಾರೆ. ಇದು ಸಾಧ್ಯವಾಗದಿದ್ದರೆ, ರಾಷ್ಟ್ರೀಯ ಪಕ್ಷವಾಗಲು ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷದ ಮಾನ್ಯತೆಯಿರಬೇಕು. ರಾಜ್ಯ ಪಕ್ಷದ ಮಾನ್ಯತೆಗಾಗಿ, ಒಂದು ಪಕ್ಷಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಆರು ಶೇಕಡಾ ಮತಗಳು/ಎರಡು ಸ್ಥಾನಗಳು ಅಥವಾ ಮತ ಹಂಚಿಕೆ ಪ್ರಮಾಣ ಶೇ. 6ಕ್ಕಿಂತ ಹೆಚ್ಚಿರಬೇಕು. ಒಂದುವೇಳೆ 6ಕ್ಕಿಂತ ಕಡಿಮೆಯಿದ್ದರೆ ಮೂರು ಸೀಟುಗಳನ್ನಾದರೂ ಗೆಲ್ಲಬೇಕು. ಆಪ್ ದೆಹಲಿ ಮತ್ತು ಪಂಜಾಬ್​ನಲ್ಲಿ ಅಧಿಕಾರದಲ್ಲಿದೆ. ಗೋವಾದಲ್ಲಿ ಶೇ. 6 ಮತಗಳು/ಎರಡು ಸ್ಥಾನಗಳ ಅಗತ್ಯವನ್ನು ಪೂರೈಸಿದೆ. ಗುಜರಾತ್​ನಲ್ಲಿ ಶೇ.13ರಷ್ಟು ಮತಗಳಿಸಿರುವ ಆಪ್, ಗುಜರಾತ್​ನಲ್ಲಿ ಅಧಿಕೃತ ರಾಜ್ಯ ಪಕ್ಷವಾಗಿದೆ ಮತ್ತು ಅದರೊಂದಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆಗೂ ಪಾತ್ರವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
